ಕಟೌಟ್ ಹಿಂದಿನ ಕಥೆ-ವ್ಯಥೆ | ತೆರೆ ಮರೆಯಲ್ಲೇ ಉಳಿದು ಹೋದ ಬಣ್ಣ ಮೆತ್ತಿದ ಕೈಗಳು

ಒಂದು ಚಲನಚಿತ್ರ ಬಿಡುಗಡೆಯಾದರೆ ಸಾಕು ಕಟೌಟ್ ಮತ್ತು ಬ್ಯಾನರ್‍‌ಗಳು ಚಿತ್ರಮಂದಿರದ ಎದುರುಗಡೆ ರಾರಾಜಿಸುತ್ತವೆ. ನೆಚ್ಚಿನ ನಾಯಕರ ಕಟೌಟ್‌ಗಳಿಗೆ ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ, ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ. ಅಂತಹ ದೊಡ್ಡ ದೊಡ್ಡ ಕಟೌಟ್‌ಗಳನ್ನು ನಿರ್ಮಿಸಿ, ತೆರೆಯ ಹಿಂದೆಯೇ ಮರೆಯಾಗಿ ಹೋಗುತ್ತಿರುವ ಕಲಾವಿದರ ಮನದ ಮಾತು. 

ಚಿನ್ನದಂತಹ ಕಲಾವಿದ ಚಿನ್ನಪ್ಪ

ಹೆಸರು ಕಾಕಯ್ಯ ಚಿನ್ನಪ್ಪ. ರಾಜ್‌ಕಮಲ್ ಆರ್ಟ್ಸ್‌ನ ಸಂಸ್ಥಾಪಕರು. ಹುಟ್ಟಿದ್ದು ಬೆಂಗಳೂರಿನಲ್ಲಿ. ಹೊಟ್ಟೆ ಪಾಡಿಗಾಗಿ ಒಂಭತ್ತನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, ನೀವು ಇವರನ್ನು ತೆರೆ ಮೇಲೆ ನೋಡಿಲ್ಲ ಎಂದುಕೊಂಡರೆ, ನೋಡಿರಲು ಸಾಧ್ಯವೇ ಇಲ್ಲ. ಆದರೆ, ತೆರೆ ಹಿಂದಿನ ಇವರ ಕಲಾಕುಸುರಿ ಮತ್ತು ಶ್ರಮ ಊಹೆಗೂ ನಿಲುಕದ್ದು.

ಚಿನ್ನಪ್ಪ ಅವರು ತೆರೆ ಮೇಲೆ ಕಾಣಿಸಿಕೊಂಡ ಕಲಾವಿದರಲ್ಲ. ಚಿತ್ರಮಂದಿರದ ಎದುರುಗಡೆ ಆಕಾಶದೆತ್ತರದ ಕಟೌಟ್‌ಗಳ ಮೂಲಕ ನಿಮ್ಮನ್ನು ಚಿತ್ರಮಂದಿರಕ್ಕೆ ಸ್ವಾಗತಿಸುವ ಕಲಾವಿದ ಇವರು. ಸೀನು ಆರ್ಟ್ಸ್ ಮಾಲಿಕರಾದ ಸೀನು ಎಂಬುವರ ಜೊತೆ ಕಟೌಟ್‌ ನಿರ್ಮಾಣ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡ ಚಿನ್ನಪ್ಪನವರು 20 ವರ್ಷದ ಅನುಭವದ ನಂತರ, ತಾವೇ ಸ್ವತಃ ರಾಜ್‌ಕಮಲ್ ಆರ್ಟ್ಸ್ ಎಂಬ ಕಟೌಟ್‌ ಸಂಸ್ಥೆ ಕಟ್ಟಿದ್ದರು.

ನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ಮೊದಲ ಬಾರಿಗೆ ಕಟೌಟ್‌ ಮಾಡಿದ ಚಿನ್ನಪ್ಪ ಅವರು, ಪುನೀತ್‌ ರಾಜ್‌ಕುಮಾರ್‌ ಅವರ 'ಯುವರತ್ನ' ಚಿತ್ರದವರೆಗೂ ಕಟೌಟ್‌ ಮಾಡಿದ್ದಾರೆ.

ತಮ್ಮ 74 ವರ್ಷದ ಕಲಾ ಬದುಕಿನಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್ ಸೇರಿದಂತೆ 5,500 ಚಿತ್ರಕ್ಕಿಂತ ಹೆಚ್ಚು ಚಲನಚಿತ್ರಗಳಿಗೆ ಸ್ವತಃ ಕೈಯಲ್ಲಿ ಚಿತ್ರ ಬರೆದು ಬಣ್ಣ ತುಂಬಿ ಕಟೌಟ್‌ ಮತ್ತು ಬ್ಯಾನರ್‌ಗಳನ್ನು ನಿರ್ಮಿಸಿದ್ದಾರೆ.

ಇವರ ಕಲಾ ಕೊಡುಗೆ ಮೆಚ್ಚಿ ರಾಷ್ಟ್ರ ಪ್ರಶಸ್ತಿಯಾದ ಪ್ರಿಯದರ್ಶಿನಿ ಪ್ರಶಸ್ತಿ, ಅಮೃತ ಮಹೋತ್ಸವ ಲೆಜೆಂಡರಿ ಅವಾರ್ಡ್, ಗಿನ್ನಿಸ್ ದಾಖಲೆಗೆ ನಾಮ ನಿರ್ದೇಶನ ಹಾಗೂ ಸುವರ್ಣ ವಾಹಿನಿಯ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ 22ಕ್ಕೂ ಹೆಚ್ಚು ಪ್ರಶಸ್ತಿಗಳು ಮತ್ತು 70ಕ್ಕೂ ಹೆಚ್ಚು ಬಿರುದುಗಳನ್ನು ತಮ್ಮ ಮೂಡಿಗೇರಿಸಿಕೊಂಡಿದ್ದಾರೆ.

ಚಿನ್ನಪ್ಪ ಅವರ ಅದ್ಭುತ ಕಲಾಕೃತಿಗಳು ಅಮೆರಿಕ, ಯೂರೋಪ್ ನ ಹೊರದೇಶಗಳಿಗೆ ಮಾರಾಟವಾಗಿವೆ.

Image

ಸದ್ಯ ಚಿನ್ನಪ್ಪ ಅವರಿಗೆ 92 ವರ್ಷ ವಯಸ್ಸಾಗಿದ್ದು, ಕಿವಿ ಕೇಳಿಸುವುದಿಲ್ಲ, ಮಾತೂ ಆಡುವುದಿಲ್ಲ. ಆದರೂ, ದಿನ ನಿತ್ಯ ಸಂಸ್ಥೆಗೆ ಬಂದು ಕಟೌಟ್‌ ಕೆಲಸವನ್ನು ಗಮನಿಸುತ್ತಾ ಕೂತಿರುತ್ತಾರೆ. ಮಗ ಕೃಷ್ಣ ಅವರು ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಅಪ್ಪನ ಧ್ವನಿಯಾಗಿ ಈದಿನ.ಕಾಮ್ ಜೊತೆ ಮತಾನಾಡಿದ್ದಾರೆ.

“ಈ ಹಿಂದೆ ಸಿನಿಮಾ ಕಟೌಟ್‌ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿತ್ತು. ಬ್ಯಾನರ್ ಮೇಲೆ ಪೆನ್ಸಿಲ್‌ನಿಂದ ಚಿತ್ರ ಬಿಡಿಸಿ, ನಂತರ ಬಣ್ಣ ಹಚ್ಚುತ್ತಿದ್ದರು. 24 ಅಡಿ ಕಟೌಟ್‌ ಮಾಡಲು ಅರ್ಧ ದಿನ ತೆಗೆದುಕೊಳ್ಳುತ್ತಿತ್ತು. ಆದರೆ, ಇವಾಗ ಅಷ್ಟೊಂದು ಶ್ರಮಪಡಬೇಕಾಗಿಲ್ಲ” ಎಂದು ಅಪ್ಪನ ಅನುಭವವನ್ನು ಹೇಳಿದರು.

ಮಗ ಕೃಷ್ಣ ಅವರು ಸಹ 16 ವರ್ಷ ವಯಸ್ಸಿನಿಂದಲೇ ಅಪ್ಪನ ಕೆಲಸಕ್ಕೆ ಕೈಜೋಡಿಸಿದ್ದು, ಚಿನ್ನಪ್ಪ ಅವರ ಸಾಧನೆಯ ಹೆಜ್ಜೆಯನ್ನು ಹತ್ತಿರದಿಂದ ಗಮನಿಸಿದ್ದಾರೆ. 

“ಈಗಿನ ಕಾಲದಲ್ಲಿ ಒಂದು ಪೋಟೊ ಪ್ರಿಂಟ್ ಮುದ್ರಣ ಹಾಕಿಸಿ ಫ್ಲೆಕ್ಸ್‌ನಲ್ಲಿ ಹಾಕಿದರೆ ಸಾಕು ಮುಕ್ಕಾಲು ಭಾಗ ಕೆಲಸ ಮುಗಿದ ಹಾಗೇ. ಒಂದು ಗಂಟೆಯಲ್ಲಿ 20 ಅಡಿ ಕಟೌಟ್‌ ಮಾಡಬಹುದು. ಅಷ್ಟು ವೇಗವಾಗಿ ಬದಲಾವಣೆಯಾಗಿದೆ. ಕಲೆಗೆ ಇನ್ನು ಬೆಲೆ ಇರುವುದರಿಂದ ನಾವಿನ್ನೂ ಈ ಕೆಲಸ ಮುಂದುವರೆಸಿಕೊಂಡು ಹೋಗುತ್ತಿದ್ದೀವಿ. ಈ ಉದ್ಯಮ ಇನ್ನೂ ಎಷ್ಟು ದಿನ ಇರುತ್ತದೆ ಎಂಬುದು ತಿಳಿದಿಲ್ಲ. ಫ್ಲೆಕ್ಸ್‌ ಎಲ್ಲಿಯವರೆಗೆ ಇರುತ್ತದೆ ಅಲ್ಲಿಯವರೆಗೆ ಕೆಲಸ ಮಾಡುತ್ತೀವಿ” ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗಿನಿಂದ ಕೆಲಸ ಮಾಡುತ್ತಿರುವ ಚಿನ್ನಪ್ಪ ಅವರು 'ಬೇಡರ ಕಣ್ಣಪ್ಪ' ಚಿತ್ರದಿಂದ ಹಿಡಿದು, ರಾಜ್‌ಕುಮಾರ್ ಅವರು ಅಭಿನಯಿಸಿರುವ ಶೇ.85ರಷ್ಟು ಚಿತ್ರಗಳಿಗೆ ಸ್ವತಃ ಕಟೌಟ್‌ ಮಾಡಿಕೊಟ್ಟಿದ್ದಾರೆ.  

ಈಗ ಪ್ರಚಾರಕ್ಕಾಗಿ ಆಟೋ ಮತ್ತು ವ್ಯಾನ್‌ಗಳನ್ನು ಬಳಸುತ್ತಿರುವ ಹಾಗೇ ಈ ಹಿಂದೆ ಸೈಕಲ್‌ನಲ್ಲಿ ಪ್ರಚಾರ ಮಾಡುತ್ತಿದ್ದರು. ಆದರೆ, ಟಿವಿ ಜಾಹೀರಾತುಗಳು ಶುರುವಾದ ಮೇಲೆ ಇಂತಹ ಪ್ರಚಾರ ನಡೆಯುತ್ತಿಲ್ಲ. ಹಿಂದೆ ಚಿಕ್ಕ ನಕ್ಷತ್ರಗಳನ್ನು ಕಟ್ಟಿಕೊಂಡು ಮೆರವಣಿಗೆ ಹೋಗುತ್ತ ಪ್ರಚಾರ ಮಾಡುತ್ತಿದ್ದರು. ಅದೇ ರೀತಿ ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಅವರ 'ಜೇಮ್ಸ್' ಚಿತ್ರಕ್ಕೆ ನಕ್ಷತ್ರಗಳನ್ನು ಕಟ್ಟಿಕೊಂಡು ನೂರಾರು ಅಭಿಮಾನಿಗಳು ಪ್ರಚಾರ ಮಾಡಿದ್ದರು.

“ಭಾರತದಾದ್ಯಂತ ಕರ್ನಾಟಕದಲ್ಲಿ ಮಾತ್ರ ಇನ್ನು 'ಕಟೌಟ್‌ ಟ್ರೆಂಡ್' ಇದೆ. ಬೇರೆ ರಾಜ್ಯಗಿಂತ ನಮ್ಮ ರಾಜ್ಯದಲ್ಲಿ ಕಲೆಗೆ ಇನ್ನೂ ಬೆಲೆ ಕೊಡುತ್ತಿದ್ದಾರೆ. ನಮ್ಮ ಹೀರೋಗಳದ್ದು ದೊಡ್ಡ ಕಟೌಟ್‌ ಇರಬೇಕು ಎಂದು ಕಟೌಟ್‌ ಮಾಡಿಸುವವರು ಅಭಿಮಾನಿಗಳು. ಅವರಿಂದಲೇ ಇಂದಿಗೂ ಕಟೌಟ್‌ ಕೆಲಸ ಸಿಗುತ್ತಿದೆ. ಜೊತೆಗೆ ನಿರ್ಮಾಪಕರು ಮತ್ತು ವಿತರಕರು ಸಹ ಕಟೌಟ್‌ ಮಾಡಿಸುತ್ತಾರೆ” ಎಂದು ತಿಳಿಸಿದರು.

“ಈ ಹಿಂದಿನ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ಸಾಕಷ್ಟು ಬದಲಾವಣೆಯಾಗಿದೆ. ಬದಲಾವಣೆ ನಡುವೆಯೂ ಕೆಲವು ಅಭಿಮಾನಿಗಳು ಚಿತ್ರರಂಗವನ್ನ ಉಳಿಸುತ್ತಿದ್ದಾರೆ ಎಂಬ ನಂಬಿಕೆಯಿದೆ” ಎನ್ನುತ್ತಾರೆ ಕೃಷ್ಣ.

ಡಿಜಿಟಲ್ ಸಂಸ್ಕೃತಿ ಕಟೌಟ್‌ ಉದ್ಯಮಕ್ಕೆ ಆಹುತಿ

“ಡಿಜಿಟಲ್ ಮತ್ತು ಒಟಿಟಿ ವೇದಿಕೆಗಳು ಬಂದು ಕಟೌಟ್‌ ಉದ್ಯಮ ನಷ್ಟದಲ್ಲಿ ನಡೆಯುತ್ತಿದೆ. ಒಟಿಟಿಯಲ್ಲೇ ಎಲ್ಲರೂ ಚಿತ್ರಗಳನ್ನು ನೋಡುವುದರಿಂದ ಕಟೌಟ್‌ಗೆ ಕೆಲಸ ಇಲ್ಲದಂತಾಗಿದೆ. ಸಿನಿಮಾಗಳು ಚಿತ್ರಮಂದಿರಕ್ಕೆ ಬಂದರೇ ಮಾತ್ರ ನಾವು ಉಳಿಯಲು ಸಾಧ್ಯ” ಎಂದು ಬೇಸರ ವ್ಯಕ್ತಪಡಿಸಿದರು.

‘ಭಲೇ ಜೋಡಿ’ ಚಿತ್ರಕ್ಕೆ 'ಗೀತಾ' ಚಿತ್ರಮಂದಿರದ ಎದುರು 72 ಅಡಿ ಕಟೌಟ್‌ ನಿಲ್ಲಿಸಿದ ಸಾಧನೆ ಚಿನ್ನಪ್ಪ ಅವರದ್ದು. ಈ ಕಟೌಟ್‌ ನೋಡಲು ಬೆಂಗಳೂರಿಗೆ ಜನರು ಎತ್ತಿನಗಾಡಿಯಲ್ಲಿ ಬರುತ್ತಿದ್ದರು. ಹಿಂದಿನ ಕಾಲದಲ್ಲೇ ಎತ್ತರದ ಕಟೌಟ್‌ ಕ್ರೇಜ್ ಇತ್ತು. ಜೊತೆಗೆ ಸಿನಿಮಾ ಬಗ್ಗೆ ಪ್ರಚಾರ ಆಗಬೇಕೆಂದರೆ ಬ್ಯಾನರ್‍‌ಗಳು ಮತ್ತು ಕಟೌಟ್‌ ಅವಶ್ಯಕತೆ ಇತ್ತು.

"ಸಾಮಾಜಿಕ ಜಾಲತಾಣಗಳಲ್ಲೇ ಸಿನಿಮಾ ಪ್ರಚಾರ ನಡೆಯುತ್ತಿರುವುದರಿಂದ ಕಟೌಟ್‌ ಉದ್ಯಮ ತುಂಬಾ ದಿನ ನಡೆಯುವ ಯಾವ ನಿರೀಕ್ಷೆ ಇಲ್ಲ. ಹೆಚ್ಚು ಅಂದರೆ ಎರಡು ಮೂರು ವರ್ಷ ಕಟೌಟ್‌ ಉದ್ಯಮ ನಡೆದೀತು" ಎಂದು ತಿಳಿಸಿದರು.

“ಹೀಗೆ ಕಟೌಟ್‌ ಉದ್ಯಮ ಕ್ಷೀಣಿಸುತ್ತಿರುವ ಬಗ್ಗೆ ಚಿತ್ರರಂಗದವರು ಆಲೋಚಿಸಬೇಕು. ದಾರಿಯಲ್ಲಿ ಪೋಸ್ಟರ್ ಅಂಟಿಸುವವರು, ಬ್ಯಾನರ್ ಕಟ್ಟುವವರು ಹಾಗೂ ಕಟೌಟ್‌ ಕಲಾವಿದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಮನ ಹರಿಸಬೇಕು. ಅವರಾಗಿಯೇ ಮುಂದೆ ಬಂದು ಏನಾದರೂ ಬದಲಾವಣೆ ಅಥವಾ ಅನುಕೂಲ ಮಾಡಿದರೆ ಮಾತ್ರ ನಮ್ಮ ಬದುಕು ಮುನ್ನಡೆಯುತ್ತದೆ” ಎಂದು ತಮ್ಮ ಸಮಸ್ಯೆ ಬಗ್ಗೆ ತಿಳಿಸಿದರು.

Image

‘ಕರ್ನಾಟಕದಲ್ಲಿ ರಸ್ತೆಯಲ್ಲಿ ಚಿತ್ರ ಬಿಡಿಸುತ್ತಿದ್ದವರು, ಬೋರ್ಡ್‌ಗಳನ್ನು ಬರೆಯುತ್ತಿದ್ದವರು ಹಾಗೂ ಕಟೌಟ್‌ ಸಂಸ್ಥೆ ನಡೆಸುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ಸೈನ್ ಬೋರ್ಡ್ ಆರ್ಟಿಸ್ಟ್‌ಗಳು ಮತ್ತು ಅಕ್ಷರ ಬರೆಯವವರು, ಸುಮಾರು 1,60,000 ಮಂದಿ ಇದ್ದರು. ಆದರೆ, ಅಂತಹ ಕಲಾವಿದರನ್ನು ಹುಡುಕಿದರೂ ಈಗ ಸಿಗುವುದಿಲ್ಲ. ಇವರೆಲ್ಲಾ ಬೇರೆ ಉದ್ಯೋಗವನ್ನ ಅರಸಿಹೋಗಿದ್ದಾರೆ. ಆ ಪರಿಸ್ಥಿತಿ ನಾಳೆ ನಮಗೂ ಎದುರಾಗಲಿದೆ” ಎಂದು ಕೃಷ್ಣ ಅವರು ಹೇಳಿದರು.

ಚಿನ್ನಪ್ಪ ಅವರು ಸುಮಾರು 60 ಮಂದಿ ಚಿತ್ರಬಿಡಿಸುವ ಕಲಾವಿದರನ್ನು ಹುಟ್ಟುಹಾಕಿದ್ದಾರೆ. ಅವರಲ್ಲಿ ಸದ್ಯ ಕೆಲಸ ಮಾಡುತ್ತಿರುವುದು ಮೂವರು ಕಲಾವಿದರು ಮಾತ್ರ. ಅವರಿಂದಲೇ ರಾಜ್‌ಕಮಲ್ ಆರ್ಟ್ಸ್ ಸಂಸ್ಥೆ ನಡೆಯುತ್ತಿದೆ. ಆ ಮೂವರು ಇಂದಿಗೂ ಈ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದಾರೆ. 

'ನಾನಿನ್ನ ಮರೆಯಲಾರೆ' ಚಿತ್ರದ ನೂರನೆಯ ದಿನದ ಸಂಭ್ರಮಕ್ಕೆ ಚಿನ್ನಪ್ಪ ಅವರನ್ನು ರಾಜ್‌ಕುಮಾರ್ ಅವರು ಆಹ್ವಾನಿಸಿದ್ದರು. ಸಂಭ್ರಮದ ಶೀಲ್ಡ್ ನೀಡಿ ಗೌರವಿಸಿದ್ದಾರೆ. ಜೊತೆಗೆ ಚಿನ್ನಪ್ಪ ಅವರಿಗೆ "ನಿನ್ನ ಹೆಸರು ಚಿನ್ನಪ್ಪ ಅಲ್ಲ ದೊಡ್ಡಪ್ಪ" ಎಂದು ಕರೆದಾಗ "ಯಾಕಣ್ಣ" ಎಂದು ಚಿನ್ನಪ್ಪ ಕೇಳಿದ್ದರು. ಅದಕ್ಕೆ ರಾಜ್‌ಕುಮಾರ್ ಅವರು, "ನನ್ನ ಚಿತ್ರದ ದೊಡ್ಡ ಕಟೌಟ್‌ ಹಾಕ್ತೀಯಾ, ಅದಕ್ಕೆ ನೀನು ದೊಡ್ಡಪ್ಪ" ಎಂದು ತಮಾಷೆ ಮಾಡಿದಂತಹ ಖುಷಿಯ ವಿಚಾರಗಳನ್ನು ಮಗನೊಂದಿಗೆ ಚಿನ್ನಪ್ಪ ಅವರು ಹಂಚಿಕೊಂಡಿದ್ದಾರೆ. 

ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ರಾಜ್‌ಕಮಲ್ ಆರ್ಟ್ಸ್ ಸಂಸ್ಥೆಗೆ ಬಂದು, 'ಪಡುವಾರಳ್ಳಿ ಪಾಂಡವರು' ಚಿತ್ರಕ್ಕೆ, ಅವರಿಗೆ ಬೇಕಾದ ರೀತಿಯಲ್ಲಿ ಕಟೌಟ್‌ ಮಾಡಿಸಿಕೊಂಡಿದ್ದರು..

“ರವಿಚಂದ್ರನ್ ಅವರು ಚಲನಚಿತ್ರತಯಾರಿಕೆಯಲ್ಲಿ ಬದಲಾವಣೆ ತಂದರು. 1980-90ರ ದಶಕದಲ್ಲಿ, ಹಳೆಯದಕ್ಕೂ ಹೊಸತನಕ್ಕೂ ವ್ಯತ್ಯಾಸ ತಿಳಿಸಿದರು.  ಅವರು ಸಂಸ್ಥೆಗೆ ಬಂದು ಅವರಿಗೆ ಬೇಕಾದ ರೀತಿಯಲ್ಲಿ, ಪಕ್ಕದಲ್ಲಿ ಕೂತು ವಿವರಿಸಿ ಕಟೌಟ್‌ ಮತ್ತು ಪ್ಲೈವುಡ್ ಬ್ಯಾನರ್‌ಗಳನ್ನು ಮಾಡಿಸುತ್ತಿದ್ದರಂತೆ. ಅವರಂತೆ ಕಿಚ್ಚ ಸುದೀಪ್ ವಿಶೇಷ ಅಭಿರುಚಿ ಹೊಂದಿದ್ದಾರೆ” ಎಂದು ಕೃಷ್ಣ ಅವರು ಹೇಳಿದರು.

"ದುಡ್ಡಿಗೆ ಆಸೆ ಪಡದೆ ಕೆಲಸವನ್ನು ಇಷ್ಟಪಟ್ಟು ಗೌರವದಿಂದ ಮಾಡಿದ್ದಾರೆ. ಕಲೆಗೆ ಮಾರ್ಯದೆ ಗೌರವ ಇದೇ ಎಂಬ ಕಾರಣಕ್ಕೆ ಮಾತ್ರ ಈ ಕೆಲಸ ಮಾಡಿದ್ದಾರೆ. ತಮ್ಮ ಕಲಾವೃತ್ತಿ ಬಗ್ಗೆ ಅವರಿಗೆ ಸಂತೃಪ್ತಿ ಇದೆ" ಎಂದು ಚಿನ್ನಪ್ಪ ಅವರನ್ನು ಕುರಿತು ಹೇಳಿದರು. 

ಅಪ್ಪ ಕಟ್ಟಿದ ಸಂಸ್ಥೆಯನ್ನು ಮಗ ಕೃಷ್ಣ 30 ವರ್ಷಗಳಿಂದ ಆಸಕ್ತಿ- ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. 

ಕಟೌಟ್‌ ಕಲಾವಿದರಿಗೆ ಆಸರೆ ನೀಡಿದ್ದ ಕಿಚ್ಚ ಸುದೀಪ್ 

ಕೋವಿಡ್‌ ಸಂದರ್ಭದಲ್ಲಿ ಚಲನಚಿತ್ರ ಕೆಲಸಗಳು ನಿಂತು ಹೋಗಿದ್ದವು. ಸಿನಿಮಾ ಚಿತ್ರಮಂದಿರಕ್ಕೆ ಬಂದರೆ ಮಾತ್ರ ನಮಗೆ ಕೆಲಸ ಇರುತ್ತದೆ. ಮಾಧ್ಯಮದವರೂ ನಮ್ಮನ್ನು ಗಮನಿಸದ ಸಂದರ್ಭದಲ್ಲಿ ನಮ್ಮ ಕಷ್ಟಕ್ಕೆ ಆರ್ಥಿಕ ನೆರವಿನ ಜೊತೆಗೆ ದಿನಸಿ ಪದಾರ್ಥಗಳನ್ನು ನೀಡಿ ಸಹಾಯ ಮಾಡಿದ್ದು, ಸುದೀಪ್  ಎಂದು ಕೃಷ್ಣ ನೆನಪಿಸಿಕೊಂಡರು.

ಕಟೌಟ್‌ ಉದ್ಯಮಕ್ಕೆ ಇರುವ ಸವಾಲುಗಳೇನು? 

12ರ ವಯಸ್ಸಿನಲ್ಲೆ ಸಹಾಯಕನಾಗಿ ಬೆಂಗಳೂರಿಗೆ ಬಂದು 45 ವರ್ಷದಿಂದ ಕಟೌಟ್‌ ಕೆಲಸ ಮಾಡುತ್ತಿರುವ ರಾಜ್ ಕಮಲ್ ಆರ್ಟ್ಸ್‌ನಲ್ಲಿ ಇಂದಿಗೂ ಕೆಲಸ ಮಾಡುತ್ತಿರುವ 60 ವರ್ಷದ ಪಾಂಡು ಅವರು ಈದಿನ.ಕಾಮ್ ಜೊತೆ ಮಾತನಾಡಿ, “ಚಿತ್ರಮಂದಿರಗಳು ಮುಚ್ಚತೊಡಗಿವೆ. ಕಟೌಟ್‌ಗಳ ಸಂಖ್ಯೆ ಸಹ ಕಡಿಮೆಯಾಗುತ್ತಿದೆ. ಯಾವುದಾದರೂ ದೊಡ್ಡ ಚಿತ್ರಗಳು ಬಂದಾಗ ಮಾತ್ರ ಕಟೌಟ್‌ಗಳನ್ನು ಮಾಡಿಸುತ್ತಾರೆ. ಸಣ್ಣ ಪುಟ್ಟ ಚಿತ್ರಗಳಿಗೆ ಒಂದು ಅಥವಾ ಎರಡು ಕಟೌಟ್‌ ಹಾಕಿಸುತ್ತಾರೆ. ಹೊಟ್ಟೆ ಪಾಡಿಗಾಗಿ ಈಗ ಏನೋ ಮಾಡುತ್ತಿದ್ದೀವಿ. ಆಗಿನ ಕಾಲದಲ್ಲಿ ದೊಡ್ಡ ಕಟೌಟ್‌ ಹಾಕಿದರೆ ಅವರ ವಿರೋಧಿ ಅಭಿಮಾನಿ ಕಟೌಟ್‌ಗಳಿಗೆ ಸಗಣಿ ಹೊಡೆಯುತ್ತಿದ್ದರು. ಆ ಗಲಾಟೆ ನಡುವೆಯೇ ಸಿನಿಮಾ ಪ್ರಚಾರ ಪಡೆದುಕೊಳ್ಳುತ್ತಿತ್ತು” ಎಂದು ತಿಳಿಸಿದರು.

Image

“ಎಲ್ಲ ಚಿತ್ರಮಂದಿರಗಳನ್ನು ಒಡೆದು ಹಾಕಿ ಮಾಲ್‌ಗಳನ್ನು ಕಟ್ಟುತ್ತ ಹೋದರೆ ಎಷ್ಟು ಮಂದಿಗೆ ಕೆಲಸ ಸಿಗುತ್ತದೆ? ಎಷ್ಟು ಮಂದಿ ಊಟ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಯಾರು ಗಮನವಹಿಸುತ್ತಿಲ್ಲ. ನಗರದಲ್ಲಿ ಮುಖ್ಯವಾಗಿ ಇದ್ದ ‘ಸಂತೋಷ್’ ಮತ್ತು ‘ನರ್ತಕಿ’ ಚಿತ್ರಮಂದಿರಗಳನ್ನು ಮುಚ್ಚಿ ಸುಮಾರು ಆರು ತಿಂಗಳಾಗಿದೆ. ಆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಈ ಹಿಂದೆ ದೊಡ್ಡ ದೊಡ್ಡ ಕಟೌಟ್‌ಗಳನ್ನ ನೋಡುವುದಕ್ಕೆ ಜನ ಚಿತ್ರಮಂದಿರದ ಎದುರು ಹೋಗಿ ನಿಲ್ಲುತ್ತಿದ್ದರು. ಶುಕ್ರವಾರ ಬಂದರೆ ಸಾಕು ಎಲ್ಲ ಕೆಲಸ ಬಿಟ್ಟು ಹೋಗಿ ನೋಡುತ್ತಿದ್ದರು. ಕಟೌಟ್‌ ಬ್ಯಾನರ್ ಬಣ್ಣಗಳ ನಡುವೆಯೇ ಬದುಕನ್ನ ಕಳೆದಿದ್ದೀವಿ. ಬೇರೆ ಏನೂ ನೋಡಿಲ್ಲ. ಹಿಂದೆ ತಿರುಗಿ ನೋಡಿದಾಗ ಖುಷಿಯಾಗುತ್ತದೆ. ಈ ಹಿಂದೆ ಕೊಟ್ಟ ಸುಖ ಸಂತೋಷ ಈಗ ಇಲ್ಲ” ಎಂದು ಪಾಂಡು ಅವರು ಹೇಳಿದರು.

ಮಾಲ್‌ಗಳಲ್ಲಿ ಕಟೌಟ್‌ಗೆ ಅವಕಾಶವಿಲ್ಲ

16ನೆಯ ವಯಸ್ಸಿಗೆ ಕಟೌಟ್‌ ಉದ್ಯಮಕ್ಕೆ ಕಾಲಿಟ್ಟ 63 ವರ್ಷದ ಬಿ ಎನ್ ಮೋಹನ್ ಕುಮಾರ್ ಅವರು ಈದಿನ.ಕಾಮ್ ಜೊತೆ ಮಾತನಾಡಿ, “ಡಿಜಿಟಲ್ ಪ್ರಿಂಟ್ ಬಂದ ಮೇಲೆ ಸಮಸ್ಯೆಯಾಗಿದೆ. ಡಿಜಿಟಲ್ ಪ್ರಿಂಟ್ ಬಂದ ನಂತರ ವಿತರಕರು ಕಟೌಟ್‌ ಮಾಡಿಸುವುದನ್ನು ಕೈ ಬಿಟ್ಟಿದ್ದಾರೆ. ಡಿಜಿಟಲ್‌ನಿಂದ ಬ್ಯಾನರ್ ಸಂಖ್ಯೆ ಕಡಿಮೆಯಾಗಿದೆ. ಸದ್ಯ ಕಟೌಟ್‌ ಮಾತ್ರ ಉಳಿದಿದೆ. ಅದರಲ್ಲೂ ದೊಡ್ಡ ಚಿತ್ರಗಳು ಬಂದರೆ ಕಟೌಟ್‌ ಇರುತ್ತದೆ. ಸಣ್ಣಪುಟ್ಟ ಚಿತ್ರವಾದರೆ, ಒಂದು ಎರಡು ಮುಖ್ಯ ಚಿತ್ರಮಂದಿರಗಳಲ್ಲಿ ಮಾತ್ರ ಕಟೌಟ್‌ ಇರುತ್ತದೆ. ಹಿಂದಿ ಚಿತ್ರಗಳಿಗೆ ಇವಾಗ ಯಾರೂ ಕಟೌಟ್‌ ಹಾಕಿಸುವುದಿಲ್ಲ. ಡಿಜಿಟಲ್ ಪ್ರಿಂಟ್ ಆದ ಮೇಲೆ ಅದಕ್ಕೆ ಬಣ್ಣ ಹಾಕಿ ಮತ್ತಷ್ಟು ವಿಶೇಷವಾಗಿ (ಬ್ರೈಟ್ನೆಸ್) ಮಾಡಬೇಕು. ಡಿಜಿಟಲ್ ಬರುವ ಮುನ್ನ ನಮಗೆ ಶುಕ್ರವಾರ ಒಂದು ದಿನ ಮಾತ್ರ ಬಿಡುವು ಇರುತ್ತಿತ್ತು. ಪುನಃ ಶನಿವಾರದಿಂದ ಕೆಲಸ ಶುರುವಾಗುತ್ತಿತ್ತು. ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರಗಳಿಗೆ ಇಲ್ಲಿಂದಲೇ ಕಟೌಟ್‌ ಹೋಗುತ್ತಿತ್ತು. ಈಗ ಅಷ್ಟು ಕೆಲಸವಿಲ್ಲ” ಎಂದು ತಮ್ಮ ಉದ್ಯಮ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ವಿವರಿಸಿದರು.

ಒಟ್ಟಾರೆ ಕಾಲ ಬದಲಾಗುತ್ತ ಓಡುತ್ತಿರುವ ಬದುಕಿನ ನಡುವೆ ತೆರೆಯ ಹಿಂದಿನ ಕಲಾವಿದರ ಬದುಕು ಕುಂಟುತ್ತಾ ಸಾಗುತ್ತಿದೆ ಎನ್ನಬಹುದು. ಅಳಿವಿನ ಅಂಚಿನಲ್ಲಿ ಕಟೌಟ್‌ ಉದ್ಯಮ ಹೆಜ್ಜೆ ಹಾಕುತ್ತಿದ್ದು, ಎಲ್ಲಿ ಬಿದ್ದು ಮುಳುಗಿ ಹೋಗುತ್ತೀವೆಯೋ ಎಂಬ ಆತಂಕದಲ್ಲಿ ಬದುಕ ಸಾಗಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
16 ವೋಟ್