ಸಿನಿಮಾ ಸ್ವಾತಂತ್ರ್ಯ | ನಮ್ಮ ಕಾಲವನ್ನು ಕದಿಯುವ ಹಕ್ಕನ್ನು ಪ್ರಭುತ್ವಕ್ಕೆ ಕೊಟ್ಟವರಾರು?

India 75

ಜನರಲ್ಲಿ ಕ್ರೌರ್ಯವನ್ನು ಉದ್ದೀಪಿಸುವ ‘ದಿ ಕಾಶ್ಮೀರ ಫೈಲ್ಸ್’ ಚಿತ್ರ, ಸುಳ್ಳುಗಳನ್ನೇ ಸತ್ಯಗಳೆಂದು ಬಿಂಬಿಸುವ, ಆತ್ಮರತಿಯನ್ನೇ ಮೇಳೈಸಿರುವ ವಿವೇಕ್ ಒಬೆರಾಯ್ ಅಭಿನಯಿಸಿರುವ ‘ಪಿ ಎಂ ನರೇಂದ್ರ ಮೋದಿ’ ಎಂಬ ಚಿತ್ರವಾಗಿರಬಹುದು, ವಿರೋಧ ಪಕ್ಷದ ತೇಜೋವಧೆ ಮಾಡಲೆಂದೇ ಚಿತ್ರಿಸಿರುವ ‘ಅಕ್ಸಿಡೆಂಟಲ್ ಪ್ರೈಮ್‌ಮಿನಿಸ್ಟರ್’, ಇವುಗಳಿಗೆ ಸಿಕ್ಕ ಪ್ರೋತ್ಸಾಹಕ್ಕೆ ಮಿತಿಯೇ ಇಲ್ಲ

ಸಾಂಸ್ಕೃತಿಕ ಸಂಸ್ಥೆಗಳನ್ನು, ಎಲ್ಲಾ ಕಲಾ ವಲಯಗಳನ್ನು ಅದು ಸಾಹಿತ್ಯವಿರಲಿ, ನಾಟಕ, ಸಿನೆಮಾ, ಚಿತ್ರಕಲೆ, ಎಲ್ಲವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಪ್ರಭುತ್ವ ಹವಣಿಸುತ್ತಿದೆ. ಈಗಾಲೇ ಅದು ಯಶಸ್ವಿಯೂ ಆಗಿದೆ. ಕಲೆ ಅಷ್ಟೇ ಅಲ್ಲ ಅದರ ಕ್ರೂರ ಬಾಹುಗಳು ಎಲ್ಲಾ ವರ್ಗಗಳ, ಜಾತಿಗಳ, ಅಲ್ಪಸಂಖ್ಯಾತ ಜನರ ಸ್ವಾತಂತ್ರ್ಯವನ್ನೂ ಕಿತ್ತುಕೊಂಡಿದೆ, ಉಸಿರುಕಟ್ಟುವ ವಾತಾವರಣ ಎಲ್ಲೆಡೆ ಇದ್ದರೂ ಮುಖದ ಮೇಲೆ ನಗುವನ್ನು ತಂದುಕೊಂಡು “ಎಲ್ಲಾ ಚೆನ್ನಾಗಿದೆ” ಎಂದು ಹಲ್ಲು ಕಿಸಿಯುತ್ತಿದ್ದಾರೆ ಜನ. ಒಂದು ರೀತಿಯ ಭಯದ ವಾತಾವರಣ ಮಡುಗಟ್ಟಿದೆ. ಇದೊಂದು ರೀತಿಯ ವಿಲಕ್ಷಣ ಕಾಲದಲ್ಲಿ ಬದುಕುತ್ತಿದ್ದೇವೆ. ಎಲ್ಲಾ ನಿಸ್ಸಾಹಯಕ, ಕನಸುಗಳಿಲ್ಲದ, ಗೊತ್ತುಗುರಿ ಇಲ್ಲದ, ಅವಕಾಶಗಳಿಂದ ವಂಚಿತರಾಗಿ, ದಿಙ್ಮೂಢರಂತೆ ಕಾಣುವ ಯುವಜನತೆಯನ್ನು ಕಂಡರೆ ಮರುಕ ಹುಟ್ಟುತ್ತದೆ. ಇವರೆಲ್ಲರ ಕಾಲವನ್ನು ಕದಿಯುವ ಹಕ್ಕನ್ನು ಪ್ರಭುತ್ವಕ್ಕೆ ಕೊಟ್ಟವರಾರು? ಸುಖಾಸುಮ್ಮನೆ ಕಳೆದುಹೋದ ಈ ಎಂಟು ವರ್ಷಗಳನ್ನು ಮರಳಿ ಪಡೆಯಲು ಸಾಧ್ಯವೇ? ಈ ಸಮಯಕ್ಕೆ ಬೆಲೆಯೇ ಇಲ್ಲವೇ? ಇದು ಕೇವಲ ಯುವಕರಿಗಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯನಿಗೂ ಅನ್ವಯಿಸುವ ಪ್ರಶ್ನೆ.

Eedina App

ಸರ್ವಾಧಿಕಾರಿ ಧೋರಣೆಯನ್ನೇ ಮೈಗೂಡಿಸಿಕೊಂಡಿರುವ ಪ್ರಭುತ್ವದಿಂದ ಕ್ರಿಯಾಶೀಲವಾದದ್ದನ್ನು, ಸೃಜನಶೀಲವಾದದ್ದನ್ನು, ವೈಚಾರಿಕವಾದದ್ದನ್ನು, ಪ್ರಗತಿಶೀಲವಾದದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಬೆಂಬಲಿಸಿದ ಹಾಗು ತಿರಸ್ಕರಿಸಿದ ಚಲನಚಿತ್ರಗಳನ್ನು ಗಮನಿಸಿದರೆಯೇ ತಿಳಿಯುತ್ತದೆ, ಇದನ್ನೆಲ್ಲಾ ಅವರು ವ್ಯವಸ್ಥಿತವಾಗಿಯೇ ಮಾಡುತ್ತಿದ್ದಾರೆ ಎಂದು. ಕಳಪೆ ಅಭಿರುಚಿಯ, ಜನರಲ್ಲಿ ದ್ವೇಷ ಅಸೂಯೆ, ಕ್ರೌರ್ಯವನ್ನು ಉದ್ದೀಪಿಸುವಂಥಾ ‘ಕಾಶ್ಮೀರಿ ಫೈಲ್ಸ್’ ಚಿತ್ರವಾಗಬಹುದು, ಸುಳ್ಳುಗಳನ್ನೇ ಸತ್ಯಗಳೆಂದು ಬಿಂಬಿಸುವ, ಆತ್ಮರತಿಯನ್ನೇ ಮೇಳೈಸಿರುವ ವಿವೇಕ್ ಒಬೆರಾಯ್ ಅಭಿನಯಿಸಿರುವ ‘ಪಿ.ಎಂ. ನರೇಂದ್ರ ಮೋದಿ’ ಎಂಬ ಚಿತ್ರವಾಗಿರಬಹುದು, ವಿರೋಧ ಪಕ್ಷದವರ ತೇಜೋವಧೆ ಮಾಡಲೆಂದೇ, ದ್ವೇಷ ರಾಜಕಾರಣದ ಪ್ರತಿಬಿಂಬದಂತೆ ಚಿತ್ರಿಸಿರುವ ‘ಅಕ್ಸಿಡೆಂಟಲ್ ಪ್ರೈಮ್‌ಮಿನಿಸ್ಟರ್’ ಎನ್ನುವ ಚಿತ್ರವಾಗಬಹುದು. ಇವುಗಳಿಗೆ ಪ್ರಭುತ್ವದಿಂದ ಸಿಕ್ಕ  ಪ್ರೋತ್ಸಾಹಕ್ಕೆ ಮಿತಿಯೇ ಇಲ್ಲ. ಇನ್ನೊಂದು ಕಡೆ ಮುಸ್ಲಿಮ್ ನಟರು ನಟಿಸಿದ ಚಿತ್ರಗಳನ್ನು ತಿರಸ್ಕರಿಸುವಂತೆ, ಬಹಿಷ್ಕರಿಸುವಂತೆ ಪ್ರಚೋದಿಸಲಾಗುತ್ತಿದೆ. ಅಥವಾ ಪ್ರಭುತ್ವವನ್ನು ವಿರೋಧಿಸುವ ಯಾವುದೇ ಚಿತ್ರವಾದರೂ ಅದನ್ನು ಸಾರಾಸಗಟಾಗಿ ಬಹಿಷ್ಕರಿಸುತ್ತಾರೆ. ಇಲ್ಲವೇ ಪೂರ್ಣವಾಗಿ ಇಲ್ಲವಾಗಿಸುತ್ತಾರೆ. ಈ ರೀತಿಯ ಬೆಳವಣಿಗೆಗಳು ಒಂದು ಆರೋಗ್ಯವಂತ ಸಮಾಜದ ಲಕ್ಷಣಗಳಲ್ಲ.

ಪ್ರಭುತ್ವದ ಪರವಾದ ಸಿನಿಮಾಗಳಿಗೆ ಕಾಲ

AV Eye Hospital ad

ಈಗ ಇನ್ನು ಸರ್ಕಾರಿ ಪೋಷಿತ ಸಂಸ್ಥೆಗಳಾದ ಎನ್.ಎಫ್.ಡಿ.ಸಿ, ಚಿಲ್ಡ್ರನ್ ಫಿಲಂ ಸೊಸೈಟಿ ಆಫ್ ಇಂಡಿಯಾ, ಫಿಲಂ ಡಿವಿಷನ್, ಮತ್ತು ಫಿಲಂ ಫೆಸ್ಟಿವಲ್ ಆಫ್ ಇಂಡಿಯಾಗಳೆಲ್ಲವನ್ನೂ ಎನ್.ಎಫ್.ಡಿ.ಸಿ ಎಂಬ ಒಂದೇ ಸೂರಿನಡಿ ತಂದು ಗುಡ್ಡೆ ಹಾಕಲಾಗಿದೆ. ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದು ಅಧಿಕಾರ ಹಿಡಿದ ಕೇಂದ್ರ ಸರ್ಕಾರದ ಈ ಜನಕ್ಕೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲದಿರುವುದು ಈ ಎಲ್ಲಾ ಅವಾಂತರಗಳಿಗೂ ಕಾರಣವಾಗಿವೆ ಎಂದು ಸ್ಪಷ್ಟವಾಗಿ ಹೇಳಬಹುದು. ಮೊದಲಯನದಾಗಿ ಫಿಲಂ ಡಿವಿಷನ್ ಆರಂಭವಾದದ್ದೇ ಪ್ರಯೋಗಾತ್ಮಕ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು, ಇದರ ಸದುಪಯೋಗವನ್ನು ದೇಶದ ಶ್ರೇಷ್ಠ ಕಲಾವಿದರು, ಶ್ರೇಷ್ಠ ಸಾಕ್ಷ್ಯಚಿತ್ರ ನಿರ್ದೇಶಕರು ಬಳಸಿಕೊಂಡಿದ್ದಾರೆ, ಕಲಾವಿದರಾದ ಅಕ್ಬರ್ ಪದಮ್ಸಿ, ತಹೆಬ್ ಮೆಹೆತಾ, ಎಂ.ಎಫ್. ಹುಸೇನ್ ಹೀಗೆ ಅನೇಕರು ರಚಿಸಿದ ಪ್ರಯೋಗಾತ್ಮಕ ಚಲನಚಿತ್ರಗಳು ಇಂದಿಗೂ ವಿಸ್ಮಯವನ್ನು ಉಂಟುಮಾಡುತ್ತವೆ. ಅವು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಪ್ರೇರೇಪಿಸುವ ಕೃತಿಗಳಾಗಿವೆ.

The kashmir Files

ಇತ್ತೀಚಿಗಷ್ಟೇ ಅಕ್ಬರ್ ಪದಮ್ಸಿಯವರ ಕಳೆದುಹೋದ ಒಂದು ಫಿಲಂನಿಂದ ಪ್ರಭಾವಿತನಾಗಿ ಅಶಿಮ್ ಅಹಲವಾಲಿಯಾ ಎಂಬ ನಿರ್ದೇಶಕನೊಬ್ಬ ತನ್ನದೇ ಆದ ಒಂದು ಪ್ರಯೋಗಾತ್ಮಕ ಚಿತ್ರವೊಂದನ್ನು ರಚಿಸಿದ. ಇನ್ನು ಸಾಕ್ಷ್ಯಚಿತ್ರದ ವಿಷಯಕ್ಕೆ ಬಂದರೆ ಸಾಕಷ್ಟು ಜನ ಶ್ರೇಷ್ಠ ನಿರ್ದೇಶಕರ ಹುಟ್ಟಿಗೆ ಈ ಸಂಸ್ಥೆ ಕಾರಣವಾಗಿತ್ತು, ಅವರಲ್ಲಿ ಮುಖ್ಯವಾಗಿ ಸುಖದೇವ್, ಎಸ್.ಎನ್.ಎಸ್ ಶಾಸ್ತ್ರಿರಂಥಾ ನಿರ್ದೇಶಕರು ಸ್ವತಂತ್ರವಾಗಿ ನಿರ್ಬಿಢೆಯಿಂದ ಅತ್ಯುತ್ತಮ ಸಾಕ್ಷ್ಯಚಿತ್ರಗಳನ್ನು ಸೃಷ್ಠಿಸಿದ್ದಾರೆ, ಇದಕ್ಕೆಲ್ಲಾ ಕಾರಣವಾದದ್ದು ಫಿಲಂ ಡಿವಿಷನ್ನಿನ ಕಾರ್ಯ ವೈಖರಿ, ಎಷ್ಟೋ ಜನ ಪ್ರಗತಿಪರ ನಿರ್ದೇಶಕರು ಅದರ ಕಾರ್ಯವೈಖರಿಯನ್ನು ವಿಮರ್ಶಿಸುತ್ತಿದ್ದವರು ವಿರೋಧಿಸುತ್ತಿದ್ದವರು ಈಗ ಅವೇ ಒಳ್ಳೆಯ ದಿನಗಳೆಂದು ಸ್ಮರಿಸುವ ಸಂದಿಗ್ಧಕ್ಕೆ ಸಿಕ್ಕಿಕೊಂಡಿದ್ದಾರೆ. ಹೆಚ್ಚಿನ ಜನ ಭ್ರಮನಿರಸನಕ್ಕೊಳಗಾಗಿದ್ದಾರೆ.

ಸ್ವಾತಂತ್ರ್ಯದ ಬೆಲೆ, ಅದರ ಅಸ್ಥಿತ್ವ, ಅದರ ಪ್ರಾಮುಖ್ಯತೆ, ಅದನ್ನು ಕಳೆದುಕೊಂಡಾಗಲೇ ತಿಳಿಯುವುದು. ಚಿಲ್ಡ್ರನ್ ಫಿಲಂ ಸೊಸೈಟಿ ಆಫ್ ಇಂಡಿಯಾ ಅತ್ಯುತ್ತಮವಾದ ಮಕ್ಕಳ ಚಿತ್ರಗಳನ್ನು ಕೊಟ್ಟಿದೆ ಎಂದು ನನಗೇನು ಅನ್ನಿಸುತ್ತಿಲ್ಲ, ಆದರೆ ಮಕ್ಕಳಿಗೇ ಅಂತ ಇದ್ದ ಒಂದೇ ಒಂದು ಸಣ್ಣ ಅವಕಾಶವೂ ತಪ್ಪಿಹೋಗುತ್ತಿರುವುದು ಬೇಸರದ ಸಂಗತಿ. ಇರಾನಿಯನ್ ಸಿನೆಮಾ ಮಕ್ಕಳ ಸಿನೆಮಾಗಳಿಂದಲೇ ಒಂದು ಚಳವಳಿಯೋಪಾದಿಯಾಗಿ ವಿಶ್ವ ಮಾನ್ಯತೆ ಪಡೆದದ್ದು ನಮ್ಮ ಕಣ್ಣ ಮುಂದೇ ಇದೆ, ಅಸಾಧ್ಯವಾದದ್ದು ಯಾವುದೂ ಇಲ್ಲ, ಪ್ರೋತ್ಸಾಹದ ಕೊರತೆಯೊಂದೇ ಇಲ್ಲಿ ಎದ್ದು ಕಾಣುತ್ತಿದೆ. ಕರ್ನಾಟಕದಲ್ಲೂ ಮಕ್ಕಳ ಚಿತ್ರಗಳಿಗೆ ಹೆಚ್ಚಿನ ಸಬ್ಸಿಡಿ ಕೊಡುತ್ತಾರೆ, ಆದರೆ ನಿರೀಕ್ಷೆಸಿದ ಗುಣಮಟ್ಟದ ಮಕ್ಕಳ ಚಿತ್ರಗಳನ್ನು ನಾವು ಸೃಷ್ಟಿಸಲಾಗಿಲ್ಲ. ಇದಕ್ಕೆಲ್ಲಾ ಕಾರಣಗಳನ್ನು ಹುಡುಕುತ್ತಾ ಹೊರಟರೆ ಸತ್ಯದ ದರ್ಶನವಾಗುತ್ತದೆ, ನಾವು ಒಳ್ಳೆಯ ಚಿತ್ರಗಳನ್ನು ಸೃಷ್ಟಿಸುವುದಿರಲಿ ಒಳ್ಳೆಯ ನೋಡುಗರನ್ನೂ ಸೃಷ್ಟಿಸಲು ಸಾಧ್ಯವಾಗಿಲ್ಲ. ಎಲ್ಲವನ್ನೂ ಸರಕಾಗಿ, ಮಾರುಕಟ್ಟೆಯ ವಸ್ತುವಾಗಿ ನೋಡುವ ಪರಿಪಾಠವನ್ನು ರೂಢಿಸಿಕೊಂಡ ಮೇಲೆ, ಎಲಾ ಮೌಲ್ಯಗಳೂ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಒಳ್ಳೆಯ ಕೃತಿಗಳು ಅಲ್ಲೊಂದು ಇಲ್ಲೊಂದು ಕಾಣಿಸಿಕೊಂಡರೂ ಭೋರ್ಗರೆಯುವ ಕೊಚ್ಚೆನೀರಿನ ಪ್ರವಾಹದಲ್ಲಿ ಕೊಚ್ಚಿಹೋಗುತ್ತವೆ.

ದೇಶದ ಎಲ್ಲಾ ವಿಶ್ವವಿದ್ಯಾಲಯಗಳನ್ನು, ಎಲ್ಲಾ ಪ್ರತಿಷ್ಠಿತ ವಿದ್ಯಾಸಂಸ್ಥೆಗಳನ್ನು ಹಾಳುಗೆಡವಿದಂತೆಯೇ ಏಶಿಯಾದಲ್ಲಿಯೇ ಪ್ರಮುಖ ಚಲನಚಿತ್ರ ಶಾಲೆ ಪುಣೆಯ ಫಿಲಂ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಆಳುವ ವರ್ಗ ಹಾಳು ಮಾಡ ಹೊರಟಿದೆ, ತಮ್ಮ ಸೈದ್ಧಾಂತಿಕ ಹಿನ್ನೆಲೆಯ ವಿಚಾರಗಳನ್ನು ಅಲ್ಲಿನ ಪಠ್ಯಕ್ರಮಗಳಲ್ಲಿ ಅಳವಡಿಸುತ್ತಿದ್ದರೆ. ಈ ದೇಶದ ಎಂತೆಂಥಾ ಶ್ರೇಷ್ಠ ನಿರ್ದೇಶಕರ ಹುಟ್ಟಿಗೆ ಈ ಸಂಸ್ಥೆ ಕಾರಣವಾಗಿದೆ ಎಂದು ಒಮ್ಮೆ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಕಣ್ಣಾಡಿಸಿದರೆ ತಿಳಿಯುತ್ತದೆ. ಬರೀ ವ್ಯಾಪಾರಿ ಚಿತ್ರಗಳದ್ದೇ ಮೇಲಾಟ ಸಾಧಿಸಿದ್ದ ಭಾರತೀಯ ಚಿತ್ರರಂಗದಲ್ಲಿ ಅದಕ್ಕೆ ಪರ್ಯಾಯವಾಗಿ ಕಲಾತ್ಮಕ, ವೈಚಾರಿಕ, ಸೈದ್ಧಾಂತಿಕ, ಸಾಂಸೃತಿಕ ಹಿನ್ನೆಲೆಯಲ್ಲಿ ನೆಲಸಂಸೃತಿಯನ್ನು ಮೈಗೂಡಿಸಿಕೊಂಡ ಈ ಮಣ್ಣಿಗೆ ಹತ್ತಿರವಾದ ಅಪ್ಪಟ ಕೃತಿಗಳ ಸೃಷ್ಠಿಗೆ ಕಾರಣವಾದ್ದು ಈ ಸಂಸ್ಥೆಯಿಂದ ಕಲಿತುಬಂದ ನಿರ್ದೇಶಕರಿಂದ, ಹಾಗು ರಿತ್ವಿಕ್ ಘಟಕ್ ಅವರಂಥಾ ಗುರುಗಳ ಫಲದಿಂದಾಗಿ. ಅಂಥಾ ಒಂದು ಹಿನ್ನೆಲೆಯ ಈ ಸಂಸ್ಥೆ ಬಾಲಿವುಡ್‌ನ ವ್ಯಾಪಾರಿ ಚಿತ್ರಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪಠ್ಯವನ್ನು ರೂಪಿಸುತ್ತಿರುವುದು ದುರದೃಷ್ಟಕರ.

Film fest

ಸಿನೆಮಾದಲ್ಲಿ ಸ್ವಾತಂತ್ರ್ಯದ ಕಲ್ಪನೆಯನ್ನೇ ಅದು ಆರಂಭವಾದ ದಿನಗಳಿಂದಲೂ ಎಲ್ಲಾ ದೇಶಗಳ ನಿರ್ದೇಶಕರೂ ಕನಸುತ್ತಿದ್ದಾರೆ, ಅದು ಸಾಮಾನ್ಯರ ಕನಸಿಗೆ ಎಟುಕಲಾರದ ಒಂದು ಮಾಧ್ಯಮವಾಗಿಯೇ ಉಳಿದಿತ್ತು. ಯಾವಾಗ ಡಿಜಿಟಲೀಕರಣ ಆರಂಭವಾಯಿತೋ ಆಗ ಅತೀ ಕಡಿಮೆ ಬಂಡವಾಳದಲ್ಲೂ ಒಂದು ಅತ್ಯುತ್ತಮ ಚಿತ್ರ ಮಾಡಲು ಸಾಧ್ಯ, ಬಂಡವಾಳಶಾಯಿಗಳಿಂದ ಬಿಡಿಸಿಕೊಂಡು ಸ್ವತಂತ್ರವಾಗಿ, ಕ್ಯಾಮರಾವನ್ನು ಒಂದು ಪೆನ್ನಿನ ಥರಾ, ಬರಹಗಾರ ಒಂದು ಕೃತಿಯನ್ನು ತನ್ನ ಪಾಡಿಗೆ ತಾನು ರಚಿಸುವ ರೀತಿಯಲ್ಲಿ ಒಬ್ಬ ನಿರ್ದೇಶಕ ತನ್ನ ಸಿನೆಮಾವನ್ನು ನಿರ್ಮಿಸಬಹುದು ಎಂದು ಎಲ್ಲರೂ ಭಾವಿಸಲು ಶುರು ಮಾಡಿದ್ದರು. ಆದರೆ ಸಿನೆಮಾವನ್ನು ಹೇಗಾದರೂ ಮಾಡಿ ನಿರ್ಮಿಸಿಬಿಡಬಹುದು. ಆದರೆ ಅದನ್ನು ಪ್ರೇಕ್ಷಕನಿಗೆ ತಲುಪಿಸಬೇಕಲ್ಲ, ಅದು ಇಂದಿಗೂ ಸಾಹಸದ ಕೆಲಸ. ಭಾರತದ ಎಷ್ಟೋ ಶ್ರೇಷ್ಟ ಸಿನೆಮಾಗಳು ನಿರ್ದೇಶಕ ಸತ್ತು ಎಷ್ಟೋ ವರ್ಷಗಳ ನಂತರ ಬಿಡುಗಡೆ ಕಂಡಿವೆ. ಕೆಲವು ಕಾಣದೇ ಇರಲೂಬಹುದು. ಇದಕ್ಕೆಲ್ಲಾ ಇಲ್ಲಿನ ವ್ಯವಸ್ಥೆಯೇ ಕಾರಣವಾಗಿದೆ. ಸಿನೆಮಾ ತಯಾರಾದ ನಂತರ ಸೆನ್ಸಾರ್ ಮಂಡಳಿಯಿಂದ ಹಾದು ಬರುವುದೊಂದು ಹರಸಾಹಸವೇ ಸರಿ. ಅಲ್ಲಿನ ಎಷ್ಟೋ ನಿಬಂಧನೆಗಳು ಅತಾರ್ಕಿಕವಾದಂತವು.

ಇದನ್ನು ಓದಿದ್ದೀರಾ? ಪ್ರಜಾ ಸ್ವಾತಂತ್ರ್ಯ| ಚುನಾಯಿತ ಸರ್ವಾಧಿಕಾರ ವ್ಯವಸ್ಥೆ ಮತ್ತು ಮತದಾರರ ಸ್ವಾತಂತ್ರ್ಯ

ಚಿತ್ರದ ದೃಶ್ಯಗಳನ್ನು ಚಿತ್ರಿಸುವಾಗ ಫ್ರೇಮಿನ ಒಳಗೆ ಯಾವುದೇ ಪ್ರಾಣಿ ಅಥವಾ ಪಕ್ಷಿ ಸುಳಿಯದಂತೆ ನೋಡಿಕೊಳ್ಳಬೇಕು, ಎಲ್ಲಾದರು ಅಚಾನಕ್ ನಿಮಗೆ ತಿಳಿಯದೆ ಶೂಟಾದ ಪ್ರಾಣಿಯೋ ಪಕ್ಷಿಯೋ ಸೆನ್ಸಾರ್ ನವರಿಗೆ ಕಾಣಿಸಿಕೊಂಡರೆ ಸೀದಾ ಹರಿಯಾಣಕ್ಕೆ ಹೋಗಿ (ಇತ್ತೀಚಿಗಷ್ಟೇ ಬದಲಾಗಿದೆ, ಹಿಂದೆ ಈ ಮಂಡಳಿ ಚೆನ್ನೈನಲ್ಲಿತ್ತು) ಅಲ್ಲಿನ ಪ್ರಾಣಿ ದಯಾಸಂಘದಿಂದ ಪ್ರಮಾಣಪತ್ರವನ್ನು ತರಬೇಕು. ಅದನ್ನು ಪಡೆಯಲು 50 ಸಾವಿರ ರೂಪಾಯಿಗಳನ್ನು ಪಾವತಿಸಬೇಕು. ಇಷ್ಟೆಲ್ಲಾ ಆದರೂ ನಿಮಗೆ ಸೆನ್ಸಾರ್ ಪ್ರಮಾಣಪತ್ರ ಸಿಗುತ್ತದೆ ಎಂಬ ಖಾತ್ರಿಯಿರುವುದಿಲ್ಲ, ಏಕೆಂದರೆ ಸುಮಾರು ಜನ ಅಧಿಕಾರಿ ವರ್ಗದವರಿಗೆ ಸಿನೆಮಾ ಭಾಷೆಯ ಬಗ್ಗೆಯೇ ಪ್ರಾಥಮಿಕ ಜ್ಞಾನವಿರುವುದಿಲ್ಲ. ಒಂದು ಫಾರ್ಮುಲಾದಿಂದ ಅಥವಾ ಸಿದ್ಧ ಮಾದರಿಯಿಂದ ಆಚೆಗೆ, ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವ ಚಿತ್ರಗಳನ್ನು ತಿರಸ್ಕರಿಸಿಬಿಡುತ್ತಾರೆ. ಸಾಕ್ಷ್ಯಚಿತ್ರ ನಿರ್ದೇಶಕರಿಗಂತೂ ಇನ್ನೂ ಕಷ್ಟದ ಕೆಲಸ, ಇಲ್ಲಿ ಸಿನೆಮಾ ತಯಾರಿಸುವುದೂ ಕಷ್ಟ, ಅದರ ಪ್ರದರ್ಶನವೂ ಕಷ್ಟ, ಇನ್ನು ಪ್ರಭುತ್ವದ ವಿರುದ್ದದ ಚಿತ್ರಗಳಾದರೆ, ಅದು ಎಲ್ಲೂ ಪ್ರದರ್ಶನಗೊಳ್ಳದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಾರೆ. ಬೇರೆ ಅವಕಾಶಗಳಿಲ್ಲದೆ ಹಾಕಿದ ಬಂಡವಾಳ, ಶ್ರಮಕ್ಕೆ ಫಲವನ್ನು ನಿರೀಕ್ಷಿಸದೇ ಯೂಟ್ಯೂಬಿನಲ್ಲೋ ಅಥವಾ ಯಾವುದಾದರೂ ಅಗ್ಗದ ಓಟಿಟಿಯಲ್ಲೋ ಹರಿಯಬಿಟ್ಟು ಸುಮ್ಮನಾಗಬೇಕಾಗುವಂಥಾ ಪರಿಸ್ಥಿತಿಗೆ ಇಂದಿನ ಸಿನೆಮಾ ಪ್ರಪಂಚ ಬಂದು ನಿಂತಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app