"ಅವನಿಗೆ ನಾನೇ ಅಲ್ಲಾಹು, ನನಗೆ ಅವನೇ ಈಶ್ವರ"

preethi ೧೧

ನನ್ನ ಶಂಖನಾದ ಅವನಿಗೆ ಕಿರಿಕಿರಿ ಮಾಡಲಿಲ್ಲ, ಅವನ ಅಜಾನ್ ನನಗೆ ಕಿರಿಕಿರಿ ತಂದಿಲ್ಲ. ಆದರೂ ಜನ ಮಂದಿರ, ಮಸೀದಿ ಅಂತ ಬಡಿದಾಡಿಕೊಳ್ಳುತ್ತಾರೆ. ಅಂದರೆ ಸಮಸ್ಯೆ ರಾಜಕೀಯ ಪಕ್ಷದ್ದು ಅನ್ನುವ ಚಿಕ್ಕ ವಿಷಯ ಜನರಿಗೆ ತಿಳಿಯದೇ ಹೋಯಿತಲ್ಲಾ ಅನ್ನೋದೆ ನೋವಿನ ಸಂಗತಿ. ಆದರೆ, ದೇವರಂತಹ ಗೆಳೆಯ ಹೆಗಲಿಗೆ ಕೈ ಹಾಕಿರುವಾಗ ಇನ್ನೇನು ಬೇಕು!

ನನ್ನ ಹೆಸರು ಗಣೇಶ್, ಧರ್ಮ ಬೇಕಿಲ್ಲ ಜಾತಿ ಹೇಳಬೇಕೆಂದರೆ ಈ ದೇಶದ ಅಪ್ಪಟ ಮೂಲನಿವಾಸಿಗಳಾದ ದಲಿತ. ನನ್ನ ಊರು ಉಡುಪಿ ಸಮೀಪದ ಹೆರ್ಗಾ ಗ್ರಾಮ, ನನ್ನ ಬಾಲ್ಯದ ವಿಧ್ಯಾಭ್ಯಾಸ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೆಟ್ಟಿಬೆಟ್ಟು ನಲ್ಲಿ ನಡೆದರೆ ಪದವಿ ಶಿಕ್ಷಣ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿ ನಡೆಯಿತು. ಜಾತಿಯಲ್ಲಿ ದಲಿತರಾದ ನನಗೆ ಈ ಕಾಲೇಜಿನಲ್ಲಿ ಯಾರು ಪರಿಚಿತರಿರಲಿಲ್ಲ ಹೀಗಿರುವಾಗ ನನ್ನ ನೋಟ ತುಂಬಾ ಬಿಳಿ ವರ್ಣದ ಮುಸ್ಲಿಂ ಹುಡುಗನ ಮೇಲೆ ಬಿತ್ತು ಆತನ ಹೆಸರೇ ಶಿಹಾಬ್ ಅಲಿ. ಆತ ನನ್ನ ನೋಡಿ ನನ್ನ ಪರಿಚಯ ಮಾಡಿಕೊಂಡ ಈ ನಮ್ಮ ಪ್ರಥಮ ಬೇಟಿಯು ಇಷ್ಟು ಗಟ್ಟಿಯಾಗಲು ಹಲವು ಕಾರಣಗಳನ್ನು ಖಂಡಿತ ಕೊಡುತ್ತೇನೆ.

Eedina App

ಮನೆಯಿಂದ ಹೊರಟ ನಾವು ಮೊದಲು ಜೊತೆಯಾಗುತ್ತಿದ್ದದೇ ಕೃಷ್ಣ ನಗರಿ ಉಡುಪಿಯಲ್ಲಿ. ಬೆಳಗ್ಗಿನ ಮುಗಳ್ನಗೆಯೊಂದಿಗೆ ಬೇಟಿಯಾಗಿ ಮುಂದಿನ ಪಯಣಕ್ಕೆ ಬಸ್ ಕಾಯುತ್ತಿದ್ದವು. ಆಗ ಅದೇ ರಸ್ತೆಯಲ್ಲಿ ಆಕ್ಸಿಡೆಂಟ್ ಆಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಹೆಂಡತಿಯನ್ನು ಕಾಪಾಡಲು ಆಕೆಯ ಗಂಡ ಎಲ್ಲರನ್ನೂ ಕೈ ಮುಗಿದು ಕೇಳುವಾಗ ಯಾರು ಅವರ ಸಮೀಪಕ್ಕೆ ಬರಲಿಲ್ಲ. ನನ್ನ ಈ ಮುಸ್ಲಿಂ ಸ್ನೇಹಿತ ನನ್ನ ಬಳಿ ಓಡಿ ಬಂದು ಆ ಅಪರಿಚಿತರನ್ನು ಕಾಪಾಡೋಣ ಎಂದಾಗ ಆತನ ಮಾನವೀಯತೆಯ ಮೊದಲ ಪರಿಚಯ ನನಗಾಯಿತು. ಆದರೆ ನಾವು ಅಲ್ಲಿ ತಲುಪುವಾಗ ನನ್ನ ಜೀವನದಲ್ಲಿ ಮೊದಲ ಬಾರಿಗೆ ಅಂತಹ ಭಯಾನಕ ದೃಶ್ಯ ಕಂಡು ಗಾಬರಿಯಿಂದ ನಿಂತು ಬಿಟ್ಟೆ. ನನ್ನ ಗೆಳೆಯ ನನ್ನನ್ನು ಮತ್ತೆ ಮತ್ತೆ ಎಚ್ಚರಿಸಿ ರಕ್ಷಣೆಗೆ ಕೂಗಿದಾಗ ಇನ್ನೇನೂ ಅವರನ್ನು ಎತ್ತಿಕೊಳ್ಳಬೇಕು ಅನ್ನುವಾಗ ಆಕೆ ಮೌನವಾಗಿದ್ದರು. ನಮಗೆ ಆ ಎರಡು ದಿನ ಏನೋ ಒಂಥರ ವೇದನೆ ಆವರಿಸಿತ್ತು. ಅದರಿಂದ ಹೊರಗೆ ಬರಲು ನನಗೆ ಮಾನಸಿಕವಾಗಿ ಧೈರ್ಯ ತುಂಬಿದ್ದೆ ನನ್ನ ಗೆಳೆಯ. 

ಮುಂದೆ ನಾನು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ನಾಯಕನಾಗಬೇಕೆಂದಾಗ ನನ್ನ ಜಾತಿ ನೋಡಿ ನನ್ನ ಹಿಂದು ಧರ್ಮದವರೇ ಹಿಂಜರಿದರು. ಆಗ ನನ್ನ ಜೊತೆ ನಿಂತು ನನ್ನನ್ನು ನಾಯಕನಾಗಿ ಮಾಡಿದ್ದೆ ಈ ನನ್ನ ಸ್ನೇಹಿತ ಶಿಹಾಬ್ ಅಲಿ. ಕಲ್ಚರಲ್ ಕಾರ್ಯಕ್ರಮ ಮಾಡುವ ಹಾಗು ಇನ್ನಿತರ ಜವಾಬ್ದಾರಿ ನನ್ನ ಹೆಗಲೇರಿದಾಗ ಹೊಸದಾಗಿ ಕಟ್ಟಿದ ಕಾಲೇಜಿನಲ್ಲಿ ನಮಗೆ ವೇದಿಕೆ ಇರಲಿಲ್ಲ. ಇಂತಹ ಕಠಿಣ ಸಮಯದಲ್ಲಿ ಅತೀ ಜಾಣತನದಿಂದ ಅದೇ ಕಾಲೇಜಿನಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡುವಲ್ಲಿ ನನಗೆ ಜೊತೆಯಾಗಿ ನಿಂತವನೆ ನನ್ನ ಪ್ರಾಣ ಸ್ನೇಹಿತ.

AV Eye Hospital ad

ಹೀಗೆ ಕಾಲೇಜಿನಲ್ಲಿ ನಮ್ಮ ಪಯಣ ಸಾಗುವಾಗ ಎಂದಿನಂತೆ ಮುಸ್ಲಿಂ ದ್ವೇಷಿ ಕೆಲವು ಸ್ನೇಹಿತರು ನಮ್ಮ ಮಧ್ಯೆ ಬಿರುಕು ಮೂಡಿಸುವ ಸಲುವಾಗಿ ನಾನು ಅನಾರೋಗ್ಯದ ಕಾರಣದಿಂದ ಕಾಲೇಜಿಗೆ ಬಾರದಿದ್ದಾಗ ಆತನ ಬಳಿ ನನ್ನ ಬಗ್ಗೆ ದ್ವೇಷ ಭಾವನೆ ಹುಟ್ಟಿಸುವಲ್ಲಿ ಸಫಲರಾಗಬೇಕು ಎನ್ನುವಷ್ಟರಲ್ಲಿ, ಆತ ನೇರವಾಗಿ ನನ್ನ ಮನೆಗೆ ಬಂದು ಅಲ್ಲಿ ನಡೆಯುವ ಅಧಿಕಪ್ರಸಂಗದ ಸಂಗತಿಯನ್ನು ನನಗೆ ತಿಳಿಸಿದ. ಇದರಿಂದ ಆತ ನೇರ ನಡೆನುಡಿಯ ವ್ಯಕ್ತಿ ಅನ್ನೋದು ನನ್ನ ಅರಿವಿಗೆ ಬಂತು. ಹಾಗೆ ಮರುದಿನ ನಾವು ಜೊತೆಯಾಗಿ ಕಾಲೇಜಿಗೆ ಹೋದಾಗ ಇದೇ ಮುಸ್ಲಿಂ ದ್ವೇಷಿಗಳು ಹತಾಶಾರಾಗಿ ಹೋಗಿದ್ದರು. ಇಂದಿಗೂ ನನ್ನ ಕಾಲೇಜಿನ ಸಿಬ್ಬಂದಿಗಳಿರಬಹುದು, ಬಸ್ಸಿನ ಚಾಲಕರು, ಕಂಡಕ್ಟರ್ ಎಲ್ಲರೂ ನಮ್ಮ ಸ್ನೇಹಕ್ಕೆ ತಲೆಬಾಗಿದವರೇ ಅನ್ನೋದು ನಮಗೆ ಹೆಮ್ಮೆಯ ವಿಚಾರ. ಈಗಲೂ ನಾವು ನಮ್ಮ ಕಾಲೇಜಿನ ಪರಿಸರಕ್ಕೆ ಹೋದಾಗ ಅಲ್ಲಿನ ಪ್ರತಿಯೊಬ್ಬರು ನೀವೂ ಇನ್ನು ಜೊತೆಯಾಗಿರೋದು ನೋಡಿದರೆ ತುಂಬಾ ಖುಷಿಯಾಗುತ್ತೆ ಅನ್ನುವಾಗ ನಮಗೆ ನಮ್ಮ ಮೇಲೆ ಅತೀವ ಖುಷಿಯಾಗುತ್ತೆ. ನಮ್ಮ ಹೆಸರಲ್ಲೇ ನಾವು ಹಿಂದು- ಮುಸ್ಲಿಂ ಅಂತ ಕಂಡುಹಿಡಿಯಬೇಕಿತ್ತೇ ವಿನಃ ನಮ್ಮ ಆಚಾರವಿಚಾರಗಳಿಂದ ಅಲ್ಲ. ನಮ್ಮ ಕಾಲೇಜಿನಲ್ಲಿ ʼರಕ್ತದಾನ ಶಿಬಿರʼ ಆಯೋಜನೆ ಮಾಡಲು ನನ್ನಲ್ಲಿ ಮನವಿ ಮಾಡಿ ಮುಂದೆ ಅದು ಪ್ರಾಂಶುಪಾಲರ ಗಮನಕ್ಕೆ ತಂದು, ಇಡೀ ಕಾಲೇಜಿನವರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ್ದು ನಮ್ಮ ಸಾಧನೆಗಳಲ್ಲಿ ಒಂದು.

ಮಧ್ಯದಲ್ಲಿರುವವರು ಶಿಬಾಹ್‌ ಅಲಿ
ಹಿಂದೂ ಸ್ನೇಹಿತರಾದ ಮಂಜುನಾಥ ಮತ್ತು ಗಣೇಶರ ಜೊತೆ ಶಿಹಾಬ್ ಅಲಿ (ಮಧ್ಯದಲ್ಲಿರುವವರು) 

ನನ್ನ ಮನೆಯವರು ನನ್ನ ಹುಟ್ಟುಹಬ್ಬ ಆಚರಿಸದಿದ್ದರೂ, ನನ್ನ ಚಿಕ್ಕ ಮನೆಗೆ ಕೇಕ್ ತಂದು ಸರಳವಾಗಿ ಹುಟ್ಟು ಹಬ್ಬದ ಆಚರಿಸಿದವ ಅವನೇ ಶ್ರೀಮಾನ್ ಶಿಹಾಬ್ ಅಲಿ. ಆತ ಇಂದಿಗೂ ನನ್ನ ಮಾತ್ರವಲ್ಲ ನನ್ನ ಮನೆಯವರೆಲ್ಲರಿಗೂ ಅಚ್ಚುಮೆಚ್ಚಿನ ಗೆಳೆಯ. ರಂಝಾನ್ ಇರಲಿ ಬಕ್ರೀದ್ ಬರಲಿ ಅವನ ಮನೆಯಲ್ಲಿ ನಮಗಾಗಿ ಊಟ ತಯಾರಿರುತ್ತೆ. ಅದರಲ್ಲಿ ನನ್ನ ಮನೆಯವರಿಗೊಂದು ಪಾಲು ಇದ್ದೇ ಇರುತ್ತದೆ. ಹಾಗೆ ನಮ್ಮ ದೀಪಾವಳಿ ಹಬ್ಬದ ಸಮಯದಲ್ಲಿ ಕೂಡ ನನ್ನ ಮನೆಯಿಂದ ಮುಸ್ಲಿಂ ಸ್ನೇಹಿತನಿಗೆ ಸಿಹಿತಿಂಡಿ ಹಾಗು ಅವನ ನೆಚ್ಚಿನ ಬಿರಿಯಾನಿ ಕೊಡುವುದು ನಮ್ಮ ಹವ್ಯಾಸ. ಅದು ಹಲಾಲ್ ಆಗಿರಲಿ ಅಥವಾ ಅಲ್ಲದೇ ಇರಲಿ ಅದು ನಮ್ಮ ಸ್ನೇಹಕ್ಕೆ ಎಂದಿಗೂ ಧಕ್ಕೆ ಆಗಿಲ್ಲ, ನಮಗದು ಹೊಟ್ಟೆ ತುಂಬುವ ಊಟ ಅಷ್ಟೇ. ಧರ್ಮ ಯಾವುದೇ ಇರಲಿ ಹಸಿವು ಎಲ್ಲರಿಗೂ ಒಂದೇ ಅನ್ನುವ ನಮ್ಮಲ್ಲಿ ಇಂದಿಗೂ ಸ್ನೇಹಕ್ಕೆ ಬರವಿಲ್ಲ. ಸ್ನೇಹಿತರ ದಿನ ಅಂತಾ ಬೇರೆಯವರಿಗೆ ಕ್ಯಾಲೆಂಡರ್ ನಲ್ಲಿ ಒಂದು ದಿನವಿದ್ದರೇ ನಮಗೆ ಪ್ರತಿ ದಿನವೂ ಸ್ನೇಹಿತರ ದಿನಾಚರಣೆಯೇ. ಭಾರತದ ಅನೇಕ ಹಿಂದು ದೇವಾಲಯಗಳಿಗೆ ನನ್ನೊಡನೆ ಬಂದ ಹಲವು ಸ್ನೇಹಿತರಲ್ಲಿ ಮುಸ್ಲಿಂ ಅಂದರೆ ಅವನೊಬ್ಬನೇ. ಅವನಿಗೆ ನಾನೇ ಅಲ್ಲಾಹು, ನನಗೆ ಅವನೇ ಈಶ್ವರ.

ಯಾವಾಗ ಭಾರತದ ಜನರ ಭಾವನೆಗಳಲ್ಲಿ ಹಿಂದು ಮುಸ್ಲಿಂ ದ್ವೇಷ ಬೆಳೆಸಲು ರಾಜಕೀಯ ಪಕ್ಷ ಸಫಲವಾಯಿತೋ ಅಂದೇ ಈ ನನ್ನ ಸ್ನೇಹಿತನ ಕುಟುಂಬ ಸ್ವಲ್ಪ ವಿಚಲಿತವಾಯಿತು. ಕಾರಣ ಏನೆಂದರೆ ಎಲ್ಲಿ ನಮ್ಮ ಸ್ನೇಹಕ್ಕೆ ತೊಂದರೇ ಬರುವುದೋ, ಎಲ್ಲಿ ನಾನೂ ಕೂಡ ಮುಸ್ಲಿಂ ದ್ವೇಷದ ಧಂಗೆಯಲ್ಲಿ ಭಾಗಿಯಾಗುತ್ತೆನೋ ಅನ್ನುವ ಭಯದಲ್ಲಿ ಆತನ ತಾಯಿ ನನ್ನ ಸಂಪರ್ಕಿಸಿದಾಗ ಏನೂ ಮಾತಾಡದೆ ನೇರವಾಗಿ ಅವನ ಮನೆಗೆ ನನ್ನ ತಂದೆ ತಾಯಿಯನ್ನು ಕರೆದುಕೊಂಡು ಹೋದೆ. ನನಗೆ ಅವರ ಮೇಲೆ ಇರುವ ಪ್ರೀತಿ ವಿಶ್ವಾಸ ತೋರಿಸಿ, ನನ್ನ ತಂದೆ ತಾಯಿ ನಮಗೆ ದ್ವೇಷ ಭಾವನೆ ಕಲಿಸಿಲ್ಲ ನೀವು ಹೆದರುವ ಅಗತ್ಯ ಇಲ್ಲ ಎಂದಾಗ ಅಲ್ಲಿ ಸಣ್ಣ ಮಟ್ಟದ ಖುಷಿಯ ಕಣ್ಣೀರ ಹನಿಗಳು ನಮ್ಮನ್ನು ಜೊತೆಯಾದವು.

ಹೀಗಿರಲು ಒಂದು ದಿನ ನಮ್ಮ ಜೊತೆಗೆ ಕಲಿತ ಒಬ್ಬಳು ಸ್ನೇಹಿತೆಗೆ ಆರೋಗ್ಯ ಸಮಸ್ಯೆ ಇದ್ದಾಗ ಆಕೆಗಾಗಿ ಹಲವು ಜನರಲ್ಲಿ ಧನ ಸಂಗ್ರಹ ಪಡೆದು ಆಕೆಯ ಚಿಕಿತ್ಸೆಗೆ ಸ್ಪಂದಿಸಿದಾಗ ಆತನ ಮೇಲಿನ ನನ್ನ ನಂಬಿಕೆ ಪ್ರೀತಿ ಇಮ್ಮಡಿ ಆಯಿತು. ಈಗಲೂ ಈ ದರಿದ್ರ ಸಮಾಜದಲ್ಲಿ ಮುಸ್ಲಿಮರೊಂದಿಗೆ ವ್ಯವಹಾರ ಮಾಡಬೇಡಿ ಅನ್ನುವವರಿಗೆ ನಿಜವಾಗಿಯೂ ಯಾವ ದೇವರು ಕೃಪೆ ತೋರಲಾರ. ತಾನು ಬರಿಗೈಯಲ್ಲಿದ್ದರೂ ಕಷ್ಟ ಅಂದವರಿಗೆ ಅದರಲ್ಲೂ ಆರೋಗ್ಯ ಸಮಸ್ಯೆ ಇದೆ ಅಂದವರಿಗೆ ತನ್ನ ಹೆಸರಿನಲ್ಲಿ ಬಡ್ಡಿಗೆ ಹಣ ಪಡೆದು ಬೇರೆಯವರಿಗೆ ಸಹಾಯ ಮಾಡಿದ ನನ್ನ ಗೆಳೆಯ ನನ್ನ ಧರ್ಮಕ್ಕಿಂತಲೂ ದೊಡ್ಡವ.

ನನ್ನ ಜಾತಿ ಆತನಿಗೆ ಸಮಸ್ಯೆ ಆಗಲಿಲ್ಲ

ರಂಝಾನ್ ಹಬ್ಬದಂದು ಅವನ ಮನೆಯಲ್ಲೇ ಊಟ ಮಾಡಿ ಹೊರಗೆ ಬಂದು ಮುಸ್ಲಿಮರ ಬಗ್ಗೆ ದ್ವೇಷ ಕಾರುವ ನಮ್ಮ ಧರ್ಮದ ಜನರನ್ನು ನನ್ನವರೆಂದು ಹೇಳಿಕೊಳ್ಳಲಾರದ ಪರಿಸ್ಥಿತಿ ನನ್ನದು. ನೂರು ಜನ ಜಾತಿವಾದಿ ಸ್ವಧರ್ಮಿಯರಿಗಿಂತ ನನ್ನೊಡನೆ ನಮ್ಮ ದೇವಸ್ಥಾನ ಸುತ್ತಿದ ಈ ಒಬ್ಬ ಗೆಳೆಯ ಸಾಕು ಈ ಜನ್ಮಕ್ಕೆ. ನನ್ನ ಜಾತಿ ಆತನಿಗೆ ಸಮಸ್ಯೆ ಆಗಲಿಲ್ಲ, ನನ್ನ ಬಣ್ಣ ಆತನಿಗೆ ಸಮಸ್ಯೆ ಆಗಲಿಲ್ಲ,ನನ್ನ ಊಟ ಆತನಿಗೆ ಸಮಸ್ಯೆ ಆಗಲಿಲ್ಲ. ಆದರೆ ಇದೆಲ್ಲ ಸಮಸ್ಯೆ ಆಗಿದ್ದು ನನ್ನ ಸ್ವಂತ ಧರ್ಮದವರಿಂದ. ಇಂತಹ ಧರ್ಮವನ್ನು ಅಪ್ಪುವ ಬದಲು ಈ ನನ್ನ ಸ್ನೇಹಿತನ ಅಪ್ಪಿದರೆ ತಪ್ಪೇನು, ಇಂತಹ ಧರ್ಮವನ್ನು ಹೊತ್ತುಕೊಳ್ಳುವ ಬದಲು ನನ್ನ ಸ್ನೇಹಿತನ ಹೊತ್ತರೆ ತಪ್ಪೇನು. ಇಂತಹ ಅಸೂಯೆ ತುಂಬಿದ ಧರ್ಮವನ್ನು ನಂಬುವ ಬದಲು ನನ್ನ ಸ್ನೇಹಿತನ ನಂಬಿದರೆ ತಪ್ಪೇನು? ಕೊರೊನ ಸಮಯದಲ್ಲಿ ನಮ್ಮ ಜೊತೆ ಕಲಿತ ನಮ್ಮ ಸ್ನೇಹಿತೆಯ ಅಪ್ಪ- ಅಮ್ಮ ದಿನಸಿ ವಸ್ತುಗಳಿಗೆ ಪರದಾಡುವಾಗ ಅದನ್ನು ನನ್ನ ಗಮನಕ್ಕೆ ತಂದು ಹೇಗಾದ್ರೂ ಮಾಡಿ ಅವರಿಗೆ ದಿನಸಿ ವಸ್ತುಗಳನ್ನು ತಲುಪಿಸಬೇಕೆಂಬ ಅವನ ಹಂಬಲ ನನ್ನನ್ನು ಇನ್ನೂ ಸಮಾಜಸೇವೆಯೆಡೆಗೆ ದೂಡಿದ್ದು ಸುಳ್ಳಲ್ಲ

Aazan

ಆತನ ಬಗ್ಗೆ ಬರೆಯಲು ಕೂತು ಈ ಮೇಲಿನ ಮಾತುಗಳನ್ನು ಆತನಿಗೆ ಕಳುಹಿಸಿ ಇನ್ನು ನಾನಿಲ್ಲ ಅಂದುಬಿಟ್ಟೆ. ಕ್ಷಣ ಮಾತ್ರದಲ್ಲಿ ನನ್ನ ಮನೆಗೆ ಓಡೋಡಿ ಬಂದು ನನಗೇನಾಯಿತು ಎಂದು ಬೆವತು ಹೋದ ಆತನ ಕಣ್ಣುಗಳು ತೇವಗೊಂಡಿದ್ದವು. ನನ್ನ ಕಂಡೊಡನೆ ಬಿಗಿದಪ್ಪಿ ಇನ್ನೆಂದಿಗೂ ಹಾಗೆ ಹೇಳ್ಬೇಡ ಎಂದ ಸ್ನೇಹಿತನ ನಾ ಏನೆಂದು ಹೊಗಳಲಿ!. ಮನಸ್ಸಿನಲ್ಲಿ ಒಂಚೂರು ಕಲ್ಮಷವಿಲ್ಲದ, ಕಪಟವಿಲ್ಲದ ಆತನ ಜೊತೆಯಿದ್ದರೆ ಸ್ವರ್ಗವೇ ನಮ್ಮ ಕಾಲಡಿ ಇದ್ದಂತೆ. ಮುಂದಿನ ಜನ್ಮ ಗೊತ್ತಿಲ್ಲ. ಇರುವ ಈ ಜನ್ಮದಲ್ಲಿ ನಾನೆಂದಿಗೂ ಮುಸ್ಲಿಂ ದ್ವೇಷಿ ಆಗಲಾರೆ. ನನ್ನ ಶಂಖನಾದ ಅವನಿಗೆ ಕಿರಿಕಿರಿ ಮಾಡಲಿಲ್ಲ, ಅವನ ಅಜಾನ್ ನನಗೆ ಕಿರಿಕಿರಿ ತಂದಿಲ್ಲ. ಆದರೂ ಜನ ಮಂದಿರ ಮಸೀದಿ ಅಂತಾ ಬಡೆದಾಡಿಕೊಳ್ಳುತ್ತಾರೆ. ಅಂದರೆ ಸಮಸ್ಯೆ ರಾಜಕೀಯ ಪಕ್ಷದ್ದೆ ಅನ್ನುವ ಚಿಕ್ಕ ವಿಷಯ ಜನರಿಗೆ ತಿಳಿಯದೇ ಹೋಯಿತಲ್ಲಾ ಅನ್ನೋದೆ ನೋವಿನ ಸಂಗತಿ. ಆದರೆ ನನ್ನ ಧರ್ಮದ ಕೆಲವು ದೇವಸ್ಥಾನಕ್ಕೆ ಅವನನ್ನು ಕರೆದುಕೊಂಡು ಹೋದರೂ ಇನ್ನು ಕೆಲವು ದೇವಸ್ಥಾನಕ್ಕೆ ಸ್ವತಃ ನನಗೆ ಪ್ರವೇಶ ಇರಲಿಲ್ಲ. ಇಂತಹ ದೇವಸ್ಥಾನ ನನಗೂ ಬೇಕಾಗಿಲ್ಲ, ದೇವರಂತಹ ಗೆಳೆಯ ಹೆಗಲಿಗೆ ಕೈ ಹಾಕಿರುವಾಗ ಇನ್ನೆನೂ ಬೇಕು ನನಗೆ.

ಇದನ್ನು ಓದಿದ್ದೀರಾ? ಗೆಳೆತನದ ಹೊರತಾಗಿ ಯಾವ ಧರ್ಮದ ಚಹರೆಗಳೂ ನಮ್ಮ ನಡುವೆ ಕಾಣಿಸುತ್ತಿರಲಿಲ್ಲ

ಭಾರತದ ಅನೇಕ ಪ್ರವಾಸಿ ಕೇಂದ್ರಗಳನ್ನು ಸುತ್ತಿದ್ದೇವೆ. ಇನ್ನೂ ಆತನೊಂದಿಗೆ ಅನೇಕ ಪ್ರವಾಸ ಮಾಡಲಿದೆ. ಅದು ಬಿಟ್ಟು ಯಾವ ಕಾರಣಕ್ಕೂ ಹಿಂದು ಮುಸ್ಲಿಂ ಅಂತಾ ದ್ವೇಷ ಕಟ್ಟಿಕೊಂಡು ಸಮಯ ಹಾಳು ಮಾಡಲಾರೆ. ಇಷ್ಟು ಹೇಳುತ್ತಾ ನನ್ನ ಕಿವಿ ಮಾತು  ಇಷ್ಟೇ ಮಾನವರಾಗಿ ಹುಟ್ಟಿದ್ದೆವೆ ಮಾನವಂತರಾಗಿ ಮನುಷ್ಯತ್ವದಿಂದ ಈ ಜನ್ಮ ಸಾರ್ಥಕ ಪಡಿಸೋಣ, ಮಸೀದಿ ಕೆಡವಿ ಮಂದಿರ ಕಟ್ಟಿದರೂ ನಾಳೆ ನಮಗೆ ಅದೇ ಮಂದಿರದೊಳಗೆ ಪ್ರವೇಶ ಇರಲ್ಲ ಅನ್ನೋದು ನೆನಪಿನಲ್ಲಿ ಇಟ್ಟುಕೊಂಡು ಸೌಹಾರ್ದತೆಯನ್ನು ಸಾರೋಣ. ಪ್ರಪಂಚದ ಎಲ್ಲಾ ಸ್ನೇಹಿತರಿಗೂ ಒಳ್ಳೆಯದಾಗಲಿ.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app