
ವರನಟ ಡಾ. ರಾಜ್ಕುಮಾರ್ ಮುಖ್ಯಭೂಮಿಕೆಯ 'ಭಾಗ್ಯವಂತರು' ಸಿನಿಮಾ ದಶಕಗಳ ಬಳಿಕ ಮತ್ತೊಮ್ಮೆ ತೆರೆಗೆ ಬರಲು ಸಜ್ಜಾಗಿದೆ.
ರಾಜ್ ನಟನೆಯ ಜನಪ್ರಿಯ ಸಿನಿಮಾಗಳ ಪೈಕಿ 'ಭಾಗ್ಯವಂತರು' ಚಿತ್ರ ಕೂಡ ಒಂದು. ದಶಕಗಳ ಹಿಂದೆ ಯಶಸ್ವಿ ಪ್ರದರ್ಶನ ಕಂಡಿದ್ದ ಈ ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಜುಲೈ 8ರಂದು ಮರು ಬಿಡುಗಡೆಯಾಗುತ್ತಿದೆ. ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಎಂ ಮುನಿರಾಜು ಅವರು 'ಭಾಗ್ಯವಂತರು' ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರಕ್ಕೆ ಹೊಸದಾಗಿ 7.1 ಡಿಜಿಟಲ್ ʼಸೌಂಡ್ʼ ಅಳವಡಿಸಲಾಗಿದೆ. ಕಲರಿಂಗ್, ಡಿಟಿಎಸ್ ಮುಂತಾದ ಹೊಸ ತಂತ್ರಜ್ಞಾನ ಬಳಸಿ ಸಿನಿಮಾಗೆ ಆಧುನಿಕತೆಯ ಮೆರುಗು ನೀಡಲಾಗಿದೆ. ರಾಜ್ಯಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಭಾಗ್ಯವಂತರು' ಸಿನಿಮಾ ಬಿಡುಗಡೆ ಮಾಡುತ್ತಿರುವುದಾಗಿ ಮುನಿರಾಜು ತಿಳಿಸಿದ್ದಾರೆ.
ಅಣ್ಣಾವ್ರ ಸಿನಿಮಾಗಳನ್ನು ಬಹುವಾಗಿ ಸಂಭ್ರಮಿಸುವ ಮುನಿರಾಜು ಈ ಹಿಂದೆ ರಾಜ್ ನಟನೆಯ ಆಪರೇಷನ್ ಡೈಮಂಡ್ ರಾಕೇಟ್, ನಾನೊಬ್ಬ ಕಳ್ಳ, ದಾರಿ ತಪ್ಪಿದ ಮಗ ಸಿನಿಮಾಗಳಿಗೆ ಹೊಸ ರೂಪ ನೀಡಿ ಮರು ಪ್ರದರ್ಶನ ಮಾಡಿದ್ದರು. ಈ ಬಾರಿ 'ಭಾಗ್ಯವಂತರು' ಸಿನಿಮಾ ಬಿಡುಗಡೆ ಮಾಡುತ್ತಿದ್ದು, 'ಹುಲಿಯ ಹಾಲಿನ ಮೇವು' ಸೇರಿದಂತೆ ಅಣ್ಣಾವ್ರ ಇನ್ನಷ್ಟು ಜನಪ್ರಿಯ ಸಿನಿಮಾಗಳನ್ನು ಮರ ಪ್ರದರ್ಶನ ಮಾಡಲು ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕನ್ನಡದ ನಿರ್ದೇಶಕ ಹರಿ ಸಂತೋಷ್ರಿಂದ ಬಾಲಿವುಡ್ ಚಲನಚಿತ್ರ ನಿರ್ದೇಶನ
ರಾಜ್ಕುಮಾರ್ ಮತ್ತು ಬಿ ಸರೋಜಾದೇವಿ ಜೊತೆಯಾಗಿ ನಟಿಸಿದ್ದ 'ಭಾಗ್ಯವಂತರು' ಚಿತ್ರ ತೆರೆಕಂಡು ಬರೋಬ್ಬರಿ 45 ವರ್ಷಗಳು ಕಳೆದಿವೆ. ಕನ್ನಡದ ಖ್ಯಾತ ನಿರ್ದೇಶಕ ಎಚ್ ಆರ್ ಭಾರ್ಗವ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ 1977ರ ಮಾರ್ಚ್ 16ರಂದು ತೆರೆಕಂಡಿತ್ತು. ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕರಾದ ರಾಜನ್- ನಾಗೇಂದ್ರ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.

'ಭಾಗ್ಯವಂತರು' ಸಿನಿಮಾ ತಮಿಳಿನ 'ಧೀರ್ಘ ಸುಮಂಗಲಿ' ಚಿತ್ರದ ರೀಮೇಕ್. ತಮಿಳಿನ ಖ್ಯಾತ ನಿರ್ದೇಶಕ ತಿರುಲೋಕಚಂದರ್ ನಿರ್ದೇಶನದಲ್ಲಿ ಆರ್ ಮುತ್ತುರಾಮನ್ ಮತ್ತು ಕೆ ಆರ್ ವಿಜಯ ಜೊತೆಯಾಗಿ ನಟಿಸಿದ್ದ ʼಧೀರ್ಘ ಸುಮಂಗಲಿʼ ಚಿತ್ರ 1974 ಏಪ್ರಿಲ್ 12ರಂದು ತೆರೆಕಂಡಿತ್ತು. ಚಿತ್ರ ಭರ್ಜರಿ ಯಶಸ್ಸನ್ನು ಗಳಿಸಿತ್ತು.
ತಮಿಳಿನಲ್ಲಿ ʼಧೀರ್ಘ ಸುಮಂಗಲಿʼ ಸಿನಿಮಾ ತೆರೆಕಂಡ ಮೂರು ವರ್ಷಗಳ ಬಳಿಕ ಅದೇ ಸಿನಿಮಾವನ್ನು ಹಿರಿಯ ನಿರ್ದೇಶಕ ಎಚ್ ಆರ್ ಭಾರ್ಗವ ಕನ್ನಡಕ್ಕೆ ರೀಮೇಕ್ ಮಾಡಿದರು. ʼಧೀರ್ಘ ಸುಮಂಗಲಿʼ ಚಿತ್ರದ ಪ್ರಭಾವದ ಹೊರತಾಗಿಯೂ 'ಭಾಗ್ಯವಂತರು' ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿತ್ತು.
ಚಿತ್ರದ ʼನಿನ್ನ ಸೇಹಕೆ ನಾ ಸೋತು ಹೋದೆನು..ʼ, ʼನಿನ್ನ ನನ್ನ ಮನವೂ ಸೇರಿತು..ʼ, ʼಭಾಗ್ಯವಂತರು... ನಾವು ಭಾಗ್ಯವಂತರು...ʼ, ಹಾಡುಗಳು ಭಾರಿ ಜನಪ್ರಿಯತೆ ಗಳಿಸಿದ್ದವು.
ಚಿತ್ರದಲ್ಲಿ ರಾಜ್ಕುಮಾರ್ ಮತ್ತು ಸರೋಜಾದೇವಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಖ್ಯಾತ ಹಾಸ್ಯನಟ ಟಿ ಎನ್ ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಕೆ ಎಸ್ ಅಶ್ವಥ್, ಎಂ ಎನ್ ಲಕ್ಷ್ಮೀದೇವಿ, ಎಂ ಎಸ್ ಸತ್ಯು, ಅಶೋಕ್, ರಾಮಕೃಷ್ಣ, ಸಂಪತ್, ಬಿ ಜಯಾ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.