ಅವರಿಗೆ ಇನ್ನೂ ಕಾಡುತ್ತಿರುವುದು ನೆಹರೂ ಕುಟುಂಬ, ಮತ್ತವರ ಕೆಲಸ

Nehru

ನೆಹರೂ ದೊಡ್ಡ ವಿದ್ವಾಂಸ ಮತ್ತು ಪಂಡಿತರು. ಅವರ ಓದಿನ ವಿಸ್ತಾರ, ತಿಳಿವಳಿಕೆಯ ವಿಸ್ತಾರ, ದೇಶದ ಬಗ್ಗೆ ಇದ್ದ ಹಿತಾಸಕ್ತಿ, ಕಾಳಜಿ ಈ ಎಲ್ಲಾ ಅಂಶಗಳನ್ನಾಗಲಿ, ಅವರಲ್ಲಿದ್ದಂತಹ ವೈಚಾರಿಕ, ವೈಜ್ಞಾನಿಕ ತಿಳಿವಳಿಕೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಅವರ ʼಭಾರತದರ್ಶನʼ ಕೃತಿ, ಜೈಲಿನಿಂದ ಮಗಳು ಇಂದಿರಾರಿಗೆ ಬರೆದ ಪತ್ರವನ್ನಾದರೂ ಓದಬೇಕು

ನೆಹರೂ ಮತ್ತು ಅವರ ಕುಟುಂಬದ ಬಗ್ಗೆ ಕೆಲವರಿಗೆ ಅಂದರೆ ವಿಶೇಷವಾಗಿ ಬಿಜೆಪಿಗೆ ಏಕೆ ಇಷ್ಟೊಂದು ಭಯ? ಕನಸು ಮನಸಿನಲ್ಲೂ ಬಿಡದ ಹಾಗೆ ಅವರನ್ನು ದ್ವೇಷ ಮಾಡುತ್ತಾರೆ. ಅವರ ಬಗ್ಗೆ ಮತ್ತು ಕುಟುಂಬದ ಇತರರ ಬಗ್ಗೆ ಇನ್ನಿಲ್ಲದ ರೀತಿನಲ್ಲಿ ಮಾತಾನಾಡುತ್ತಾ ಬಂದಿದ್ದಾರೆ ಮತ್ತು ಅದನ್ನೇ ದೊಡ್ಡ ಪ್ರಚಾರವನ್ನೂ ಮಾಡುತ್ತಾರೆ. ಬಹುಶಃ ಅವರಿಗೆ ನೆಹರೂ ವಂಶವಿರುವವರೆಗೂ ತಮಗೆ ಮತ್ತು ತಮ್ಮ ವಿಚಾರಗಳಿಗೆ ಮಾನ್ಯತೆಗಳು ಸಿಗೋದಿಲ್ಲ ಎನ್ನುವ ಭಯವಿರಬಹುದು ಅಥವಾ ನಮಗೆ ಎಂದೆಂದಿಗೂ ಅಧಿಕಾರ ಸಿಗೋದಿಲ್ಲ ಎನ್ನುವ ಒಂದು ಹಳೆಯ ಭಯ ಕಾರಣ ಆಗಿರಬಹುದು. ಅಂತಹ ಭಯಗಳ ನಡುವೆಯೇ ಸಲ್ಲದ ದಾರಿಗಳನ್ನು ಹುಡುಕಿ, ಉಪಾಯಗಳನ್ನು ಮಾಡಿ, ತಂತ್ರಗಳನ್ನು ಹೆಣೆದು, ಅಧಿಕಾರವನ್ನು ಪಡೆದಿದ್ದಾಯಿತು. ಆದರೂ ಅವರಿಗೆ ಇನ್ನೂ ಕಾಡುತ್ತಿರುವುದು ನೆಹರೂ ಕುಟುಂಬ ಮತ್ತು ನೆಹರೂ ಅವರು ಮಾಡಿರುವ ಕೆಲಸ .

ನನ್ನ ಜೊತೆ ಮಾತನಾಡುವಾಗ ಒಬ್ಬರು “ನೀವೇನ್ರಿ ನೆಹರೂ ಬಗ್ಗೆ ಅಷ್ಟೋಂದು ವಕಾಲತ್ತು ವಹಿಸಿ ಮಾತಾಡ್ತೀರಿ?ʼʼ ಎಂದು ಕೇಳಿದರು.  ಆ ರೀತಿ ಕೇಳೋದು ಅವರ ರಾಜಕೀಯ ಪಕ್ಷ ಮತ್ತು ವಿಚಾರ ಎಂತದ್ದು ಎಂದು ನಮಗೆ ತಿಳಿಸುತ್ತದೆ. ಭಾರತೀಯನಾಗಿ, ಇಲ್ಲಿನ ಹಿರಿಯ ಪ್ರಜೆಯಾಗಿ, ಒಬ್ಬ ವಿದ್ಯಾವಂತನಾಗಿ ನಾನು ನೆಹರೂ ಅವರನ್ನು ಒಪ್ಪದೇ ಇದ್ದರೆ ಮತ್ತು ಅವರ ಕೆಲಸಗಳನ್ನು ಗಮನಿಸದೇ ಇದ್ದರೆ, ಅದು ನಿಜಕ್ಕೂ ನಾನು ನೆಹರೂ ಬಗ್ಗೆ ಅಥವಾ ಅವರ ಕುಟುಂಬಕ್ಕೆ ಮಾಡೋ ದ್ರೋಹವಲ್ಲ, ಈ ದೇಶಕ್ಕೆ ಮತ್ತು ಅನೇಕ ಹೋರಾಟಗಾರರಿಗೆ, ಮಹನೀಯರಿಗೆ ಮಾಡುವಂತಹ ಅವಮಾನ. ನಾವು ನೆಹರೂ ಅವರನ್ನು ಪ್ರಶ್ನೆ ಮಾಡುತ್ತೀವೆಂದರೆ ಅದು ತಪ್ಪಲ್ಲ. ನೆಹರೂ ಅವರನ್ನು ತಿರಸ್ಕಾರ ಮಾಡುತ್ತೀವಿ, ಅವರನ್ನು ವಿರೋಧ ಮಾಡುತ್ತೀವಿ ಎಂದರೆ ಅದು ಎಲ್ಲಾ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಮಾಡುವಂತಹ ಅವಹೇಳನ, ಕಡೆಗಣನೆ ಎಂದು ನನ್ನ ಭಾವನೆ.

ನೆಹರೂ ಅವರು ಭಾರತದ ಮೊದಲನೇ ಪ್ರಧಾನಿ. ಆಗ ಇದ್ದಿದ್ದು ಅದೇ ಆಯ್ಕೆ, ಬಹಳ ಜನ ಅಥವಾ ಒಂದು ವರ್ಗದವರು ಹೇಳುತ್ತಾರೆ, ಪಟೇಲ್‌ ಆಗಬೇಕಾಗಿತ್ತು ಅಂತ. ನಮ್ಮಂತವರು ಕೇಳುತ್ತೀವಿ ಹೌದು ಪಟೇಲರು ಆಗಬಹುದಾಗಿತ್ತು, ಅವರ ಹಾಗೆಯೇ ಅಂಬೇಡ್ಕರ್‌ ಇದ್ದರು. ಅವರು ಯಾಕೆ ಆಗಲಿಲ್ಲ? ಆ ಪ್ರಶ್ನೆಯನ್ನು ಹಾಕಿದರೆ ಅವರು ಅದಕ್ಕೆ ಉತ್ತರ ಕೊಡೋದಕ್ಕೆ ಹೋಗೋದಿಲ್ಲ. ಮೌಲಾನಾ ಅಬುಲ್‌ ಕಲಾಂ ಅಂತಹವರಾಗಲಿ, ಇನ್ನೂ ಅನೇಕರಿದ್ದರಲ್ಲ ಹೋರಾಟ ಮಾಡಿದವರು ಅವರು ಯಾರಾದರು ಆಗಬಹುದಾಗಿತ್ತಲ್ಲ? ಅವರ ಹೆಸರೇ ಯಾಕೆ ತೆಗೆದುಕೊಳ್ಳುವುದು ಯಾಕೆಂದರೆ ಅವರೆಲ್ಲರೂ ನಮಗೆ ಸಮಾನವಾದ ದ್ವೇಷಿಗಳು ಎಂಬ ಭಾವನೆ ಇದಕ್ಕೆ ಪ್ರಶ್ನೆಗಳು ಕೇಳುವುದರ ಹಿಂದಿದೆ.

ವಾಸ್ತವವಾಗಿ ನೆಹರೂ ಅವರು ಭಾರತದ ಪ್ರಧಾನಿ ಆಗದೇ ಇದ್ದರೆ, ಬೇರೆ ಇನ್ಯಾರೇ ಆಗಿದ್ದರೂ ಏನಾಗ್ತಾ ಇರಬಹುದಿತ್ತು! ಇದನ್ನ ನಾವು ಯೋಚನೆ ಮಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು. ನೆಹರೂ ದೊಡ್ಡ ವಿದ್ವಾಂಸ ಮತ್ತು ಪಂಡಿತರು. ಅವರ ಓದಿನ ವಿಸ್ತಾರ, ತಿಳಿವಳಿಕೆಯ ವಿಸ್ತಾರ, ದೇಶದ ಬಗ್ಗೆ ಇದ್ದ ಹಿತಾಸಕ್ತಿ, ಕಾಳಜಿ ಈ ಎಲ್ಲಾ ಅಂಶಗಳನ್ನಾಗಲಿ, ಅವರಲ್ಲಿದ್ದಂತಹ ವೈಚಾರಿಕ, ವೈಜ್ಞಾನಿಕ ತಿಳಿವಳಿಕೆಯನ್ನ ಅರ್ಥಮಾಡಿಕೊಳ್ಳಬೇಕಾದರೆ ನಾವು ಅವರ ಅನೇಕ ಕೃತಿಗಳನ್ನು ಉದಾಹರಣೆಗೆʼ ಭಾರತದರ್ಶನʼ ಅಂತದ್ದನಾದರೂ ಓದಬೇಕು. ಅಥವಾ ಅವರು ತಮ್ಮ ಮಗಳು ಇಂದಿರಾಗಾಂಧಿಗೆ ಸೆರೆಮನೆಯಿಂದ ಬರೆದಂತಹ ಪತ್ರಗಳನ್ನು ಓದಬೇಕು. ಅದೇನೂ ಓದದೆಯೇ ಯಾರೋ ಹೇಳಿದರು ಅಂತ  ಕೆಲವೊಂದು ವಿಚಾರಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅವರನ್ನು ಟೀಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ?

Image
Nehru with women

ನೆಹರೂ ಅವರಿಗೆ ಮಾಡುವಂತಹ ಟೀಕೆ ಎಂತಹದ್ದೆಂದರೆ, ಬೇರೆ ಮಹಿಳೆಯ ಜೊತೆ ಸಂಪರ್ಕವಿತ್ತು, ವಿಶ್ವಾಸವಿತ್ತು ಎಂದು. ಇದು ಇರಬಹುದು, ಅನೇಕರಿಗೆ ಅನೇಕರ ಬಳಿ ಸಂಪರ್ಕ, ವಿಶ್ವಾಸ, ಸಲಿಗೆಗಳು ಇರಬಹುದು. ಇದನ್ನ ಆ ಮಹಿಳೆ ಕೇಳಬೇಕು ಅಥವಾ ಆಕೆಯ ಗಂಡ ಕೇಳಬೇಕೆ ಹೊರತು ಇನ್ಯಾರೋ  ಅಲ್ಲ. ಇವತ್ತಿನ ನಾವು ಅದನ್ನ ಕೇಳಿದರೆ ಉತ್ತರಕೊಡುವವರ್ಯಾರು? ಈ ರೀತಿ ಆಗದಹೋಗದ ಕೆಲಸಗಳನ್ನು  ಮಾತುಗಳನ್ನು ಆಡುವ ದುರುದ್ದೇಶ.

ನಾವು ನಿಜವಾಗಿಯೂ ಪ್ರಶ್ನೆ ಮಾಡಬೇಕಾಗಿರುವುದು ಪಂಚವಾರ್ಷಿಕ ಯೋಜನೆಗಳನ್ನ ಮಾಡಿ ಈ ದೇಶವನ್ನ ಹಾಳು ಮಾಡಿದರು ಎಂದು ಕೇಳುವುದಕ್ಕಾಗುತ್ತಾ? ಅವತ್ತಿನ ದೂರ ದೃಷ್ಟಿ ನೆಹರೂ ಅವರಿಗೆ ಇಲ್ಲದೇ ಇದ್ದರೆ ಅವರು ಪಂಚವಾರ್ಷಿಕ ಯೋಜನೆಗಳ ಮೂಲಕ ಅನೇಕ ಅಣೆಕಟ್ಟುಗಳು ಬರದೇ ಇದ್ದರೆ ಮತ್ತು ಅವರ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳು ಆಗದೇ ಇದ್ದರೆ, ಆ ಹೊತ್ತಿನಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳ ನಿರ್ಮಾಣ ಆಗದೇ ಇದ್ದರೆ, ಅಷ್ಟೊಂದು ಜನ ನಿರುದ್ಯೋಗಿಗಳಿಗೆ ಉದ್ಯೋಗವೆಲ್ಲಿ ಸಿಗುತ್ತಿತ್ತು ? ದೇಶದ ಅಭಿವೃದ್ದಿಗೆ ಕಾರ್ಖಾನೆಗಳು ಎಷ್ಟು ಮುಖ್ಯ ಎಂದು ಆ ಕಾಲದಲ್ಲಿ ನವರತ್ನಗಳೆಂದು ಹೆಸರಾಗಿದ್ದ ಎಚ್‌ಎಂಟಿ, ಬಿಎಲ್‌ ಮೊದಲಾದಂತಹ ಅನೇಕ ಕಾರ್ಖಾನೆಗಳೇ ಸಾಕ್ಷಿ. ಆದರೆ, ಅವನ್ನೆಲ್ಲಾ ಇವತ್ತು ಮುಚ್ಚಿ ಅವುಗಳನ್ನು ಹೆಸರೆ ಇಲ್ಲದ ಹಾಗೆ ಮಾಡುತ್ತಿದ್ದೀವಲ್ಲ ನಾವೆಂಥವರು?

ಪ್ರಶ್ನೆ ಮಾಡುವ ನೈತಿಕತೆ ಇದೆಯೇ?

ನಮಗೆ ನೆಹರೂ ಕಾಲದ ವಿಚಾರಗಳನ್ನು, ಅವರನ್ನು ಮತ್ತು ಅವರ ಕುಟುಂಬವನ್ನು ಪ್ರಶ್ನೆ ಮಾಡುವಂತಹ ನೈತಿಕತೆ ಎಲ್ಲಿದೆ? ಅವತ್ತಿನ ಕಾಲದಲ್ಲಿ ಅಷ್ಟೊಂದು ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ನಿರ್ಮಾಣವಾಗದೇ ಇದ್ದರೆ ನಮಗೆಲ್ಲ ಶಿಕ್ಷಣವೆಲ್ಲಿ ಸಿಗುತ್ತಿತ್ತು? ಒಂದು ಕಡೆ ನಮ್ಮ ಮೈಸೂರು ಅರಸರು, ಇನ್ನೊಂದು ಕಡೆ ಸರ್ಕಾರ ಕೊಟ್ಟಂತಹ ಈ ಸೌಲಭ್ಯಗಳು ಇವೆಲ್ಲ ಕಾರಣವಾಗಿ ನಮ್ಮಂತಹ ಕೋಟ್ಯಂತರ ಯುವಕರು, ವಿದ್ಯಾರ್ಥಿಗಳು ಶಿಕ್ಷಣ ಕಲಿತು ಇವತ್ತು ಗೌರವದಿಂದ ಬದುಕಲು ಕಾರಣವಾಗಿದೆ ಹಾಗೆಯೇ ವಿವೇಕದಿಂದ ಬದುಕಲು ಮತ್ತು ಬೆಳೆಯಲು ಕಾರಣವಾಗಿದೆ. ಕೆಲವರು ಹೇಳುತ್ತಾರೆ, ಮೆಕಾಲೆ ಬಂದು ಇಂಗ್ಲೀಷ್‌ ಶಿಕ್ಷಣದ ಮೂಲಕ ನಮ್ಮ ಸಂಸ್ಕೃತಿಯನ್ನ ಹಾಳು ಮಾಡಿದರು ಎಂದು. ಅವಿವೇಕಿಗಳು, ಧೂತರು. ಅವರೇ ಇಂಗ್ಲೀಷ್‌ ಕಲಿತಿರುತ್ತಾರೆ. ಅವರ ಮಕ್ಕಳುಗಳು ವಿದೇಶದಲ್ಲಿರುತ್ತಾರೆ, ಅಥವಾ ಅವರೇ ಬಹಳ ಚೆನ್ನಾಗಿ ಇಂಗ್ಲಿಷ್‌ ಪಾಂಡಿತ್ಯವನ್ನ ಪಡೆದುಕೊಂಡಿರಬಹುದು. ಆದರೆ ಅವರೇನು ಇಂಗ್ಲೀಷ್‌ ಅನ್ನು ಬಿಟ್ಟವರೇನೂ ಅಲ್ಲ. ಮೆಕಾಲೆ  ಇಂಗ್ಲೀಷ್‌ನನ್ನು ಕಲಿಸದೇ ಇದ್ದರೆ ನಮ್ಮಲ್ಲಿ ಅನೇಕರಿಗೆ ಇಂಗ್ಲೀಷ್‌ ಶಿಕ್ಷಣದಿಂದ ಸಿಗುವ ವೈಚಾರಿಕತೆ ಮತ್ತು ವೈಜ್ಞಾನಿಕತೆ ಇದಿಯಲ್ಲಾ ಅದು ಸಿಗುತ್ತನೇ ಇರಲಿಲ್ಲ. ಕುವೆಂಪುರವರು ಅದನ್ನ ಹೇಳುತ್ತಾರೆ. ನಾವು ಭಾರತೀಯ ಸಾಂಪ್ರದಾಯಿಕ ಶಿಕ್ಷಣವನ್ನೇ ಮಾಡಬೇಕೆಂದಿದ್ದರೆ ಆ ಶಿಕ್ಷಣ ಎಲ್ಲರಿಗೂ ಎಲ್ಲಿತ್ತು? ಕೆಲವರಿಗೆ ಮಾತ್ರ ಭಾರತೀಯ ಶಿಕ್ಷಣವಿರುತ್ತಿತ್ತು, ಅದರಲ್ಲಿ ಅದೇ ಹಳೇ ಪುರಾಣ ಜೋತಿಷ್ಯ ಇತ್ಯಾದಿಗಳು. ಅವುಗಳನ್ನು ಕಲಿತು ನೀವೇನು ಮಾಡಬೇಕಾಗಿತ್ತು? ಈಪ್ರಶ್ನೆ ಯಾಕೆ ಹಾಕಿಕೊಳ್ಳುವುದಿಲ್ಲ?

Image
Indira nehru

ನೆಹರೂ ಅವರ ವಂಶಾಡಳಿತದ ಬಗ್ಗೆ ಟೀಕೆ ಮಾಡುತ್ತಾರೆ. ಯಾರು ವಂಶದ ಆಡಳಿತ ಎಂದು ಹೇಳುತ್ತಾರೋ ಅವರು ಅವರವರ ಕುಡಿಗಳಿಗೆ ಬೇಕಾದಂತಹ ಸವಲತ್ತುಗಳನ್ನು ಮಾಡಿಡುತ್ತಾರೆ ಮತ್ತು ಅಧಿಕಾರ ದೊರಕಿಸಿಕೊಡಲಿಕ್ಕೆ ಅನೇಕರು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಅವರ್ಯಾರೂ ನನ್ನ ಮಕ್ಕಳು ರಾಜಕೀಯಕ್ಕೆ ಬೇಡ ಎಂದು ಹೇಳುವುದಿಲ್ಲ. ಉದ್ದಿಮೆಗಳು ಯಾರು ಮಾಡಿರುತ್ತಾರೋ ಅವರು ಅವರವರ ಹೆಂಡತಿ ಮಕ್ಕಳಿಗೆ ಆಸ್ತಿಯನ್ನ ಬಿಡೋದು. ಇನ್ಯಾರಿಗೂ ಬಿಡೋದಿಲ್ಲ. ನೆಹರೂ ಅವರದು ದೇಶದ ಆಡಳಿತ ಮತ್ತು ಅವರ ಸ್ವಂತ ಆಡಳಿತವಲ್ಲ ನಿಜ. ಆದರೆ, ಅವರ ನಂತರ ಅಧಿಕಾರಕ್ಕೆ ಬಂದವರು, ಇಂದಿರಾಗಾಂಧಿಯನ್ನ ಯಾವತ್ತಿಗೂ ಅವರು ಕೈಲಾಗದವರು ಎಂದು ಹೇಳುವ ಹಾಗಿಲ್ಲ. ವಿದ್ಯೆಯಿಲ್ಲದವರು ಮತ್ತು ಬುದ್ದಿಯಿಲ್ಲದವರು ಎಂದು ಹೇಳೋದಿಕ್ಕೆ ಆಗೋದಿಲ್ಲ. ಅವರು ಈ ದೇಶಕ್ಕೆ ಕೊಡಬೇಕಾದಷ್ಟು ಗೌರವವನ್ನ ಮತ್ತು ಕೊಡುಗೆಗಳನ್ನು ಕೊಟ್ಟಿದ್ದಾರೆ. ಇದು ಸಾಮಾನ್ಯವೇನಲ್ಲ. ಆದರೆ ಅವರ ಗಂಡನ ಮೂಲವನ್ನು ಹಿಡಿದು ವಿರೋಧ ಮಾಡುತ್ತೀರಿ ಎಂದಾದರೆ, ಇವತ್ತಿನ ಕಾಲದಲ್ಲಿಯೂ ಬೇರೆ ಬೇರೆ ಧರ್ಮದವರನ್ನ ಮದುವೆಯಾಗಿದ್ದಾರೆ ಅಥವಾ ಬೇರೆ ದೇಶದ ಮೂಲದವರು ಇದ್ದಾರೆ. ನೀವು ಅವರನ್ನ ಯಾಕೆ ಪ್ರಶ್ನೆ ಮಾಡುವುದಿಲ್ಲ? ಅವರಿಗೆ ಅಧಿಕಾರ ಕೊಡುತ್ತೀರಿ, ಸಚಿವರನ್ನೂ ಮಾಡುತ್ತೀರಿ!

ಮಾತೆತ್ತಿದರೆ ಇಂದಿರಾಗಾಂಧಿಯ ವಂಶಮೂಲವನ್ನು, ಇಲ್ಲವೇ ಆಕೆಯ ಗಂಡನ ವಿಷಯವನ್ನು ಕೆದುಕುತ್ತೀರಿ. ಅವರ ಸೊಸೆ ಸೋನಿಯಾಗಾಂಧಿ ಇಟಲಿಯ ಮೂಲದವರನ್ನೋದಾದರೆ, ಇಟಲಿಯ ಜೊತೆ ನಮ್ಮೆಲ್ಲಾ ಸಂಪರ್ಕವನ್ನು ಕಡಿದುಕೊಳ್ಳಲು ಸಾಧ್ಯಾನಾ? ನಾವ್ಯಾಕೆ ಬೇರೆ ದೇಶಗಳಿಗೆ ಹೋಗಬೇಕು ಹಾಗಾದರೆ?  ಸ್ವಾತಂತ್ರ್ಯಕ್ಕೆ ಮೊದಲು ಪಾಕಿಸ್ತಾನದಲ್ಲಿ ಹುಟ್ಟಿದಂತಹ ಕೆಲವರು ಇಲ್ಲಿ ಅಧಿಕಾರದಲ್ಲಿ ಬಂದ್ರು, ದೊಡ್ಡ ಹುದ್ದೆಗಳಲ್ಲಿ ಇದ್ದರು. ಅವರನ್ಯಾಕೆ ಪ್ರಶ್ನೆ ಮಾಡುವುದಿಲ್ಲ? ಪ್ರಶ್ನೆ ಮಾಡುವ ಅಗತ್ಯ ಇಲ್ಲ ಅದು. ಅವನು ಎಲ್ಲೇ ಹುಟ್ಟಲಿ, ಎಲ್ಲೇ ಬೆಳೆಯಲಿ, ಅವನು ಈ ದೇಶಕ್ಕೆ ಬಂದು ಈ ದೇಶದ ಪ್ರಜೆಯಾದ ಮೇಲೆ ನಾವು ಅವರನ್ನು ಗೌರವಿಸಬೇಕು. ಅವರ ಹುಟ್ಟಿದ ಮೂಲವನ್ನ ಕೆದುಕಲಿಕ್ಕೆ ಹೋಗಬಾರದು. ಅವನ ಕೆಲಸಗಳನ್ನ ಕೇಳಬೇಕು, ಅವರ ಮಾತುಗಳನ್ನ ವಿಚಾರ ಮಾಡಬೇಕು.

ಇಂಗ್ಲಿಷ್‌ನ್ನು ಕಲಿಯದೇ ಇದ್ದರೆ ನಮ್ಮಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದೇ ಇದ್ದರೆ ಈ ಪ್ರಶ್ನೆ ಮಾಡುವ ವೈಜ್ಞಾನಿಕತೆ ಬರುತ್ತಿರಲಿಲ್ಲ. ನೆಹರೂ ಕುಟುಂಬವನ್ನ ಪ್ರಶ್ನೆ ಮಾಡುವಂತಹವರಿಗೆ ಎಷ್ಟು ಭಯ ಇದೆ ಎಂದರೆ, ಇದು ಹೀಗೆ ಮುಂದುವರೆದರೆ ಬಹುಶಃ ಮುಂದೆನೂ ನಮ್ಮ ಪಕ್ಷ ಅಧಿಕಾರಕ್ಕೆ ತರುವುದಕ್ಕೆ ಅಥವಾ ನಾವು ಮಾತಾಡಿದ್ದನ್ನೆಲ್ಲಾ ಜನರಿಗೆ ನಂಬಿಸಲಿಕ್ಕೆ  ಕಷ್ಟವಾಗಬಹುದು ಎನ್ನುವಂತದ್ದು ಇದ್ದಿರಬಹುದು. ನಿಜವಾಗಿ ಪಂಡಿತರು, ವಿದ್ವಾಂಸರಾಗಿದ್ದವರು ಈ ದೇಶಕ್ಕೆ ಬೇಕಾದ ಭದ್ರ ಬುನಾದಿ ಹಾಕಿದವರನ್ನು ನಾವು ಯಾಕೆ ದ್ವೇಷ ಮಾಡಬೇಕು? ಮಾತೆತ್ತಿದರೆ ನೆಹರೂ, ನೆಹರೂ ಕುಟುಂಬ ಹೋಗಿ ಗಾಂಧಿ ಕುಟುಂಬವಾಯಿತು. ಗಾಂಧಿ ಕುಟುಂಬವೆಂದು ವಿರೋಧ ಮಾಡುವುದರ ಮೂಲಕ ಮಹಾತ್ಮ ಗಾಂಧಿಯನ್ನೂ ಸೇರಿಸಿ ವಿರೋಧ ಮಾಡುತ್ತಿದ್ದೀರ ಎಂದು ಅರ್ಥವಾಗುತ್ತದೆ.

ನೆಹರೂ ಇದ್ದಿದ್ದರೆ ಖಂಡಿತಾ ಕೊರೋನಾ ಬಂದಾಗ ಎಲ್ಲರೂ ದೀಪ ಆರಿಸಿ ಹಣತೆ ಹಚ್ಚಿ, ಚಪ್ಪಾಳೆ ತಟ್ಟಿ ಅಥವಾ ಭಜನೆ ಮಾಡಿ ಅಂತ ಹೇಳುತ್ತಿರಲಿಲ್ಲ. ನೆಹರೂ ಅಂತಹ ಮನೋಭಾವದವರಾಗಿದ್ದರೆ ಯಾರೂ ಸಹ ದೇಶಭಕ್ತಿಗೆ ದೊಡ್ಡ ದೊಡ್ಡ ಪ್ರತಿಮೆ ಮಾಡುವುದು ಅಥವಾ ದೇಶೋದ್ಧಾರ ಅಂತ ಮಾಡುತ್ತಿರಲಿಲ್ಲ. ಒಂದು ವೇಳೆ ಆ ಕಾಲದಲ್ಲಿ ನೆಹರೂ ಅಷ್ಟು ದೊಡ್ಡ ದೊಡ್ಡ ಕಾರ್ಖಾನೆಗಳನ್ನು, ಅಣೆಕಟ್ಟುಗಳನ್ನು ಮಾಡಿ, ರೈತಾಪಿಗಳಿಗೆ ನೀರಾವರಿ ವ್ಯವಸ್ಥೆಯ ಕೃಷಿ ಅಭಿವೃದ್ದಿ ಮಾಡದೇ ಇದ್ದಿದ್ದರೆ ಅಥವಾ ಕಾರ್ಖಾನೆಗಳ ಮೂಲಕ ಉದ್ಯೋಗ ಕೊಡದೇ ಇದ್ದರೆ ಅಥವಾ ಶಾಲಾ ಕಾಲೇಜುಗಳ ಮೂಲಕ ಶಿಕ್ಷಣ, ಆಸ್ಪತ್ರೆಗಳ ಮೂಲಕ ವೈದ್ಯಕೀಯ ಅನುಕೂಲಗಳನ್ನು ಕೊಡದೇ ಇದ್ದರೆ ನಮ್ಮ ಪರಿಸ್ಥಿತಿಗಳು ಏನಾಗುತ್ತಿತ್ತು?

Image
Nehru gandhi

ನೆಹರೂ ಮನಸ್ಸು ಮಾಡಿದ್ದರೆ ಆ ಕಾಲದಲ್ಲಿ ಒಂದು ಪ್ರತಿಮೆ ಮಾಡುವುದು ದೊಡ್ಡ ವಿಷಯವೇನೂ ಆಗಿರಲಿಲ್ಲ. ಮಾಡಬಹುದಾಗಿತ್ತು ಅಥವಾ ಇವತ್ತೂ ಮಾಡಬಹುದು. ಊರೂರಿಗೆ ಬರೀ ಪ್ರತಿಮೆಗಳನ್ನೇ ಮಾಡಿಕೊಂಡು ಇದ್ದರೆ ಜನ ಏನು ಮಾಡಬೇಕು, ಎಲ್ಲಿ ಹೋಗಬೇಕು? ಎಷ್ಟು ದಿನ ಜನರನ್ನು ಮೋಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಪ್ರತಿಮೆ ನಮಗೆ ಅನ್ನ ಕೊಡುವುದಿಲ್ಲ. ಆದರೆ ಸಂಸ್ಥೆ, ಕಾರ್ಖಾನೆ, ನಮಗೆ ವಿದ್ಯೆ, ಕೆಲಸ ಮತ್ತು ಅನ್ನವನ್ನು ಕೊಡುತ್ತದೆ. ನಾವು ಮಾಡಬೇಕಾಗಿದ್ದು ಇದು. ಪ್ರತಿಮೆಗಳನ್ನು ಸ್ಥಾಪನೆ ಮಾಡುವುದು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿದ್ದು. ನೆಹರೂ, ಬಸವಣ್ಣನವರ ಬಗ್ಗೆ ಅವರು ದೇವಸ್ಥಾನ ವಿರೋಧಿ ವಿಚಾರಗಳನ್ನು ಅವರು ಎಷ್ಟು ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ನೆಹರೂ ಮಾಡಿದ್ದು ಬಸವಣ್ಣನವರ ತತ್ವಗಳಿಗೆ ಅನುಸಾರವಾಗಿಯೇ ಇದೆ. ಮೊದಲು ಕಾಯಕ, ಕಾಯಕವನ್ನ ಕೊಟ್ಟು ಕಾಯಕಕ್ಕೆ ಬೇಕಾದಂತಹ ಅನುಕೂಲವನ್ನು ಮಾಡಿಕೊಟ್ರು.

ನೆಹರೂ ವಿರೋಧಿಸುವವರು ಇನ್ನೊಂದು ಪ್ರಶ್ನೆ ಕೇಳುತ್ತಾರೆ. ನೆಹರೂ ಕಾಲದಲ್ಲಿ ಚೀನಾಕ್ಕೆ ಆ ಜಾಗವನ್ನ ಬಿಟ್ಟುಕೊಟ್ಟರು. ಅಥವಾ ಕಾಶ್ಮೀರವನ್ನ ಪ್ರತ್ಯೇಕವಾಗಿ ಉಳಿಯೋ ಹಾಗೆ ಮಾಡಿ ಸಂಪೂರ್ಣವಾಗಿ ನಮ್ಮ ದೇಶಕ್ಕೆ ಸೇರಿಸಿಲ್ಲ ಎಂದು. ಇದಂತೂ ಅಪದ್ದ. ಇವತ್ತಿನ ಕಾಲದಲ್ಲಿ ಭಾರತದ ಒಂದು ಭಾಗದಲ್ಲಿ ಚೀನಾದವರು ಬಂದು ಬಡಾವಣೆಯನ್ನೇ ಕಟ್ಟಿದ್ದಾರೆ ಎಂದು ಕೇಳಿದರೆ ಉತ್ತರಾನೇ ಕೊಡೋದಿಲ್ಲ. ಅದನ್ನ ಬೇರೆ ರೀತಿನಲ್ಲಿ ವಿರೋಧ ಮಾಡುತ್ತಾರೆ. ನೆಹರೂ ಕಾಲದಲ್ಲಿ ಇದ್ದಂತಹ ಸಮಸ್ಯೆಗಳೇನು ಎಂಬುದನ್ನು  ನಾವು ಮುಖ್ಯವಾಗಿ ಗಮನಿಸಬೇಕು. ದೇಶದಲ್ಲಿ ಸಾಕಷ್ಟು ಬಡತನ, ಅಜ್ಞಾನ, ಶೈಕ್ಷಣಿಕ ಕೊರತೆಗಳು ಇದ್ದವು ಅವರಿಗೆ ಅಂದು ಸ್ವಾತಂತ್ರ್ಯ ಪಡೆಯುವುದೇ ದೊಡ್ಡ ಸವಾಲಾಗಿತ್ತು. ಅಂತಹ ಹೊತ್ತಿನಲ್ಲಿ ಸ್ವಾತಂತ್ರ್ಯ ಬಂದಿದ್ದನ್ನು ಸರಿಯಾಗಿ ಉಳಿಸಿಕೊಳ್ಳಬೇಕು, ಜನರ ಬದುಕಿಗೆ ಬೇಕಾದ ಸೌಲಭ್ಯಗಳನ್ನು ಮಾಡಿಕೊಡಬೇಕು ಎಂಬ ಯೋಚನೆ ನೆಹರೂಗೆ ಇದ್ದದ್ದು ಅದೇನು ತಪ್ಪಲ್ಲ. ಆ ಕಾರಣಕ್ಕಾಗಿ ಅವರು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೆಕಾಗಿತ್ತು.

ಈಗ ಕಾಶ್ಮೀರವನ್ನು ಪೂರ್ಣವಾಗಿ ದೇಶಕ್ಕೆ ಸೇರಿಸಲಾಗದೇ ಇದ್ದಿದ್ದಕ್ಕೆ  ಅವತ್ತಿನ ರಾಜಕೀಯ ಮತ್ತು ಸಾಂದರ್ಭಿಕ ಕಾರಣಗಳು ಬೇರೆಯೇ ಇರುತ್ತವೆ. ಇವತ್ತು ನಾವು ಸೇರಿಸಿದ್ದರೆ ಅದಕ್ಕೆ ಬೇರೆ ರೀತಿಯ ಕಾರಣಗಳು ಮತ್ತು ಸಂದರ್ಭಗಳು ಇರುತ್ತವೆ. ಆವತ್ತು ನೆಹರೂಗೆ ಎಷ್ಟು ಅಧಿಕಾರವಿತ್ತೋ ಅಷ್ಟೇ ಸಮಸ್ಯೆಗಳೂ ಇದ್ದವು. ನಾವು ಕಾಶ್ಮೀರದ ಬಗ್ಗೆಯೇ ಹೋರಾಟ ಮಾಡಿಕೊಂಡು ಕೂತಿದ್ದರೆ ಮಿಕ್ಕಿದ್ದಕ್ಕೆ ಸಮಸ್ಯೆಯಾಗುತ್ತಿತ್ತು. ಬೇರೆ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಆಗುತ್ತಿರಲಿಲ್ಲ. ಸ್ವಾತಂತ್ರ್ಯ ಬಂದ ಸಂದರ್ಭದ ಕ್ಲಿಷ್ಟತೆಯನ್ನು ನಾವು ಗಮನಿಸಬೇಕು. ಒಂದು ಕಡೆ ಬ್ರಿಟಿಷರು ಸ್ವಾತಂತ್ರ್ಯ ನಿಮಗೆ ಬೇಕಿಲ್ಲ, ನೀವು ಅದನ್ನು  ಉಳಿಸಿಕೊಳ್ಳುವುದಿಲ್ಲ ಅನ್ನುವ ಮನೋಭಾವದಲ್ಲಿ ನಮ್ಮನ್ನು ಹಿಡಿದಿಟ್ಟುಕೊಂಡಿದ್ದರು. ಇನ್ನೊಂದು ಕಡೆ ಅನೇಕರು ಸ್ವಾತಂತ್ರ್ಯ ಬಂದಾಗ ನೆಹರೂಗೆ ಗಾಂಧೀಜಿಯವರಿಗೆ ಕೊಡಬೇಡಿ ಎನ್ನುವ ವಿರೋಧ ಆರ್‌ಎಸ್‌ಎಸ್‌ ಕಡೆಯಿಂದ ಬಂದಿತ್ತು. ಇನ್ನೊಂದು ಕಡೆ ಹಿಂದೂ ಮುಸ್ಲಿಂಗಳು ಬೇರೆ ಬೇರೆಯಾಗಬೇಕು, ವಿಶೇಷವಾದಂತಹ ಪ್ರಾತಿನಿಧ್ಯಗಳು ಸಿಗಬೇಕೆನ್ನುವ ಒತ್ತಡಗಳಿದ್ದವು. ಹೀಗೆಲ್ಲಾ ಇದ್ದಂತಹ ಸಂದರ್ಭದಲ್ಲಿ ನೀವು ನಮಗೆ ಮನಸೋಯಿಚ್ಛೆ ಕಾನೂನುಗಳನ್ನು ಮಾಡಲಿಕ್ಕೆ ನೆಹರೂಗಾಗಲಿ ಅಥವಾ ಯಾರಿಗೇ ಅಗಲಿ ಕಷ್ಟವಾಗುತ್ತಿತ್ತು. ಅದನ್ನ ನಾವು ಅರ್ಥ ಮಾಡಿಕೊಳ್ಳದೆಯೇ ಯಾರಿಗೋ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿದ್ದರು, ಇನ್ಯಾರೋ ಅಧಿಕಾರ ಬಿಟ್ಟುಕೊಟ್ಟ ಈ ರೀತಿ.

ಇದನ್ನು ಓದಿದ್ದೀರಾ?ʼಸ್ವಾತಂತ್ರ್ಯ ನಡಿಗೆʼ ಪಾದಯಾತ್ರೆಗೆ ಭರ್ಜರಿ ಸಿದ್ದತೆ:90 ಸಾವಿರಕ್ಕೂ ಹೆಚ್ಚು ಜನರಿಂದ ಆನ್ಲೈನ್‌ ನೋಂದಣಿ

ನಯವಂಚನೆ, ಆತ್ಮವಂಚನೆ ಬೇಡ

ಇವತ್ತು ನಮಗೆ ಸರ್ವ ಸ್ವಾತಂತ್ರ್ಯ ಮತ್ತು ಬಲವಿದೆ. ಮಾನವ ಸಂಪನ್ಮೂಲವೂ ಇದೆ, ಆರ್ಥಿಕ ಸೌಲಭ್ಯವೂ ಇವೆ. ನೆಹರೂ ಕಾಲದಿಂದಲೂ ನಮಗೆ ವಿಶೇಷವಾದ ಗೌರವ ಮತ್ತು ಸ್ಥಾನಮಾನ ಇದ್ದೇ ಇದೆ. ಇದನ್ನು ಉಳಿಸಿಕೊಳ್ಳುವಂತಹ ಕೆಲಸ ಆಗಬೇಕು. ಇವತ್ತು ನೆಹರೂ ಬಗ್ಗೆ ಪ್ರಜೆಗಳನ್ನ ದಾರಿ ತಪ್ಪಿಸುವ ಕೆಲಸ ಮಾಡಬಾರದು. ನೆಹರೂಗಿಂತಲೂ ಸಮರ್ಥರಾದವರು ಬರಲಿ, ಈ ದೇಶವನ್ನು ಆಡಳಿತಮಾಡಲಿ.ಅದೇನು ತಪ್ಪಲ್ಲ. ಅದರೆ  ಹಳಬರ ಮೇಲೆ, ಆಗಿ ಹೋದವರ ಮೇಲೆ ಅಕಾರಣ ಗೂಬೆ ಕೂರಿಸಿಕೊಂಡು, ವಿಮರ್ಶೆ ಮಾಡಿಕೊಂಡು, ಸಲ್ಲದ ಮಾತುಗಳನ್ನು ಹೇಳಿಕೊಂಡು ಜನಗಳನ್ನು ಮೋಸ ಮಾಡಿ ದಾರಿ ತಪ್ಪಿಸುವುದು ಯಾವತ್ತಿಗೂ  ಈ ದೇಶಕ್ಕೆ ಹಿತವಲ್ಲ. ವೀರರಲ್ಲದವರನ್ನ, ಹೋರಾಟ ಮಾಡದೇ ಇರುವವರನ್ನ ದೊಡ್ಡ ಹೋರಾಟಗಾರರು ಎಂದು ತೋರಿಸುತ್ತೀವಿ. ಇದು ನಿಜಕ್ಕೂ ದೊಡ್ಡ ಆತ್ಮವಂಚನೆ. ನಾವು ಮಾಡಿರೋ ಕೆಲಸದ ಬಗ್ಗೆ ಹೇಳಬೇಕೇ ಹೊರತು ಮಾಡದೇ ಇರೋ ಕೆಲಸವನ್ನು ನಮ್ಮದೇ ಅನ್ನುವ ರೀತಿನಲ್ಲಿ ಆರೋಪ ಮಾಡಿಕೊಂಡು ಹೊಗಳಿಕೊಳ್ಳುವುದಿದೆಯಲ್ಲಾ  ಅದರಂತಹ ನಯವಂಚನೆ, ಆತ್ಮವಂಚನೆ ಬೇರೆ ಯಾವುದೂ ಇರೋದಿಲ್ಲ.

ಗಾಂಧೀಜಿ, ನೆಹರೂ, ಹಾಗೆಯೇ ಅಂಬೇಡ್ಕರ್‌ ರಂತಹ ಅನೇಕರು ನಮಗೆ ಯಾವತ್ತಿಗೂ ಗೌರವಾನ್ವಿತರು. ಅಂತಹವರ ಬಗ್ಗೆ ಕಿರಿಯರಲ್ಲಿ, ವಿದ್ಯಾರ್ಥಿಗಳಲ್ಲಿ ತಪ್ಪು ಭಾವನೆ ಮೂಡಿಸುವಂತಹ ಕೆಲಸವನ್ನು ಮಾಡುವವನೇ ನಿಜವಾದ  ದೇಶ ದ್ರೋಹಿ, ನಿಜವಾದ ಆತ್ಮವಂಚಕ. 

ನಿಮಗೆ ಏನು ಅನ್ನಿಸ್ತು?
1 ವೋಟ್