ಸ್ವತಂತ್ರ ಭಾರತದ ಧ್ರುವತಾರೆ ನೆಹರೂ ಬಗ್ಗೆ ಕುವೆಂಪು ಸುಭಾಷ್ ಬೋಸ್ ಏನಂದಿದ್ದಾರೆ ಗೊತ್ತೇ?

Nehru Indira

ಭಾರತದ ಪ್ರಥಮ ಪ್ರಧಾನಿ, ಹೊಸದಾಗಿ ದೇಶವನ್ನು ಕಟ್ಟಿದ ದೂರದೃಷ್ಟಿಯ ನಾಯಕ  ನೆಹರೂ ಅವರನ್ನು ವಿರೋಧಿಗಳು ಟೀಕಿಸಿಬಹುದು. ನಿರ್ಲಕ್ಷಿಸಬಹುದು, ಸುಳ್ಳು ಆರೋಪ ಮಾಡಬಹುದು ಆದರೆ ನೆಹರೂ ಕೊಟ್ಟ ಯೋಜನೆಗಳು, ಕಟ್ಟಿದ ಸಂಸ್ಥೆಗಳು ಸದಾ ನಮ್ಮ ಜೊತೆಗಿರುತ್ತವೆ. ನೆಹರೂ ಜೊತೆ ಒಡನಾಡಿದವರ ಅಭಿಪ್ರಾಯಗಳು ಇಲ್ಲಿವೆ

ಆಲ್ಬರ್ಟ್‌ ಐನ್‌ಸ್ಟೈನ್‌: ಜಗತ್ತಿನ ಅನೇಕ ನಮ್ಮಂತಹ ವಿಜ್ಞಾನಿಗಳು ಭಾರತವನ್ನು ನೆಹರೂ ಮುನ್ನಡೆಸುತ್ತಿರುವುದರ ಬಗ್ಗೆ ಆಶಾವಾದಿಗಳಾಗಿದ್ದೇವೆ. ಪರಮಾಣು ಯುದ್ಧಗಳು ಮುಂದೆ ಮನುಕುಲಕ್ಕೆ ಮಾಡಬಹುದಾದ ಭಯಂಕರ ಪರಿಣಾಮಗಳನ್ನು ಅರಿತಿರುವ ನಮಗೆ ಈ ಸಂಧರ್ಭದಲ್ಲಿ ನೆಹರೂ ಅವರಂಥ ಸಮಯೋಚಿತ ನಾಯಕತ್ವ ಮುಖ್ಯ.ಬಿಡಿಸಲಾಗದ ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಂಡು ವಿನಾಶದ ಸುಳಿಯಲ್ಲಿದ್ದ ಈ ಜಗತ್ತಿಗೆ ಗಾಂಧಿ ಮತ್ತು ನೆಹರೂ ತರಹದ ನಾಯಕರು ಈ ಭೂಮಿಯನ್ನು ರಕ್ಷಿಸಿ ಬೆಳೆಸುವುದರಲ್ಲಿ ನಂಬಿಕೆ ಹುಟ್ಟಿಸಿದ್ದಾರೆ.

Eedina App

ರಾಷ್ಟ್ರಕವಿ ಕುವೆಂಪು: ವೈಜ್ಞಾನಿಕ ದೃಷ್ಟಿ ಮತ್ತು ವಿಚಾರಬುದ್ಧಿ ಎರಡೂ ಮೂರ್ತಿವೆತ್ತಂತಿದ್ದ ಶ್ರೀ ಜವಾಹರಲಾಲ್‌ ನೆಹರು ಅಧ್ಯಾತ್ಮ ಮತ್ತು ವಿಜ್ಞಾನಗಳಿಗೆ ಸರ್ವೋಚ್ಛ ಪ್ರತಿನಿಧಿಯಾಗಿದ್ದಾರೆ. ಇದುವರೆಗಿನ ನಮ್ಮ ಆಧುನಿಕ ರಾಜಕೀಯ ಮುಂದಾಳುಗಳಲ್ಲಿ ವಿಜ್ಞಾನ ಮತ್ತು ವಿಚಾರಗಳನ್ನು ಬೇರೆ ಯಾರೂ ಅವರಂತೆ ಎತ್ತಿ ಹಿಡಿದಿಲ್ಲ. ಬೇರೆ ಯಾರೂ ಅವರಷ್ಟು ಅನನ್ಯತೆಯಿಂದ ಅವುಗಳ ಪ್ರತಿಷ್ಠಾಪನೆಗೆ ದುಡಿದಿಲ್ಲ.

ಕಾರ್ಖಾನೆ ಕಟ್ಟಿಸಿದರು, ಅಣಿಕಟ್ಟು ಹಾಕಿಸಿದರು, ಮಹಾಕಟ್ಟಡಗಳನ್ನು ನಿರ್ಮಿಸಿದರು, ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳನ್ನೂ, ಸಂಶೋಧನಾಲಯಗಳನ್ನು ಸ್ಥಾಪಿಸಿದರು. ವಿಜ್ಞಾನಿಗಳಿಗೆ ಮತ್ತು ತಾಂತ್ರಿಕ ತಜ್ಞರಿಗೆ ಪ್ರೋತ್ಸಾಹ ಕೊಟ್ಟರು. ಜನಿವಾರ ಹಾಕಿಕೊಳ್ಳಲಿಲ್ಲ, ನಾಮ ಹಚ್ಚಿಕೊಳ್ಳಲಿಲ್ಲ, ವಿಭೂತಿ ಬಳಿದುಕೊಳ್ಳಲಿಲ್ಲ. ದೇವಾಲಯಗಳಿಗೆ ಆರಾಧನೆಗಳಿಗೆ ಹೋಗಲಿಲ್ಲ, ತೀರ್ಥಗಳಿಗೆ ಯಾತ್ರೆ ಹೋಗಿ ಮೀಯಲಿಲ್ಲ, ಪುರೋಹಿತರ ಪಾದ ತೊಳೆದು ನೀರು ಕುಡಿಯಲಿಲ್ಲ, ಪೂಜಾರಿಗಳಿಗೆ ಅಡ್ಡಬೀಳಲಿಲ್ಲ, ಅಡ್ಡ ಪಲ್ಲಕ್ಕಿಯ ಜಗದ್ಗುರುಗಳಿಗೆ ಕೈ ಮುಗಿದು ಮಾಲೆ ಹಾಕಲಿಲ್ಲ, ರಾಹುಕಾಲ ಗುಳಿಕಕಾಲ ನೋಡಲಿಲ್ಲ, ಜ್ಯೋತಿಷ್ಯವನ್ನು ನಂಬಲಿಲ್ಲ ಗ್ರಹಣಕಾಲದಲ್ಲಿ ತಂಬಟೆ ಬಡಿದು ಸೂರ್ಯನನ್ನು ರಾಹುವಿಂದ ಪಾರುಮಾಡು ಎನ್ನಲಿಲ್ಲ.

AV Eye Hospital ad

ಸುಭಾಷ್ ಚಂದ್ರ ಬೋಸ್: ನನ್ನ ಪ್ರೀತಿಯ ಜವಾಹ‌ರ್‌, ನಾನು ಅಸ್ಟ್ರೀಯಾಗೆ ಬಂದಾಗಿನಿಂದ ಒಂದು ಹೇಳಕೆಯನ್ನು ಅದಷ್ಟು ಬೇಗ ಕೂಡಲೇಬೇಕು ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಸಧ್ಯದಲ್ಲೇ ನನ್ನ ಬಂಧನ ಆಗುವ ಸಾಧ್ಯತೆ ಇದೆ. ನಾನು ಜೈಲಿಗೆ ಹೋಗುವ ಮೊದಲೇ ನನ್ನ ಅಭಿಪ್ರಾಯವನ್ನು ಜನರಿಗೆ ತಿಳಿಸಿಬಿಡಬೇಕು, ನಾನು ಹೇಳಬೇಕಾಗಿರುವುದು, ನಿಮ್ಮ ಹೋರಾಟದಲ್ಲಿ ನನ್ನ ಸಂಪೂರ್ಣ ಸಹಕಾರ ಇದೆ ಎಂದು.

ನಮ್ಮಲ್ಲಿ ಈಗ ಇರುವ ಉತ್ತಮ ನಾಯಕರಲ್ಲಿ ನೀವೇ ಅಗ್ರಗಣ್ಯರು ಮತ್ತು ದೇಶವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಲು ನಿಮಗೆ ಮಾತ್ರ ಸಾಧ್ಯ ಎಂದು ನನಗೆ ಗೊತ್ತಿದೆ. ಮಹಾತ್ಮಾ ಗಾಂಧೀಜಿಯವರಿಗೂ ಇದರ ಬಗ್ಗೆ ಸಹಮತ ಇದೆ ಎಂದು ನನಗೆ ನಂಬಿಕೆ. ನಿಮ್ಮ ಈ ಜವಾಬ್ದಾರಿಯನ್ನು ಯಾವುದೇ ಆತಂಕವಿಲ್ಲದೆ ನಿಭಾಯಿಸಿ ಎಂದು ಹೇಳಬಯಸುತ್ತೇನೆ.ನಾನು ಲಕ್‌ನೌಗೆ ಬರಲು ಸಾಧ್ಯವಾದರೆ ನಿಮ್ಮನ್ನು ಭೇಟಿ ಮಾಡುತ್ತೇನೆ ಮತ್ತು ಅಲ್ಲಿ ನಿಮ್ಮ ಸೇವೆಗೆ ನಾನು ಸದಾ ಸಿದ್ಧ.

ಸರ್ದಾರ್‌ ವಲ್ಲಬ್‌ಭಾಯ್‌ ಪಟೇಲ್‌: ಗಾಂಧೀಜಿಯು ಅಚಾನಕ್ಕಾಗಿ ನಮ್ಮನ್ನು ಬಿಟ್ಟು ಅಗಲಿದಾಗ, ಈ ವಿಶಾಲವಾದ ದೇಶದ ನಾಯಕತ್ವಕ್ಕೆ ಹೆಗಲು ಕೊಟ್ಟವರಲ್ಲಿ ಪ್ರಮುಖರು ನೆಹರೂ. ಸ್ವಾತಂತ್ರ್ಯ ನಂತರ ಒಂದರ ಹಿಂದೆ ಒಂದರಂತೆ ಎರಗಿದ ಸಮಸ್ಯೆಗಳನ್ನು ಎದುರಿಸುವಲ್ಲಿ ನೆಹರೂ ಈ ದೇಶಕ್ಕೆ ಮಾಡಿದ ಸೇವೆ ಎಂಥಹುದೆಂದು ಎಲ್ಲರಿಗಿಂತಾ ಚೆನ್ನಾಗಿ ನನಗೊಬ್ಬನಿಗೆ ಮಾತ್ರ ಗೊತ್ತಿದೆ.

ನೆಹರೂ ನನಗಿಂತಾ ಚಿಕ್ಕವನೇ ಆಗಿದ್ದರೂ, ಇತ್ತೀಚಿನ ದಿನಗಳಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಕೆಲಸದ ಒತ್ತಡದ ಕಾರಣದಿಂದ ಅಕಸ್ಮಾತ್ ಅವರು ಸಿಗದೇ ಹೋದರೆ, ನಾನು ತುಂಬಾ ಕಳವಳಕ್ಕೀಡಾಗುತ್ತೇನೆ.
ನೆಹರೂ ಬ್ರಿಟಿಷರ ವಿರುದ್ಧ ದೃಢತೆ ಹಾಗೂ ದಿಟ್ಟತನದಿಂದ ಹೋರಾಡಿದರು. ಅವರು ಈ ಹೋರಾಟದಲ್ಲಿ ಅಗ್ನಿದೀಕ್ಷೆಯನ್ನು ಪಡೆದವರಂತೆ ಕಂಡರೂ ಅಹಿಂಸಾ ಯುದ್ಧನೀತಿಯ ಕಲೆಯನ್ನು ಅರಿತಿದ್ದರು. ಅವರಿಗಿದ್ದ ಅಪಾರ ಭಾವನಾತ್ಮಕತೆ ರೈತರ ಹಾಗೂ ಬಡವರ ಮೇಲೆ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಸಿಡಿದೇಳುವಂತೆ ಮಾಡಿತ್ತು.

ನೆಹರೂಗೆ ಇರುವ ಸಂಘಟನಾಶಕ್ತಿ ಹಾಗೂ ದೂರದೃಷ್ಟಿಯಿಂದ ಭಾರತ ದೇಶಕ್ಕೆ ಮಾತ್ರವೇ ಅಲ್ಲ, ಇಡೀ ಜಗತ್ತಿಗೆ ಸಮರ್ಥ ನಾಯಕ ಎನ್ನುವಂತೆ ಬೆಳೆದಿದ್ದಾರೆ. ದಿನದಿಂದ ದಿನಕ್ಕೆ ಪ್ರಬುದ್ಧರಾಗುತ್ತಿರುವ ನೆಹರೂ, ಇತ್ತೀಚಿನ ದಿನಗಳಲ್ಲಿ ಅವರ ಬಳಿಗೆ ಬರುವ ಯಾವ ನಿರಾಶ್ರಿತರನ್ನೂ ಬರಿಗೈಯಲ್ಲಿ ಕಳುಹಿಸುವುದಿಲ್ಲ.ಕಾಮನ್‌ವೆಲ್ತ್ ಕೌನ್ಸಿಲ್‌ ಗಳಲ್ಲಿ ಅವರ ಕೊಡುಗೆ ಗಮನಾರ್ಹ, ಜಾಗತಿಕ ವೇದಿಕೆಗಳಲ್ಲಿ ನೆಹರೂ ಸಮತೋಲಿತ ಯುವದೃಷ್ಟಿಕೋನ ಹಾಗೂ ಪ್ರಬುದ್ಧತೆಯನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಸ್ಫೂರ್ತಿಯುಕ್ತ ಯುವಕರು ಹಾಗೂ ವಿಚಾರಶೀಲ ಹಿರಿಯರ ಜೊತೆ ನೆಹರೂ ಸಮಾನ ಗೆಳೆತನ ಹೊಂದಿದ್ದಾರೆ. ಈ ವೈವಿಧ್ಯತೆ ಹಾಗೂ ಹೊಂದಾಣಿಕೆಯೇ ನೆಹರೂ ಅವರ ಅದ್ಭುತ ಚೈತನ್ಯದ ರಹಸ್ಯ.

ಲಾಲ್‌ ಬಹದ್ದೂರ್‌ ಶಾಸ್ತ್ರಿ: ನನಗೆ ನೆನಪಿದೆ. ಅದು 1936 ರಿಂದ 1938ರ ಸ್ವಾತಂತ್ರ್ಯ ಹೋರಾಟದ ಸಂದರ್ಭ ಯಾಕೋ ನಮ್ಮ ಚಳುವಳಿಯು ದುರ್ಬಲವಾಗತೊಡಗಿತು. ಅದೇ ಸಮಯಕ್ಕೆ ನಮ್ಮ ಹೋರಾಟವನ್ನು ಇನ್ನೂ ಹತ್ತಿಕ್ಕಲು ಬ್ರಿಟಿಷ್ ಸರ್ಕಾರ ಹೊಂಚುಹಾಕುತ್ತಿತ್ತು. ಹೋರಾಟಗಾರರು ದಿಗಿಲುಗೊಂಡಿದ್ದರೂ ಸಹ ಕೆಚ್ಚನ್ನು ಮಾತ್ರ ಬಿಟ್ಟಿರಲಿಲ್ಲ. ಆ ಸಂದರ್ಭದಲ್ಲಿ ಮಾರ್ಗದರ್ಶಕರಾಗಿದ್ದೇ ನೆಹರೂ. ಜನರಲ್ಲಿ ಅವರ ಬಗ್ಗೆ ಏನೋ ಒಂದು ಅಚಲವಾದ ನಂಬಿಕೆ ಇತ್ತು.

1940ರ ನಾನು ಎಲೆಕ್ಷೆನ್ ನಿಂತಿದ್ದ ಸಮಯದಲ್ಲಿ ಒಮ್ಮೆ ಮಿರ್ಜಾಪುರ್ ಕ್ಷೇತ್ರದ ಸುತ್ತಾ ದಿನರಾತ್ರಿಯೆಲ್ಲಾ ಓಡಾಡಿ, ಭಾಷಣ ಮಾಡಿ ನಾವೆಲ್ಲರೂ ಸುಸ್ತಾಗಿದ್ದೆವು. ಸುಮಾರು ರಾತ್ರಿ ಒಂಭತ್ತು ಘಂಟೆಗೆ ಕಾರ್ಯಕ್ರಮ ಮುಗಿದಿತ್ತು. ಪೂರ್ಣಿಮಾ ಬ್ಯಾನರ್ಜಿ ಅವರ ಕಾರಿನಲ್ಲಿ ನಾವೆಲ್ಲಾ ಹೊರಡಬೇಕಿತ್ತು. ಆದರೆ ಪೂರ್ಣಿಮಾ ಅವರು ತುಂಬಾ ದಣಿದಿದ್ದನ್ನು ಕಂಡು ನೆಹರು, "ಪಾಪ ಆಕೆಯ ಮುಖ ನೋಡು ಎಷ್ಟು ಬಾಡಿಹೋಗಿದೆ" ಎಂದು ಹೇಳುತ್ತಾ ತಾವೇ ಸ್ವತಃ ಕಾರನ್ನು ಚಲಾಯಿಸಲು ಕುಳಿತರು.

ಸುಮಾರು ಹನ್ನೊಂದು ಘಂಟೆಗೆ ನಾವು ಅವರ ಮನೆಯಾದ ಆನಂದ ಭವನಕ್ಕೆ ತಲುಪಿದೆವು. ನಾನು ನೆಹರು ಅವರನ್ನು “ನೀವು ಇಳಿದುಕೊಳ್ಳಿ ನಿಮ್ಮ ಮನೆ ಬಂದಿದೆ, ಇಲ್ಲಿಂದ ನಾನೇ ಹೋಗುತ್ತೇನೆ" ಎಂದೆ. ಅದಕ್ಕೆ ಒಪ್ಪದ ನೆಹರು ತಾವೇ ನಮ್ಮ ಮನೆಯ ತನಕ ಬಂದು ಬಿಡುವುದಾಗಿ ಹೇಳುತ್ತಾ ಕಾರು ಚಲಾಯಿಸಿದರು.    
ಆದರೆ ದಾರಿಯಲ್ಲಿ ಒಂದು ಸಣ್ಣ ಅಪಘಾತವಾಗಿ ನಮ್ಮ ಕಾರು ಹಸು ಒಂದಕ್ಕೆ ತಾಗಿ, ಅದರ ಕೊಂಬಿಗೆ ಸಣ್ಣ ಗಾಯವಾಯ್ತು. ತಕ್ಷಣ ಕಾರಿನಿಂದ ಕೆಳಗೆ ಇಳಿದ ನೆಹರು ಹಸುವಿನ ಬಳಿಗೆ ಹೋಗಿ ಅದನ್ನು ನೋಡುತ್ತಾ, ಈಗೇನು ಮಾಡುವುದು ಎಂದು ಬೇಸರ ಪಟ್ಟುಕೊಂಡು ನನ್ನನ್ನು ಕೇಳಿದರು. ನಾವು ಏನೂ ತೋಚದೆ ಅಲ್ಲೇ ನಿಂತಿದ್ದಾಗ ಆ ಹುವಿನ ಒಡೆಯ ಕೆಲವು ಸಂಗಡಿಗರೊಂದಿಗೆ ಬಂದನು. ಅವನು ಬಂದ ತಕ್ಷಣ ನಮ್ಮನ್ನೆಲ್ಲಾ ಗುರುತಿಸಿ, "ನೀವು ಹೊರಡಿ ನಾವು ಹಸುವನ್ನು ನೋಡಿಕೊಳ್ಳುತ್ತೇವೆ, ಅದಕ್ಕೆ ಹೆಚ್ಚೇನು ಗಾಯವಾಗಿಲ್ಲ” ಎಂದು ಒತ್ತಾಯ ಮಾಡಿದನು, ಆಗ ನೆಹರು ಒಂದು ಚೀಟಿಯಲ್ಲಿ ಅವನ ವಿಳಾಸವನ್ನು ಬರೆದುಕೊಂಡರು ಮತ್ತು ನಾವು ಅಲ್ಲಿಂದ ಹೊರಟೆವು.

ನೆಹರು ನನ್ನನ್ನು ಮನೆಗೆ ಬಿಟ್ಟು ಮತ್ತೆ ತನ್ನ ಮನೆಗೆ ಮರಳಿದರು. ತಕ್ಷಣ ಅವರು ಮಾಡಿದ ಕೆಲಸವೆಂದರೆ, ಆ ಹಸುವಿನ ಚಿಕಿತ್ಸೆಗಾಗಿ ಒಡೆಯನಿಗೆ ಮೂವತ್ತು ರೂಪಾಯಿ ಕಳುಹಿಸಿಕೊಟ್ಟರು. ಎಷ್ಟೇ ಒತ್ತಡದ ಕೆಲಸವಿದ್ದರೂ ನೆಹರೂ ಯಾವುದೇ ಸಣ್ಣ ಜವಾಬ್ದಾರಿಯನ್ನೂ ಮರೆಯುತ್ತಿರಲಿಲ್ಲ. ಸುಧೀರ್ಘ ಒಂಭತ್ತು ಘಂಟೆಗಳ ಆ ಪ್ರಯಾಣ ನನ್ನ ನೆನಪಿನಲ್ಲಿ ಏಕೋ ಇಂದಿಗೂ ಮಾಸಿಲ್ಲ.

ಇದು ನಡೆದು ಹತ್ತಾರು ವರ್ಷಗಳೇ ಆಗಿಹೋಗಿವೆ. ಇಂದು ಅದೇ ನೆಹರು ಇಡೀ ಜಗತ್ತಿನಲ್ಲಿ ಅಪಾರ ಖ್ಯಾತಿ ಪಡೆದ ವ್ಯಕ್ತಿಯಾಗಿದ್ದಾರೆ. ಆದರೂ ಇಂದಿಗೂ ಅವರ ಸರಳತೆ ಮತ್ತು ಮಾನವೀಯತೆ ಕಡಿಮೆಯಾಗಿಲ್ಲ. ಅದಕ್ಕಾಗಿಯೇ ಇರಬೇಕು ಅವರು ಕೋಟ್ಯಾಂತರ ಭಾರತೀಯರು ಆರಾಧಿಸುವ ನಾಯಕರಾಗಿರುವುದು.

ಚೀನಾದ ಮಹಾತ್ಮ  ಟ್ಯಾನ್‌ ಯುನ್‌ ಶಾನ್‌: ನಮ್ಮ ಚೀನಾ ದೇಶದ ಜನರಿಗೆ ಭಾರತ ದೇಶದ ಭಗವಾನ್ ಬುದ್ಧ ಹಾಗೂ ಬೋಧಿಸತ್ವದ ಆರಾಧನೆಯ ಜೊತೆಗೆ ಇನ್ನೂ ಮೂರು ಹೆಸರುಗಳು ಅತ್ಯಂತ ಆಪ್ತ, ಮಹಾತ್ಮ ಗಾಂಧಿ, ಗುರುದೇವ ಠಾಗೋರ್ ಮತ್ತು ಪಂಡಿತ್‌ ನೆಹರು. ಚೀನಿಯರು ಗಾಂಧೀಜಿಯನ್ನು ಒಬ್ಬ ಸಂತನ ಹಾಗೆ ಗೌರವಿಸುತ್ತಾ ಠಾಗೋರರನ್ನು ಗುರುವಿನ ಹಾಗೆ ಪೂಜಿಸುತ್ತಾ ನೆಹರೂ ಅವರನ್ನು ಆತ್ಮೀಯ ಗೆಳೆಯನಾಗಿ ತುಂಬಾ ಪ್ರೀತಿಸುತ್ತಾರೆ.

Tyan yung shan

ಚೀನಾ ದೇಶವು ಭಯಾನಕ ಯುದ್ಧವನ್ನು ಎದುರಿಸುತ್ತಿದ್ದ ಕಠಿಣ ಸಂಧರ್ಭದಲ್ಲಿ ನೆಹರೂ ಇಲ್ಲಿಗೆ ಭೇಟಿ ಕೊಟ್ಟರು. ಆಗ ಚೀನಾ ತನ್ನ ಅತಿಥಿಯನ್ನು ಸ್ವಾಗತಿಸಲು ಭಾರತದ ತ್ರಿವರ್ಣ ದ್ವಜವನ್ನು ಹಾರಿಸುವುದರ ಮೂಲಕ ಚೀನಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿದೇಶ ಧ್ವಜವನ್ನು ಏರಿಸಿ ಗೌರವಿಸಿತು.

ಇದನ್ನು ಓದಿದ್ದೀರಾ? ಅವರಿಗೆ ಇನ್ನೂ ಕಾಡುತ್ತಿರುವುದು ನೆಹರೂ ಕುಟುಂಬ ಮತ್ತವರ ಕೆಲಸ

ಈ ಜಗತ್ತಿನ ಹಲವಾರು ದೇಶಗಳು ತನ್ನ ಅಧಿಕಾರ ಮತ್ತು ಅದರ ಶಕ್ತಿಯನ್ನೇ ಅಂಧತೆಯಿಂದ ಪೂಜಿಸುತ್ತಾ ಬಂದಿವೆ. ಮುಸಲೋನಿಯು ಬಲಶಾಲಿಯಾಗಿದ್ದಾಗ ಇಟಲಿಯ ಜನ ಅವನನ್ನು ಹಿಂಬಾಲಿಸಿದರು. ಹಿಟ್ಲರ್ ಜರ್ಮನಿಯ ಅಧಿಕಾರ ಹಿಡಿದಾಗ ಅಲ್ಲಿಯ ಜನ ಅವನನ್ನು ಆರಾಧಿಸಿ ಮೆಚ್ಚಿದರು. ಜಪಾನ್ ದೇಶವು ಪ್ರಬಲವಾದಂತೆಲ್ಲಾ ಅಲ್ಲಿನ ಸೈನಿಕರು ತಮ್ಮ ದೇಶವನ್ನು ಹಾಡಿ ಹೊಗಳಿದರು. ಇಂದೂ ಕೂಡ ರಷ್ಯನ್ನರು ಕಾಮ್ರೆಡ್ ಸ್ಟಾಲಿನ್‌ನನ್ನು ಕೊಂಡಾಡುತ್ತಾರೆ. ಆದರೆ ನೆಹರೂ ಮಾತ್ರ ಅಷ್ಟೊಂದು ಜನಪ್ರಿಯತೆಯನ್ನು ಗಳಿಸಿದ್ದರೂ ಅದನ್ನು ಎಂದೂ ದುರುಪಯೋಗ ಪಡಿಸಿಕೊಳ್ಳಲಿಲ್ಲ "

ಸಂಗ್ರಹ: ವಿಜಯ್‌ ಹನಕೆರೆ
ನಿಮಗೆ ಏನು ಅನ್ನಿಸ್ತು?
2 ವೋಟ್
eedina app