ಸೋನಂ ಕಪೂರ್‌ ಮನೆ ಕಳ್ಳತನ ಪ್ರಕರಣ | ಮನೆಯ ಕೆಲಸದವರ ಮೇಲೆ ಆರೋಪ

  • ₹2.4 ಕೋಟಿ ರೂ. ಮೌಲ್ಯದ ಹಣ, ಚಿನ್ನಾಭರಣ ಎಗರಿಸಿದ ಆರೋಪ
  • ಒಂದೂವರೆ ತಿಂಗಳ ಬಳಿಕ ಬೆಳಕಿಗೆ ಬಂದಿದ್ದ ಪ್ರಕರಣ

ಕಳೆದ ಫೆಬ್ರವರಿಯಲ್ಲಿ ನಟಿ ಸೋನಂ ಕಪೂರ್‌ ಅವರ ದೆಹಲಿ ನಿವಾಸದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಕೋಟಿಗಟ್ಟಲೇ ಹಣ ಮತ್ತು ಚಿನ್ನಾಭರಣ ದೋಚಿದ ಆರೋಪದಲ್ಲಿ ಪೊಲೀಸರು ನಟಿಯ ಮನೆಯಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.

ಅನಾರೋಗ್ಯ ಪೀಡಿತರಾಗಿರುವ ಸೋನಂ ಕಪೂರ್‌ ಅವರ ಅತ್ತೆ ಪ್ರಿಯಾ ಅಹುಜಾ ಅವರನ್ನು ನೋಡಿಕೊಳ್ಳುತ್ತಿದ್ದ ಶುಶ್ರೂಷಕಿ ಅಪರ್ಣಾ ರುತ್‌ ವಿಲ್ಸನ್‌ ಬಂಧನಕ್ಕೆ ಒಳಗಾಗಿದ್ದಾರೆ. ಸೋನಂ ಪತಿ ಆನಂದ್ ಅವರ ಅಜ್ಜಿ ಸರಳಾ ಅಹುಜಾ ಅವರ ಕೋಣೆಯ ಕಪಾಟಿನಲ್ಲಿದ್ದ ₹2.4 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿರುವುದಾಗಿ ದೆಹಲಿ ಪೊಲೀಸರು ಆರೋಪಿಸಿದ್ದಾರೆ.

Eedina App

ಈ ಕೃತ್ಯದಲ್ಲಿ ಅಪರ್ಣಾ ಜೊತೆಗೆ ಆಕೆಯ ಪತಿ ನರೇಶ್‌ ಕುಮಾರ್‌ ಭಾಗಿಯಾಗಿದ್ದು,  ಆತನನ್ನು ಕೂಡ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 11ರಂದು ಸರಳಾ ಅವರು ತಮ್ಮ ಕೋಣೆಯ ಕಪಾಟಿನ ಬಾಗಿಲು ತೆರೆದು ನೋಡಿದಾಗ ಅಲ್ಲಿದ್ದ ಹಣ ಮತ್ತು ಒಡವೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಅದಾದ ಬಳಿಕ ಮನೆಯಲ್ಲಿ ಕೆಲಸಕ್ಕಿರುವ 20 ಮಂದಿ ನೌಕರರನ್ನು ಪ್ರಶ್ನಿಸಲಾಗಿದೆ. ಆದರೆ ಕಳ್ಳತನ ಮಾಡಿದ್ದು ಯಾರು ಎಂಬ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.  

AV Eye Hospital ad

ಘಟನೆಗೆ ಸಂಬಂಧಿಸಿ ಅಹುಜಾ ಕುಟುಂಬಸ್ಥರು ಫೆಬ್ರವರಿ 23ರಂದು ದೆಹಲಿಯ ತುಘ್ಲಕ್‌ ರಸ್ತೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ʼಸೆಕ್ಷನ್‌ 381ʼ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದೂವರೆ ತಿಂಗಳ ಕಾಲ ತನಿಖೆ ನಡೆಸಿದ್ದಾರೆ. ಮನೆಯ ಎಲ್ಲಾ ಕೆಲಸಗಾರರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಸರಿತಾ ವಿಹಾರ್‌ನಲ್ಲಿರುವ ಅಪರ್ಣಾ ಅವರ ಮನೆಯ ಮೇಲೆ ದಾಳಿ ಮಾಡಿ ದಂಪತಿಯನ್ನು ಬಂಧಿಸಿದ್ದಾರೆ. 

ಬಂಧಿತರಿಂದ ನಗದು ಅಥವಾ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿಲ್ಲ. ವಿಚಾರಣೆ ಚಾಲ್ತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ತುಘ್ಲಕ್‌ ರಸ್ತೆ ಪೊಲೀಸ್‌ ಠಾಣೆಯಿಂದ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.

ಸೋನಂ ಕಪೂರ್‌ ಮತ್ತು ಆನಂದ್‌ ಅಹುಜಾ ದಂಪತಿ ದೆಹಲಿಯ ಅಮೃತಾ ಶೇರ್ಗಿಲ್‌ ಮಾರ್ಗದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಈ ಬಂಗಲೆಯಲ್ಲಿ ಆನಂದ್‌ ಅವರ ತಂದೆ ಹರೀಶ್‌, ತಾಯಿ ಪ್ರಿಯಾ‌ ಮತ್ತು ಅಜ್ಜಿ ಸರಳಾ ಅಹುಜಾ ವಾಸವಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app