ಹತಾಶೆಯಿಂದ ಸಾವಿಗೆ ಶರಣಾಗುತ್ತಿರುವ ಈ ರೈತನಿಗೆಲ್ಲಿದೆ ಸ್ವಾತಂತ್ರ್ಯ?

Farmar karnataka

ಕನಿಷ್ಠ ರೈತನಿಗೆ ಬಿತ್ತನೆ ಬೀಜದ ಸಾರ್ವಭೌಮತ್ವವೇ ಇಲ್ಲವೆಂದರೆ ಈತ ಸ್ವತಂತ್ರ ದೇಶದಲ್ಲಿ ಇದ್ದಾನೆಯೇ? ಬಹುರಾಷ್ಟ್ರೀಯ ಕಂಪನಿಗಳ ಬಿತ್ತನೆ ಬೀಜದಿಂದ ಬರುವ ಫಲ ಫಸಲಿಗಾಗಿ ಸುರಿಯುವ ಎಲ್ಲಾ ಒಳಸುರಿವುಗಳು (ಗೊಬ್ಬರ, ಕೀಟನಾಶಕ, ಕಳೆನಾಶಕ)ಎಲ್ಲವೂ ರೈತನ್ನು ಗುಲಾಮಗಿರಿಗೆ ತಳ್ಳುತ್ತಿವೆ. ಅಕ್ಷರಶಃ ಗುಲಾಮಗಿರಿಯಲ್ಲಿರುವ ರೈತನಿಗೆ ಎಲ್ಲಿದೆ ಸ್ವಾತಂತ್ರ್ಯ?

ʼರೈತʼ ತನ್ನ ಭೂಮಿ ರಕ್ಷಿಸಿಕೊಳ್ಳಲು ರಕ್ಷಣೆ ಕೊಡಬೇಕಾಗಿದ್ದ ಪ್ರಭುತ್ವವೇ ಅವನ ಫಲವತ್ತಾದ ಭೂಮಿಯನ್ನು ಕಬಳಿಸುತ್ತಿರುವ, ಉಳ್ಳವರೇ ರೈತನ ಭೂಮಿ ನುಂಗಿ ನೊಣೆಯಲು ನೀತಿ ರೂಪಿಸುತ್ತಿರುವ ಈ ಹೊತ್ತಿನಲ್ಲಿ ಅಮೃತ ಸ್ವಾತಂತ್ರ್ಯ ಬಂದಿದೆ ಅಥವಾ ಸಿಕ್ಕಿದೆ ಎಂಬುದು ರೈತ ಸಮುದಾಯಕ್ಕೆ ಅಕ್ಷರಶಃ ಭ್ರಮೆ!!

ಇಡೀ ಜಗತ್ತು ಮಾರುಕಟ್ಟೆ ಕೆಂದ್ರಿತ ಆರ್ಥಿಕ ವ್ಯವಸ್ಥೆಯಲ್ಲಿರುವಾಗ ರೈತರ ಹಕ್ಕಾದ ʼವೈಜ್ಞಾನಿಕ ಬೆಲೆʼ ಆತನಿಗೆ ಸಿಗಬೇಕಲ್ಲವೇ ? ಅದಾಗದೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ ಎಂದು ಸಂಭ್ರಮಿಸು ಎನ್ನುವುದೇ ಅರ್ಥವಿಲ್ಲದ್ದು. ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲದ ರೈತರು ಆರ್ಥಿಕವಾಗಿ ನಲುಗಿಹೋಗಿ ಅದರಿಂದ ಹೊರಬರಲು ಸಾಧ್ಯವೇ ಇಲ್ಲ ಎಂಬ ಹತಾಶೆಯಿಂದ ಸಾವಿಗೆ ಶರಣಾಗುತ್ತಿರುವ ಈ ರೈತಗೆಲ್ಲಿದೆ ಸ್ವಾತಂತ್ರ್ಯ?

ಕೃಷಿಯ ಆಧಾರ ಸ್ತಂಭಗಳೆಲ್ಲವು ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿರುವಾಗ ಕೃಷಿ ಕ್ಷೇತ್ರ ಅಕ್ಷರಶಃ ದಾಸ್ಯಕ್ಕೆ ಒಳಗಾಗಿದೆ. ದಾಸ್ಯ ಮತ್ತು ಸ್ವಾತಂತ್ರ್ಯ ಒಟ್ಟಿಗಿರಲು ಸಾಧ್ಯವೇ? ಒಂದೇ ಒಂದು ಹೋಲಿಕೆ: ಭಾರತೀಯ ಆಹಾರ ನಿಗಮದ 1965ನೇ ಇಸವಿಯ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 244 ಭತ್ತದ ತಳಿಗಳು ಇದ್ದವು. ಕನ್ಯಾಕುಮಾರಿಯಲ್ಲಿನ ವಿವೇಕಾನಂದ ಕೆಂದ್ರದಲ್ಲಿನ ಜೀವ ವೈವಿಧ್ಯ ವಿಭಾಗದಲ್ಲೊಂದು ಫಲಕ–ರಾಮನಾಥಪುರಂನಲ್ಲಿನ ಒಂದು ಎಕರೆಗೆ 80 ಕ್ವಿಂಟಾಲ್‌ ಹಾಗೂ ತಾಂಜಾವೂರಿನಲ್ಲಿ 60 ಕ್ವಿಂಟಾಲ್‌ ಭತ್ತ ಬೆಳೆಯುತ್ತಿದ್ದುದರ ಬಗ್ಗೆ ದಾಖಲೆ ಇದೆ. ಅಷ್ಟೇ ಏಕೆ 19ನೇ ಶತಮಾನದ ಸರಾಸರಿ ಬ್ರಿಟಿಷ್‌ ಗೆಜೆಟಿಯರ್‌ನಲ್ಲಿರುವ ದಾಖಲೆಯಂತೆ ದಕ್ಷಿಣ ಭಾರತದಲ್ಲಿ ಸರಾಸರಿ ಒಂದು ಎಕರೆ  ಇಳುವರಿ 52 ಕ್ವಿಂಟಾಲ್‌ ಎಂದು ದಾಖಲಾಗಿದೆ. ಇಂದು ಇಂಥ ಉತ್ಕೃಷ್ಟ ತಳಿಗಳು, ಬಿತ್ತನೆ ಬೀಜಗಳನ್ನು ಮಾಯವಾಗಿಸಿ ಕಂಪನಿ ಬಿತ್ತನೆ ಬೀಜಗಳಿಗೆ ರೈತನನ್ನು ದಾಸನನ್ನಾಗಿಸಿದೆ. ಇಂದು ಏನೆಲ್ಲಾ ಒಳ ಸುರಿವು ಸುರಿದರೂ ಎಕರೆಗೆ 30-35 ಕ್ವಿಂಟಾಲ್‌ ಇಳುವರಿ ಬರುವಂಥ ಪರಿಸ್ಥಿತಿಗೆ ರೈತರನ್ನು ತಂದು ನಿಲ್ಲಿಸಲಾಗಿದೆ. ತಾನು ಬಿತ್ತಿದ ಬಿತ್ತದ ಬಿತ್ತನೆಗಾಗಿ ರೈತರು ಕೈ ಚಾಚುವ ಅವಮಾನಕರ ಸ್ಥಿತಿಗೆ ಸಿಲುಕಿಸಿ ಅಮೃತ ಸ್ವಾತಂತ್ರ್ಯೋತ್ಸವ ಸಂಭ್ರಮ ಹೇರಲಾಗುತ್ತದೆ. ಇದೇಯೇನು ಸ್ವಾತಂತ್ರ್ಯ?

ಗುಲಾಮಗಿರಿಯಲ್ಲಿರುವ ರೈತನಿಗೆ ಎಲ್ಲಿದೆ ಸ್ವಾತಂತ್ರ್ಯ?

ಕನಿಷ್ಠ ರೈತನಿಗೆ ಬಿತ್ತನೆ ಬೀಜದ ಸಾರ್ವಭೌಮತ್ವವೇ ಇಲ್ಲವೆಂದರೆ ಈತ ಸ್ವತಂತ್ರ್ಯ ದೇಶದಲ್ಲಿ ಇದ್ದಾನೆಯೇ? ಬಹುರಾಷ್ಟ್ರೀಯ ಕಂಪನಿಗಳ ಬಿತ್ತನೆ ಬೀಜದಿಂದ ಬರುವ ಫಲ ಫಸಲಿಗಾಗಿ ಸುರಿಯುವ ಎಲ್ಲಾ ಒಳಸುರಿವುಗಳು (ಗೊಬ್ಬರ, ಕೀಟನಾಶಕ, ಕಳೆನಾಶಕ ಇತ್ಯಾದಿ) ಎಲ್ಲವೂ ರೈತನ್ನು ಗುಲಾಮಗಿರಿಗೆ ತಳ್ಳುತ್ತಿವೆ. ಹೀಗೆ ಅಕ್ಷರಶಃ ಗುಲಾಮಗಿರಿಯಲ್ಲಿರುವ ರೈತನಿಗೆ ಎಲ್ಲಿದೆ ಸ್ವಾತಂತ್ರ್ಯ? ದಾರ್ಷ್ಟ್ಯ-ಸ್ವಾತಂತ್ರ್ಯ ಒಟ್ಟಿಗಿರಲು ಸಾಧ್ಯವೇ?

ಉದಾರಿಕರಣ, ಖಾಸಗೀಕರಣ, ಜಾಗತಿಕರಣದಿಂದ ರಾಜಕೀಯ ಸಾರ್ವಭೌಮತ್ವವನ್ನು ಎಷ್ಟರಮಟ್ಟಿಗೆ ಕಳೆದುಕೊಂಡಿದ್ದೇನೆ ಎಂದರೆ ಪ್ರಜಾಪ್ರಭುತ್ವದ ಈ ಸ್ವಾತಂತ್ರ್ಯ ದೇಶದ ನೀತಿಗಳು ಪಾರ್ಲಿಮೆಂಟಿನ ಒಳಗೆ ಚರ್ಚೆಯೇ ಆಗದೆ ಒಪ್ಪಂದಗಳಾಗುತ್ತಿವೆ. ಈ ದೇಶದ ವಾಣಿಜ್ಯ ಇಲಾಖೆ ಮತ್ತು ವಿದೇಶದ ವಾಣಿಜ್ಯ ಸಂಸ್ಥೆಗಳ ನಡುವೆ ನಡೆದ ಕೃಷಿ ಒಪ್ಪಂದಗಳು ಪಾರ್ಲಿಮೆಂಟ್‌ನ ಒಳಗೆ ಚರ್ಚೆಗೆ ಅವಕಾಶವೇ ಇಲ್ಲದೇ ಕಾರ್ಯರೂಪಕ್ಕೆ ಇಳಿಯುತ್ತಿರುವಾಗ ರೈತನ ಬದುಕಿನ ಹಿತಾಸಕ್ತಿ ಯಾರು ಕಾಯುತ್ತಿದ್ದಾರೆ, ಈ ಸ್ವತಂತ್ರ ಭಾರತದಲ್ಲಿ?

ದೇಶದ ಅರ್ಥವ್ಯವಸ್ಥೆಯ ಗಾತ್ರಕ್ಕೆ ಒತ್ತು ಸಿಕ್ಕಿದೆಯೇ ಹೊರತು ವಿತರಣೆಗಲ್ಲ. ಈ ಕಾರಣದಿಂದ ಸಂಪತ್ತಿನ ಹಂಚಿಕೆಯಲ್ಲಿ ಉಂಟಾಗುತ್ತಿರುವ ಆಗಾಧ ಕಂದಕದಲ್ಲಿ ಕೃಷಿಯನ್ನು ಅವಲಂಬಿಸಿದ ಬಹು ಸಂಖ್ಯಾತ ಕೃಷಿಕರು ಆರ್ಥಿಕ ಸ್ವಾತಂತ್ರ್ಯ ಕಳೆದುಕೊಳ್ಳುವಂತಾಗಿದೆ. ಉದಾರೀಕರಣ ಖಾಸಗೀಕರಣದ ಕುಣಿತಕ್ಕೆ ಕೃಷಿ ಮಾರುಕಟ್ಟೆ ಸಿಲುಕಿ ನಲುಗುವಂತೆ ಈ ದೇಶದ ನೀತಿಗಳು ರೂಪಗೊಂಡಿವೆ. ಮಾರುಕಟ್ಟೆಯ ಭದ್ರತೆಯೆ ಇಲ್ಲದ ಜಾಗತೀಕರಣದ ಈದಿನಗಳಲ್ಲಿ ರೈತನ ಬದುಕು ತರಗೆಲೆಯಂತೆ ಹಾರಿ ಹೋಗುತ್ತಿರುವಾಗ ಅವನಲ್ಲಿ ಯಾವ ʼತಿರಂಗʼ ಬಾವುಟ ಹಿಡಿಯಲು ಶಕ್ತಿ ಉಳಿದಿದೆ?

ಇದನ್ನು ಓದಿದ್ದೀರಾ? ಭಾರತದ ತಿವರ್ಣ ಧ್ವಜದ ವಿನ್ಯಾಸಕಾರರು ಪಿಂಗಳಿ ವೆಂಕಯ್ಯರಾ, ಸುರಯ್ಯ ತಯ್ಯಬ್ಜಿಯಾ?

ಅಮೃತಮಹೋತ್ಸವಕ್ಕೆ ಯಾವ ಚೈತನ್ಯವೂ ಉಳಿದಿಲ್ಲ

80ರ ದಶಕದಲ್ಲಿ ಇದೆಲ್ಲದರ ಮುನ್ಸೂಚನೆ ಅರಿತಿದ್ದ ರೈತ ನಾಯಕ ಪ್ರೊ ಎಂ. ನಂಜುಂಡಸ್ವಾಮಿ 90ರ ದಶಕದ ಹೋರಾಟಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ರೈತರು ಕರಾಳ ದಿನಾಚರಣೆ ಆಚರಿಸುವಂತೆ ಕರೆ ಕೊಟ್ಟಿದ್ದರು. ರಾಜ್ಯಾದ್ಯಂತ ರೈತ ಸಂಘಟನೆ ಆಗಸ್ಟ್‌ 15ನ್ನು ಕರಾಳ ದಿನವಾಗಿ ಆಚರಿಸಿದ್ದು ಉಂಟು. ರೈತರ ಬದುಕು ಹಸಿರಾಗಿಸಲು ಶುರುವಾದ ಹಸಿರು ಕ್ರಾಂತಿಯನ್ನು ಈಗ ಎರಡನೇ ಹಸಿರು ಕ್ರಾಂತಿಗೆ ತಂದು ನಿಲ್ಲಿಸಿದ್ದಾರೆ. ಬಿ.ಟಿ, ಜಿ.ಎಂ(genetically modified) ನಂತಹ ಅಧಿಕ ಇಳುವರಿ ಬಿತ್ತನೆಯನ್ನು ರೈತ ಕೇಳದಿದ್ದರೂ ತಂದರು. ಹೈಟೆಕ್‌ನಿಂದ ನ್ಯಾನೊ ತಂತ್ರಜ್ಞಾನದವರೆಗೂ ತಂದು ನಿಲ್ಲಿಸಿದ್ದಾರೆ. ಈ ಎಲ್ಲವನ್ನೂ ಸ್ವತಂತ್ರ ಭಾರತದ ಎಲ್ಲ ಪಕ್ಷಗಳ ಸರ್ಕಾರಗಳೂ ಮಂಡಿಯೂರಿ ಸ್ವಾಗತಿಸಿದೆ. ರೈತರ ಬದುಕು ಮಾತ್ರ ದಿನ ದಿನವೂ ದುಸ್ತರವಾಗುತ್ತಿದೆ. ಅಮೃತ ಸ್ವಾತಂತ್ರ್ಯೋತ್ಸವಕ್ಕೆ ಯಾವ ಚೈತನ್ಯವೂ ಅದರಲ್ಲಿ ಉಳಿದಿಲ್ಲ.

ಅವಲಂಬಿತ ಕೃಷಿಯೆಡೆಗೆ ವಾಲಿರುವ ರೈತ ಸುಸ್ಥಿರ ಕೃಷಿಯೆಡೆಗೆ ಮತ್ತೆ ಮರಳುವಂತಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಅಲ್ಲಲ್ಲೇ ಪ್ರಯತ್ನಗಳು ಶುರುವಾಗಿದೆ. ವೈಯುಕ್ತಿಕವಾಗಿಯೂ ಹಲವಾರು ಸಾಧಕರು ನಾಟಿ ತಳಿಯ ಉತ್ಪಾದನೆ, ಸಂರಕ್ಷಣೆ ಮತ್ತು ವಿತರಣೆಯತ್ತ ಹೆಜ್ಜೆ ಇಟ್ಟಿದ್ದಾರೆ. ʼಸಹಜ ಸಮೃದ್ದʼ ʼಅಮೃತ ಭೂಮಿʼ ಎಂದು ಹಲವಾರು ಸಂಘ ಸಂಸ್ಥೆಗಳು ಸುಸ್ಥಿರ ಕೃಷಿ ಕಾಪಿಟ್ಟುಕೊಳ್ಳುತ್ತಿದೆ. ಇದು ಹಬ್ಬಿ ಹಾರಡಬೇಕಲ್ಲವೇ, ಈ ಮಣ್ಣಿನ ಗುಣಧರ್ಮ ಉಳಿಯಬೇಕು. ಮಣ್ಣೇ ಹಾಳಾದರೆ ಹೆಮ್ಮೆ ಪಡಲು ಏನಾದರೂ ಉಳಿದೀತೆ?

ತನ್ನ ಉತ್ಪಾದನೆಗೆ ರೈತ ತಾನೇ ಬೆಲೆ ಕಟ್ಟುವ ದಿನ ಬಂದರೆ ಮಾತ್ರ ಕೃಷಿಕನೆಂಬ ಏಕೈಕ ಕಾರಣಕ್ಕೆ ಮದುವೆಯಾಗಲು ಹೆಣ್ಣು ಸಿಗದಷ್ಟು ಸಾಮಾಜಿಕವಾಗಿ ಕುಗ್ಗಿ ಹೋಗಿರುವ ರೈತ ಚೇತರಿಸಿಕೊಂಡು ಈ ದೇಶದ ಬಾವುಟದಲ್ಲಿ ತನ್ನ ನಗು ಬೆರೆಸಿಯಾನು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app