ವಿದ್ಯಾರ್ಥಿಗಳೇ ನಿರ್ಮಿಸಿರುವ ಪುನೀತ್ ರಾಜ್‌ಕುಮಾರ್ ಹೆಸರಿನ ಉಪಗ್ರಹ ಉಡಾವಣೆಗೆ ಸಿದ್ಧ

  • ಶ್ರೀಹರಿಕೋಟಾದಲ್ಲಿ ಪುನೀತ್ ರಾಜ್‌ಕುಮಾರ್ ಹೆಸರಿನ ಉಪಗ್ರಹ ಉಡಾವಣೆ
  • ರಾಜ್ಯದ ಒಂದು ಸಾವಿರ ವಿದ್ಯಾರ್ಥಿಗಳು ಉಡಾವಣೆಯಲ್ಲಿ ಭಾಗಿಯಾಗುವ ಸಾಧ್ಯತೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸರಿನ ಉಪಗ್ರಹದ ಉಡಾವಣೆಗೆ ಸಿದ್ಧತೆ ನಡೆಯುತ್ತಿದ್ದು, ಉಡಾವಣೆಗೆ ಮುಹೂರ್ತ ಸಹ ನಿಗದಿ ಮಾಡಲಾಗಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ. 

"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ವಿದ್ಯಾರ್ಥಿಗಳು ನಿರ್ಮಿಸಿರುವ, ‘ಪುನೀತ್’ ಎಂಬ ಹೆಸರಿನ ಉಪಗ್ರಹವನ್ನು ನವಂಬರ್ 15ರಿಂದ ಡಿಸೆಂಬರ್ 31ರ ನಡುವೆ ಆಂಧ್ರಪ್ರದೇಶ ಶ್ರೀಹರಿಕೋಟಾದಲ್ಲಿ ಉಡಾವಣೆಗೆ ನಿರ್ಧರಿಸಲಾಗಿದೆ" ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

“ಪುನೀತ್ ಉಪಗ್ರಹ ಯೋಜನೆಯ ಭಾಗವಾಗಿ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ ಮತ್ತು ಕುತೂಹಲ ಮೂಡಿಸುವ ಸಲುವಾಗಿ ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಒಂದು ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾಕ್ಕೆ ಕರೆದುಕೊಂಡು ಹೋಗಲಾಗುತ್ತದೆ” ಎಂದು ತಿಳಿಸಿದ್ದಾರೆ.

ಸ್ಪರ್ಧೆಯ ಪ್ರಯುಕ್ತ ಪ್ರೌಢಶಾಲಾ ಮಕ್ಕಳಿಗೆ ಆನ್‌ಲೈನ್ ರಸಪ್ರಶ್ನೆ, ಸ್ಪರ್ಧೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ ಹಾಗೂ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ‘ಪೋಸ್ಟರ್’ ಮಾಡುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಸುಮಾರು 31 ಜಿಲ್ಲೆಗಳ ಸಾರ್ವಜನಿಕ ಶಿಕ್ಷಣಕ್ಕಾಗಿ ಉಪನಿರ್ದೇಶಕರಿಗೆ (ಡಿಡಿಪಿಐ) ಈ ಬಗ್ಗೆ ಸೂಚನೆ ನೀಡಲಾಗಿದೆ. 75ನೇ ಸ್ವಾತಂತ್ರ್ಯದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಶಾಲಾ ವಿದ್ಯಾರ್ಥಿಗಳಿಂದಲೇ 75 ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಘೋಷಿಸಿದ್ದರು. ಯೋಜನೆಯಂತೆ ಬೆಂಗಳೂರು ನಗರದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ‘ಕೆಜಿಎಸ್3 ಸ್ಯಾಟ್’ ಎಂಬ ಉಪಗ್ರಹವನ್ನು ₹1.90 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸುತ್ತಿದ್ದಾರೆ. ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಉಪಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗಿದೆ.

ಡಾ. ಪುನೀತ್ ರಾಜ್‌ಕುಮಾರ್ ಅವರ ನೆನಪಿಗಾಗಿ ಈ ಉಪಗ್ರಹಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಪ್ರಧಾನಮಂತ್ರಿ ಯೋಜನೆಯಡಿಯಲ್ಲಿ ಉಡಾವಣೆಯಾಗಲಿರುವ ದೇಶದ ಪ್ರಥಮ ಉಪಗ್ರಹ ಇದಾಗಲಿದೆ.

“ವಿದ್ಯಾರ್ಥಿಗಳು ಕೇವಲ ಉಪಗ್ರಹ ಅಭಿವೃದ್ಧಿ ಯೋಜನೆಯಲ್ಲಿ ಪಾಲ್ಗೊಂಡರೆ ಸಾಲದು. ಬದಲಿಗೆ ಬಾಹ್ಯಾಕಾಶ, ಖಗೋಳ ವಿಜ್ಞಾನ, ಅಂತರಿಕ್ಷ ಸೇರಿದಂತೆ ಇತರೆ ವೈಜ್ಞಾನಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. ಹೀಗಾಗಿ ಸ್ಪರ್ಧೆಯ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್