ಪಾಕ್‌ ಉರುಳಿಗೆ ಕೊರಳಾದ ಸರಬ್ಜಿತ್‌; ಸಹೋದರಿ ಅಂತಿಮಯಾತ್ರೆಗೆ ಹೆಗಲಾದ ರಣದೀಪ್‌

ಸರಬ್ಜಿತ್‌ ಸಿಂಗ್‌ ಬಿಡುಗಡೆಗೆ ದಶಕಗಳ ಕಾಲ ಕಾನೂನು ಹೋರಾಡಿದ್ದ ದಲ್ಬೀರ್‌ ಕೌರ್‌ ಶನಿವಾರ ನಿಧನರಾಗಿದ್ದಾರೆ. ಸರಬ್ಜಿತ್‌ ಜೀವನಗಾಥೆ ಆಧರಿಸಿದ ಚಿತ್ರದಲ್ಲಿ ನಟಿಸಿದ್ದ ರಣದೀಪ್‌ ಹೂಡಾ, ದಲ್ಬೀರ್‌ ಅವರ ಅಂತ್ಯಕ್ರಿಯೆ ನೆರವೇರಿಸಿ ಮಾದರಿಯಾಗಿದ್ದಾರೆ.
sarabjith

ಪಾಕಿಸ್ತಾನದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸರಬ್ಜಿತ್‌ ಸಿಂಗ್‌ ಬಿಡುಗಡೆಗೆ ದಶಕಗಳ ಕಾಲ ಕಾನೂನು ಹೋರಾಟ ನಡೆಸಿದ್ದ ಅವರ ಸಹೋದರಿ ದಲ್ಬೀರ್‌ ಕೌರ್‌ ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಲ್ಬೀರ್ ನಿಧನದ ಸುದ್ದಿ ತಿಳಿಯುತ್ತಲೇ ಭಾನುವಾರ ಮುಂಬೈನಿಂದ ಪಂಜಾಬ್‌ನ ಭಿಕಿವಿಂಡ್‌ ಗ್ರಾಮಕ್ಕೆ ತೆರಳಿದ ನಟ ರಣದೀಪ್‌ ಹೂಡಾ, ಆಕೆಯ ಅಂತ್ಯಕ್ರಿಯೆಯನ್ನು ತಾವೇ ಮುಂದೆ ನಿಂತು ನೆರವೇರಿಸಿದ್ದಾರೆ.

ದಲ್ಬೀರ್‌ ಕೌರ್‌ಗೆ ರಕ್ತ ಸಂಬಂಧಿಯಲ್ಲದಿದ್ದರೂ ಅವರ ಅಂತಿಮ ಯಾತ್ರೆಗೆ ಹೆಗಲು ನೀಡಿ, ತಾವೇ ಮುಂದೆ ನಿಂತು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿರುವ ಹೂಡಾ ಅವರ ಹೃದಯವಂತಿಕೆ ಎಲ್ಲೆಡೆಯಿಂದ ಮೆಚ್ಚುಗೆಯನ್ನು ಸೆಳೆದಿದೆ. 

ದಲ್ಬೀರ್‌ ಅಂತಿಮ ಸಂಸ್ಕಾರ ವಿಧಿ ವಿಧಾನಗಳನ್ನು ನೆರವೇರಿಸಿದ ರಣದೀಪ್ ನಡೆಯ ಹಿಂದೆ ವಿಶೇಷ ಅನುಬಂಧ ಅಡಗಿದೆ. 2016ರಲ್ಲಿ ರಣದೀಪ್‌ ಮತ್ತು ಐಶ್ವರ್ಯಾ ರೈ ಮುಖ್ಯಭೂಮಿಕೆಯಲ್ಲಿ ತೆರೆಕಂಡ ʼಸರಬ್ಜಿತ್‌ʼ ಸಿನಿಮಾ ನಿಮಗೆ ನೆನಪಿರಬಹುದು. ಭಯೋತ್ಪಾದನೆ ಮತ್ತು ಗೂಢಚರ್ಯೆ ಆರೋಪದ ಮೇರೆಗೆ ಪಾಕಿಸ್ತಾನಿ ಪೋಲಿಸರಿಂದ ಬಂಧನಕ್ಕೊಳಗಾಗಿ ದಶಕಗಳ ಸೆರೆವಾಸದ ಬಳಿಕ ಲಾಹೋರ್‌ ಜೈಲಿನಲ್ಲಿ ಮೃತಪಟ್ಟಿದ್ದರು ಪಂಜಾಬ್‌ ಮೂಲದ ಸರಬ್ಜಿತ್‌ ಸಿಂಗ್‌. ಈತನ ಜೀವನಗಾಥೆ ಆಧರಿಸಿ ʼಸರಬ್ಜಿತ್‌ʼ ಹೆಸರಿನ ಸಿನಿಮಾ ತೆರೆಕಂಡಿತ್ತು. ಈ ಚಿತ್ರದಲ್ಲಿ ರಣದೀಪ್‌ ʼಸರಬ್ಜಿತ್‌ ಸಿಂಗ್‌ʼ ಪಾತ್ರದಲ್ಲಿ ನಟಿಸಿದರೆ, ʼಸರಬ್ಜಿತ್‌ ಸಿಂಗ್‌ʼ ಬಿಡುಗಡೆಗಾಗಿ ಕಾನೂನು ಹೋರಾಟ ನಡೆಸಿದ್ದ ಅವರ ಸಹೋದರಿ ದಲ್ಬೀರ್‌ ಕೌರ್‌ ಪಾತ್ರದಲ್ಲಿ ಐಶ್ವರ್ಯಾ ರೈ ಕಾಣಿಸಿಕೊಂಡಿದ್ದರು.

 

AV Eye Hospital ad

ಸರಬ್ಜಿತ್‌ ಸಿನಿಮಾ ಸೆಟ್ಟೇರುವ ದಿನದಿಂದ ಹಿಡಿದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸುವವರೆಗೂ ಚಿತ್ರತಂಡದ ಜೊತೆಗೆ ಆಪ್ತ ಸಂಪರ್ಕ ಹೊಂದಿದ್ದ ದಲ್ಬೀರ್‌ ಕೌರ್‌, ತಮ್ಮ ಸಹೋದರ ಸರಬ್ಜಿತ್‌ ಸಿಂಗ್‌ ಪಾತ್ರದಲ್ಲಿ ನಟಿಸಿದ್ದ ನಟ ರಣದೀಪ್‌ ಹೂಡಾ ಅವರಿಂದ 2016ರಲ್ಲಿ ಪ್ರಮಾಣವೊಂದನ್ನು ಮಾಡಿಸಿಕೊಂಡಿದ್ದರು. ಮುಂದೊಂದು ದಿನ ತಾವು ಸಾವನ್ನಪ್ಪಿದಾಗ ರಣದೀಪ್‌ ಅವರೇ ತಮ್ಮ ಅಂತಿಮ ಕಾರ್ಯ ನಡೆಸಿಕೊಡುವಂತೆ ದಲ್ಬೀರ್‌ ಇಚ್ಛಿಸಿದ್ದರು. ಅಂದು ದಲ್ಬೀರ್‌ ಅವರ ಮನವಿಗೆ ಒಪ್ಪಿ ಪ್ರಮಾಣ ಮಾಡಿದ್ದ ರಣದೀಪ್‌, ಶನಿವಾರ ರಾತ್ರಿ ದಲ್ಬೀರ್‌ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಮುಂಬೈನಿಂದ ಪಂಜಾಬ್‌ನ ತರಣ್ ತರಣ್‌ ಜಿಲ್ಲೆಯ ಭಿಕಿವಿಂಡ್‌ ಗ್ರಾಮಕ್ಕೆ ತೆರಳಿದ್ದಾರೆ. ದಲ್ಬೀರ್‌ ಅವರಿಗೆ ಕೊಟ್ಟ ಮಾತಿನಂತೆ ಸಹೋದರನ ಜವಾಬ್ದಾರಿ ನಿಭಾಯಿಸಿ ಅಂತಿಮ ಯಾತ್ರೆಗೆ ಹೆಗಲು ನೀಡಿದ್ದಲ್ಲದೆ, ಚಿತೆಗೆ ಅಗ್ನಿಸ್ಪರ್ಶ ಮಾಡಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ್ದಾರೆ. 

ಈ ಬಗ್ಗೆ ಟ್ವಿಟರ್‌ನಲ್ಲಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿರುವ ರಣದೀಪ್‌, "ದಲ್ಬೀರ್‌ ಬದುಕಿದ್ದಾಗ ತಪ್ಪದೆ ಮನೆಗೆ ಬಂದು ಹೋಗು ಎನ್ನುತ್ತಿದ್ದರು. ಕೊನೆಗೂ ನಾನು ಅವರ ಮನೆಗೆ ಹೋದೆ. ಆದರೆ,  ಹೋಗುವ ಹೊತ್ತಿಗೆ ಅವರೇ ಆ ಮನೆಯಲ್ಲಿ ಇರಲಿಲ್ಲ. ದಲ್ಬೀರ್‌  ಇಷ್ಟು ಬೇಗ ನಮ್ಮನ್ನೆಲ್ಲ ಅಗಲುತ್ತಾರೆ ಎಂದು ಕೆಟ್ಟ ಕನಸಿನಲ್ಲೂ ಊಹಿಸೋಕೆ ಸಾಧ್ಯವಿಲ್ಲ. ದಲ್ಬೀರ್‌  ಒಬ್ಬ ಹೋರಾಟಗಾರ್ತಿ, ಮಗುವಿನ ಮನಸ್ಸಿನ ಹೆಂಗಳೆ. ತನ್ನ ಪ್ರೀತಿಯ ಸಹೋದರನನ್ನು ಉಳಿಸಿಕೊಳ್ಳುವ ಸಲುವಾಗಿ ಒಂದಿಡೀ ವ್ಯವಸ್ಥೆಯ ವಿರುದ್ಧ ಹೋರಾಡಿದಾಕೆ. ಆಕೆಯ ಪ್ರೀತಿ ಮತ್ತು ಆಶೀರ್ವಾದವನ್ನು ಪಡೆಯಲು ಅದೃಷ್ಟ ಮಾಡಿದ್ದೆ ನಾನು. ದಲ್ಬೀರ್‌ ಕಟ್ಟಿದ ರಾಖಿಯನ್ನು ಈ ಜೀವನಪೂರ್ತಿ ಕಾಪಿಟ್ಟುಕೊಳ್ಳುವೆ. ಚಿತ್ರವೊಂದರ ಶೂಟಿಂಗ್‌ಗಾಗಿ ಕಳೆದ ನವೆಂಬರ್‌ನಲ್ಲಿ ನಾನು ಪಂಜಾಬ್‌ಗೆ ಭೇಟಿ ನೀಡಿದ್ದಾಗ ರಾತ್ರಿಯ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನನ್ನನ್ನು ಕಾಣಲು ಬಂದಿದ್ದರು. ಅದೇ ನಮ್ಮಿಬ್ಬರ ಕೊನೆಯ ಭೇಟಿ. ನನ್ನ ಜೊತೆ ದೂರವಾಣಿ ಮೂಲಕ ಮಾತನಾಡುತ್ತಿದ್ದಾಗಲೂ ಕೊನೆಯದಾಗಿ ನಗು ನಗುತ್ತ ಖುಷಿಯಾಗಿರು ಎಂದು ಹರಸುತ್ತಿದ್ದರು. ನಿಮ್ಮೊಂದಿಗೆ ಈ ವಿಶೇಷ ಬಾಂಧವ್ಯ ಹೊಂದಿದ್ದಕ್ಕೆ ನನ್ನನ್ನು ನಾನು ಅದೃಷ್ಟವಂತನೆಂದೇ ಭಾವಿಸುತ್ತೇನೆ. ಆದರೆ, ನಿಮ್ಮ ಜೊತೆಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ ಎಂಬ ಕೊರಗಿದೆ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಸರಬ್ಜಿತ್‌ ಸಿಂಗ್‌ ಅವರ ಬಗ್ಗೆ ಎರಡು ರೀತಿಯ ಕತೆಗಳು ಚಾಲ್ತಿಯಲ್ಲಿವೆ.

ಸರಬ್ಜಿತ್‌ ಒಬ್ಬ ರೈತ

ಸರಬ್ಜಿತ್‌ ಕುಟುಂಬಸ್ಥರ ಪ್ರಕಾರ, 1990ರ ಆಗಸ್ಟ್‌ 30ರಂದು ‌ಭಾರತ ಮತ್ತು ಪಾಕಿಸ್ತಾನದ ಗಡಿರೇಖೆಗೆ ಅಂಟಿಕೊಂಡಿರುವ ತಮ್ಮ ಹೊಲದಲ್ಲಿ ರಾತ್ರಿ ವೇಳೆ ಸ್ನೇಹಿತರೊಂದಿಗೆ ಕೂತು ಮದ್ಯ ಸೇವಿಸಿ, ಅಮಲಿನಲ್ಲಿ ಪಾಕ್‌ ಗಡಿರೇಖೆಯತ್ತ ಹೋಗಿ ಆಯಾತಪ್ಪಿ ಬಿದ್ದಿದ್ದ ಸರಬ್ಜಿತ್‌ ಅವರನ್ನು ಗಸ್ತು ತಿರುಗುತ್ತಿದ್ದ ಪಾಕಿಸ್ತಾನದ ಸೈನಿಕರು ಬಂಧಿಸಿ ಕರೆದೊಯ್ದಿದ್ದರು. ಸರಬ್ಜಿತ್‌ ಸಿಂಗ್‌ ಅವರನ್ನೇ 19990ರ ಲಾಹೋರ್‌ ಬಾಂಬ್‌ ಸ್ಫೋಟದ ರೂವಾರಿ ಮನ್‌ಜೀತ್‌ ಸಿಂಗ್‌ ರಟ್ಟು ಎಂದುಕೊಂಡು ಗುರುತನ್ನು ತಪ್ಪಾಗಿ ಗ್ರಹಿಸಿ ಸರಬ್ಜಿತ್‌ಗೆ ಜೀವಾವಧಿ ಶಿಕ್ಷೆ ನೀಡಲಾಯಿತು ಎನ್ನಲಾಗಿದೆ.

ಸರಬ್ಜಿತ್‌ ಒಬ್ಬ ಗೂಢಚಾರಿ

ಪಾಕಿಸ್ತಾನ ಸರ್ಕಾರ, ಸೇನೆ ಮತ್ತು ಅಲ್ಲಿನ ಸ್ಥಳೀಯ ಪೊಲೀಸರ ಪ್ರಕಾರ 1990ರ ಮೇ 7ರಂದು ಲಾಹೋರ್‌, ರಾವಲ್‌ಪಿಂಡಿ ಮತ್ತು ಫೈಸಲಾಬಾದ್‌ನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟಗಳಲ್ಲಿ ಭಾರತೀಯ ಗೂಢಚಾರಿಯಾದ ಸರಬ್ಜಿತ್‌ ಸಿಂಗ್‌ ಅಲಿಯಾಸ್‌ ಮನ್‌ಜೀತ್‌ ಸಿಂಗ್‌ ರಟ್ಟು ಕೈವಾಡವಿದೆ ಎನ್ನಲಾಗಿದೆ.

ಲಾಹೋರ್‌ ಬಾಂಬ್‌ ಸ್ಫೋಟ ಪ್ರಕರಣ- ಸರಬ್ಜಿತ್‌ಗೆ ಜೀವಾವಧಿ ಶಿಕ್ಷೆ

ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 1991ರಲ್ಲಿ ತೀರ್ಪು ನೀಡಿದ್ದ ಲಾಹೋರ್‌ ಹೈಕೋರ್ಟ್‌, ಪಾಕಿಸ್ತಾನಿ ಸೇನಾ ಕಾಯಿದೆ ಅಡಿಯಲ್ಲಿ ಸರಬ್ಜಿತ್‌ ಸಿಂಗ್‌ ಅವರನ್ನು ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತ್ತು.  ಈ ಆದೇಶವನ್ನು ಮರುಪರಿಶೀಲನೆ ಕೋರಿ ಸರಬ್ಜಿತ್‌ ಸಿಂಗ್‌ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ಗೆ 2006ರಲ್ಲಿ ಅರ್ಜಿ ಸಲ್ಲಿಸಿದ್ದರು. ಸರಬ್ಜಿತ್‌ ಪರ ವಕೀಲರು ನ್ಯಾಯಾಲಯದ ವಿಚಾರಣೆಗೆ ಹಾಜಾರಾಗದ ಕಾರಣ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿತ್ತು.

ಸರಬ್ಜಿತ್‌ ಬಿಡುಗಡೆಗೆ ಭಾರತದ ಸಂಸತ್‌ನಲ್ಲಿ ಹೆಚ್ಚಿದ ಒತ್ತಡ

2005ರ ಆಗಸ್ಟ್‌ನಲ್ಲಿ ನಡೆದ ಭಾರತದ ಸಂಸತ್‌ ಅಧಿವೇಶನದಲ್ಲಿ ಸರಬ್ಜಿತ್‌ ಸಿಂಗ್‌ ಬಿಡುಗಡೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ವಿಪಕ್ಷಗಳಿಂದ ಕೇಳಿ ಬಂತು. ಬಳಿಕ 2008ರಲ್ಲಿ ದಲ್ಬೀರ್‌ ಕೌರ್‌ ಸೇರಿ ಸರಬ್ಜಿತ್‌ ಕುಟುಂಬದ ಸದಸ್ಯರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಸೇರಿದಂತೆ ಅಲ್ಲಿನ ಹಲವು ರಾಜಕೀಯ ನಾಯಕರುಗಳನ್ನು ಭೇಟಿ ಮಾಡಿ ಸರಬ್ಜಿತ್‌ ಬಿಡುಗಡೆಗೆ ಮನವಿ ಮಾಡಿದ್ದರು. ಅಂದಿನ ಭಾರತೀಯ ವಿದೇಶಾಂಗ ಸಚಿವ ಕೆ ನಟ್ವರ್‌ ಸಿಂಗ್‌ ಪಾಕಿಸ್ತಾನದ ರಾಯಭಾರಿ ಅಝೀಝ್‌ ಅಹ್ಮದ್‌ ಖಾನ್‌ ಅವರನ್ನು ಸಂಪರ್ಕಿಸಿ ಸರಬ್ಜಿತ್‌ ಸಿಂಗ್‌ ಪ್ರಕರಣವನ್ನು ಪಾಕಿಸ್ತಾನ ಮಾನವೀಯತೆ ಆಧಾರದ ಮೇಲೆ ಪರಿಗಣಿಸಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದರು.  

ಜಾಗತಿಕ ಸಮುದಾಯದ ಗಮನ ಸೆಳೆದ ಫ್ರೀ ಸರಬ್ಜಿತ್‌​​​​​​​ಸಿಂಗ್‌ ಅಭಿಯಾನ

ಸರಬ್ಜಿತ್‌ ಸಿಂಗ್‌ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬಳಿಕ ಬ್ರಿಟನ್‌ ಮೂಲದ ವಕೀಲ ಜಾಸ್‌ ಉಪ್ಪಾಲ ಅವರು 2009ರಲ್ಲಿ ʼಫ್ರೀ ಸರಬ್ಜಿತ್‌ಸಿಂಗ್‌.ಕಾಮ್‌ʼ ಎಂಬ ಅಭಿಯಾನ ಪ್ರಾರಂಭಿಸಿ ಜಾಗತಿಕ ಸಮುದಾಯದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಈ ಅಭಿಯಾನದ ಫಲವಾಗಿ ಸರಬ್ಜಿತ್‌ ಪರ ಉಚಿತ ವಕಾಲತ್ತು ವಹಿಸುವುದಾಗಿ ಪಾಕಿಸ್ತಾನಿ ನ್ಯಾಯವಾದಿ ಆವೇಸ್‌ ಶೇಕ್‌ ಘೋಷಿಸಿದರು. ನಂತರದ ದಿನಗಳಲ್ಲಿ ಬಾಲಿವುಡ್‌ ನಟ ರಾಜಾ ಮುರಾದ್‌ ಕೂಡ ಸರಬ್ಜಿತ್‌ ಬಿಡುಗಡೆಗಾಗಿ ʼಫ್ರೀ ಸರಬ್ಜಿತ್‌ʼ ಅಭಿಯಾನ ನಡೆಸಿ ಭಾರತದಲ್ಲಿ 1,38,226 ಜನರಿಂದ ಸಹಿ ಸಂಗ್ರಹಿಸಿದ್ದರು. ನಟ ಸಲ್ಮಾನ್‌ ಖಾನ್‌ ಕೂಡ ತಮ್ಮ 'ಬೀಯಿಂಗ್‌ ಹ್ಯೂಮನ್‌' ಸೇವಾ ಸಂಸ್ಥೆಯ ಮೂಲಕ ಸರಬ್ಜಿತ್‌ ಪರ ಅಭಿಯಾನ ನಡೆಸಿದ್ದರು. 

ಫಲ ನೀಡದ ಕ್ಷಮಾದಾನ ಪತ್ರ

ಕ್ಷಮಾದಾನ ಕೋರಿ ಸರಬ್ಜಿತ್‌ ಸಿಂಗ್‌ ಪಾಕಿಸ್ತಾನದ ರಾಷ್ಟ್ರಪತಿಗಳಿಗೆ 5 ಬಾರಿ ಮನವಿ ಪತ್ರ ಸಲ್ಲಿಸಿದ್ದರು. ಪಾಕಿಸ್ತಾನದ 65ನೇ ಸ್ವಾತಂತ್ರ್ಯ ದಿನಾಚರಣೆಯ ದಿನವೂ ಕ್ಷಮಾದಾನ ನೀಡುವಂತೆ ಸಿಂಗ್ ರಾಷ್ಟ್ರಪತಿಯನ್ನು ಕೋರಿದ್ದರು. ಈ ಪ್ರಯತ್ನಗಳು ಫಲ ನೀಡಲಿಲ್ಲ.

ಲಾಹೋರ್‌ನ ಕೇಂದ್ರೀಯ ಕಾರಾಗೃಹದಲ್ಲಿ ಸರಬ್ಜಿತ್‌​​​​​​​ ಮೇಲೆ ಮಾರಣಾಂತಿಕ ಹಲ್ಲೆ

ಲಾಹೋರ್‌ನ ಕೇಂದ್ರೀಯ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಕಳೆಯುತ್ತಿದ್ದ ಸರಬ್ಜಿತ್‌ ಅವರ ಮೇಲೆ 2013 ಏಪ್ರಿಲ್‌ 26ರಂದು ಜೊತೆಯಲ್ಲಿದ್ದ ಕೈದಿಗಳೇ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಅವರನ್ನು ಲಾಹೋರದ ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6 ದಿನಗಳ ಕಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿಟ್ಟು ಸರಬ್ಜಿತ್‌ಗೆ ಚಿಕಿತ್ಸೆ ನೀಡಲಾಗಿತ್ತು.

ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಸರಬ್ಜಿತ್‌

2013ರ ಮೇ 1ರಂದು ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಸರಬ್ಜಿತ್‌ ಮೃತ ಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಕೋಮಾ ಸ್ಥಿತಿಯಲ್ಲಿದ್ದ ವೇಳೆ ಅವರ ಪತ್ನಿ ಸುಖ್‌ಪ್ರೀತ್‌ ಕೌರ್‌ ಮತ್ತು ಮಕ್ಕಳಾದ ಸ್ವಪನ್‌ದೀಪ್‌, ಪೂನಂ ಕೌರ್‌ ಹಾಗೂ ಸಹೋದರಿ ದಲ್ಬೀರ್‌ ಕೌರ್‌ ಲಾಹೋರ್‌ನ ಆಸ್ಪತ್ರೆಗೆ ಭೇಟಿ ನೀಡಿ ಸರಬ್ಜಿತ್‌ ಅವರ ಕೊನೆಯ ಕ್ಷಣಗಳಿಗೆ ಸಾಕ್ಷಿಯಾಗಿದ್ದರು. 

ಭಾರತಕ್ಕೆ ಸರಬ್ಜಿತ್‌​​​​​​​ ಸಿಂಗ್‌ ಮೃತದೇಹ 

airindia

ಮೇ 2ರಂದು ಏರ್‌ ಇಂಡಿಯಾ ವಿಶೇಷ ವಿಮಾನದ ಮೂಲಕ ಸರಬ್ಜಿತ್‌ ಅವರ ಮೃತದೇಹವನ್ನು ಪಂಜಾಬ್‌ನ ಅಮೃತ್‌ಸರ್‌ಗೆ ಕರೆತರಲಾಯಿತು. ಅಮೃತ್‌ಸರ್‌ ಬಳಿಯ ಪಟ್ಟಿ ಎಂಬಲ್ಲಿ ಎರಡನೇ ಬಾರಿಗೆ ಶವ ಪರೀಕ್ಷೆ ನಡೆಸಿದ ಬಳಿಕ ಹೆಲಿಕಾಪ್ಟರ್‌ ಮೂಲಕ ಸರಬ್ಜಿತ್‌ ಮೃತದೇಹವನ್ನು ಅವರ ಸ್ವಗ್ರಾಮ ಭಿಕಿವಿಂಡ್‌ಗೆ ಕೊಂಡೊಯ್ಯಲಾಯಿತು. ನಂತರ ಕುಟುಂಬಸ್ಥರ ಸಮ್ಮುಖದಲ್ಲಿ ಸರಬ್ಜಿತ್‌ ಅಂತಿಮ ಸಂಸ್ಕಾರ ನೆರವೇರಿತು. ಮೃತಪಟ್ಟಾಗ ಅವರಿಗೆ 49 ವರ್ಷ ವಯಸ್ಸಾಗಿತ್ತು. ಬದುಕಿನ 22 ವರ್ಷಗಳನ್ನು ಅವರು ಪಾಕಿಸ್ತಾನದ ಜೈಲಿನಲ್ಲಿಯೇ ಕಳೆದಿದ್ದರು.

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಸತ್ಯಗಳು

ಸರಬ್ಜಿತ್‌ ಕಳೇಬರದಲ್ಲಿ ಪ್ರಮುಖ ಅಂಗಾಂಗಳೇ ಇರಲಿಲ್ಲ ಮತ್ತು ಆತನ ಮೆದುಳು ಇಬ್ಭಾಗವಾಗಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ವರದಿ ನೀಡಿದ್ದರು.  ಮೊದಲ ಶವ ಪರೀಕ್ಷೆ ನಡೆಸಿದ್ದ ಪಾಕಿಸ್ತಾನದ ಜಿನ್ನಾ ಆಸ್ಪತ್ರೆಯ ಸರಬ್ಜಿತ್‌ ಮರಣೋತ್ತರ ಪರೀಕ್ಷೆಯ ವರದಿ ಈವರೆಗೂ ಆತನ ಕುಟುಂಬಸ್ಥರ ಕೈಸೇರಿಲ್ಲ.

ಸರಬ್ಜಿತ್‌​​​​​​​ ಕುಟುಂಬಕ್ಕೆ ಪರಿಹಾರ ಘೋಷಿಸಿದ ಪಂಜಾಬ್‌ ಸರ್ಕಾರ

ಸರಬ್ಜಿತ್‌ ಸಿಂಗ್‌ ಸಾವಿನ ಬಳಿಕ ಪಂಜಾಬ್‌ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿತ್ತು. ಮತ್ತು ಸರಬ್ಜಿತ್‌ ಕುಟುಂಬಸ್ಥರಿಗೆ 1 ಕೋಟಿ ರೂಪಾಯಿ ಪರಿಹಾರ ನೀಡಿತ್ತು. ಸರಬ್ಜಿತ್‌ ಸಿಂಗ್‌ ಬಂಧನದ ದಿನಗಳಿಂದ ಹಿಡಿದು ಆತನ ಕೊನೆಯುಸಿರ ತನಕ ಸಹೋದರನ ಬಿಡುಗಡೆ ಮಾಡಿಸುವ ಸಲುವಾಗಿ ದಲ್ಬೀರ್‌ ಕೌರ್‌ ಏಕಾಂಗಿಯಾಗಿ ಕೆಚ್ಚಿನ ಹೋರಾಟ ನಡೆಸಿದರು. 

ನಿಮಗೆ ಏನು ಅನ್ನಿಸ್ತು?
3 ವೋಟ್
eedina app