ಚಿತ್ರಕ್ಕನ ಮನೆಯೂ, ರತ್ನಕ್ಕನ ಅಡುಗೆಯೂ ಮರೆಯುವುದುಂಟೇ?

sahabalve

ನಾನು, ಆಯಿಶಾ, ಪ್ರಮೀಳ, ಶಿವಾನಂದ, ಫತ್ತಾಹ್, ಅಲವಿ ಹೀಗೆ ಗಂಡು ಹೆಣ್ಣೆಂಬ ಭೇದವಿಲ್ಲದೆ ಓರಗೆಯ ಅದೆಷ್ಟೋ ಮಕ್ಕಳೊಂದಿಗೆ ಆಡಿದ ನೆನಪುಗಳೆಷ್ಟು ! ಆವಾಗ ನಮ್ಮನ್ನು ಸಂಶಯದ ದೃಷ್ಟಿಯಿಂದ ನೋಡುವವರಿರಲಿಲ್ಲ. ನಮ್ಮ ಜಾತಿ, ಧರ್ಮದ ಕುರಿತ ಮಾತುಗಳೇ ಇರಲಿಲ್ಲ.  ನಮ್ಮ ಮನೆಯ ಜಗುಲಿ ನೆರೆಯವರಿಗೆಲ್ಲ ಹರಟೆ ಕೊಚ್ಚುವ ಸ್ಥಳವಾಗಿತ್ತು. 

'ಇಂದು ನಿನ್ನಲ್ಲೊಂದು ಮಾತು ಕೇಳೋದಿದೆ...'
' ಏನೇ ಅದು ?'
' ನೀನು ನನ್ನ ಮುದ್ದಿನ ಗೆಳತಿ, ನಿನ್ನ ಬಗ್ಗೆ ಆಕೆ ಅಹಿತವಾಗಿ ಹೇಳಿದಾಗ ನನಗೆ ಬೇಸರವಾಯಿತು.'
' ಯಾರೇ ಅದು ?'
' ಅದೆಲ್ಲ ಕೇಳಬೇಡ. ಅವಳೇನು ಹೇಳಿದ್ದಾಳೋ ಅದನ್ನು ಸಹ ಕೇಳಬೇಡ. ಆದರೆ ನಾನು ಹೇಳುತ್ತಿರುವುದು ನಿನ್ನ ಒಳಿತಿಗೆಂದು ಭಾವಿಸು.'
ಮಾತು ಮುಂದುವರಿಯುತ್ತಿದೆ. ಕೊನೆಗೆ ಯಾವುದೇ ಮನಸ್ತಾಪವಿಲ್ಲದೆ ಪರಸ್ಪರ ಜೊತೆಗೂಡಿ ನಲಿದಾಡಿದರು.

ಅಲ್ಲಿ ನಡೆದದ್ದು ಇಷ್ಟೇ. ಅವರಿಬ್ಬರು ಗೆಳತಿಯರು ಬೇರೆ ಬೇರೆ ಧರ್ಮಕ್ಕೆ ಸೇರಿದವರು. ಆದರೆ ಜೊತೆಯಾಗಿಯೇ ಆಡಿ ನಲಿಯುವವರು. ಗೆಳತಿ ಹೇಳಿದ ಮಾತು ಕೇಳಿ ಈಕೆ ಅದನ್ನು ಅಷ್ಟೇನು ತಲೆಗೆ ಹಚ್ಚಿಕೊಂಡಿಲ್ಲ. ಅಲ್ಲದೆ ಇವಳಿಗೆ ತನ್ನ ಮೇಲಿದ್ದ ಅಗಾಧ ಪ್ರೀತಿಯಿಂದಾಗಿಯೇ ತನ್ನೊಡನೆ ಹಂಚಿರುವಳೆಂದು ಪೂರ್ಣವಾಗಿ ನಂಬಿದ್ದಳು. ಅಲ್ಲಿಗೆ ಮನಸ್ತಾಪವಿಲ್ಲ. ಪರಸ್ಪರ ಕೋಪವಿಲ್ಲ. ಕೋಪವಾದರೂ ಆಗಲೇ ರಾಜಿಯಾಗುವ ಸಂಭವವೇ ಹೆಚ್ಚು. ಇಂತಹ ವಿಷಯಗಳಲ್ಲಿ ಹಿರಿಯರ ಪ್ರವೇಶವಿಲ್ಲ. ಧರ್ಮದ ಹೆಸರಿನಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪವಿಲ್ಲ.

ಇದನ್ನು ನಾನು ಸಣ್ಣ ಒಂದು ಉದಾಹರಣೆಯಾಗಿಸಿದೆಯಷ್ಟೇ. ಹಿಂದೊಂದು ಕಾಲವಿತ್ತು. ಗೆಳೆತನದಲ್ಲಿ , ನೆರೆಕರೆಯವರಲ್ಲಿ, ಸಂಬಂಧಿಕರಲ್ಲಿ ಇಂತಹದೊಂದು ಅನುಬಂಧವಿತ್ತು. ಇದು ನಾನು ಸಣ್ಣವಳಿರುವಾಗ ನನ್ನ ಗೆಳತಿಯರ ನಡುವೆ ನಡೆದ ಸಣ್ಣ ಘಟನೆ. ನನ್ನೂರ ನೆನಪು ನನಗೀಗಲೂ ಹಸಿಯೇ. ಅಲ್ಲಿ ನಾ ನಲಿದ ಆಟವಾಡಿದ ಓರಗೆಯವರ, ಗೆಳೆಯ, ಗೆಳತಿಯರ ನೆನಪುಗಳು ಮಧುರ.

" ಉಮ್ಮಾ...ಪ್ರಮೀಳ ನಂಡೆ ಬಿಲಿಕಿನಾ...ನಾ ಕಲಿಕೊನಿ ಪೋನೆ" (ಅಮ್ಮಾ...ಪ್ರಮೀಳ ನನ್ನನ್ನು ಕರೆಯುತ್ತಿದ್ದಾಳೆ. ನಾನು ಆಟವಾಡಲು ಹೋಗುವೆನು) ಆಗಲೇ ನನ್ನಮ್ಮ ಮರುಪ್ರಶ್ನಿಸದೆ ಕಳಿಸಿ ಬಿಡುತ್ತಿದ್ದರು. ನಾನು, ಆಯಿಶಾ, ಪ್ರಮೀಳ, ಶಿವಾನಂದ, ಫತ್ತಾಹ್, ಅಲವಿ ಹೀಗೆ ಗಂಡು ಹೆಣ್ಣೆಂಬ ಭೇದವಿಲ್ಲದೆ ಓರಗೆಯ ಅದೆಷ್ಟೋ ಮಕ್ಕಳೊಂದಿಗೆ ಆಡಿದ ನೆನಪುಗಳೆಷ್ಟು ! ಆವಾಗ ನಮ್ಮನ್ನು ಸಂಶಯದ ದೃಷ್ಟಿಯಿಂದ ನೋಡುವವರಿಲ್ಲ. ನಮ್ಮ ಜಾತಿ, ಧರ್ಮದ ಕುರಿತ ಮಾತುಗಳೇ ಇಲ್ಲ. ಚಿತ್ರಕ್ಕನ ಮನೆಗೆ ಹೋಗದ ದಿನಗಳಿಲ್ಲ. ರತ್ನಕ್ಕನವರ ಮನೆಯಡುಗೆ ಸವಿಯದ ಗಳಿಗೆಯಿಲ್ಲ. ಅವರ ಮನೆಯ ಪ್ರತೀ ಭಾಗಕ್ಕೂ ನಾವು ಚಿರಪರಿಚಿತರೇ. ಎಷ್ಟೋ ಸಲ ಅವರ ಮನೆಯಲ್ಲಿ ಮಲಗಿದ್ದೂ ಇದೆ. ಮೈಮುನಾದನವರ ಮನೆಯಲ್ಲಿ ಆಡದ ದಿನಗಳಿಲ್ಲ. ನಮ್ಮ ಮನೆಯ ಜಗುಲಿ ನೆರೆಯವರಿಗೆಲ್ಲ ಹರಟೆ ಕೊಚ್ಚುವ ಸ್ಥಳವಾಗಿತ್ತು. ಪ್ರತೀ ಮನೆಯವರು ನಮ್ಮ ಮನೆಗೆ ಬರುತ್ತಿದ್ದರು.

ನಮ್ಮ ಕೇರಿಯಲ್ಲಿ ಶಿಸ್ತಿನ ಮನೆಯೆಂದರೆ ವಿಜಯಮ್ಮನವರ ಮನೆ. ವಿಜಯಮ್ಮ ಮೃದು ಸ್ವಭಾವದ ಮಿತಭಾಷಿ ಮಹಿಳೆ. ಆ ಅಮ್ಮನ ಕೈಯಡುಗೆ ಬಲು ರುಚಿ. ನಮ್ಮನ್ನು ದಿನಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನಾವು ಅವರ ಮನೆಯಲ್ಲಿ ಟಿ.ವಿ.ನೋಡಲು ಹೋಗುತ್ತಿದ್ದೇವು. ಅವರಿಗೂ ಅವರ ಮಗ ರಾಜೇಶ್, ಮುಕುಂದಣ್ಣನವರಿಗೂ ನನ್ನ ತಮ್ಮನೆಂದರೆ ಬಲು ಅಕ್ಕರೆ. ದಷ್ಟಪುಷ್ಟಗಾಗಿದ್ದ ಅವನನ್ನು ಅವರು "ಗುಲ್ಡನಿ"ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಸಮಯನಿಷ್ಠೆಯನ್ನು ಸದಾ ಪಾಲಿಸುತ್ತಿದ್ದು ಇತಿಮಿತಿಯೊಳಗೆ ದೂರದರ್ಶನದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದವರು ನನ್ನ ತಮ್ಮ ಯಾವುದೇ ಸಮಯದಲ್ಲಿ ಹೋದರೂ ಅವನನ್ನು ಟಿ.ವಿ.ಯ ಮುಂದೆ ಕೂರಿಸಿ ಅವನನ್ನೇ ನೋಡಿ ಖುಷಿಪಡುತ್ತಿದ್ದರು. ಟಿ ವಿ ವೀಕ್ಷಿಸುವ ನಮ್ಮ ತಂತ್ರವೂ ಅದುವೇ ಆಗಿತ್ತು.

ನಮ್ಮೂರಿನ ಪ್ರಾರ್ಥನಾ ಕೇಂದ್ರಗಳಲ್ಲಿ ಸರ್ವಧರ್ಮೀಯರು ಆತಂತಕವಿಲ್ಲದೆ ಪ್ರವೇಶಿಸುತ್ತಿದ್ದರು. ಅಂದಿನ ದಿನಗಳಲ್ಲಿ ಅದರ ಹೆಸರಿನಲ್ಲಿ ತೀಕ್ಷ್ಣ ನೋಟವನ್ನು ಎದುರಿಸುವ ಪ್ರಸಂಗ ಬರುತ್ತಿರಲಿಲ್ಲ. ಮುಸ್ಲಿಮರ ಈದ್ ದಿನಗಳಲ್ಲಿ ಇತರ ಧರ್ಮೀಯರಿಗೆ ಸಂಭ್ರಮ. ನಮ್ಮಂತೆಯೇ ಅವರು ಸ್ನಾನ ಮಾಡಿ ತಮ್ಮಲ್ಲಿದ್ದ ಹೊಸಬಟ್ಟೆಯನ್ನು ಧರಿಸಿ ಖೀರ್ ಸವಿಯಲು ಬೆಳಿಗ್ಗೆ ಹಾಜರಾಗುತ್ತಿದ್ದರು. ದೀಪಾವಳಿ, ರಥೋತ್ಸವದ ದಿನಗಳಲ್ಲಿ ನಾವು ನಿದ್ದೆಗೆಟ್ಟು ಸಂಭ್ರಮಿಸುತ್ತಿದ್ದೆವು. ಇಂದು ಇತರರ ಮನೆಯ ಹಬ್ಬದಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡರೆ ಅದೊಂದು ದೊಡ್ಡ ಸುದ್ದಿ. ಆದರೆ, ಅಂದಿನ ದಿನಗಳಲ್ಲಿ ಜಗತ್ತಿಗೆ ಸೌಹಾರ್ದತೆಯ ಪಾಠ ಕಲಿಸುವ ಪ್ರಮೇಯವೇ ಎದುರಾಗಿಲ್ಲ. ಅದು ಹೇಳದೆಯೇ ತಾನಾಗಿಯೇ ಬೆಳೆಯುತ್ತಿತ್ತು.

ನೆರೆಯವರ ಸಮಸ್ಯೆಗಳಿಗೆ ಪ್ರತಿಯೊಬ್ಬರು‌ ಸ್ಪಂದಿಸುತ್ತಿದ್ದರು. ಆ ದಿನಗಳಲ್ಲಿ ಅದೆಷ್ಟೋ ಸಹಾಯಗಳು ಧರ್ಮದ ಹೆಸರಿನಲ್ಲಿ ಗುರುತಿಸಲ್ಪಡುತ್ತಿರಲಿಲ್ಲ. ಅಷ್ಟೆಲ್ಲ ನೆರೆಕರೆಯಿದ್ದರೂ  ಒಮ್ಮೆಯೂ ಜಗಳವಾಡಿದ ನೆನಪೇ ಇಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪವಾಗುತ್ತಿರಲಿಲ್ಲ. ಯಾಕೆಂದರೆ ಅಲ್ಲಿ ಪ್ರೀತಿ ಮಾತ್ರ ಇತ್ತು. ಸಹಬಾಳ್ವೆ, ಸೌಹಾರ್ದತೆಯಿತ್ತು. ಯಾರದಾದರು ಮನೆಯಲ್ಲಿ ಮದುವೆ ಸಮಾರಂಭ ಅಥವಾ ಇನ್ನಿತರ ಯಾವುದೇ ಸಮಾರಂಭ ನಡೆಯುತ್ತಿದ್ದರೂ ಎಲ್ಲರೂ ಜೊತೆಗೂಡಿ ಪರಸ್ಪರ ತನು, ಧನ, ಮನದಿಂದ ಸಹಕರಿಸುತ್ತಿದ್ದರು. ಯಾರೂ ಯಾರ ಬಗ್ಗೆ ಕೀಳಾಗಿ ಮಾತನಾಡುತ್ತಿರಲಿಲ್ಲ. ಬ್ಯಾರ್ದಿನಕ್ಕಲ್(ಬ್ಯಾರ್ತಿಗಳು), ಪೊರ್ಬುನಕ್ಕಲ್(ಪೊರ್ಬುಗಳು), ಬಾಯಮ್ಮರೆಂಬ ಕರೆಗಳನ್ನು ಆ ದಿನಗಳಲ್ಲಿ‌ ಕೇಳಿಯೂ ಇರಲಿಲ್ಲ.

ಇದನ್ನು ಓದಿದ್ದೀರಾ? ಕೈವಾರ ತಾತಯ್ಯನ ನೆಲದಲ್ಲಿ ಕೋಮುವಾದಕ್ಕೆ ನೆಲೆಯಿಲ್ಲ

ಆದರೆ ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರೂ ಸಂಶಯ, ಅಪನಂಬಿಕೆಗಳೇ. ಪ್ರತಿಯೊಂದನ್ನು ಧರ್ಮದ ಹೆಸರಿನಲ್ಲೇ ಬಿಂಬಿಸುತ್ತಿದ್ದಾರೆ. ಶಿಕ್ಷಣವನ್ನು ಕಲಿಸುವ ಶಾಲಾ ಕಾಲೇಜುಗಳಲ್ಲೂ ಇತರ ಧರ್ಮದ ಬಗ್ಗೆ ಆರೋಪಿಸುವ ಪರಿಪಾಠ ಬೆಳೆಯುತ್ತಿರುವ ಸೂಚನೆಗಳು ಕಾಣುತ್ತಿವೆ. ಪ್ರೀತಿಯಿಂದ ಯಾವುದೇ ಮಾತನ್ನು ಯಾರಲ್ಲೂ ಹೇಳುವಂತಿಲ್ಲ. ಆಗಲೇ ಹೇಳಿದವರ ಮೇಲೆ ಮನಸ್ತಾಪ. ಜೊತೆಗೆ ಅವರಲ್ಲೂ ಧರ್ಮದ ಹುಳುಕನ್ನು ಹುಡುಕುವ ಪ್ರಯತ್ನ. ಅವರ ಪ್ರೀತಿ, ನಂಬಿಕೆಯನ್ನೇ ಸಂಶಯಿಸಿ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸುವುದು. ಅವರ ಜೊತೆ ಸೇರಬೇಡ , ಇವರ ಜೊತೆ ಸೇರಬೇಡವೆಂದು ಹಿರಿಯರ ಉಪದೇಶ. ಒಂದು ತುಂಡು ಬಟ್ಟೆಯ ಹೆಸರಿನಲ್ಲಿ ರಾಜ್ಯಾದ್ಯಂತ ದ್ವೇಷದ ಕಿಡಿ ಹಚ್ಚಿರುವರು. ತನ್ನ ಮನೆಯಲ್ಲೂ ತನ್ನ ಪರಿಸರದಲ್ಲೂ ಅದೇ ಬಟ್ಟೆ ಧರಿಸುವವರಿದ್ದರೂ ಹಿಜಾಬ್ ಎಂಬ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸುವ ಯತ್ನ. ಹಲಾಲ್ ಕಟ್, ಜಟ್ಕಾ ಕಟ್, ಲವ್ ಜಿಹಾದ್ ಹೊಸ ಹೆಸರಿನಿಂದ ವ್ಯಾಪಾರದ ಮೇಲೂ ಓರಗೆಯವರ ಮೇಲೂ ಸಹಬಾಳ್ವೆಯನ್ನು ಇಲ್ಲವಾಗಿಸಿ ಖುಷಿ ಪಡುವ ಒಂದು ಗುಂಪಿಗೆ ಸಿಗುವ ಲಾಭವಾದರೂ ಏನು ?

ಭವ್ಯ ಪರಂಪರೆಯ ನಮ್ಮ ದೇಶದಲ್ಲಿ ಭಾವೈಕ್ಯತೆಗೆ ಹಲವಾರು ಮಜಲುಗಳಿವೆ. ಅದರಲ್ಲಿ ವಾಸ್ತುಶಿಲ್ಪಗಳಿರಬಹುದು. ಸಂಸ್ಕೃತಿಗಳಿರಬಹುದು. ಧರ್ಮಗಳಿರಬಹುದು. ಅವೆಲ್ಲವು ಇದ್ದು ಜೊತೆಯಾಗಿ ಬಾಳುವುದೇ ಸುಂದರ ಭಾರತ. ಅದಿಲ್ಲದಿದ್ದರೆ ಸೌಹಾರ್ದತೆಯಿಲ್ಲ. ಸೌಹಾರ್ದತೆಯಿಲ್ಲದಿದ್ದರೆ ಭಾರತವಿಲ್ಲ. ಮಸೀದಿಯ ಆಝಾನ್, ಮಂದಿರದ ಭಜನೆ, ಚರ್ಚಿನ ಗಂಟೆ ಇವುಗಳಿಗಿರುವ ಸೌಂದರ್ಯವೇ ಶ್ರೇಷ್ಠ. ಅದರಲ್ಲಿ ಹುಳುಕು ಹುಡುಕುವವರು ಇನ್ಯಾವ ಭಾರತವನ್ನು ಬಯಸಬಲ್ಲರು‌..?  ಇದರಿಂದ ಜೊತೆಗೂಡಿ ಆಡಿ ನಲಿದ, ಹಿಂದೊಮ್ಮೆ ಪರಸ್ಪರ ಪ್ರೀತಿಸಿ ಹೆಗಲ ಮೇಲೆ ಹೆಗಲಿಟ್ಟು ಓಡಾಡಿದ ಆ ಹೃದಯಗಳಿಗೆ ಎಷ್ಟು ನೋವಾಗಬಹುದೆಂದು ಯಾಕೆ ಇವರು ಚಿಂತಿಸುವುದಿಲ್ಲ ? ಪ್ರೀತಿ, ಸೌಹಾರ್ದತೆ, ಸಹಬಾಳ್ವೆಯಿಂದ ನಲಿದಾಡಿದ ಆ ದಿನಗಳನ್ನು ಮತ್ತೊಮ್ಮೆ ನೆನಪಿಸಬಾರದೇ...? ಎಂಬೆಲ್ಲ ಪ್ರಶ್ನೆಗಳು ಹುಟ್ಟುತ್ತಿರುವ ಈ ಸಮಯದಲ್ಲಿಯೇ ಸಹಬಾಳ್ವೆಯ ನೂರಾರು ಕಥನಗಳು ಸಮುದ್ರದ ಅಲೆಗಳಂತೆ ಮೇಲೆದ್ದು ಬರುತ್ತಿವೆ. ತಂಗಾಳಿಯಂತೆ ಮನಸ್ಸನ್ನು ಮುದಗೊಳಿಸುತ್ತಿದೆ.
 

ನಿಮಗೆ ಏನು ಅನ್ನಿಸ್ತು?
3 ವೋಟ್