ಭಾರತದ ತ್ರಿವರ್ಣ ಧ್ವಜದ ವಿನ್ಯಾಸಕಾರರು ಪಿಂಗಳಿ ವೆಂಕಯ್ಯರಾ, ಸುರಯ್ಯ ತಯ್ಯಬ್ಜಿಯಾ?

Fag 1

ಭಾರತದ ತ್ರಿವರ್ಣ ಧ್ವಜದ ವಿನ್ಯಾಸಕರು ಯಾರು ಎಂಬ ಗೊಂದಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಗೂಗಲ್‌ನಲ್ಲಿ ಹುಡುಕಿದಾಗ ಪಿಂಗಳಿ ವೆಂಕಯ್ಯ ಎನ್ನುವ ಹೆಸರು ಬರುತ್ತದೆ. ಜೊತೆಗೆ ‘ಸುರಯ್ಯ ತಯ್ಯಬ್ಜಿ’ ಎನ್ನುವ ಹೆಸರೂ ತೋರಿಸುತ್ತದೆ. ಆದರೆ, ಪಿಂಗಳಿ ವೆಂಕಯ್ಯ ಹೆಸರನ್ನು ಅಧಿಕೃತವಾಗಿಯೂ, ಸುರಯ್ಯ ಹೆಸರನ್ನು ಅನುಮಾನದಲ್ಲಿಯೂ ತೋರಿಸಲಾಗುತ್ತದೆ

ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ದತೆ ನಡೆಸುತ್ತಿದೆ. ಇದರ ಭಾಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂಬ ಅಭಿಯಾನವನ್ನು ಪ್ರಾರಂಭಿಸಿದೆ. ದೇಶದಲ್ಲಿ ತ್ರಿವರ್ಣ ಧ್ವಜಕ್ಕೆ ಶ್ರದ್ದೆ, ಭಕ್ತಿ, ಪ್ರೀತಿ ಮತ್ತು ಇಷ್ಟೊಂದು ಗೌರವ ತೋರಿಸುತ್ತಿರುವ ಈ ಹೊತ್ತಿನಲ್ಲಿ  ತ್ರಿವರ್ಣ ಧ್ವಜವನ್ನು ವಿನ್ಯಾಸ ಮಾಡಿದವರ ಬಗ್ಗೆ ತಿಳಿಯುವ ಕುತೂಹಲ ಇದ್ದೇ ಇರುತ್ತದೆ.

ಹಾಗಾದರೆ, ಇದಕ್ಕೆ ಉತ್ತರವನ್ನು ಗೂಗಲ್‌ನಲ್ಲಿ ಹುಡುಕಿದಾಗ ನಮಗೆ ಪಿಂಗಳಿ ವೆಂಕಯ್ಯ ಎನ್ನುವ ಹೆಸರು ಬರುತ್ತದೆ. ಇದರ ಜೊತೆಗೆ ಅಲಲ್ಲಿ ‘ಸುರಯ್ಯ ತಯ್ಯಬ್ಜಿ’ ಎನ್ನುವ ಮತ್ತೊಂದು ಹೆಸರು ಕೂಡ ತೋರಿಸುತ್ತದೆ. ಆದರೆ, ಪಿಂಗಳಿ ವೆಂಕಯ್ಯ ಅವರ ಹೆಸರನ್ನು ಅಧಿಕೃತವಾಗಿದ್ದರೂ, ಈ ಸುರಯ್ಯ ಎನ್ನುವ ಹೆಸರನ್ನು ಅನುಮಾನದಲ್ಲಿ ತೋರಿಸಲಾಗುತ್ತದೆ.

ಹಾಗಾದರೇ, ಈ ಸುರಯ್ಯ ಯಾರು..? ನಮ್ಮ ತ್ರಿವರ್ಣ ಧ್ವಜದ ರಚನೆಯ ಹಿಂದೆ ಅವರ ಹೆಸರು ಬಂದು ಸೇರಿಕೊಳ್ಳಲು ಕಾರಣವನ್ನು ಈ ದಿನ.ಕಾಮ್ ಈ ವರದಿಯಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಿದೆ.

ನಮ್ಮ ರಾಷ್ಟ್ರಧ್ವಜದ ಇತಿಹಾಸ

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು 1921ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಸಭೆಯಲ್ಲಿ ರಾಷ್ಟ್ರಧ್ವಜದ ಅಗತ್ಯ ಬಗ್ಗೆ ಪ್ರಸ್ತಾಪಿಸಿ, ನಮ್ಮ ರಾಷ್ಟ್ರಧ್ವಜದ ಮಹತ್ವವನ್ನು ಸಭೆಯಲ್ಲಿ ಮಂಡಿಸಿದ್ದರು. ಅದರಂತೆ ಬಹುಸಂಖ್ಯಾತ ಹಿಂದೂಗಳನ್ನು ಪ್ರತಿನಿಧಿಸಲು ಕೆಂಪು ಬಣ್ಣವನ್ನು, ಮುಸಲ್ಮಾನ ಅಲ್ಪಸಂಖ್ಯಾತರಿಗೆ ಹಸಿರು ಬಣ್ಣವನ್ನು ಹಾಗೂ ಭಾರತದಲ್ಲಿದ್ದ ಇತರ ಧರ್ಮಗಳ ಪ್ರತಿನಿಧಿಸಲು ಬಿಳಿ ಬಣ್ಣವನ್ನು ಅಳವಡಿಸಿಕೊಂಡು ತ್ರಿವರ್ಣ ಧ್ವಜದ ಮಧ್ಯ ಚರಕ ಅಥವಾ ನೂಲುವ ಚಕ್ರವನ್ನು ಅಳವಡಿಸಬೇಕೆಂಬ ಆಶಯವನ್ನು ಸ್ಪಷ್ಟಪಡಿಸಿದ್ದರು. ಇದರ ಆಧಾರದ ಮೇಲೆ ಆಂಧ್ರಪ್ರದೇಶದ ಕಾಂಗ್ರೆಸ್‌ ಸದಸ್ಯ ಪಿಂಗಲಿ ವೆಂಕಯ್ಯ ಮೊಟ್ಟಮೊದಲ ಭಾರಿಗೆ ಧ್ವಜವನ್ನು ವಿನ್ಯಾಸಗೊಳಿಸುತ್ತಾರೆ.

Image
ಪಿಂಗಳೆ ವೆಂಕಯ್ಯ
ಪಿಂಗಳಿ ವೆಂಕಯ್ಯ

ಇದರ ಬಗ್ಗೆ ಭಾರತದ ಹಿರಿಯ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಸೆಪ್ಟೆಂಬರ್ 26, 2004 ರಂದು ‘ದಿ ಹಿಂದೂ ಪತ್ರಿಕೆಯಲ್ಲಿ’ 'ಟ್ರೂತ್ಸ್ ಎಬೌಟ್ ದಿ ತ್ರಿವರ್ಣ' ಎಂಬ ಶೀರ್ಷಿಕೆ ಅಡಿಯಲ್ಲಿ ಬರೆದಿರುವ ಲೇಖನದಲ್ಲಿ “1931ರಲ್ಲಿ ರಚನೆಯಾಗಿದ್ದ, ಕಾಂಗ್ರೆಸ್‌ನ ಧ್ವಜ ಸಮಿತಿಯು ಪಿಂಗಳಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದ್ದ ಧ್ವಜಕ್ಕೆ ಬದಲಾವಣೆ ಮಾಡಿ, ಕೆಂಪು ಬಣ್ಣದ ಬದಲಾಗಿ ಕೇಸರಿಯನ್ನಾಗಿ ಪರಿವರ್ತಿಸಿ ಇಂದಿನ ತ್ರಿವರ್ಣ ಧ್ವಜದ ರೂಪಕ್ಕೆ ಬದಲಾಯಿಸಲಾಯಿತು" ಎಂದು ಬರೆದಿದ್ದಾರೆ.

ಅಂದಿನಿಂದ 1947 ಜುಲೈ 22ರವರೆಗೆ ಇದೇ ಮಾದರಿಯ ರಾಷ್ಟ್ರಧ್ವಜವು ನಮ್ಮಲ್ಲಿ ಬಳಕೆಯಲ್ಲಿತ್ತು. 1947 ರಲ್ಲಿ ದೇಶದ ವಿಭಜನೆಯ ನಂತರ, 200 ವರ್ಷಗಳ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ದೇಶಕ್ಕೆ ರಾಷ್ಟ್ರೀಯ ಲಾಂಛನವು ಅತ್ಯಂತ ಮಹತ್ವದ್ದಾಗಿತ್ತು. ಸಂವಿಧಾನ ಸಭೆಯು 300 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಕ್ಕೆ ರಾಷ್ಟ್ರೀಯ ಲಾಂಛನದ ಅಗತ್ಯವಿದೆ ಎಂದು ಅರಿತುಕೊಂಡ ಜವಾಹರಲಾಲ್ ನೆಹರು ಅವರು ನಮ್ಮ ರಾಷ್ಟ್ರೀಯ ಲಾಂಛನದ ವಿನ್ಯಾಸದೊಂದಿಗೆ ಬರುವ ಜವಾಬ್ದಾರಿಯನ್ನು ಬದ್ರುದ್ದೀನ್ ತ್ಯಾಬ್ಜಿ ಅವರಿಗೆ ವಹಿಸಿದರು.

ಬದ್ರುದ್ದೀನ್ ತ್ಯಾಬ್ಜಿ ಅವರು ಡಾ. ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಧ್ವಜ ಸಮಿತಿಯನ್ನು ಸ್ಥಾಪಿಸಿ, ದೇಶದ ಪ್ರಸಿದ್ದ ಕಲಾ ಶಾಲೆಗಳಿಗೆ ವಿನ್ಯಾಸಗಳನ್ನು ಸಿದ್ಧಪಡಿಸುವಂತೆ ಪತ್ರಗಳನ್ನು ಕಳುಹಿಸಿದರು. ಇದರನ್ವಯ ನೂರಾರು ಮಂದಿ ನೂರಾರು ವಿನ್ಯಾಸಗಳನ್ನು ತಂದರು. ಬಹುಪಾಲು ವಿನ್ಯಾಸಗಳು ಬ್ರಿಟಿಷ್ ಲಾಂಛನದಿಂದ ಪ್ರಭಾವಿತಗೊಂಡಿದ್ದವು. ಆದರೆ, ಧ್ವಜ ಸಮಿತಿಯಲ್ಲಿದ್ದ ಯಾರೂ ಕೂಡ ಬ್ರಿಟಿಷ್ ಚಿತ್ರಗಳನ್ನು ಬಳಸಲು ಇಷ್ಟಪಡಲಿಲ್ಲ.

ಕೊನೆಗೆ ಜವಾಹರಲಾಲ್ ನೆಹರು ಅವರ ಆಪ್ತ ವಲಯದಲ್ಲಿದ್ದ ಬದ್ರುದ್ದೀನ್ ತ್ಯಾಬ್ಜಿ ಅವರಿಗೆ ಡಾ. ರಾಜೇಂದ್ರ ಪ್ರಸಾದ್ ಅವರು ಇದರ ಜವಾಬ್ದಾರಿಯನ್ನು ವಹಿಸಿದರು. ಈ ಸಂದರ್ಭದಲ್ಲಿ ಬದ್ರುದ್ದೀನ್ ತ್ಯಾಬ್ಜಿ ಅವರು ತಮ್ಮ ಪತ್ನಿ ಸುರಯ್ಯ ಅವರೊಂದಿಗೆ ರಾಷ್ಟ್ರೀಯ ಲಾಂಛನದ ಬಗ್ಗೆ ಪ್ರಸ್ತಾಪಿಸಿದಾಗ ಅವರು ಆನೆ, ಹುಲಿ, ಸಿಂಹ, ಜಿಂಕೆ ಮತ್ತು ಹಂಸ, ಕಿರೀಟ, ಕಮಲ, ಕಲಶ ಮುಂತಾದ ಯೂನಿಕಾರ್ನ್‌ಗಳನ್ನು ಬಳಸಿ ಏನ್ನೆಲ್ಲಾ ಪ್ರಯತ್ನ ಪಟ್ಟು, ಕೊನೆಗೆ ಅಶೋಕ ಸ್ತಂಭದಲ್ಲಿರುವ ಸಿಂಹಗಳು ಮತ್ತು ಚಕ್ರ ಇರುವ ಚಿಹ್ನೆಯನ್ನು ಅಂತಿಮಗೊಳಿಸಿ ಪ್ರಸ್ತುತ ರಾಷ್ಟ್ರಪತಿ ನಿವಾಸದಲ್ಲಿ ಅದನ್ನು ಮುದ್ರಿಸಿದರು ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಇಂಗ್ಲಿಷ್ ಇತಿಹಾಸಕಾರರಾದ ಟ್ರೆವರ್ ರಾಯ್ಲ್ ಎಂಬುವವರು ತಮ್ಮ ‘ದಿ ಲಾಸ್ಟ್ ಡೇಸ್ ಆಫ್ ದಿ ರಾಜ್’ ಎಂಬ ಪುಸ್ತಕದಲ್ಲಿ ಭಾರತದ ರಾಷ್ಟ್ರಧ್ವಜವು ಹೇಗೆ ಅಸ್ತಿತ್ವಕ್ಕೆ ಬಂದಿತು ಎಂಬುದನ್ನು ಉಲ್ಲೇಖಿಸಿ “ಜುಲೈ 17, 1947ರಲ್ಲಿ ಭಾರತದ ತ್ರಿವರ್ಣ ಧ್ವಜವು ಗಾಂಧಿಯವರು ಬಳಸುತ್ತಿದ್ದ ನೂಲುವ ಚಕ್ರದ ಚಿಹ್ನೆಯನ್ನು (ಚರಕ) ಹೊಂದಿತ್ತು, ಆದರೆ, ಇದು ಕಾಂಗ್ರೆಸ್ ಪಕ್ಷದ ಚಿಹ್ನೆಯಾಗಿದ್ದರಿಂದ ದೇಶದ ಜನರಲ್ಲಿ ತಪ್ಪು ಭಾವನೆ ಮೂಡಬಾರದು ಎನ್ನುವ ಉದ್ದೇಶದಿಂದ ಧ್ವಜ ಸಮಿತಿಯು ಇದನ್ನು ಬದಲಾಯಿಸಲು ನಿರ್ಧರಿಸಿತ್ತು.

Image
ಅಧಿಕೃತ ಧ್ವಜವನ್ನು ಮೊದಲ ಬಾರಿಗೆ ಪ್ರದರ್ಶಿಸಿದ ನೆಹರು
ಅಧಿಕೃತ ಧ್ವಜವನ್ನು ಮೊದಲ ಬಾರಿಗೆ ಪ್ರದರ್ಶಿಸಿದ ನೆಹರು

ಚಕ್ರವರ್ತಿ ಸಾಮ್ರಾಟ್ ಅಶೋಕ ಬೃಹತ್ತಾಗಿ ಹರಡಿದ್ದ ತನ್ನ ಸಾಮ್ರಾಜ್ಯದಲ್ಲಿ ಹಿಂದೂ ಮತ್ತು ಮುಸಲ್ಮಾನರನ್ನು ಸಮಾನವಾಗಿ ಕಾಣುತ್ತಿದ್ದರಿಂದ ಅಶೋಕ ಸ್ತಂಭದಲ್ಲಿದ್ದ ಚಿಹ್ನೆಯನ್ನು ಬಳಸಿಕೊಳ್ಳಲು ತೀರ್ಮಾನಿಸಿ ಗಾಂಧೀಜಿಯವರ ಮನವೊಲಿಕೆ ಮಾಡಲಾಯಿತು. ಕೊನೆಗೆ ಭಾರತವು ಸ್ವತಂತ್ರಗೊಂಡ ನಂತರ ನೆಹರು ಅವರು ತಮ್ಮ ಕಾರಿನ ಮೇಲೆ ಹಾರಿಸಿದ್ದು ಸುರಯ್ಯ ತ್ಯಾಬ್ಜಿ ಅವರು ತಯಾರಿಸಿದ್ದ ಧ್ವಜವೆಂದು” ಹೇಳಿದ್ದಾರೆ.

ಟ್ರೆವರ್ ರಾಯಲ್ ಪ್ರಕಾರ, ಧ್ವಜದ ಅಂತಿಮ ವಿನ್ಯಾಸದ ಕಲ್ಪನೆಯನ್ನು ಮಂಡಿಸಿದವರು ಬದ್ರುದ್ದೀನ್ ತ್ಯಾಬ್ಜಿ. ಆದಾಗ್ಯೂ, ಹೈದರಾಬಾದ್‌ನ ಇತಿಹಾಸಕಾರ ಕ್ಯಾಪ್ಟನ್ ಎಲ್ ಪಾಂಡುರಂಗ ರೆಡ್ಡಿ ಅವರು ತಮ್ಮ ಸಂಶೋಧನೆಯ ಮೂಲಕ ಅಂತಿಮ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಅವರ ಪತಿಯೇ ಹೊರತು ಸುರಯ್ಯ ತ್ಯಾಬ್ಜಿ ಅಲ್ಲ ಎಂದು ವಾದಿಸಿದರು. ಭಾರತದ ಸಂವಿಧಾನ ಸಭೆಯ ಚರ್ಚೆಗಳ ಸಂಪೂರ್ಣ ಸಂಶೋಧನೆಯು ಧ್ವಜ ಪ್ರಸ್ತುತಿ ಸಮಿತಿಯ ಸದಸ್ಯರ ದಾಖಲೆಗಳು ಮತ್ತು ಹೆಸರನ್ನು ತೋರಿಸುತ್ತದೆ, ಅಲ್ಲಿ ಸುರಯ್ಯ ತ್ಯಾಬ್ಜಿ ಅವರು ನಿಜವಾಗಿಯೂ ಉಲ್ಲೇಖಿಸಿದ್ದಾರೆ, ಅವರ ಕೊಡುಗೆಯನ್ನು ನಮ್ಮ ಇತಿಹಾಸದಿಂದ ಹೇಗೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಮತ್ತು ಅಳಿಸಲಾಗಿದೆ ಎಂಬುದು ನಿರಾಶಾದಾಯಕವಾಗಿದೆ

ಸುರಯ್ ತಯ್ಯಬ್ಜಿ ಯಾರು?

ಹೆಸರಾಂತ ಕಲಾವಿದರಾಗಿದ್ದ ಸುರಯ್ ತ್ಯಾಬ್ಜಿ ಅವರು 1919 ರಲ್ಲಿ ಹೈದರಾಬಾದ್‌ನ ಪ್ರಸಿದ್ಧ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಇವರು ಕಲಾತ್ಮಕ ಮತ್ತು ಬಹು-ಪ್ರತಿಭಾವಂತರಾಗಿದ್ದು, ಬಣ್ಣ, ಅಡುಗೆ, ಹೊಲಿಗೆ, ಸವಾರಿ, ಈಜು ಮತ್ತು ಕುಟುಂಬದ ಹೂಡಿಕೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು ಎಂದು ಇವರ ಮಗಳು ಹೇಳಿಕೊಂಡಿದ್ದಾರೆ. ಇವರ ಪತಿ ಬದ್ರುದ್ದೀನ್ ತ್ಯಾಬ್ಜಿ ನೆಹರು ಆಪ್ತ ವಲಯದಲ್ಲಿ ಗುರುತಿಸಿಕೊಂಡು, ವಿದೇಶಿ ರಾಜತಾಂತ್ರಿಕರಾಗಿ, ಹೆಸರಾಂತ ವಕೀಲರಾಗಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.

Image
surayya

ಇತಿಹಾಸಕಾರರು ಮತ್ತು ದಾಖಲೆಗಳು ಹೇಳುವುದು ಏನು?

1947ರ ಆಗಸ್ಟ್ 14ರಂದು ರಾಷ್ಟ್ರಧ್ವಜ ಪ್ರಸ್ತುತಪಡಿಸಿದ ಸಮಿತಿಯ ಸದಸ್ಯರ ಪಟ್ಟಿಯಲ್ಲಿ ಪಿಂಗಲಿ ವೆಂಕಯ್ಯನವರ ಹೆಸರು ಹಾಗೂ ಸುರಯ್ಯ ತ್ಯಾಬ್ಜಿಯವರ ಹೆಸರು ಸಂಸತ್ತಿನ ದಾಖಲೆಗಳಲ್ಲಿ ಇವೆ. ಆದರೆ, ಇವರೇ, ಅದನ್ನು ವಿನ್ಯಾಸಗೊಳಿಸಿದರು ಎಂದು ಸ್ಪಷ್ಟವಾಗಿ ಹೇಳಿಲ್ಲ. ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾದ ಎಂಬ ಎನ್‌ಜಿಒ ಸಂಸ್ಥೆಯ ಸಂಶೋಧನೆಯ ಪ್ರಕಾರ, “ಸುರೈಯಾ ಬದ್ರ್-ಉದ್-ದಿನ್ ತ್ಯಾಬ್ಜಿ ಅವರು ಭಾರತೀಯ ರಾಷ್ಟ್ರಧ್ವಜದ ವಿನ್ಯಾಸಕರಾಗಿದ್ದು, ಸಂವಿಧಾನ ಸಭೆಯು ಇವರ ಹೆಸರನ್ನು ಅನುಮೋದಿಸಿತು” ಎಂದು ಹೇಳಿದೆ.

ಇದನ್ನು ಓದಿದ್ದೀರಾ?ಸ್ವಾತಂತ್ರ್ಯ 75|ಕಾರ್ಮಿಕರ ʼನೆಮ್ಮದಿಯ ನಾಳೆʼಗಳು ಏನಾದವು?

ಹೈದರಾಬಾದ್‌ನ ಇತಿಹಾಸಕಾರ ಕ್ಯಾಪ್ಟನ್ ಎಲ್ ಪಾಂಡುರಂಗ ರೆಡ್ಡಿ ಅವರು, ಬ್ರಿಟಿಷ್ ಲೇಖಕ ಟ್ರೆವರ್ ರಾಯ್ಲ್ ಅವರ 'ದಿ ಲಾಸ್ಟ್ ಡೇಸ್ ಆಫ್ ದಿ ರಾಜ್' ಪುಸ್ತಕವನ್ನು ಉಲ್ಲೇಖಿಸಿ, "ರಾಷ್ಟ್ರಧ್ವಜವನ್ನು ಬದ್ರ್-ಉದ್-ದಿನ್ ತ್ಯಾಬ್ಜಿ ಎನ್ನುವ ಮುಸ್ಲಿಂ ದಂಪತಿಗಳಿಂದ ವಿನ್ಯಾಸಗೊಳಿಸಲಾಗಿದ್ದು, ಸ್ವಾತಂತ್ರ್ಯ ಪಡೆದ ರಾತ್ರಿ ನೆಹರೂ ಅವರ ಕಾರಿನ ಮೇಲೆ ತ್ಯಾಬ್ಜಿಯವರ ತಯಾರಿಸಿದ್ದ ಧ್ವಜ ಹಾರಾಡಿತ್ತು ಎಂದು ಹೇಳಿದ್ದಾರೆ.

ಇತಿಹಾಸಕಾರ ಸೈಯದ್ ಇರ್ಫಾನ್ ಹಬೀಬ್ ಅವರು "ಇದು ಇನ್ನೂ ಬಗೆಹರಿಸಲಾಗದ ವಿವಾದಾತ್ಮಕ ವಿಷಯವಾಗಿದ್ದು, ಇದರ ಬಗ್ಗೆ ಯಾವುದೇ ಘನ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲದ ಕಾರಣ, ಹಕ್ಕುಗಳು ಮತ್ತು ಪ್ರತಿವಾದಗಳು ಹಾರಾಡುತ್ತಲೇ ಇರುತ್ತವೆ. ಆದ್ದರಿಂದ ಇತಿಹಾಸಕಾರರು ಇದರ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ, ಪಿಂಗಲಿ ವೆಂಕಯ್ಯ ಮತ್ತು ಸುರಯ್ಯ ತ್ಯಾಬ್ಜಿ ಅವರ ಕುಟುಂಬದವರ ಹಕ್ಕುಗಳನ್ನು ನಾವು ಅಲ್ಲಗಳೆಯುವಂತಿಲ್ಲ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಭಾರತವು ಸ್ವಾತಂತ್ರಗೊಂಡು 75 ವರ್ಷ ಪೂರೈಸಿದ್ದರೂ, ತ್ರಿವರ್ಣ ಧ್ವಜದ ವಿನ್ಯಾಸಕಾರರು ಯಾರು? ಎಂಬುದಕ್ಕೆ ಸರಿಯಾದ ಉತ್ತರ ದೊರೆತಿಲ್ಲ. ಪಿಂಗಳಿ ವೆಂಕಯ್ಯ ಮತ್ತು ಸುರಯ್ಯ ತ್ಯಾಬ್ಜಿ ಅವರಿಬ್ಬರೂ ಧ್ವಜ ವಿನ್ಯಾಸವನ್ನು ತಯಾರಿಸಲು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿರುವ ಹಿನ್ನೆಲೆಯಲ್ಲಿ. ಈ ಇಬ್ಬರನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

ನಿಮಗೆ ಏನು ಅನ್ನಿಸ್ತು?
5 ವೋಟ್