ಮದ್ರಾಸ್‌ ಹೈಕೋರ್ಟ್‌ನಿಂದ ತಮಿಳು ನಟ ಧನುಷ್‌ಗೆ ಸಮನ್ಸ್‌ ಜಾರಿ

dhanush
  • ನಟ ಧನುಷ್‌ ಮೇಲೆ ನಕಲಿ ಪಿತೃತ್ವ ಪರೀಕ್ಷೆ ದಾಖಲೆ ಸಲ್ಲಿಕೆ ಆರೋಪ
  • ವಿಚಾರಣೆಗಾಗಿ ನಟನಿಗೆ ಸಮನ್ಸ್‌ ಜಾರಿ ಮಾಡಿದ ಮದ್ರಾಸ್‌ ಹೈಕೋರ್ಟ್‌

ತಮಿಳಿನ ಸ್ಟಾರ್‌ ನಟ ಧನುಷ್‌ ತಮ್ಮ ಮಗ ಎಂದು ಹೇಳಿಕೊಂಡು ಕದಿರೇಸನ್‌ ಮತ್ತು ಮೀನಾಕ್ಷಿ ದಂಪತಿ ಮದ್ರಾಸ್‌ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ಇದೀಗ ಮತ್ತೆ ಸುದ್ದಿಯಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿ ಈ ಬಾರಿ ಮದ್ರಾಸ್‌ ಹೈಕೋರ್ಟ್‌ ನಟ ಧನುಷ್‌ಗೆ ಸಮನ್ಸ್‌ ಜಾರಿ ಮಾಡಿದೆ.

ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟನಾಗಿ ಬೆಳೆದಿರುವ ಧನುಷ್‌ ತಮ್ಮ ಮಗ. ಸಿನಿಮಾದಲ್ಲಿ ನಟಿಸುವ ಸಲುವಾಗಿ ಕುಟುಂಬವನ್ನು ತೊರೆದು ಚೆನ್ನೈಗೆ ವಲಸೆ ಬಂದಿದ್ದ. ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಬಳಿಕ ತಮ್ಮತ್ತ ತಿರುಗಿ ನೋಡುತ್ತಿಲ್ಲ. ನಕಲಿ ಪಿತೃತ್ವ ಪರೀಕ್ಷೆಯ ದಾಖಲೆಗಳನ್ನು ಸಲ್ಲಿಸಿ ತನ್ನ ಗುರುತು ಮರೆ ಮಾಚಿದ್ದಾನೆ. ಧನುಷ್‌ ನಮ್ಮ ಮಗ, ಆತನ ಗಳಿಕೆಯಿಂದ ಪ್ರತಿ ತಿಂಗಳು ₹65 ಸಾವಿರ ಹಣವನ್ನು ನಮಗೆ ಪರಿಹಾರದ ರೂಪದಲ್ಲಿ ನೀಡಬೇಕು ಎಂದು 2016ರಲ್ಲಿ ಕದಿರೇಸನ್‌ ದಂಪತಿ ಕೋರ್ಟ್‌ ಮೆಟ್ಟಿಲೇರಿದ್ದರು. 

ಅಲ್ಲಿಂದ 2020ರವರೆಗೆ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಮಧುರೈ ಪೀಠ, ಧನುಷ್‌ ಮೈಮೇಲಿನ ಹುಟ್ಟು ಮಚ್ಚೆಗಳು (ಬರ್ತ್‌ ಮಾರ್ಕ್‌) ಮತ್ತು ಪಿತೃತ್ವ ದಾಖಲೆಗಳನ್ನು ಪರಿಶೀಲಿಸಿತ್ತು. ಧನುಷ್‌ ಬಳಿ ಇರುವ ಪಿತೃತ್ವ ದಾಖಲೆಗಳು ನಕಲಿ ಎಂದು ಸಾಬೀತು ಪಡಿಸಲು ದೂರುದಾರರ ಬಳಿ ಯಾವುದೇ ಪೂರಕ ಸಾಕ್ಷ್ಯಾಧಾರಗಳಿಲ್ಲದ ಕಾರಣ ಹೈಕೋರ್ಟ್‌ ಪ್ರಕರಣವನ್ನು ವಜಾಗೊಳಿಸಿತ್ತು. 

ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿರುವ ಕದಿರೇಸನ್‌, ಮಧುರೈ ಪೀಠದ ಆದೇಶವನ್ನು ರದ್ದುಗೊಳಿಸಿ ಪ್ರಕರಣದ ಮರು ವಿಚಾರಣೆ ನಡೆಸುವಂತೆ ಕೋರಿದ್ದಾರೆ. ದಂಪತಿಯ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್‌, ನಟ ಧನುಷ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್