"ನಾವು ಆಗ 1947ರಲ್ಲಿ ಪಟ್ಟ ಸಂತಸ ಈಗ ದುಃಖವಾಗಿ ಪರಿವರ್ತನೆಗೊಂಡಿದೆ"

Rameshwary varma

ನಾವು ಅಂದು ನೋಡಿದ್ದ ಬಹುಮುಖಿ ಭಾರತ ಹೋಗಿ ಈಗ ಏಕಮುಖಿ ಭಾರತವಾಗುತ್ತಿದೆ. ಇಲ್ಲಿ ದಲಿತರ ಬಗ್ಗೆ ಯೋಚನೆ ಮಾಡುತ್ತಿಲ್ಲ. ರಿಸರ್ವೇಷನ್‌ ಗಲಾಟೆ, ಕೋಮುವಾದ ಭಾರತವನ್ನು ನಾಶ ಮಾಡುತ್ತಿದೆ. ಹಿಜಾಬ್‌ ವಿಚಾರದಲ್ಲಿ ಕೈ ಕೈ ಹಿಡಿದು ಜೊತೆಯಾಗಿ ನಡೆಯುತ್ತಿದ್ದ ಮಕ್ಕಳ ಮನಸ್ಸಿಗೆ ವಿಷಹಾಕಿ ಹಾಳು ಮಾಡಿಬಿಟ್ಟರು ಎಂದು ದುಃಖವಾಗುತ್ತಿದೆ

ಮೊದಲ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಬೇಕು ಎಂದರೆ ಖುಷಿ ಆಗುತ್ತೆ. ನಾನಾಗ ಒಂಬತ್ತು -ಹತ್ತನೇ ವಯಸ್ಸಿನಲ್ಲಿದ್ದೆ. ಆಗ ನನ್ನ ತಂದೆ ಕಾಂಗ್ರೆಸ್‌ನಲ್ಲಿದ್ದರು. ಅವರು ತಾಯಿನಾಡು ಎಂಬ ಪತ್ರಿಕೆ ನಡೆಸುತ್ತಿದ್ದರು. ಆಗಷ್ಟೇ ಹೊಸ ಮೆಷೀನ್‌ಗಳನ್ನು ತಂದಿದ್ದರು. ಸ್ವಾತಂತ್ರ್ಯದ ಸ್ಪೆಷಲ್‌ ಸಪ್ಲಿಮೆಂಟ್ಸ್‌ ಬಂದಿತ್ತು. ನಮ್ಮ ಮನೆಯಲ್ಲಿಯೇ ಏನೋ ನಡೆಯುತ್ತಿದೆ ಎಂಬಷ್ಟು ಸಂಭ್ರಮವೋ ಸಂಭ್ರಮ. ಸ್ವಾತಂತ್ರ್ಯ ಬಂದಿದ್ದ ರಾತ್ರಿ ನಾವು ಮನೆಯಲ್ಲಿ ಧ್ವಜ ಹಾರಿಸಿದ್ದೆವು. ನಮ್ಮ ಮನೆಯಲ್ಲಿ 10-20 ಜನ ಇರುತ್ತಿದ್ದೆವು, ಎಲ್ಲರೂ ರೇಡಿಯೋ ಸುತ್ತಲೂ ಕುಳಿತು ನೆಹರೂ ಅವರ ಭಾಷಣವನ್ನು ಕೇಳುತ್ತಿದ್ದೆವು. ಅಪ್ಪನ ಕಣ್ಣಿನಲ್ಲಿ ಸಂತೋಷದ ಕಣ್ಣೀರು ಬಂದಿತ್ತು.

ಹೈಸ್ಕೂಲ್‌ ಸೇರಿದಾಗ ನಾನು ಹಿಂದಿಯನ್ನೇ ಆರಿಸಿಕೊಂಡೆ. ಯಾಕೆಂದರೆ ಹಿಂದಿ ಕಲಿಯುವುದೆಂದರೆ ಜಂಭವೆಂದೆನಿಸುತ್ತಿತ್ತು. ಆದರೆ ಈಗ ಅದನ್ನು ಹೇರುತ್ತಿದ್ದಾರೆ ಎಂದೆನಿಸುತ್ತದೆ. ಸ್ವಾತಂತ್ರ್ಯದ ಚಳವಳಿಯ ಸಂದರ್ಭದಲ್ಲಿ ಹಿಂದಿ ಕಲಿಯುವುದೆಂದರೆ ಸಂಭ್ರಮ. ಮದ್ರಾಸ್‌ ನಲ್ಲಿ ಆಗ ಹಿಂದಿ ಪ್ರಚಾರಸಭಾ ಎಂದು ಇರುತ್ತಿತ್ತು. ಆಗ ಪ್ರಥಮ, ಮಧ್ಯಮ, ಪ್ರವೇಶಿಕ ಮತ್ತು ವಿಶಾರದವೆಂದು ಪರೀಕ್ಷೆಗಳಿದ್ದವು. ನಾವೆಲ್ಲರೂ ಆ ಪರೀಕ್ಷೆಗಳಿಗೆ ಕುಳಿತುಕೊಂಡು ಓದುತ್ತಿದ್ದೆವು. ಇದು ನಮಗೆಲ್ಲಾ ವಿವರಿಸುವುದಕ್ಕೇ ಸಾಧ್ಯವಾಗದ ರೀತಿಯ ಸಂಭ್ರಮ. ನಮಗೆ ಭಕ್ತಿ ಭಾವನೆ, ಪೂಜ್ಯ ಭಾವನೆಯೆಲ್ಲಾ ಇರುತ್ತಿತ್ತು. ಸ್ವಾತಂತ್ರ್ಯದ ದಿನ ಮತ್ತು ಗಣರಾಜ್ಯದ ದಿನ ಧ್ವಜಾರೋಹಣವನ್ನು ನೋಡಿ ಧ್ವಜಕ್ಕೆ ನಮಸ್ಕಾರ ಮಾಡುತ್ತೇನೆ. ಈಗ ಹರ್‌ ಘರ್‌ ತಿರಂಗಾ ಎಂದು ಶುರು ಮಾಡಿಕೊಂಡಿದ್ದಾರಲ್ಲ ನನಗೇನನಿಸುತ್ತೆ ಎಂದರೆ, ನಮ್ಮ ಮನಸಿನಲ್ಲಿ ಗೌರವ ಎನ್ನುವುದಿದ್ದರೆ ತನ್ನಿಂತಾನೆ ನಾವು ಗೌರವವನ್ನು ಕೊಡುತ್ತೇವೆ. ಹರ್‌ ಘರ್‌ ತಿರಂಗಾ ಎಂದು ಎಲ್ಲರ ಮೇಲೂ ಹೇರುವುದು ಸರಿಯಲ್ಲ ಎನಿಸುತ್ತದೆ.

ನೆಹರೂ ಎಂದರೆ ನಮಗೆ ಕಣ್ಣಲ್ಲೆಲ್ಲಾ ಮಿಂಚು. 1946ರಲ್ಲಿ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಗಾರ್ಡನ್‌ ಪಾರ್ಟಿಯೆಂದು ಕೊಡುತ್ತಿದ್ದರು. ನಾವು ಪತ್ರಿಕೆಯ ಮನೆಯವರಾಗಿದ್ದರಿಂದ ನಮಗೂ ಆಹ್ವಾನವಿತ್ತು. ಚಿಕ್ಕಪ್ಪ ನನ್ನನ್ನು ಕರೆದುಕೊಂಡು ಹೋಗಿದ್ದ. ಆಗ ನೆಹರೂ ನನ್ನ ತಲೆಸವರಿ ಮಾತನಾಡಿಸಿದ್ದರು. ಇದನ್ನು ನೆನಸಿಕೊಂಡರೇ ಇವತ್ತಿಗೂ ಏನೋ ಒಂದು ರೀತಿಯ ಉತ್ಸಾಹ. ಸ್ವಾತಂತ್ರ್ಯದ ಸಮಯದಲ್ಲಿ ಆ ವಾರ್ತಾಪತ್ರಿಕೆಗೆ ʼನ್ಯಾಷನಲಿಸ್ಟ್‌ ನ್ಯೂಸ್‌ ಪೇಪರ್‌ʼ ಎಂದೇ ಹೆಸರಿತ್ತು. ನನಗೆ ಸರಿಯಾಗಿ ನೆನಪಿಲ್ಲ, ಕ್ವಿಟ್‌ ಇಂಡಿಯಾ ಅಥವಾ ಯಾವುದೋ ಒಂದು ವಿಷಯವನ್ನು ಪಬ್ಲಿಷ್‌ ಮಾಡಿದ್ದಕ್ಕೆ ನಮ್ಮ ತಂದೆಯವರನ್ನು ಕ್ವಿಟ್‌ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಒಂದು ವಾರ ಜೈಲಿಗೆ ಹಾಕಿದ್ದರು. ಆಗ ನಮ್ಮನೇಲಿ ಎಲ್ಲರೂ ಅಳುತ್ತಾ ಕುಳಿತಿದ್ದರು. ಅದಕ್ಕೆ ನಮ್ಮ ತಂದೆ ʼʼನಾನು ಈ ವಿಷಯದಲ್ಲಿ ಜೈಲಿಗೆ ಹೋಗಿದ್ದಕ್ಕೆ ಯಾರೂ ಅಳಬಾರದುʼʼ ಎಂದು ಹೇಳಿದ್ದರು.

ಅಂದು ಸ್ವಾತಂತ್ರ್ಯ ಬಂದ ಆ ಖುಷಿ ಈಗ ಇಲ್ಲ. ಯಾಕೆಂದರೆ ನಾವು ಆಗ ಇಡೀ ದೇಶವನ್ನು ವಿವಿಧತೆಯಲ್ಲಿ ಏಕತೆಯಂತೆ ಕಾಣುತ್ತಿದ್ದೆವು. ಆದರೆ ಈಗ ದೇಶ ಜಾತೀಯತೆ ಎಂಬ ವಿಚಾರದಲ್ಲಿ ಕೆಳಮಟ್ಟದಲ್ಲಿ ಕಾಣುವ ಪರಿಸ್ಥಿತಿ ಬಂದಿದೆ. ಕೋಮುವಾದ ಜಾಸ್ತಿಯಾಗಿರುವುದು ನೋಡಿದಾಗ ಬಹಳ ದುಃಖವಾಗುತ್ತದೆ.  

ವೈವಿಧ್ಯತೆಯ ಕಾನ್ಸೆಪ್ಟ್‌ ಎನ್ನುವುದೇ ಹೋಗಿ ಮೋನೋಲಿಥಿಕ್‌ ಆಗ್ತಿದ್ದೇವೆ. ಎಲ್ಲರ ಮನೆಯಲ್ಲೂ ದೇಶ ಪ್ರೇಮದ ವಾತಾವರಣವಿರುತ್ತಿತ್ತು. ನಮ್ಮ ಮನೆಯಲ್ಲಂತೂ ಅದು ಇದ್ದೇ ಇರುತ್ತಿತ್ತು. ದೇಶಕ್ಕಾಗಿ, ಸಮಾಜಕ್ಕಾಗಿ ಕೆಲಸ ಮಾಡಬೇಕು ಎನ್ನುವ ಭಾವನೆ ನಮಗೆ ಚಿಕ್ಕ ವಯಸ್ಸಿನಿಂದಲೇ ಬಂದಿತ್ತು ಎಂದೆನಿಸುತ್ತದೆ. ನಮಗೋಸ್ಕರ ಮಾತ್ರವಲ್ಲದೇ ದೇಶಕ್ಕಾಗಿಯೂ ಕೆಲಸವನ್ನು ಮಾಡಬೇಕೆನ್ನುವ ಪರಿಕಲ್ಪನೆ ನಮ್ಮ ಮನೆಯಲ್ಲಿ ಮಾತ್ರವೇ ಅಲ್ಲದೇ ಹಲವರ ಮನೆಯಲ್ಲೂ ಇರುತ್ತಿತ್ತು. ನಮ್ಮ ಕಾಲದಲ್ಲಿ ಪ್ರತಿಯೊಬ್ಬರಿಗೂ ಗಾಂಧಿಯ ಬಗ್ಗೆ ಗೊತ್ತಿತ್ತು, ಪೂರ್ತಿಯಾಗಿ ಗೊತ್ತಿರದಿದ್ದರೂ, ಸ್ವಾತಂತ್ರ್ಯ ಬಂತು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು ಮತ್ತು ನಾವು ಅದನ್ನು ಉಳಿಸಿಕೊಂಡು ಬರಬೇಕು ಎನ್ನುವ ಪರಿಕಲ್ಪನೆಯಿತ್ತು. ನಾನು ಹೈಯರ್‌ ಎಜುಕೇಷನ್‌ಗೆ ಬಂದಾಗ ಎಕನಾಮಿಕ್ಸ್‌  ಮತ್ತು ಡೆವಲಪ್‌ಮೆಂಟ್‌ ಸ್ಟಡೀಸ್‌ ತಗೊಂಡೆ, ನಾನು ಇನ್‌ಸ್ಟಿಟ್ಯೂಷನ್‌ನಲ್ಲಿರುವಾಗ ಡೆವಲಪ್‌ಮೆಂಟ್‌ ಆಂಗಲ್‌ನಲ್ಲಿ ವಿಷಯಗಳನ್ನು ಓದುವುದಕ್ಕೆ ಶುರು ಮಾಡಿದೆ. ಮಲ್ಟಿ ಡಿಸಿಪ್ಲೀನರಿ ಅಪ್ರೋಚ್‌ ಬಂತು. ನಮ್ಮ ದೇಶ ಹೇಗೆ ಬೆಳಿತಾ ಇದೆ, ಹೇಗೆ ನಾವು ಅಭಿವೃದ್ಧಿ ಹೊಂದುತ್ತಿದ್ದೇವೆ, ಈ ಅಭಿವೃದ್ಧಿಯ ದಾರಿ ಸರಿಯೇ ಅಲ್ಲವೇ, ಅನ್ನುವ ಅಂಶಗಳ ಬಗ್ಗೆ ನನಗೆ ತಿಳಿತಾ ಬಂತು.

Image
Rameshwary Varma

ಎಷ್ಟೇ ಸೌಕರ್ಯಗಳಿದ್ದರೂ ಬಡತನದ ದೇಶ. ಆದ್ದರಿಂದ ನಮ್ಮಲ್ಲಿ ಆದಾಯದಲ್ಲಿ ಅಸಮಾನತೆ ಬರಬಾರದೆಂದು ಭಾವನೆಯಿತ್ತು. ಎಲ್ಲಾ ದೇಶದಲ್ಲೂ ಅಸಮಾನತೆಯಿರುತ್ತದೆ. ಆದರೆ ನಮ್ಮ ದೇಶದಲ್ಲಿ ಕಡು ಬಡತನವಿತ್ತು. ದಾರಿಗಳು ಸರಿಯಾಗಿಲ್ಲ ಮತ್ತು ನಮಗೆಲ್ಲೋ ಬಡತನದ ಅಭಿವೃದ್ಧಿ ಯೋಜನೆಗಳು ಸರಿಯಿಲ್ಲ. ಗಾಂಧೀಜಿಯವರು ಸಂಪತ್ತು ಕಟ್ಟ ಕಡೆಯವನಿಗೆ ಮುಟ್ಟಬೇಕು ಎಂದು ಹೇಳ್ತಿದ್ದರು. ಆದರೆ ಅದು ಮುಟ್ಟುತ್ತಿರಲಿಲ್ಲ. ಈ ಡೆವಲಪ್‌ಮೆಂಟ್‌ ಪಾಲಿಸಿಯಲ್ಲಿ ಸ್ಟಿಕ್‌ ಆಂಡ್‌ ಡೌನ್‌ ಪಾಲಿಸಿ ಎಂದು ಮಾಡುತ್ತಿದ್ದರು. ಅದು ಬಡವರಿಗೆ ಸರಿಯಾಗಿ ತಲುಪುತ್ತದೆ ಎಂದುಕೊಂಡಿದ್ದರು. ಆದರೆ ಅದು ತಲುಪುತ್ತಿರಲಿಲ್ಲ. ಕರಪ್ಶನ್‌ ಜಾಸ್ತಿಯಾಗುತ್ತಾ ಬಂತು. ಇದರ ಬಗ್ಗೆ ಯೋಚನೆ ಮಾಡಿದರೆ ಕಾಂಗ್ರೆಸ್‌ ಅಥವಾ ಯಾವುದೇ ಸರ್ಕಾರದ ಪಾಲಿಸಿ ಇರಬಹುದು, ಅದು ಸರಿಯಾಗಿದೆ ಅಥವಾ ಸರಿಯಾಗಿಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಳುತ್ತಾ ಬಂದೆವು.

ಏಕಮುಖಿ ಭಾರತವಾಗುತ್ತಿದೆ

ಈಗ ನನಗೆ ತುಂಬಾ ಡಿಸ್ಟರ್ಬ್‌ ಆಗೋದು ಅಂದರೆ, ಬಡತನದ ಬಗ್ಗೆ ಯೋಚನೆ ಮಾಡೋದು ಬಿಡಿ, ಪೂರ್ಣವಾಗಿ ನಾವು ಬಂಡವಾಳಶಾಹಿಯಾಗಿದ್ದೇವೆ. ಆದಾಯದ ಅಸಮಾನತೆಯಂತು ಕಳೆದ ಒಂದೆರಡು ವರ್ಷಗಳಿಂದ ತುಂಬಾ ಜಾಸ್ತಿಯಾಗಿಬಿಟ್ಟಿದೆ. ಎಷ್ಟು ಚಿನ್ನದ ಅಂಗಡಿಗಳು, ಬಟ್ಟೆ ಅಂಗಡಿಗಳು, ಎಷ್ಟು ಕನ್ಸ್ಯೂಮರ್‌ ಐಟಂಗಳು, ಇದೆಲ್ಲಾ ಯಾರು ತೆಗೆದುಕೊಳ್ಳುತ್ತಾರೆ? ಯಾರಿಗೆ ಇಷ್ಟೆಲ್ಲಾ ಹಣವಿದೆ? ಎಷ್ಟೋ ಜನ ಬೀದಿಯಲ್ಲಿ ಮಕ್ಕಳನ್ನು ಪಕ್ಕದಲ್ಲಿಟ್ಟುಕೊಂಡು ಹೂವು ಕಟ್ಟಿ, ಹಣ್ಣುಗಳನ್ನು ಮಾರಿ ಜೀವನ ನಡೆಸುವವರಿದ್ದಾರೆ. ಈ ವಿರೋಧಾಭಾಸವನ್ನು ನೋಡಿದರೆ ನನಗೆ ಬಹಳ ಬೇಸರವಾಗುತ್ತದೆ. ಎಲ್ಲಾ ಆರ್ಥಿಕ ಯೋಜನೆಗಳೂ ಬಡವನಿಗೆ ಅನುಕೂಲವಾಗುವುದಿಲ್ಲ. ಸಬ್ಸಿಡಿಗಳನ್ನು ಕೊಡುತ್ತಾರೆ. ಬೆನಿಫಿಷಿಯಲ್ಸ್‌ ಕೊಡುತ್ತಾರೆ. ಆದರೆ ಕರಪ್ಶನ್‌ನ ಕಾರಣದಿಂದ ಯಾವುದೂ ಸಹ ಬಡವರಿಗೆ ತಲುಪುವುದಿಲ್ಲ. ಇದಕ್ಕಿಂತ ಹೆಚ್ಚಾಗಿ ಒಂದು ಕಡೆ ಕ್ಯಾಪಿಟಲಿಸಂನ ಛಾಯೆ, ಹಿಂದುತ್ವದ ಗಲಾಟೆ ಜಾಸ್ತಿಯಾಗ್ತಾಯಿದೆ.

ಬಹುಮುಖಿ ಭಾರತ ಹೋಗಿ ಏಕಮುಖಿ ಭಾರತವನ್ನು ಮಾಡುತ್ತಿದ್ದಾರೆ. ಅದರಲ್ಲಿ ದಲಿತರ ಬಗ್ಗೆ ಯೋಚನೆ ಮಾಡುತ್ತಿಲ್ಲ, ರಿಸರ್ವೇಷನ್‌ ಬಗ್ಗೆ ಗಲಾಟೆಗಳಾಗ್ತಾ ಇವೆ. ಜಾತಿ- ಕೋಮುವಾದದ ಗಲಾಟೆಗಳು, ಹಿಜಾಬ್‌ ಗಲಾಟೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಷಹಾಕಿ ಶಿಕ್ಷಣವನ್ನೇ ಹಾಳು ಮಾಡಿಬಿಟ್ಟರು. ಶಿಕ್ಷಣ ವ್ಯವಸ್ಥೆಗೆ ಪೋಲರೈಸೇಷನ್‌ ತಂದು ಹಾಳುಮಾಡಿಬಿಟ್ಟರು ಎಂದು ಬಹಳ ದುಃಖವಾಗುತ್ತದೆ. ಅಕ್ಕ ಪಕ್ಕದ ಮನೆಯ ಮಕ್ಕಳು ಜೋಡಿಯಾಗಿ ಹೋಗುತ್ತಿದ್ದವರನ್ನು ಬೇರೆ ಮಾಡಿಬಿಟ್ಟರಲ್ಲ ಎಂದು ಬೇಜಾರು. ಎಲ್ಲಾ ದೇಶದಲ್ಲೂ ಮೊದಲು ಶಿಕ್ಷಣವನ್ನು ಆಕ್ರಮಣ ಮಾಡುತ್ತಾರೆ. ಆದರೆ, ನಾವು ಅದನ್ನು ಫೈಟ್‌ ಮಾಡಬೇಕಿತ್ತು. ಪೋಲರೈಸೇಷನ್‌ನ ವಿರುದ್ಧ ಫೈಟ್‌ ಮಾಡದೇ ಹೋದರೆ ಕಷ್ಟವಿದೆ. ಮೊದಲು ನಾವು ದೇಶದ ಸಂವಿಧಾನಕ್ಕೆ ಮರ್ಯಾದೆ ಕೊಡಬೇಕು. ರಿಪಬ್ಲಿಕ್‌ ಬಂತು ಅಂದಾಗ ನಮಗೆ ಆವಾಗ ಅರ್ಥವಾಗಿರಲಿಲ್ಲ. ರಿಪಬ್ಲಿಕ್‌ ಅಂದರೇನು ಎಂದು ಬೆಳಿತಾ ಬೆಳಿತಾ ಗೊತ್ತಾಯ್ತು. ಮೂಲಭೂತ ಹಕ್ಕುಗಳೇನು, ಮಹಿಳಾಪರ ಹೋರಾಟಗಳಲ್ಲಿ, ಮೀಸಲಾತಿ ಹೋರಾಟಗಳಲ್ಲಿ ನನಗೆ ಅರ್ಥವಾಗಿದ್ದು ನಮ್ಮ ದೇಶದಲ್ಲಿ ಎಲ್ಲರ ಹಕ್ಕುಗಳಿಗೂ ಜಾಗವಿರಬೇಕು ಎಂಬುದು. ಆದರೆ ಈಗ ಯಾರ ಹಕ್ಕಿಗೆ ಜಾಗವಿದೆ? ದುಡ್ಡಿರುವವರಿಗೆ ಮಾತ್ರ. ಯಾವ ರೀತಿಯಲ್ಲಿ ನಮ್ಮ ದೇಶವನ್ನು ಸುಧಾರಿಸುವುದು ಎಂದು ಯೋಚನೆಯಾಗ್ತದೆ. ಇಂತಹಾ ದೇಶದಲ್ಲಿ ಬದುಕ್ಕಿದ್ದೀನಲ್ಲ ಎಂದು ದುಃಖವಾಗಿಬಿಟ್ಟಿದೆ

ಮೊಮ್ಮಗನ ಬಗ್ಗೆ ಭಯವಾಗುತ್ತಿದೆ

ನಾವು ಆಗ 1947ರಲ್ಲಿ ಪಟ್ಟ ಸಂತಸ ಈಗ ದುಃಖವಾಗಿ ಪರಿವರ್ತನೆಗೊಂಡಿದೆ. ನಮ್ಮ ಜನರನ್ನು ನಾವು ನಮ್ಮ ಜನ ಎಂದು ಹೇಳುತ್ತಿಲ್ಲ, ಮುಸ್ಲಿಮರನ್ನು ಈ ದೇಶ ಬಿಟ್ಟು ಹೋಗಿ ಎಂದರೆ ಅವರು ಎಲ್ಲಿಗೆ ಹೋಗ್ಬೇಕು? ನನ್ನ ಮಗಳು ಮದುವೆ ಮಾಡಿಕೊಂಡಿದ್ದು ಮುಸ್ಲಿಂನನ್ನು. ಅವರ ಮನೆಯವರನ್ನ ಮತ್ತೆ ನನ್ನ ಮೊಮ್ಮಗನನ್ನ ನೋಡಿದರೆ ಏನು ಗತಿ ಅನಿಸುತ್ತೆ. ನಾನು ಅವರಿಗೆ ಈ ಭಾರತಕ್ಕೆ ಬರಲೇಬೇಡಿ ಎಂದು ಹೇಳೋಣವೆನಿಸುವಷ್ಟು ನನ್ನ ಮನಸಿನಲ್ಲಿ ನೋವಾಗುತ್ತದೆ. ಯಾಕೆಂದರೆ, ಖಾನ್‌ ಅಂತ ಹೆಸರು ಹೇಳಿದರೆ, ಎಲ್ಲಿ ಏನು ಮಾಡುತ್ತಾರೋ ಈ ದೇಶದಲ್ಲಿ ಎಂದು ಭಯವಾಗುತ್ತದೆ. ನಮಗೇ ಹೀಗನಿಸಿದರೆ ಇನ್ನು ಅದನ್ನು ಅನುಭವಿಸುವವರಿಗೆ ಇನ್ನೆಷ್ಟು ದುಃಖವಿರಬೇಕು!

ಹುಟ್ಟಿದ್ದು, ಬೆಳೆದಿದ್ದು ಮತ್ತು ಸಂಸ್ಕೃತಿಯೆಲ್ಲ ಇಲ್ಲೇ ಇರುವಾಗ ನೀವು ಹೋಗಿ ಎಂದರೆ ಅವನು ನನಗೆ ದೇಶಪ್ರೇಮವಿದೆ ಎಂದು ಪ್ರೂವ್‌ ಮಾಡುವುದು ಯಾವ ರೀತಿ ? ಈಗ ತೊಂದರೆ ಏನಾಗಿದೆ ಎಂದರೆ, ನಾನು ಈ ತಿರಂಗವನ್ನು ಹಾರಿಸಲಿಲ್ಲ ಎಂದರೆ, ಜೈ ಶ್ರೀರಾಮ್‌ ಹೇಳಿಲ್ಲವೆಂದರೆ ನನಗೆ ದೇಶಪ್ರೇಮ ಇಲ್ಲ ಎಂದು ಅರ್ಥವಾ? ನನಗೆ ಹೇಳೋದಿಕ್ಕೆ ಇಷ್ಟವಿಲ್ಲ, ನನ್ನ ದೇವರ ಮನೆಯಲ್ಲಿ ನಾನು ಪೂಜೆ ಮಾಡಿಕೊಳ್ಳುತ್ತೀನಿ, ನಾನು ಹೊರಗಡೆ ಯಾಕೆ ಹೇಳಿಕೊಳ್ಳಲಿ? ಈ ತರದ ಹೆದರಿಕೆಯ ಮತ್ತು ಹಕ್ಕುಗಳಿಲ್ಲದ ಸಂಸ್ಕೃತಿಯಲ್ಲಿ ನಾವು ಯಾಕೆ ಬದುಕಿದ್ದೀವಿ? ಇನ್ನು ನಾವು ಏನೇನು ನೋಡುವುದಕ್ಕಿದೆಯೋ ಎಂದೆನಿಸುತ್ತದೆ. ನನ್ನ ವಯಸ್ಸಿನವರೆಲ್ಲ ಇದನ್ನೇ ಹೇಳಿಕೊಳ್ಳುತ್ತೀವಿ. ಏನಾಗ್ತಾ ಇದೆ ಈ ಪ್ರಪಂಚದಲ್ಲಿ, ಏನಗ್ತಾ ಇದೆ ಈ ದೇಶಕ್ಕೆ !

ಎಷ್ಟು ಬಹುತ್ವದ ದೇಶ ಇದು. ನಮ್ಮ ಸುತ್ತಮುತ್ತಲೂ ತಮಿಳು, ಕನ್ನಡ, ತೆಲುಗು, ಮಲಯಾಳಂ ಸಂಸ್ಕೃತಿಯಿದೆ. ಫ್ರ್ಯಾಗ್ಮೆಂಟ್‌ ಮಾಡುತ್ತಾ ಹೋದರೆ ಯಾವ ದೇಶ ಉಳಿಯುತ್ತೆ ? ನಾನು ಭಾರತೀಯ ಅನ್ನೋದಕ್ಕೆ ಐಡೆಂಟಿಟಿ ಇರಬೇಕು, ಏನದು ಐಡೆಂಟಿಟಿ? ಸಂಸ್ಕೃತಿಯುಂಟು, ವಿದ್ಯೆಯುಂಟು, ಸಂಗೀತವುಂಟು. ಭಾರತೀಯ ಅಲ್ಲ ಎಂದು ಹೇಳಿದರೆ ಹೇಗೆ? ನಾಳೆ ಕರ್ನಾಟಕ ಸಂಗೀತ ಮುಖ್ಯವಲ್ಲ ಕೇವಲ ಹಿಂದುಸ್ತಾನಿ ಸಂಗೀತ ಮುಖ್ಯ ಎಂದರೆ! ʼಸಂಗೀತಕ್ಕೆ ಜಾತಿಯಿಲ್ಲ ಮತವಿಲ್ಲʼ ಎಂದು ರಾಜೀವ್‌ ತಾರಾನಾಥ್‌ ಯಾವಾಗಲೂ ಹೇಳುತ್ತಿರುತ್ತಾರೆ. ನಮ್ಮ ದೇಶದ ಅತ್ಯಂತ ಒಳ್ಳೆಯ ಮುಸ್ಲಿಂ ಸಂಗೀತಗಾರರಿದ್ದಾರೆ. ಸಂಗೀತವೇ ಅಲ್ಲ ಎಂದು ಹೇಳೋಕಾಗುತ್ತ? ಮುಘಲರಿಂದ ತಾನ್‌ಸೇನ್‌ ಎಲ್ಲ ಬಂದಿದ್ದಾರೆ. ತಾನ್‌ಸೇನ್‌ ನಮ್ಮ ದೇಶದಲ್ಲಿಯೇ ಇರಲಿಲ್ಲ ಎಂದು ಹೇಳೋಕಾಗುತ್ತಾ? ಅಥವಾ ಕಬೀರ್‌ದಾಸ್‌ ಇರಲಿಲ್ಲ ಎನ್ನುವುದಕ್ಕಾಗುತ್ತಾ? ಸಾಯಿಬಾಬ ಇರಲಿಲ್ಲ ಎನ್ನುವುದಕ್ಕಾಗುತ್ತಾ? ಹಿಸ್ಟರಿಯನ್ನ ಬದಲಿಸುತ್ತೀವಿ ಅಂತಾರಲ್ಲಾ, ಇದೆಲ್ಲ ಹಿಸ್ಟರಿಯಲ್ಲವಾ? ಇದೆಲ್ಲ ಎಲ್ಲಿಗೆ ಮುಟ್ಟುತ್ತೆ ಎನ್ನುವ ಯೋಚನೆ ಬರುತ್ತೆ. ಯುನಿಫೈ ಮಾಡಬೇಕೇ ಹೊರತು, ಫ್ರಾಗ್ಮೆಂಟೈಸ್‌ (ವಿಘಟನೆ) ಮಾಡಬಾರದು. ನಮ್ಮ ಈ ಸರ್ಕಾರವಂತೂ ಖಂಡಿತ ಯುನಿಫೈ ಮಾಡುತ್ತಿಲ್ಲ.

ಪ್ರಭುತ್ವದ ಓಲೈಕೆ ಮಾಡುವ ಮಾಧ್ಯಮ

ಮಾಧ್ಯಮಗಳ ಬಗ್ಗೆ ಹೇಳಬೇಕು ಎಂದರೆ ʼಲೆಸ್ಸರ್‌ ದ ಬೆಟರ್‌ ʼ ಎಂದು ಇಂಗ್ಲೀಷ್‌ನಲ್ಲಿ ವಾಕ್ಯವಿದೆ. ಒಂದು ಕಾಲದಲ್ಲಿ ನ್ಯೂಸ್‌ ಬೇಕಾಗಿತ್ತು ಎಂದು ಹಾಕಿದರೆ ಎಲ್ಲ ಕಡೆಯ ನ್ಯೂಸ್‌ ಬರುತ್ತಿತ್ತು. ಅದರೆ ಈಗ ಹಾಕಿದ ಕೂಡಲೇ ಎಲ್ಲರೂ ಬಿಜೆಪಿ ಅಥವಾ ಕಾಂಗ್ರೆಸ್‌ನ ಒಂದು ಪಾಯಿಂಟ್‌ ಇಟ್ಟು ಮಾತನಾಡುತ್ತಾರೆ. ಮಾಧ್ಯಮದವರು ನಿರ್ಭೀತರಾಗಿತರಬೇಕು, ಯಾರು ಏನಾದರು ಹೇಳಿಕೊಂಡು ಹೋಗಲಿ ನಾವು ನಿಜವೇ ಒಪ್ಪಿಸುತ್ತೇವೆ ಎಂದು ಹೇಳಿಕೊಂಡು ಹೋಗಬೇಕು. ಆದರೆ ಮಾಧ್ಯಮಕ್ಕೆ ನಿರ್ಭಯತೆ ಇಲ್ಲ. ಯಾರನ್ನಾದರೂ ಒಂದು ರೀತಿಯಲ್ಲಿ ಓಲೈಕೆ ಮಾಡುವ ಮಾಧ್ಯಮವಾಗಿದೆ. ಕನ್ನಡ ಮಾಧ್ಯಮದಲ್ಲಿ ಭಾಷೆಯನ್ನು ಅದೇನು ಅಂತ ಉಪಯೋಗಿಸುತ್ತಾರೋ ಏನೋ. ಉತ್ಪ್ರೇಕ್ಷೆಯ ಭಾಷೆ ಮಾಧ್ಯಮಗಳಲ್ಲಿ ಸಹಜವಾಗಿಬಿಟ್ಟಿದೆ.

Image
Rameshwary varma

ಹಿಜಾಬ್‌ ವಿವಾದ ಬಂದಾಗ ಅದನ್ನೇ ಹಿಡಿದುಕೊಂಡು ಎಳೆದರು. ಒಂದನ್ನೇ ಹತ್ತು ಬಾರಿ ಹೇಳಿದರೆ ಸುಳ್ಳು ನಿಜವಾಗುತ್ತದೆ ಎಂದು ಹೇಳುತ್ತಾರೆ. ಅದೇ ಈಗ ಮಾಧ್ಯಮಗಳಲ್ಲಿ ಆಗುತ್ತಿದೆ. ಸುಳ್ಳುಗಳನ್ನು ಹೇಳಿ ಅಥವಾ ಅದನ್ನ ಉತ್ಪ್ರೇಕ್ಷೆ ಮಾಡಿ ಅದನ್ನೇ ತೋರಿಸಿ ಅದನ್ನೇ ನಿಜ ಮಾಡುತ್ತಾರೆ. ಜನರು ಅದನ್ನೇ ನಂಬುತ್ತಾರೆ. ಟಿವಿ ನೋಡಿ ನೋಡಿ ಮನೆಗಳಲ್ಲೇ ಪೋಲರೈಸೇಷನ್‌(ಧ್ರುವೀಕರಣ) ಆಗಿದೆ. ತುಂಬಾ ಟಿವಿ ನೋಡುವವರು ಅದ್ಯಾಕೆ ಹಾಗೆ ಮಾಡಿದರು, ಯಾಕೆ ಅವರು ಹಿಜಾಬ್‌ ಹಾಕಿದರು ಎಂದು  ಮಾಧ್ಯಮಗಳು ಏನು ಹೇಳಿತು ಅದನ್ನೇ ಮನೆಗಳಲ್ಲೂ ಹೇಳುತ್ತಾರೆ.

ನಮ್ಮ ತಂದೆಯವರ ಮಾಧ್ಯಮವಿದ್ದಾಗ ತಾಯಿನಾಡು ರಾಮಯ್ಯನವರ ಮಗಳು ಎಂದು ಜಂಭ ಪಡುತ್ತಿದ್ದೆ. ಈಗ ನಾನು ಮಾಧ್ಯಮದವರ ಕುಟುಂಬದವಳು ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತದೆ. ಒಂದು ರೀತಿಯ ಉತ್ಪ್ರೇಕ್ಷೆಗಳು, ಸುಳ್ಳುಗಳು ಸೇರಿಕೊಂಡಿವೆ. ಒಂದು ಕಾಲದಲ್ಲಿ ಸಾಂಸ್ಕೃತಿಕ ಘಟನೆಗಳು ಆದರೆ ಅದನ್ನೆಲ್ಲ ತೋರಿಸುತ್ತಿದ್ದರು. ಆದರೆ ಈಗ ಕಲ್ಚರ್‌ಗೂ ಕಡಿಮೆ ಜಾಗ, ರೀಜನಲ್‌ ನ್ಯೂಸ್‌ಗಂತೂ ಕಡಿಮೆ ಜಾಗ. ಅಕ್ಸಿಡೆಂಟ್‌ ಆಗಿರಬೇಕು, ಇಲ್ಲ ಜಗಳ ಕಾದಿರಬೇಕು, ಆಗ ರೀಜನಲ್‌ ನ್ಯೂಸ್‌ ಅಂತ ತೋರಿಸುತ್ತಾರೆ.

ಬಹಳ ದುಃಖಕರ ವಾತಾವರಣ. ನಾವು ಬೆಳೆದಂತಹ ಭಾರತ, ನಾವು ಬೆಳೆದಂತಹ ಮೌಲ್ಯಗಳಿಟ್ಟುಕೊಂಡಂಥ ಭಾರತ ಈಗಿಲ್ಲ. ಎಲ್ಲರೂ ʼವಯಸಾಗಿದ್ದಕ್ಕೆ ಹೀಗೆ ಹೇಳುತ್ತಾರೆʼ ಅಂತಾರೆ, ಆದರೆ ಅದು ಅಲ್ಲ. ವಯುಸ್ಸಾದವರು ಇದೆಲ್ಲ ಮಾತಾಡುವುದು ಸುಳ್ಳಲ್ಲ. ಯಾಕೆಂದರೆ ನಮ್ಮ ಕಾಲದಲ್ಲಿ ಕೆಟ್ಟದು ಇರ್ತಾ ಇರಲಿಲ್ಲ ಎಂದು ಹೇಳುವುದಿಲ್ಲ. ಈಗ ಮಾಧ್ಯಮಗಳಿಗೆ ಎಲ್ಲವೂ ಗೊತ್ತಾಗುತ್ತೆ ಅದಕ್ಕೆ ನೀವು ಹೇಳುತ್ತೀರ ಎನ್ನುತ್ತಾರೆ. ನಾವು ದುರುದ್ದೇಶದಿಂದ ಹೇಳುತ್ತಿಲ್ಲ . ನಿಜವಾಗಿಯೂ ಮೌಲ್ಯಗಳು ಪಥನವಾಗಿದೆ. ನಾವು ನೈಜ್ಯವಾದ ಘಟನೆಗಳನ್ನ ಹೇಳಬೇಕೆ ಹೊರತು, ಉತ್ರೇಕ್ಷೆ ಮಾಡಿ ಅದನ್ನು ಜನರಿಗೆ ತೋರಿಸಿ, ಜನರ ಮನಸನ್ನು ಕೆಡಿಸಬಾರದು.

ಇದನ್ನು ಓದಿದ್ದೀರಾ? ಸಿನಿಮಾ ಸ್ವಾತಂತ್ರ್ಯ|ನಮ್ಮ ಕಾಲವನ್ನು ಕದಿಯುವ ಹಕ್ಕನ್ನು ಪ್ರಭುತ್ವಕ್ಕೆ ಕೊಟ್ಟವ ಯಾರು?

ಹರ್‌ ಘರ್‌ ತಿರಂಗಾ ಎಂಬುದು ಗಿಮಿಕ್‌

ʼಹರ್‌ ಘರ್‌ ತಿರಂಗಾʼ ಇದು certainly a gimik. ಒಂದು ರೀತಿಯಲ್ಲಿ ಬಿಜೆಪಿಯು ಎಲ್ಲದರಲ್ಲೂ ಗೆದ್ದು ಬರಬೇಕೆಂಬ ದೇಶ ಪ್ರೇಮದ ನಾಟಕವಾಡುತ್ತಿದೆ. ಎಲ್ಲ ಮನೆಯಲ್ಲಿಯೂ ಬಾವುಟ ಹಾರಿಸಿ ತಪ್ಪು ಅಂತ ನಾನು ಹೇಳುವುದಿಲ್ಲ. ಆದರೆ ಅದಕ್ಕೆ ಸರಿಯಾದ ಪ್ರಿಪರೇಷನ್‌ ಇರಬೇಕು. ಒಂದು ವರ್ಷದ ಹಿಂದೆ ಯೋಚನೆ ಮಾಡಿ ತಯಾರಿ ನಡೆಸಬೇಕಿತ್ತು. ಇಂಪೋರ್ಟ್‌ ಮಾಡಿಕೊಳ್ಳೋದಿಕ್ಕೆ ಮೊದಲು ಎಲ್ಲ ಶಾಲೆಗಳಲ್ಲಿ, ವುಮೆನ್ಸ್‌ ಆರ್ಗನೈಸೇಷನ್‌ಗಳಲ್ಲಿ, ನಿಮ್ಮ ನಿಮ್ಮ ಫ್ಲಾಗ್‌ ನೀವು ತಯಾರಿಸಿಕೊಳ್ಳಿ. ನಿಮ್ಮ ಊರಿನಲ್ಲಿ ಮಾಡಿಕೊಳ್ಳಿ ಎಂದಿದ್ದರೆ, ಖಂಡಿತಾ ಈ ಪರಿಸ್ಥಿತಿ ಬರ್ತಾ ಇರಲಿಲ್ಲ. ಶಾಲೆಗಳಲ್ಲಿ, ವುಮೆನ್ಸ್‌ ಆರ್ಗನೈಸೇಷನ್‌ನಲ್ಲಿ, ಸ್ಮಾಲ್‌ ಇಂಡಸ್ಟ್ರೀಸ್‌ನಲ್ಲಿ ಈ ಆಕ್ಟಿವಿಟಿಯನ್ನು ಮಾಡಿಸಬಹುದಾಗಿತ್ತು. ಖಾದಿಯದ್ದಲ್ಲದೇ ಇದ್ದರೂ ಗೋಣಿ ಚೀಲ, ಪೇಪರ್, ಅಥವಾ ಯಾವುದಾದರೂ ದೇಶದ ಒಳಗಿನ ಮೆಟೀರಿಯಲ್‌ನಲ್ಲಿ ಮಾಡಬಹುದಾಗಿತ್ತು. ಈಗ ಯೋಚನೆ ಮಾಡಿದರೆ ನನಗನ್ನಿಸುವುದು ಇದು ವೋಟ್‌ಬ್ಯಾಂಕ್‌ ಪಾಲಿಟಿಕ್ಸ್‌ ಅಷ್ಟೇ.

ಹೀಗೆ ಮಾಡಿರೋದರಿಂದ ಹೆದರಿಕೆ ಏನಾಗುತ್ತಿದೆ ಎಂದರೆ, ಬಿಜೆಪಿಯವರು ಮೊದಲೇ ತಿನ್ನೋ ಬಗ್ಗೆ , ಬಟ್ಟೆ ಬಗ್ಗೆ, ಸಿನಿಮಾ ಬಗ್ಗೆ ಗಲಾಟೆ ಮಾಡುತ್ತಾರೆ. ಅವರು ಯಾರೋ ಬೂಕರ್‌ ಪ್ರೈಸ್‌ನವರು ಏನೋ ಬರೆದಿದ್ದಾರೆ ಎಂದರೆ ಅದರ ಬಗ್ಗೆನೂ ಗಲಾಟೆ ಮಾಡೋದೆ? ನಮ್ಮ ಕಾಲದಲ್ಲಿ ಪೋಸ್ಟ್‌ ಇಂಡಿಪೆಂಡೆನ್ಸ್‌ನಲ್ಲಿ ಬೇಕಾದಷ್ಟು ಕ್ರಿಟಿಕಲ್‌ ಸಿನಿಮಾಗಳನ್ನ ಮಾಡಿದ್ದರು. ಹಿಂದೂಯಿಸಂ ಮತ್ತು ಆಚರಣೆಗಳನ್ನು ʼಘಟಶ್ರಾದ್ಧʼ ಸಿನಿಮಾದಲ್ಲಿ ಕ್ರಿಟಿಸೈಸ್‌ ಮಾಡಿದ್ದರು. ಆಗೆಲ್ಲ ಒಪ್ಪಿಕೊಳ್ಳುತ್ತಿದ್ದವರು, ಈಗ ಯಾಕೆ ಒಪ್ಪಿಕೊಳ್ಳುತ್ತಿಲ್ಲ? ಎಲ್ಲದಕ್ಕೂ ಬೇಲಿ ಹಾಕಿದರೆ ಹೇಗೆ? ಆ ಬೇಲಿ ನೈಜವಾಗಿರಬೇಕೆ ಹೊರತು ಸುಳ್ಳು ಬೇಲಿ ಹಾಕಿಕೊಳ್ಳುತ್ತಾ ಹೋದರೆ, ಒಂದು ದಿನ ಆ ಬೇಲಿಯನ್ನು ತೆಗೆಯುತ್ತಾ ಬರಬೇಕೆಂದು ಆಶಿಸುತ್ತೇನೆ. ಭಾಷೆ ಮೇಲೆ, ಸಂಸ್ಕೃತಿ ಮೇಲೆ, ನಮ್ಮ ಹಕ್ಕುಗಳ ಮೇಲೆ ಹಾಕುತ್ತಿರುವ ಬೇಲಿಗಳನ್ನು ಕಿತ್ತು ಎಸೆಯುವವರು ಬರಲಿ ಎಂದು ಆಶಿಸುತ್ತೇನೆ.

ನಿಮಗೆ ಏನು ಅನ್ನಿಸ್ತು?
3 ವೋಟ್