
- ದುಡ್ಡು ಕೊಟ್ಟು ವಿಮರ್ಶೆ ಪಡೆದುಕೊಳ್ಳಬೇಕಾ ಎಂಬ ಪ್ರಶ್ನೆ
- ಬುಕ್ ಮೈ ಶೋ ವಿರುದ್ಧ ನಿರ್ದೇಶಕಿ ಶೀತಲ್ ಅಸಮಾಧಾನ
'ಬುಕ್ ಮೈ ಶೋ' ಎಂಬ ಮುಂಗಡ ಸಿನಿಮಾ ಟಿಕೆಟ್ ಕಾಯ್ದಿರಿಸುವ ವೇದಿಕೆಯಲ್ಲಿ ಸಿನಿ ಪ್ರೇಕ್ಷಕರ ವಿಮರ್ಶೆಗಳು ಮತ್ತು ಚಿತ್ರದ ರೇಟಿಂಗ್ ತೋರಿಸಲು ಷರತ್ತುಗಳನ್ನು ವಿಧಿಸಿ ಕನ್ನಡ ಚಿತ್ರರಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು 'ವಿಂಡೋ ಸೀಟ್' ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿಯವರು ಆರೋಪಿಸಿದ್ದಾರೆ.
ಸಿನಿಮಾ ವೀಕ್ಷಕರು ಸಿನಿಮಾ ನೋಡುವ ಮುನ್ನ ವಿಮರ್ಶೆಗಳನ್ನು ಓದಿ ಚಿತ್ರ ವೀಕ್ಷಣೆಗೆ ಮುಂದಾಗುತ್ತಾರೆ. ಆದರೆ, ಇಲ್ಲಿ ವಿಮರ್ಶೆಗಳೇ ಕಾಣದಂತೆ ಮಾಡಿರುವುದು ಶೀತಲ್ ಶೆಟ್ಟಿಯವರ ಆಕ್ರೋಶಕ್ಕೆ ಕಾರಣವಾಗಿದೆ.
'ಬುಕ್ ಮೈ ಶೋ' ಸಂಸ್ಥೆಯ ಈ ನಡೆಯ ಬಗ್ಗೆ ಶೀತಲ್ ಶೆಟ್ಟಿಯವರು ಈದಿನ.ಕಾಮ್ನೊಂದಿಗೆ ಮಾತನಾಡಿ, “ಬುಕ್ ಮೈ ಶೋನಲ್ಲಿ ಮೊದಲಿಗೆ ನಮ್ಮ ಸಿನಿಮಾ ತೋರಿಸಲು ಚಲನಚಿತ್ರ ನಿರ್ಮಾಣ ಸಂಸ್ಥೆಯಿಂದ ಹಣ ನೀಡಬೇಕು. ದುಡ್ಡು ನೀಡಿದ ಮೇಲೆ ಸಿನಿಮಾಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಅವರು ತೋರಿಸಬೇಕು. 'ಬುಕ್ ಮೈ ಶೋ' ಮೂಲಕ ಟಿಕೆಟ್ ಖರೀದಿಸುವವರು ಟಿಕೆಟ್ ಬೆಲೆಗಿಂತ ಅಧಿಕವಾಗಿ ₹30 ನೀಡುತ್ತಿದ್ದಾರೆ. ಅದಗ್ಯೂ. ಸಿನಿಮಾ ಬಗೆಗಿನ ವಿಮರ್ಶೆಗಳನ್ನು ತೋರಿಸಲು ಪ್ರತ್ಯೇಕವಾಗಿ ಹಣ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಜೊತೆಗೆ ನಿರ್ದಿಷ್ಟ ಸಂಖ್ಯೆಯಲ್ಲಿ ವಿಮರ್ಶೆಗಳು ಬಂದಿದ್ದರೆ ಮಾತ್ರ ವಿಮರ್ಶೆಗಳನ್ನು ತೋರಿಸುತ್ತಾರೆ ಎಂದು ತಿಳಿಯಿತು" ಎಂದು ಅವರು ಹೇಳಿದರು.
ಸಿನಿಮಾ ಮಾಡಿವರಿಗೆ ತಮ್ಮ ಸಿನಿಮಾ ಬಗ್ಗೆ ತಿಳಿಯಲು ಅವಕಾಶ ಇಲ್ಲ
"ಸಿನಿಮಾ ಮಾಡಿದಾಗ ಮೊದಲೇ ದುಡ್ಡು ಕೊಟ್ಟು 'ಬುಕ್ ಮೈ ಶೋ'ನಲ್ಲಿ ಜಾಗ ಪಡೆದಿರುತ್ತೀವಿ. 'ಬುಕ್ ಮೈ ಶೋ'ನಲ್ಲಿ ಟಿಕೆಟ್ ತೆಗೆದುಕೊಂಡಿದ್ದವರಿಗೆ ಮಾತ್ರ ವಿಮರ್ಶೆ ಬರೆಯಲು ಅವಕಾಶ ಇದೆ. ಸಿನಿಮಾ ಮಾಡುವುದಕ್ಕೆ ನಾವು ಸಾಕಷ್ಟು ಕಷ್ಟಪಟ್ಟಿರುತ್ತೀವಿ. ಚಿತ್ರ ಮಾಡಿದವರಿಗೆ ಪ್ರೇಕ್ಷಕರ ಅಭಿಪ್ರಾಯ ತುಂಬಾ ಮುಖ್ಯವಾಗಿರುತ್ತದೆ. ದುಡ್ಡು ಕೊಟ್ಟು ಸಿನಿಮಾ ನೋಡಿದವರು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ತಿಳಿಸಲು ಇರುವ ವೇದಿಕೆಯನ್ನೇ 'ಬುಕ್ ಮೈ ಶೋ' ಅವರು ಕಿತ್ತಿಕೊಳ್ಳುತ್ತಿದ್ದಾರೆ. ಒಂದೇ ಒಂದು ವಿಮರ್ಶೆ ಬಂದರೂ ನಮಗೆ ಮುಖ್ಯವಾಗಿರುತ್ತದೆ. ಆ ವಿಮರ್ಶೆ ಕೆಟ್ಟದೇ ಇರಲಿ, ಒಳ್ಳೆಯದೇ ಇರಲಿ, ದುಡ್ಡು ಕೊಟ್ಟು ಹೋದವರಿಗೆ ಹೊಗಳುವ ತೆಗಳುವ ಹಕ್ಕು ಇರುತ್ತದೆ. ಪ್ರೇಕ್ಷಕರು ಸಿನಿಮಾಗೆ ಮಾತ್ರವಲ್ಲ 'ಬುಕ್ ಮೈ ಶೋ'ಗು ಹಣ ಕೊಟ್ಟಿದ್ದಾರೆ. ಜೊತೆಗೆ ಸಿನಿಮಾ ಮಾಡಿದ ನಮಗೂ ವಿಮರ್ಶೆಗಳನ್ನು ನೋಡುವ ಹಕ್ಕು ಇಲ್ಲದಂತೆ ಮಾಡಿದ್ದಾರೆ. ವಿಮರ್ಶೆಗಳನ್ನು ಓದುವುದಕ್ಕೆ ನಿರ್ಬಂಧ ಹಾಕಿರುವುದರಿಂದ 'ಬುಕ್ ಮೈ ಶೋ' ಸಂಸ್ಥೆಯಿಂದ ಅನ್ಯಾಯವಾಗುತ್ತಿದೆ. ನನ್ನಂತ ಹೊಸ ನಿರ್ದೇಶಕಿಗೆ ಚಿತ್ರದಲ್ಲಿ ಆಗುವ ತಪ್ಪುಗಳನ್ನು ತಿಳಿದುಕೊಂಡು ಮುಂದಿನ ಚಿತ್ರಗಳಲ್ಲಿ ಸರಿಮಾಡಿಕೊಳ್ಳಲು ವಿಮರ್ಶೆಗಳು ಮುಖ್ಯವಾಗುತ್ತದೆ. ಈ ಸಮಸ್ಯೆ ನನಗೆ ಮಾತ್ರವಲ್ಲ, ಎಲ್ಲರಿಗೂ ಇದೆ. ಆದರೆ, ದುಡ್ಡಿದ್ದವರು ಅವರೇ ಟಿಕೆಟ್ಗಳನ್ನು ಖರೀದಿಸಿ ಸುಳ್ಳು ವಿಮರ್ಶೆಗಳನ್ನು ಹಾಕಿಸುತ್ತಾರೆ. ನನ್ನಂತ ಬಡ ನಿರ್ದೇಶಕಿಗೆ ಹಾಗೇ ಮಾಡುವುದಕ್ಕೆ ಸಾಧ್ಯವಿಲ್ಲ” ಎಂದು ತಮ್ಮ ಬೇಸರ ಕ್ತಪಡಿಸಿದರು.
Kind request to @bookmyshow @fafsters pic.twitter.com/RWoZ3M01xr
— sheetal shetty (@isheetalshetty) July 3, 2022
ಹಣ ಕೊಟ್ಟು ಸುಳ್ಳು ವಿಮರ್ಶೆ ಹಾಕಿಸುವುದಿಲ್ಲ
“ನನ್ನ ಪತ್ರದ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 'ಬುಕ್ ಮೈ ಶೋ' ಉದ್ದೇಶ ದುಡ್ಡು ಮಾಡುವುದು. ವಿಮರ್ಶೆಗಳನ್ನು ನೋಡಿ ವೀಕ್ಷಕರು ಬರುತ್ತಾರೆ. ಹಾಗಾಗಿ ದುಡ್ದು ಕೊಟ್ಟು ಸುಳ್ಳು ವಿಮರ್ಶೆ ಬರುವಂತೆ ಮಾಡುತ್ತಾರೆ. ಈ ಮೂಲಕ 'ಬುಕ್ ಮೈ ಶೋ' ಸುಳ್ಳು ವಿಮರ್ಶೆಗಳನ್ನು ಪ್ರಚಾರ ಮಾಡುತ್ತಿದೆ. ಆದರೆ, ಪ್ರಮಾಣಿಕವಾಗಿ ಸಿನಿಮಾ ಮಾಡುವವರು ಎಲ್ಲಿಗೆ ಹೋಗಬೇಕು” ಎಂದು ಪ್ರಶ್ನಿಸಿದರು.
"ದುಡ್ಡು ಕೊಟ್ಟು ನನ್ನ ಸಿನಿಮಾದ ಬಗ್ಗೆ ವಿಮರ್ಶೆ ನಾನು ಹಾಕಿಸುವುದಿಲ್ಲ. ಈಗಾಗಲೇ ಎಲ್ಲರು ಹೀಗೆ ವಿಮರ್ಶೆ ಕಾಣಬೇಕೆಂದರೆ ದುಡ್ಡು ಕೋಡುತ್ತಿದ್ದಾರೆ. ಸಿನಿಮಾ ನೋಡಿದ ಅನೇಕರು ನಿಮ್ಮ ಚಿತ್ರದ ಬಗ್ಗೆ ವಿಮರ್ಶೆ ಬರೆಯಲು ಸಾಧ್ಯವಾಗುತ್ತಿಲ್ಲ, 'ಚಾರ್ಲಿ' ಚಿತ್ರಕ್ಕೂ ಹೀಗೆ ಆಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಅನ್ಯಾಯವಾಗುತ್ತಿದೆ ಎಂದು ಅವರೂ ಈ ವಿಚಾರವನ್ನು ನನ್ನ ಗಮನಕ್ಕೆ ತಂದರು. ಇದಕ್ಕೂ ಮುಂಚೆ ಈ ಬಗ್ಗೆ ನನಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ. ಕನ್ನಡದಲ್ಲೇ ನಾವು ಸಿನಿಮಾ ಮಾಡಬೇಕು. ನನ್ನಂತೆ ಬೇರೆಯವರಿಗೂ ಸಮಸ್ಯೆಯಾಗಿದ್ದರೆ ಚಿತ್ರರಂಗದವರು ಸಹಕಾರ ನೀಡುತ್ತಾರೆ. ಇದು ನನ್ನ ಒಬ್ಬಳ ಸಮಸ್ಯೆಯಲ್ಲ, ಎಲ್ಲರ ಸಮಸ್ಯೆಯಾಗಿದೆ. ಈ ಬಗ್ಗೆ ನಾನು ದನಿ ಎತ್ತಿದರೆ, ಇತ್ತೀಚೆಗೆ ಬಂದು ಒಂದು ಸಿನಿಮಾ ಮಾಡಿ ಶೀತಲ್ ಮಾತನಾಡುತ್ತಿದ್ದಾರೆ ಎಂದು ಟೀಕೆ ಮಾಡುತ್ತಾರೆಯೇ ವಿನಃ ಯಾರು ಸಮಸ್ಯೆ ಬಗೆಹರಿಸುವುದಿಲ್ಲ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗೆ ಈ ಬಗ್ಗೆ ಮಾಹಿತಿ ಇದೆ. ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೆಂಬುದು ನನಗೆ ತಿಳಿದಿಲ್ಲ” ಎಂದು ಅವರು ಹೇಳಿದರು.
ಬೇರೆ ಭಾಷೆಗಳಿಗೆ ಇಲ್ಲದ ಸಮಸ್ಯೆ ಕನ್ನಡ ಚಿತ್ರಗಳಿಗೆ ಯಾಕೆ?
“ನಾನು ಟ್ವೀಟ್ ಮಾಡಿದ ಮೇಲೆ, ವೀಕ್ಷಕರು ಪ್ರತಿಕ್ರಿಯಿಸಿ, ಬೇರೆ ಭಾಷೆಯ ಸಿನಿಮಾಗಳಿಗೆ ಇಲ್ಲದ ಸಮಸ್ಯೆ ಕನ್ನಡ ಸಿನಿಮಾಗಳಿಗೆ ಇದೆ. ಕರ್ನಾಟಕದಲ್ಲಿ ಇದ್ದುಕೊಂಡು ಬೇರೆ ಭಾಷೆಯ ಸಿನಿಮಾಗಳ ಬಗ್ಗೆ ವಿಮರ್ಶೆ ನೋಡಬಹುದು. ಜೊತೆಗೆ ಟಿಕೆಟ್ ಖರೀದಿ ಮಾಡದೇ ಇದ್ದವರು ಸಹ ವಿಮರ್ಶೆಗಳನ್ನು ನೋಡುವುದಕ್ಕೆ ಮತ್ತು ಬರೆಯುವುದಕ್ಕೆ ಅವಕಾಶವಿದೆ. ಕನ್ನಡ ಸಿನಿಮಾಗಳಿಗೆ ಮಾತ್ರ ಈ ನಿರ್ಬಂಧ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನಮ್ಮ ಸಿನಿಮಾಗಳ ಬಗ್ಗೆ ಒಳ್ಳೆಯದೇ ಹೇಳಬೇಕಿಲ್ಲ ಆದರೆ, ಸಿನಿಮಾ ನೋಡಿದವರು ಏನು ಮಾತನಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಶೀತಲ್ ಶೆಟ್ಟಿ ಅವರ ಟ್ವೀಟ್ ವಿಚಾರವಾಗಿ ವಿಂಡೋ ಸೀಟ್ ಚಿತ್ರದ ನಿರ್ಮಾಪಕ ಜಾಕ್ ಮಂಜು ಅವರು ಈದಿನ.ಕಾಮ್ ಜೊತೆ ಮಾತನಾಡಿ, “ಈ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ, ನಿರ್ದೇಶಕಿ ಜೊತೆ ಮಾತನಾಡಿ ವಿಷಯ ತಿಳಿದುಕೊಳ್ಳತ್ತೀನಿ” ಎಂದು ಪ್ರತಿಕ್ರಿಯಿಸಿದರು.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಬಾ. ಮಾ ಹರೀಶ್ ಅವರು ಈದಿನ.ಕಾಮ್ನೊಂದಿಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿ, “ಮೂರು ವರ್ಷಗಳ ಹಿಂದೆ ಈ ರೀತಿ ಸಮಸ್ಯೆಯಾಗಿ, ದೂರು ಸಹ ದಾಖಲಾಗಿತ್ತು ನಂತರ ಹೀಗೆ ಸಮಸ್ಯೆಯಾಗಿದೆ ಎಂದು ಯಾವ ನಿರ್ಮಾಪಕರು ದೂರು ನೀಡಿಲ್ಲ. ಆದರೆ, 'ಬುಕ್ ಮೈ ಶೋ' ಈ ರೀತಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಕೋವಿಡ್ ಸಂದರ್ಭದಲ್ಲಿ ಸಿನಿಮಾ ಬರುವುದೇ ಹೆಚ್ಚು, ಅಂತಹದರಲ್ಲಿ ವಿಮರ್ಶೆಗಳಿಗೂ ಹಣ ಕೇಳುವುದು ಅನ್ಯಾಯ. ಈ ಬಗ್ಗೆ ಸಿನಿಮಾ ತಂಡದವರನ್ನು ಮತ್ತು 'ಬುಕ್ ಮೈ ಶೋ' ಸಂಸ್ಥೆಯವರನ್ನು ಕರೆಸಿ ವಿಚಾರಿಸುತ್ತೀನಿ. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಚಿತ್ರ ನಿರ್ಮಾಪಕರಿಂದ ಮತ್ತು ವಿತರಕರಿಂದ ಅವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಚಿತ್ರರಂಗದಿಂದ 'ಬುಕ್ ಮೈ ಶೋ' ಸಂಸ್ಥೆ ಬೆಳೆಯುತ್ತಿದೆ. ಅವರಿಂದ ಚಿತ್ರರಂಗ ಬೆಳೆಯುತ್ತಿಲ್ಲ. ಹೀಗೆ ಮಾಡಿದರೆ ಮುಂದೆ ಬೇರೆ ಕಂಪನಿಗಳು ಹುಟ್ಟಿಕೊಳ್ಳುತ್ತವೆ. ಒಬ್ಬ ಮಹಿಳೆ ಮುಂದೆ ಬಂದು, ಮೊದಲ ಬಾರಿಗೆ ಸಿನಿಮಾ ಮಾಡಿದಾಗ ಪ್ರೋತ್ಸಹ ನೀಡಬೇಕು. 'ವಿಂಡೋ ಸೀಟ್' ಚಿತ್ರದ ಬಗ್ಗೆ ಒಳ್ಳೆಯ ಪ್ರಶಂಸೆ ಬರುತ್ತಿದೆ. ಅವರನ್ನು ಕರೆಸಿ ವಿಚಾರಿಸುತ್ತೀನಿ” ಎಂದು ಅವರು ಭರವಸೆ ನೀಡಿದರು.