ಈಗಲೂ ಸೇಬು ತಿನ್ನುವಾಗ ಶಂಕರ ಭಟ್ಟರೇ ಕಣ್ಮುಂದೆ ಬರುತ್ತಾರೆ

muslim girl

ಬೆಳಿಗ್ಗೆ ಕರ್ಣನ ಜೊತೆ ಅಂಗನವಾಡಿಗೆ ಹೊರಡುತ್ತಿದ್ದ ಸಂದೇಶ ನಮ್ಮ ಮನೆ ತಲುಪುತ್ತಿದ್ದಂತೆ ಕರ್ಣನನ್ನು ಬಿಟ್ಟು ಓಡೋಡಿ ಬಂದು ಅಂಗಳದಲ್ಲಿ ನಿಂತು ಹವ್ಯಕ ಭಾಷೆಯಲ್ಲಿ "ಮಿಸ್ರಿಯ.. ಬತ್ತಿಲ್ಲೆಯ.." ಎಂದು ಕೇಳುತ್ತಿದ್ದ. ಅವರಿಬ್ಬರ ಬರುವಿಕೆಯನ್ನೇ ಕಾಯುತ್ತಿದ್ದ ನಾನು 'ಬತ್ತೆ ಬತ್ತೆ...' ಎನ್ನುತ್ತಾ ಓಡೋಡಿ ಹೋಗುತ್ತಿದ್ದೆ. ಕರ್ಣ ನನ್ನೊಂದಿಗೆ ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಿದ್ದ.

ನಮ್ಮ ನೆರೆಮನೆಯ ರಾಮಕೃಷ್ಣ ಭಟ್ಟರ ಒಬ್ಬನೇ ಮಗ ಶಂಕರ ಭಟ್ಟರಿಗೆ ಮಕ್ಕಳಿರಲಿಲ್ಲ. ಹಾಗಾಗಿ ಶಂಕರ ಭಟ್ಟರಿಗೆ ನನ್ನನ್ನು ಕಂಡರೆ ಅತೀವ ಅಕ್ಕರೆ. ಬಿಡುವಾದಾಗಲೆಲ್ಲಾ ನಮ್ಮನೆಗೆ ಬಂದು ಪ್ರೀತಿಯಿಂದ ಮಾತಾಡಿಸಿ ಹೋಗುತ್ತಿದ್ದ ಭಟ್ಟರು ಅವರ ಹಬ್ಬ ಹರಿದಿನಗಳಂದು, ಶುಭ ಸಮಾರಂಭಗಳಂದು ನನಗಾಗಿ ತಿಂಡಿ ಕಟ್ಟಿಕೊಂಡು ಬರುತ್ತಿದ್ದರು. ಹೀಗೆ ಒಮ್ಮೆ ಪೇಟೆಗೆ ಹೋಗಿ ಬಂದ ಭಟ್ಟರು ನೇರ ನಮ್ಮನೆಗೆ ಬಂದು ಅವರ ಜೋಳಿಗೆಯಿಂದ ಸೇಬೊಂದನ್ನು ತೆಗೆದು ನನ್ನ ಕೈಗಿತ್ತಿದ್ದರು. ಈಗೆಲ್ಲಾ ಸೇಬು ಹಣ್ಣು ತಿನ್ನುವಾಗ ಶಂಕರ ಭಟ್ಟರೇ ಕಣ್ಣ ಮುಂದೆ ಬರುತ್ತಾರೆ.

Eedina App

ಅಂಗಳದ ತುಂಬಾ ಬಣ್ಣ ಬಣ್ಣದ ಗುಲಾಬಿ ಗಿಡಗಳನ್ನು ಬೆಳೆಸಿ ಮಕ್ಕಳಿಲ್ಲದ ಕೊರಗನ್ನು ಮರೆಯುತ್ತಿದ್ದ ಅವರ ಮಡದಿ ಗೌರಿ ನಾನು ಅವರ ಅಂಗಳಕ್ಕೆ ಕಾಲಿಟ್ಟೊಡನೆ ಗುಲಾಬಿ ಹೂವುಗಳನ್ನು ಕಿತ್ತು ಕೊಟ್ಟು ನನ್ನ ಪುಟ್ಟ ಮನಸ್ಸನ್ನೂ ಗುಲಾಬಿಯಂತೆ ಅರಳಿಸುತ್ತಿದ್ದರು. ಹೀಗೆ ನಮಗರಿವಿಲ್ಲದೇ ಶಂಕರ ಭಟ್ಟ- ಗೌರಿ ದಂಪತಿ ಹಾಗೂ ನನ್ನ ನಡುವೆ ಬಾಂಧವ್ಯ ಬೆಸೆದುಕೊಂಡಿತ್ತು. ಹೀಗೆ ಒಂದು ದಿನ ಅವರ ಮನೆಗೆ ಹೋದಾಗ ಬೆಳ್ಳಗಿನ, ಬೆಕ್ಕಿನ ಕಣ್ಣಿನ ನನ್ನಷ್ಟೆ ಎತ್ತರದ ಹುಡುಗನೊಬ್ಬ ಆಟವಾಡುತ್ತಿದ್ದ. ಅವನು ಶಂಕರ ಭಟ್ಟರ ತಂಗಿಯ ಮಗ ಸಂದೇಶ. ಆ ದಿನ ಅವನ ಜೊತೆ ಆಟವಾಡಬೇಕೆಂದೆನ್ನಿಸಿದರೂ ಪರಸ್ಪರ ಪರಿಚಯವಿಲ್ಲದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಇದೇ ಸಂದೇಶ ಮುಂದೆ ನನ್ನ ಬದುಕಿನ ಮೊತ್ತ ಮೊದಲ ಗೆಳೆಯನಾಗುತ್ತಾನೆ.

ಅದು ಜೂನ್ ತಿಂಗಳು. ಧೋ ಎಂದು ಸುರಿಯುವ ಮಳೆಯ ಜೊತೆಗೆ ಅಕ್ಕನಿಗೆ ಶಾಲೆ ಪುನರಾರಂಭಗೊಂಡಿತ್ತು. ನನಗೆ ಅಂದು ಅಂಗನವಾಡಿಯ ಮೊದಲ ದಿನ. ಒಲ್ಲದ ಮನಸ್ಸಿನಿಂದಲೇ ಅಮ್ಮನ ಸೆರಗನ್ನು ಬಿಟ್ಟು ಅಕ್ಕನ ಜೊತೆ ಅಂಗನವಾಡಿಗೆ ಹೆಜ್ಜೆ ಹಾಕಿದ್ದೆ. ಅಲ್ಲಿ ನೋಡಿದರೆ ಎಲ್ಲವೂ ಹೊಸ ಮುಖಗಳು. ಅಮ್ಮನ ನೆನಪಾಗಿ ಅಳು ಒತ್ತರಿಸಿ ಬಂದಿತ್ತು. ಅಷ್ಟು ಹೊತ್ತಿಗಾಗಲೇ ಶಂಕರ ಭಟ್ಟರ ಮನೆಯ ಕೆಲಸದಾಳು ಕರ್ಣನೊಡನೆ ಸಂದೇಶ ಬರುತ್ತಿರುವುದನ್ನು ನೋಡಿ ನಾನು ಮನದೊಳಗೇ ಹಿಗ್ಗಿದ್ದೆ. ಅವನಿಗೂ ನನ್ನನ್ನು ನೋಡಿ ಹಾಗೆಯೇ ಅನ್ನಿಸಿರಬೇಕು. ಅತ್ತಿತ್ತ ನೋಡಿದ ಅವನು ನನ್ನ ಬಳಿಯೇ ಬಂದು ಕುಳಿತ. ಆವರೆಗೂ ಪರಸ್ಪರ ಮಾತಾಡಿಕೊಂಡಿರದಿದ್ದ ನಾವು  ಮಾತಾಡಿಕೊಂಡೆವು; ಗೆಳೆಯರಾಗಿಬಿಟ್ಟೆವು. ಮಾರನೆಯ ದಿನದಿಂದ ಜೊತೆಯಾಗಿಯೇ ಅಂಗನವಾಡಿಗೆ ಬರುವುದಾಗಿ ಒಪ್ಪಂದವನ್ನೂ ಮಾಡಿಕೊಂಡೆವು. ಆ ದಿನದಿಂದ ಸಂದೇಶನ ಜೊತೆಗೆ ನನ್ನನ್ನೂ ಅಂಗನವಾಡಿಗೆ ಕರೆತರುವ, ಮಧ್ಯಾಹ್ನ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಕರ್ಣ ಹೊತ್ತುಕೊಂಡ. ಬೆಳಿಗ್ಗೆ ಕರ್ಣನ ಜೊತೆ ಅಂಗನವಾಡಿಗೆ ಹೊರಡುತ್ತಿದ್ದ ಸಂದೇಶ ನಮ್ಮ ಮನೆ ತಲುಪುತ್ತಿದ್ದಂತೆ ಕರ್ಣನನ್ನು ಬಿಟ್ಟು ಓಡೋಡಿ ಬಂದು ಅಂಗಳದಲ್ಲಿ ನಿಂತು ಹವ್ಯಕ ಭಾಷೆಯಲ್ಲಿ "ಮಿಸ್ರಿಯ.. ಬತ್ತಿಲ್ಲೆಯ.." ಎಂದು ಕೇಳುತ್ತಿದ್ದ. ಅವರಿಬ್ಬರ ಬರುವಿಕೆಯನ್ನೇ ಕಾಯುತ್ತಿದ್ದ ನಾನು ಬತ್ತೆ... ಬತ್ತೆ... ಎನ್ನುತ್ತಾ ಓಡೋಡಿ ಹೋಗುತ್ತಿದ್ದೆ. ಬಹುಭಾಷಾ ವಲ್ಲಭನಾಗಿದ್ದ ಕರ್ಣ ನನ್ನೊಂದಿಗೆ ಬ್ಯಾರಿ ಭಾಷೆಯಲ್ಲಿ ವ್ಯವಹರಿಸುತ್ತಿದ್ದರೆ ಸಂದೇಶನೊಂದಿಗೆ ಹವ್ಯಕ ಭಾಷೆಯಲ್ಲಿ ಮಾತನಾಡುತ್ತಿದ್ದ. ಅವನ ಭಾಷೆ ಬಿಟ್ಟು ಒಂದೇ ಒಂದು ಬ್ಯಾರಿ ಪದವನ್ನಾಡಲೂ ಉಮೇದು ತೋರದ ಸಂದೇಶನಿಂದಾಗಿ ನಾನು ಹವ್ಯಕ ಭಾಷೆಯನ್ನು ಕಲಿಯುವಂತಾಯಿತು. ಮಡಿ ಬ್ರಾಹ್ಮಣ ಕುಟುಂಬದವನಾಗಿದ್ದ ಸಂದೇಶನನ್ನು ನನ್ನಪ್ಪ ಆಗಾಗ ಛೇಡಿಸುತ್ತಿದ್ದರು. ಒಮ್ಮೆ ಮಮ್ಮದೆ ಬ್ಯಾರಿಯಿಂದ ಮೀನು ಖರೀದಿಸುತ್ತಿದ್ದ ನನ್ನಪ್ಪ ಸಂದೇಶನನ್ನು ನೋಡಿ ಮೀನು ಬೇಕಾ ಎಂದು ಕೇಳಿದ್ದಕ್ಕೆ "ಛೀ ಕೊಳಕು" ಎಂದಿದ್ದ.

AV Eye Hospital ad

ಮಳೆಗಾಲದಲ್ಲಿ ಕರ್ಣನಿಗೆ ನಮ್ಮ ಮೇಲಿದ್ದ ಹೊಣೆಗಾರಿಕೆ ಸ್ವಲ್ಪ ಹೆಚ್ಚೆಂದೇ ಹೇಳಬೇಕು. ಶಾಲೆಗೆ ನಡೆದು ಹೋಗುವ ಕಾಲುದಾರಿಯುದ್ದಕ್ಕೂ ಒಂದು ಬದಿ ತುಂಬಿ ಹರಿವ ಹಳ್ಳವಾದರೆ ಇನ್ನೊಂದು ಕಡೆ ತೋಟ, ಗದ್ದೆ ನಡುವೆ ಕಿರಿದಾದ ಕಾಲುದಾರಿ. ಒಂದು ಹೆಜ್ಜೆಯಿಟ್ಟು ಇನ್ನೊಂದು ಹೆಜ್ಜೆ ಎತ್ತಬೇಕೆನ್ನುವಷ್ಟರಲ್ಲಿ ಕಾಲು ಕೆಸರಲ್ಲಿ ಹೂತು ಹೋಗುತ್ತಿತ್ತು‌‌‌. ಆ ಕಡೆ ಬಿದ್ದರೆ ಕೆಸರು ಗದ್ದೆಗೆ ಈ ಕಡೆ ಬಿದ್ದರೆ ತುಂಬಿ ಹರಿವ ಹಳ್ಳಕ್ಕೆ ಒಟ್ಟಿನಲ್ಲಿ ನಮ್ಮನ್ನು ಬ್ಯಾಲೆನ್ಸ್ ಮಾಡುತ್ತಾ, ನಮ್ಮಿಬ್ಬರ ಕೀಟಲೆಯನ್ನು ಸಹಿಸುತ್ತಾ ಕರ್ಣ ದೊಡ್ಡದೊಂದು ಜವಾಬ್ದಾರಿಯನ್ನು ನಿಭಾಯಿಸಿದ್ದ. ನಮ್ಮ ಹೆತ್ತವರೂ ಅಷ್ಟೆ ಕರ್ಣ ಪರವೂರಿಗನಾಗಿದ್ದರೂ ಅವನ ಮೇಲೆ ಬಲವಾದ ನಂಬಿಕೆಯಿಟ್ಟಿದ್ದರು. ಜಾತಿ, ಧರ್ಮ, ಮೇಲು ಕೀಳು ಇವೆಲ್ಲದರಾಚೆಗೆ ಬರಿ ಪ್ರೀತಿ, ವಿಶ್ವಾಸದಿಂದ ನಮ್ಮ ಮನಸ್ಸುಗಳು ಭದ್ರವಾಗಿದ್ದವು.

ಇದನ್ನು ಓದಿದ್ದೀರಾ? ʼಸಂಕಿ ಅಮಾಂಯ್‌ʼ ಮನೆ ದೀಪಾವಳಿಯೂ, ಪಟಾಕಿ ಸ್ಪೆಷಲಿಸ್ಟ್‌ ದಿನಕರನೂ...

ತುಂಬಿ ಹರಿವ ನೀರನ್ನು ನೋಡುವಾಗಲೆಲ್ಲಾ ಕಾಗದದ ದೋಣಿ ಮಾಡಿ ಬಿಡಬೇಕೆಂಬ ಆಸೆಯಿಂದ ಅವನಲ್ಲಿ ದೋಣಿ ಮಾಡಿ ಕೊಡಬೇಕೆಂದು ನಾವಿಬ್ಬರೂ ಪಟ್ಟು ಹಿಡಿಯುತ್ತಿದ್ದೆವು. ಆದರೆ ಅವನು ಒಮ್ಮೆಯೂ ನಮ್ಮ ಆಸೆಯನ್ನು ಪೂರೈಸಿ ಕೊಡಲಿಲ್ಲ. ಒಮ್ಮೆ ದಾರಿ ಮಧ್ಯೆ ಕರ್ಣನಿಗೆ ಯಾರೋ ಮಾತಿಗೆ ಸಿಕ್ಕರು. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ನಾವಿಬ್ಬರೂ ಗಿಡಗಳಿಂದ ಎಲೆಗಳನ್ನು ಕಿತ್ತು ಹಳ್ಳದ ನೀರಿನಲ್ಲಿ ತೇಲಿ ಬಿಟ್ಟು ಯಾರು ಬಿಟ್ಟ ಎಲೆ ವೇಗವಾಗಿ ಹೋಗುತ್ತದೆ ಎಂಬ ಸ್ಪರ್ಧೆಯನ್ನೇ ಏರ್ಪಡಿಸಿಬಿಟ್ಟೆವು. ಅಷ್ಟೇ ಅಲ್ಲ ಅವನಿಂದ ಚೆನ್ನಾಗಿ ಬೈಸಿಕೊಂಡೆವು ಕೂಡಾ. ನಮ್ಮ ಗೆಳೆತನ ಬರೀ ಒಂದು ವರ್ಷದ್ದು.

ಅಂಗನವಾಡಿ ರಜೆ ಸಿಕ್ಕೊಡನೆ ಸಂದೇಶ ಅವನೂರಿನ ಶಾಲೆಯಲ್ಲಿ ಒಂದನೇ ತರಗತಿಗೆ ಸೇರಿಕೊಂಡ. ಇದರ ಮಧ್ಯೆ ಶಂಕರ ಭಟ್ಟರೂ ಮರಣ ಹೊಂದಿದರು. ಅದೇ ವರ್ಷ ಕರ್ಣನೂ ಕೆಲಸ ಬಿಟ್ಟು ಊರ ಕಡೆ ಹೊರಟು ಹೋದ. ಮುಂದೆಂದೂ ಅವರಿಬ್ಬರನ್ನು ಭೇಟಿಯಾಗುವ ಅವಕಾಶ ಸಿಗಲೇ ಇಲ್ಲ. ನಾನು ಭೇಟಿಯಾಗುವ ಪ್ರಯತ್ನವನ್ನೂ ಮಾಡಲಿಲ್ಲ.

ಕೋಮುವಾದದ ವಿಷ ವಾಯು ದಟ್ಟನೆ ಹಬ್ಬಿರುವಾಗ ಸಂದೇಶ, ಕರ್ಣರ ಮನಸ್ಸೂ ಕಲುಷಿತಗೊಂಡಿರಬಹುದೇ? ಅವರು ಹಿಂದಿನ ಸಂದೇಶ ಕರ್ಣರಾಗಿರುವರೇ ಅಥವಾ ನನ್ನ ಊಹೆಗೂ ನಿಲುಕದ ರೀತಿ ಬದಲಾಗಿರಬಹುದೇ ಎಂಬ ಆತಂಕ ಸದಾ ಕಾಡುತ್ತಿರುತ್ತದೆ. ತವರಿಗೆ ಹೋದಾಗ ಅಪರೂಪಕ್ಕೊಮ್ಮೆ ಬಾಕಿಮ್ಮಾರ್ ಗದ್ದೆಯಲ್ಲಿ ನಡೆದುಕೊಂಡು ಹೋಗುವಾಗ, ಕೋಲದ ದಿನ ಕರ್ಣ ನಮಗಿಬ್ಬರಿಗೂ ಖರೀದಿಸಿ ಕೊಟ್ಟ ಐಸ್‌ಕ್ಯಾಂಡಿ ನೆನಪಾಗಿ ಮನಸ್ಸಿಗೆ ತಂಪನೀಯುತ್ತದೆ.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app