ಪ್ರಜಾ ಸ್ವಾತಂತ್ರ್ಯ | ಚುನಾಯಿತ ಸರ್ವಾಧಿಕಾರ ವ್ಯವಸ್ಥೆ ಮತ್ತು ಮತದಾರರ ಸ್ವಾತಂತ್ರ್ಯ

India election system

ತುರ್ತುಪರಿಸ್ಥಿತಿಯ ಬಳಿಕ ಎದುರಾದ, 1977ರ ಮೊದಲ ಚುನಾವಣೆಯಲ್ಲಿ ಜನತಾ ಪಕ್ಷ ಎಂಬ ರಾಷ್ಟ್ರೀಯ ಪರ್ಯಾಯ ರಾಜಕೀಯ ಆಯ್ಕೆ ಮತದಾರರಿಗೆ ಸಿಕ್ಕಿತು. ಅದಕ್ಕೂ ಮುನ್ನ 1969ರಲ್ಲಿ ಕಾಂಗ್ರೆಸ್‌(ಆರ್‌) ಮತ್ತು ಕಾಂಗ್ರೆಸ್‌(ಒ) ಎಂಬ ಎರಡು ಬಣಗಳಾಗಿ ಹೋಳಾಗಿದ್ದರೂ, ಅವು ಮತದಾರರ ಮುಂದೆ ನಿಜಕ್ಕೂ ಪರ್ಯಾಯ ರಾಜಕೀಯ ಆಯ್ಕೆಗಳಾಗಿರಲಿಲ್ಲ. 

ದೇಶ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಆಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಕಳೆದ ಕೆಲವು ದಿನಗಳಿಂದ ಹರ್‌ ಘರ್‌ ತಿರಂಗಾ ಸೇರಿದಂತೆ ಹಲವು ಸಂಭ್ರಮಾಚರಣೆಗಳು ಗರಿಗೆದರಿವೆ. 

ಯಾವುದೇ ದೇಶಕ್ಕೆ ಸ್ವಾತಂತ್ರ್ಯದ ಏಳೂವರೆ ದಶಕ ಎಂಬುದು ಹೆಮ್ಮೆಯ ಮತ್ತು ಸಂಭ್ರಮದ ಸಂಗತಿಯೇ. ಅಂತಹ ಸಂಭ್ರಮದ ಹೊತ್ತನ್ನು ಸರ್ಕಾರ ಮತ್ತು ದೇಶದ ನಾಗರಿಕರು ಖುಷಿ ಮತ್ತು ಉತ್ಸಾಹದಿಂದ ಆಚರಿಸುವುದು ಸಹಜವೇ. ಅದರಲ್ಲೂ ಹಬ್ಬ ಮತ್ತು ಸಂಭ್ರಮಾಚರಣೆಗಳ ವಿಷಯದಲ್ಲಿ ಸದಾ ಮುಂದಿರುವ ಭಾರತದಂತಹ ಸಾಂಪ್ರದಾಯಿಕ ದೇಶದಲ್ಲಿ ಅಂತಹ ಆಚರಣೆಗಳು ಜೋರಾಗಿವೇ ಇರುವುದು ನಿರೀಕ್ಷಿತವೇ.

ಇಂತಹ ಸಂಭ್ರಮದ ಹೊತ್ತಲ್ಲಿ ನಮ್ಮ ಸ್ವಾತಂತ್ರ್ಯದ ಹಬ್ಬವನ್ನು ಸಂಭ್ರಮಿಸೋಣ. ಅದೇ ಹೊತ್ತಿಗೆ, ಬರೋಬ್ಬರಿ ಇನ್ನೂರು ವರ್ಷಗಳ ಸ್ವಾತಂತ್ರ್ಯ ಸಂಗ್ರಾಮದ ತ್ಯಾಗ ಮತ್ತು ಬಲಿದಾನದ ಮೂಲಕ ಪಡೆದ ಆ ಸ್ವಾತಂತ್ರ್ಯವನ್ನು ನಾವು ಹೇಗೆ ಜತನ ಮಾಡಿಕೊಂಡುಬಂದಿದ್ದೇವೆ? ನಾವು ಆರಿಸಿದ ಸರ್ಕಾರಗಳು, ಕಟ್ಟಿದ ಆಡಳಿತ ವ್ಯವಸ್ಥೆಗಳು ಆ ಸ್ವಾತಂತ್ರ್ಯವನ್ನು ಎಷ್ಟರಮಟ್ಟಿಗೆ ಭದ್ರಪಡಿಸಿವೆ? ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಜೀವ ತೇಯ್ದ, ಬಲಿದಾನ ಕೊಟ್ಟ ಆ ಪೂರ್ವಸೂರಿಗಳ ಕನಸಿನ ಸ್ವಾತಂತ್ರ್ಯ ಮತ್ತು ಸ್ವತಂತ್ರ ಭಾರತವನ್ನು ನಾವು ನಿಜ ಮಾಡಿದ್ದೇವೆಯೇ? ಎಂಬ ಪ್ರಶ್ನೆಗಳನ್ನೂ ಕೇಳಿಕೊಳ್ಳಲೇಬೇಕಾದು ಯಾವುದೇ ಜವಾಬ್ದಾರಿಯುತ ನಾಗರಿಕನ ಕರ್ತವ್ಯ. ಅಂತಹ ಪ್ರಶ್ನೆಗಳಿಗೆ ಮುಖಾಮುಖಿಯಾಗಿ ಕಣ್ಣೆದುರಿನ ಕಟು ವಾಸ್ತವಕ್ಕೆ ಎದುರಾಗುವುದು ಮತ್ತು ಆತ್ಮಾವಲೋಕನ ಮಾಡಿಕೊಂಡು ಮುಂದೆ ಸಾಗುವುದೇ ಅಸಲಿ ದೇಶಪ್ರೇಮ.

ಆ ದಿಸೆಯಲ್ಲಿ ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯದ ಸ್ಥಿತಿಗತಿಗಳನ್ನು ಕನಿಷ್ಟ ಈಗ; ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಾದರೂ ಯಾವ ಸೋಗಲಾಡಿತನವಿಲ್ಲದೆ, ಕಟುಸತ್ಯಗಳಿಗೆ ಕುರುಡಾಗದ ಪ್ರಾಮಾಣಿಕತೆಯಿಂದ ಮತ್ತು ಎದೆಗಾರಿಕೆಯಿಂದ ಅವಲೋಕಿಸುವುದು ಆತ್ಮಸಾಕ್ಷಿಯ ನಡೆ. ಅದಿಲ್ಲದೆ, ಕೇವಲ ತೋರುಗಾಣಿಕೆಯ, ಪ್ರದರ್ಶನದ ಲೋಲುಪತೆಗೆ ಮರಳಾದರೆ, ಅದಕ್ಕಿಂತ ಆತ್ಮವಂಚನೆ ಮತ್ತೊಂದಿರಲಾರದು.

ಇಂಥ ವಿವೇಕದೊಂದಿಗೆ ದೇಶದ ಭವಿಷ್ಯವನ್ನು ನಿರ್ಧರಿಸುವ ಮತದಾರರಾದ ನಾಗರಿಕರ ಸ್ವಾತಂತ್ರ್ಯದ ಮೇಲೆ ಕಣ್ಣು ಹಾಯಿಸಿದರೆ; ಕಳೆದ ಏಳೂವರೆ ದಶಕದಲ್ಲಿ ದೇಶದ ರಾಜಕೀಯ ವ್ಯವಸ್ಥೆ ಹೇಗೆ ಸಾಗಿ ಬಂದಿದೆ ಮತ್ತು ಅದರ ಸ್ಥಿತ್ಯಂತರದ ಹಾದಿಯಲ್ಲಿ ಮತದಾರರ ಸ್ವಾತಂತ್ರ್ಯ ಹೇಗೆ ಸಂಕುಚಿತವಾಗುತ್ತಾ ಸಾಗಿದೆ ಎಂಬುದರ ಚಿತ್ರಣ ಸಿಗದೇ ಇರದು. ಏಕೆಂದರೆ; ಮತದಾರನ ಆಯ್ಕೆಯ ಸ್ವಾತಂತ್ರ್ಯ ಮತ್ತು ದೇಶದ ಆಡಳಿತದ ಸ್ವರೂಪಗಳು ಪರಸ್ಪರ ಬೆಸೆದುಕೊಂಡ ಸಂಗತಿಗಳು. ಮತಗಟ್ಟೆಯಲ್ಲಿ ನಿಂತ ಮತದಾರನ ಬೆರಳ ತುದಿಗೆ ಇರುವ ಆಯ್ಕೆಗಳು ಕೇವಲ ರಾಜಕೀಯ ಪಕ್ಷಗಳ ಚಿಹ್ನೆಗಳು ಮಾತ್ರವಾಗಿರದೆ, ಸ್ವತಃ ಮತದಾರದ ಭವಿಷ್ಯ ಮತ್ತು ಆ ಮೂಲಕ ದೇಶದ ಭವಿಷ್ಯ ರೂಪಿಸುವ ಆಯ್ಕೆಗಳೂ ಆಗಿರುತ್ತವೆ.

ಸ್ವಾತಂತ್ರ್ಯದ ಆರಂಭದ ದಶಕಗಳಲ್ಲಿ ದೇಶದ ಚುನಾವಣೆಗಳು ರಾಷ್ಟ್ರೀಯತೆ ಮತ್ತು ದೇಶದ ಅಭಿವೃದ್ಧಿಯ ನೆಲೆಯ ಮೇಲೆಯೇ ನಡೆಯುತ್ತಿದ್ದವು. ಆಗ ತಾನೆ ಬ್ರಿಟಿಷ್‌ ಆಳ್ವಿಕೆಯಿಂದ ಮುಕ್ತಿ ಪಡೆದಿದ್ದ ಮತ್ತು ಗಣರಾಜ್ಯವಾಗಿ ಏಕೀಕರಣಗೊಂಡಿದ್ದ ದೇಶದಲ್ಲಿ ಸಹಜವಾಗೇ ರಾಷ್ಟ್ರೀಯತೆಯ ಭಾವನೆಗಳು ಜನಮಾನಸದಲ್ಲಿ ಏರುಗತಿಯಲ್ಲೇ ಇದ್ದವು. ಜೊತೆಗೆ ಬ್ರಿಟಿಷರು ಮತ್ತು ವಿವಿಧ ರಾಜಾಡಳಿತಗಳು ಕೊಳ್ಳೆ ಹೊಡೆದಿದ್ದ ದೇಶವನ್ನು ಹೊಸದಾಗಿ ಕಟ್ಟುವ ಅಭಿವೃದ್ಧಿಯ ಕಲ್ಪನೆ ಕೂಡ ಮತದಾರರಿಗೆ ಹೊಸ ಭರವಸೆಯ ಸಂಗತಿಯಾಗಿತ್ತು. ಹಾಗಾಗಿ ರಾಜಕೀಯ ಪಕ್ಷಗಳು ಕೂಡ ಜನರ ಆ ಭಾವನೆಗಳನ್ನೇ ಚುನಾವಣೆಯ ವಸ್ತುವಾಗಿಸಿಕೊಂಡು ಕಣಕ್ಕಿಳಿಯುತ್ತಿದ್ದವು. ಧರ್ಮ ಮತ್ತು ಕೋಮು ಭಾವನೆಗಳಿಗೆ ಅಲ್ಲಿ ಹೆಚ್ಚಿನ ಅವಕಾಶವಿರಲಿಲ್ಲ.

Image
emargency

ಆದರೆ, 1975ರಲ್ಲಿ ಮೊಟ್ಟಮೊದಲ ಬಾರಿಗೆ ತುರ್ತುಪರಿಸ್ಥಿತಿ ಜಾರಿಯ ಮೂಲಕ ದೇಶದ ರಾಜಕೀಯ ಸ್ವಾತಂತ್ರ್ಯದ ಕತ್ತು ಹಿಸುಕಲಾಯಿತು. ದೇಶದ ರಾಜಕೀಯ, ಸಾಮಾಜಿಕ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲಾಯಿತು. ಅದೇ ಹೊತ್ತಿಗೆ ಬಿಹಾರದಲ್ಲಿ ಆರಂಭವಾಗಿದ್ದ ಕಾಂಗ್ರೆಸ್ ಆಡಳಿತದ ದಬ್ಬಾಳಿಕೆಯ ಮತ್ತು ಸರ್ವಾಧಿಕಾರಿ ಧೋರಣೆಯ ವಿರುದ್ಧದ ಜನಾಕ್ರೋಶದ ಛಾತ್ರ ಸಂಘರ್ಷ ಸಮಿತಿಯ ಹೋರಾಟ, ಜಯಪ್ರಕಾಶ್‌ ನಾರಾಯಣ ಮತ್ತು ಲೋಹಿಯಾ ಅವರನ್ನು ಪ್ರಧಾನಿ ಇಂದಿರಾ ಗಾಂಧಿಯವರಿಗೆ ಪರ್ಯಾಯ ರಾಜಕೀಯ ಶಕ್ತಿಗಳನ್ನಾಗಿ ಮುಂಚೂಣಿಗೆ ತಂದಿತು. ಜೆಪಿ ಆಂದೋಲನದ ಭಾಗವಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಮೂಲ ರೂಪ ಜನಸಂಘ ಮತ್ತು ಲೋಹಿಯಾ ಅವರ ಸೋಷಿಯಲಿಸ್ಟ್‌ ಪಾರ್ಟಿಗಳು ಮಾತ್ರವಲ್ಲದೆ, ಕಮ್ಯುನಿಸ್ಟ್‌ ಪಾರ್ಟಿಗಳು ಕೂಡ ಪರ್ಯಾಯ ರಾಜಕೀಯ ರಂಗದ ಭಾಗವಾದವು. 

ಆವರೆಗೆ ಕಾಂಗ್ರೆಸ್‌ ಹೊರತುಪಡಿಸಿ ರಾಷ್ಟ್ರಮಟ್ಟದಲ್ಲಿ ಪ್ರಬಲ ಪರ್ಯಾಯ ರಾಜಕೀಯ ಶಕ್ತಿಯ ಆಯ್ಕೆಯೇ ಇಲ್ಲದ ಭಾರತೀಯ ಮತದಾರರಿಗೆ ಮೊದಲ ಬಾರಿಗೆ ಒಂದು ಸಶಕ್ತ ರಾಜಕೀಯ ಆಯ್ಕೆಯ ಸ್ವಾತಂತ್ರ್ಯವೇನೋ ಸಿಕ್ಕಿತು. ಆದರೆ, ಜನಸಂಘದ ಕೋಮುವಾದಿ, ಧರ್ಮ ರಾಜಕಾರಣದ ಅಜೆಂಡಾದ ಕಾರಣಕ್ಕೆ ಆ ಆಯ್ಕೆ ಕೂಡ ಬಹುಕಾಲ ದೇಶದ ನೈಜ ಪ್ರಜಾಪ್ರಭುತ್ವದ ಆಶಯಗಳ ಪ್ರಾತಿನಿಧಿಕ ಆಯ್ಕೆಯಾಗಿ ಉಳಿಯಲಿಲ್ಲ! 

ಹಾಗೇ ಆವರೆಗೆ ಸೆಕ್ಯುಲರ್‌ ರಾಷ್ಟ್ರ ಪ್ರಜ್ಞೆಯ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿದ್ದ ಚುನಾವಣೆಗಳಲ್ಲಿ ಆಡಳಿತ ಪಕ್ಷದ ಸರ್ವಾಧಿಕಾರ, ಭ್ರಷ್ಟಾಚಾರ, ಸ್ವಜನಪಕ್ಷಪಾತಗಳು ದೊಡ್ಡ ಪ್ರಮಾಣದಲ್ಲಿ ಚುನಾವಣಾ ವಿಷಯಗಳಾದವು. ಆ ಮೂಲಕ ಮತದಾರನ ಆಯ್ಕೆಗಳು ಕೂಡ ಗೊಂದಲಕ್ಕೊಳಗಾದವು. ಅದರೊಂದಿಗೆ ಜನಸಂಘ ಮತ್ತು ಅದರ ಮಾತೃಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಗಳು ಧಾರ್ಮಿಕ ರಾಷ್ಟ್ರೀಯತೆಯನ್ನು ನಿಧಾನವಾಗಿ ರಾಜಕಾರಣದ ವಾಗ್ವಾದದ ಮುಂಚೂಣಿಗೆ ತಂದವು. ಹಾಗಾಗಿ ಧರ್ಮ ನಿರಪೇಕ್ಷ ರಾಷ್ಟ್ರೀಯತೆಗೂ ಒಂದು ಪರ್ಯಾಯ ರಾಷ್ಟ್ರೀಯತೆಯ ಆಯ್ಕೆ ಮತದಾರರ ಮುಂದೆ ತೆರೆದುಕೊಂಡಿತು.

ಹೀಗೆ ತುರ್ತುಪರಿಸ್ಥಿತಿಯ ಬಳಿಕ ಕಾಂಗ್ರೆಸ್‌ ಪರ್ಯಾಯ ರಾಜಕೀಯ ಶಕ್ತಿಯೊಂದಿಗೇ ಕವಲೊಡೆದ ಭಾರತೀಯ ಮತದಾರನ ಮುಂದಿನ ಆಯ್ಕೆಗಳು ವಿಸ್ತರಿಸುತ್ತಲೇ ಹೋದವು. ತುರ್ತುಪರಿಸ್ಥಿತಿಯ ಬಳಿಕ ಎದುರಾದ, 1977ರ ಮೊದಲ ಚುನಾವಣೆಯಲ್ಲಿ ಜನತಾ ಪಕ್ಷ ಎಂಬ ರಾಷ್ಟ್ರೀಯ ಪರ್ಯಾಯ ರಾಜಕೀಯ ಆಯ್ಕೆ ಮತದಾರರಿಗೆ ಸಿಕ್ಕಿತು. ಅದಕ್ಕೂ ಮುನ್ನ 1969ರಲ್ಲಿ ಕಾಂಗ್ರೆಸ್‌(ಆರ್‌) ಮತ್ತು ಕಾಂಗ್ರೆಸ್‌(ಒ) ಎಂಬ ಎರಡು ಬಣಗಳಾಗಿ ಹೋಳಾಗಿದ್ದರೂ, ಅವು ಮತದಾರರ ಮುಂದೆ ನಿಜಕ್ಕೂ ಪರ್ಯಾಯ ರಾಜಕೀಯ ಆಯ್ಕೆಗಳಾಗಿರಲಿಲ್ಲ. ಆ ಬಳಿಕ 1980ರ ದಶಕದ ಹೊತ್ತಿಗೆ ಕಾಂಗ್ರೆಸ್‌ ಮತ್ತೆ ದೇಶವ್ಯಾಪಿ ಬಲವರ್ಧಿಸಿಕೊಂಡಿತು. ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಈಶಾನ್ಯ ಭಾರತದ ಪಶ್ಚಿಮಬಂಗಾಳ ಹಾಗೂ ಉತ್ತರದ ತುದಿಯ ಜಮ್ಮು-ಕಾಶ್ಮೀರದ ಪ್ರಾದೇಶಿಕ ಪಕ್ಷಗಳ(ಕಮ್ಯುನಿಸ್ಟ್‌ಪಕ್ಷದ ಪ್ರಾದೇಶಿಕ ಆವೃತ್ತಿಗಳೂ ಸೇರಿ) ಹೊರತಾಗಿ ದೇಶವ್ಯಾಪಿ ಮತದಾರರ ಮುಂದೆ ರಾಜಕೀಯ ಆಯ್ಕೆಗಳು ಮತ್ತೆ ಕುಗ್ಗಿದವು.

ರಾಜಕೀಯ ಚರಿತ್ರೆ ಬದಲಿಸಿದ ಭೋಜನಕೂಟ

ಆದರೆ, 1983ರಲ್ಲಿ ಕಾಂಗ್ರೆಸ್ಸಿನ ಗುಲ್ಜಾರಿಲಾಲ್‌ ನಂದಾ ಮುಜಾಫರನಗರದಲ್ಲಿ ಆಯೋಜಿಸಿದ್ದ ರಾಮನವಮಿ ಭೋಜನಕೂಟದಲ್ಲಿ ಮತ್ತೊಬ್ಬ ಕಾಂಗ್ರೆಸ್‌ ನಾಯಕ ದೋದಯಾಳ್ ಖನ್ನಾ ಮಂಡಿಸಿದ ರಾಮಜನ್ಮಭೂಮಿ ವಿಮೋಚನಾ ಅಂಶ ದೇಶದ ರಾಜಕೀಯ ಚರಿತ್ರೆಯನ್ನೇ ಬದಲಿಸಿತು. ಆ ಭೋಜನಕೂಟದಲ್ಲಿ ಆರ್‌ಎಸ್‌ಎಸ್‌, ವಿಎಚ್‌ಪಿ ಮಾತ್ರವಲ್ಲದೆ ಬೇರೆ ಬೇರೆ ರಾಜಕೀಯ ಪಕ್ಷಗಳ ಮುಖಂಡರೂ ಇದ್ದರು. ಇದೇ ಭೋಜನಕೂಟವನ್ನು ಉಲ್ಲೇಖಿಸಿ 1993ರ ಬಿಜೆಪಿಯ ಅಯೋಧ್ಯಾ ಶ್ವೇತಪತ್ರ, ರಾಮಜನ್ಮಭೂಮಿ ವಿಮೋಚನಾ ಆಂದೋಲನದ ಬಗ್ಗೆ ಪ್ರಸ್ತಾಪಿಸಿದೆ. ಬಿಜೆಪಿಯ ಆ ಶ್ವೇತಪತ್ರದ ಹೊತ್ತಿಗೆ ದೇಶದಲ್ಲಿ ರಾಮಜನ್ಮಭೂಮಿ ರಥಯಾತ್ರೆ ಮುಗಿದಿತ್ತು. ದೇಶದ ರಾಜಕಾರಣವನ್ನು ಸೆಕ್ಯುಲರ್‌ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ಅಜೆಂಡಾದಿಂದ ಧಾರ್ಮಿಕ ರಾಷ್ಟ್ರೀಯತೆ ಮತ್ತು ದ್ವೇಷ ಕೇಂದ್ರಿತ ಕೋಮುವಾದದತ್ತ ತಿರುಗಿಸುವಲ್ಲಿ ಬಿಜೆಪಿ ಯಶಸ್ವಿಯೂ ಆಗಿತ್ತು. ಆ ಬೆಳವಣಿಗೆ ದೇಶದ ಮತದಾರರ ಮುಂದೆ ದೊಡ್ಡ ಆಯ್ಕೆಯೊಂದನ್ನು ಇಟ್ಟಿತ್ತು. ಮತ್ತು ಆ ಆಯ್ಕೆಯನ್ನು ಆಯ್ದುಕೊಳ್ಳುವಂತೆ ಇಸ್ಲಮೋಫೋಬಿಯಾದ ಗುಮ್ಮವನ್ನೂ ಕಟ್ಟಿ ನಿಲ್ಲಿಸಿತ್ತು.

Image
Rathayathra

ಹಾಗೆ ಅಯೋಧ್ಯಾ ರಾಮಜನ್ಮಭೂಮಿ ಆಂದೋಲನ ಭಾರತದ ರಾಜಕಾರಣದ ಚಹರೆಗಳನ್ನು ಬದಲಾಯಿಸುತ್ತಿರುವ ಹೊತ್ತಿಗೇ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಕ್ಕೆ ತೆರೆದುಕೊಳ್ಳುವ ಮೂಲಕ ಭಾರತ ಮುಕ್ತ ಮಾರುಕಟ್ಟೆಗೆ ರಹದಾರಿ ತೆರೆಯಿತು. ಮುಕ್ತ ಮಾರುಕಟ್ಟೆಯಿಂದಾಗಿ ಉದ್ಯೋಗ ಮತ್ತು ಹಣಕಾಸು ದೃಷ್ಟಿಯಿಂದ ದೇಶಕ್ಕೆ ದೊಡ್ಡ ಲಾಭವಾದರೂ, ಪ್ರಜಾಪ್ರಭುತ್ವದ ಆಶಯಗಳಿಗೆ, ಮುಕ್ತ ಅವಕಾಶದ ಸಂವಿಧಾನಿಕ ಖಾತರಿಗೆ ಮತ್ತು ಬಹಳ ಮುಖ್ಯವಾಗಿ ಉದ್ಯಮ ಮತ್ತು ರಾಜಕಾರಣದ ನಡುವಿನ ಸಂಬಂಧಗಳ ಮೇಲೆ ಆ ಬೆಳವಣಿಗೆ ಬೀರಿದ ಪರಿಣಾಮ ಬೇರೆಯೇ ಆಗಿತ್ತು. ಕಾರ್ಪೊರೇಟ್‌ ಉದ್ಯಮಗಳು ವಿಸ್ತರಿಸಿದಂತೆ ರಾಜಕಾರಣ ಮತ್ತು ಕಾರ್ಪೊರೇಟ್‌ ಲಾಬಿಯ ನಂಟು ಗಟ್ಟಿಯಾಗುತ್ತಲೇ ಹೋಯಿತು. ಹಣ ಮತ್ತು ಅಧಿಕಾರದ ಈ ಜೊತೆಯಾಟ ಆರಂಭವಾಗುತ್ತಲೇ ದೇಶದ ರಾಜಕೀಯ ರಂಗದಲ್ಲಿ ಹೊಸ ಧ್ರುವತಾರೆಗಳು ಕಾಣಿಸಿಕೊಳ್ಳತೊಡಗಿದವು. ಭಾರೀ ಹಣ ಮತ್ತು ಉದ್ಯಮದ ಹಿನ್ನೆಲೆಯ ಮಂದಿ ದೇಶದ ರಾಜಕೀಯ ರಂಗದಲ್ಲಿ ಮೂಡತೊಡಗಿದರು. 

ಒಂದು ಕಡೆ ರಾಮನ ಕೇಂದ್ರಿತ ಧರ್ಮ ರಾಜಕಾರಣ, ಮತ್ತೊಂದು ಕಡೆ ʼಲಕ್ಷ್ಮಿ(ಹಣ)ʼಬಲದ ಕಾರ್ಪೊರೇಟ್‌ ರಾಜಕಾರಣ ದೇಶದ ರಾಜಕಾರಣ, ರಾಜಕೀಯ ನೀತಿಗಳನ್ನು ಮಾತ್ರವಲ್ಲದೆ, ಪ್ರಜಾಪ್ರಭುತ್ವದ ಜನಕಲ್ಯಾಣ ಮತ್ತು ನಾಗರಿಕ ಒಳಿತಿನ ನೀತಿಗಳನ್ನು ಬದಲಾಯಿಸಿದವು. ಅಭಿವೃದ್ದಿ ಮತ್ತು ಕಲ್ಯಾಣ ಅಡಿಪಾಯದ ರಾಜಕಾರಣ, ಭಾವನಾತ್ಮಕ ಮತ್ತು ಆಮಿಷದ(ಹಣದ ಥೈಲಿ) ನೆಲೆಗೆ ಹೊರಳಿತು. ಪಕ್ಷಗಳ ಜನಪರ ಯೋಜನೆಯ ಭರವಸೆ, ಪ್ರಣಾಳಿಕೆ, ನೀತಿ-ನಿಲುವುಗಳು ಮಾತ್ರವಲ್ಲದೆ ಕಾಲಕ್ರಮೇಣ ಪಕ್ಷಗಳ ಚಿಹ್ನೆ, ಐಕಾನ್‌ ಗಳೂ ಬದಿಗೆ ಸರಿದು, ಶ್ರೀರಾಮ, ಗೋವು, ಕೇಸರಿ, ಹಸಿರು ಬಣ್ಣಗಳು ಎಲ್ಲಾ ರಾಜಕೀಯ ವೇದಿಕೆಗಳನ್ನು ಅಲಂಕರಿಸತೊಡಗಿದವು. ಸರಳ ಮತ್ತು ನೇರ ವಾಗ್ವಾದದ ರಾಜಕೀಯ ವೇದಿಕೆಗಳು, ವಿಜೃಂಭಣೆಯ, ಹೈಟೆಕ್‌ ಭಾಷಣಗಳನ್ನು ಮ್ಯಾನೇಜ್‌ ಮಾಡುವ ʼಈವೆಂಟ್‌ ಮ್ಯಾನೇಜ್‌ಮೆಂಟ್‌ʼಗಳಾಗಿ ಬದಲಾದವು.

ಈ ಬದಲಾವಣೆಗಳು ಮತದಾರರ ಆಯ್ಕೆಗಳನ್ನು ಮಾತ್ರ ಮಿತಿಗೊಳಿಸಲಿಲ್ಲ; ಬದಲಾಗಿ ಆಕೆಯ/ ಆತನ ವಿವೇಚನೆಯ ಶಕ್ತಿಯನ್ನೂ ಕಿತ್ತುಕೊಂಡು, ತನ್ನ ಆದ್ಯತೆ ಯಾವುದು ಎಂಬುದನ್ನು ತಪ್ಪಾಗಿ ನಿರ್ಧರಿಸುವ ಮತ್ತು ಆ ಮೂಲಕ ಮತಗಟ್ಟೆಯಲ್ಲಿ ನಿಂತು ತನ್ನ ಭವಿಷ್ಯವನ್ನು ರೂಪಿಸುವ ರಚನಾತ್ಮಕ ಆಯ್ಕೆಯನ್ನು ಮಾಡುವ ಹೊರತಾಗಿ ಕಲ್ಪಿತ ಭಯ ಮತ್ತು ಚುನಾವಣಾ ಮುನ್ನಾ ದಿನಗಳ ಆಮಿಷಗಳ ಅಮಲಿನಲ್ಲಿ ಮತ ಚಲಾಯಿಸುವಂತೆ ಮಾಡಿದವು. ಅಧಿಕಾರ ಮತ್ತು ಹಣದ ಗುರಿಯ ಚುನಾವನಾ ರಾಜಕಾರಣಕ್ಕೆ ದ್ವೇಷದ ಧರ್ಮ, ವಿಕೃತ ದೇಶಭಕ್ತಿಗಳು ಹತಾರಗಳಾಗಿ ಒದಗಿಬಂದವು. ಹಾಗಾಗಿ ಸಹಜವಾಗಿಯೇ ಸಾರ್ವಜನಿಕ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವದ ಆಶಯಗಳ ಸ್ಥಾನವನ್ನು ʼಅನ್ಯʼ ಧರ್ಮೀಯರ ಕುರಿತು ಶ್ರದ್ಧಾಪೂರ್ವಕವಾಗಿ ಕಟ್ಟಿಬೆಳೆಸಿದ ಭೀತಿ ಹುಟ್ಟಿಸುವ ಅಸ್ಥಿರತೆ ಮತ್ತು ವರ್ಗ ಹಿತಾಸಕ್ತಿಗಳು ಆಕ್ರಮಿಸಿದವು. ಧಾರ್ಮಿಕ ಮೂಲಭೂತವಾದ ಮತ್ತು ಉದ್ಯಮ ಹಿತಾಸಕ್ತಿಗಳೇ ಚುನಾವಣಾ ದಿಕ್ಕುದೆಸೆಗಳನ್ನು ನಿರ್ಧರಿಸತೊಡಗಿದವು.

ಮತದಾರರ ಸ್ವಾತಂತ್ರ್ಯಹರಣ ಮಾಡಿದ ಚುನಾವಣಾ ಬಾಂಡ್‌

ಇತ್ತೀಚಿನ ಎಲೆಕ್ಟ್ರಾಲ್‌ ಬಾಂಡ್‌(ಚುನಾವಣಾ ಬಾಂಡ್) ದೇಣಿಗೆಯ ಅಂಕಿಅಂಶ ಮತ್ತು ಧಾರ್ಮಿಕ ಭೀತಿಯ ವಾತಾವರಣವನ್ನು ಪರಿಶೀಲಿಸಿದರೆ ದೇಶದ ರಾಜಕಾರಣದ ಚಹರೆಯ ಬದಲಾವಣೆ ಕಣ್ಣಿಗೆ ರಾಚದೇ ಇರದು. ರಾಜಕಾರಣದ ಚಹರೆಯ ಬದಲಾವಣೆ ಎಂದರೆ; ಭಾರತದ ಮಟ್ಟಿಗೆ ಮತದಾರನ ಸ್ವಾತಂತ್ರ್ಯ ಹರಣವೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

Image
Bond

ದೇಶದ ಭೂಮಿ ಮತ್ತು ತಲೆಮೇಲೊಂದು ಸೂರು ಹೊಂದುವ ಮಧ್ಯಮವರ್ಗದ ಕನಸನ್ನೇ ಬಂಡವಾಳ ಮಾಡಿಕೊಂಡಿರುವ ರಿಯಲ್‌ ಎಸ್ಟೇಟ್‌, ಇಂಧನ ಮತ್ತು ತೈಲ ಮಾರುಕಟ್ಟೆ, ಟೆಲಿಕಮ್ಯುನಿಕೇಷನ್‌ ವಲಯ, ಮೂಲ ಸೌಕರ್ಯ ವಲಯ ಮುಂತಾದ ಕಾರ್ಪೊರೇಟ್‌ ಉದ್ಯಮಗಳೇ ಎಲೆಕ್ಟ್ರಾಲ್‌ ಬಾಂಡ್‌ ಖರೀದಿದಾರರು ಮತ್ತು ಸಾವಿರಾರು ಕೋಟಿಯ ಆ ದೇಣಿಗೆಯ ಫಲಾನುಭವಿ ದೇಶದ ಸದ್ಯದ ಆಡಳಿತ ಪಕ್ಷವೇ ಎಂಬುದು ಗಮನಾರ್ಹ. ಸುಮಾರು ಐದು ಸಾವಿರ ಕೋಟಿ ರೂಪಾಯಿ ದೇಣಿಗೆ ಹೊಂದಿರುವ ಭಾರತೀಯ ಜನತಾ ಪಾರ್ಟಿ ಇಂದು ಇಡೀ ಜಗತ್ತಿನ ಅತ್ಯಂತ ಶ್ರೀಮಂತ ಪಕ್ಷವಾಗಿದೆ. ಮತ್ತು ಆ ಶ್ರೀಮಂತಿಕೆ ಬಹುಪಾಲು ಕಳೆದ ಐದಾರು ವರ್ಷಗಳಲ್ಲಿ ಸಂಪಾದಿಸಿದ್ದು ಎಂಬುದೇ ದೇಶದಲ್ಲಿ ರಾಜಕಾರಣ ಮತ್ತು ಕಾರ್ಪೊರೇಟ್‌ ವಲಯದ ನಂಟು ಎಷ್ಟು ನಿಕಟ ಎಂಬುದನ್ನು ಸಾರಿ ಹೇಳುತ್ತಿದೆ.

ಹಣದ ಜೊತೆಗೆ ಇದೀಗ ತಂತ್ರಜ್ಞಾನ ಕೂಡ ರಾಜಕೀಯ ಅಸ್ತ್ರವಾಗಿ ಬಳಕೆಗೆ ಬಂದಿದೆ. ಹಾಗಾಗಿ ಸುಳ್ಳು ಸುದ್ದಿಗಳು, ಕಟ್ಟುಕತೆಗಳು ಮತ್ತು ಭ್ರಮೆಗಳನ್ನು ಹರಿಬಿಡಲು ಮತ್ತು ಎದುರಾಳಿಗಳನ್ನು ಜನರ ಕಣ್ಣಲ್ಲಿ ಮೂಲೆಗುಂಪು ಮಾಡಲು ತಂತ್ರಜ್ಞಾನ ಯಶಸ್ವಿಯಾಗಿ ಒದಗಿಬಂದಿದೆ. 

ಈ ಎಲ್ಲಾ ಹಿನ್ನೆಲೆಯಲ್ಲಿಯೇ ಇತ್ತೀಚಿನ ಕೆಲವು ಜಾಗತಿಕ ವಿಶ್ವಾಸಾರ್ಹ ಸಮೀಕ್ಷೆಗಳು ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿವೆ ಎಂದು ಎಚ್ಚರಿಕೆ ನೀಡಿವೆ. ಅಮೆರಿಕ ಮೂಲದ ʼಫ್ರೀಡಂ ಹೌಸ್‌ʼ ಎಂಬ ಸಂಸ್ಥೆಯ ಸಮೀಕ್ಷೆ ʼಸ್ವಾಯತ್ತ ಪ್ರಜಾಪ್ರಭುತ್ವʼಕ್ಕೆ ಬದಲಾಗಿ ಭಾರತ ಈಗ ʼಭಾಗಶಃ ಸ್ವಾಯತ್ತ ಪ್ರಜಾಪ್ರಭುತ್ವʼವಾಗಿದೆ ಎಂದಿದೆ. ಅದೇ ಹೊತ್ತಿಗೆ ಸ್ವೀಡನ್‌ ಮೂಲದ ವೀ-ಡೆಮ್‌ ಎಂಬ ಸ್ವಾಯತ್ತ ಸಂಸ್ಥೆ ತನ್ನ ವಾರ್ಷಿಕ ಸಮೀಕ್ಷೆಯಲ್ಲಿ ʼಭಾರತ ಚುನಾಯಿತ ಸರ್ವಾಧಿಕಾರʼ ವ್ಯವಸ್ಥೆಯಾಗಿದೆ ಎಂದು ಹೇಳಿದೆ. ಹಾಗೇ ʼದ ಎಕನಾಮಿಸ್ಟ್‌ʼ ಮಾಧ್ಯಮ ಪ್ರತಿ ವರ್ಷ ಪ್ರಕಟಿಸುವ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವನ್ನು ʼದೋಷಪೂರಿತ ಪ್ರಜಾಪ್ರಭುತ್ವʼ ಎಂದು ಹೆಸರಿಸಲಾಗಿದೆ.

ಧರ್ಮ ದ್ವೇಷ, ಸಾಮಾಜಿಕ ಭೀತಿ, ಹಸೀಸುಳ್ಳುಗಳು ಸೃಷ್ಟಿಸುವ ಭ್ರಮೆಗಳು ಮತದಾರರ ಕಣ್ಣಿನ ಪೊರೆಗಳಂತಾಗಿರುವಾಗ ಕಣ್ಣೆದುರಿನ ಕಟುವಾಸ್ತವಕ್ಕೂ ಆತ/ ಆಕೆ ಕುರುಡಾಗುವುದು ಸಹಜ. ತನ್ನದೇ ಭವಿಷ್ಯವನ್ನೂ ಸ್ವಚ್ಛ ಕಣ್ಣುಗಳಿಂದ ಕಾಣಲಾಗದ, ಮುಕ್ತ ಮನಸಿನಿಂದ ಗ್ರಹಿಸಲಾಗದ ಮತದಾರರು ಅಂತಿಮವಾಗಿ ನೈಜ ಆಯ್ಕೆಯ ಸ್ವಾತಂತ್ರ್ಯಕಳೆದುಕೊಂಡಿದ್ದಾರೆ.

ವಿವೇಚನಾಶಕ್ತಿಯನ್ನೂ ಕಳೆದುಕೊಂಡ ಮತದಾರರಿಂದ ಆಯ್ಕೆಯಾಗುವ ವ್ಯವಸ್ಥೆ, ಅಸಲೀ ಪ್ರಜಾಸತ್ತೆಯಾಗಲು ಸಾಧ್ಯವೆ? ಆ ಅರ್ಥದಲ್ಲಿ ʼಚುನಾಯಿತ ಸರ್ವಾಧಿಕಾರʼ ಎಂಬ ಮಾತು ಅತಿಶಯೋಕ್ತಿ ಎನಿಸಲಾರದು. ಅಲ್ಲವೇ?

ಸಂವಿಧಾನ ಮುನ್ನುಡಿಯ ಗೀತೆ ಕೇಳಲು ಈ ಲಿಂಕ್‌ ಕ್ಲಿಕ್‌ ಮಾಡಿ : https://www.youtube.com/watch?v=T1LLVB3XXAQ

ನಿಮಗೆ ಏನು ಅನ್ನಿಸ್ತು?
0 ವೋಟ್