ಮಸೀದಿಯಿಂದ ಹೊರಡುವ ಅಝಾನ್ ಅವ್ವನ ಗಡಿಯಾರವಾಗಿತ್ತು

Aazan

ದೆಹಲಿ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ನನ್ನ ಮಗ ಒಮ್ಮೆ ನನಗೆ ಕೇಳಿದ, 'ನಾವು ಯಾವ ಜಾತಿ ಮಮ್ಮೀ ' ಅಂತಾ. ಆ ಪ್ರಶ್ನೆಯನ್ನು ಕೇಳಿದವರಾರು ಅಂತ ವಿಚಾರಿಸಿ ʼಮನುಷ್ಯ ಜಾತಿ’ ಅಂತ ಉತ್ತರ ಕೊಡು ಎಂದು ಹೇಳಿಕೊಟ್ಟಿದ್ದೆ. ಯಾಕೆಂದರೆ ದೆಹಲಿ ವಾಸದಲ್ಲಿ ನಾನ್ಯಾವತ್ತೂ ಈ ಪ್ರಶ್ನೆಯನ್ನು ಯಾರಾದರೂ ಕೇಳಿದ್ದನ್ನಾಗಲಿ ಚರ್ಚಿಸಿದ್ದನ್ನಾಗಲಿ ಕಂಡಿದ್ದಿಲ್ಲ.

ಮೊನ್ನೆ ಮೊನ್ನೆಯಷ್ಟೇ ಕಳೆದ ರಂಝಾನ್ ಉಪವಾಸದ ಕೊನೆಯ ದಿನ, 'ಈದ್-‌ಉಲ್ ಫಿತ್ರ್ ' ಹಬ್ಬದಂದು ನಮ್ಮ ಕಂಪನಿಯ ಗುಜರಿ ಸಾಮಾನು ಕಚಡಾ ಒಯ್ಯುವ ಗುತ್ತಿಗೆದಾರ ಸಿರಾಜುದ್ದೀನ್ ದೊಡ್ದ ಎರಡು ಕಿಲೋ ಡಬ್ಬದಲ್ಲಿ ಶ್ಯಾವಿಗೆ ಖೀರು ತಂದು ಹಂಚಿದ. ಮರುದಿನ ಸಿವಿಲ್ ಕಾಮಗಾರಿ ಕೆಲಸದ ಅನ್ವರ ಖಾನ್ ದಾದ್ರಿಯ ಮಿಠಾಯಿಯನ್ನು ತಂದು ಹಂಚಿದ.  

ಪ್ರತಿ ಹಬ್ಬದಲ್ಲೂ ನನಗೆ ನನ್ನೂರಿನ ನೆನಪಾಗುತ್ತದೆ. ಊರಿನಲ್ಲಿ ರಂಝಾನ್ ಮೊಹರಂ ಹಬ್ಬ ಬಂದರೆ ನಮಗೇ ಹೆಚ್ಚು ಸಂಭ್ರಮವಿರುತ್ತಿತ್ತು. ಈ ಸಲ ರಂಝಾನ್ ಬಸವ ಜಯಂತಿ, ಮಹಾವೀರ ಜಯಂತಿ, ಅಕ್ಷಯ ತೃತಿಯಾ ಒಟ್ಟೊಟ್ಟಿಗೆ ಬಂದವು. ನಮ್ಮ ಸಂಸ್ಕೃತಿಯ ಸೊಬಗಿರುವುದು ಇಂತಹ  ಸಾಮರಸ್ಯದಲ್ಲಿಯೇ. ಎಲ್ಲಾ ಧರ್ಮೀಯರೂ ಒಟ್ಟಾಗಿ ಬಾಳುವ ಸಹಬಾಳ್ವೆಯಲ್ಲಿರುವ ಸಂತೋಷವನ್ನು ಕೋಮುದ್ವೇಷ ನಮ್ಮಿಂದ ಕಿತ್ತುಕೊಳ್ಳುತ್ತಿದೆ. ಸಹಬಾಳ್ವೆಯ ಮಹತ್ವವನ್ನು ನಮ್ಮ ಹಿರಿಯರು ಚೆನ್ನಾಗಿ ಅರಿತಿದ್ದರು.

ಭೌಗೋಳಿಕವಾಗಿ ದಖನ್ ಪ್ರಸ್ಥಭೂಮಿಯ ನಡುಭಾಗದಲ್ಲಿರುವ ಕರ್ನಾಟಕಕ್ಕೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸುದೀರ್ಘ ಚರಿತ್ರೆಯಿದೆ. ಕರ್ನಾಟಕಕ್ಕೆ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳು ಮುಸ್ಲಿಮರ ಮೂಲಕವೇ ಬಂದವು. ದಖನಿ ಉರ್ದು ದಕ್ಷಿಣ ಭಾರತದಲ್ಲಿಯೇ ವಿಕಸಿತಗೊಂಡಿತು. ಕರ್ನಾಟಕದಲ್ಲಿ ಸೂಫಿ ಪಂಥವು ಜನಪ್ರಿಯವಾಗಿದ್ದು ಕಲಬುರ್ಗಿಯಲ್ಲಿರುವ ಬಂದೇ ನವಾಜ್ ಗೇಸು ದರವಾಜ ದರ್ಗಾದ ಮೂಲಕ. ಇಂತಹ ಇತಿಹಾಸವಿರುವ  ನಾವೆಲ್ಲರೂ ಒಂದಿಲ್ಲಾ ಒಂದು ಊರಿನ, ಕೇರಿಯ ಸೌಹಾರ್ದಯುತ ಸಮಾಜದಲ್ಲಿಯೇ ಬೆಳೆದವರು. ನಮಗೆ ಶಾಲಾ ಕಾಲದಲ್ಲಿ ಜಾತಿ-ಪಾತಿಗಳ ಬಗ್ಗೆ ಗೊತ್ತೂ ಇದ್ದಿಲ್ಲ. ಅಂದಿನ ಪಾಲಕರೂ ಮಕ್ಕಳಿಗೆ ಜಾತಿಗಳ ಬಗ್ಗೆ ಹೇಳಿಕೊಟ್ಟು ಮಕ್ಕಳ ಮನಸ್ಸಿನಲ್ಲಿ ಕೋಮು ವಿಷವನ್ನು ತುಂಬುತ್ತಿದ್ದಿಲ್ಲ.

ದೆಹಲಿ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ನನ್ನ ಮಗ ಒಮ್ಮೆ ನನಗೆ ಕೇಳಿದ, ʼನಾವು ಯಾವ ಜಾತಿ ಮಮ್ಮೀʼ ಅಂತಾ. ಆ ಪ್ರಶ್ನೆಯನ್ನು ಕೇಳಿದವರಾರು ಅಂತ ವಿಚಾರಿಸಿ ʼಮನುಷ್ಯ ಜಾತಿ’ ಅಂತ ಉತ್ತರ ಕೊಡು ಎಂದು ಹೇಳಿಕೊಟ್ಟಿದ್ದೆ. ಯಾಕೆಂದರೆ ದೆಹಲಿವಾಸದಲ್ಲಿ ನಾನ್ಯಾವತ್ತೂ ಈ ಪ್ರಶ್ನೆಯನ್ನು ಯಾರಾದರೂ ಕೇಳಿದ್ದನ್ನಾಗಲಿ ಚರ್ಚಿಸಿದ್ದನ್ನಾಗಲಿ ಕಂಡಿದ್ದಿಲ್ಲ. ಇಂದು ಚಿಕ್ಕ ಮಕ್ಕಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳು ಸಂಸ್ಕೃತಿಯ ಪಾಠವನ್ನು ಹೇಳಿಕೊಡಲು ಹೌಸಿಂಗ್ ಸೊಸೈಟಿ, ಅಪಾರ್ಟ್‌ಮೆಂಟುಗಳಿಗೂ ಕಾಲಿಟ್ಟಿವೆ, ದ್ವೇಷವನ್ನು ಬಿತ್ತುತ್ತಿವೆ.   

ಧಾರವಾಡದ ತವರಿನಲ್ಲಿ ನಾವಿರುವ ಓಣಿಗೆ ಶೀಲವಂತರ ಓಣಿ ಎನ್ನುತ್ತಿದ್ದರು. ಇಡೀ ಓಣಿಯಲ್ಲಿ ನಮ್ಮ ಮನೆಯ ಎದುರಿನ ಸಾಲುಮನೆಗಳು ರೈತಾಪಿ ಒಕ್ಕಲಿಗರಿಗೆ ಸೇರಿದ್ದರೆ ನಮ್ಮ ಹಿತ್ತಲಿಗೆ ಮುಸ್ಲಿಮರೇ ವಾಸಿಸುವ ಪಿಂಡಾರ್ ಅಥಾವಾ ಪಿಂಜಾರ್ ಓಣಿ ಹೊಂದಿಕೊಂಡಿತ್ತು.  ಮನೆಯ ಆಜೂಬಾಜೂ ಅವರೇ ಇದ್ದರು.  ಅಲ್ಲಿ ವಾಸಿಸುತ್ತಿದ್ದವರೆಲ್ಲ ನಮಗೆ ಪ್ರಿಯರಾಗಿದ್ದವರೇ. ನಮ್ಮ ಹಿತ್ತಲಿಗೂ ಪಿಂಜಾರ್ ಓಣಿಗೂ ನಡುವೆ ಒಂದು ಕಿರಿದಾದ ಸಂದಿಯಿತ್ತು. ಸಂದಿಯನ್ನು ದಾಟಿ ಆ ಓಣಿಗೆ ಹೋಗಬಹುದಿತ್ತು, ಹಿತ್ತಲಿನಲ್ಲಿ ಹೂ ಗಿಡಗಳು, ಪೇರಲ ಗಿಡ, ಅವರೇ ಬಳ್ಳಿ, ಲಿಂಬೆ, ದಾಳಿಂಬೆ ಗಿಡಗಳಿದ್ದು ನಾವು ಹಿತ್ತಲಿನಲ್ಲಿಯೇ ಕುಳಿತು ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದನ್ನು ಮಾಡುತ್ತಿದ್ದೆವು. ಅತ್ತಲಿಂದ ಆಡು ಕೋಳಿಗಳು ನಮ್ಮ ಹಿತ್ತಲಿಗೆ ನುಗ್ಗುತ್ತಿದ್ದುದರಿಂದ ಆ ಸಂದಿಯನ್ನು ಬಿದಿರಿನ ತಟ್ಟಿಯಿಂದ ಬಂದ್ ಮಾಡಲಾಗಿತ್ತು. ಆ ಸಂದಿಯ ಆಚೆಕಡೆ ನಿಂತುಕೊಂಡು ಅವ್ವಾ..ʼ ಅವ್ವಾ ಅಂತ ಕೂಗು ಕೇಳಿದರೆ ನನ್ನ ತಾಯಿ, ʼಏಯ್ ಹೋಗಿ ನೋಡು…ದಾದೀ ಬೀ ..ಕರಿಯಾಕತ್ತಾಳ, ಉಪ್ಪಿನಕಾಯಿ ಬೇಕಿರಬೇಕ್ʼ ಅಂತ ಅವ್ವನೇ ಊಹಿಸಿಬಿಡುತ್ತಿದ್ದಳು. ದಾದೀ ಬೀ, ಹುಸೇನ ಬೀ ಗಳ ಸೊಸೆಯಂದಿರಿಗೆ ಬಸಿರು, ಬಯಕೆಗಳು ಶುರುವಾದರೆ ಅವರು ಅಲ್ಲಿಂದ ಕೂಗು ಹಾಕಿ ನಾವು ಇತ್ತಲಿಂದ ಉಪ್ಪಿನಕಾಯಿಯನ್ನು ದಾಟಿಸುತ್ತಿದ್ದೆವು. ಮನೆಯಲ್ಲಿನ ಚಿಕ್ಕ ಮಕ್ಕಳಿಗೆ ದೃಷ್ಟಿಯಾದರೆ, ಕಾಲ್ದೂಳಿಯಾದರೆ, ಹಿಂದಿನ ಓಣಿಗೆ ಹೋಗಿ ಗಡ್ದೇಸಾಬರ ನವಿಲುಗರಿಯಿಂದ ನಿವಾಳಿಸಿಕೊಂಡು ಅವರು ಕೊಟ್ಟ ಸಕ್ಕರೆಯನ್ನು ತಿಂದರೆ ಆತು…ಎಲ್ಲಾ ಬಾಧೆಗಳೂ ʼಛೂ ಮಂತರ್ʼ ಆಗಿಬಿಡುತ್ತಿದ್ದವು. 

Image
ಮೊಹರಂ ಸಂಭ್ರಮ
ಮೊಹರಂ ಸಂಭ್ರಮ

ಬಹಳ ದಿನ ನನ್ನ ತಂಗಿಗೆ ಮಗುವಾಗದೇ ಆಕೆ ಮಾನಸಿಕವಾಗಿ ಕುಗ್ಗಿರುವಂಥ ಹೊತ್ತಿನಲ್ಲಿ ನನ್ನ ತಾಯಿಗೆ ಸದಾ ಆಕೆಯದೇ ಚಿಂತೆಯಾಗಿರುತ್ತಿತ್ತು. ಏನು ಮಹಾ ವಯಸ್ಸಾಗಿದೆ ಅಂತ ಸಮಾಧಾನಪಟ್ಟರೂ ಒಳಗುದಿ ಇದ್ದೇ ಇರುತ್ತಿತ್ತು. ಒಂದಿನವಂತೂ ನನ್ನ ಅವ್ವ ಪಕ್ಕದ ಸಂದಿಯಲ್ಲಿ ಹೋಗಿ ನೂರಿ ಹೆತ್ತ ಹಸುಗೂಸನ್ನು ಬೆಕ್ಕಿನ ಮರಿಯನ್ನು ತರುವಂತೆ ಸೆರಗಿನಲ್ಲಿ ಮುಚ್ಚಿ ತಂದಳು. ʼನೋಡು ನೋಡು ಎಷ್ಟ ಗೊಂಬಿಹಂಗ ಐತಿ’ ಎನ್ನುತ್ತಾ ಮುದ್ದಿಸಿದಳು.  ವರ್ಷಕ್ಕೊಂದು ಹೆರುತ್ತಿದ್ದ ನೂರಿಗೆ ಮಕ್ಕಳನ್ನು ಕೊಡುವ ಅಲ್ಲಾಹು ನಮ್ಮ ಹುಡುಗಿಗೆ ಯಾಕೆ ಕೊಡವಲ್ಲ ʼ ಅಂತ ಅವ್ವನ ಆರೋಪ ಆ ದೇವರ ಮೇಲೆ. ಅವಳ ದೇವರೂ ನೂರಿಯ ಅಲ್ಲಾಹುವೂ ಒಂದೇ ಎಂಬುದು ಆಕೆ ಅರಿತಿದ್ದಳು.  ದೇವರು – ದಿಂಡರು; ಗುಡಿ –ಗುಂಡಾರ – ದರ್ಗಾ- ಪೀರಬಾಬಾ. ಫಕೀರರು, ಸಾಧು ಸಂತರ ಗದ್ದುಗೆ, ಸಮಾಧಿ, ಗುಂಡುಕಲ್ಲು, ದ್ಯಾಮವ್ವ, ದುರ್ಗವ್ವ, ಭೀಮವ್ವ ಅಂತೆಲ್ಲ  ಬೇಡಿಕೊಂಡಿದ್ದಾಯ್ತು.  ಈಗಲೂ ನನಗೆ ಅವ್ವನ ಸೆರಗಿನಲ್ಲಿ ಮುದುಡಿ ಮಲಗಿದ್ದ ಬಿಳಿ ಬಿಳಿ ಬೆಕ್ಕಿನ ಮರಿಯಂತಿದ್ದ ನೂರಿಯ ಕೂಸಿನ ಚಿತ್ರವೇ ಅಚ್ಚೊತ್ತಿದಂತಿದೆ. ನಾವು ಬೇಡಿದ್ದರೆ ನೂರಿ ತನ್ನ ಮಗುವನ್ನು ಕೊಡ್ತಿದ್ದಳೇ ಎನ್ನುವುದು ಬೇರೆ ಮಾತು.         

ನಮ್ಮೂರಿನ ಲಕ್ಷ್ಮೀ ನಾರಾಯಣನ ಜಾತ್ರೆಯಲ್ಲಿ ತೊಟ್ಟಿಲು ಆಡಿಸುತ್ತಿದ್ದ ಕಾಸಿಂ, ಪಾತ್ರೆ ಪಗಡಗಳ ಅಂಗಡಿ, ರಿಬ್ಬನ್ನು, ಬಳೆಯಂಗಡಿ, ಮಕ್ಕಳ ಆಟದ ಸಾಮಾನುಗಳ ಅಂಗಡಿ ಹಾಕಿ ಜಾತ್ರೆಯನ್ನು ಸಂಭ್ರಮವಾಗಿಸುತ್ತಿದ್ದವರೆಲ್ಲ ನಮ್ಮವರೇ ಮುಸ್ಲಿಂ ಬಾಂಧವರು. ಇತ್ತೀಚೆಗೆ ಧಾರವಾಡದ ನನ್ನ ಹೊಸ ಮನೆಯ ಮರದ ಕೆಲಸವನ್ನು ಮಾಡಿದವ ಇಮಾಂಬೂನ ಗಂಡ ಮುಹಮ್ಮದ್ ಅಲೀ. ದೇವರ ಮನೆಗೆ ತೇಗದ ಮರದ ಕಟ್ಟಿಗೆ ಆರಿಸಿ ಚೆಂದನೆಯ ಕುಸುರಿಯ ಕೆತ್ತನೆ ಮಾಡಿ ಅಂದಗೊಳಿಸಿದ್ದೂ ಅವನೇ. ಗೃಹಪ್ರವೇಶದ ದಿನವೂ ನೆರೆಹೊರೆಯ ಮುಸ್ಲಿಂ ಬಾಂಧವರೆಲ್ಲ ಬಂದು ಉಡುಗೊರೆ ಕೊಟ್ಟು ಹರಸಿ ಉಂಡು ಹೋಗಿದ್ದರು.      

ಮುಸ್ಲಿಮರ ಹೆಣ್ಣು ರಾಜಮ್ಮ!

ನಮ್ಮ ಮನೆಯ ಒಂದು ಭಾಗದಲ್ಲಿ ಬಹಳ ಕಾಲದಿಂದ (ಮೂವತ್ತು ವರ್ಷ) ಒಂದು ಮುಸ್ಲಿಂ ಕುಟುಂಬ ವಾಸಿಸುತ್ತಿತ್ತು. ರಾಜಮ್ಮ ಅಂತಿದ್ದೆವು ನಾವು, ನಿಜವಾದ ಹೆಸರು ಏನಿತ್ತೋ ಇದವರೆಗೂ ಗೊತ್ತಿಲ್ಲ. ಈಗ ಆಕೆ ಇಲ್ಲ. ಅವರ ಡಜನ್ನು ಮಕ್ಕಳೂ ಅದೇ ಪುಟ್ಟ ಮನೆಯಲ್ಲಿ ಹುಟ್ಟಿ ಬೆಳೆದರು. ಆಡು, ಕೋಳಿಗಳನ್ನು ಸಾಕಿದ್ದರು, ಸಯ್ಯದ್ ಮತ್ತು ಅವರ ಅಪ್ಪ  ಟಾಂಗಾ ನಡೆಸುತ್ತಿದ್ದರು. ಮನೆಯ ಹೊರಗೆ ಬಿದಿರಿನ ತಟ್ಟಿಯ ಪುಟ್ಟ ಲಾಯದಲ್ಲಿ ಕುದುರೆಯೂ ಇರ್ತಿತ್ತು. ಮತ್ತೊಂದು ಕುದುರೆ ನಮ್ಮ ಅಂಗಳದಲ್ಲಿ. ನಾವೆಂದೂ ಕುದುರೆ ಲದ್ದಿ ಹಾಕಿದೆ ಗಲೀಜಾಗಿದೆ ಅಂತ ಜಗಳ ಮಾಡಿದ್ದನ್ನು ನೋಡಿಲ್ಲ. ಯಾಕೆಂದರೆ ದಿನಾ ಬೆಳಗಿನ ಐದೂವರೆಗೆದ್ದು ಅಂಗಳ ಗುಡಿಸುತ್ತಿದ್ದುದು ರಾಜಮ್ಮನೇ. ಬಳಿಕ ಅವ್ವ ನೀರು ಸಿಂಪಡಿಸಿ ಮನೆ ಮುಂದೆ ಸೆಗಣಿಯಿಂದ ಗುಂಡಾಗಿ ಸಾರಿಸಿ ರಂಗವಲ್ಲಿ ಇಡುತ್ತಿದ್ದಳು. ಮುಂದೆ ರಂಗೋಲಿ ಇಡುವ ಕೆಲಸ ನಮಗೆ ಬಂತು. ರಾತ್ರಿ ಒಳಗೆ ರಾಜಮ್ಮನ ಮಗಳು ಮೆಹಬೂಬ್ ರೊಟ್ಟಿ ಬಡಿಯುತ್ತಿದ್ದರೆ, ಸೆಕೆಗೆ ಮನೆಯವರೆಲ್ಲ ನಮ್ಮ  ಕಟ್ಟೆಯ ಮೇಲೆ ಕುಳಿತು ಮಾತಿಗೆ ತೊಡಗಿರುತ್ತಿದ್ದರು. ಅವರ ಮನೆಗೆ ನೆಂಟರು ಬಂದರೂ ಇದೇ ಕಟ್ಟೆಯ ಮೇಲೆ ಅವರ ಮಾತು. ರಾತ್ರಿ ನಮ್ಮ ಮನೆಯ ಕಟ್ಟೆಯ ಮೇಲೆ ಸೈಯ್ಯದ ಅಥವಾ ಬಾಬಾಜಾನ್ ಕೌದಿಹೊದ್ದು ಮಲಗಿರುತ್ತಿದ್ದರು. ನಮ್ಮ ತಲೆಗೆ ಹೇನು ಹೊಕ್ಕಾಗ ರಾಜಮ್ಮನೇ ಕುಳಿತು ಹೇನು ಸೀರುಗಳನ್ನು ಒರೆದು ಒರೆದು ಸ್ವಚ್ಚಗೊಳಿಸುತ್ತಿದ್ದಳು.  ಮೆಣಸಿನಕಾಯಿ ಒಣಹಾಕಿದರೆ ಕಾಯುತ್ತಿದ್ದರು. ಅವರು ಯಾರೋ ಬೇರೆ ಅನಿಸಲೇ ಇಲ್ಲ ನನಗೆ. ಅಪ್ಪ ಇನ್ನೇನು ರಿಟೈರ್ ಆಗುತ್ತಾನೆ ಎಂದಾಗ ಅವ್ವ , ʼಮನೆಯನ್ನು ಬಿಡಿಸಿಕೊಳ್ರೀ, ಇನ್ನಷ್ಟು ಹೆಚ್ಚು ಬಾಡಿಗೆ ಬರುವಂತೆ ಮಾಡಬಹುದುʼ ಎನ್ನುತ್ತಿದ್ದಳೇ ಹೊರತು ಅವರು ಮುಸ್ಲೀಮರ ಹೊರಹಾಕಿ ಎಂದದ್ದನ್ನು ನಾನ್ಯಾವತ್ತೂ ಕೇಳಿಲ್ಲ.  

ಅಂತೂ ಒಂದಿನ ಅಪ್ಪ ಅಂಗಳದಲ್ಲಿ ಬರುತ್ತಿದ್ದ ರಾಜಮ್ಮನನ್ನು, ʼಬಾರವಾ ಇಲ್ಲೇ ’ ಅಂತ ಕರೆದ. ನಾವೆಲ್ಲ ಮಕ್ಕಳೂ ಬಾಯಿಬಿಟ್ಟುಕೊಂಡು ಇನ್ನೇನು ಜಗಳ ಆಗುತ್ತಾ ಅಂತ ಹೆದರಿದ್ದೆವೆಂದು ಕಾಣುತ್ತದೆ. ಆಕೆ ಕುಲು ಕುಲು ನಗುನಗುತ್ತ , ʼಅಣ್ಣಾ...ಬೋಲೋ ಬಾ…ಅಂತ’ ಬಾಗಿಲಬಳಿ ಬಂದಳು. ಅಪ್ಪ ಧೈರ್ಯದಿಂದ ಕೇಳಿದ…ʼಹಾಂ…ಮಕ್ಕಳೆಲ್ಲ ಹೇಗಿದ್ದಾರೆ… ಏನೇನು ಮಾಡಿದ್ದಾರೆ… ಗುಲ್ಜಾರಳಿಗೆ ಇನ್ನೇನು ಮದುವೆ ವಯಸ್ಸಾತುʼ ಹೀಂಗೆ...ಮಾತಾಡಿ ಕಳಿಸಿಬಿಟ್ಟ. ಮನೆ ಬಿಡ್ರೀ..ನಮಗೆ ಬೇಕು…ಅಂತ ಯಾವ ಮಾತೂ ನನ್ನಪ್ಪನ ಬಾಯಲ್ಲಿ ಬರಲಿಲ್ಲ. ಅಂಥ ಕರುಳಿನವ ನನ್ನಪ್ಪ.  ಈಗಲೂ ಈ ಘಟನೆ ನನ್ನ ಕಣ್ಮುಂದೆ ಕಟ್ಟಿದಂತಿದೆ.  ಇವತ್ತಿನ  ಧರ್ಮಾಂಧತೆಯ ಕೇಡುಗಾಲದಲ್ಲಿ ನನ್ನಪ್ಪ ನನ್ನವ್ವ ನೆನಪಾಗುತ್ತಾರೆ. ಹೆಮ್ಮೆಯೆನಿಸುತ್ತದೆ ನನಗೆ ಅವರು ನಮ್ಮನ್ನು ಬೆಳೆಸಿದ ರೀತಿಗೆ.  

ಈಗ ದಿನ ಬೆಳಗಾದರೆ ಹಿಂದೂ ಮುಸ್ಲಿಂ ಸುತ್ತಲೇ ರೊಂಯ್ಯೆಂದು ಗಿರಕಿ ಹೊಡೆಯುವ ಸುದ್ದಿಗಳು ಮನಸ್ಸನ್ನು ಅಸ್ತವ್ಯಸ್ತಗೊಳಿಸುತ್ತಿವೆ. ಮಸೀದಿಯಿಂದ ಹೊರಡುವ ಅಝಾನ್ ದನಿಯೇ ಅವ್ವನ ಗಡಿಯಾರವಾಗಿತ್ತು. ಸಂಜೆ ನಾಲ್ಕೂವರೆಗೆ ಅಝಾನ್ ಆದಾಗ ಸಂಜೆಯ ಚಹ ಚುರುಮರಿ ತಯಾರಾಗುತ್ತಿದ್ದವು. ರಾತ್ರಿಯ ಅಝಾನ್ ಮುಗಿದ ನಂತರ ನಮ್ಮ ಊಟದ ವೇಳೆಯಾಗುತ್ತಿತ್ತು. ನಮಗೆಂದೂ ಕಿರಿಕಿರಿಯೆನಿಸದ ಅಝಾನ್, ನಾವೆಂದೂ ಗಮನಕೊಡದ  ಬುರ್ಕಾ, ಹಿಜಾಬು, ಹಲಾಲ್ ಪದಗಳು ಇವತ್ತು ಭಯಂಕರ ರಾಜಕೀಯದ ವಿಷಯಗಳಾಗಿವೆ.  

ಇದನ್ನು ಓದಿದ್ದೀರಾ? ಸರೋಜಮ್ಮನವರ ಅಸಲಿ ಹೆಸರು ಸಲೀಮ ಸುಲ್ತಾನಾ!

ಗಾಂಧೀಜಿ ಅವರ ಅಪ್ತಕಾರ್ಯದರ್ಶಿಯಾಗಿದ್ದ ಪ್ಯಾರೇಲಾಲರು ಬರೆದ Mahatma Gandhi: The last Phase ಪುಸ್ತಕವನ್ನು ಓದಿದರೆ ಕಣ್ಣಲ್ಲಿ ನೀರುಬರುತ್ತವೆ. ಬದುಕಿನ ಕೊನೆಯ ಹಂತದಲ್ಲಿ ಅವರು ಎದುರಿಸಿದ ನೌಖಾಲಿ ಮತ್ತು ಭಾರತದ ಇತರ ಪ್ರದೇಶಗಳ ಮಹಾದುರಂತಗಳನ್ನು ಹಿಂದೂ ಮುಸ್ಲೀಂ ನರಮೇಧಗಳ ದಾರುಣ ಕತೆಯನ್ನು ಓದುತ್ತಿದ್ದರೆ ನಾವು ಇಂದು ಕಾಣುತ್ತಿರುವ ಹೊಸ ಭಾರತದ ಬಗ್ಗೆ ಅತಂಕವಾಗುತ್ತದೆ.

ಈಗ ದ್ವೇಷಕ್ಕಾಗಿಯೇ ದ್ವೇಷವೆಂದು ಕತ್ತಿಮಸೆಯುತ್ತ ಅಝಾನ್ ಗೆ ಪ್ರತಿಕಾರವಾಗಿ ಹನುಮಾನ್ ಚಾಲೀಸಾವನ್ನು ಪಠಿಸುತ್ತೇವೆ ಎನ್ನುವ ಧರ್ಮಾಂಧರನ್ನು ಬಿಡಿ, ದೇಶದಲ್ಲಿ  ಇಂತಹ ಸಂದಿಗ್ಧ ಪರಿಸ್ಥಿತಿಯುಂಟಾಗದಂತೆ ಕೋಮು ಸಾಮರಸ್ಯವನ್ನು ಸಾರಬೇಕಾದ ಮೋದಿ ಸರ್ಕಾರವೇ ತನ್ನ ಎಂಟನೇ ವಾರ್ಷಿಕೋತ್ಸವದ ನಿಮಿತ್ತ ಮೇ 24 ರಂದು ದೇಶದಾದ್ಯಂತ ಹನುಮಾನ ಚಾಲೀಸಾ ಪಠಣವನ್ನು ಹಮ್ಮಿಕೊಳ್ಳುತ್ತಿದೆ. ಇದನ್ನು ಯಾವ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು ?  
ಇದಲ್ಲದೇ ತನ್ನ  ಜಾಣ ಮೌನದಿಂದ ಕೋಮುದ್ವೇಷದ ದಳ್ಳುರಿಗೆ ತುಪ್ಪ ಸುರಿಯುತ್ತಿರುವ ಸರ್ಕಾರ ನಾಗರಿಕರ ದನಿ ಕೇಳದಷ್ಟು ಕಿವುಡಾಗಿದೆ, ಅಮಾನವೀಯತೆ ಕಾಣದಷ್ಟು ಕುರುಡಾಗಿದೆ.

ಅಖಂಡ ಭಾರತ ಮತ್ತು ಹಿಂದುತ್ವದ ಅಮಲನ್ನು ತಲೆಗೇರಿಸಿಕೊಂಡಿರುವ ಸಂಘ ಸಂಸ್ಥೆಗಳ ಬೆನ್ನುಹತ್ತಿದ ಯುವಕರು ಪುಂಡುಪೋಕರಿಗಳಾಗಿ ದೇಶದಾದ್ಯಂತ ದಾಂಧಲೆ ಎಬ್ಬಿಸಿ ಸಾಮಾಜಿಕ ಶಾಂತಿಗೆ ಭಂಗ ತರುತ್ತಿದ್ದಾರೆ. ಮಾತುಗಳೂ ಅರ್ಥ ಕಳೆದುಕೊಳ್ಳುತ್ತಿರುವ ಇಂತಹ ಹೊತ್ತಿನಲ್ಲಿ ಡಿ.ಆರ್.ನಾಗರಾಜರ ಸಾಲುಗಳು ನೆನಪಾಗುತ್ತವೆ, “ಕೆಲವೊಮ್ಮೆ ಚರಿತ್ರೆ ತೆವಳುತ್ತದೆ, ಬಸವನ ಹುಳುವಿನ ಹಾಗೆ; ನಿಧಾನಕ್ಕೆ ಚಲಿಸುವ ಉಡದ ಹಾಗೆ. ಕೆಲವೊಮ್ಮೆ ಚರಿತ್ರೆ ಹಾರುತ್ತದೆ, ಹದ್ದಿನ ಹಾಗೆ. ಮಿಂಚಿನ ಹಾಗೆ ಕಣ್ಣು ಕುಕ್ಕಿ ಮಾಯವಾಗುತ್ತದೆ”.  ನನಗನಿಸುತ್ತದೆ ಮಾನವೀಯತೆ ಸಾಯುತ್ತಿರುವ ಸಮಾಜದಲ್ಲಿ ಈಗದು ಹದ್ದಿನ ಹಾಗೆ ಕುಕ್ಕುತ್ತಿದೆ….. !

ನಿಮಗೆ ಏನು ಅನ್ನಿಸ್ತು?
6 ವೋಟ್