ನಮ್ಮ ಊರಿಗೆ ʼಅದ್ದʼ ಸಾಹೇಬರೇ ಒಂದು ಅಪ್ಲಿಕೇಷನ್

adda saheb

ಎಲ್ಲರ ಮನೆ ಮನೆಗೂ ಹೋಗಿ ಅಮ್ಮೌವ್ರೆ… ಗೌಡರೆ… ಎಂದು ದೊಡ್ಡವರನ್ನು ಕರೆದು ಮಾತಾಡಿಸುತ್ತಿದ್ದರು ಅದ್ದ ಸಾಹೇಬರು. ಮಕ್ಕಳೆಂದರೆ ಅವರಿಗೆ ತುಂಬಾ ಆಸೆ. ಊರ ಮಕ್ಕಳನ್ನೆಲ್ಲ ಮಗ, ಮಗಳೇ ಎಂದು ಮಾತಾಡಿಸುತ್ತಿದ್ದರು. ಅವರನ್ನು ಕಂಡರೆ ಊರಿನವರಿಗೆಲ್ಲ ನಂಬಿಕೆ, ಗೌರವ. ಊರಿನವರೆಲ್ಲ ಅವರನ್ನು ʼಸಾಬ್ರೆʼ ಎಂದು ಕರೆಯುತ್ತಿದ್ದರು

ಮಲೆನಾಡಿನ ನಮ್ಮ ಊರಿನಲ್ಲಿರುವುದು ಕೇವಲ ಒಂಬತ್ತು ಮನೆ. ಪ್ರತಿಮನೆಯವರೂ ಕೇವಲ ಕೃಷಿಗೆ ಮಾತ್ರವೇ ಅವಲಂಬಿತವಾಗಿದ್ದಾರೆ. ಎಲ್ಲರೂ ಬೆಳೆಯುವುದು ಅಡಿಕೆ, ಕಾಫಿ, ಮೆಣಸು, ಏಲಕ್ಕಿ. ಇದರ ಜೊತೆಗೆ ಕಾಡಿನಲ್ಲಿ ಸಿಗುವ ಜೇನು, ದಾಲ್ಚಿನ್ನಿ, ಧೂಪ ಇವನ್ನೆಲ್ಲ ಕೆಜಿಗಟ್ಟಲೆ ಒಟ್ಟು ಹಾಕಿಟ್ಟುಕೊಂಡಿರುತ್ತಾರೆ. ಈ ಎಲ್ಲವನ್ನು ಮಾರಿ ಹಣಗಳಿಸಿ ತಮ್ಮ ಜೀವನವನ್ನು ನಡೆಸುತ್ತಾರೆ. ಆದರೆ, ಇದನ್ನೆಲ್ಲ ಮಾರಲು ಅವರು ಪೇಟೆಗೆ ಹೋಗಬೇಕು,. ಆಗ ಯಾವುದೇ ಬಸ್‌ ವ್ಯವಸ್ಥೆ ಇರಲಿಲ್ಲ.

ಗಾಡಿ ಮಾಡಿಕೊಂಡು ಹೋಗೋಣವೆಂದರೆ ಸಾವಿರಾರು ರೂಪಾಯಿ ಖರ್ಚು. ಹೀಗೆಲ್ಲಾ ಇರಬೇಕಾದರೆ ಅವರು ಹೇಗೆ ಮಾರಾಟ ಮಾಡುತ್ತಾರೆ! ಈ ಒಂದು ಕಷ್ಟಕ್ಕೆ ಸ್ಪಂದಿಸಿದ್ದು ನೆಮ್ಮಾರಿನ ಸಾಹೇಬರು. ಅವರ ಹೆಸರು ʼಅದ್ದʼ. ಅವರ ಮನೆ ಇದ್ದದ್ದು ನೆಮ್ಮಾರಿನಲ್ಲಿ. ಕುಳ್ಳಗೆ, ಬೋಳು ತಲೆಯ, ಗೋಧಿಬಣ್ಣ, ಸಾಧಾರಣ ಮೈಕಟ್ಟು ಅವರದ್ದು. ಅವರ ಬಳಿ ಒಂದು ಹಳೆಯ ಜೀಪು. ಆ ಜೀಪಿನಲ್ಲಿಯೇ ಅವರು ನಮ್ಮ ಊರಿಗೆ ಬರುತ್ತಿದ್ದರು. ಎಲ್ಲರ ಮನೆ ಮನೆಗೂ ಹೋಗಿ ಅಮ್ಮೌವ್ರೆ… ಗೌಡರೆ… ಎಂದು ದೊಡ್ಡವರನ್ನು ಕರೆದು ಮಾತನಾಡಿಸುತ್ತಿದ್ದರು. ಮಕ್ಕಳೆಂದರೆ ಅವರಿಗೆ ತುಂಬಾ ಆಸೆ. ಊರ ಮಕ್ಕಳನ್ನೆಲ್ಲ ಮಗ, ಮಗಳೇ ಎಂದು ಕರೆದು ಮಾತನಾಡಿಸುತ್ತಿದ್ದರು. ಅವರನ್ನು ಕಂಡರೆ ಊರಿನವರಿಗೆಲ್ಲ ನಂಬಿಕೆ ಮತ್ತು ಗೌರವ. ಊರಿನವರೆಲ್ಲರೂ ಅವರನ್ನು ʼಸಾಬ್ರೆʼ ಎಂದು ಕರೆಯುತ್ತಿದ್ದರು.

ಪ್ರತಿಯೊಬ್ಬರ ಮನೆ ಮನೆಗೂ ಹೋಗಿ ಕ್ವಿಂಟಾಲ್ ಗಟ್ಟಲೆ ಅಡಿಕೆ, ಮೆಣಸು, ಕಾಫಿ, ಏಲಕ್ಕಿ, ಜೇನು, ದಾಲ್ಚಿನ್ನಿಯನ್ನು ಮಾರುಕಟ್ಟೆಯ ಬೆಲೆಗೆ ಕೊಂಡೊಯ್ಯುತ್ತಿದ್ದರು. ಹೀಗಾಗಿ ಅದ್ದ ಸಾಹೇಬರೇ ನಮ್ಮ ಊರಿನ ಖರೀದಿದಾರರು. ನಮ್ಮ ಊರಿನ ಪ್ರತಿಯೊಬ್ಬರಿಗೂ ಅದ್ದ ಸಾಹೇಬರೆಂದರೆ ಪ್ರೀತಿ ಮತ್ತು ಗೌರವ. ಹಾಗೆಯೇ ಅವರೇ ಪ್ರತಿಯೊಬ್ಬರ ಬ್ಯಾಂಕ್ ಅಕೌಂಟ್ ಇದ್ದಂತೆ. ಅದ್ದ ಸಾಹೇಬರೂ ಸಹ ಊರಿನ ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಊರಿನ ಜನರಿಗೆ ತಕ್ಷಣವೇ ಹಣ ಬೇಕಾದಾಗ ಇವರು ಕೊಡುತ್ತಾರೆ. ಊರಿನ ಜನರಿಗೆ ಅವಶ್ಯಕವಾಗಿ ಆಸ್ಪತ್ರೆಗೋ ಅಥವಾ ಯಾವುದೇ ಇನ್ನಿತರ ಕೆಲಸದ ಪ್ರಯುಕ್ತ ಬೇರೆ ಊರಿಗೆ ಹೋಗಬೇಕಾದಾಗ ಅದ್ದ ಸಾಹೇಬರ ಗಾಡಿಯೇ ಬಸ್ಸು ಇದ್ದಂತೆ.

ಬೆಂಗಳೂರಿನಂತಹ ದೊಡ್ಡ ಪಟ್ಟಣಗಳಲ್ಲಿ ಏನಾದರೂ ಖರೀದಿಸಬೇಕಾದರೆ ಅಪ್ಲಿಕೇಷನ್ ಮುಖಾಂತರ ತರಿಸಿಕೊಳ್ಳುತ್ತಾರೆ. ಆದರೆ, ನಮ್ಮ ಊರಿಗೆ ʼಅದ್ದʼ ಸಾಹೇಬರೆ ಒಂದು ಅಪ್ಲಿಕೇಷನ್. ತಿಂಗಳಿಗೆ ಒಂದು ಬಾರಿ ಎಲ್ಲ ಮನೆಯವರು ಬೇಕಾದ ಸಾಮಾಗ್ರಿಗಳನ್ನು ಪಟ್ಟಿ ಮಾಡಿಕೊಟ್ಟರೆ ಸಾಕು, ಅದ್ದ ಸಾಹೇಬರು ಅವರ ಗಾಡಿಯಲ್ಲಿ ಸಾಮಾಗ್ರಿ ತುಂಬಿಕೊಂಡು ಬರುತ್ತಾರೆ. ಅವರಿಗೆ ಯಾವುದೇ ಲಾಭ ಇಲ್ಲದಿದ್ದರೂ ಊರಿನ ಜನರಿಗೆ ನಿಷ್ಕಲ್ಮಶ ಮನಸ್ಸಿನಿಂದ ಸಹಾಯ ಮಾಡುತ್ತಾರೆ.

ನಮ್ಮ ಊರಿಗೂ ಅವರಿಗೂ ಒಂದು ವಿಶೇಷವಾದ ಒಡನಾಟ. ನಮ್ಮ ಊರಿಗೆ ಬಂದಾಗ ʼಅದ್ದʼ ಸಾಹೇಬರಿಗೆ ಊಟ ಉಪಚಾರ ಎಷ್ಟು ಮಾಡಿದರೂ ಸಾಲದು ಎನ್ನುವ ರೀತಿಯಲ್ಲಿ ಜನರು ಅವರನ್ನು ಸತ್ಕಾರ ಮಾಡುತ್ತಾರೆ. ಹಳ್ಳಿಯ ಜನರದು ತುಂಬಾ ಸ್ವಚ್ಛ ಮನಸ್ಸು, ಯಾವುದೇ ಬೇಧ ಭಾವವಿರುವುದಿಲ್ಲ. ಹೀಗಾಗಿ ನಿಶ್ಚಿಂತೆಯಿಂದ ಎಲ್ಲರೊಂದಿಗೂ ಸುಖಶಾಂತಿಯಿಂದ ಕೂಡಿ ಬಾಳುತ್ತಾರೆ. ಆದರೆ ನಗರದಲ್ಲಿರುವ ಜನರ ಮನಸ್ಸು ಏಕತಾ ಭಾವದಿಂದ ಕೂಡಿರುವುದಿಲ್ಲ, ಬದಲಾಗಿ ನಾನು ನನ್ನದೆನ್ನುವ ಭಾವನೆಯಲ್ಲಿರುತ್ತಾರೆ. ಕೂಡಿಬಾಳಬೇಕೆನ್ನುವ ಮನಸ್ಸು ಇರುವುದಿಲ್ಲ, ಹಾಗಾಗಿಯೇ ಅವರಿಗೆ ನೆಮ್ಮದಿಯೆಂಬುದಿರುವುದಿಲ್ಲ.

ಅದ್ದ ಸಾಹೇಬರಿಗೆ ನಮ್ಮ ಊರಿನ ಜನರ ಮೇಲೆ ಅಪಾರವಾದ ನಂಬಿಕೆ. ಊರಿನ ಜನರು ಯಾವಾಗ ಎಷ್ಟು ಹಣ ಕೇಳಿದರೂ ಯಾವಾಗ ಬೇಕಾದರೂ ಕೊಡುತ್ತಾರೆ ಎಂದರೆ ಎಷ್ಟರಮಟ್ಟಿಗೆ ಅವರ ನಂಬಿಕೆ ಇರಬಹುದು ನೋಡಿ. ಇದಕ್ಕೆ ತಕ್ಕಂತೆಯೇ ಊರಿನ ಜನರೂ ಕೂಡ ಸಾಹೇಬರು ಇಟ್ಟ ನಂಬಿಕೆ ಉಳಿಸಿಕೊಂಡು ಬಂದಿದ್ದಾರೆ. ತಾವು ಪಡೆದ ಹಣಕ್ಕೆ ಪ್ರತಿಯಾಗಿ ಅವರು ತಾವು ಬೆಳೆದ ಅಡಿಕೆಯನ್ನೋ, ಮೆಣಸನ್ನೋ, ಕಾಫಿಯನ್ನೋ ನೀಡುತ್ತಾರೆ. ಅದ್ದ ಸಾಹೇಬರಿಗೆ ನಮ್ಮ ಹಳ್ಳಿಯ ಊಟವೆಂದರೆ ಅಚ್ಚುಮೆಚ್ಚು. ಮಳೆಗಾಲದ ಸಮಯದಲ್ಲಿ ಊರಿನವರೊಂದಿಗೆ ಕೂಡಿ ಗದ್ದೆಗೆ ಬಂದ ಮೀನುಗಳನ್ನು ಹಿಡಿಯುವುದೆಂದರೆ ಅವರಿಗೆ ಭಾರೀ ಇಷ್ಟ. ಮೀನು ಹಿಡಿಯಲು ಹೋದರೆ ಇತ್ತ ಮನೆಯಲ್ಲಿ ಮೀನು ಪಲ್ಯದ ಜೊತೆ ತಿನ್ನಲು ನೀರುದೋಸೆಯು ರೆಡಿಯಾಗುತ್ತಿತ್ತು.  ಸಾಹೇಬರು ಮತ್ತು ಊರಿನವರಿಗೆ ಇದು ಮಳೆಗಾಲದಲ್ಲಿ ಪ್ರಮುಖ ಕೆಲಸವಾಗಿತ್ತು.

ಔಷಧಿ, ಬ್ರಾಂಡಿ ಎಲ್ಲಕ್ಕೂ ಅದ್ದ ಸಾಹೇಬರೇ ಬೇಕು

ಬೇಸಿಗೆ ಬಂತೆಂದರೆ  ಇನ್ನು ಹೆಚ್ಚು ಕೆಲಸವಿರುತ್ತಿತ್ತು. ಊರಿನ ಜನರು ಸಾಹೇಬರನ್ನು ಕರೆದುಕೊಂಡು ಜೇನು ಕೀಳಲು, ಧೂಪ ಹುಡುಕಲು, ಕಾಡೆಲ್ಲ ಅಲೆದಾಡಲು ಹೊರಡುತ್ತಿದ್ದರು. ಇದರ ಜೊತೆಗೆ ಹಳ್ಳಗಳಿಗೆ ಏಡಿ ಹಿಡಿಯಲು ಹೋಗುತ್ತಿದ್ದರು. ಪೇಟೆಯ ಸಾಹೇಬರಿಗೆ ನಮ್ಮ ಊರಿನ ಜನರ ಜೊತೆ ಸೇರಿ ಹಳ್ಳಿಯಲ್ಲೆ ಇರುವುದು ಅಭ್ಯಾಸವಾಗಿತ್ತು. ಸಾಹೇಬರು ಹಿಂತಿರುಗಿ ಊರಿಗೆ ಹೋದರೆಂದರೆ ಅವರನ್ನು ಸಂಪರ್ಕಿಸುವುದು ಮಾತ್ರ ಬಹಳ ಕಷ್ಟದ ಕೆಲಸವಾಗಿತ್ತು. ಏಕೆಂದರೆ ನಮ್ಮ ಊರಿನಲ್ಲಿ ಸಿಗ್ನಲ್ ಸಿಗುವುದಿಲ್ಲ. ಅವರಿಗೆ ಬರ ಹೇಳಬೇಕಾದರೆ ಹರಸಾಹಸ ಮಾಡಬೇಕಿತ್ತು. ದೂರದ ಗುಡ್ಡದ ಮೇಲೆ ಹೋಗಿ ಸಿಗ್ನಲ್ ಸಿಗುವವರೆಗೂ ಅಲೆದು ಅವರನ್ನು ಸಂಪರ್ಕ ಮಾಡಬೇಕಿತ್ತು. ನಮ್ಮ ಊರಿನ ಕೆಲವು ಗಂಡಸರು ಕುಡಿಯಲು ಬ್ರಾಂಡಿಯನ್ನು ತರಿಸುವ ಸಲುವಾಗಿಯೇ ಕಿಲೋಮೀಟರ್‌ಗಟ್ಟಲೆ ಅಲೆದಾಡಿ ಸಾಹೇಬರಿಗೆ ಕರೆಮಾಡಿ ತರಲುಹೇಳುತ್ತಿದ್ದರು. ಅವರ ಬರುವಿಕೆಗೆ ಊರಿನವರು ಕಾಯುತ್ತಲೇ ಇರುತ್ತಿದ್ದರು.

ಇದನ್ನು ಓದಿದ್ದೀರಾ? ಕಾಡಿನ ಮಕ್ಕಳು ವಿದ್ಯೆ ಕಲಿಯಲು ಹೊರಟಿವೆ, ಪೆನ್ನು ಪುಸ್ತಕ ಕೊಡಿಸುವಿರಾ..?

ನಮ್ಮ ಊರಿನ ರೀತಿಯಲ್ಲಿದ್ದ ಸೌಹಾರ್ದತೆಯು ಪ್ರತಿಯೊಬ್ಬರಲ್ಲಿಯೂ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಸಾಹೇಬರು ಮತ್ತು ನಮ್ಮ ಹಳ್ಳಿಯವರ ನಡುವಿನ ನಂಬಿಕೆ, ಸ್ನೇಹ, ಪ್ರೀತಿ, ಗೌರವ ಎಲ್ಲವೂ ʼಅದ್ದʼ ಸಾಹೇಬರು ಮತ್ತು ನಮ್ಮ ಊರಿನ ಜನರ ಸೌಹಾರ್ದತೆಗೆ ಕಾರಣ ಆಗಿತ್ತು. ನಮ್ಮ ಹಳ್ಳಿಯಲ್ಲಿದ್ದ ಅಂತಹ ಪರಿಸ್ಥಿತಿಯನ್ನು ಅವರ ಅನಾನುಕೂಲತೆಯನ್ನು ಅರ್ಥಮಾಡಿಕೊಂಡ ಸಾಹೇಬರು ಅವರ ಕಷ್ಟಕ್ಕೆ ಸ್ಪಂದಿಸಲು ಮುಂದಾದದ್ದು ಏನೂ ಅರಿಯದ ನಮ್ಮ ಹಳ್ಳಿಯ, ಮುಗ್ದ ಜನರಿಗೆ ಅದೆಷ್ಟೋ ಸಹಾಯ ಸಿಕ್ಕಿದೆ, ಈಗಲೂ ಸಿಗುತ್ತಲೇ ಇದೆ. ನಮ್ಮ ಊರಿನ ಜನರಿಂದ ಸಾಹೇಬರಿಗೂ ಅವರ ಜೀವನಕ್ಕೆ ಒಂದು ದಾರಿಯೂ ಆಗಿದೆ. ಹಳ್ಳಿಯಿಂದ ತೆಗೆದುಕೊಂಡು ಹೋದ ಅಡಿಕೆ, ಕಾಫಿ, ಮೆಣಸು, ಏಲಕ್ಕಿ, ಜೇನು ಮುಂತಾದವನ್ನು ಮಾರಾಟ ಮಾಡಿ ಅವರ ಜೀವನಕ್ಕೂ ಒಂದು ದಾರಿಯನ್ನು ಕಂಡುಕೊಂಡಿದ್ದಾರೆ. ಜನರ ಆರೋಗ್ಯ ಕೆಟ್ಟಾಗ ಪ್ರತಿಬಾರಿಯು ಔಷಧಿಯನ್ನು ವ್ಯವಸ್ಥೆ ಮಾಡಿಕೊಟ್ಟು ನಮ್ಮ ಊರಿನ ಜನರಿಗೆ ಇಂದಿಗೂ ಚಿರಸ್ಮರಣೀಯರಾಗಿದ್ದಾರೆ ನಮ್ಮ ಅದ್ದ ಸಾಹೇಬರು.

ನಿಮಗೆ ಏನು ಅನ್ನಿಸ್ತು?
2 ವೋಟ್