ಶಂಶೇರಾ ಟೀಸರ್‌ | ರಣಬೀರ್ ಹೊಸ ಸಿನಿಮಾದಲ್ಲಿ ದಕ್ಷಿಣದ ‍ಛಾಯೆ

shamshera
  • ಡಕಾಯಿತನ ವೇಷ ತೊಟ್ಟ ರಣಬೀರ್‌ ಕಪೂರ್‌
  • ಅಧೀರನ ಹೋಲುವ ಪಾತ್ರದಲ್ಲಿ ಸಂಜಯ್‌ ದತ್‌

ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಅಭಿನಯದ ʼಶಂಶೇರಾʼ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ದಶಕದ ಕಾಲ ಚಾಕಲೇಟ್‌ ಬಾಯ್‌ ಪಾತ್ರಗಳಲ್ಲಿ ಮಿಂಚಿ ಬಾಲಿವುಡ್‌ನಲ್ಲಿ ಕ್ಯೂಟ್‌ ಹೀರೋ ಎಂದು ಹೆಸರು ಮಾಡಿದ್ದ ರಣಬೀರ್‌ ಇದೇ ಮೊದಲ ಬಾರಿಗೆ ಪಾತ್ರದ ಆಯ್ಕೆಯಲ್ಲಿ ಸಾಹಸ ಪ್ರದರ್ಶಿಸಿದ್ದು, ʼಶಂಶೇರಾʼ ಚಿತ್ರದಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದೂವರೆ ನಿಮಿಷಗಳ ಟೀಸರ್‌ ಸೂಚಿಸುವಂತೆ ʼಶಂಶೇರಾʼ ದೌರ್ಜನ್ಯ, ದರ್ಪದ ವಿರುದ್ಧ ಸಿಡಿದೇಳುವ ಬಂಡುಕೋರರ ಕಥೆ. ಕಥಾನಾಯಕನ ಹೆಸರನ್ನೇ ಚಿತ್ರದ ಶೀರ್ಷಿಕೆಯನ್ನಾಗಿಸಿದ್ದು, ಡಕಾಯಿತನಾಗಿ ಬೆಳೆಯುವ ʼಶಂಶೇರಾʼ ಪ್ರಬಲ ಖಳನ ಕಪಿಮುಷ್ಠಿಯಿಂದ ಶೋಷಣೆಗೊಳಪಟ್ಟ ತನ್ನ ಸಮುದಾಯದ ಜನರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕಥೆಯನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ರಣಬೀರ್‌ ಕೇವಲ ಖಳನ ವಿರುದ್ಧ ಮಾತ್ರವಲ್ಲದೆ ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ಧವೂ ಕಾಳಗಕ್ಕೆ ಇಳಿದಿದ್ದಾರೆ.

Eedina App

ಈ ಸುದ್ದಿ ಓದಿದ್ದೀರಾ? ಯುಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡ್ತಿದೆ ಭಟ್ಟರ 'ಬೇವರ್ಸಿ ಮನ್ಸಾ' ಹಾಡು

ಈ ಹಿಂದೆ ʼಕೆಜಿಎಫ್‌-2ʼ ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ಮಿಂಚಿದ್ದ ನಟ ಸಂಜಯ್‌ ದತ್‌ ʼಶಂಶೇರಾʼದಲ್ಲಿ ರಣಬೀರ್‌ಗೆ ಎದುರಾಳಿಯಾಗಿ ಕಾಣಿಸಿಕೊಂಡಿದ್ದು, ಬುಡಕಟ್ಟು ಜನರನ್ನು ಒತ್ತೆಯಾಳುಗಳನ್ನಾಗಿಸಿ ಶೋಷಿಸುವ ಖಳನ ಪಾತ್ರದಲ್ಲಿ ಮಿಂಚಿದ್ದಾರೆ. ಟೀಸರ್‌ನಲ್ಲಿ ಕಾಣುವಂತೆ ʼಶಂಶೇರಾʼದಲ್ಲಿನ ಸಂಜಯ್‌ ದತ್‌ ಅವರ ವೇಷ ʼಕೆಜಿಎಫ್‌-2ʼ ಚಿತ್ರದ ಅಧೀರನನ್ನು ನೆನಪಿಸುತ್ತದೆ. ಸಂಜಯ್‌ ದತ್‌, ಅಧೀರನನ್ನು ಹೋಲುವಂತಹ ಪಾತ್ರದಲ್ಲಿಯೇ ನಟಿಸುತ್ತಿರುವುದರಿಂದ ಅವರ ಪಾತ್ರ ಹೆಚ್ಚೇನೂ ವಿಶೇಷ ಎನ್ನಿಸುವುದಿಲ್ಲ. 

AV Eye Hospital ad

 

ಬಾಲಿವುಡ್‌ ಚಿತ್ರಗಳು ದಕ್ಷಿಣದ ಸಿನಿಮಾಗಳ ಎದುರು ಮಂಕಾಗಿವೆ ಎಂಬ ಟೀಕೆಗಳು ಹೆಚ್ಚಾಗಿ ಕೇಳಿ ಬರುತ್ತಿರುವ ಹೊತ್ತಲ್ಲೇ ʼಶಂಶೇರಾʼ ಬಿಡುಗಡೆಗೆ ಸಜ್ಜಾಗಿದ್ದು, ದಕ್ಷಿಣದ ಸಿನಿಮಾಗಳಿಗೆ ಪೈಪೋಟಿ ಒಡ್ಡುವ ಬದಲು ಅದೇ ಸಿನಿಮಾಗಳ ಛಾಯೆಯಲ್ಲಿ ಮೂಡಿಬಂದಿರುವುದು ಬಾಲಿವುಡ್‌ನಲ್ಲಿ ಕಥೆಯ ಕೊರತೆ ಎದ್ದು ಕಾಣುತ್ತಿದೆ ಎಂಬ ಆರೋಪಗಳಿಗೆ ತಾಜಾ ಉದಾಹರಣೆಯಂತಿದೆ. ಉಳ್ಳವರ ವಿರುದ್ಧ ಸಿಡಿದೆದ್ದು ಶೋಷಿತರ ರಕ್ಷಣೆಗೆ ನಿಲ್ಲುವ ಕಥಾನಾಯಕ ಮತ್ತು ಆತನ ಬದುಕಿನ ವೃತ್ತಾಂತವನ್ನು ಸಾರುವ ʼರಾಬಿನ್‌ ಹುಡ್‌ʼ ಮಾದರಿಯ ಅನೇಕ ಸಿನಿಮಾಗಳು ಈಗಾಗಲೇ ಹಾಲಿವುಡ್‌ನಿಂದ ಹಿಡಿದು ಸ್ಯಾಂಡಲ್‌ವುಡ್‌ವರೆಗೆ ಎಲ್ಲ ಚಿತ್ರರಂಗಳಲ್ಲೂ ಬಂದು ಹೋಗಿವೆ. ʼಶಂಶೇರಾʼ ಚಿತ್ರದಲ್ಲೂ ನಿರ್ದೇಶಕ ಕರಣ್‌ ಮಲ್ಹೋತ್ರಾ ಮತ್ತದೇ ಸಿದ್ಧ ಮಾದರಿಗೆ ಕೈ ಹಾಕಿದ್ದಾರೆ ಎಂಬುದನ್ನು ಟೀಸರ್‌ ಸ್ಪಷ್ಟ ಪಡಿಸುತ್ತದೆ. ಕನ್ನಡದ ʼಕೆಜಿಎಫ್‌ʼ, ತೆಲುಗಿನ ʼಬಾಹುಬಲಿʼಯಂತೆ ಮೇಕಿಂಗ್‌ ವಿಚಾರಕ್ಕೆ, ರಣಬೀರ್‌ ಹೊಸ ವೇಷದ ಕಾರಣಕ್ಕೆ ಚಿತ್ರದ ಟೀಸರ್‌ ನೋಡುಗರನ್ನು ಸೆಳೆಯಬಹುದಷ್ಟೇ.  

ಈ ಸುದ್ದಿ ಓದಿದ್ದೀರಾ? ಕೆಜಿಎಫ್‌ ಅಸಲಿ ಕತೆ ಹೇಳಲಿದ್ದಾರೆ ತಮಿಳಿನ ಖ್ಯಾತ ನಿರ್ದೇಶಕ ಪಾ ರಂಜಿತ್‌

ʼಶಂಶೇರಾʼ ಟೀಸರ್‌ ಬಿಡುಗಡೆಯಾದ ನಾಲ್ಕು ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 40 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಕರಣ್‌ ಮಲ್ಹೋತ್ರಾ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಣಬೀರ್‌ ಮತ್ತು ವಾಣಿ ಕಪೂರ್‌ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಜುಲೈ 22ರಂದು ತೆರೆಗೆ ಬರಲಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app