ಸ್ವಾತಂತ್ರ್ಯ 75 | ಸತ್ಯ ಹೇಳಿದವರನ್ನು, ಪ್ರಶ್ನೆ ಮಾಡಿದವರನ್ನು ಬೇಟೆಯಾಡಿದ ಕಾಲ!

Freedom of Press

ಕಳೆದೊಂದು ದಶಕದಲ್ಲಿ ಭಾರತದಲ್ಲಿ ಪತ್ರಕರ್ತರು ಎದುರಿಸಿದ ನೋವು ಮತ್ತು ಆತಂಕವನ್ನು ಪರಿಗಣಿಸಿದಲ್ಲಿ ವಿಧಾನಗಳ ಬಗ್ಗೆ ಆಲೋಚಿಸದೆ ವಾಸ್ತವ ನೋಡುವ ಅಗತ್ಯವಿದೆ. ಪತ್ರಕರ್ತರ ಕೊಲೆ, ದೈಹಿಕ ಹಲ್ಲೆ, ಜೈಲಿಗೆ ತಳ್ಳಿರುವುದು, ಜಾಮೀನು ನಿರಾಕರಣೆ ಮೊದಲಾದ ಎಲ್ಲಾ ರೀತಿಯ ಬೆಳವಣಿಗೆಗಳಿಗೂ ದೇಶ ಸಾಕ್ಷಿಯಾಗಿದೆ

ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಹೊಸ್ತಿಲಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಸತತ ಕುಸಿತ ದಾಖಲಿಸುತ್ತಾ ಬಂದಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2022 ಪ್ರಕಾರ ಭಾರತದ ರ‍್ಯಾಂಕ್ ಈ ವರ್ಷ 142ನೇ ಸ್ಥಾನದಿಂದ 150ನೇ ಸ್ಥಾನಕ್ಕೆ ಕುಸಿದಿದೆ. 180 ದೇಶಗಳ ಪೈಕಿ ಭಾರತಕ್ಕೆ 150ನೇ ಸ್ಥಾನ.

ಸೂಚ್ಯಂಕವು ದೇಶವನ್ನು ಮಾಧ್ಯಮ ಕಾರ್ಯನಿರ್ವಹಿಸಲು ಅತೀ ಅಪಾಯಕಾರಿಯಾದ ಪ್ರದೇಶ ಎಂದು ಹೇಳಿದೆ. ಆದರೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಈ ಸೂಚ್ಯಂಕವನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. ಸೂಚ್ಯಂಕವನ್ನು ನಿರ್ಧರಿಸಲು ಬಳಸಿದ ವಿಧಾನ ಸರಿಯಿಲ್ಲ ಎಂದು ನೆಪ ಹೇಳಿದೆ. ಕಳೆದೊಂದು ದಶಕದಲ್ಲಿ ಭಾರತದಲ್ಲಿ ಪತ್ರಕರ್ತರು ಎದುರಿಸಿದ ನೋವು ಮತ್ತು ಆತಂಕವನ್ನು ಪರಿಗಣಿಸಿದಲ್ಲಿ ವಿಧಾನದ ಬಗ್ಗೆ ಆಲೋಚಿಸದೆ ವಾಸ್ತವ ನೋಡುವ ಅಗತ್ಯವಿದೆ. ಪತ್ರಕರ್ತರ ಕೊಲೆ, ದೈಹಿಕ ಹಲ್ಲೆ, ಜೈಲಿಗೆ ತಳ್ಳಿರುವುದು ಮೊದಲಾಗಿ ಎಲ್ಲಾ ರೀತಿಯ ಬೆಳವಣಿಗೆಗಳಿಗೂ ದೇಶ ಸಾಕ್ಷಿಯಾಗಿದೆ.

ನಂಬರ್ 2 ಅಪಾಯಕಾರಿ ರಾಜ್ಯ ಉತ್ತರ ಪ್ರದೇಶ

AV Eye Hospital ad

ಜಮ್ಮು ಮತ್ತು ಕಾಶ್ಮೀರದ ನಂತರ ದೇಶದಲ್ಲಿ ಪತ್ರಕರ್ತರಿಗೆ ಅತಿ ಹೆಚ್ಚು ಅಪಾಯಕಾರಿ ರಾಜ್ಯ ಉತ್ತರ ಪ್ರದೇಶ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಭದ್ರತೆಯ ಕಾರಣವೊಡ್ಡಿ ಸ್ವಾತಂತ್ರ್ಯ ಹತ್ತಿಕ್ಕಿರುವುದನ್ನು ಸಮರ್ಥಿಸಲಾಗುತ್ತಿದೆ. ಆದರೆ, ಬಿಜೆಪಿ ಕಳೆದ ಆರು ವರ್ಷಗಳಿಂದ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಕೇವಲ ಎರಡು ವರ್ಷಗಳಲ್ಲಿ ಬಂಧನಕ್ಕೊಳಗಾದ ಅಥವಾ ಕೊಲೆಯಾದ ಪತ್ರಕರ್ತರ ವಿವರ ನೋಡಿದಲ್ಲಿ, ಮಾಧ್ಯಮ ಸ್ವಾತಂತ್ರ್ಯ ಹರಣದ ಪ್ರಮಾಣ ಅರಿವಾಗುತ್ತದೆ.

ಪತ್ರಕರ್ತರ ಮೇಲೆ ಹಲ್ಲೆ ವಿರುದ್ಧ ಸಮಿತಿಯ ವರದಿ ಪ್ರಕಾರ, 2017ರಿಂದೀಚೆಗೆ ಉತ್ತರ ಪ್ರದೇಶದಲ್ಲಿ 48 ಪತ್ರಕರ್ತರ ಮೇಲೆ ಹಲ್ಲೆಯಾಗಿದೆ, 66 ಪತ್ರಕರ್ತರ ಮೇಲೆ ಪ್ರಕರಣ ದಾಖಲು ಅಥವಾ ಬಂಧಿಸಲಾಗಿದೆ ಮತ್ತು 12 ಪತ್ರಕರ್ತರು ಕೊಲೆಯಾಗಿದ್ದಾರೆ.

Mohammed Zubair

ಮೊಹಮ್ಮದ್ ಝುಬೇರ್

ಇತ್ತೀಚೆಗೆ ದೇಶಾದ್ಯಂತ ಸುದ್ದಿಯಾದ ಪ್ರಕರಣ ಪತ್ರಕರ್ತ ಮೊಹಮ್ಮದ್ ಝುಬೇರ್ ಬಂಧನ. ಕ್ಷುಲ್ಲಕ ಕಾರಣ ನೀಡಿ ಬೆದರಿಸುವ ಉದ್ದೇಶದಿಂದ ಅವರನ್ನು ಬಂಧಿಸಿರುವುದು ಮತ್ತು ಹಲವು ದಿನಗಳ ಕಾನೂನು ಹೋರಾಟದ ನಂತರ ಅವರಿಗೆ ಜಾಮೀನು ಸಿಕ್ಕಿರುವುದು ದೇಶ ಮತ್ತು ಉತ್ತರ ಪ್ರದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಹರಣದ ಪರಮಾವಧಿ ಎನ್ನಬಹುದು.

ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ 'ಫ್ಯಾಕ್ಟ್ ಚೆಕ್' ನಡೆಸುವ ದೇಶದ ಖ್ಯಾತ ವೆಬ್‌ಸೈಟ್ 'ಆಲ್ಟ್ ನ್ಯೂಸ್' ಸಂಸ್ಥಾಪಕರಲ್ಲಿ ಒಬ್ಬರಾದ ಪತ್ರಕರ್ತ ಮೊಹಮ್ಮದ್ ಝುಬೇರ್ ಅವರನ್ನು ಜೂನ್ 27ರಂದು ದೆಹಲಿ ಪೊಲೀಸರು ಬಂಧಿಸಿದ್ದರು. 2020ರ ಪ್ರಕರಣವೊಂದರ ತನಿಖೆಗಾಗಿ ಅದಾಗಲೇ ಹೈಕೋರ್ಟ್‌ನಿಂದ ರಕ್ಷಣೆ ಕೋರಿ ಅನುಮತಿ ಪಡೆದಿದ್ದರೂ ದೆಹಲಿಯಲ್ಲಿ ಬಂಧಿಸಲಾಯಿತು. ನಂತರ ಉತ್ತರ ಪ್ರದೇಶದ ಪೊಲೀಸರು ಹಲವು ಪ್ರಕರಣದ ಸಂಬಂಧ ಎಫ್ಐಆರ್ ದಾಖಲಿಸಿದರು. ಸುಪ್ರೀಂಕೋರ್ಟ್‌ವರೆಗೂ ಪ್ರಕರಣ ಹೋದ ನಂತರ ಎಲ್ಲಾ ಪ್ರಕರಣಗಳಿಂದ ಅವರು ಖುಲಾಸೆಗೊಂಡರು.

ಸಿದ್ದಿಕ್ ಕಪ್ಪನ್

1967ರಲ್ಲಿ ತರಲಾದ ಯುಎಪಿಎಗೆ (ಕಾನೂನುಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ) 2019ರಲ್ಲಿ ತಿದ್ದುಪಡಿಯಾದ ನಂತರ ಹಲವು ಪತ್ರಕರ್ತರಿಗೆ ಉರುಳಾಗಿದೆ. ಉತ್ತರ ಪ್ರದೇಶವೊಂದರಲ್ಲೇ 361 ಮಂದಿಯನ್ನು ಈ ಕಾಯ್ದೆಯಡಿ ಬಂಧಿಸಲಾದರೆ, 54 ಮಂದಿ ಶಿಕ್ಷೆಗೆ ಗುರಿಯಾಗಿದ್ದಾರೆ. 2019ರಲ್ಲಿ 42 ವರ್ಷದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರದ ಮಾಹಿತಿ ಪಡೆಯಲು ಹೋದಾಗ ಬಂಧಿಸಲಾಗಿತ್ತು. ಕಳೆದ ವಾರ ಮತ್ತೆ ಅವರಿಗೆ ಜಾಮೀನು ನಿರಾಕರಿಸಲಾಗಿದೆ.

ಝಕೀರ್ ಅಲಿ ತ್ಯಾಗಿ

2020ರಲ್ಲಿ ಪತ್ರಕರ್ತ ಝಕೀರ್ ಅಲಿ ತ್ಯಾಗಿ ಅವರನ್ನು ಗೋಹತ್ಯೆ ನಿಷೇಧ ಕಾನೂನಿನಡಿ ಮೀರತ್‌ನಿಂದ ಮಧ್ಯರಾತ್ರಿಯಲ್ಲಿ ಬಂಧಿಸಲಾಯಿತು. ಸಾಮಾಜಿಕ ಕಾರ್ಯಕರ್ತರೂ ಆಗಿರುವ ಅವರು ಹಿಂದೆ ಹಲವು ಪ್ರಕರಣಗಳಲ್ಲಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಬಂಧನಕ್ಕೆ ಒಳಗಾಗಿದ್ದರು.

ಅಜಿತ್ ಓಝಾ, ದಿಗ್ವಿಜಯ್ ಸಿಂಗ್ ಮತ್ತು ಮನೋಜ್ ಗುಪ್ತಾ

ಕಳೆದ ಮಾರ್ಚ್‌ನಲ್ಲಿ ಉತ್ತರಪ್ರದೇಶದ 12ನೇ ತರಗತಿ ಪರೀಕ್ಷಾ ಪ್ರಶ್ನೆಪತ್ರಿಕ ಸೋರಿಕೆ ಹಗರಣ ಬಯಲಿಗೆಳೆದ ಸ್ಥಳೀಯ ‘ಅಮರ್ ಉಜಾಲ’ ದಿನಪತ್ರಿಕೆಯ ಪತ್ರಕರ್ತ ಅಜಿತ್ ಓಝಾ, ದಿಗ್ವಿಜಯ್ ಸಿಂಗ್ ಮತ್ತು ಮನೋಜ್ ಗುಪ್ತಾ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಲಾಗಿತ್ತು. ನಕಲಿ ಎನ್‌ಕೌಂಟರ್ ಆಗುವ ಭೀತಿಯಲ್ಲಿದ್ದ ಪತ್ರಕರ್ತರ ಸಹೋದ್ಯೋಗಿಗಳ ಅನವರತ ವಿರೋಧದಿಂದ ಬಿಡುಗಡೆಗೊಂಡರು. 

ವಿಜಯ್ ವಿನೀತ್

ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ವಾರಣಾಸಿಯ ಮುಸಾಹರ್ ಸಮುದಾಯದ ಮಕ್ಕಳು ಹುಲ್ಲು ತಿಂದು ಬದುಕುತ್ತಿದ್ದಾರೆ ಎಂದು ವರದಿ ಮಾಡಿದ ಹಿರಿಯ ಪತ್ರಕರ್ತ ವಿಜಯ್ ವಿನೀತ್ ಮೇಲೆ ವಿವರವನ್ನು ತಿರುಚುವಂತೆ ಸ್ಥಳೀಯ ಆಡಳಿತದಿಂದ ವಿಪರೀತ ಒತ್ತಡ ಬಂದಿತ್ತು. ಕ್ಷುಲ್ಲಕ ವಿಚಾರವನ್ನು ದೊಡ್ಡದಾಗಿ ಚಿತ್ರಿಸಿರುವ ಆರೋಪವೂ ಹೊರಿಸಲಾಯಿತು. ರಾಜೀನಾಮೆ ಕೊಡುವ ಸ್ಥಿತಿ ಎದುರಿಸಿದ ವಿಜಯ್ ಅವರಿಗೆ, ನಂತರ ಹಲವು ತಿಂಗಳ ಕಾಲ ಹೊಸ ಉದ್ಯೋಗ ಗಳಿಸುವುದು ಕಷ್ಟವಾಗಿತ್ತು.

ಸಂಜಯ್ ಶರ್ಮಾ

ಲಖನೌದ ದಿನಪತ್ರಿಕೆಯೊಂದರ ಸಂಪಾದಕ ಸಂಜಯ್ ಶರ್ಮಾರ ಮೇಲೆ ನಿತ್ಯವೂ ಒತ್ತಡ ಹೇರಲಾಗುತ್ತಿದೆ. ಆಡಳಿತದ ವಿರುದ್ಧ ತೀಕ್ಷ್ಣ ಟೀಕೆಗೆ ಹೆಸರಾಗಿರುವ ಲಖನೌ ಮೂಲದ ಈ ದಿನಪತ್ರಿಕೆ ಹಿಂದಿನ ಎಸ್‌ಪಿ ಸರ್ಕಾರದ ವಿರುದ್ಧವೂ ಕಟು ಟೀಕೆಗೆ ಪ್ರಸಿದ್ಧಿ ಪಡೆದಿತ್ತು. ಆದರೆ ಎಸ್‌ಪಿ ಎಂದಿಗೂ ಪತ್ರಿಕೆ ಮೇಲೆ ಒತ್ತಡ ಹೇರಿರಲಿಲ್ಲ ಎಂದು ಸಂಜಯ್ ಶರ್ಮಾ ಹೇಳಿರುವ ಬಗ್ಗೆ ವರದಿಯಾಗಿದೆ.

ಶುಭಂ ಮಣಿ ತ್ರಿಪಾಠಿ

2020ರಲ್ಲಿ 25 ವರ್ಷ ವಯಸ್ಸಿನ ಪತ್ರಕರ್ತ ಶುಭಂ ಮಣಿ ತ್ರಿಪಾಠಿ ಕಾನ್ಪುರ ನಗರದಲ್ಲಿ ಹಾಡು ಹಗಲಲ್ಲೇ ಕೊಲೆಯಾಗಿದ್ದರು. ದಿನ ಪತ್ರಿಕೆ 'ಕೆಂಪು ಮೈಲ್‌'ಗೆ ಕೆಲಸ ಮಾಡುತ್ತಿದ್ದ ಶುಭಂ, ಮರಳು ಮಾಫಿಯಾ ವಿರುದ್ಧ ಬರೆದ ನಂತರ ಸಮಸ್ಯೆ ಎದುರಿಸಿದ್ದರು. ತಮ್ಮ ವಿರುದ್ಧ ಮರಳು ಮಾಫಿಯಾ ನಕಲಿ ಪ್ರಕರಣ ನೊಂದಾಯಿಸುತ್ತಿದೆ ಎಂದೂ ಹೇಳಿದ್ದರು. ಕೊಲೆ ಬೆದರಿಕೆ ಬಗ್ಗೆ ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಪದೇ ಪದೇ ಭದ್ರತೆ ನೀಡಲು ಮನವಿ ಮಾಡಿದರೂ ಪ್ರಯೋಜನವಾಗದೆ ಹತ್ಯೆಯಾದರು.

ಸುಲಭ್ ಶ್ರೀವಾಸ್ತವ

ವರ್ಷದ ನಂತರ ಎಬಿಪಿ ನ್ಯೂಸ್ನ 42 ವರ್ಷದ ಪತ್ರಕರ್ತ ಸುಲಭ್ ಶ್ರೀವಾಸ್ತವ ಸ್ಥಳೀಯ ಮದ್ಯ ಮಾಫಿಯಾ ವಿರುದ್ಧ ಬರೆದ ಮೇಲೆ ಕೊಲೆ ಬೆದರಿಕೆ ಎದುರಿಸಿರುವ ಬಗ್ಗೆ ಪೊಲೀಸರಿಗೆ ಪತ್ರ ಬರೆದಿದ್ದರು. ಮರುದಿನ ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಅಪಘಾತ ಎಂದಿದ್ದ ಅಧಿಕಾರಿಗಳು ನಂತರ ಕೊಲೆ ಪ್ರಕರಣ ದಾಖಲಿಸಿದರು.

ದೇಶಾದ್ಯಂತ ಪತ್ರಕರ್ತರ ಸ್ವಾತಂತ್ರ್ಯ ಹರಣ

ರಾಣಾ ಅಯೂಬ್ ಅವರಂತಹ ಪತ್ರಕರ್ತರು ಹಲವು ವರ್ಷಗಳಿಂದ ಸರ್ಕಾರದ ಬೆದರಿಕೆ ಮತ್ತು ಕಾನೂನು ಕ್ರಮದ ಎದುರು ಸೆಟೆದು ನಿಂತು ಕೆಲಸ ಮಾಡುತ್ತಿದ್ದರೆ, ಹಲವು ಪತ್ರಕರ್ತರು ಹತ್ಯೆಯಾಗಿದ್ದಾರೆ ಮತ್ತು  ಬಂಧನಕ್ಕೊಳಗಾಗಿದ್ದಾರೆ.

2021ರಲ್ಲಿ ದಾಖಲೆ 293 ಪತ್ರಕರ್ತರನ್ನು ಜಾಗತಿಕವಾಗಿ ಜೈಲಿಗೆ ತಳ್ಳಲಾಗಿದೆ ಎಂದು ಪತ್ರಕರ್ತರ ರಕ್ಷಣೆ ಸಮಿತಿ (ಸಿಪಿಜೆ) ವರದಿ ಹೇಳಿದೆ. 2020ರಲ್ಲಿ ಈ ಸಂಖ್ಯೆ 280. ಭಾರತದಲ್ಲಿ ಅತ್ಯಧಿಕ ನಾಲ್ವರು ಪತ್ರಕರ್ತರು 2021ರಲ್ಲಿ ಕೊಲೆಯಾಗಿದ್ದರು. ಅವಿನಾಶ್ ಝಾ, ಚೆನ್ನಕೇಶವಲು, ಮನೀಶ್ ಕುಮಾರ್ ಸಿಂಗ್ ಮತ್ತು ಸುಲಭ್ ಶ್ರೀವಾಸ್ತವ ಇವರಲ್ಲಿ ಸೇರಿದ್ದಾರೆ.

ಇವರ ಹೊರತಾಗಿ ಆರು ಮಂದಿ ಪತ್ರಕರ್ತರಾದ ಆಸಿಫ್ ಸುಲ್ತಾನ್, ಸಿದ್ದಿಕ್ ಕಪ್ಪನ್, ಆನಂದ್ ಟೆಲ್ತುಂಬೆ, ಗೌತಮ್ ನವಲಖ, ಮನನ್ ದಾರ್ ಮತ್ತು ರಾಜೀವ್ ಶರ್ಮಾರನ್ನು ಭಾರತದಲ್ಲಿ ಬಂಧಿಸಲಾಗಿದೆ. ಪ್ರತೀಕಾರಕ್ಕಾಗಿ ಪತ್ರಕರ್ತ ತನ್ವೀರ್ ವಾಸಿರ್ ಅವರನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ.

2021ರ ಜನವರಿಯಲ್ಲಿ ಪತ್ರಕರ್ತರ ಸ್ವಾತಂತ್ರ್ಯಹರಣದ ಆರು ಪ್ರಕರಣಗಳು ದಾಖಲಾಗಿದ್ದವು. ‘ದ ಫ್ರಂಟಿಯರ್ ಮಣಿಪುರ್’ ಪತ್ರಕರ್ತನನ್ನು ಯುಎಪಿಎ ಅಡಿಯಲ್ಲಿ ಬಂಧಿಸಿ ರಾಷ್ಟ್ರದ್ರೋಹದ ಆರೋಪ ಹೊರಿಸಲಾಯಿತು. ಹಿರಿಯ ಪತ್ರಕರ್ತ ಪರಂಜೋಯ್ ಗುಹಾ ತಾಕುರ್ತಾ ವಿರುದ್ಧ ಗುಜರಾತ್ ನ್ಯಾಯಾಲಯ ಜಾಮೀನುರಹಿತ ವಾರಂಟ್ ನೀಡಿತ್ತು. ಉತ್ತರ ಪ್ರದೇಶದ ಕಾನ್ಪುರದ  ದೇಹತ್‌ನಲ್ಲಿ ಶಾಲಾ ಕಾರ್ಯಕ್ರಮ ಪ್ರಸಾರ ಮಾಡಿದ ಪತ್ರಕರ್ತರ ಮೇಲೆ ದೂರು ದಾಖಲಿಸಲಾಯಿತು. ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳಿಗೆ ಆರು ಹಿರಿಯ ಪತ್ರಕರ್ತರ ಮೇಲೆ ಹಿಂಸೆ ಉತ್ತೇಜಿಸಿರುವ ಎಫ್ಐಆರ್ ದಾಖಲಿಸಲಾಯಿತು. ಪತ್ರಕರ್ತ ಸಿದ್ದಾರ್ಥ್ ವರದರಾಜನ್ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಿಸಲಾಯಿತು. ಪತ್ರಕರ್ತರಾದ ಮನ್‌ದೀಪ್ ಪುನಿಯಾ ಮತ್ತು ಧರ್ಮೇಂದ್ರ ಸಿಂಗ್ ಅವರನ್ನು ದೆಹಲಿಯ ಸಿಂಘು ಗಡಿಯಲ್ಲಿ ಬಂಧಿಸಲಾಯಿತು. 

ಕಳೆದೊಂದು ದಶಕದಲ್ಲಿ ಬದಲಾಗಿರುವ ಮಾಧ್ಯಮ ಬ್ರಾಂಡ್

ಇಂದು ಪ್ರೈಮ್ ಟೈಮ್ ಎನ್ನುವುದು ದೇಶದ ಅತಿ ಭೀಕರ ಸಮಯ ಎಂಬಂತಹ ಸ್ಥಿತಿ ಬಂದಿದ್ದು, ಸುದ್ದಿ ನಿರೂಪಕರು ಚರ್ಚೆಗಿಂತ ಗದ್ದಲವೇ ಹೆಚ್ಚಾಗಿರುವ ಕೋಣೆಗಳಲ್ಲಿ ಪಕ್ಷಪಾತ ಅಥವಾ ತಾರತಮ್ಯದ ನಿರೂಪಣೆಯನ್ನು ದೇಶದ ಮುಂದೆ ಇಡುವ ಬಗ್ಗೆ ವ್ಯಾಪಕ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ನೂಪುರ್ ಶರ್ಮಾರಂತಹ ಪಕ್ಷದ ವಕ್ತಾರರು ದೇಶದ ವರ್ಚಸ್ಸನ್ನು ಹಾಳುಗೆಡವುವ ಉದ್ರೇಕಕಾರಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲಾಗುತ್ತಿಲ್ಲ. ಚರ್ಚೆಗಳ ಹೆಸರಲ್ಲಿ ಎರಡು ಸಮುದಾಯದವರನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟುವುದೂ ಬಹಿರಂಗವಾಗಿ ದಾಖಲಾಗಿದೆ.

ಇದನ್ನು ಓದಿದ್ದೀರಾ? ವಿಷವಿಕ್ಕುವವರ ನಡುವೆ ನಮಗೆಲ್ಲಿಯ ಅಮೃತ, ಸ್ವಾತಂತ್ರ್ಯ!

2014ರ ಚುನಾವಣೆಗೆ ಒಂದೆರಡು ವರ್ಷಗಳ ಹಿಂದಿನಿಂದ ಮಾಧ್ಯಮಗಳ ಪ್ರವೃತ್ತಿ ಸಂಪೂರ್ಣ ಬದಲಾಗಿದೆ. ತಾರತಮ್ಯ ಮತ್ತು ಒಂದು ಕಡೆಗೆ ವಾಲಿದ ಚರ್ಚೆ, ಸುದ್ದಿ ಪ್ರಸಾರ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ವರದಿಗಳು ಅಭಿಪ್ರಾಯಪಟ್ಟಿವೆ. ಲೇಖಕಿ ಕೋಟಾ ನೀಲಿಮಾ ಅವರ ಸಂಶೋಧನೆಯಲ್ಲಿ ಕಂಡುಬಂದ ವಿವರಗಳ ಪ್ರಕಾರ  ಫ್ಲಡ್ ಜಿಹಾದ್, ಕೋವಿಡ್ ಜಿಹಾದ್ ಮೊದಲಾದ ದ್ವೇಷ ಸಾರುವ ಹ್ಯಾಷ್‌ಟ್ಯಾಗ್‌ಗಳನ್ನು ಮಾಧ್ಯಮಗಳು ಮುಂದಿಟ್ಟಿವೆ. ಟಿವಿ ಸ್ಟೇಷನ್‌ಗಳು ಜನಾಂಗೀಯ ವೈರ, ಧರ್ಮಗಳ ನಡುವೆ ವೈರ ಪ್ರೋತ್ಸಾಹಿಸುವ ಮಾಧ್ಯಮವಾಗಿವೆ. 

ಮೊಹಮ್ಮದ್ ಝುಬೇರ್ ಬಂಧನಕ್ಕೆ ಒಳಗಾದಾಗ ಪ್ರಸಿದ್ಧ ನಿರೂಪಕ ಅರ್ಣಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಪತ್ರಕರ್ತರ ಸ್ವಾತಂತ್ರ್ಯ ಹರಣವಾಗಿರುವ ಬಗ್ಗೆ ಮಾತನಾಡಲಿಲ್ಲ. ಬದಲಾಗಿ ಝುಬೇರ್ ವಿರುದ್ಧ ದ್ವೇಷ ಸ್ಫುರಿಸುವ ಒಂದೆಡೆ ವಾಲಿದ ಸುದ್ದಿ- ಚರ್ಚೆಗಳನ್ನು ಪ್ರಸಾರ ಮಾಡಿದೆ. ಮತ್ತೊಂದು ಪ್ರಮುಖ ಇಂಗ್ಲಿಷ್ ಸುದ್ದಿವಾಹಿನಿ ‘ಟೈಮ್ಸ್ ನೌ’ ಇನ್ನೂ ಮುಂದುವರಿದು ‘ಝುಬೇರ್ ಲಾಬಿ ಹಿಪೋಕ್ರಸಿ’ ಮೊದಲಾದ ಟ್ರೆಂಡ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ನೂಪುರ್ ಶರ್ಮಾ ಅವರಿಗೆ ಮತ್ತೊಂದು ಧರ್ಮದ ವಿರುದ್ಧ ದ್ವೇಷ ಹರಿಸಲು ವೇದಿಕೆ ಒದಗಿದ್ದೂ ಇದೇ ಸುದ್ದಿವಾಹಿನಿ.

ಭಾರತ 75ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಿನಲ್ಲಿರುವಾಗ ದೇಶದ ಟಿವಿ ನೆಟ್‌ವರ್ಕ್‌ಗಳು ಸೂಕ್ಷ್ಮವಾಗಿ ಹೆಣೆಯಲಾದ ಹಿಂದುತ್ವ ರಾಜಕೀಯಕ್ಕೆ ಮಣೆ ಹಾಕುತ್ತಿವೆ, ಪತ್ರಿಕೋದ್ಯಮದ ಮರಣದ ಗಂಟೆ ಭಾರಿಸುತ್ತಿರುವುದನ್ನು ಹಲವು ವರದಿಗಳು, ಬರಹಗಳು ಬಯಲು ಮಾಡಿವೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app