ಕಳೆದಾರು ತಿಂಗಳ ʼದ್ವೇಷʼದ ಅಭಿಯಾನಕ್ಕೆ ಹಿಂದೂಗಳ ಪ್ರತಿಕ್ರಿಯೆ ಏನಾಗಿತ್ತು?

Hijab contravercy

ಕನ್ನಡದ ದೃಶ್ಯ ಮಾಧ್ಯಮಗಳು 24 ಗಂಟೆಯೂ ಕೇಸರಿ ವರ್ಸಸ್‌ ಹಿಜಾಬು ಎಂಬ ಒಂದಂಶದ ಸುದ್ದಿ ಪ್ರಸಾರ ಮಾಡುತ್ತಾ ಕಿಚ್ಚುಹಚ್ಚಲು ಯತ್ನಿಸಿದವು. ಈ ನಡುವೆ ಹಿಂದೂ ಹೆಣ್ಣು ಮಕ್ಕಳು ಹಿಜಾಬ್‌ ಧರಿಸಿದ ಸಹಪಾಠಿಗಳ ಕೈ ಹಿಡಿದು ತರಗತಿಗೆ ನಡೆದು ಅಭಿಯಾನಕ್ಕೆ ಸಡ್ಡು ಹೊಡೆದರು. ಮುಸ್ಲಿಮರ ಬಳಿ ಮಾಂಸ ಖರೀದಿಸಿದ ಜನ ಸಹಬಾಳ್ವೆಯ ಸಂದೇಶ ಸಾರಿದರು.

ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಹಿಂದೂಪರ ಎಂದು ಹೇಳಿಕೊಳ್ಳುವ ಸಂಘಟನೆಗಳು ನಿರಂತರವಾಗಿ ಮುಸ್ಲಿಂ ದ್ವೇಷದ ಅಭಿಯಾನಗಳನ್ನು ನಡೆಸುತ್ತಿವೆ. ಹಿಜಾಬ್‌, ಹಲಾಲ್‌, ವ್ಯಾಪಾರ ಬಹಿಷ್ಕಾರ, ಆಝಾನ್‌ವರೆಗೂ ಮುಂದುವರಿದು, ಈಗ ಶ್ರೀರಂಗಪಟ್ಟಣದ ಮಸೀದಿಯ ಮೇಲೆ ಕೋಮುವಾದಿಗಳ ಕಣ್ಣು ಬಿದ್ದಿದೆ. ಟಿಪ್ಪು ನಿರ್ಮಿಸಿದ ಮಸೀದಿಯನ್ನು ಆಂಜನೇಯನ ದೇವಸ್ಥಾನ ಎಂಬ ಆಧಾರರಹಿತ ವಾದ ಮುನ್ನಲೆಗೆ ತರಲಾಗಿದೆ. ಇನ್ನೂ ಮುಂದುವರಿದು ಎಲ್ಲಾ ಮಸೀದಿಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆ ಬಂದರೂ ಅಚ್ಚರಿಯಿಲ್ಲ. ಆದರೆ, ಇದುವರೆಗೆ ನಡೆದ ಹಲವು ಅಭಿಯಾನಗಳು, ಅದು ನಡೆದ ಸೀಮಿತ ಅವಧಿ, ವ್ಯಾಪ್ತಿಯನ್ನು ಅವಲೋಕಿಸಿದರೆ ಈ ರಾಜ್ಯದ ಸಾಮಾನ್ಯ ಜನ, ಅದರಲ್ಲೂ ಬಹುಸಂಖ್ಯಾತ ಹಿಂದೂಗಳೇ ಕೋಮುದ್ವೇಷದ ಅಭಿಯಾನಗಳಿಗೆ ಮೂರುಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂಬುದು ಅರಿವಾಗುತ್ತದೆ.

ಫೆಬ್ರುವರಿ ತಿಂಗಳಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜಿನ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯ ಒಳಗೆ ಹಿಜಾಬು ಹಾಕಲು ಅವಕಾಶ ನೀಡಬೇಕು ಎಂಬ ಮನವಿಯನ್ನು ಕಾಲೇಜಿನ ಪ್ರಾಂಶುಪಾಲರ ಮುಂದಿಡುತ್ತಾರೆ. ಪ್ರಾಂಶುಪಾಲರು ಅದಕ್ಕೆ ಅನುಮತಿ ನೀಡುವುದಿಲ್ಲ. ಆದರೆ ಪಟ್ಟು ಬಿಡದ ವಿದ್ಯಾರ್ಥಿನಿಯರಿಗೆ ತರಗತಿಯ ಒಳಗೆ ಪ್ರವೇಶ ನಿರಾಕರಿಸಲಾಯಿತು. ಆ ಕಾಲೇಜಿನಲ್ಲಿ ತೊಂಬತ್ತು ಮುಸ್ಲಿಂ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದು ಅದರಲ್ಲಿ ಕೇವಲ ಹನ್ನೆರಡು ಹುಡುಗಿಯರು ಮಾತ್ರ ತರಗತಿಯ ಒಳಗೆ ಹಿಜಾಬು ಧರಿಸಲು ಅವಕಾಶ ಕೋರಿದ್ದರು. ಹಿಜಾಬು ತೆಗೆದಿರಿಸಿ ಬಂದರೆ ಮಾತ್ರ ತರಗತಿಗೆ ಪ್ರವೇಶ ಎಂದು ಆಡಳಿತ ಮಂಡಳಿಯವರು ಹೇಳಿದ ನಂತರ ಅವರಲ್ಲಿ ಆರು ವಿದ್ಯಾರ್ಥಿನಿಯರು ತರಗತಿಯ ಹೊರಗೆ ಕುಳಿತು ತಮ್ಮ ಹಕ್ಕಿಗಾಗಿ ಪ್ರತಿಭಟಿಸಿದ್ದರು. ಇದು ರಾಷ್ಟ್ರಮಟ್ಟದ ಸುದ್ದಿಯೂ ಆಯಿತು.

ಆದರೆ, ಈ ಪ್ರಕರಣಕ್ಕೆ ಅಪಾಯಕಾರಿ ತಿರುವು ನೀಡಿದ್ದು ಕುಂದಾಪುರದ ಸರ್ಕಾರಿ ಕಾಲೇಜು. ಅಲ್ಲಿಯವರೆಗೂ ಹಿಜಾಬು ಧರಿಸಲು ಅವಕಾಶ ಇದ್ದ ಕುಂದಾಪುರದ ಕಾಲೇಜಿನಲ್ಲಿ ಹಿಜಾಬು ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಏಕಾಏಕಿ ಕಾಲೇಜು ಗೇಟಿನ ಹೊರಗೆ ನಿಲ್ಲಿಸಲಾಯಿತು. ಸ್ವತಃ ಕಾಲೇಜು ಪ್ರಾಂಶುಪಾಲರೇ ಗೇಟಿನ ಬಳಿ ನಿಂತು ಬಾಲಕಿಯರನ್ನು ತಡೆದರು. ಇದರ ಜೊತೆಗೆ ಕೆಲವು ಹಿಂದೂ ಹುಡುಗರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದರು. ʼಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬು ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡಿದರೆ ನಮಗೆ ಕೇಸರಿ ಶಾಲು ಹಾಕಲು ಅವಕಾಶ ನೀಡಬೇಕುʼ ಎಂಬ ಬೇಡಿಕೆ ಇಟ್ಟರು. ಇದಾದ ನಂತರ ರಾಜ್ಯದ ಕೆಲವು ಕಾಲೇಜುಗಳಲ್ಲಿ ಕೇಸರಿ ಧರಿಸಿ ಬಂದ ವಿದ್ಯಾರ್ಥಿಗಳು ಇಡೀ ರಾಜ್ಯದಲ್ಲಿ ಗದ್ದಲಕ್ಕೆ ಕಾರಣರಾದರು. ಕೆಲ ಸಂಘಟನೆಗಳ ಮುಖಂಡರು ಖುದ್ದು ಕಾರುಗಳಲ್ಲಿ ಕೇಸರಿ ಶಾಲು ತುಂಬಿಕೊಂಡು ಬಂದು ವಿದ್ಯಾರ್ಥಿಗಳಿಗೆ ಹಂಚುತ್ತಿದ್ದ ದೃಶ್ಯಗಳು ಬಯಲಾದವು. ಉಡುಪಿಯಿಂದ ಹೊರಟ ಕೇಸರಿಶಾಲು ಅಭಿಯಾನ ಶಿವಮೊಗ್ಗ, ಮಡಿಕೇರಿ, ಮಂಡ್ಯ ಹೀಗೆ ರಾಜ್ಯದ ಕೆಲವು ಕಡೆ ನಡೆದವು.

ಮಡಿಕೇರಿಯ ಕೆ.ಎಂ.ಕಾರ್ಯಪ್ಪ ಕಾಲೇಜಿನ ಬಳಿ ಬಂದ ಬಜರಂಗದಳದ ಮುಖಂಡರು ವಿದ್ಯಾರ್ಥಿಗಳನ್ನು ಪ್ರಚೋದಿಸಿದ್ದರು. ಸಂಘಟನೆ ನಿಮಗೆ ಬೆಂಬಲವಾಗಿ ನಿಲ್ಲುತ್ತದೆ. ನೀವು ಕೇಸರಿ ಶಾಲಿನ ಪ್ರತಿಭಟನೆ ತೀವ್ರಗೊಳಿಸಿ ಎಂಬ ಅಭಯ ನೀಡುತ್ತಿದ್ದ ದೃಶ್ಯ ವೈರಲ್‌ ಆಗಿತ್ತು. ಅಷ್ಟರಲ್ಲಿ ರಾಜ್ಯ ಶಿಕ್ಷಣ ಇಲಾಖೆ ತರಗತಿಗಳಿಗೆ ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸಿ ಬರುವಂತಿಲ್ಲ ಎಂಬ ಆದೇಶ ಹೊರಡಿಸಿತು. ಅದರ ಜೊತೆಗೆ ಹಿಜಾಬ್‌ ಧರಿಸುವ ಹಕ್ಕಿಗಾಗಿ ಪ್ರತಿಭಟಿಸಿದ ಆರು ವಿದ್ಯಾರ್ಥಿನಿಯರು ಹೈಕೋರ್ಟ್‌ ಮೆಟ್ಟಿಲೇರಿದರು. ಸರ್ಕಾರದ ಆದೇಶವನ್ನು ಪಾಲಿಸುವಂತೆ ಮಧ್ಯಂತರ ಆದೇಶವನ್ನು ಹೈಕೋರ್ಟ್‌ನೀಡಿತು. ಕೋರ್ಟ್‌ ಆದೇಶದ ನಂತರವೂ ಹಿಜಾಬ್‌ ಧರಿಸಿ ಬಂದ ಹೆಣ್ಣುಮಕ್ಕಳನ್ನು ಸಹಪಾಠಿಗಳೇ ಹೆದರಿಸುವ ಘಟನೆಗಳು ನಡೆದವು. ಮಾಧ್ಯಮಗಳೂ ಅಷ್ಟೆ, ಜವಾಬ್ದಾರಿ ಮರೆತು 24 ಗಂಟೆಯೂ ಕೇಸರಿ ವರ್ಸಸ್‌ ಹಿಜಾಬು ಎಂಬ ಒಂದಂಶದ ಸುದ್ದಿ ಪ್ರಸಾರ ಮಾಡುತ್ತಾ ಇಡೀ ರಾಜ್ಯದ ಸಮಸ್ಯೆ ಎಂಬಂತೆ ಬಿಂಬಿಸಿದವು. ಈ ನಡುವೆ ಹಿಂದೂ ಹೆಣ್ಣುಮಕ್ಕಳು ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರ ಕೈ ಹಿಡಿದು ತರಗತಿಗೆ ನಡೆದು ಅಭಿಯಾನಕ್ಕೆ ಸಡ್ಡು ಹೊಡೆದರು. ಆದರೆ, ನಾಲ್ಕೈದು ಜಿಲ್ಲೆಯ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಕೇಸರಿ ಶಾಲಿನ ಅಬ್ಬರ ನಡೆಯಿತು. ಉಳಿದ ಕಡೆ ಅಭಿಯಾನ ನಡೆಯಲಿಲ್ಲ, ಬೆಂಗಳೂರು ನಗರದ ಜನ ಗಣನೆಗೆ ತೆಗೆದುಕೊಳ್ಳಲೇ ಇಲ್ಲ.

Image
ಶಿವಮೊಗ್ಗದ ಕಾಲೇಜೊಂದರಲ್ಲಿ ಗೆಳತಿಯ ಕೈ ಹಿಡಿದು ಸಾಗಿದ ಮುಸ್ಲಿಂ ವಿದ್ಯಾರ್ಥಿನಿ -ಸಂಗ್ರಹ ಚಿತ್ರ
ಶಿವಮೊಗ್ಗದ ಕಾಲೇಜೊಂದರಲ್ಲಿ ಹಿಜಾಬ್‌ಧಾರಿ ಗೆಳತಿಯ ಕೈ ಹಿಡಿದು ಸಾಗಿದ ಹಿಂದೂ ವಿದ್ಯಾರ್ಥಿನಿ -ಸಂಗ್ರಹ ಚಿತ್ರ

ಬಲಿಯ ಕೋಳಿಯದು ಯಾವ ಧರ್ಮ!
ಹಿಜಾಬು ಪ್ರಕರಣ ಮುಗಿಯಿತು ಎನ್ನುತ್ತಿದ್ದಂತೆ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುವ ಅಭಿಯಾನ ಹಿಂದುತ್ವದ ಪ್ರಯೋಗಶಾಲೆಯಾದ ಕರಾವಳಿಯಿಂದಲೇ ಆರಂಭವಾಯಿತು. ಕೆಲವು ಊರುಗಳಲ್ಲಿ ಕಿಡಿಗೇಡಿಗಳೇ ಹಿಂದೂಯೇತರ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂಬ ಬ್ಯಾನರ್‌ ಅಳವಡಿಸಿದರು. ಕಾಪು ಮಾರಿಜಾತ್ರೆಯ ಸಂತೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ ಹಾಕದಂತೆ ತಡೆಯಲಾಯಿತು. ನಂತರ ಶಿವಮೊಗ್ಗ ಸೇರಿದಂತೆ ಹಲವೆಡೆ ನಡೆದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಹೊರಗಿಡಲಾಯಿತು. ಶಿವಮೊಗ್ಗ ಶಿರಸಿಯ ಮಾರಿಕಾಂಬೆ ಜಾತ್ರೆಯಲ್ಲೂ ದೇವಸ್ಥಾನದ ಆಡಳಿತ ಮಂಡಳಿ ಅನ್ಯ ಧರ್ಮೀಯರಿಗೆ ಸಂತೆಯಲ್ಲಿ ಮಳಿಗೆಗೆ ಅವಕಾಶ ಕೊಡಲು ನಿರಾಕರಿಸಿದರು. ಹಿಂದೆ ಕಾಪು ಮಾರಿಕಾಂಬೆಗೆ ಹಿಂದೂ ಭಕ್ತರು ಬಲಿ ಕೊಡುವ ಕೋಳಿಗಳನ್ನು ಮುಸ್ಲಿಮರು ಮಾರುತ್ತಿದ್ದರು. ಈ ಬಾರಿ ಸಂತೆ ಮೈದಾನದಲ್ಲಿ ಅವರಿಗೆ ಅವಕಾಶ ನೀಡದ ಕಾರಣ ಹೊರಗೆ ರಸ್ತೆ ಬದಿಯಲ್ಲಿ ಕೋಳಿ ಮಾರಾಟ ಮಾಡುತ್ತಿದ್ದರು. ದೇವಸ್ಥಾನದ ಸಂತೆ ಮೈದಾನದಲ್ಲಿ ಹಿಂದೂಗಳೇ ಕೋಳಿ ಮಾರಾಟಕ್ಕೆ ಕೂತಿದ್ದರು.  ಆದರೆ ಹಿಂದೂ ಭಕ್ತರು ರಸ್ತೆ ಬದಿ ಕೂತಿದ್ದ ಮುಸ್ಲಿಮರ ಬಳಿ ಕೋಳಿ ಖರೀದಿಸಿ ಮಾರಿಕಾಂಬೆಗೆ ಅರ್ಪಿಸಿದ್ದರು. ಹಿಂದೂಗಳ ಮಳಿಗೆಯಲ್ಲಿ ಎರಡು ಪಟ್ಟು ಹೆಚ್ಚಿನ ಬೆಲೆ ಕೊಡಬೇಕಾಗಿತ್ತು ಎಂಬುದು ಒಂದು ಕಾರಣವಾಗಿದ್ದರೆ, ಬಲಿ ಕೊಡುವ ಕೋಳಿಗೆ ಧರ್ಮದ ಹಂಗಿಲ್ಲ ಎಂಬ ಸಂದೇಶವೊಂದನ್ನು ಅಪ್ರಜ್ಞಾಪೂರ್ವಕವಾಗಿ ಹಿಂದೂಗಳೇ ದಾಟಿಸಿದ್ದರು.

ಇದನ್ನು ಓದಿದ್ದೀರಾ? ಇದು ನಮ್ಮ ಸೌಹಾರ್ದ| ಭಾವೈಕ್ಯತೆ ಸಾರಿದ ಕೋಟೆ ನಾಡು ಗಜೇಂದ್ರಗಡ

ಇದೇ ಸಮಯದಲ್ಲಿ ಹಾಸನದ  ಜಾತ್ರೆಯಲ್ಲಿ ಎಲ್ಲಾ ಸಮುದಾಯದವರೂ ಸಂತೆಯಲ್ಲಿ ವ್ಯಾಪಾರ ಮಾಡಬಹುದು, ಯಾರೂ ತಡೆಯುವಂತಿಲ್ಲ ಎಂಬ ನಿರ್ಧಾರವನ್ನು ಆಡಳಿತ ಮಂಡಳಿ, ರೈತ ಮುಖಂಡರು, ಶಾಸಕರು ತೆಗೆದುಕೊಂಡಿದ್ದರು. ಅಲ್ಲಿ ದ್ವೇಷದ ಅಭಿಯಾನ ನಡೆಯಲಿಲ್ಲ. ಬೆಂಗಳೂರು ಕರಗ ದರ್ಗಾ ಪ್ರವೇಶವನ್ನು ಕೆಲವರು ವಿರೋಧಿಸಿದರು. ʼಬೆಂಗಳೂರು ಕರಗ ದರ್ಗಾಕ್ಕೆ ಹೋಗುವ ಸಂಪ್ರದಾಯ ಮುನ್ನೂರು ವರ್ಷಗಳಷ್ಟು ಹಳೆಯದು, ಯಾವುದೇ ಕಾರಣಕ್ಕೂ ಆ ಸಂಪ್ರದಾಯವನ್ನು ಮುರಿಯಲು ಸಾಧ್ಯವಿಲ್ಲ ʼ ಎಂದು ಕರಗ ಸಮಿತಿ ಗಟ್ಟಿಯಾಗಿ ನಿಂತ ಕಾರಣ ಹಿಂದುತ್ವವಾದಿಗಳ ಅಭಿಯಾನ ನಡೆಯಲಿಲ್ಲ.

ಹಳಸಿದ ಜಟ್ಕಾ ಕಟ್‌ ಮಾಂಸ
ಯುಗಾದಿಯ ಮರುದಿನ ಹೊಸತೊಡಕಿನ ಆಚರಣೆಗೆ ಮುಸ್ಲಿಮರ ಮಳಿಗೆಯಿಂದ ಹಿಂದೂಗಳು ಮಾಂಸ ಖರೀದಿ ಮಾಡಬಾರದು ಎಂದು ಹಲಾಲ್‌ಕಟ್‌/ಜಟ್ಕಾ ಕಟ್‌ಎಂಬ ಅಭಿಯಾನವನ್ನು ಕೆಲವೇ ಕೆಲವು ಪುಂಡರ ಗುಂಪುಗಳು ನಡೆಸಿದವು. ಮುಸ್ಲಿಮರ ಹಲಾಲ್‌ ಮಾಂಸದಿಂದ ಬರುವ ಹಣ ಭಯೋತ್ಪಾದಕ ಸಂಘಟನೆಗಳಿಗೆ ಹೋಗುತ್ತದೆ ಎಂಬ ಅಪಪ್ರಚಾರ ನಡೆಸಿದರು. ಆ ಅಭಿಯಾನಕ್ಕೆ ಕಪಾಳಮೋಕ್ಷ ಮಾಡುವಂತಹ ರೀತಿಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನ ಪ್ರತಿಕ್ರಿಯಿಸಿದರು. ಬೆಳಗ್ಗೆದ್ದು ಮುಸ್ಲಿಮರ ಮಾಂಸದಂಗಡಿ ಮುಂದೆ ಕಿಲೋಮೀಟರ್‌ವರೆಗೆ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದರು. ಮೈಸೂರಿನಲ್ಲಿ ಪ್ರಗತಿಪರ ಸಂಘಟನೆಗಳ ಜೊತೆ ಸಾಹಿತಿ ದೇವನೂರ ಮಹದೇವ ಅವರು ಮುಸ್ಲಿಂ ಅಂಗಡಿಯ ಮುಂದೆ ಕ್ಯೂ ನಿಂತು ಮಾಂಸ ಖರೀದಿಸಿದರು. ಸಾಮಾನ್ಯ ಜನರೂ ಟಿವಿ ಕ್ಯಾಮೆರಾ ಮುಂದೆ ನಿಂತು ಗಟ್ಟಿ ಧ್ವನಿಯಲ್ಲಿ ಖಂಡಿಸಿದರು. ಒಂದೇ ದಿನದಲ್ಲಿ ಹಲಾಲ್‌ ವಿರುದ್ಧದ ಅಭಿಯಾನ ಮಣ್ಣುಮುಕ್ಕಿತು. ಬೆಂಗಳೂರಿನಲ್ಲಿ ದಿಢೀರಾಗಿ ತಲೆಯೆತ್ತಿದ ಅನಧಿಕೃತ ಮಾಂಸದ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ದಂಡದ ಬಿಸಿ ಮುಟ್ಟಿಸಿದರು.

Image
ಹೊಸತೊಡಕಿನ ದಿನ ಮೈಸೂರಿನಲ್ಲಿ ಮುಸ್ಲಿಂರ ಅಮಗಡಿಯಿಂದ ಮಾಂಸ ಖರೀದಿಸಿದ ಸಾಹಿತಿ ದೇವನೂರ ಮಹಾದೇವ ಸಂಗಡಿಗರು
ಹೊಸತೊಡಕಿನ ದಿನ ಮೈಸೂರಿನಲ್ಲಿ ಮುಸ್ಲಿಮರ ಅಂಗಡಿಯಿಂದ ಮಾಂಸ ಖರೀದಿಸಿದ ಸಾಹಿತಿ ದೇವನೂರ ಮಹಾದೇವ 

ಧಾರವಾಡದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿದ್ದ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣಿನ ಅಂಗಡಿಯನ್ನು ಹಿಂದೂ ಕಿಡಿಗೇಡಿಗಳು ಧ್ವಂಸ ಮಾಡಿದ ಪ್ರಕರಣಕ್ಕೆ ಹಿಂದೂ ಸಮಾಜ ಸ್ಪಂದಿಸಿದ ರೀತಿ ಈ ನೆಲದ ಅಸ್ಮಿತೆಗೆ ಸಾಕ್ಷಿ. ಕಲ್ಲಂಗಡಿ ವ್ಯಾಪಾರಿ ನಬೀಸಾಬ್‌ಗೆ ರಾಜ್ಯದ ಮೂಲೆ ಮೂಲೆಗಳಿಂದ ಎಲ್ಲ ಸಮುದಾಯದವರು ಹಣಕಾಸಿನ ನೆರವು ನೀಡಿದರು. ಜೆಡಿಎಸ್‌ ಶಾಸಕ ಎಚ್‌.ಡಿ. ಕುಮಾರಸ್ವಾಮಿ, ಲೇಖಕ- ಪ್ರಕಾಶಕ ಬಸವರಾಜ ಸೂಳಿಬಾವಿ ಸೇರಿದಂತೆ ಅನೇಕ ಪ್ರಗತಿಪರರೂ ಹಣದ ನೆರವು ನೀಡಿದರು.

ಹಿಂದೂಗಳ ಬುಡಕ್ಕೆ ಬಂದ ಆಝಾನ್‌ ಅಭಿಯಾನ
ಮಸೀದಿಯ ಮೈಕಿನ ಮೇಲೆ ಕೆಲವರಿಗೆ ಇರುವ ದ್ವೇಷ ಹಳೆಯದು. ಈಗ ಅದಕ್ಕೆ ಅಭಿಯಾನದ ಲೇಪವೂ ಸೇರಿತ್ತು. ಸುಪ್ರೀಂ ಕೋರ್ಟಿನ ನಿಯಮದಂತೆ ಶಬ್ಧ ಮಿತಿಯನ್ನು ಕಡ್ಡಾಯಗೊಳಿಸುವುದಾಗಿ ಸರ್ಕಾರ ಹೇಳಿದರೂ ಸರ್ಕಾರಕ್ಕೆ ಗಡುವು ನೀಡುವಷ್ಟು ಅಬ್ಬರದ ಅಭಿಯಾನ ನಡೆಯಿತು. ʼಮಸೀದಿಯ ಮೈಕ್‌ ತೆಗೆಸಿ ಇಲ್ಲದಿದ್ದರೆ ನಾವೇ ತೆಗೆಯುತ್ತೇವೆʼ ಎಂದು ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌ ಸವಾಲೆಸೆದರು. ಆಝಾನ್‌ ಕೂಗುವ ಸಮಯಕ್ಕೆ ಸರಿಯಾಗಿ ದೇವಸ್ಥಾನಗಳಲ್ಲಿ ಹನುಮಾನ್‌ ಚಾಲೀಸ್‌, ದೇವರನಾಮ, ಮಂತ್ರಘೋಷ ಮೊಳಗಿಸುವ ಯತ್ನ ನಡೆಯಿತು. ರಾತ್ರಿ ಹತ್ತರಿಂದ ಬೆಳಿಗ್ಗೆ 6ರವರೆಗೆ ಮೈಕ್‌ನಿಷೇಧ ಮಾಡಿ ಸರ್ಕಾರ ಆದೇಶ ಹೊರಡಿಸಿತು. ಬೆಳಿಗ್ಗೆ 5ರ ಬದಲು 6ಕ್ಕೆ ಆಝಾನ್‌ ಕೂಗುವ ನಿರ್ಧಾರವನ್ನು ಮುಸ್ಲಿಂ ಸಮುದಾಯದ ಮುಖಂಡರು ಪ್ರಕಟಿಸಿದರು. ಅಲ್ಲಿಗೆ ಆಝಾನ್‌ ವರ್ಸಸ್‌ ಹನುಮಾನ್‌ ಚಾಲೀಸ್‌ ಅಭಿಯಾನ ಠುಸ್‌ ಪಟಾಕಿಯಂತಾಯ್ತು. ಈಗ ರಾತ್ರಿ ಹೊತ್ತು ನಡೆಯುವ ಜಾತ್ರೆ, ಯಕ್ಷಗಾನ, ನಾಟಕ, ಭೂತದ ಕೋಲ, ಮದುವೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೈಕ್ ನಿಷೇಧದ ಕರಿನೆರಳು ಬಿದ್ದಿದೆ. ಈ ನಿಯಮ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆ ಎಂಬುದು ಮುಂದಿರುವ ಪ್ರಶ್ನೆ.

Image
hanuman chalis

ಸಂಘಟನೆಗಳ ಅಭಿಯಾನಗಳಿಗೂ, ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪದೇ ಪದೇ ಹೇಳಿದ ಸರ್ಕಾರ, ಮಂತ್ರಿಗಳು ತಮ್ಮ ವ್ಯಾಪ್ತಿಯಲ್ಲಿ ಕೋಮುದ್ವೇಷದ ಅಭಿಯಾನಗಳನ್ನು ನಡೆಸದಂತೆ ತಡೆಯಲಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ, ಜನರ ಭಾವನೆಗಳನ್ನು ನಾವು ತಡೆಯುವಂತಿಲ್ಲ, ಸಂಘಟನೆಗಳ ಅಭಿಪ್ರಾಯವನ್ನು ವಿರೋಧಿಸಲ್ಲ ಎಂಬಂತಹ ಹೇಳಿಕೆಗಳನ್ನು ಕೊಟ್ಟು ಹಿಂಬಾಗಿಲಿನಿಂದ ಬೆಂಬಲ ನೀಡಿದರು. ಕಿಡಿಗೇಡಿಗಳ ವಿರುದ್ಧ ಯಾವ ಕಾನೂನು ಕ್ರಮವನ್ನೂ ಜರುಗಿಸಲಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ ಎಂದು ಗೃಹಸಚಿವರು, ಮುಖ್ಯಮಂತ್ರಿ ಕೂಡಾ ಹೇಳಿದ್ದರು. ಅವರ ಪ್ರಕಾರ ಒಂದು ಸಮುದಾಯದ ಹೊಟ್ಟೆಗೆ ಹೊಡೆಯುವುದು ಯಾವ ಕಾನೂನು ಸುವ್ಯವಸ್ಥೆಯ ವ್ಯಾಪ್ತಿಯೊಳಗೆ ಬರುತ್ತದೆ?

ಇದನ್ನು ಓದಿದ್ದೀರಾ? ಇದು ನಮ್ಮ ಸೌಹಾರ್ದ|ಹಿಂದೂ-ಮುಸ್ಲಿಮರ ಸಾಮರಸ್ಯ ತಾಣ ಶಿವಮೊಗ್ಗದ ಹಣಗೆರೆಕಟ್ಟೆ

ಮಾಧ್ಯಮ ಪ್ರೇರಿತ ಅಭಿಯಾನ
ಜವಾಬ್ದಾರಿ ಮರೆತ ಕನ್ನಡ ದೃಶ್ಯ ಮಾಧ್ಯಮಗಳು ರಾಜ್ಯದ ಜನರ ನೈಜ ಸಮಸ್ಯೆಗಳನ್ನು ಬದಿಗಿಟ್ಟು ದಿನವಿಡೀ ಎರಡು ಕಡೆಯ ಕೋಮುವಾದಿಗಳನ್ನು ಕೂರಿಸಿಕೊಂಡು ವಾರಗಟ್ಟಲೆ ಚರ್ಚೆ ಮಾಡಿದರು. ಕೋಮುವಾದಿಗಳ ಜೊತೆ ಸೇರಿಕೊಂಡು ಎಷ್ಟು ಸಾಧ್ಯವೋ ಅಷ್ಟು ವಿಷ ಕಾರಿದವು. ಹಿಜಾಬ್‌ವಿಚಾರದಲ್ಲಿ ಉಡುಪಿಯ ಕಾಲೇಜಿನ ಮುಂದೆ ಪ್ರತಿಭಟನೆಗಿಳಿದ ಕೇಸರಿ ಶಾಲಿನ ಹುಡುಗರಿಗೆ ಜೈಶ್ರೀರಾಮ್‌ ಘೋಷಣೆ ಕೂಗುವಂತೆ ದೃಶ್ಯಮಾಧ್ಯಮದ ವರದಿಗಾರನೊಬ್ಬ ಪ್ರೇರೇಪಿಸಿದ ದೃಶ್ಯ ಅವರದೇ ಕ್ಯಾಮೆರಾದಲ್ಲಿ ಸೆರೆಯಾಗಿ ವೈರಲ್‌ ಆಗಿತ್ತು. ಹಿಜಾಬ್‌ ಹಾಕಿರುವ ಹೆಣ್ಣುಮಕ್ಕಳನ್ನು ಅಟ್ಟಿಸಿಕೊಂಡು ಹೋಗಿ ಚಿತ್ರೀಕರಿಸಿದ ಕೆಲವು ಕಿಡಿಗೇಡಿ ವರದಿಗಾರರು ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡರು.

ಸ್ಟುಡಿಯೊದಲ್ಲಿ ಕುಳಿತು ಬಾಯಿಗೆ ಬಂದಂತೆ ಬಡಬಡಿಸಿದ ದೃಶ್ಯ ಮಾಧ್ಯಮಗಳ ಮಂದಿ ಇಡೀ ರಾಜ್ಯ ಕೋಮುದ್ವೇಷದಲ್ಲಿ ಹೊತ್ತಿ ಉರಿಯುತಿದೆ ಎಂಬಂತೆ ಬಿಂಬಿಸಿದರು. ಆದರೆ, ಸಹಬಾಳ್ವೆ ಈ ನೆಲದ ಗುಣ ಎಂಬುದನ್ನು ಸಾಮಾನ್ಯ ಜನ ಬದುಕಿ ತೋರಿಸಿದರು. ದ್ವೇಷದ ಅಭಿಯಾನವನ್ನು ಮುಣ್ಣುಮುಕ್ಕಿಸಿದ ಜನ, ದೃಶ್ಯ ಮಾಧ್ಯಮಗಳ ಟಿಆರ್‌ಪಿಯನ್ನೂ ಪಾತಾಳಕ್ಕೆ ಇಳಿಸಿದರು.

ನಿಮಗೆ ಏನು ಅನ್ನಿಸ್ತು?
21 ವೋಟ್