ಕೆಲಸ ಮತ್ತು ಊಟ ಅಂದ್ರೆ ಅಕ್ಬರ್ ಖಾನ್ ನೆನಪಾಗುತ್ತಾರೆ

Ramzan

ಮನೆಯಲ್ಲಿ ಬಡತನ ಇದ್ದುದರಿಂದ ಆ ಕಾಲಕ್ಕೆ ಹೊರಗಿನ ಊಟವೆಂದರೆ ನನಗೆ ಬಹಳ ಅಚ್ಚುಮೆಚ್ಚು. ನಾನು ಊಟ ಮಾಡುವುದನ್ನು ನೋಡಿ ಅಕ್ಬರ್ ಖಾನ್ ಅವರು ತುಂಬ ಸಂತೋಷ ಪಡುತ್ತಿದ್ದರು. ಪ್ರತೀ ರಂಝಾನ್ ಹಬ್ಬಕ್ಕೆ  ಬಟ್ಟೆ ಕೊಡಿಸುತ್ತಿದ್ದರು. ಆ ದಿನಗಳಲ್ಲಿ ವರ್ಷಕ್ಕೆ ಒಂದು ಬಟ್ಟೆ ತೆಗೆದುಕೊಳ್ಳಲೂ ನನಗೆ ಆಗುತ್ತಿರಲಿಲ್ಲ.

ಅದು 2005ರ ಸಮಯ. ಆಗತಾನೇ ನಾನು ಎಸ್.ಎಸ್.ಎಲ್.ಸಿ. ಮುಗಿಸಿದ್ದೆ. ಕಂಪ್ಯೂಟರ್ ಕೀಗಳನ್ನು ಬಹಳ ಚೆನ್ನಾಗಿ ಆಡಿಸುತ್ತಿದ್ದುದರಿಂದ ಡಿ.ಟಿ.ಪಿ. ಸೆಂಟರ್‌ನಲ್ಲಿ ಪಿ.ಯು.ಸಿ. ಓದುತ್ತಲೇ ಕೆಲಸ ಮಾಡುತ್ತಿದ್ದೆ. ಒಮ್ಮೆ ಹಾಸ್ಟೆಲ್ ವಾರ್ಡನ್ ನಾನು ಡಿ.ಟಿ.ಪಿ. ಸೆಂಟರ್‌ನಲ್ಲಿ ಕೆಲಸ ಮಾಡುವುದನ್ನು ನೋಡಿ ʼನಮ್ಮ ಕಚೇರಿಯಲ್ಲಿ ಡಿ.ಟಿ.ಪಿ. ಆಪರೇಟರ್ ಕೆಲಸ ಖಾಲಿ ಇದೆ ನೀನು ಬರುತ್ತೀಯಾʼ ಎಂದು ಪ್ರಶ್ನಿಸಿದರು. ಮನೆಯಲ್ಲಿ ಬಡತನ ಇದ್ದುದರಿಂದ ನನಗೂ ದುಡಿಯಬೇಕು ಎನ್ನುವ ಹುಮ್ಮಸ್ಸು ಇದ್ದುದರಿಂದ ಒಪ್ಪಿಕೊಂಡೆ. ಅಂದು ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ, ಕೂಡ್ಲಿಗಿಗೆ ಹೋದೆ. ಅಲ್ಲಿ ಸಿ.ಪೋಲಯ್ಯ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಾಗಿದ್ದು, ಕಚೇರಿ ಅಧೀಕ್ಷಕರಾಗಿ ಹೆಚ್.ಅಕ್ಬರ್ ಖಾನ್ ಇದ್ದರು. ನನ್ನ ಕಂಪ್ಯೂಟರ್ ಪರಿಣತಿಯನ್ನು ನೋಡಿದ ಅಧೀಕ್ಷಕರಾದ  ಅಕ್ಬರ್ ಖಾನ್ ಅಂದೇ ನನ್ನನ್ನು ಕಚೇರಿ ಕೆಲಸಕ್ಕೆ ಸೇರಿಸಿಕೊಂಡರು. ಅವರ ಹೆಸರನ್ನು ಕೇಳಿದ ತಕ್ಷಣ ನನಗೇನೋ ಅತೀವ ಪ್ರೀತಿ ಇರಲು ಇದೊಂದು ಕಾರಣವೂ ಇರಬಹುದು ಎನ್ನಿಸುತ್ತೆ. ಕೊಟ್ಟೂರಿನ ಜಾತ್ಯಾತೀತ ಶರಣ ಶ್ರೀ ಗುರು ಕೊಟ್ಟೂರೇಶ್ವರರಿಗೆ ದೆಹಲಿಯ ಸುಲ್ತಾನ ಅಕ್ಬರ್ ಬಾದಶಹ ಮಣಿಮಂಚ ಮತ್ತು ತಾನು ಉಪಯೋಗಿಸುವ ಕತ್ತಿಯನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಈ ಅಕ್ಬರ್ ಖಾನ್ ಸರ್ ಅವರ ಮೇಲಿನ ಪ್ರೀತಿಗೆ ಇದೂ ಒಂದು ಕಾರಣವಾಗಿರಲೂಬಹುದು.

ಅಕ್ಬರ್ ಖಾನ್ ಸರ್ ಅವರು ಮೂಲತಃ ದಾವಣಗೆರೆಯವರಾದರೂ ಕೂಡ್ಲಿಗಿಯಲ್ಲಿಯೇ ಮನೆ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ದಾವಣಗೆರೆಗೆ ಹೋಗಿ ಬರುತ್ತಿದ್ದರು. ಪ್ರತೀ ಸೋಮವಾರ ಬೆಳಿಗ್ಗೆ ಬಂತೆಂದರೆ ನನಗೆ ಸಂತಸವಾಗುತ್ತಿತ್ತು. ಏಕೆಂದರೆ  ಅಕ್ಬರ್ ಖಾನ್ ಅವರು ಮಹದೇವ ಬಸ್‍ಗೆ ದಾವಣಗೆರೆಯಿಂದ ಕೂಡ್ಲಿಗಿ ಬರುತ್ತಿದ್ದುದರಿಂದ ಕೊಟ್ಟೂರು ಮಾರ್ಗವಾಗಿಯೇ ಹೋಗುತ್ತಿದ್ದರು. ಅದೇ ಬಸ್‍ಗೆ ನಾನೂ ಹೋಗುತ್ತಿದ್ದೆ. ನಾನು ಅವರ ಪಕ್ಕದಲ್ಲಿ ಕುಳಿತುಕೊಳ್ಳಲು ಹಿಂಜರಿದರೂ, ಅವರೇ ನನ್ನ ಕೈ ಹಿಡಿದು ತಮ್ಮ ಪಕ್ಕಕ್ಕೆ ಕೂರಿಸಿಕೊಳ್ಳುತ್ತಿದ್ದರು. ಅವತ್ತಿನ ಒಂದು ಕಡೆಯ ಬಸ್ ಚಾರ್ಜ್ 9 ರೂಪಾಯಿಗಳನ್ನು ಅವರೇ ಕೊಡುತ್ತಿದ್ದರು. ಪ್ರತೀ ಸೋಮವಾರ ಕೂಡ್ಲಿಗಿಯ ಖಾನಾವಳಿಯಲ್ಲಿ ಹೋಳಿಗೆ ಊಟಕ್ಕೆ ನನ್ನನ್ನೂ ಕರೆದೊಯ್ಯುತ್ತಿದ್ದರು. ಈ ಎರಡು ಕಾರಣಗಳಿಗಾಗಿ ನನಗೆ ಸೋಮವಾರವೆಂದರೆ ಹಿರಿಹಿರಿ ಹಿಗ್ಗುತ್ತಿದ್ದೆ. ಪ್ರತೀ ಸೋಮವಾರಕ್ಕಾಗಿ ಕಾಯುತ್ತಿದ್ದೆ.

ಮಧ್ಯಾಹ್ನದ ಊಟ ಎನ್ನುವ ವಿಚಾರ ಬಂದರೆ, ಅವರ ಜೊತೆಗೆ ನನ್ನನ್ನೂ ಊಟಕ್ಕೆ ಕರೆದೊಯ್ಯುತ್ತಿದ್ದರು. ಮನೆಯಲ್ಲಿನ ಬಡತನ ಹೆಚ್ಚಿದ್ದರಿಂದ ಆ ಕಾಲಕ್ಕೆ ಹೊರಗಿನ ಊಟವೆಂದರೆ ನನಗೆ ಬಹಳ ಅಚ್ಚುಮೆಚ್ಚು. ಹಾಗಾಗಿ ಸರಿಯಾಗಿಯೇ ಬಾರಿಸುತ್ತಿದ್ದೆ. ನಾನು ಊಟ ಮಾಡುವುದನ್ನು ಅಕ್ಬರ್ ಖಾನ್ ಅವರು ತುಂಬ ಸಂತೋಷ ಪಡುತ್ತಿದ್ದರು. ಪ್ರತೀ ರಂಜಾನ್ ಹಬ್ಬಕ್ಕೆ ನನಗೊಂದು ಜೊತೆ ಬಟ್ಟೆ ಕೊಡಿಸುತ್ತಿದ್ದರು. ಹೊಟ್ಟೆಗೇ ಪರದಾಡುವ ಸ್ಥಿತಿಯಲ್ಲಿ ವರ್ಷಕ್ಕೆ ಒಂದೇ ಒಂದು ಸಲ ಬಟ್ಟೆ ತೆಗೆದುಕೊಳ್ಳಲೂ ನನಗೆ ಆಗುತ್ತಿರಲಿಲ್ಲ. ಹೀಗಾಗಿ ಯಾರಾದರೂ ಬಟ್ಟೆ ಕೊಡಿಸುತ್ತಾರೆ ಎಂದರೆ ಅದೇನೋ ಹೇಳಿಕೊಳ್ಳಲಾಗದ ಸಂತಸ. ಒಮ್ಮೆ, ಮಧ್ಯಾಹ್ನದ ಊಟಕ್ಕೆ ನಾನ್‍ವೆಜ್ ಹೋಟೆಲಿಗೆ ಕರೆದುಕೊಂಡು ಹೋಗಿದ್ದರು. ನನಗೆ ಅದೇ ಮೊದಲ ಮಾಂಸಹಾರ ಊಟ. ನನಗೋ ಇರಿಸು ಮುರಿಸು. ಸರ್ ನಾನ್‍ವೆಜ್ ಬೇಡ ಸರ್ ಎಂದಾಗ ಅವರು ʼಕೊಟ್ರೇಶಾ, ನಾನು ಮನುಷ್ಯನೇ ತಾನೇ, ನಾನು ಊಟ ಮಾಡೋ ಹಾಗೇ ನೀನೂ ಊಟ ಮಾಡು. ಏನೂ ಆಗಲ್ಲ, ತಿನ್ನುವ ವಸ್ತು ಯಾವುದೇ ಆಗಲಿ ಅದನ್ನು ಗೌರವಿಸಬೇಕುʼ ಎಂದು ಹೇಳಿಕೊಟ್ಟರು. ಅಲ್ಲಿಂದ ನನಗೆ ಮಾಂಸಹಾರ ಅತ್ಯಾಪ್ತವಾಯಿತು. ಪ್ರತೀ ದಿನ ಕಚೇರಿಯ ವೇಳೆ  ಮುಗಿದಾಗ ಪ್ರತೀ ದಿನ ಸಂಜೆ ನನಗಾಗಿಯೇ ಇಡ್ಲಿ, ವಡೆ, ಚಾ ತರಿಸುತ್ತಿದ್ದರು. ತಂದ ವ್ಯಕ್ತಿಗೆ ಕೊಟ್ರೇಶನಿಗೆ ಜಾಸ್ತಿ ಕೊಡಪ್ಪ ಅಂತ ಹೇಳಿ ತಂದಿದ್ದರಲ್ಲಿ ಸಿಂಹಪಾಲನ್ನು ನನಗೇ ಕೊಡಿಸುತ್ತಿದ್ದರು. ಕಚೇರಿಯಲ್ಲಿ ಯಾರೇ ನನ್ನನ್ನು ದೂಷಿಸಿದರೂ ಅವರಿಗೆ ವಿಪರೀತ ಕೋಪ ಬರುತ್ತಿತ್ತು. ಕೆಲಸ ಮಾಡುವ ಹುಡುಗನ ಮೇಲೇಕೆ ಹಾಗೆ ದೂರುತ್ತಿದ್ದೀರಿ, ಎಂದು ದೂಷಿಸಿದವರ ಮೇಲೆ ಸಿಟ್ಟಾಗುತ್ತಿದ್ದರು.

ಮೊದಲ ಮೊಬೈಲ್‌ ಕೊಡಿಸಿದವರು

ಯಾವುದೋ ಕಾರಣಕ್ಕೆ ಒಮ್ಮೆ ಐದಾರು ದಿನ ಕೆಲಸಕ್ಕೆ ಹೋಗಲೇ ಇಲ್ಲ, ನಂತರ ಕಚೇರಿಗೆ ಹೋದೆ, ಕೆಲಸಗಳೆಲ್ಲಾ ಬಾಕಿ ಇರುವ ಕಾರಣಕ್ಕೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಯಾದ ಸಿ.ಪೋಲಯ್ಯ ಅವರು ಬೆಂಕಿಯಾಗಿದ್ದರು. ನನಗೋ ಮನಸ್ಸಿನಲ್ಲೆಲ್ಲಾ ತುಂಬಾ ಭಯ. ಏನನ್ನುತ್ತಾರೋ ಎನ್ನುವುದಕ್ಕಿಂತ ಎರಡು ತಿಂಗಳ ಸಂಬಳ ಕೊಡುತ್ತಾರೋ ಇಲ್ಲವೋ ಎನ್ನುವ ಕಸಿವಿಸಿ. ನನ್ನನ್ನು ನೋಡಿದ ಅಕ್ಬರ್ ಖಾನ್ ಸರ್ ಅವರು, ಪೋಲಯ್ಯ ಅವರಿಗೆ ʼಸರ್ ಏನೋ ತಪ್ಪಾಗಿದೆ ಬಿಡಿ ಸರ್, ಇನ್ಮೇಲೆ ಹಾಗೆ ಆಗೋದಿಲ್ಲ, ಹೋಗು ಕೊಟ್ರೇಶ ಕೆಲಸ ಮಾಡು, ಕೆಲ್ಸ ಮಾಡ್ತಾನ್ ಸರ್ ಯಾಕೋ ಒಂದ್ಸಲ ಹೀಗೆ ಮಾಡಿದಾನೆ. ನನಗೋಸ್ಕರ ಅವನನ್ನು ಕ್ಷಮಿಸಿ ಬಿಡಿಸಿ ಸರ್ʼ ಎಂದು ನನ್ನ ಪರವಾಗಿ ಅವರು ಅಧಿಕಾರಿಗಳ ಹತ್ತಿರ ಮಾತನಾಡಿದ್ದರು. ʼಏನ್ರೀ ಅಕ್ಬರ್ ಖಾನ್ ನೀವು, ಅವನ ಪರವಾಗಿ ಮಾತಾಡ್ತೀರಲ್ಲʼ ಎಂದಾಗ, ʼಇಲ್ಲ ಸರ್ ಹುಡುಗ ತುಂಬಾ ಒಳ್ಳೆ ಕೆಲಸಗಾರ ಹಾಗಾಗಿ ಅಷ್ಟೇ ಸರ್ʼ ಎಂದು ಅವರನ್ನು ತಣ್ಣಗೆ ಮಾಡಿದ್ದರು. ನನ್ನ ಹತ್ತಿರ ಆಗಿನ್ನೂ ಮೊಬೈಲ್ ಇರಲಿಲ್ಲ, ಇದನ್ನು ಗಮನಿಸಿದ ಅಕ್ಬರ್ ಖಾನ್ ಸರ್ ಅವರು ಒಮ್ಮೆ ತಮ್ಮ ಹತ್ತಿರ ಇದ್ದ ಮೊಬೈಲ್ ಅನ್ನೇ ನನಗೆ ಕೊಟ್ಟು, ಈ ಫೋನ್ ನೀನೇ ತಗೋ, ಇದಕ್ಕೆ ಸಿಮ್ ಹಾಕ್ಕೊಂಡು ನನಗೆ ನಂಬರ್ ಕೊಡು ಎಂದು ಹೇಳಿ ತಾವು ಕೊಂಡಿದ್ದ ಮೊಬೈಲ್ ಅನ್ನು ನನಗೆ ಕೊಟ್ಟಿದ್ದರು. ಮೊದಲ ಮೊಬೈಲ್ ಅನ್ನುವ ಕಾರಣಕ್ಕೆ ನಾನು ಈಗಲೂ ಅದನ್ನು ಹಾಗೇ ಇಟ್ಟಿರುವೆ.

ದಿನಗಳು ಕಳೆದವು, ನನ್ನ ಕೆಲಸ ನೋಡಿದ ಅಕ್ಬರ್ ಖಾನ್ ಅವರು ನನ್ನನ್ನು ಬಿಟ್ಟಿರುತ್ತಲೇ ಇರಲಿಲ್ಲ. ಸಿ.ಪೋಲಯ್ಯ ಅವರು ನಮ್ಮಿಬ್ಬರನ್ನು ಗಳಸ್ಯ-ಕಂಠಸ್ಯ ಎಂದು ಹೆಸರಿಟ್ಟಿದ್ದರು. ಅವರು ಬಾಡಿಗೆ ಇದ್ದ ರೂಮಿಗೆಲ್ಲಾ ನಾನು ಹೋಗುತ್ತಿದ್ದೆ. ಸಂಜೆ ಎಂಟು ಒಂಭತ್ತು ಗಂಟೆಯವರೆಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆವು. ಒಮ್ಮೆ ಹೀಗೇ ಮಾತಾಡುವಾಗ ಸರ್, ನೀವು ನೋಡಿದರೆ ಮೂರು ತಿಂಗಳಿಗೊಮ್ಮೆ ಸಂಬಳ ಕೊಡುತ್ತೀರಿ, ಪ್ರತೀ ದಿನವೂ ಬಸ್ ಚಾರ್ಜ್ ಕೊಡಲು ನನಗೆ ತುಂಬಾ ಕಷ್ಟವಾಗುತ್ತದೆ ಎಂದಾಗ, ಯೋಚಿಸಬೇಡ ಇನ್ನು ಮುಂದೆ ಪ್ರತೀ ತಿಂಗಳು ನಿನಗೆ ಬಸ್ ಪಾಸ್ ಮಾಡಿಕೊಡುವ ಜವಾಬ್ದಾರಿ ನನ್ನದು ಎಂದು ನಾನಿರುವ ಅಷ್ಟೂ ವರ್ಷಗಳು ಅವರೇ ಬಸ್ ಪಾಸ್ ಮಾಡಿಸಿಕೊಟ್ಟರು. ನನಗೆ ಆ ಕಚೇರಿಯಲ್ಲಿ ಪ್ರತಿ ತಿಂಗಳಿಗೆ ರೂ. 3,000 ಸಂಬಳ ಅದರಲ್ಲಿ ವೃತ್ತಿ ತೆರಿಗೆ ಎಂದು ರೂ. 30 ಕಟಾವು ಮಾಡಿ ರೂ. 2,970 ನ ಚೆಕ್ ಕೊಡುತ್ತಿದ್ದರು. ಅದು ಮೂರು ತಿಂಗಳಿಗೊಮ್ಮೆ! ಮನೆಯಲ್ಲಿ ಎಷ್ಟೇ ಬಡತನ ಇದ್ದರೂ ಯಾರ ಮುಂದೆಯೂ ಕೈ ಚಾಚದ ಮನಸ್ಥಿತಿ ನನ್ನದು. ಹಾಗಾಗಿ ಸಂಬಳವಾದ ನಂತರವೇ ಅವರಿಗೆ ಬಸ್ ಪಾಸ್‍ನ ಹಣ ಕೊಡಲು ಹೋದರೆ, ಅವರು ಯಾವತ್ತೂ ತೆಗೆದುಕೊಳ್ಳಲಿಲ್ಲ.  

ನಾನು ಕಂಪ್ಯೂಟರ್‌ನಲ್ಲಿ ಚೆನ್ನಾಗಿ ಕೆಲಸ ಮಾಡುತ್ತೇನೆಂದು ಅವರು ಹೋದ ಮೀಟಿಂಗ್‍ಗಳಿಗೆಲ್ಲಾ ನನ್ನನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಮೀಟಿಂಗ್‍ಗೆಂದು ಹೋದಾಗ, ನಮ್ಮ ಸಾಹೇಬರು ಕೊಟ್ರೇಶ್ ಎಂದು ಕೂಗಿದಾಗ ಮೀಟಿಂಗ್ ಹಾಲ್‍ಗೆ ನಾನು ಪ್ರವೇಶಿಸಿದ್ದೆ. ಅದನ್ನು ನೋಡಿದ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ʼಇವನ್ಯಾರ್ರಿ ಸಣ್ಣ ಹುಡುಗ, ಯಾರಿವನು? ಬಾಲಕಾರ್ಮಿಕ ಅಧಿಕಾರಿಗಳೇನಾದರೂ ನೋಡಿದರೆ, ನನ್ನನ್ನೂ, ನಿಮ್ಮನ್ನೂ ಇಬ್ಬರನ್ನೂ ಒಳಗೆ ಹಾಕ್ತಾರೆʼ ಎಂದು ಸಿಟ್ಟಿನಿಂದಲೇ ಪ್ರಶ್ನೆ ಮಾಡಿದರು. ಆಗ ಅಕ್ಬರ್ ಖಾನ್ ಅವರು ʼಸರ್ ನಮ್ಮ ಕಂಪ್ಯೂಟರ್ ಆಪರೇಟರ್ ಸರ್, ಅವನಿಗೆ 16 ವರ್ಷ ಅವನು ಬಾಲಕಾರ್ಮಿಕ ಅಲ್ಲ, ತುಂಬಾ ಬಡವ. ಆದರೆ, ಕಂಪ್ಯೂಟರ್ ಪರಿಣಿತ, ಬಹಳ ಚೆನ್ನಾಗಿ ಗೊತ್ತಿದೆ. ಕಚೇರಿ ಕೆಲಸಗಳನ್ನೆಲ್ಲಾ ಅವನೇ ಮಾಡುವುದು. ಅವನು ಕೆಲಸ ಮಾಡುವುದನ್ನು ಒಮ್ಮೆ ನೋಡಬೇಕು ನೀವುʼ ಎಂದು ಅವರನ್ನೇ ದಂಗಾಗಿಸಿದ್ದರು. 

ನಾನೆಂದರೆ ಅಕ್ಬರ್ ಖಾನ್ ಸರ್ ಅವರಿಗೆ ಅತೀವ ಪ್ರೀತಿ, ನಂಬಿಕೆ. ನನ್ನ ಕೆಲಸವನ್ನು ತುಂಬಾ ಇಷ್ಟಪಟ್ಟಿದ್ದ ಅವರು ತಮ್ಮ ಸ್ವಂತ ದಾವಣಗೆರೆ ಮನೆಗೆ ಪ್ರತೀ ಭಾನುವಾರ ಕರೆಸಿಕೊಳ್ಳುತ್ತಿದ್ದರು. ಇದ್ದಷ್ಟು ದಿನವೂ ಅವರ ಮನೆಯಲ್ಲಿಯೇ ಊಟ, ವಸತಿ ಎಲ್ಲವೂ. ಆ ವಯಸ್ಸಿನಲ್ಲಿ ನನಗೆ ಸಿನಿಮಾ ನೋಡುವ ಖಯಾಲಿ ತುಂಬಾ ಇದ್ದುದರಿಂದ ಎಲ್ಲಾ ಕೆಲಸ ಮುಗಿಸಿದ ಮೇಲೆ, ನೀನು ಸಿನಿಮಾ ನೋಡ್ಕೊಂಡು ಬಾ ಹೋಗು ಎಂದು ಹಣ ಕೈಗಿಡುತ್ತಿದ್ದರು. ಅವರ ಮನೆಯಲ್ಲಿ ನಾನೂ ಕೂಡ ಮನೆಯ ಒಬ್ಬ ಸದಸ್ಯನಂತೆ ಭಾವಿಸುತ್ತಿದ್ದರು. ಕೆಲಸ ಅಂತ ಬಂದರೆ ಅವರೊಬ್ಬ ದೈತ್ಯ ಕೆಲಸಗಾರರು. ನನಗೆ ವಿಶ್ರಾಂತಿಯಿಲ್ಲದೇ ಕೆಲಸ ಮಾಡಬೇಕು ಎಂದು ಹೇಳಿಕೊಟ್ಟಿದ್ದೇ ಅವರು. ನನ್ನನ್ನು ಜಾತಿಯ ಕಾರಣಕ್ಕಾಗಿ ಎಂದೂ ಅವರು ದೂರ ಸರಿಸಲೇ ಇಲ್ಲ. ಬದಲಾಗಿ ತಮ್ಮ ಮನೆಯ ಮಗನೇನೋ ಎನ್ನುವ ಹಾಗೆ ತಮ್ಮ ಮನಸ್ಸಿನಲ್ಲಿಟ್ಟುಕೊಂಡಿದ್ದರು. ನಂತರ ಅನಿವಾರ್ಯ ಕಾರಣಗಳಿಂದ ಅಲ್ಲಿ ಕೆಲಸ ಬಿಟ್ಟೆ. ನಾನು ಕೆಲಸ ಬಿಟ್ಟರೂ ಸಹ ನನ್ನನ್ನು ಪ್ರತೀ ಭಾನುವಾರ ಅವರ ಮನೆಗೆ ಕರೆಸಿಕೊಂಡು ಕಚೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು.

ಇದನ್ನು ಓದಿದ್ದೀರಾ? ಸೂಫಿ ಸಂತ ಹಜ್ರತ್‌ ಬೂಬಲೇವಲಿ ಕೆತ್ತಿದ ನನ್ನೂರು

2015ರಲ್ಲಿ ಅಪ್ಪ ಏನೋ ಕೆಲಸ ಮಾಡಲು ಹೋಗಿ ದೊಡ್ಡದೊಂದು ಹಲಗೆಯನ್ನು ಕಾಲ ಮೇಲೆ ಬೀಳಿಸಿಕೊಂಡು ಒಂದು ಅಡಿಯ ಉದ್ದ ಚರ್ಮ ಕೆತ್ತಿಹೋಗಿತ್ತು. ದಿಕ್ಕೇ ತೋಚದೇ ದಾವಣಗೆರೆಯ ಆಸ್ಪತ್ರೆಗೆ ಅಪ್ಪನನ್ನು ಕರೆದುಕೊಂಡು ಹೋಗಿದ್ದೆ. ಆಗ ನನಗೆ ಅಕ್ಬರ್ ಖಾನ್ ಸರ್ ಅವರ ನೆನಪಾಗಿ ಅವರ ಮನೆಗೆ ಹೋಗಿದ್ದೆ. ದುಃಖದಲ್ಲಿದ್ದ ನನ್ನನ್ನು ಎಳೆಯ ಮಗುವಿನಂತೆ ಸಂತೈಸಿ, ಆಸ್ಪತ್ರೆಗೆ ಬಂದು ಅಪ್ಪನನ್ನು ನೋಡಿ, ಹೆದರಬೇಡ, ಏನೂ ಆಗುವುದಿಲ್ಲ ಏನೇ ಸಹಾಯ ಬೇಕಾದರೂ ನನ್ನನ್ನು ಕೇಳು ಎಂದು ಕೈಗೆ ದೊಡ್ಡ ಮೊತ್ತವೊಂದನ್ನು ಇಟ್ಟು ಸಮಾಧಾನ ಪಡಿಸಿದ್ದರು.

ಇತ್ತೀಚೆಗೆ ಮದುವೆಯ ಕಾರ್ಡ್ ಕೊಡಲು ದಾವಣಗೆರೆಯ ಅವರ ಮನೆಗೆ ಹೋದೆ. ನಾನು ಗುರುತು ಹಿಡಿಯಲಾರದಷ್ಟು ಬದಲಾಗಿದ್ದೆ. ಅಕ್ಬರ್ ಖಾನ್ ಸರ್ ಮಾತ್ರ ಹಾಗೇ ಇದ್ದರು. ನನ್ನನ್ನು ನೋಡಿದ ಕೂಡಲೇ ʼಯಾರು ನೀನುʼಎಂದರು. ʼನಾನು ಕೊಟ್ರೇಶʼ ಎಂದ ತಕ್ಷಣವೇ ತುಂಬಾ ಖುಷಿ ಪಟ್ಟರು. ʼಬಾ ಕೊಟ್ರೇಶಾ ಹೇಗಿದ್ದೀಯಾ? ಎಷ್ಟು ವರ್ಷ ಆಯಿತು ಮಾರಾಯ ನಿನ್ನನ್ನು ನೋಡಿʼ, ಎಂದು ಕಾಫಿ ಕುಡಿಸಿದರು. ನಿವೃತ್ತಿಯಾಗಿದ್ದಾರೆ, ಆರೋಗ್ಯವಾಗಿದ್ದಾರೆ. 17 ವರ್ಷಗಳ ಸಂಬಂಧದ ಕುರಿತು ಸುದೀರ್ಘವಾಗಿ ಮಾತನಾಡಿದೆವು. ನನ್ನ ಬದುಕಿನ ಬಗ್ಗೆ ಇರುವ ಅವರ ಕಾಳಜಿಗೆ ಮನಸ್ಸು ತುಂಬಿಬಂದಿತ್ತು. ಮದುವೆಯ ಆಹ್ವಾನ ಪತ್ರಿಕೆ ಕೊಟ್ಟು, ಸರ್ ಮದುವೆ ಬರಬೇಕು ಎಂದಾಗ, ʼಎಲ್ಲಿ ಬರೋದು ಕಣ್ಲೇ, ವಯಸ್ಸಾಗಿದೆ. ನೋಡೋಣʼ ಎಂದು ಶುಭಾಶಯ ಕೋರಿದರು. ಹದಿನೇಳು ವರ್ಷವಾದರೂ ನಮ್ಮ ಪ್ರೀತಿ ತಾಜಾತನದಿಂದಲೇ ಕೂಡಿತ್ತು ಎನ್ನುವುದಕ್ಕೆ ಅವರ ಮಾತುಗಳು ಸಾಕ್ಷಿಯಾಗಿದ್ದವು. ಈಗಲೂ ನನಗೆ ಕೆಲಸ ಮತ್ತು ಊಟ ಎಂದರೆ ಅಕ್ಬರ್ ಖಾನ್ ಸರ್ ನೆನಪಾಗುತ್ತಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್