
- ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲು
- ಅಪ್ಪನ ಆರೋಗ್ಯ ಸ್ಥಿರವಾಗಿದೆ ಎಂದ ಸಿಂಬು
ತಮಿಳು ಹಿರಿಯ ನಟ, ನಿರ್ದೇಶಕ ಟಿ ರಾಜೇಂದರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಸದ್ಯ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅವರ ಪುತ್ರ, ತಮಿಳಿನ ಖ್ಯಾತ ನಟ ಸಿಂಬು (ಸಿಲಂಬರಸನ್) ಮಾಹಿತಿ ನೀಡಿದ್ದಾರೆ.
ಟಿ ರಾಜೇಂದರ್ ಅವರಿಗೆ ಹೃದಯಾಘಾತ ಹಿನ್ನೆಲೆ ಮೇ 7ರಂದು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯ ಆರೋಗ್ಯದ ಬಗ್ಗೆ ಪತ್ರದ ಮೂಲಕ ಮಾಹಿತಿ ಹಂಚಿಕೊಂಡಿರುವ ಸಿಂಬು, "ತಂದೆಯವರಿಗೆ ಆಕಸ್ಮಿಕ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ವೈದ್ಯಕೀಯ ಪರೀಕ್ಷೆಯ ವೇಳೆ ಅವರ ಎದೆ ಭಾಗದಲ್ಲಿ ಸಣ್ಣ ಮಟ್ಟದ ರಕ್ತಸ್ರಾವವಾಗಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿರುವ ಹಿನ್ನೆಲೆ ಅವರನ್ನು ವಿದೇಶಕ್ಕೆ ಕರೆದೊಯ್ಯುವ ಸಿದ್ಧತೆ ನಡೆಯುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಚಿಕಿತ್ಸೆಯ ಬಳಿಕ ಅವರು ನಿಮ್ಮೆಲ್ಲರನ್ನು ಭೇಟಿಯಾಗಲಿದ್ದಾರೆ. ತಂದೆಯವರು ಶೀಘ್ರ ಗುಣವಾಗವಂತೆ ದೇವರಲ್ಲಿ ಪ್ರಾರ್ಥಿಸಿ" ಎಂದು ಸಿಂಬು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
— Silambarasan TR (@SilambarasanTR_) May 24, 2022
ಕರ್ನಾಟಕದ ಬೆಂಗಳೂರು ಮೂಲದವರಾದ ರಾಜೇಂದರ್ ತಮಿಳು ಚಿತ್ರರಂಗದಲ್ಲಿ ದಶಕಗಳ ಕಾಲ ನಟನಾಗಿ ಮಿಂಚಿದ್ದಾರೆ. ನಟನೆ, ನಿರ್ದೇಶನ, ಚಿತ್ರ ನಿರ್ಮಾಣ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಹಿನ್ನೆಲೆ ಗಾಯನ, ನೃತ್ಯ ಹೀಗೆ ಸಿನಿಮಾ ಕ್ಷೇತ್ರದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ಯಶಸ್ವಿಯಾದ ಭಾರತದ ಏಕೈಕ ಕಲಾವಿದ ಎಂಬ ಕೀರ್ತಿ ಇವರಿಗಿದೆ.

ರಾಜೇಂದರ್ ಅವರ ಪುತ್ರ ಸಿಂಬು ಕೂಡ ತಮಿಳು ಚಿತ್ರರಂಗದ ಖ್ಯಾತ ನಟರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.