ವಿಷವಿಕ್ಕುವವರ ನಡುವೆ ನಮಗೆಲ್ಲಿಯ ಅಮೃತ, ಸ್ವಾತಂತ್ರ್ಯ!

mohammad-akhlaq Family

ಗುಜರಾತಿನ ಮುಸ್ಲಿಮರ ಬರ್ಬರ ಸಾಮೂಹಿಕ ಹತ್ಯಾಕಾಂಡ, ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ರಕ್ತಪಾತಗಳಿಂದ ದೇಶದ ಪ್ರತಿಯೊಬ್ಬ ಮುಸ್ಲಿಮನ ಮನದಲ್ಲಿ ʼನಾನು ಯಾರು; ನನ್ನನ್ನೇಕೆ ಪ್ರತ್ಯೇಕಿಸಲಾಗುತ್ತಿದೆʼ ಎಂಬ ಪ್ರಶ್ನೆ ಕಣ್ಣ ಮುಂದೆ ಬರುತ್ತದೆ. ಸಾಮಾಜಿಕವಾಗಿ ಹಿಂದುಳಿದ ಮುಸ್ಲಿಮರ ಭೂಮಿಯ ಮೇಲಿನ ಹಕ್ಕು ದಲಿತರಿಗಿಂತ ಕನಿಷ್ಠವಾಗಿದೆ

ದೇಶದ ಸ್ವಾತಂತ್ರವು ಯಾರೋ ಒಬ್ಬರ ಪ್ರಯತ್ನದಿಂದ ಬಂದುದಲ್ಲ. ಹಲವಾರು ಜನರ ತ್ಯಾಗ, ಬಲಿದಾನದಿಂದ ಭಾರತ ಸ್ವತಂತ್ರಗೊಂಡಿತು. ಭಾರತೀಯರು ದೇಶೀಯ ಜಮೀನ್ದಾರಿ ಪದ್ಧತಿಯಿಂದ ಮತ್ತು ವಿದೇಶಿಯ ಸಾಮ್ರಾಜ್ಯಶಾಹಿಯಿಂದ ರಾಜಕೀಯ ಸ್ವಾತಂತ್ರ್ಯ ಪಡೆಯುವುದೇ ಈ ಚಳವಳಿಯ ಮುಖ್ಯ ಉದ್ದೇಶವಾಗಿತ್ತು. ಹಲವಾರು ಹೋರಾಟಗಾರರು ತಮ್ಮ ತನು, ಮನ, ಧನ ಎಲ್ಲವನ್ನೂ ರಾಷ್ಟ್ರಕ್ಕಾಗಿ ನೀಡಿದರು. ಅಷ್ಟೇ ಅಲ್ಲದೇ ತಮ್ಮ ಜೀವವನ್ನೂ ರಾಷ್ಟ್ರಕ್ಕಾಗಿ ನೀಡಿದರು. ಹೀಗೆ ಪವಿತ್ರವಾದ ಸ್ವಾತಂತ್ರ್ಯವನ್ನು ಅವರು ಗಳಿಸಿಕೊಂಡರು.
ಈ ಅಮೂಲ್ಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್‍ಸಿಂಗ್‌, ರಾಜಗುರು, ಅಶ್ಫಾಖುಲ್ಲಾಖಾನ, ಸುಖದೇವ್, ಮುಂತಾದ ಹೋರಾಟಗಾರರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಹಲವರಿಗೆ ಅಂಡಮಾನಿನ ಕಾಲಾಪಾನಿ ಶಿಕ್ಷೆ ನೀಡಿದರು. ಅಸಂಖ್ಯಾತ ಸ್ವಾಭಿಮಾನಿ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಅಂಡಮಾನಿನ ಸೆಲ್ಯುಲರ್ ಜೈಲಿನ ಗೋಡೆಗಳ ಮೇಲೆ ಆ ಅಸಂಖ್ಯಾತ ಕ್ರಾಂತಿಕಾರಿಗಳು, ಮರಣಕ್ಕೂ ಹೆದರದೆ, ತಮ್ಮ ಕತ್ತನ್ನು ನೇಣಿಗೆ ನಗುನಗುತ್ತಾ ನೀಡಿದವರ ಹೆಸರುಗಳಿವೆ. ಆ ವೀರರನ್ನು ಕ್ಷಣಕಾಲ ನೆನಪಿಸಿಕೊಂಡರೆ ಮೈನವಿರೇಳುತ್ತದೆ. ದೆಹಲಿಯ ಇಂಡಿಯಾ ಗೇಟಿನ ಮೇಲೆ ಕೆತ್ತಿರುವ ಅಸಂಖ್ಯಾತ ಹುತಾತ್ಮರ ಹೆಸರುಗಳನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಅವರ ತ್ಯಾಗಕ್ಕೊಂದು ಸಲಾಂ ಹೇಳದೇ ಇರಲಾಗದು. 

ಆದರೆ, ಒಂದಾಗಿದ್ದ ದೇಶವನ್ನು ಬ್ರಿಟಿಷರು ಎರಡು ತುಂಡು ಮಾಡಿ ಹೋದರು. ಬ್ರಿಟಿಷರು ಕೇವಲ ಒಂದು ದೇಶವನ್ನು ಎರಡು ಮಾಡಲಿಲ್ಲ. ಬದಲಾಗಿ ಭಾರತೀಯರ ಕುರಿತು ಅವಹೇಳನಕಾರಿಯಾಗಿ ಬರಹಗಳಲ್ಲಿ ಅವರನ್ನು ದಾಖಲಿಸಿತು. ‘ಥಾಮಸ್ ಲವ್’ ಹೇಳುವ ಪ್ರಕಾರ ಈ ಸ್ವಾತಂತ್ರ್ಯ ಚಳವಳಿಯಲ್ಲಿ ಯಾರು ಯಾರು ಭಾಗಿಯಾಗಿದ್ದರು ಎಂಬುದನ್ನು ಹೇಳುತ್ತಾ , “ಶಿಶು ಹತ್ಯೆಗೆ ಹೆಸರಾದ ರಾಜಪೂತರು, ಧರ್ಮಾಂಧ ಬ್ರಾಹ್ಮಣರು, ಮತಾಂಧ ಮುಸಲ್ಮಾನರು, ಮತ್ತು ಐಷಾರಾಮದಲ್ಲಿ ಮುಳುಗಿರುತ್ತಿದ್ದ ಡೊಳ್ಳು ಹೊಟ್ಟೆಯ ಮಹಾತ್ವಾಕಾಂಕ್ಷಿ ಮರಾಠರು ಎಲ್ಲರೂ ಚಳವಳಿಯಲ್ಲಿ ಸೇರಿಕೊಂಡಿದ್ದರು. ಹಸು ಹಂತಕರು ಮತ್ತು ಹಸು ಪೂಜಕರು, ಹಂದಿಯನ್ನು ಕಂಡರೆ ಅಸಹ್ಯ ಪಡುವವರು ಮತ್ತು ಹಂದಿಯನ್ನು ತಿಂದು ಸವಿಯುವವರು, ಇರುವವನೊಬ್ಬನೇ ಅಲ್ಲಾಹ್ ಮತ್ತು ಮಹಮ್ಮದನು ಆತನ ಪ್ರವಾದಿ ಎಂದು ಸಾರುವವರು ಮತ್ತು ಬ್ರಹ್ಮನ ಮಹಿಮೆಯ ಕುರಿತು ಮಣಮಣಗುಟ್ಟುವವರು” ಹೀಗೆ ಇಲ್ಲಿಯ ಜನರನ್ನು ಅವಹೇಳನಕಾರಿಯಾಗಿ ವಿದೇಶಿ ಬರಹಗಾರರು ಬರೆದರು. 

Image
ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರು
ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರು

ಭಾರತದ ಸ್ವಾತಂತ್ರ್ಯಕ್ಕಾಗಿ ಹಲವಾರು ಜನ ಜಾತಿ, ಮತ ಧರ್ಮಗಳ ಆಚೆ ನಿಂತು ಹೋರಾಡಿದ್ದಾರೆ. ಟಿಪ್ಪು ಸುಲ್ತಾನ್, ಬಹಾದ್ದೂರ ಷಾ ಜಫರ್, ಗಾಂಧಿ, ನೆಹರೂ, ಭಗತ್‌ಸಿಂಗ್, ಅಶ್‍ಫಾಕುಲ್ಲಾ ಖಾನ್, ಅಬ್ದುಲ್ ಕಲಾಂ ಆಜಾದ್, ಹಕೀಮ್ ಅಜ್ಮಲ್ ಖಾನ್, ಮಹಮ್ಮದ್ ಅಲಿ ಜಿನ್ನಾ,  ಬೇಗಂ ಹಜ್ರತ್ ಮಹಲ್, ಚಾಂದಬೀವಿ, ಅಸ್ಘರಿ ಬೇಗಂ, ಮತ್ತು ಬಿಯಮ್ಮ ಹೀಗೆ ಲಕ್ಷಾಂತರ ಮುಸಲ್ಮಾನರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ, ಲಕ್ಷಾಂತರ ಜನರು ಜೀವವನ್ನೇ ದೇಶಕ್ಕಾಗಿ ಬಲಿ ಕೊಟ್ಟಿದ್ದಾರೆ. ಈ ಮಣ್ಣಲ್ಲಿ ಕೇವಲ ಹಿಂದುಗಳದಲ್ಲ, ಬರೀ ಮುಸ್ಲೀಮರದಲ್ಲ. ಬದಲಾಗಿ ಇಡೀ ಭಾರತೀಯರೆಲ್ಲರ ರಕ್ತದ ಕೆಂಪು ಸೇರಿದೆ. ರಾಷ್ಟ್ರ ಕಟ್ಟಲು ಕನಿಷ್ಠಪಕ್ಷ ಸತ್ಯ ನುಡಿಯಬೇಕಾಗಿದೆ. ಆದರೆ ಪ್ರಭುತ್ವ ಸತ್ಯ ನುಡಿಯುವವರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿರುವುದು ಶೋಚನೀಯ.

ಸ್ವಾತಂತ್ರದೊಂದಿಗೆ ದೇಶ ವಿಭಜನೆಯ ಸಂಕಟಗಳು ಎದುರಾದವು. ಎರಡೂ ಕಡೆಯ ಸಾವಿರಾರು ಜನರು ಹತರಾದರು. ಆದರೆ ಇತ್ತೀಚಿಗೆ ಕರ್ನಾಟಕ ಸರ್ಕಾರ ರೋಹಿತ್ ಚಕ್ರತೀರ್ಥನ ಅಧ್ಯಕ್ಷತೆಯಲ್ಲಿ ಪಠ್ಯ ಪರಿಷ್ಕರಣೆಯ ಸಮಯದಲ್ಲಿ  “ದೇಶವಿಭಜನೆಯ ಸಮಯದಲ್ಲಿ 38 ಸಾವಿರ ಹಿಂದುಗಳನ್ನು ಮುಸ್ಲಿಮರು ಕೊಂದರು” ಎಂದು ಹೇಳಲಾಗಿದೆ. ಆದರೆ ಎರಡೂ ಕಡೆಯ ಜನರು ಹತರಾಗಿರುವ ಸತ್ಯ ನಮ್ಮ ಕಣ್ಣೆದುರಿಗಿದೆ. ಆದರೂ ಈ ಮೂಲಕ ಮುಸ್ಲೀಮರ ವಿರುದ್ಧ ಪಠ್ಯ ಪುಸ್ತಕಗಳಲ್ಲಿಯೇ ವಿಷ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇಂತಹ ದ್ವೇಷದ ಮತ್ತು ತಪ್ಪು ಮಾಹಿತಿಯನ್ನು ಪುಟ್ಟ ಮಕ್ಕಳ ತಲೆಯಲ್ಲಿ ತುಂಬಲಾಗುತ್ತಿದೆ. ದೇಶ ವಿಭಜನೆಯಾದಾಗ ಕೇವಲ ಒಂದು ಸಮುದಾಯದವರು ಮಾತ್ರ ಕೊಲೆಯಾಗಲಿಲ್ಲ. ಬದಲಾಗಿ ಎರಡೂ ಕಡೆಯ ಜನರು ಸಾವು ನೋವುಗಳನ್ನು ಅನುಭವಿಸಿದ್ದಾರೆ.  

ಮುಸಲ್ಮಾನರು ಹೊರಗಿನವರಲ್ಲ. ಅವರು ಬಂದದ್ದು ಲೂಟಿಗಾಗಿಯೂ ಅಲ್ಲ. ಬದಲಾಗಿ ಇಲ್ಲಿಯೇ ನೆಲೆಸಿ, ಈ ಮಣ್ಣಿನಲ್ಲಿಯೇ ಒಂದಾಗಿದ್ದಾರೆ. ಮುಸ್ಲಿಂ ಅರಸರು ಕಟ್ಟಿಸಿದ ಕೋಟೆ ಕೊತ್ತಲಗಳು, ಇಮಾರತ್ತುಗಳು ಇಂದಿಗೂ ಹೆಸರುವಾಸಿಯಾಗಿವೆ. ದೆಹಲಿಯ ಜುಮ್ಮಾ ಮಸೀದಿ, ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ ಕಾ ಮಕ್ಬರಾ, ಆಗ್ರಾದ ಕೋಟೆ, ತಾಜ್ ಮಹಲ್, ಚಾರ್ ಮಿನಾರ್, ಗೋಲಗುಮ್ಮಜ್, ಮಂಜ್ರಾಬಾದ್ ಕೋಟೆ, ಫತೇಪುರ ಸಿಕ್ರಿ, ಹೀಗೆ ಇನ್ನೂ ಸಾವಿರಾರು ಇಮಾರತ್ತುಗಳನ್ನು, ಕೋಟೆ, ಕೊತ್ತಲ ಮಹಲುಗಳನ್ನು ಕಟ್ಟಿಸಿ ಭಾರತದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಸ್ವಾತಂತ್ರ ಚಳವಳಿಯಲ್ಲಿ ಹೋರಾಟಕ್ಕೆ ಧುಮುಕಿದ್ದಾರೆ. ಮೊಘಲರ ಕೊನೆಯ ಅರಸ ಬಹಾದ್ದೂರ ಷಾ ಜಫರ್ ಅವರನ್ನು ಬ್ರಿಟಿಷರು ರಂಗೂನಿನ ಕಾರಾಗೃಹದಲ್ಲಿ ಬಂಧನದಲ್ಲಿಟ್ಟು, ಅವರ ಇಪ್ಪತ್ತೊಂದು ಜನ ಗಂಡು ಮಕ್ಕಳನ್ನು ಒಂದೇ ದಿನ ಮರಕ್ಕೆ ನೇಣು ಹಾಕಿ ಸಾಯಿಸುತ್ತಾರೆ. ತಮ್ಮ ಬದುಕಿನ  ಕೊನೆಯ ದಿನಗಳಲ್ಲಿ ಬಹಾದ್ದೂರ್ ಷಾ ಜಫರರು ಬ್ರಿಟಿಷ್ ಅಧಿಕಾರಿಗಳಲ್ಲಿ ತಮ್ಮನ್ನು ಭಾರತದ ಮಣ್ಣಿನಲ್ಲಿ ದಫನ್ ಮಾಡಲುಕೇಳಿಕೊಳ್ಳುತ್ತಾರೆ. ಅದಕ್ಕೆ ಒಪ್ಪದ ಬ್ರಿಟಿಷ್ ಸರ್ಕಾರ ಅವರನ್ನು ರಂಗೂನಿನ ಜೈಲಿನಲ್ಲಿಯೇ ಮಣ್ಣು ಮಾಡುತ್ತಾರೆ. ಈಗಲೂ ಅವರ ಸಮಾಧಿ ಅಲ್ಲಿಯೇ ಇದೆ.

Image
partition photo

ಅರಸನೂ ಕವಿಯೂ ಆಗಿರುವ ಬಹಾದ್ದೂರ ಷಾ ಜಫರರು ತಮ್ಮ ಕವನದಲ್ಲಿ ಹೇಳುತ್ತಾರೆ.
“ಕಿತನಾ ಬದ್ ನಸೀಬು ಹೈ ಜಫರ್, ದಫನ್ ಕೆ ಲಿಯೇ ದೋ ಗಜ ಜಮೀ ಭೀ ನ ಮಿಲಿ ಕೂಯೇ ಯಾರ್ ಮೆ” (ಎಂತಹ ಕೆಟ್ಟ ಹಣೆಬರಹ ನಿನ್ನದು ಝಫರ್, ನಿನ್ನ ಶವಸಂಸ್ಕಾರಕ್ಕೆ ಎರಡು ಗಜ ಜಮೀನು ಕೂಡ ನಿನ್ನ ಮಾತೃಭೂಮಿಯಲ್ಲಿ ಸಿಗಲಿಲ್ಲವಲ್ಲ) ಎಂದು ಪರಿತಪಿಸುತ್ತಾರೆ.

ಸ್ವಾತಂತ್ರ್ಯ ದೊರತ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ದೇಶದಲ್ಲಿ ತೀವ್ರತರ ಬದಲಾವಣೆಗಳಾಗುತ್ತಿವೆ. ದುರ್ಬಲ ವರ್ಗ, ಪರಿಶಿಷ್ಟ ಜಾತಿ, ಬುಡಕಟ್ಟು, ಧಾರ್ಮಿಕ ಅಲ್ಪಸಂಖ್ಯಾತರು ಬೌದ್ಧಿಕ ಸಂಪನ್ಮೂಲಗಳ ಮೇಲೆ ತಮ್ಮ ಹಿಡಿತ ಸಾಧಿಸುತ್ತಿದ್ದಾರೆಯೆ? ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕುತ್ತಿದೆಯೆ? ಅದರಲ್ಲೂ ಮುಸ್ಲೀಮರ ಸಮಸ್ಯೆಗಳೇನು? ಅವರ ತಲ್ಲಣಗಳೇನು? ಅವರ ಆತಂಕಗಳೇನು? ಅವರಿಗೆ ಸಾಮಾಜಿಕ ನ್ಯಾಯ ದೊರೆಯುತ್ತಿದೆಯೆ? ಸಾಚಾರ ವರದಿ ಏನನ್ನು ಹೇಳುತ್ತದೆ? ಅಲ್ಪಸಂಖ್ಯಾತರ ವರ್ತಮಾನದ ತಲ್ಲಣಗಳೇನು? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಜಾತಿ ಭೂತ ಅಂಟಿದೆ. ಜಾತಿ ಇಲ್ಲದ ಮನುಷ್ಯನನ್ನು ಭಾರತದಲ್ಲಿ ಹುಡುಕುವುದು ಬಲು ಕಷ್ಟ. ಭಾರತದಲ್ಲಿ 5000ಕ್ಕೂ ಹೆಚ್ಚು ಜಾತಿಗಳಿವೆ. ಇಂದು ಮನುಷ್ಯನಿಗೆ ಜಾತಿ ಮೀರಲು ಸಾಧ್ಯವಾಗುತ್ತಿಲ್ಲ.

ಹಿಂದೂ ಎಂಬ ಶಬ್ಧ ಎಲ್ಲರನ್ನು ಆವರಿಸಿಕೊಂಡು ಮುಸ್ಲಿಮರನ್ನು ಮಾತ್ರ ಪ್ರತ್ಯೇಕಿಸುತ್ತದೆ. ಮುಸ್ಲಿಮರ ನೋವು ತಲ್ಲಣಗಳು ಭಿನ್ನವಾಗಿವೆ. ಮುಸ್ಲಿಮರನ್ನು ಸಾವಿರಾರು ವರ್ಷಗಳ ನಂತರವೂ ಇಂದಿಗೂ ಹೊರಗಿಟ್ಟು ಮಾತನಾಡಲಾಗುತ್ತದೆ. ಇಸ್ಲಾಮಿನ ಮೂಲಭೂತ ಪ್ರಶ್ನೆಗಳು ನಮಗೆದುರಾಗಿ ಬಂದಾಗ, ʼಅದು ಅವರ ಧಾರ್ಮಿಕ ಪ್ರಶ್ನೆ ನಮಗೇಕೆ ಅದರ ಉಸಾಬರಿ' ಎಂದು ಇತರ ಧರ್ಮೀಯರು ಮೌನಿಗಳಾಗುತ್ತಾರೆ. ಮುಸ್ಲಿಮರ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳೇನು? ಎಂಬುದು ಮುಕ್ತ ವೇದಿಕೆಗಳಲ್ಲಿ ಚರ್ಚೆಯಾಗಬೇಕಿದೆ.      

ಸಾಚಾರ್ ವರದಿಯ ಪ್ರಕಾರ ದಲಿತರಿಗಿಂತ ಮುಸ್ಲಿಮರು ಕೂದಲೆಳೆಯಷ್ಟು ಮಾತ್ರ ಮೇಲಿದ್ದಾರೆ. ಅವಕಾಶ ವಂಚಿತ ಜನ ಸಮುದಾಯಗಳನ್ನು ದೇಶದ ಮುಖ್ಯ ಪ್ರವಾಹದೊಂದಿಗೆ ಕೂಡಿಸಲು, ಸಾಚಾರ್ ವರದಿ ಒತ್ತಾಯಿಸುತ್ತದೆ. ಶೇ. 94.9% ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದಾರೆ. ಶೇ. 60.2ರಷ್ಟು ಭೂಹೀನರಾಗಿದ್ದಾರೆ. ನಗರಗಳಲ್ಲಿ ಶೇ. 54.6ರಷ್ಟು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶೇ. 60.1ರಷ್ಟು ಶಾಲಾ ಶಿಕ್ಷಣ ವಂಚಿತರಾಗಿದ್ದಾರೆ. ಸರ್ಕಾರಿ ಸೇವೆಯಲ್ಲಿ ಕೇವಲ ಶೇ. 4.9ರಷ್ಟು ಮಾತ್ರ ಪ್ರಾತಿನಿಧ್ಯ ಪಡೆದಿದ್ದಾರೆ. ಯಾವುದೇ ಸಮುದಾಯ ಅವಕಾಶ ವಂಚಿತರಾಗುವುದು ಅಮಾನವೀಯ. ರಾಷ್ಟ್ರದ ಲಭ್ಯ ಸಂಪನ್ಮೂಲಗಳು ಎಲ್ಲರವೂ ಆಗಿವೆ. ಅವು ಜನಸಂಖ್ಯಾ ಪ್ರಮಾಣಕ್ಕನುಗುಣವಾಗಿ ಹಂಚಿಕೆಯಾಗಬೇಕು. ಇದುವೇ ಪ್ರಜಾಪ್ರಭುತ್ವದ ತಾತ್ವಿಕ ಬುನಾದಿ. ಆದರೆ ಇಂದಿನ ಸರ್ಕಾರಗಳು ರಾಷ್ಟ್ರದ ಸಂಪತ್ತನ್ನೆಲ್ಲ ಒಂದಿಬ್ಬರು ತಮ್ಮ ಸ್ನೇಹಿತರಿಗೆ ಮಾರಿ ಬಡವರನ್ನು ಹಸಿವಿನಿಂದ ಸಾಯಿಸುತ್ತಿದೆ.

ಇದನ್ನು ಓದಿದ್ದೀರಾ? ಸ್ವಾತಂತ್ರ್ಯ 75| ಸತ್ಯ ಹೇಳಿದವರನ್ನು, ಪ್ರಶ್ನೆ ಮಾಡಿದವರನ್ನು ಬೇಟೆಯಾಡಿದ ಕಾಲ!

Image
ಬಾಬ್ರಿ ಮಸೀದಿ ದ್ವಂಸದ ನಂತರ ನಡೆದ ಗಲಭೆಯ ಚಿತ್ರ
ಬಾಬ್ರಿ ಮಸೀದಿ ದ್ವಂಸದ ನಂತರ ನಡೆದ ಗಲಭೆಯ ಚಿತ್ರ

ಗುಜರಾತಿನ ಮುಸ್ಲಿಮರ ಬರ್ಬರ, ಸಾಮೂಹಿಕ ಹತ್ಯಾಕಾಂಡ, ಬಾಬ್ರಿ ಮಸೀದಿಯ ಧ್ವಂಸದ ನಂತರ ನಡೆದ ಗಲಭೆ, ರಕ್ತಪಾತಗಳಿಂದ ದೇಶದ ಪ್ರತಿಯೊಬ್ಬ ಮುಸ್ಲಿಮನ ಮನದಲ್ಲಿ ನಾನು ಯಾರು? ನನ್ನನ್ನೇಕೆ ಪ್ರತ್ಯೇಕಿಸಲಾಗುತ್ತಿದೆ? ಎಂಬ ಪ್ರಶ್ನೆ ಅವರ ಕಣ್ಣ ಮುಂದೆ ನಿಲ್ಲುತ್ತದೆ. ಸಾಮಾಜಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ಭೂಮಿಯ ಮೇಲಿನ ಹಕ್ಕು ದಲಿತರಿಗಿಂತ ಕನಿಷ್ಠವಾಗಿದೆ. ಆ ಕಾರಣಕ್ಕೂ ಅವರು ತಬ್ಬಲಿ ಗುಂಪಾಗುತ್ತಿದ್ದಾರೆ. ಇಂದಿಗೂ ಭಾರತದ ದಲಿತರು, ಮುಸ್ಲಿಮರು, ಬುಡಕಟ್ಟು ಸಮುದಾಯಗಳು ಸಂವಿಧಾನ ನೀಡಿರುವ ಹಕ್ಕುಗಳಾದ, ಜೀವನೋಪಾಯ, ಕೆಲಸ, ವಸತಿ, ಶಿಕ್ಷಣ, ಆರೋಗ್ಯ ಮತ್ತು ಆಹಾರಕ್ಕಾಗಿ ಹೋರಾಡಲೇಬೇಕಾದ ಪರಿಸ್ಥಿತಿಯಿದೆ. ಸಂವಿಧಾನದತ್ತ ಹಕ್ಕುಗಳೂ ದಕ್ಕುತ್ತಿಲ್ಲ. ಅದನ್ನು ಗಳಿಸಲು ಅವರು ರಾಜಕೀಯ ಬಲವನ್ನು ಗಳಿಸುವ ಅನಿವಾರ್ಯತೆಯಿದೆ.

ಮುಸ್ಲೀಮರ ಮಾನವ ಹಕ್ಕುಗಳ ದಮನವಾಗುತ್ತಿವೆ. ಗುಜರಾತಿನ ಗಲಭೆಗಳಲ್ಲಿ ನೊಂದವರಿಗೆ ಮೊಕದ್ದಮೆ ಹೂಡದಂತೆ, ಮೊಕದ್ದಮೆ ಹೂಡಿದರೆ ಹಿಂಪಡೆಯುವಂತೆ ಒತ್ತಡ ತರಲಾಗುತ್ತಿತ್ತು. ಸಾಕ್ಷಿಗಳನ್ನು ತಿರುಚಿದ್ದಾರೆ. ವಿವಿಧ ಬಗೆಯ ಬೆದರಿಕೆಗಳಿಂದ ನೊಂದವರ ಬಾಯಿ ಮುಚ್ಚಿಸಲಾಗಿದೆ. ಸಾಕ್ಷ್ಯಗಳನ್ನು ನಾಶಪಡಿಸಲಾಗುತ್ತಿದೆ. ಝಹೀರಾಶೇಕ ಪ್ರಕರಣ ಮುಚ್ಚಿ ಹಾಕಿರುವುದನ್ನು ಪುನಃ ಆರಂಭಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಝಹೀರಾ ಶೇಖ(ಫ್ರಂಟ್ ಲೈನ್ ಅಗಸ್ಟ್ 2003) ರವರು ಪತ್ರಿಕಾ ಸಂದರ್ಶನದಲ್ಲಿ ಹೇಳುತ್ತಾರೆ. ‘‘ನನ್ನ ಮನೆಗೆ ಸಮನ್ಸ್ ಬಂದಾಗ ನಾನು ತೀವ್ರ ಒತ್ತಡಕ್ಕೊಳಗಾಗಿದ್ದೆ. ನನ್ನ ಸರ್ಕಾರಿ ನ್ಯಾಯವಾದಿಗಳು ಯಾರೆಂಬುದೂ ನನಗೆ ತಿಳಿದಿರಲಿಲ್ಲ. ಇನ್ನೊಂದೆಡೆ ನನಗೆ ಕೊಲೆ ಬೆದರಿಕೆಗಳು ಬರುತ್ತಿದ್ದವು. ನ್ಯಾಯಾಲಯಕ್ಕೆ ಹೋದರೂ ನಮ್ಮ ಪರವಾಗಿಯೇ ಮಾತನಾಡು ಎಂದು ಹೇಳುತ್ತಿದ್ದರು. ಅಪರಾಧಿಗಳನ್ನು ಗುರುತಿಸಬೇಡ, ಹಾಗೇನಾದರೂ ಗುರುತಿಸಿದಲ್ಲಿ ನಿನ್ನ ಇಡೀ ಸಂಸಾರ ನಿರ್ನಾಮವಾಗುತ್ತದೆ ಎಂದು ಹೆದರಿಸುತ್ತಿದ್ದರು’’ ಎನ್ನುತ್ತಾರೆ.  ಮುಸ್ಲಿಮರು ಎಂತಹ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ! ಮಹಿಳೆಯರು ಅನ್ಯಾಯದ ವಿರುದ್ಧ ಧ್ವನಿಯೆತ್ತಲಾರದ, ಎತ್ತಿದರೆ ಬದುಕು ದಕ್ಕಲಾರದ ಸ್ಥಿತಿಯಲ್ಲಿದ್ದಾರೆ. ಈಗ ಹೇಳಿ ನಮಗೆ ಅಮೃತದ ಸವಿ ಸಿಗುವುದೇ?!

ನಿಮಗೆ ಏನು ಅನ್ನಿಸ್ತು?
2 ವೋಟ್