ಈ ಸಿನಿಮಾ| ಮಲಯನ್‌ ಕುಂಜು: ಮುನಿದ ಪ್ರಕೃತಿಯ ಎದುರು ಕೇವಲ ಮನುಷ್ಯನೊಬ್ಬನ ಸಾವು ಬದುಕಿನ ಸಂಘರ್ಷದ ಕಥನ!

ಆತನನ್ನು ʼಸರಿʼ ಮಾಡುವ ಮನುಷ್ಯ ಪ್ರಯತ್ನಗಳೆಲ್ಲಾ ವಿಫಲವಾಗುತ್ತಿರುವ ಹೊತ್ತಿನಲ್ಲಿ ಕೇರಳದ ಮಹಾಮಳೆ ಮತ್ತು ಭೂಕುಸಿತ ಸಂಭವಿಸುತ್ತದೆ. ಆ ನಂತರ ಅನಿಕುಟ್ಟನ್‌ ನಡೆಸುವ ಬದುಕುಳಿಯುವ ಹೋರಾಟ ಮತ್ತು ಮುನಿದ ಪ್ರಕೃತಿ ಎದುರಿನ ಆ ಸಾವುಬದುಕಿನ ಹೋರಾಟವೇ ಆತನೊಳಗಿನ ವಿಕ್ಷಿಪ್ತತೆ ಮತ್ತು ವಿಕಾರಗಳನ್ನು ಹೇಗೆ ಕಳಚಿಹಾಕುತ್ತದೆ ಎಂಬುದೇ ಸಿನಿಮಾ.
malayankunju

ಚಿತ್ರ: ಮಲಯನ್‌ ಕುಂಜು | ನಿರ್ದೇಶನ: ಸಜಿ ಮೋನ್‌ ಪ್ರಭಾಕರ್ | ತಾರಾಗಣ: ಫಹಾದ್‌ ಫಾಜಿಲ್,‌ ಇಂದ್ರನ್ಸ್, ರಜಿಶಾ ವಿಜಯನ್‌, ಜಾಫರ್‌ ಇಡುಕ್ಕಿ | ಭಾಷೆ: ಮಲೆಯಾಳಂ | ಅವಧಿ: 1 ಗಂಟೆ 54 ನಿಮಿಷ

ಕನ್ನಡವೂ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳ ಸಿನಿಮಾಗಳು ಅದ್ಧೂರಿತನ, ಸ್ಟಾರ್‌ಡಂ, ಭ್ರಮಾಲೋಕಗಳ ಸುತ್ತಲೇ ಗಿರಿಕಿಹೊಡೆಯುತ್ತಿವೆ ಮತ್ತು ಪ್ರೇಕ್ಷಕ ಕೂಡ ಅದನ್ನೇ ಬಯಸುತ್ತಾನೆ ಎಂದೇ ಹೇಳಲಾಗುತ್ತಿದೆ.

ತಾಂತ್ರಿಕತೆ ಮತ್ತು ಅದ್ಧೂರಿ ಮೇಕಿಂಗ್‌ ಮೂಲಕವೇ ಚಿತ್ರ ಗೆಲ್ಲಿಸುವ, ಕೋಟಿ ಕೋಟಿ ಸುರಿದು, ನೂರಾರು ಕೋಟಿ ಬಾಚುವ ಕಣ್ಕಟ್ಟಿನ ಈ ಆಟದಲ್ಲಿ ಕಣ್ಣು ಮತ್ತು ಕಿವಿಯ ರಂಜನೆಗೇ ತೃಪ್ತರಾಗುವ ಪ್ರೇಕ್ಷಕ/ ಪ್ರೇಕ್ಷಕಿ ಮತ್ತು ತೆಳು ಅಭಿನಯಕ್ಕೇ ಸೀಮಿತವಾಗುವ ನಟರು ಕೂಡ ಜಡ್ಡುಗಟ್ಟಿದ್ದಾರೆ.

ಆದರೆ, ನೆರೆಯ ಮಲೆಯಾಳಂ ಸಿನಿಮಾ ಈ ಮಾತಿಗೆ ಹೊರತು. ಮಾರುಕಟ್ಟೆಯ ಒತ್ತಡ ಮತ್ತು ಸಿನಿಮಾ ಮಂದಿರಕ್ಕಾಗಿನ ಪೈಪೋಟಿಯ ನಡುವೆಯೂ ಅಲ್ಲಿನ ಕ್ರಿಯಾಶೀಲ ನಿರ್ದೇಶಕರು, ಸೃಜನಶೀಲ ನಟರು ಮತ್ತು ಸವಾಲು ಸ್ವೀಕರಿಸಿ ಗೆಲ್ಲುವ ಛಾತಿಯ ನಿರ್ಮಾಪಕರು ಸಿನಿಮಾದ ಹೊಸ ಸಾಧ್ಯತೆಗಳನ್ನು, ಮಿತಿಗಳನ್ನು ವಿಸ್ತರಿಸುವ ಸಾಹಸ ಮಾಡುತ್ತಲೇ ಇದ್ದಾರೆ. ಆ ಮೂಲಕ ಏಕ ಕಾಲಕ್ಕೆ ಪ್ರೇಕ್ಷಕರ ಅಭಿರುಚಿಯನ್ನೂ, ನಟರ ನಟನಾ ಸಾಮರ್ಥ್ಯವನ್ನೂ ಅಗ್ನಿಪರೀಕ್ಷೆಗೊಡ್ಡುತ್ತಲೇ ಇದ್ದಾರೆ.

ಅಂತಹ ಶೋಧದ ಹೊಸ ಸಿನಿಮಾ ಫಹಾದ್‌ ಫಾಜಿಲ್‌ ನಟನೆಯ ʼಮಲಯನ್‌ಕುಂಜುʼ. ಹಾಗೆ ನೋಡಿದರೆ ಇದು ಫಹಾದ್‌ ನಟನೆಯ ಸಿನಿಮಾ ಎನ್ನುವುದಕ್ಕಿಂತ ಫಹಾದ್‌ ಆವರಿಸಿಕೊಂಡಿರುವ ಸಿನಿಮಾ ಎನ್ನುವುದೇ ಹೆಚ್ಚು ಸೂಕ್ತ. ಅದು ಫಹಾದ್‌ ವೈಶಿಷ್ಟ್ಯ. 

ಅನಿಲ್‌ಕುಮಾರ್(ಅನಿಕುಟ್ಟನ್) ಕೇರಳದ ವಯನಾಡಿನ ಸಮೀಪದ ಕಾಡಂಚಿನ ಕುಗ್ರಾಮದ ಎಲೆಕ್ಟ್ರಿಕಲ್‌ ಮೆಕಾನಿಕ್. ತನ್ನ ತಾಯಿಯೊಂದಿಗೆ ರಬ್ಬರ್ ತೋಟದ ನಡುವಿನ ಹಳ್ಳಿಮನೆಯಲ್ಲಿ ಇರುವ ಆತನ ನೆರಮನೆಯಲ್ಲಿ ಹಸುಗೂಸೊಂದು ಅದರ ತಂದೆ-ತಾಯಿಯೊಂದಿಗೆ ಇದೆ. ಅನಿಕುಟ್ಟನ್‌(ಫಹಾದ್)ನಂತೆಯೇ ಆ ಹಸುಗೂಸು ಕೂಡ ಮಲೆಯ ಕೂಸು(ಮಲಯನ್‌ ಕುಂಜು).

ಜಾತಿ ಶ್ರೇಷ್ಠತೆ ಮತ್ತು ವರ್ಗ ಶ್ರೇಷ್ಠತೆಯ ವ್ಯಸನಿಯಾದ ಅನಿಕುಟ್ಟನ್‌ಗೆ ತಳ ಸಮುದಾಯದ ಪಕ್ಕದ ಮನೆಯವರು, ಹೋಟೆಲಿನಲ್ಲಿ ಅಕ್ಕಪಕ್ಕದಲ್ಲಿ ಕೂರುವ ತಳಸಮುದಾಯದವರನ್ನು ಕಂಡರೂ ಕಿರಿಕಿರಿ, ಅಸಹನೆ. ಅಷ್ಟೇ ಅಲ್ಲ; ಪಕ್ಕದ ಮನೆಯ ಹಸುಗೂಸಿನ ಅಳು ಕೂಡ ಆತನ ಅಸಹನೆಯನ್ನು ಸ್ಫೋಟಿಸುತ್ತದೆ. ತನ್ನದೇ ಪ್ರಪಂಚದಲ್ಲಿ, ತನ್ನದೇ ಕೋಶ ಕೊಟ್ಟಿಕೊಂಡು ಬದುಕುವ ಅನಿಕುಟ್ಟನ್‌, ತನ್ನ ಅಮ್ಮನೂ ಸೇರಿ ಯಾರನ್ನೂ ಆ ತನ್ನದೇ ವಲಯದಲ್ಲಿ ಬಿಟ್ಟುಕೊಳ್ಳಲಾರದಷ್ಟು ಕುಡುಮಿ. ಶ್ರೇಷ್ಠತೆ, ಜಾತಿ-ಧರ್ಮದ ಅಸಹನೆಯನ್ನೇ ಮೈಯೆಲ್ಲಾ ತುಂಬಿಕೊಂಡಿರುವ ವಿಕ್ಷಿಪ್ತ. 

ಇಂತಹ ವಿಕ್ಷಿಪ್ತ ವ್ಯಕ್ತಿತ್ವಕ್ಕೂ ಒಂದು ಕಾರಣವಿದೆ. ಆತನ ಕುಟುಂಬದ ದುರಂತವೊಂದು ಆತನನ್ನು ಅಸಹನೆಗೆ, ವಿಕ್ಷಿಪ್ತತೆಗೆ ಮೂಲವಾಗಿರುತ್ತದೆ. ಆತನ ವ್ಯಕ್ತಿತ್ವದ ಈ ಬದಲಾವಣೆಯ ಬಗ್ಗೆ ಆತನ ತಾಯಿಗೆ ಆತಂಕ. ಹಾಗಾಗೇ ಆಕೆ ಈ ವಿಷಯವನ್ನು ಅನಿಕುಟ್ಟನ್‌ ಚಿಕ್ಕಪ್ಪ(ಇಂದ್ರ‌ನ್ಸ್)ನಿಗೆ ಹೇಳಿ, ಆತನನ್ನು ʼಸರಿʼ ಮಾಡಿ ಎಂದಿರುತ್ತಾರೆ. ಆದರೆ, ಆತನ ʼಸರಿʼ ಮಾಡುವ ಪ್ರಯತ್ನದಲ್ಲಿ ಅಚಾನಕ್ಕಾಗಿ ಮತ್ತೆ ಆತನ ಜಾತಿದ್ವೇಷ ಮತ್ತು ಅಸಹನೆ ಹೆಡೆ ಎತ್ತಿ, ಅನಿಕುಟ್ಟನ್‌ ಮತ್ತು ಚಿಕ್ಕಪ್ಪ‌ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಾರೆ!

ಆತನನ್ನು ʼಸರಿʼ ಮಾಡುವ ಮನುಷ್ಯ ಪ್ರಯತ್ನಗಳೆಲ್ಲಾ ವಿಫಲವಾಗುತ್ತಿರುವ ಹೊತ್ತಿನಲ್ಲಿ ಕೇರಳದ ಮಹಾಮಳೆ ಮತ್ತು ಭೂಕುಸಿತ ಸಂಭವಿಸುತ್ತದೆ. ಆ ನಂತರ ಅನಿಕುಟ್ಟನ್‌ ನಡೆಸುವ ಬದುಕುಳಿಯುವ ಹೋರಾಟ ಮತ್ತು ಮುನಿದ ಪ್ರಕೃತಿ ಎದುರಿನ ಆ ಸಾವುಬದುಕಿನ ಹೋರಾಟವೇ ಆತನೊಳಗಿನ ವಿಕ್ಷಿಪ್ತತೆ ಮತ್ತು ವಿಕಾರಗಳನ್ನು ಹೇಗೆ ಕಳಚಿಹಾಕುತ್ತದೆ ಎಂಬುದೇ ಸಿನಿಮಾ.

ಸಾವಿನ ಮನೆಯ ಕದ ತಟ್ಟಿ ಬರುವ ಅನಿಕುಟ್ಟನ್‌, ಪ್ರತಿ ಉಸಿರಲ್ಲೂ ಜೀವಕ್ಕಾಗಿ ಹಂಬಲಿಸುವ, ಜೀವ ಉಳಿಸಿಕೊಳ್ಳಲು ಸೆಣೆಸಾಡುವ ದೃಶ್ಯಗಳು ಪ್ರತಿ ಪ್ರೇಕ್ಷಕರನ್ನೂ ಸೀಟಿನ ತುದಿಗೆ ಕೂರಿಸುತ್ತವೆ. ಅಷ್ಟೇ ಅಲ್ಲ, ಫಹಾದ್‌ ನೊಳಗೆ ಪ್ರತಿ ಪ್ರೇಕ್ಷಕರೂ ಪರಕಾಯ ಪ್ರವೇಶ ಮಾಡಿ ತಾವೇ ಆ ಪಾತ್ರವಾಗುವಷ್ಟು ಶಕ್ತವಾಗಿ, ಪರಿಣಾಮಕಾರಿಯಾಗಿ ಆ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ.

ಹಾಗೆ ನೋಡಿದರೆ ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಸಜಿಮೋನ್‌ ಈ ಚಿತ್ರದ ಮೂಲಕ ಭಾರತೀಯ ಸಿನಿಮಾಸಕ್ತರ ಹುಬ್ಬೇರಿಸಿದ್ದಾರೆ. ಹಾಗಾಗಿ ಇದು ನಿರ್ದೇಶಕ ಸಜಿಮೋನ್‌ ಸಿನಿಮಾವೇ, ನಟ ಫಹಾದ್‌ ಸಿನಿಮಾವೇ? ಕಥೆ-ಚಿತ್ರಕಥೆ ಬರೆದು ಛಾಯಾಗ್ರಹಣವನ್ನೂ ಮಾಡಿರುವ ಮಹೇಶ್‌ ನಾರಾಯಣನ್ ಸಿನಿಮಾವೇ ಅಥವಾ ಕಲಾ ನಿರ್ದೇಶಕ ಜೋತಿಶ್‌ ಶಂಕರ್‌ ಸಿನಿಮಾವೇ? ಎಂಬುದನ್ನು ತೀರ್ಮಾನಿಸಲಾಗದಷ್ಟು ಎಲ್ಲರೂ ಸಿನಿಮಾದ ಮೇಲೆ ತಮ್ಮ ಅಚ್ಚೊತ್ತಿದ್ದಾರೆ.

ದ್ವೇಷ, ಅಸಹನೆಯಂತಹ ವಿಕೃತಿ ಮತ್ತು ವಿಕ್ಷಿಪ್ತತೆಗಳಿಂದಲೇ ತುಂಬಿರುವ ವ್ಯಕ್ತಿತ್ವ ಸಾವಿನೆದುರಿನ ಸೆಣಸಾಟದಲ್ಲಿ ಹೇಗೆ ಪರಿಶೋಧನೆಗೊಳಗಾಗುತ್ತದೆ ಮತ್ತು ಮನುಷ್ಯ ಹೇಗೆ ಸಾವು-ಬದುಕಿನ ಹೋರಾಟದಲ್ಲಿ ಎಲ್ಲ ವಿಕೃತಿ, ವಿಕಾರಗಳನ್ನೂ ಕಳಚಿ, ಹೊಸ ಹುಟ್ಟು ಪಡೆಯುತ್ತಾನೆ ಎಂಬುದನ್ನು ಸಿನಿಮಾದ ಭೂ ಕುಸಿತದ ದೃಶ್ಯಗಳು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿವೆ.

ಭೂಮಿಯಾಳದಿಂದ ಬದುಕಿ ಬರಲು ಅನಿಕುಟ್ಟನ್‌ ನಡೆಸುವ ಹೋರಾಟ ವ್ಯಕ್ತಿಯೊಬ್ಬನ ಹೋರಾಟವಷ್ಟೇ ಅಲ್ಲದೆ, ದ್ವೇಷ ಮತ್ತು ಅಹನೆಯ ವಿಷದಲ್ಲಿ ಹೂತುಹೋಗುತ್ತಿರುವ ಮಾನವ ಸಂತತಿಗೆ ಉಳಿದಿರುವ ಬಿಡುಗಡೆಯ ಹೋರಾಟವಾಗಿಯೂ ಕಾಣುತ್ತದೆ. ಆ ಅರ್ಥದಲ್ಲಿ ಚಿತ್ರದ ದೃಶ್ಯಾವಳಿಗಳು ವಿರಾಟ್‌ ರೂಪಕದಂತೆ ಮೂಡಿಬಂದಿವೆ.

ಅನಿಕುಟ್ಟನ್‌ ಸಿಲುಕಿಕೊಳ್ಳುವ ಕಂದಕ ತಾಯಿಯ ಗರ್ಭದ ರೂಪಕದಂತೆ ಕಂಡರೆ, ಆತನ ಸಾವುಬದುಕಿನ ಹೋರಾಟದುದ್ದಕ್ಕೂ ಹಿನ್ನೆಲೆಯಲ್ಲಿ ಕೇಳಿಬರುವ ಮಗುವಿನ ಅಳು ಆ ರೂಪಕದ ಅರ್ಥವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಧ್ವನಿಸುತ್ತದೆ. ಆ ಮೊದಲು ಅನಿಕುಟ್ಟನ್ ಯಾವ ಮಗುವಿನ ಅಳುವನ್ನು ಕೇಳಿ ಕ್ರೋಧಗೊಳ್ಳುತ್ತಿದ್ದನೋ, ಆತನ ಸಾವಿನ ಎದುರಿನ ಹೋರಾಟದಲ್ಲಿ ಅದೇ ಮಗುವಿನ ಅಳುವೇ ಆತನ ಜೀವ ಪಯಣದ ಪ್ರೇರಕ ಶಕ್ತಿಯಾಗಿ ಕ್ಷಣಕ್ಷಣವೂ ಆತನಿಗೆ ಪ್ರೇರಣೆಯಾಗುತ್ತದೆ. ಹೀಗೆ ಹಲವು ಅರ್ಥ ವಿನ್ಯಾಸದಲ್ಲಿ ಚಾಚಿಕೊಳ್ಳುವ ಸಿನಿಮಾದ ಉದ್ದಕ್ಕೂ ಎ ಆರ್‌ ರೆಹಮಾನ್‌ ಅವರ ಹಿನ್ನೆಲೆ ಸಂಗೀತ, ಸಿನಿಮಾದ ಅನುಭವವನ್ನು ಇನ್ನಷ್ಟು ಗಾಢಗೊಳಿಸುತ್ತದೆ.

ಹಾಡು ಕೂಡ ಹಳ್ಳಿಯ ದೇಸಿ ಬದುಕಿನ ಏರಿಳಿತಕ್ಕೆ ಹೊಸ ಲಯ ನೀಡಿವೆ. ಆದರೆ, ಅನಿಕುಟ್ಟನ್‌ ಮಣ್ಣಿನ ಕಂದಕದಿಂದ ಹೊರಬರುವ ದೃಶ್ಯಗಳಲ್ಲಿ ಹಿನ್ನೆಲೆಯಲ್ಲಿ ವಿಕ್ತಿಪ್ತ ಆಲಾಪದ ದನಿ ಕೆಲವೊಮ್ಮೆ ಕಿರಿಕಿರಿ ಎನಿಸುತ್ತದೆ. ಅದರ ಬದಲು ಆ ದೃಶ್ಯಾವಳಿಯ ನೈಸರ್ಗಿಕ ಮಳೆ, ಗುಡುಗು, ನೀರಿನ ಹರಿವಿನ ಸದ್ದು ಮತ್ತು ಕತ್ತಲ ನೀರವತೆಯೇ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತೇನೋ! 

ಕನ್ನಡ ಸೇರಿದಂತೆ ಭಾರತೀಯ ಸಿನಿಮಾ ರಂಗ ಒಂದು ದಿಕ್ಕಿನಲ್ಲಿ ಓಡುತ್ತಿದ್ದರೆ, ಫಹಾದ್‌ ಮತ್ತು ಮಹೇಶ್‌ ನಾರಾಯಣ್‌ ಅವರಂಥ ಅಭಿಜಾತ ಪ್ರತಿಭೆಗಳು ವೀಕ್ಷಕರ ಅಭಿರುಚಿ, ಮಾರುಕಟ್ಟೆಯ ಸೆಳೆತಗಳ ಹಂಗಿಲ್ಲದೆ ಈ ʼಮಲೆಯನ್‌ ಕುಂಜುʼ ಮಾಡಿದ್ದಾರೆ. ಯಃಕಶ್ಚಿತ್ ಮನುಷ್ಯ ಬದುಕಿನ ಮಿತಿ ಮತ್ತು ಶಕ್ತಿಗಳನ್ನು ಶೋಧಿಸುವ ʼನೈಜ ಕಲೆʼಯ ಹಾದಿಯಲ್ಲಿ ಯಾವ ಮುಲಾಜಿಲ್ಲದೆ, ಯಾವ ಹಿಂಜರಿಕೆ ಇಲ್ಲದೆ ಹೆಜ್ಜೆ ಇಟ್ಟಿದ್ದಾರೆ.

ಮನುಷ್ಯ ಕಟ್ಟಿಕೊಂಡ ಜಾತಿ, ಧರ್ಮ, ಸ್ಥಾನಮಾನದಂತಹ ಅಮಾನವೀಯ ವ್ಯವಸ್ಥೆಗಳು ಮತ್ತು ಅವು ಆತನಲ್ಲಿ ಹುಟ್ಟಿಸಿರುವ ಮೃಗೀಯ ವರ್ತನೆಗಳು ನಿಜವಾಗಿಯೂ ಶೋಧಿಸಲ್ಪಡುವುದು ಪ್ರಕೃತಿ ಒಡ್ಡುವ ಸಾವು-ಬದುಕಿನ ಸವಾಲುಗಳಲ್ಲೇ ಎಂಬುದನ್ನು ಬೆರಗು ಹುಟ್ಟಿಸುವಂತೆ ಈ ಸಿನಿಮಾದ ಮೂಲಕ ಕಟ್ಟಿಕೊಟ್ಟಿದ್ದಾರೆ. 

ಸಿನಿಮಾದ ಆಸಕ್ತರೆಲ್ಲಾ ಮತ್ತೆ ಮತ್ತೆ ನೋಡಬಹುದಾದ, ನೋಡುತ್ತಲೇ ಮನುಷ್ಯನ ಮಿತಿ ಮತ್ತು ಪರಿಸ್ಥಿತಿಯ ಎದುರು ಎಲ್ಲವನ್ನು ಕಳಚಿ ಕೇವಲ ಮನುಷ್ಯನಾಗಿ ಆತ ನಡೆಸುವ ಹೋರಾಟದ ಅಗಾಧತೆಯನ್ನು ಎದೆಗೆ ದಾಟಿಸಿಕೊಳ್ಳಬಹುದಾದ ಅಪರೂಪದ ಸಿನಿಮಾ ಇದು.

ನಿಮಗೆ ಏನು ಅನ್ನಿಸ್ತು?
2 ವೋಟ್