ದಮನಿತರ ರಕ್ಷಣೆಯೇ ಮಾನವಧರ್ಮ : ನಟಿ ಸಾಯಿ ಪಲ್ಲವಿ

ಬಹುಭಾಷಾ ನಟಿ ಸಾಯಿ ಪಲ್ಲವಿ, ತಮ್ಮ ವೈಯಕ್ತಿಕ ಬದುಕು, ತಮಗಿರುವ ತಾರಾ ವರ್ಚಸ್ಸು ಮತ್ತು ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರ 'ವಿರಾಟ ಪರ್ವಂ' ಚಿತ್ರವು ಜೂನ್‌ 17ರಂದು ಚಿತ್ರ ತೆರೆ ಕಾಣಲಿದೆ. ಇತ್ತೀಚೆಗೆ ʼಗ್ರೇಟ್‌ ಆಂಧ್ರʼ ಯೂಟ್ಯೂಬ್‌ ಮಾಧ್ಯಮಕ್ಕೆ ಸಂದರ್ಶನ ನೀಡಿದ ಬಳಿಕ ಸುದ್ದಿಯಲ್ಲಿದ್ದಾರೆ. ಅವರ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.
sai-pallavi

ಬಹುಭಾಷಾ ನಟಿ ಸಾಯಿ ಪಲ್ಲವಿ ಅಭಿನಯದ ʼವಿರಾಟ ಪರ್ವಂʼ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. 90ರ ದಶಕದಲ್ಲಿ ತೆಲಂಗಾಣದಲ್ಲಿ ನಡೆದ ನಕ್ಸಲ್‌ ಚಳವಳಿಯ ನೈಜ ಘಟನೆಗಳನ್ನು ಆಧರಿಸಿದ ಕತೆಗೆ ಸಿನಿಮಾ ರೂಪ ನೀಡಲಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ನಟಿ, ನಾವು 'ದಮನಿತರಿಗೆ ಧ್ವನಿಯಾಗಬೇಕು' ಎನ್ನುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ತಮ್ಮ ಹೇಳಿಕೆಯ ಬಳಿಕ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗೆ ʼಗ್ರೇಟ್‌ ಆಂಧ್ರʼ ಯೂಟ್ಯೂಬ್‌ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ನಟಿ ಸಾಯಿ ಪಲ್ಲವಿ, ತಮ್ಮ ವೈಯಕ್ತಿಕ ಬದುಕು, ತಮಗಿರುವ ತಾರಾ ವರ್ಚಸ್ಸು ಮತ್ತು ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 

ನಕ್ಸಲ್‌ ವೇಷ ಧರಿಸಿದಾಗ ನಿಮಗಾದ ಅನುಭವವೇನು ಎಂಬ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿರುವ ಸಾಯಿ ಪಲ್ಲವಿ, "ನಕ್ಸಲಿಸಂ ಅನ್ನೋದು ಒಂದು ಸಿದ್ಧಾಂತ. ನಿಮ್ಮ ಸಿದ್ಧಾಂತ ಬೇರೆ ಇರಬಹುದು. ಹಾಗೆಯೇ ನಾನು ಶಾಂತಿಯನ್ನು ಪ್ರತಿಪಾದಿಸುತ್ತೇನೆ. ಹಿಂಸೆಯ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. ಆದರೆ, ನಕ್ಸಲ್‌ ಚಳವಳಿಯಲ್ಲಿ ಭಾಗಿಯಾಗಿದ್ದವರು ಹೋರಾಟ ಹಾದಿ ಹಿಡಿದಿದ್ದರು. ನ್ಯಾಯಕ್ಕಾಗಿ ಹಿಂಸೆಯ ಮಾರ್ಗ ಅನುಸರಿಸಲು ಸಿದ್ಧ ಎಂದು ಗುಂಪು ಕಟ್ಟಿಕೊಂಡು ಹೋರಾಟಕ್ಕೆ ದುಮುಕಿದ್ದರು. ಅದು ಆಗಿನ ಸಂದರ್ಭದಲ್ಲಿ ಅವರು ತೆಗೆದುಕೊಂಡ ನಿರ್ಧಾರವಾಗಿತ್ತು. ಅದನ್ನು ಇಂದು ತಪ್ಪೋ, ಸರಿಯೋ ಎಂದು ಹೇಳಲು ನಮ್ಮಿಂದ ಸಾಧ್ಯವಾಗದು. ಉದಾಹರಣೆಗೆ ಪಾಕಿಸ್ತಾನದಲ್ಲಿರುವವರು ನಮ್ಮ ಯೋಧರನ್ನು ವಿರೋಧಿಗಳು ಎಂದುಕೊಳ್ಳುತ್ತಾರೆ. ಪಾಕಿಸ್ತಾನಿಗಳ ಮೇಲೆ ಭಾರತೀಯರ ಅಭಿಪ್ರಾಯವೂ ಅದೇ ಆಗಿರುತ್ತದೆ" ಎಂದಿದ್ದಾರೆ. 

 

ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಕೆಲ ಎಡಪಂಥೀಯ ಚಳವಳಿಗಳನ್ನು ಗಮನಿಸಿರುತ್ತೀರಿ ಅಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಟಿ, "ನಾನು ಯಾವ ಪಂಥಗಳ ಪ್ರಭಾವಕ್ಕೂ ಸಿಲುಕದ ವಾತಾವರಣದಲ್ಲಿ ಬೆಳೆದಿದ್ದೇನೆ. ಹಾಗಾಗಿ ನನಗೆ ಎರಡೂ ಪಂಥಗಳನ್ನು ಸ್ಥಿರವಾಗಿ ಕಾಣುತ್ತೇನೆ. ಒಂದು ವೇಳೆ ನಾನು ಎಡ ಅಥವಾ ಬಲಪಂಥಗಳಿಂದ ಪ್ರಭಾವಕ್ಕೆ ಒಳಗಾದ ಕುಟುಂಬದಲ್ಲಿ ಬೆಳೆದಿದ್ದರೆ ಆಗ ನಾನು ಆಯಾ ಪಂಥಗಳ ಪರ ವಹಿಸುತ್ತಿದ್ದೆನೇನೊ. ಆದರೆ, ನನ್ನ ಕುಟುಂಬ ಯಾವುದೇ ಸಿದ್ಧಾಂತಗಳ ಪ್ರಭಾವಕ್ಕೂ ಒಳಗಾಗದೆ ಇರುವುದರಿಂದ ನನ್ನ ಸುತ್ತಲೂ ಸ್ಥಿರವಾದ ವಾತಾವರಣವಿದೆ. ನನ್ನ ಕುಟುಂಬಸ್ಥರು ನನಗೆ ಹೇಳಿ ಕೊಟ್ಟಿದ್ದು ಮಾನವೀಯತೆಯನ್ನು ಮಾತ್ರ. ಶೋಷಿತರ ಧ್ವನಿಯಾಗಬೇಕು ಮತ್ತು ದಮನಿತರ ರಕ್ಷಣೆಗೆ ನಿಲ್ಲಬೇಕು ಎಂಬ ತತ್ವವನ್ನು ನನ್ನ ಹೆತ್ತವರು ನನಗೆ ಕಲಿಸಿದ್ದಾರೆ. ಈ ಬಲ ಮತ್ತು ಎಡ ಪಂಥಗಳ ಬಗ್ಗೆ ನಾನು ಕೇಳಿದ್ದೀನಿ. ಆದರೆ, ಯಾರು ಸರಿ? ಯಾರು ತಪ್ಪು? ಎಂಬುದನ್ನು ಹೇಳುವುದು ಕಷ್ಟಸಾಧ್ಯ.. ಯಾಕೆಂದರೆ, ಇತ್ತೀಚೆಗೆ ತೆರೆಕಂಡ ಕಾಶ್ಮೀರ್‌ ಫೈಲ್ಸ್‌ ಚಿತ್ರದಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಬಗ್ಗೆ ತೋರಿಸಲಾಗಿತ್ತು. ಅದೇ ರೀತಿ ಕೋವಿಡ್‌ ಸಂದರ್ಭದಲ್ಲಿ ಹಸುವನ್ನು ಸಾಗಿಸುತ್ತಿದ್ದ ಮುಸಲ್ಮಾನರ ಮೇಲೆ ಹಿಂಸಾತ್ಮಕ ದಾಳಿ ನಡೆಸಿ ಜೈ ಶ್ರೀರಾಮ್‌ ಹೇಳುವಂತೆ ಒತ್ತಾಯಿಸಲಾಯಿತು. ಈ ಎರಡು ಘಟನೆಗಳು ಹಿಂಸೆಯನ್ನು ಪ್ರತಿಪಾದಿಸುತ್ತದಲ್ಲವೇ? ಆವತ್ತು ಕಾಶ್ಮೀರಿ ಪಂಡಿತರ ಮೇಲೆ ನಡೆದ ಹಿಂಸೆ ಖಂಡನೀಯವಾದರೆ, ಇವತ್ತು ಹಸು ಸಾಗಿಸುತ್ತಿದ್ದ ಮುಸಲ್ಮಾನರ ಮೇಲೆ ನಡೆಸುತ್ತಿರುವ ದಾಳಿಯೂ ಅಮಾನವೀಯ. ನಾವುಗಳು ಮಾನವೀಯ ಮೌಲ್ಯಗಳನ್ನು ಹೊಂದಿದ್ದರೆ ಧರ್ಮದ ಹೆಸರಿನಲ್ಲಿ ಬೇರೊಬ್ಬರ ಮೇಲೆ ಒತ್ತಡ ಹೇರುವುದಿಲ್ಲ. ನಿಮ್ಮದು ಬಲಪಂಥವಾಗಲಿ ಅಥವಾ ಎಡಪಂಥವೇ ಆಗಲಿ ನಿಮ್ಮಲ್ಲಿ ಮಾನವಿಯತೆ ಇಲ್ಲದಿದ್ದರೆ ನೀವು ನಂಬುವ ಯಾವ ಕಡೆಯೂ ನ್ಯಾಯ ಇರುವುದಿಲ್ಲ ಎಂಬುದು ನನ್ನ ಅಭಿಪ್ರಾಯ" ಎಂದಿದ್ದಾರೆ ಸಾಯಿ ಪಲ್ಲವಿ.   

ಈ ಸುದ್ದಿ ಓದಿದ್ದೀರಾ? ಉದ್ದೇಶಪೂರ್ವಕವಾಗಿ ಡ್ರಗ್ಸ್‌ ಸೇವಿಸಿರಲಿಲ್ಲ: ಸಿದ್ಧಾಂತ್‌ ಕಪೂರ್‌

ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳ ಬಗ್ಗೆ ಸಾಯಿ ಪಲ್ಲವಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ನಟಿಯ ಹೇಳಿಕೆಗೆ ಪರ ಮತ್ತು ವಿರೋಧದ ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರು ನಟಿಯ ಹೇಳಿಕೆಯನ್ನು ಸಮರ್ಥಿಕೊಳ್ಳುತ್ತಿದ್ದಾರೆ. "ನಾನು ಸಾಯಿ ಪಲ್ಲವಿಯವರ ಅಹಿಂಸೆಯ ನಿಲುವನ್ನು ಒಪ್ಪುತ್ತೇನೆ" ಎಂದಿರುವ ಟಿಆರ್‌ಎಸ್‌ ಪಕ್ಷದ ವಕ್ತಾರ ವೈ. ಸತೀಶ್‌ ರೆಡ್ಡಿ "ಯಾವುದೇ ಪಂಥವಾದರೂ ಹಿಂಸೆ ಸಲ್ಲದು" ಎಂದಿದ್ದಾರೆ.

ಕನ್ನಡದ ಖ್ಯಾತ ನಟಿ, ಸಾಮಾಜಿಕ ಚಿಂತಕಿ ರಮ್ಯಾ ಕೂಡ ಸಾಯಿ ಪಲ್ಲವಿ ಹೇಳಿಕೆಗೆ ಬೆಂಬಲ ಸೂಚಿಸಿದ್ದು, "ಸಾಯಿ ಪಲ್ಲವಿ ಅವರನ್ನು ಟ್ರೋಲ್‌ ಮಾಡುವುದು ಮತ್ತು ಅವರಿಗೆ ಬೆದರಿಕೆ ಒಡ್ಡುವುದನ್ನು ನಿಲ್ಲಿಸಬೇಕು. ಎಲ್ಲರಿಗೂ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ಮಹಿಳೆಯಾದ ಮಾತ್ರಕ್ಕೆ ಆಕೆ ತನ್ನ ಅಭಿಪ್ರಾಯ ಹೇಳಬಾರದೆ? ಅಷ್ಟಕ್ಕೂ ಆಕೆ ಹೇಳಿದ್ದರಲ್ಲಿ ತಪ್ಪೇನಿದೆ? ದಮನಿತರನ್ನು ರಕ್ಷಿಸಬೇಕು ಎಂಬುದು ಮಾನವೀಯ ಗುಣವುಳ್ಳ ಪ್ರತಿಯೊಬ್ಬರು ಹೇಳುವ ಮಾತು. ನೀವು ಬೇರೆಯವರ ಜೊತೆಗೆ ಭಿನ್ನಾಭಿಪ್ರಾಯ ಹೊಂದಿರುವುದು ತಪ್ಪಲ್ಲ. ನಿಮ್ಮ ಭಿನ್ನಾಭಿಪ್ರಾಯಗಳು ಮತ್ತೊಬ್ಬರನ್ನು ನಿಂದಿಸುವುದೇ ಆಗಿರಬಾರದು" ಎಂದು ತಿಳಿ ಹೇಳಿದ್ದಾರೆ.

ಇನ್ನು ಕೆಲವರು ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ದನ ಸಾಗಿಸುವ ಮುಸ್ಲಿಮರ ಮೇಲಿನ ದಾಳಿ ಎರಡನ್ನು ತಾಳೆ ಹಾಕಲು ಹೇಗೆ ಸಾಧ್ಯ ಎಂದು ನಟಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೇಣು ಉಡುಗುಲ ಕತೆ ಬರೆದು, ನಿರ್ದೇಶಿಸಿರುವ ನೈಜ ಘಟನೆಯಾಧಾರಿತ 'ವಿರಾಟ ಪರ್ವಂ' ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಜೂನ್‌ 17ರಂದು ಚಿತ್ರ ತೆರೆಕಾಣಲಿದೆ.

 

ನಿಮಗೆ ಏನು ಅನ್ನಿಸ್ತು?
4 ವೋಟ್
eedina app