ಭಾಷೆಯ ಹೆಸರಿನಲ್ಲಿ ದೇಶ ಒಡೆಯಬೇಡಿ: ಗಾಯಕ ಸೋನು ನಿಗಮ್‌

sonu nigam
  • ಹೆಚ್ಚು ಜನ ಮಾತನಾಡುವ ಮಾತ್ರಕ್ಕೆ ಹಿಂದಿ ರಾಷ್ಟ್ರಭಾಷೆ ಎನ್ನಲು ಸಾಧ್ಯವಿಲ್ಲ
  • ತಮಿಳು ಜಗತ್ತಿನ ಅತಿ ಪುರಾತನ ಭಾಷೆ ಎಂಬುದರ ಅರಿವಿದೆಯೇ?

ಬಾಲಿವುಡ್ ನಟ ಅಜಯ್ ದೇವಗನ್ ಅವರ 'ಹಿಂದಿ ರಾಷ್ಟ್ರಭಾಷೆ' ಹೇಳಿಕೆಗೆ ಖ್ಯಾತ ಗಾಯಕ ಸೋನು ನಿಗಮ್ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಆ ಭಾಷೆಯನ್ನು ರಾಷ್ಟ್ರಭಾಷೆ ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ.

ಹಿಂದಿ ರಾಷ್ಟ್ರಭಾಷೆ ವಿವಾದದ ಬಗ್ಗೆ ನಿರೂಪಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸೋನು ನಿಗಮ್‌, “ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಹಿಂದಿ ರಾಷ್ಟ್ರಭಾಷೆ ಎಂದು ಉಲ್ಲೇಖಿಸಿಲ್ಲ. ಹೀಗಿರುವಾಗ ಇದೇ ಭಾಷೆಯನ್ನು ಮಾತನಾಡಬೇಕು ಎಂದು ಹಿಂದಿಯೇತರ ಜನರ ಮೇಲೆ ಒತ್ತಡ ಹೇರುವುದು ಸರಿಯಲ್ಲ” ಎಂದು ಹೇಳಿದ್ದಾರೆ.

"ನನಗೆ ತಿಳಿದಿರುವ ಮಟ್ಟಿಗೆ ಹಿಂದಿ ರಾಷ್ಟ್ರ ಭಾಷೆಯಲ್ಲ. ಈ ವಿಚಾರಕ್ಕೆ ಸಂಬಂಧಿಸಿ ನಾನು ತಜ್ಞರ ಜೊತೆಗೂ ಮಾತನಾಡಿದ್ದೀನಿ, ಹಿಂದಿಯನ್ನು ದೇಶದ ಬಹುಸಂಖ್ಯಾತ ಜನ ಮಾತನಾಡುತ್ತಾರೆ ಎಂಬುದನ್ನು ಬಲ್ಲೆ. ಹಿಂದಿ ರಾಷ್ಟ್ರಭಾಷೆ ಎನ್ನುತ್ತಿರುವವರಿಗೆ, ತಮಿಳು ಜಗತ್ತಿನ ಅತಿ ಪುರಾತನ ಭಾಷೆ ಎಂಬುದರ ಅರಿವಿದೆಯೇ? ತಮಿಳು ಮತ್ತು ಸಂಸ್ಕೃತ ಈ ಎರಡರಲ್ಲಿ ಯಾವುದು ಅತಿ ಪುರಾತನ ಭಾಷೆ ಎಂಬ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಿದೆ. ಜನ ತಮಿಳನ್ನೇ ಜಗತ್ತಿನ ಅತ್ಯಂತ ಪುರಾತನ ಭಾಷೆ ಎನ್ನುತ್ತಾರೆ. 

"ಪ್ರಸ್ತುತ ಬೇರೆ ದೇಶಗಳೊಂದಿಗೆ ಇರುವ ಭಿನ್ನಾಭಿಪ್ರಾಯಗಳು ಸಾಲದು ಅಂತ ದೇಶದ ಒಳಗೂ ಒಡುಕು ಮೂಡಿಸುತ್ತಿದ್ದೀರಿ. ಒಬ್ಬ ತಮಿಳು ಭಾಷಿಕನಿಗೆ ನೀನು ಹಿಂದಿ ಮಾತನಾಡು ಎಂದು ಬಲವಂತ ಮಾಡುವುದು ಸರಿಯಲ್ಲ. ತಮಿಳು ಭಾಷಿಕರು ಯಾಕೆ ಹಿಂದಿ ಮಾತನಾಡಬೇಕು? ಅವರಿಗೆ ಇಷ್ಟವಾಗುವ ಭಾಷೆಯಲ್ಲಿ ಅವರವರು ಮಾತನಾಡುತ್ತಾರೆ. ಈ ದೇಶದಲ್ಲಿ ಹಿಂದಿಯನ್ನೇ ಮಾತನಾಡಬೇಕು ಎಂದು ನಿವ್ಯಾಕೆ ಬಲವಂತ ಮಾಡುತ್ತೀರಿ? ಪಂಜಾಬಿಗಳು ಪಂಜಾಬಿ ಭಾಷೆಯಲ್ಲಿ, ತಮಿಳಿಗರು ತಮಿಳಿನಲ್ಲಿ ಮಾತನಾಡಲು ಬಿಡಿ. ಅವರಿಗೆ ಇಂಗ್ಲಿಷ್ ಮಾತನಾಡೋಕೆ ಮನಸ್ಸಿದ್ದರೆ ಇಂಗ್ಲಿಷ್‌ನಲ್ಲೂ ಮಾತಾಡಲಿ ಅದರಿಂದ ನಿಮಗೇನು ತೊಂದರೆ" ಎಂದು ಹಿಂದಿ ಹೇರಿಕೆಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ.

"ನಮ್ಮ ದೇಶದಲ್ಲಿ ನ್ಯಾಯಾಲಯದ ತೀರ್ಪುಗಳೇ ಇಂಗ್ಲಿಷ್‌ನಲ್ಲಿ ಇರುತ್ತದೆ. ಹೀಗಿರುವಾಗ ಹಿಂದಿ ಮಾತನಾಡಿ ಎಂದು ಬಲವಂತ ಮಾಡುವುದು ಎಷ್ಟು ಸರಿ? ನಾವು ಮೇಲ್ದರ್ಜೆಯವರು ಅದಕ್ಕಾಗಿ ನೀವು ನಮ್ಮ ಭಾಷೆಯನ್ನು ಮಾತನಾಡಲೇಬೇಕು ಎಂದು ಇನ್ನೊಬ್ಬರ ಮೇಲೆ ನಮ್ಮ ಹಿತಾಸಕ್ತಿಗಳನ್ನು ಬಲವಂತವಾಗಿ ಹೇರುವುದು ಸಲ್ಲ. ಈ ದೇಶದಲ್ಲಿ ಈಗಾಗಲೇ ಹಲವು ಸಮಸ್ಯೆಗಳಿವೆ. ಇಂತಹ ಸಮಯದಲ್ಲಿ ಭಾಷೆಯನ್ನು ಮುಂದಿಟ್ಟುಕೊಂಡು ದೇಶವನ್ನು ಒಡೆಯವುದು ಬೇಡ" ಎಂದು ಹಿಂದಿ ರಾಷ್ಟ್ರಭಾಷೆ ಎಂದವರಿಗೆ ಚಾಟಿ ಬೀಸಿದ್ದಾರೆ.   

ಇತ್ತೀಚೆಗೆ ಬೆಂಗಳೂರಿನಲ್ಲಿ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟ ಕಿಚ್ಚ ಸುದೀಪ್, "ಹಿಂದಿ ರಾಷ್ಟ್ರಭಾಷೆಯಲ್ಲ" ಎಂದಿದ್ದರು. ಕಿಚ್ಚನ ಮಾತಿಗೆ ಪ್ರತಿಕ್ರಿಯಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್, ”ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳದ ನೀವು ಕನ್ನಡದ ಸಿನಿಮಾಗಳನ್ನು ನಮ್ಮ ಭಾಷೆಗೇಕೆ ಡಬ್ ಮಾಡುತ್ತೀರಿ" ಎಂದು ಪ್ರಶ್ನಿಸಿದ್ದರು. ಜೊತೆಗೆ, "ಹಿಂದಿ ಈ ಹಿಂದೆಯೂ ರಾಷ್ಟ್ರಭಾಷೆಯಾಗಿತ್ತು. ಮುಂದೆಯೂ ರಾಷ್ಟ್ರಭಾಷೆಯಾಗೇ ಇರಲಿದೆ" ಎಂದು ವಿವಾದ ಸೃಷ್ಟಿಸಿದ್ದರು. ಅಜಯ್‌ ದೇವಗನ್‌ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್