ಜೈಲಿನಲ್ಲಿ ಬಡವರ ಮಕ್ಕಳು, ವಿದೇಶದಲ್ಲಿ ನಾಯಕರ ಮಕ್ಕಳು

sangi protest

ನಮ್ಮ ಆಯುಸ್ಸನ್ನು ಬೇಡದ ವಿಚಾರಗಳಿಗೆ ವ್ಯಯಿಸಿ ಶಾಂತಿ ಸಮಾಧಾನ ಕಳೆದುಕೊಂಡು ಸದಾ ಅಭದ್ರತೆಯಲ್ಲಿ ಬದುಕುವುದರಲ್ಲಿ ಏನು ಸಂತೋಷ ಇದೆ? ಸತ್ತ ಮೇಲೆ ಇದೆ ಎನ್ನುವ ಸ್ವರ್ಗಸುಖದ ಭ್ರಮೆಯಿಂದ ಹೊರಬಂದು, ಎಲ್ಲಾ ಜನರ ಜತೆ ಸೌಹಾರ್ದತೆಯಿಂದ ಬದುಕಿ ಇಲ್ಲೇ ಸ್ವರ್ಗವನ್ನು ಸೃಷ್ಟಿ ಮಾಡಬಾರದೇಕೆ? ಮನಸ್ಸು ಮಾಡಿದರೆ ಅದು ಕಷ್ಟವೇನಲ್ಲ

ಕರಾವಳಿಯಲ್ಲಿ ಕೋಮುಗಲಭೆ ಪ್ರಕರಣಗಳಲ್ಲಿ ಜೈಲು ಪಾಲಾಗುವವರು ಬಡ ಹಿಂದುಳಿದ ವರ್ಗಗಳ ಯುವಕರು ಮತ್ತು ಮುಸ್ಲಿಂ ಯುವಕರು. ಮೇಲ್ವರ್ಗದವರು ಯಾರೂ ಶಿಕ್ಷೆ ಅನುಭವಿಸಲ್ಲ. ಶ್ರೀಮಂತ ಮುಸ್ಲಿಮರೂ ಅಷ್ಟೇ, ಸೇಫ್‌ ಝೋನ್‌ನಲ್ಲಿರುತ್ತಾರೆ. ಬಲಿಷ್ಟ ಮುಸ್ಲಿಮರಿಗೆ ಹಿಂದುತ್ವದ ಪ್ರತಿಪಾದಕ ನಾಯಕರ ಜತೆ ಒಳ್ಳೆಯ ಸಂಬಂಧ ಇದೆ. ವ್ಯಾಪಾರ ವಹಿವಾಟೂ ಇರುತ್ತದೆ. ಕರಾವಳಿಯಲ್ಲಿ ಇಂತಹ ಹತ್ತಾರು ಉದಾಹರಣೆಗಳು ಸಿಗುತ್ತವೆ. ಅವರ ನಡುವೆ ಯಾವುದೇ ವ್ಯತ್ಯಾಸವೂ ಇಲ್ಲ. 

ಮುಸ್ಲಿಂ, ಕ್ರಿಶ್ಚಿಯನ್ನರ ದೇಶಗಳಲ್ಲಿ ಮೇಲ್ವರ್ಗದ ಮಕ್ಕಳು ಕೈತುಂಬ ಸಂಬಳ ತರುವ ಕೆಲಸ ಮಾಡಿಕೊಂಡು ಸುಖ ಜೀವನ ನಡೆಸುತಿದ್ದಾರೆ. ಅವರಿಗೆ‌ ಅಲ್ಲಿ ಯಾವ ತೊಂದರೆಯೂ ಇಲ್ಲ. ಇಲ್ಲಿ ಹಿಜಾಬ್ ನಿಷೇದ, ಹಲಾಲ್ ಬೇಡ, ಆಝಾನ್ ನಿಲ್ಸಿ, ಮುಸ್ಲಿಂ ವ್ಯಾಪಾರಿಯ ಮಾವು ಬೇಡ, ಮುಸ್ಲಿಮರ ಅಂಗಡಿಯ ಚಿನ್ನ ಬೇಡ... ಇದು ಮುಗಿಯುವುದೇ ಇಲ್ಲ. ಆದರೆ, ಹಿಂದುತ್ವವನ್ನು ಮೆರೆಸುವ, ಬೀದಿಯಲ್ಲಿ ಕಾದಾಡುವ ಹೆಚ್ಚಿನವರು ವಿದ್ಯೆ ವಂಚಿತರು. ವಸತಿ ವಂಚಿತರು.

ಗೋಮಾಂಸ ವಿದೇಶಕ್ಕೆ ರಫ್ತು ಮಾಡುವ ಕಂಪನಿಗಳಲ್ಲಿ ಬ್ರಾಹ್ಮಣರು ಮತ್ತು ಜೈನರದ್ದೇ ಹೆಚ್ಚಿನವು. ಅದರ ಬಗ್ಗೆ ದ್ವನಿ ಎತ್ತಲಾಗುತ್ತಿಲ್ಲ. ಅಂಬಾನಿ‌ ಅದಾನಿಗಳ ಚಿಕನ್ ಸೆಂಟರ್‌ ಗಳ ಬಗ್ಗೆ ಮಾತನಾಡುವಂತೆ ಇಲ್ಲ. ಯಾರೋ ಬಡವ ಹೊಟ್ಟೆ ಪಾಡಿಗೆ ದೇವಸ್ಥಾನದ ಬಳಿ ಕಲ್ಲಂಗಡಿ ವ್ಯಾಪಾರ ಮಾಡಿದರೆ ಪ್ರತಿಭಟನೆ ಮಾಡುತ್ತಾರೆ. ಎಂತಹ ದ್ವಂದ್ವ ನಡವಳಿಕೆಯಿದು!

ಇದೇ ತೆರನಾಗಿ ಅನ್ಯ ಧರ್ಮೀಯರ ಬಗ್ಗೆ ಅಸಹನೆ ದ್ವೇಷ ಬೆಳೆಸಿಕೊಂಡರೆ, ವಿದೇಶದಲ್ಲಿ ದುಡಿಯುವ ಹಿಂದೂಗಳು ನೆಮ್ಮದಿಯಿಂದ ಇರಲು ಸಾಧ್ಯವೇ ಎಂದು ಒಂದು ಕ್ಷಣ ಯೋಚಿಸಬೇಕು. ನಮ್ಮ ಆಯುಸ್ಸನ್ನು ಬೇಡದ ವಿಚಾರಗಳಿಗೆ ವ್ಯಯಿಸಿ ಶಾಂತಿ ಸಮಾಧಾನ ಕಳಕೊಂಡು ಸದಾ ಅಭದ್ರತೆಯಲ್ಲಿ ಬದುಕುವುದರಲ್ಲಿ ಏನು ಸಂತೋಷ ಇದೆ? ಸತ್ತ ಮೇಲೆ ಇದೆ ಎನ್ನುವ ಸ್ವರ್ಗ ಸುಖದ ಭ್ರಮೆಯಿಂದ ಹೊರಬಂದು ಎಲ್ಲಾ ಜನರ ಜತೆ ಸೌಹಾರ್ದತೆಯಿಂದ ಬದುಕಿ ಇಲ್ಲೇ ಸ್ವರ್ಗವನ್ನು ಸೃಷ್ಟಿ ಮಾಡಬಾರದೇಕೆ? ಈ ಜಗತ್ತಿನಲ್ಲಿ ಹಿಂಸೆಯಿಂದ ಗೆದ್ದವರಿಲ್ಲ. ಪ್ರೀತಿಗೆ ಸೋಲದವರಿಲ್ಲ ಎಂಬುದನ್ನು ಅರಿಯೋಣ

ಈಗ ಇಲ್ಲಿ ನಡೆಯುತ್ತಿರೋದು ಎಲ್ಲಾ ಕ್ಷಣಿಕ. ಪ್ರಕೃತಿ ಇದನ್ನು ಒಪ್ಪುವುದಿಲ್ಲ. ಪ್ರಕೃತಿಯನ್ನು ಎದುರಿಸಿ ಬದುಕಲು ಯಾರಿಗೂ ಸಾಧ್ಯ ಇಲ್ಲ ಎಂಬುದನ್ನು ಮೊದಲು ತಿಳಿಯೋಣ. ಜನರಿಗೆ ಈಗ ನಿಧಾನವಾಗಿ ಅರಿವಾಗುತ್ತಿದೆ. ಸಹಬಾಳ್ವೆಯ ಅಗತ್ಯ ಗೊತ್ತಾಗುತ್ತಿದೆ. ಸೂರ್ಯನನ್ನು ಕರಿಮೋಡ ಎಷ್ಟು ಸಮಯ ಮರೆ ಮಾಡಬಹುದು?

ಹಿಂದೂ ಅರಸರಿಗೆ ಮುಸ್ಲಿಂ ಮಂತ್ರಿಗಳು

ವಿವಿಧತೆಯಲ್ಲಿ ಏಕತೆ. ಇದು ನಮ್ಮ ಭಾರತದ ಮೂಲ ತತ್ವ. ಸ್ವಾತಂತ್ರ್ಯಕ್ಕಿಂತ ಹಿಂದೆ ತುಂಡರಸರು ಆಳುತ್ತಿದ್ದಾಗಲೂ ಎಲ್ಲಾ ಸಾಮ್ರಾಜ್ಯಗಳು ಎಲ್ಲಾ ಧರ್ಮದ ಜನರಿಗೂ ಸಮಾನ ಅವಕಾಶ ಕೊಟ್ಟಿದ್ದವು. ರಾಜ್ಯ ವಿಸ್ತರಣೆ, ಅಭಿವೃದ್ಧಿ ಆಗಿನ ಅರಸರ ಗುರಿಯಾಗಿತ್ತು. ಧರ್ಮದ ವಿಸ್ತರಣೆ ಅವರಿಗೆ ಮುಖ್ಯ ಆಗಿರಲಿಲ್ಲ. ಹಿಂದೂ ಅರಸರ ಆಡಳಿತದಲ್ಲಿ ಮುಸ್ಲಿಂ ಮಂತ್ರಿಗಳು, ಸೈನ್ಯಾಧಿಕಾರಿಗಳು, ಮುಸ್ಲಿಂ ಅರಸರ ಆಡಳಿತದಲ್ಲಿ ಹಿಂದೂ ಮಂತ್ರಿಗಳು ಸೈನ್ಯಾಧಿಕಾರಿಗಳು ಇದ್ದದ್ದು ಇದಕ್ಕೆ ಸಾಕ್ಷಿ. ನಾಗರಿಕತೆ, ತಂತ್ರಜ್ಞಾನ ಅಷ್ಟೊಂದು ಇಲ್ಲದ ಕಾಲದಲ್ಲಿಯೇ ನಮ್ಮ ಹಿರಿಯರು ಅದೆಷ್ಟು ಸೌಹಾರ್ದತೆಯಿಂದ ಬದುಕಿದ್ದಾರೆ! ಈಗ ನಾವು ಶತಮಾನಗಳ ಹಿಂದೆ ಆಳಿ ಅಳಿದು ಹೋದವರ ಸಮಾಧಿಗಳನ್ನು ಅಗೆಯುವ ಕೆಲಸ ಮಾಡುತ್ತಿದ್ದೇವೆ. ಅರಸರ ಧರ್ಮ ಹುಡುಕಿ ಕ್ರೂರಿ, ಮತಾಂಧ, ಭಾಷಾ ದ್ರೋಹಿ ಎಂಬೆಲ್ಲ ಬಿರುದು ಕೊಡುತ್ತಿದ್ದೇವೆ. ಅದೇ ಸಮಯದಲ್ಲಿ ನಮ್ಮ ಧರ್ಮಕ್ಕೆ ಸೇರಿದ ಅರಸರು, ನಾಯಕರ ಬಗ್ಗೆ ಶ್ರೇಷ್ಠತೆಯ ವ್ಯಸನಕ್ಕೆ ಒಳಗಾಗುತ್ತಿದ್ದೇವೆ.

ಸ್ವಾತಂತ್ರ ಭಾರತದಲ್ಲಿ ಅಧಿಕಾರ ಹಿಡಿಯಲು ಮತ ಧರ್ಮವನ್ನು ಇತ್ತೀಚಿನ ದಿನಗಳಲ್ಲಿ ಮುಂದೆ ಮಾಡಲಾಗಿದೆ. ಸಹಬಾಳ್ವೆ ಗೆ ಕೋಮುವಾದದ ಅಮಲು ಪದಾರ್ಥ ಸೇರಿಸಿ ಅಶಾಂತಿ ನಿರ್ಮಾಣ ಮಾಡಲಾಗುತ್ತಿದೆ. ದೇವನೊಬ್ಬ ನಾಮ ಹಲವು, ವಸುದೈವ ಕುಟುಂಬ,ಮಾನವ ತಾನೊಂದೇ ಕುಲ, ಒಂದೇಜಾತಿ ಒಂದೇ ಮತ ಒಂದೇ ದೇವರು ಎಂಬ ತತ್ವಗಳಿಗೆ ಅವಮಾನ ಮಾಡಲಾಗುತ್ತಿದೆ. ಇದರಿಂದಾಗಿ ಹಿಂಸೆ ಘರ್ಷಣೆ ಉಂಟಾಗಿ ಅಪನಂಬಿಕೆ ಬೆಳೆದು ಅಭಿವೃದ್ಧಿಯಲ್ಲಿ ಹಿಂದೆ ಬೀಳುತಿದ್ದೇವೆ.

ಇದನ್ನು ಓದಿದ್ದೀರಾ? ಕಳೆದಾರು ತಿಂಗಳ ʼದ್ವೇಷʼದ ಅಭಿಯಾನಕ್ಕೆ ಹಿಂದೂಗಳ ಪ್ರತಿಕ್ರಿಯೆ ಏನಾಗಿತ್ತು?

ಹಿಂದೂ ಮುಸ್ಲಿಮರಲ್ಲಿ ವೈಮನಸ್ಯ ಉಂಟು ಮಾಡಿ ಅದನ್ನು ಮತಗಳಾಗಿ ಪರಿವರ್ತನೆ ಮಾಡಿ ಅಧಿಕಾರ ಹಿಡಿಯುವ ಹುನ್ನಾರ ಬಿಜೆಪಿಯದ್ದು. ಇದಕ್ಕಾಗಿ ಹಿಂದೂ ಸಂಘಟನೆಗಳನ್ನು ಉಪಯೋಗ ಮಾಡಿಕೊಂಡಿದೆ. ಕೆಲಸಕ್ಕೆ ಬಾರದ ಅಜೆಂಡಾಗಳನ್ನು ಮುಂದಿಟ್ಟು ಕೋಮುಸಾಮರಸ್ಯ ಕದಡಲು ಹೊರಟಿದೆ. ಚುನಾವಣಾ ಸಮಯದಲ್ಲಿ ಇದನ್ನು ಬೃಹತ್ ಮಟ್ಟದಲ್ಲಿ ಪ್ರಚಾರ ನಡೆಸಿ ಹಿಂದೂಗಳ ಮನಸ್ಸಿನಲ್ಲಿ ಗೊಂದಲ ಸೃಷ್ಟಿ ಮಾಡುವ ತನ್ಮೂಲಕ ಮತಗಳಿಸಿ ಅಧಿಕಾರ ಪಡೆವ ಅದರ ತಂತ್ರ ಜನರಿಗೆ ಈಗ ಅರಿವಾಗಿದೆ.

ಮುಸ್ಲಿಮರ ರಂಝಾನ್‌ ಉಪವಾಸದ ಸಮಯದಲ್ಲಿ ಇಷ್ಟು ವರ್ಷಗಳಲ್ಲಿ ನಡೆಯದಷ್ಟು ಇಫ್ತಾರ್ ಕೂಟಗಳು ನಡೆದವು. ವಾಡಿಕೆಯ ಪ್ರಕಾರ ಮುಸ್ಲಿಮರೇ ಇಫ್ತಾರ್ ಆಯೋಜಿಸುವುದು. ಆದರೆ ಈ ಬಾರಿ ಹಿಂದೂಗಳು‌ ರಾಜ್ಯದಾದ್ಯಂತ ಇಫ್ತಾರ್ ಆಯೋಜಿಸಿ ಮುಸ್ಲಿಮರನ್ನು ಕರೆದು ಸತ್ಕರಿಸಿದರು. ಮುಸಲ್ಮಾನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಸ್ಪಂದಿಸಿದ್ದಾರೆ‌. ಎರಡೂ ಕಡೆ ತಪ್ಪುಗಳು ಆಗದಂತೆ ಧಾರ್ಮಿಕ ಮುಖಂಡರು ರಾಜಕೀಯ ನೇತಾರರು ಪ್ರಯತ್ನ ಮಾಡಿ‌ ಶಾಂತಿ ಕಾಪಾಡಬೇಕಾಗಿದೆ. ಅಷ್ಟಾದರೆ ಸಾಕು, ಮಿಕ್ಕಂತೆ ಜನ ಸಹಜವಾಗಿಯೇ ಸೌಹಾರ್ದಪ್ರಿಯರು.

ನಿಮಗೆ ಏನು ಅನ್ನಿಸ್ತು?
4 ವೋಟ್