ಈ ಸಿನಿಮಾ | ಶಭಾಷ್ ಮಿಥು ಬರೀ ಸಿನಿಮಾವಲ್ಲ; ಹೆಣ್ಣಿನ ಬದುಕಿನ ಸಾರ್ಥಕತೆ, ಮಹಿಳಾ ಕ್ರಿಕೆಟ್‌ ಜಗತ್ತಿನ ದಂತಕಥೆ

ಹೆಣ್ಣೆಂದರೆ ಕೈಗೆ ಬಳೆ ಬಿಂದಿ ಧರಿಸಿ ನಯ ನಾಜುಕಾಗಿ ಇರುವುದು ಮಾತ್ರವಲ್ಲ, ನೃತ್ಯ ಮಾಡುತ್ತಾ ಹಾಡುತ್ತಾ ಅನೇಕ ಸಾಧನೆ ಮಾಡಿರುವ ಹೆಣ್ಣಿಗೆ ಪ್ಯಾಂಟ್ ತೊಟ್ಟು ಬ್ಯಾಟ್ ಹಿಡಿದು ದೇಶದ ಕೀರ್ತಿ ಉತ್ತುಂಗಕ್ಕೆ ತೆಗೆದುಕೊಂಡು ಹೋಗಬಹುದು ಎಂಬುದೇ ಶಭಾಷ್ ಮಿಥು.

ಚಿತ್ರ : ಶಭಾಷ್ ಮಿಥು | ನಿರ್ದೇಶನ : ಶ್ರೀಜಿತ್ ಮುಖರ್ಜಿ | ತಾರಾಗಣ : ತಾಪ್ಸಿ ಪನ್ನು, ಮುಮ್ತಾಜ್ ಸೊರ್ಕಾರ್, ದೇವದರ್ಶಿನಿ, ವಿಜಯ್ ರಾಜ್, ಬ್ರಿಜೇಂದ್ರ ಕಲಾ | ಭಾಷೆ : ಹಿಂದಿ | ಅವಧಿ : 2 ಗಂಟೆ, 36 ನಿಮಿಷ|

"ಭಾರತದ 5 ಮಹಿಳಾ ಕ್ರಿಕೆಟಿಗರ ಹೆಸರು ಹೇಳು"

ಹಾಗೆಂದು ಆಯ್ಕೆ ಮಂಡಳಿಯಲ್ಲಿ ಕೂತು ಹಿರಿಯ ವೃದ್ಧ, ಕಚೇರಿಯ ವೃದ್ಧ ಜವಾನನ್ನು ಕೇಳುತ್ತಾನೆ. ಆತನಿಗೆ ಹೆಸರುಗಳು ನೆನಪಾಗುವುದಿಲ್ಲ.

"ಕಡೆಯ ಪಕ್ಷ ಒಂದಾದರೂ ಹೆಸರು ಹೇಳು" ಎನ್ನುತ್ತಾನೆ ಮತ್ತೆ

ಅಜ್ಜ  ಸಾರಿ ಹೇಳಿ, ಗೊತ್ತಿಲ್ಲ ಎನ್ನುತ್ತಾನೆ.

ಈ ಮಾತುಕತೆ ನಡೆಯುವಾಗ ಭಾರತದ ಮಹಿಳಾ ಕ್ರಿಕೆಟ್‌ ಟೀಮ್‌ ಮತ್ತು ಅವರ ನಾಯಕಿ ಅಲ್ಲೇ ನಿಂತಿರುತ್ತಾರೆ!

ಮಹಿಳೆ ಮತ್ತು ಕ್ರೀಡೆಯ ವಿಷಯ ಬಂದಾಗಲೆಲ್ಲಾ ಇಂತಹದ್ದೊಂದು ಕತೆ ನಮ್ಮ ಕಿವಿಗೆ ಬೀಳುತ್ತದೆ. ಆಟ ಎಂಬುದು, ದೇಹಕ್ಕೆ ಸಂಬಂಧಿಸಿದ್ದು, ಹೆಣ್ಣು ಆಟದಲ್ಲಿ ತೊಡಗಿಸಿಕೊಳ್ಳಲಾರಳು ಎಂಬುದು ಪುರುಷ ಪ್ರಧಾನ ಸಿದ್ಧಾಂತ. 

ಅದನ್ನು ಮೀರಿದ ನೂರಾರು ಕತೆಗಳೂ ನಮ್ಮ ಮುಂದಿದೆ. ಅಂತಹದ್ದೇ ಒಂದು ಕತೆಯನ್ನು ಶ್ರೀಜಿತ್‌ ಮುಖರ್ಜಿ ಅದ್ಭುತವಾಗಿ ತೆರೆಗೆ ತಂದಿದ್ದಾರೆ. ಅದರ ಹೆಸರೇ 'ಶಬಾಶ್‌ ಮಿಥು'.

ಇತ್ತೀಚೆಗೆ ಎರಡು ದಶಕಗಳ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್‌ ಅವರ ಜೀವನ ಸಾಧನೆಯನ್ನು ಈ ಚಿತ್ರದ ಮೂಲಕ ಅದ್ಭುತವಾಗಿ, ಆವರಿಸುವಂತೆ ಬೆಳ್ಳಿ ಪರದೆಗೆ ತಂದಿದ್ದಾರೆ. ಮಿಥಾಲಿ ಅವರ ಜೀವನವನ್ನೇ ಚಿನ್ನದ ಪುಟದಲ್ಲಿ ಬರೆಯುವ ಸಾಧನೆ. ಅದನ್ನು ಈ ಚಿತ್ರದ ಚೌಕಟ್ಟಿಗೆ ತಂದಿರುವ ರೀತಿ ಮನೋಜ್ಞವಾಗಿದೆ.

ಕ್ರಿಕೆಟ್‌ ಇಲ್ಲಿ ಕೇಂದ್ರವಾದರೂ, ಮಿಥಾಲಿಯ ಜೀವನ ಪಯಣ ಅತ್ಯಂತ ಭಾವನಾತ್ಮಕವಾಗಿ ಕರೆದೊಯ್ಯುತ್ತದೆ. ಕ್ರಿಕೆಟ್‌ಗಾಗಿಯೇ ಇಲ್ಲಿ ಸಂಘರ್ಷ ನಡೆದರೂ, ಹೆಣ್ಣಿನ ಆಯ್ಕೆಯ ಸ್ವಾತಂತ್ರ್ಯ, ಅಪಮಾನ, ಅನುಮಾನ, ತಾರತಮ್ಯಗಳನ್ನು ಮೆಟ್ಟಿ ನಿಲ್ಲುವ ಕತೆಯಾಗಿ ಯಶಸ್ವಿಯಾಗಿದೆ.

ಹೆಣ್ಣು ಮಕ್ಕಳನ್ನು, ಹಾಡು ಕಲಿಯಬೇಕು, ಅಡುಗೆ ಮಾಡಬೇಕು, ನೃತ್ಯ ಕಲಿಯಬೇಕೆನ್ನುವ, ಗಂಡಿನ ಅವಶ್ಯಕತೆ ಪೂರೈಸುವುದಕ್ಕೆ ಸಿದ್ಧ ಮಾಡಲಾಗುತ್ತದೆ. ಅದೇ ರೀತಿ ಚಿತ್ರದಲ್ಲಿ ಟಾಮ್‌ ಬಾಯ್‌ನಂತೆ ಇರಲು ಹಂಬಲಿಸುವ ನೂರಿಯನ್ನು ನೃತ್ಯ ಕಲಿಯಲು ಕಳಿಸಲಾಗುತ್ತದೆ. ಅಲ್ಲಿ ಮಿಥುವಿನ ಭೇಟಿಯಾಗುತ್ತದೆ. ಈಕೆಯೇ ಮಿಥಾಲಿ ರಾಜ್‌ ಒಳಗೆ ಕ್ರಿಕೆಟ್‌ ಎಂಬ ಕನಸಿನ ಬೀಜ ಬಿತ್ತಿದ ಹುಡುಗಿ! ಈ ಇಬ್ಬರು ಸೇರಿ ಕದ್ದು ಆಡಲಾರಂಭಿಸುವುದು ಕ್ರಿಕೆಟ್‌ ಎಂಬ ಆಟವನ್ನ!

ನೂರಿ ತೀವ್ರವಾಗಿ ಹಂಬಲಿಸಿದರೂ ಕಡೆಗೂ ಅವಳು ಕ್ರಿಕೆಟ್‌ ಅಂಗಳಕ್ಕೆ ಇಳಿಯುವ ಬದಲು, ಮದುವೆ- ಸಂಸಾರದ ಅಂಗಳಕ್ಕೆ ದೂಡಲ್ಪಡುತ್ತಾರೆ. ಗೆಳತಿಗಾದ ಅನ್ಯಾಯಕ್ಕೆ ಸಿಡಿಯುವ ಮಿಥಾಲಿ ಹಠ, ಛಲ, ಪರಿಶ್ರಮಗಳನ್ನು ನಂಬಿ ಕ್ರಿಕೆಟ್‌ ತಂಡದ ನಾಯಕಿಯಾಗಿ ಬೆಳೆದು ನಿಲ್ಲುತ್ತಾಳೆ.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಸವಾಲುಗಳ ನಡುವೆ ಬೆಳೆದು ನಿಲ್ಲುವ ಮಿಥಾಲಿಯ ಕಥೆಯನ್ನು ಶ್ರೀಜಿತ್‌ ತೀಕ್ಷ್ಣವಾಗಿ ಹೇಳಿದ್ದಾರೆ. ಅವಳಂತೆ ಒದ್ದಾಡಿದ ಹಲವರ ಕತೆಗಳನ್ನು ಹೇಳಿಬಿಡುತ್ತಾರೆ. ನೂರಾರು ಕಿ.ಮೀ ಪ್ರಯಾಣ ಮಾಡಿ ಬರುವ ಒಂದು ಹುಡುಗಿ, ಸಂಜೆ ಚಹಾದ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿ, ಮೀನು ಮಾರಾಟ, ಕಬ್ಬಿಣ ಕೆಲಸ ಹೀಗೆ ಕ್ರಿಕೆಟ್ ಕನಸು ಹೊತ್ತ ಪ್ರತಿ ಹುಡುಗಿಯರ ಹಿಂದೆ ನೂರಾರು ಕಥೆಗಳನ್ನೂ ಶ್ರೀಜಿತ್‌ ದಾಟಿಸಿಬಿಡುತ್ತಾರೆ.

ಹೆಣ್ಣಿನ ಸಹಜ ಸವಾಲುಗಳೊಂದಿಗೆ ಹೋರಾಡುವುದು ಒಂದೆಡೆಯಾದರೆ, ಪುರುಷರ ಅಸಹನೀಯತೆ, ಅಸಮಾನ ಧೋರಣೆಗಳನ್ನು ಹೋರಾಡುವುದು ಇನ್ನೊಂದೆಡೆ. ಶ್ರೀಜಿತ್‌ ಪುರುಷರ ತಂಡದ ಜೆರ್ಸಿ ಅನ್ನು ಮಹಿಳೆಯರ ತಂಡಕ್ಕೆ ನೀಡಿದ ದೃಶ್ಯವು ತಾರತಮ್ಯ ಮತ್ತು ತಾತ್ಸಾರಕ್ಕೆ ಸಾಕ್ಷಿ. ಹೆಣ್ಣು ತನ್ನದೇ ಆದ ಗುರುತು (ಐಡೆಂಟಿ) ಹೊಂದುವುದು ಗಂಡಿಗೆ ಎಂದಿಗೂ ಅಸಹನೀಯವೆ ಎಂಬ ಸೂಕ್ಷ್ಮ ಸಂಗತಿಯನ್ನು ದೃಶ್ಯ ಪ್ರೇಕ್ಷಕರ ಮುಂದಿಡುತ್ತದೆ.

ಮಿಥಾಲಿಯನ್ನು ಆವಹಿಸಿಕೊಂಡಂತೆ ನಟಿಸಿರುವ ತಾಪ್ಸಿ ಪಾತ್ರವನ್ನು ಪ್ರೇಕ್ಷಕರ ಮನಸಿಗೆ ನಾಟುವಂತೆ ಅಭಿನಯಿಸಿದ್ದಾರೆ. ಪ್ರಿಯಾ ಅವೆನ್‌ ಅವರ ಚಿತ್ರಕತೆಯಲ್ಲೇನೊ ಕೊರತೆ ಉಳಿಯಿತು ಎನ್ನಿಸುವಂತೆ ಭಾಸವಾಗುತ್ತದೆ. ಮೊದಲರ್ಧ ಕಾತರದ, ಎರಡನೆಯ ಅರ್ಧದಲ್ಲಿ ಉಳಿಯುವುದಿಲ್ಲ. ಮಿಥಾಲಿಯ ಜೀವನದ ಆಯ್ದ ಭಾಗವನ್ನೇ ಆಧರಿಸಿದ್ದರೂ, ಇನ್ನಷ್ಟು ತೀವ್ರವಾದ ಕತೆಯನ್ನು ಹೆಣೆಯಬಹುದಿತ್ತು ಎನ್ನಿಸದೇ ಇರದು.

ಇತಿಹಾಸದಿಂದ ಒಂದೊಂದು ಪಾತ್ರವನ್ನು ಆಯ್ದು ರೋಚಕ ಚಿತ್ರ ನಿರ್ಮಿಸಿ, ಸೋಲುತ್ತಿರುವ ಸಂದರ್ಭದಲ್ಲಿ ನಮ್ಮ ನಡುವೆಯೇ ಇರುವ ಸಾಧಕಿಯೊಬ್ಬಳ ಕತೆಯನ್ನು ಶ್ರೀಜಿತ್‌ ಮನಮೆಚ್ಚುವ ಹಾಗೇ ನಿರ್ಮಿಸಿದ್ದಾರೆ ಎಂಬುದರಲ್ಲಿ ತಕರಾರಿಲ್ಲ.

ನಿಮಗೆ ಏನು ಅನ್ನಿಸ್ತು?
3 ವೋಟ್