ಸ್ವಾತಂತ್ರ್ಯ 75| ಕಾರ್ಮಿಕರ ʼನೆಮ್ಮದಿಯ ನಾಳೆʼಗಳು ಏನಾದವು?

CITU

ಕಾರ್ಮಿಕ ವರ್ಗದ ಐಕ್ಯತೆಯನ್ನು ವಿಫಲಗೊಳಿಸಲು ನವಉದಾರವಾದಿ ಆರ್ಥಿಕ ನೀತಿಗಳನ್ನು ಸುಗಮವಾಗಿ ಜಾರಿಗೊಳಿಸಲು ಜನತೆಯಲ್ಲಿ ಕೋಮು ವಿಭಜನೆಗೆ ಸಂಘ ಪರಿವಾರ ಮತ್ತು ಇತರೆ ಧಾರ್ಮಿಕ ಮೂಲಭೂತವಾದಿ ಶಕ್ತಿಗಳು ಯತ್ನಿಸಿವೆ. ಅದಕ್ಕೆ ಪೂರಕವಾಗಿ ಹಿಜಾಬ್, ಹಲಾಲ್, ಆಜಾನ್‌, ವ್ಯಾಪಾರ ನಿಷೇಧ ಮೂಲಕ ಕೋಮು ಧ್ರುವೀಕರಣಕ್ಕೆ ಯತ್ನಿಸಲಾಗಿದೆ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾರ್ಮಿಕರು, ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರು. ಜಾತಿ, ಧರ್ಮ, ಭಾಷೆ ಮುಂತಾದವನ್ನು ಮೀರಿ ಹೋರಾಟದಲ್ಲಿ ತೊಡಗಿದ್ದ ಕಾರ್ಮಿಕರು ಕೇವಲ ತಮ್ಮ ಆರ್ಥಿಕ ಬೇಡಿಕೆಗಳಿಗೆ ಮಾತ್ರ ಸೀಮಿತವಾಗದೆ ಸ್ವಾತಂತ್ರ್ಯಕ್ಕಾಗಿ ಕೂಡ ಅವಿರತವಾಗಿ ತೊಡಗಿದ್ದರು. ಬಾಲಗಂಗಾಧರ್ ತಿಲಕರಿಗೆ ಬ್ರಿಟಿಷರ ನ್ಯಾಯಾಲಯ ದೇಶದ್ರೋಹದ ಆರೋಪದ ಮೇಲೆ 6 ವರ್ಷಗಳ ಶಿಕ್ಷೆ ವಿಧಿಸಿದಾಗ, ಬಾಂಬೆ ಗಿರಣಿ ಕಾರ್ಮಿಕರು 6 ದಿನಗಳ ಮುಷ್ಕರ ನಡೆಸಿದ್ದರು. 18 ಕಾರ್ಮಿಕರು ಬ್ರಿಟಿಷರ ಗುಂಡುಗಳಿಗೆ ಬಲಿಯಾದರೆ 50ಕ್ಕೂ ಹೆಚ್ಚು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಇಂತಹ ನೂರಾರು ಹೋರಾಟಗಳು, ತ್ಯಾಗ ಬಲಿದಾನಗಳನ್ನು ರಾಷ್ಟ್ರದ ದುಡಿಯುವ ಜನತೆ ಮಾಡಿದ್ದಾರೆ. ಜನವಿರೋಧಿ ಪಬ್ಲಿಕ್ ಸೇಫ್ಟಿ ಬಿಲ್ ಮತ್ತು ಕಾರ್ಮಿಕ ವಿರೋಧಿ ಕೈಗಾರಿಕಾ ಸಂಬಂಧಗಳ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಮುಂದಾದಾಗ ಬಾಂಬ್ ಎಸೆದು, ನಗುನಗುತ್ತಾ ನೇಣುಗಂಬವನ್ನು ಏರಿದ್ದ ಭಗತ್‍ಸಿಂಗ್ ಮತ್ತು ಸಂಗಡಿಗರ ಪರಮೋಚ್ಛ ತ್ಯಾಗದಿಂದ ಪಡೆದ ಸ್ವಾತಂತ್ರ್ಯದಲ್ಲಿ “ನೆಮ್ಮದಿಯ ನಾಳೆಗಳ” ಕನಸನ್ನು ಭಾರತೀಯರು ಹೊಂದಿದ್ದರು.

ಭಾರತ ಸಂವಿಧಾನದ ಆಶಯ
ಅದರ ಪರಿಣಾಮವಾಗಿ ಸೀಮಿತವಾಗಿಯಾದರೂ “ಸ್ವತಂತ್ರ, ಸಾರ್ವಭೌಮ ಗಣರಾಜ್ಯವಾಗಿ” ರೂಪಿತವಾದ ಭಾರತವು ಸ್ವಾತಂತ್ರ ಚಳುವಳಿಯ ಆಶಯದಂತೆ “ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ, ಸಾರ್ವಭೌಮ ಗಣರಾಜ್ಯವಾಗಿ” ಹೊರಹೊಮ್ಮಿತ್ತು. ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಾರ್ವಭೌಮತೆ, ಒಕ್ಕೂಟವಾದವು ಭಾರತದ ಸಂವಿಧಾನದ ಮೂಲಭೂತ ಆಧಾರ ಸ್ತಂಭವಾದವು. ಆದರೂ ಸಹಾ ನಿಜಾರ್ಥದಲ್ಲಿ ರಾಜಕೀಯ ಸ್ವಾತಂತ್ರ್ಯವು ಆರ್ಥಿಕ ಸ್ವಾತಂತ್ರ್ಯವಾಗಿ ಹೊರಹೊಮ್ಮಲಿಲ್ಲ. ಸಂವಿಧಾನದ ಮಿತಿಗಳು ಇಂತಹ ಪರಿಸ್ಥಿತಿಗೆ ಕೊಡುಗೆ ನೀಡಿದ್ದವು.

ಹೋರಾಟಗಳ ಫಲವಾಗಿ ಧಕ್ಕಿದ ಹಕ್ಕುಗಳು
ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆನಂತರ ಹೋರಾಟ ಚಳವಳಿಯ ಪರಿಣಾಮವಾಗಿ ಪ್ರಸ್ತುತ ವ್ಯವಸ್ಥೆಯೊಳಗೆ ಅಲ್ಪವಾದರೂ ಪರಿಹಾರ ಒದಗಿಸುವ ಹಕ್ಕುಗಳನ್ನು ಕಾರ್ಮಿಕರಿಗೆ ಶಾಸನಾತ್ಮಕವಾಗಿ ಒದಗಿಸುವ ವೃತ್ತಿ ಸಂಘಗಳ ಕಾಯ್ದೆ-1926, ವೇತನ ಪಾವತಿ ಕಾಯ್ದೆ-1936, ಕಾರ್ಖಾನೆಗಳ ಕಾಯ್ದೆ-1948, ಕೈಗಾರಿಕಾ ವಿವಾದಗಳ ಕಾಯ್ದೆ-1948, ನೌಕರರ ರಾಜ್ಯ ವಿಮಾ ಕಾಯ್ದೆ-1948, ಕನಿಷ್ಠ ವೇತನ ಕಾಯ್ದೆ-1948, ನೌಕರರ ಭವಿಷ್ಯ ನಿಧಿ ಮತ್ತು ಇತರೆ ಪ್ರಾವಧಾನಗಳ ಕಾಯ್ದೆ-1952 ರೂಪಿಸಿ ಜಾರಿಗೊಳಿಸುವ ಯತ್ನ ನಡೆಸಲಾಯಿತು. ಆನಂತರ ಬೋನಸ್ ಪಾವತಿ ಕಾಯ್ದೆ-1965, ಉಪಧನ ಪಾವತಿ ಕಾಯ್ದೆ-1965, ಗುತ್ತಿಗೆ ಕಾರ್ಮಿಕರ (ಕ್ರಮೀಕರಣ ಮತ್ತು ನಿಯಂತ್ರಣ) ಕಾಯ್ದೆ-1970, ಸಮಾನ ಸಂಭಾವನೆ ಕಾಯ್ದೆ-1976 ಅನ್ನು ಭಾರತವು ಅಂಗೀಕರಿಸಿತ್ತು.

ನಾಮ ನಿರ್ದೇಶಕ ತತ್ವಗಳು
ಆದರೆ ಸಂವಿಧಾನ ರಚನೆಯ ವೇಳೆಯಲ್ಲಿ ನ್ಯಾಯಸಮ್ಮತ ವೇತನ ಮತ್ತು ಜೀವಿಸುವ ವೇತನದಂತಹ ಅಂಶಗಳನ್ನು ಸಂವಿಧಾನದ 4ನೇ ಭಾಗ-ನಾಮ ನಿರ್ದೇಶಕ ತತ್ವಗಳಲ್ಲಿ ಸೇರ್ಪಡೆ ಮಾಡಲಾಯಿತು. ಅಂದು ಕೇವಲ ಕನಿಷ್ಠ ವೇತನ ಕಾಯ್ದೆಯನ್ನು ಮಾತ್ರ ಶಾಸನಾತ್ಮಕ ಹಕ್ಕಾಗಿ ಜಾರಿಗೊಳಿಸಲಾಯಿತು.  ಆನಂತರ ತೀವ್ರಗೊಂಡ ಕಾರ್ಮಿಕ ಚಳವಳಿಯ ಪರಿಣಾಮವಾಗಿ ಸಂವಿಧಾನದ ನಾಮನಿರ್ದೇಶಕ ತತ್ವದಲ್ಲಿನ ಅಂಶಗಳ ಜಾರಿಗಾಗಿ ವಹಿಸಬೇಕಾದ ಕ್ರಮಗಳ ಕುರಿತು ಶಿಫಾರಸ್ಸು ಕೋರಿ 1966ರಲ್ಲಿ ಮೊದಲ ಕಾರ್ಮಿಕ ಆಯೋಗ-ನ್ಯಾಯಮೂರ್ತಿ ಶ್ರೀ ಗಜೇಂದ್ರಗಡಕರ್ ಆಯೋಗ ರಚಿಸಲಾಯಿತು. 1969ರಲ್ಲಿ ಆಯೋಗ ವರದಿ ನೀಡಿದರು, ಅದರ ಜಾರಿಗೆ ಇದುವರೆಗೆ ಕ್ರಮಗಳಾಗಿಲ್ಲ.

ಬದಲಾಗಿ 1999ರಲ್ಲಿ ಎ.ಬಿ. ವಾಜಪೇಯಿ ಅವರು ಪ್ರಧಾನಿಗಳಾಗಿದ್ದಾಗ 2ನೇ ಕಾರ್ಮಿಕ ಆಯೋಗವನ್ನು ರವೀಂದ್ರ ವರ್ಮ ನೇತೃತ್ವದಲ್ಲಿ ರಚಿಸಿತು. ಕಾರ್ಮಿಕ ಚಳವಳಿಯ ತೀವ್ರ ವಿರೋಧದ ನಡುವೆಯು 2002ರಲ್ಲಿ ತನ್ನ ವರದಿಯನ್ನು ಅದು ನೀಡಿತು. ಅದನ್ನು ಜಾರಿಗೊಳಿಸಲು ನಿರಂತರ ಯತ್ನವನ್ನು ಆ ಸರ್ಕಾರ ನಡೆಸಿತು. ಇಂತಹದೇ ಯತ್ನಗಳನ್ನು ನವಉದಾರವಾದಿ ಆರ್ಥಿಕ ನೀತಿಗಳ ಭಾಗವಾಗಿ ಜಾರಿಗೊಳಿಸುವ ಯತ್ನವು 1991ರಿಂದ ನಡೆದಿವೆ. ಕಾರ್ಮಿಕ ಚಳವಳಿ ಅದನ್ನು ವಿಫಲಗೊಳಿಸುತ್ತಾ ಬಂದಿತ್ತು. ಕಾರ್ಮಿಕ ಚಳವಳಿಯ ತೀವ್ರತೆಯಿಂದಾಗಿ ನವ ಉದಾರವಾದಿ ಆರ್ಥಿಕ ನೀತಿಗಳ ನಡುವೆಯು ಕಟ್ಟಡ ಕಾರ್ಮಿಕ ಸೇವಾ ಶರತ್ತು, ಸಾಮಾಜಿಕ ಭದ್ರತಾ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯಂತಹ ಕ್ರಮಗಳಿಗೆ ಸರ್ಕಾರಗಳು ಮುಂದಾಗಬೇಕಾಗಿ ಬಂದಿತ್ತು.

Image
labours in freedom movement

ಮೋದಿ ಸರ್ಕಾರದ ಅಷ್ಟ ವರ್ಷಗಳು
ಆದರೆ ಕಳೆದ 8 ವರ್ಷಗಳಲ್ಲಿ 2014ರ ನಂತರ ಮೋದಿ ಸರ್ಕಾರವು 2ನೇ ಕಾರ್ಮಿಕ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ 4 ಕಾರ್ಮಿಕ ಸಂಹಿತೆಗಳನ್ನು ರೂಪಿಸಿ ಅಂಗೀಕರಿಸಿದೆ. ಆ ಮೂಲಕ ಮೇಲೆ ಉಲ್ಲೇಖಿಸಿದ ಮತ್ತಿತರೆ ಒಟ್ಟು 29 ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿದೆ.

ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ವೃತ್ತಿ ಸುರಕ್ಷಿತೆ, ಆರೋಗ್ಯ ಮತ್ತು ಕೆಲಸದ ಶರತ್ತುಗಳ ಸಂಹಿತೆ-2020 ಗಳನ್ನು ಜಾರಿಗೊಳಿಸಲು ಯತ್ನಿಸಿದೆ. ಆದರೆ ಅವುಗಳ ಜಾರಿಗೆ ಕಾರ್ಮಿಕ ಚಳುವಳಿಯು ತೀವ್ರ ಅಡ್ಡಿಯನ್ನು ಉಂಟು ಮಾಡಿದೆ. ಕಳೆದ 2 ವರ್ಷಗಳಿಂದ ಅವುಗಳ ಜಾರಿಗೆ ಅವಕಾಶ ಕಲ್ಪಿಸಿಲ್ಲ. ಪ್ರತಿರೋಧಿಸಿ ಅವುಗಳ ನಿರಾಕರಣೆಯಲ್ಲಿ ನಿರತವಾಗಿದೆ.

ಕನಿಷ್ಠ ವೇತನಕ್ಕಿಂತ ಕೆಳಗಿನ “ನೆಲಮಟ್ಟದ ಕನಿಷ್ಠ ವೇತನ” (NFMW) ಅನ್ನು ವೇತನ ಸಂಹಿತೆಯಲ್ಲಿ ಅಳವಡಿಸಿ ದಿನಕ್ಕೆ ರೂ.176 ಅನ್ನು ನಿಗದಿಪಡಿಸಿದೆ. ಮೇಲ್ಮುಖವಾಗಿ ನ್ಯಾಯಸಮ್ಮತ ಹಾಗೂ ಜೀವಿಸುವ ವೇತನದ ಹಕ್ಕನ್ನು ದುಡಿಯುವ ಕೈಗಳಿಗೆ ನೀಡುವ ಬದಲು ಕೆಳಮುಖವಾಗಿ NFMW ಕೊಡುಗೆಯನ್ನು ಬಂಡವಾಳಿಗರಿಗೆ ನೀಡಿದೆ. ನವಉದಾರವಾದಿ ಆರ್ಥಿಕ ನೀತಿಗಳ ಪರಿಣಾಮವಾಗಿ ಖಾಯಂ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿ, ಖಾಯಂಯೇತರ ಗುತ್ತಿಗೆ ಮುಂತಾದವರ ಸಂಖ್ಯೆ ಹೆಚ್ಚುತ್ತಾ ಬಂದಿದೆ. ಸ್ಕೀಂ ನೌಕರರ ಗೌರವಧನವನ್ನು ವೇತನ ಸಂಹಿತೆ ವ್ಯಾಪ್ತಿಗೆ ತರಲು ಮತ್ತು ಅವರನ್ನು ನೌಕರರೆಂದು ಪರಿಗಣಿಸಲು ಸಂಹಿತೆಗಳಲ್ಲಿ ಅನುವುಗೊಳಿಸಲಿಲ್ಲ. ಸಂಘ ಕಟ್ಟುವ ಹಕ್ಕು, ಮುಷ್ಕರ ನಡೆಸುವ ಹಕ್ಕನ್ನು, ಶಾಸನಬದ್ಧ ನಿರೀಕ್ಷಣೆ, ಕಾಯಂ ನೌಕರರಾಗುವ ಅವಕಾಶವನ್ನು ಇಲ್ಲದಾಗಿಸಿದೆ.

ತಯಾರಿಕಾ ವಲಯದಲ್ಲಿನ ನಿವ್ವಳ ಮೌಲ್ಯವರ್ಧನೆಯ ಪ್ರತಿ ನೂರು ರೂಗಳಲ್ಲಿ 1981-82 ರಲ್ಲಿ ಶೇಕಡ 30.27 ರಷ್ಟಿದ್ದ ವೇತನದ ಪಾಲು 2017-18 ರಲ್ಲಿ 15.67 ಶೇಕಡಕ್ಕೆ ಕುಸಿದಿದೆ. ಆದರೆ ಅದೇ ವೇಳೆಯಲ್ಲಿ ಮಾಲೀಕರ ಲಾಭದ ಪಾಲು ಶೇಕಡ 23.39 ರಷ್ಟಿದ್ದದ್ದು 46.68ಕ್ಕೆ ನೆಗೆತ ಕಂಡಿದೆ. (ವಾರ್ಷಿಕ ಕೈಗಾರಿಕಾ ಸರ್ವೇಕ್ಷಣ ವರದಿ-ಭಾರತ ಸರ್ಕಾರ) ವೇತನದ ಪಾಲನ್ನು ಶೇಕಡ 9ಕ್ಕೆ ಇಳಿಸಬೇಕೆಂಬುದು ಮಾಲೀಕರ ಬೇಡಿಕೆಯಾಗಿದೆ. ಅದರ ಪರಿಣಾಮ ದುಡಿಯುವ ಜನತೆಯ ಕೊಳ್ಳುವ ಶಕ್ತಿ ಕುಂಠಿತವಾಗಿ ಬಂಡವಾಳಶಾಹಿ ವ್ಯವಸ್ಥೆಯೊಳಗೆ ಅಂತರಗತವಾಗಿರುವ ಬಂಡವಾಳಶಾಹಿ ಆರ್ಥಿಕತೆಯ ಹಿಂಜರಿತವು ನಿರುದ್ಯೋಗವನ್ನು ಹೆಚ್ಚು ಮಾಡುತ್ತಾ ಹೋಗುತ್ತದೆ. ಅದರ ಪರಿಣಾಮಗಳನ್ನು ಪ್ರಸ್ತುತ ನೋಡಲಾಗುತ್ತಿದೆ. ನವಉದಾರವಾದಿ ಆರ್ಥಿಕತೆಯ ಉದ್ಯೋಗಹೀನ ಬೆಳವಣಿಗೆಯ ಹಂತದಿಂದ ಪ್ರಸಕ್ತ ಪರಿಸ್ಥಿತಿಯು ಉದ್ಯೋಗನಾಶಕ ಹಂತಕ್ಕೆ ತಲುಪಿದೆ.

ನಿರುದ್ಯೋಗ, ಬೆಲೆ ಏರಿಕೆ - ಆರ್ಥಿಕತೆಯ ಹಿಂಜರಿತ
ಮೋದಿ ನೇತೃತ್ವದ ಬಿಜೆಪಿ-ಎನ್‍ಡಿಎ ಸರ್ಕಾರದ ನೋಟು ರದ್ಧತಿ, ಸಾರ್ವಜನಿಕ ಉದ್ದಿಮೆಗಳ ಮಾರಾಟ, ಯೋಜನಾ ಆಯೋಗದ ರದ್ಧತಿ, ಅಸಮರ್ಪಕ ಕೋವಿಡ್ ನಿರ್ವಹಣೆ-ಅವೈಜ್ಞಾನಿಕ ಲಾಕ್ಡೌನ್ ಹೇರಿಕೆ, ಜಿಎಸ್‍ಟಿ ಬೆಲೆ ಏರಿಕೆ, ದಿವಾಳಿತನ ಮತ್ತು ಪಾಪರಿಕೆ ಸಂಹಿತೆ (IB Code), ಕಾರ್ಮಿಕ ಸಂಹಿತೆಗಳು, ರಾಷ್ಟ್ರೀಯ ಆಸ್ತಿ ನಗದೀಕರಣ ಪೈಪ್‍ಲೈನ್, ಇತ್ತೀಚಿನ ಅಗ್ನಿಪಥ-ಅಗ್ನೀವೀರ ಯೋಜನೆ, ಮುಂತಾದ ನವಉದಾರವಾದಿ ಕ್ರಮಗಳು ಆರ್ಥಿಕತೆಯನ್ನು ಸಂಕುಚಿತಗೊಳಿಸಿ, ನಿರುದ್ಯೋಗದ ಹೆಚ್ಚಳಕ್ಕೆ ಅನುವುಗೊಳಿಸಿವೆ.

ಸ್ವಾತಂತ್ರ್ಯ-75 ಹಕ್ಕುಗಳ ಕಸಿಯುವಿಕೆ 
ಸ್ವಾತಂತ್ರ್ಯ-75ರ ಹೊಸ್ತಿಲಲ್ಲಾದರೂ ಸಂವಿಧಾನದ ನಾಮನಿರ್ದೇಶಕ ತತ್ವಗಳಲ್ಲಿನ ನ್ಯಾಯಸಮ್ಮತ ವೇತನ, ಜೀವಿಸುವ ವೇತನ, ಘನತೆಯ ಬದುಕು, ಸೌಜನ್ಯಯುತ ಉದ್ಯೋಗದ ಹಕ್ಕು, ಸಾಮಾಜಿಕ ಭದ್ರತೆ ಒದಗಿಸಿ, ಶಾಸನಾತ್ಮಕ ಸಂರಕ್ಷಣೆಯನ್ನು ದುಡಿಯುವ ವರ್ಗದ ಎಲ್ಲಾ ವಿಭಾಗಗಳಿಗೆ ವಿಸ್ತರಿಸಲು ಇದ್ದ ಅವಕಾಶದಿಂದ ಕಾರ್ಮಿಕರನ್ನು ಕೇಂದ್ರದಲ್ಲಿನ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ವಂಚಿಸಿದೆ.

ಇದನ್ನು ಓದಿದ್ದೀರಾ?ನಾವು ಆಗ 1947ರಲ್ಲಿ ಪಟ್ಟ ಸಂತಸ ಈಗ ದುಃಖವಾಗಿ ಪರಿವರ್ತನೆಗೊಂಡಿದೆ

ಪರಿಣಾಮವಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಲೇ-ಆಫ್, ರಿಟ್ರೆಂಚ್‍ಮೆಂಟ್‍ಗಳನ್ನು ಎದುರಿಸುವ ಬಲವಂತದ ಸ್ವಯಂ ನಿವೃತ್ತಿ ಪಡೆಯಬೇಕಾದ, ಕಾರ್ಖಾನೆಗಳ ಮುಚ್ಚುವಿಕೆಯನ್ನು ಎದುರಿಸಬೇಕಾದ ಪರಿಸ್ಥಿತಿ ಹೆಚ್ಚಿದೆ. ಕಾರ್ಮಿಕರಿಗಿದ್ದ ಅಲ್ಪಸ್ವಲ್ಪ ರಕ್ಷಣೆಯು ಇಲ್ಲದಾಗಿದೆ. ಕಾರ್ಮಿಕರನ್ನು ಬಳಸಿ ಬಿಸಾಕುವ ಅವಕಾಶವನ್ನು ಕಾರ್ಮಿಕ ಸಂಹಿತೆಗಳ ಮೂಲಕ ಮಾಲೀಕರಿಗೆ ನೀಡಲಾಗಿದೆ. ಅಸಂಘಟಿತ ಕಾರ್ಮಿಕರು, ಸ್ಕೀಂ ನೌಕರರು, ವಲಸೆ ಕಾರ್ಮಿಕರು, ಗಿಗ್ ಕಾರ್ಮಿಕರು ಮುಂತಾದವರ ರಕ್ಷಣೆಗೆ ಯಾವುದೇ ಕ್ರಮಗಳಿಲ್ಲದಾಗಿವೆ. ಇದರ ವಿರುದ್ಧದ ಹೋರಾಟವು ತೀವ್ರಗೊಳ್ಳುತ್ತಿದೆ.

ಬಲಗೊಳ್ಳುತ್ತಿರುವ ಐಕ್ಯತೆ-ತೀವ್ರಗೊಂಡ ಹೋರಾಟಗಳು – ವಿಭಜಕ ಶಕ್ತಿಗಳ ಯತ್ನ
2022 ಮಾರ್ಚ್ 28 ಮತ್ತು 29ರ ಸಾರ್ವತ್ರಿಕ ಮುಷ್ಕರದಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರ ಭಾಗವಹಿಸುವಿಕೆ ಬಲಗೊಳ್ಳುತ್ತಿರುವ ಹೋರಾಟಗಳು ಮತ್ತು ಐಕ್ಯತೆಯ ಪ್ರತೀಕವಾಗಿದೆ. ಈ ರೀತಿ ಬಲಗೊಳ್ಳುತ್ತಿರುವ ಕಾರ್ಮಿಕ ವರ್ಗದ ಐಕ್ಯತೆಯನ್ನು ವಿಫಲಗೊಳಿಸಲು ನವಉದಾರವಾದಿ ಆರ್ಥಿಕ ನೀತಿಗಳನ್ನು ಸುಗಮವಾಗಿ ಜಾರಿಗೊಳಿಸಲು ಜನತೆಯಲ್ಲಿ ಕೋಮು ವಿಭಜನೆಗೆ ಆರ್‌ಎಸ್‍ಎಸ್ ಮುಂತಾದ ಸಂಘ ಪರಿವಾರ ಮತ್ತು ಇತರೆ ಧಾರ್ಮಿಕ ಮೂಲಭೂತವಾದಿ ಶಕ್ತಿಗಳು ಯತ್ನಿಸಿವೆ. ಅದಕ್ಕೆ ಪೂರಕವಾಗಿ ಹಿಜಾಬ್, ಹಲಾಲ್, ಆಜಾನ್, ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಸಂವಿಧಾನ 370, 35ಎ ವಿಧಿ ರದ್ಧತಿ, ಮತಾಂತರ, ಗೋಹತ್ಯೆ ನಿಷೇಧ, ಮುಂತಾದ ಅಂಶಗಳ ಆಧರಿಸಿ ವಿಭಜನೆಗೆ ಕೋಮು ದೃವೀಕರಣಕ್ಕೆ ಯತ್ನಿಸಲಾಗಿದೆ. ಇದಕ್ಕೆ ಮೋದಿ ಸರ್ಕಾರ ಮತ್ತು ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳ ಆಡಳಿತದಲ್ಲಿನ ಕಾರ್ಪೋರೇಟ್-ಕೋಮುವಾದಿ ದುಷ್ಟಕೂಟದ ಕ್ರಮಗಳು ಅನುವುಗೊಳಿಸಿವೆ.

‘ಶ್ರಮಯೇವ ಜಯತೆ’ ಹೆಸರಿನ ಪಳ್ಳು ಪೋಷಣೆ ಸಹಿತ ಪ್ರಸಕ್ತ ಸ್ವಾತಂತ್ರ್ಯ 75ನೇ ವರ್ಷಾಚರಣೆಯನ್ನು ಮೋದಿ ಸರ್ಕಾರವು ತನ್ನ ಎಂದಿನ ನಯ ವಂಚಕ ಪೋಷಣೆಗಳ ರೀತಿಯಲ್ಲೇ ಅಮೃತ ಮಹೋತ್ಸವ ಎಂದು, ಮುಂದಿನ 25 ವರ್ಷಗಳನ್ನು ಅಮೃತ ಕಾಲ ಎಂದು ಬಿಂಬಿಸಿ, ಕಾರ್ಮಿಕರನ್ನು ದಾಸ್ಯಕ್ಕೆ ದೂಡುತ್ತಿದೆ. ಕಾರ್ಪೊರೇಟ್ ಬಂಡವಾಳಕ್ಕೆ ಅಮೃತ ನೀಡಿ ದುಡಿಯುವ ಜನತೆಗೆ ವಿಷ ಉಣಿಸುವ ನಯವಂಚಕ ಕ್ರಮಗಳನ್ನು ಅನುಸರಿಸುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್