ಈ ವಾರ ಕನ್ನಡದ 2 ಸಿನಿಮಾಗಳು ತೆರೆಗೆ; ಭಜರಂಗಿ ಬಳಿಕ ಬೈರಾಗಿಯಾಗಿ ಬಂದ ಶಿವಣ್ಣ

bairagi
  • ಶೀತಲ್‌ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ 'ವಿಂಡೋಸೀಟ್‌' ತೆರೆಗೆ
  • 6 ಭಾಷೆಗಳಲ್ಲಿ ಬಿಡುಗಡೆಯಾದ 'ರಾಕೆಟ್ರಿ- ದಿ ನಂಬಿ ಎಫೆಕ್ಟ್‌'

ಈ ವಾರ ಕನ್ನಡದ ಎರಡು ಸಿನಿಮಾಗಳು ತೆರೆಗೆ ಬಂದಿವೆ. ಶಿವರಾಜ್‌ಕುಮಾರ್‌ ಅಭಿನಯದ 'ಬೈರಾಗಿ' ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ನಟಿ ನಿರೂಪಕಿ ಶೀತಲ್‌ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ 'ವಿಂಡೋಸೀಟ್‌' ಕೂಡ ಇಂದಿನಿಂದ ಪ್ರದರ್ಶನ ಕಾಣುತ್ತಿದೆ.

ಬೈರಾಗಿ

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿನಯದ 123ನೇ ಸಿನಿಮಾ 'ಬೈರಾಗಿ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಾಮಾನ್ಯ ವ್ಯಕ್ತಿಯ ಅಸಾಧಾರಣ ಶಕ್ತಿಯ ಸುತ್ತ 'ಬೈರಾಗಿ' ಕತೆಯನ್ನು ಹೆಣೆಯಲಾಗಿದೆ. 'ಬೈರಾಗಿ'ಗೆ ನಿರ್ದೇಶಕ ವಿಜಯ್‌ ಮಿಲ್ಟನ್‌ ಆಕ್ಷನ್‌ ಕಟ್‌ ಹೇಳಿದ್ದು, ಡಾಲಿ ಧನಂಜಯ ಮತ್ತು 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್‌ ಮತ್ತು ರಿದಮ್‌ ಆಫ್‌ ಶಿವಪ್ಪ ಹಾಡು 'ಬೈರಾಗಿ' ಕುರಿತು ನಿರೀಕ್ಷೆಯನ್ನು ಹೆಚ್ಚಿಸಿದ್ದವು. ಚಿತ್ರದಲ್ಲಿ ಶಿವರಾಜ್‌ಕುಮಾರ್‌ಗೆ ಯುವನಟಿ ಅಂಜಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಹಿರಿಯ ನಟ ಶಶಿಕುಮಾರ್‌, ಶರತ್‌ ಲೋಹಿತಾಶ್ವ, ವಿನೋದ್‌ ಆಳ್ವಾ, ಅನುಪ್ರಭಾಕರ್‌, ಚಿಕ್ಕಣ್ಣ ಸೇರಿದಂತೆ ಬಹು ತಾರಾಗಣವೇ ಚಿತ್ರದಲ್ಲಿದೆ. ಕೃಷ್ಣ ಸಾರ್ಥಕ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ವಿಂಡೋಸೀಟ್‌

ನಟಿ, ನಿರೂಪಕಿ ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ ʼವಿಂಡೋಸೀಟ್ʼ ಇಂದು ತೆರೆಗೆ ಬಂದಿದೆ. ನಿರೂಪ್ ಭಂಡಾರಿ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿರುವ ಈ ಚಿತ್ರ ಮೂಲತಃ ಪತ್ತೆದಾರಿ ಕಥನ ಎಂಬ ಸುಳಿವನ್ನು ಟ್ರೈಲರ್ ಮೂಲಕ ದಾಟಿಸುವ ಪ್ರಯತ್ನ ಮಾಡಿದ್ದರು ನಿರ್ದೇಶಕಿ ಶೀತಲ್. ರೈಲಿನ ಕಿಟಕಿ ಪಕ್ಕದ ಸೀಟಿನಲ್ಲಿ ಕೂತು ʼರೊಮ್ಯಾಂಟಿಕ್ ಜರ್ನಿʼ ಶುರು ಮಾಡುವ ಹೀರೋ ಕೊನೆಗೆ ಕೊಲೆಯ ರಹಸ್ಯ ಬೇಧಿಸಲು ಅಣಿಯಾಗುತ್ತಾನೆ. ಕೊಲೆಯಾದ ಯುವತಿ ಯಾರು? ಆಕೆಗೂ ಕಥಾ ನಾಯಕನಿಗೂ ಏನು ಸಂಬಂಧ? ಎಂಬುದೇ ಕಥೆಯಲ್ಲಿರುವ ʼಟ್ವಿಸ್ಟ್ʼ. ಚಿತ್ರದಲ್ಲಿ ನಿರೂಪ್ ಭಂಡಾರಿಗೆ ಸಂಜನಾ ಆನಂದ್‌ ಮತ್ತೂ ಅಮೃತಾ ಅಯ್ಯಂಗಾರ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಆರುಮಗಂ ಖ್ಯಾತಿಯ ರವಿಶಂಕರ್‌, ಮಧುಸೂಧನ್‌ ರಾವ್‌, ಸೂರಜ್‌ ಕುಮಾರ್‌ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ವಿಂಡೋಸೀಟ್‌'ಗೆ ಅರ್ಜುನ್‌ ಜನ್ಯಾ ಸಂಗೀತವಿದ್ದು, ಜ್ಯಾಕ್‌ ಮಂಜು ಬಂಡವಾಳ ಹೂಡಿದ್ದಾರೆ.

 

ರಾಕೆಟ್ರಿ-ದಿ ನಂಬಿ ಎಫೆಕ್ಟ್‌

ಬಾಲಿವುಡ್‌ನ ಖ್ಯಾತ ನಟ ಆರ್‌ ಮಾಧವನ್‌ ನಿರ್ದೆಶನದ ಚೊಚ್ಚಲ ಚಿತ್ರ ʼರಾಕೆಟ್ರಿ-ದಿ ನಂಬಿ ಎಫೆಕ್ಟ್‌ʼ ಸಿನಿಮಾ ಇಂದಿನಿಂದ ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ. ಅಮೆರಿಕ, ಆಸ್ಟ್ರೇಲಿಯ, ಅಬುಧಾಬಿ ಸೇರಿದಂತೆ ಜಗತ್ತಿನ ಹಲವೆಡೆಗಳಲ್ಲಿ ಇಂಗ್ಲಿಷ್‌, ಹಿಂದಿ, ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ʼರಾಕೆಟ್ರಿ-ದಿ ನಂಬಿ ಎಫೆಕ್ಟ್‌ʼ, ಇಸ್ರೋ ವಿಜ್ಞಾನಿ ನಂಬಿ ನಾರಾಯಣ್‌ ಅವರ ಜೀವನಗಾಥೆ ಆಧರಿಸಿದೆ. ಮಾಧವನ್‌ ನಿರ್ದೇಶನದ ಜೊತೆಗೆ ನಂಬಿ ನಾರಾಯಣ್‌ ಅವರ ಪಾತ್ರವನ್ನೂ ತಾವೇ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್‌ ಸ್ಟಾರ್‌ ನಟ ಶಾರುಖ್‌ ಖಾನ್‌ ಮತ್ತು ತಮಿಳಿನ ಖ್ಯಾತ ನಟ ಸೂರ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಕ್ಷಾ ಕವಚ್‌: ಓಂ

'ಆಶಿಕಿ-2', 'ಫಿತೂರ್‌', 'ಓಕೆ ಜಾನು' ಸಿನಿಮಾಗಳ ಮೂಲಕ ಬಾಲಿವುಡ್‌ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದ ಕ್ಯೂಟ್‌ ಹೀರೋ ಆದಿತ್ಯ ರಾಯ್‌ ಕಪೂರ್‌ ಇದೀಗ ಆಕ್ಷನ್‌ ಅವತಾರ ತಾಳಿದ್ದಾರೆ. ಆದಿತ್ಯ ಮುಖ್ಯಭೂಮಿಕೆಯ 'ರಕ್ಷಾ ಕವಚ್‌: ಓಂ' ಸಿನಿಮಾ ಇಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಆದಿತ್ಯ ಪ್ಯಾರಾ ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಕಪಿಲ್‌ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಜಾಕಿ ಶ್ರಾಫ್‌, ಅಶುತೋಷ್‌ ರಾಣಾ, ಪ್ರಕಾಶ್‌ ರಾಜ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯುವನಟಿ ಸಂಜನಾ ಸಂಘಿ ಆದಿತ್ಯ ಅವರಿಗೆ ಜೊತೆಯಾಗಿದ್ದಾರೆ.  

ಯಾನೈ

ಈ ವಾರ ತಮಿಳಿನ ಎರಡು ಚಿತ್ರಗಳು ತೆರೆಗೆ ಬಂದಿವೆ. ಟಾಲಿವುಡ್‌ನ ಖಳನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನಪ್ರಿಯತೆ ಗಳಿಸಿರುವ ನಟ ಅರುಣ್‌ ವಿಜಯ್‌ 'ಯಾನೈ' ಸಿನಿಮಾ ಇಂದು ತೆರೆಕಂಡಿದೆ. ಹರಿ ನಿರ್ದೇಶನದ ಈ ಚಿತ್ರದಲ್ಲಿ ಅರುಣ್‌ ವಿಜಯ್‌ಗೆ ನಾಯಕಿಯಾಗಿ ಪ್ರಿಯಾ ಭವಾನಿ ಶಂಕರ್‌ ಕಾಣಿಸಿಕೊಂಡಿದ್ದಾರೆ. 'ಕೆಜಿಎಫ್‌' ಗರುಡ ಖ್ಯಾತಿಯ ನಟ ರಾಮಚಂದ್ರ ರಾಜು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ವಿಜಯ್‌ ಕುಮಾರ್‌ ರಾಜೇಂದ್ರನ್‌ ನಿರ್ದೇಶನದ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ʼಡಿ ಬ್ಲಾಕ್‌ʼ ಕೂಡ ಇಂದು ಬಿಡುಗಡೆಯಾಗಿದೆ. ಯುವನಟ ಅರುಳ್‌ನಿಧಿ ತಮಿಳರಸು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಪಕ್ಕಾ ಕಮರ್ಷಿಯಲ್‌

ಟಾಲಿವುಡ್‌ನಲ್ಲೂ ಈ ವಾರ ಎರಡು ಚಿತ್ರಗಳು ತೆರೆಕಂಡಿವೆ. ತೆಲುಗಿನ ಖ್ಯಾತನಟ ಗೋಪಿಚಂದ್‌ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಪಕ್ಕಾ ಕಮರ್ಷಿಯಲ್‌' ಸಿನಿಮಾ ತೆರೆಕಂಡಿದೆ. ವೆಂಕಟ್‌ ರೆಡ್ಡಿ ವೋಲಾಧ್ರಿ ನಿರ್ದೇಶನದ 'ಬಾಲ್‌ರಾಜು' ಸಿನಿಮಾ ಇಂದು ತೆರೆಗೆ ಬಂದಿದೆ. ಚಿತ್ರದಲ್ಲಿ ಯುವನಟ ನಿಹಾಲ್‌ ನಂಧನ್‌ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಕಥೆಯನ್ನು ಹಳ್ಳಿ ಹೈದನ ಬದುಕಿನ ಸುತ್ತ ಹೆಣೆಯಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್