ಸರೋಜಮ್ಮನವರ ಅಸಲಿ ಹೆಸರು ಸಲೀಮ ಸುಲ್ತಾನಾ !

Javagal mazjid

ನಮ್ಮಪ್ಪ ಮಸೀದಿಗೆ ಹೋಗಿ ಮನೆಗೆ ಬಂದರೆ ನಾವು ಕುತೂಹಲದಿಂದ ಕಾಯುತ್ತಿದ್ದೆವು. ವರ್ಷಕ್ಕೊಮ್ಮೆ ಉರುಸ್ ಜರುಗುತ್ತಿತ್ತು. ಬಣ್ಣಬಣ್ಣದ ಆಕರ್ಷಕ ಸಾಮಗ್ರಿಗಳು, ವಿದೇಶಿ ವಸ್ತುಗಳ ಅಂಗಡಿಗಳು ಜೊತೆಗೆ ಸಾಲಾಗಿ ವಿದ್ಯುತ್ ದೀಪಗಳ ಅಲಂಕಾರ. ಅದೊಂದು ವಿಭಿನ್ನ ಲೋಕ. ಹಿಂದೂಗಳೆಲ್ಲ ತಪ್ಪದೆ ಉರುಸ್ ನೋಡಲು ಹೋಗುತ್ತಿದ್ದರು.

ಸರೋಜಮ್ಮನವರು ತನ್ನ ಸೊಸೆ, ಮಗ ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಆ ವಠಾರದ ಕೊನೆಯ ಮನೆಗೆ ಬಂದಿಳಿದಾಗಿನಿಂದ ಆ ವಠಾರದ ಮಂದಿಯ ಯಾವುದಾದರೊಂದು ಸಂಕಷ್ಟಕ್ಕೊ, ಸಂತೋಷಕ್ಕೊ ಅವರು ತೀರಾ ಅಗತ್ಯವಾಗಿದ್ದರು. ವಯಸ್ಸಿನ ಹಿರಿತನ ಹಾಗೂ ಅನುಭವ ಅವರಿಗೆ ಪ್ರಾಮುಖ್ಯತೆಯನ್ನು ತಾನಾಗಿಯೆ ಒದಗಿಸಿತ್ತು. ಸಾಲಾಗಿ ನಿರ್ಮಿಸಿದ್ದ, ಗೋಡೆಗಳೆಲ್ಲ ಅಂಟಿಕೊಂಡಿದ್ದ ಮನೆಗಳ ಪಿಸುಮಾತುಗಳೂ ಸಹ ಪಕ್ಕದ ಮನೆಯವರು ಗೋಡೆಗೆ ಕಿವಿಗೊಟ್ಟರೆ ಕೇಳಿಸಿಬಿಡುವಂತಿದ್ದ ಆ ವಾತಾವರಣದಲ್ಲಿ ವೈಯಕ್ತಿಕ ಎಂಬುದು ಕೊಂಚ ಕಡಿಮೆಯೆ. ಸರೋಜಮ್ಮನವರು ಸಾಮಾನ್ಯವಾಗಿ ಬಹಳಷ್ಟು ಮನೆಗಳ ಕತೆಗಳನ್ನು ಬಲ್ಲವರೆ ಆಗಿದ್ದರು. ಸಾಲು ಮನೆಗಳ ತುದಿಗೆ ಹಬ್ಬಿಸಿದ್ದ ಹೊಂಗೆ ಮರದಡಿ ಸೆಗಣಿ ನೆಲದ ಮೇಲೆ ಚೌಕ ಭಾರದ ಗೀಟುಗಳನ್ನೆಳೆದು ಆಡಲು ಕುಳಿತರೆಂದರೆ ಅಲ್ಲಿನ ಯಾವ ಮಹಿಳೆಗೂ ಅದರ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಸರದಿಯಂತೆ ಎಲ್ಲರೊಂದಿಗೂ ಚೌಕಾಭಾರವಾಡಲು ಸಹ ಸರೋಜಮ್ಮನೆ ಬೇಕು. ಗುಂಪುಗೂಡಿ ಎಲ್ಲರೂ ತಮ್ಮೆಲ್ಲ ಆಂತರಿಕ, ಬಾಹ್ಯ ಒತ್ತಡಗಳನ್ನು ಅಲ್ಲಿ ತೋಡಿಕೊಳ್ಳುತ್ತಾ, ಮತ್ತೊಬ್ಬರ ಮನೆಯ ಕತೆಯೆಡೆ ಕುತೂಹಲದಿಂದ ಗಾಸಿಪ್ ಮಾಡಿಕೊಳ್ಳುತ್ತ ಚರ್ಚೆ, ವಿನಿಮಯದಲ್ಲಿ ತೊಡಗುತ್ತಿದ್ದರು. ಆಗೆಲ್ಲ ಸಲಹೆಕಾರ್ತಿ, ರಾಯಭಾರಿಯಂತೆ, ಕಿವಿಗೊಡಲು ಸರೋಜಮ್ಮನಿದ್ದರು. ಜಡ್ಡುಜಾಪತ್ರೆಗೆ, ಕಲಹ, ಸಂಧಾನಕ್ಕೆ, ಆಪ್ತಗೆಳತಿಯಾಗಿ ಆಕೆ ಪರಿಹಾರ ಸೂಚಿಸುತ್ತಿದ್ದರು. ಸಮಾರಂಭಗಳಲ್ಲಿ ಮುಂದೆ ನಿಂತು ಕೆಲವರಿಗೆ ಹತ್ತಿರದಿಂದ ಮತ್ತೆ ಕೆಲವರಿಗೆ ದೂರದಿಂದ ಸಹಾಯ ಸಹಕಾರ ನೀಡುತ್ತಿದ್ದರು.

ಇಂತಹ ಸರೋಜಮ್ಮನವರ ಅಸಲಿ ಹೆಸರು ಸಲೀಮ ಸುಲ್ತಾನಾ ಅಂತಿತ್ತು. ಆ ಪುಟ್ಟ ಊರಿನ ವಠಾರದ ಇನ್ನಿತರ ಹಿಂದೂ ಮನೆಗಳ ಕೊನೆ ಮನೆಯಲ್ಲಿ ಆ ಕುಟುಂಬ ವಾಸಿಸಲು ಬಂದಾಗ ಅಲ್ಲಿನ ಇತರರಿಗೆ ಯಾವುದೇ ತಕರಾರು ಇರಲಿಲ್ಲ. ಅವರೂ ಅಷ್ಟೆ ಧರ್ಮಾಧಾರಿತ ಹಟ್ಟಿಯಲ್ಲಿ ಸೂರು ಹುಡುಕಲು ಹೋಗದೆ ತಮಗೆ ಒಗ್ಗಿದಂತೆ ಆಶ್ರಯ ಬಯಸಿ ಅಲ್ಲಿ ತಂಗಿದ್ದರು. ಅವರ ಹೆಸರನ್ನು ಅಲ್ಲಿನ ಇತರ ಧರ್ಮೀಯರು ತಮಗೆ ಬೇಕಾದಂತೆ ಬದಲಿಸಿಕೊಂಡು ಸರೋಜಮ್ಮನಾಗಿಸಿ ತಮ್ಮಲ್ಲೊಬ್ಬರನ್ನಾಗಿಸಿದರು. ಮತ್ತು ಆ ಇಡೀ ವಠಾರದವರೊಡನೆ ಗಲಗಲ ಮಾತನಾಡುತ್ತಾ ಯಾವುದೇ ಅಂಜಿಕೆ, ಮುಜುಗರವಿಲ್ಲದೆ ಬೇರೆ ಆಲೋಚನೆಗಳಿಲ್ಲದೇ ಹೊಂದಿಕೊಂಡಿದ್ದರು.

ಅವರ ಮಗ ಸಮೀಪದ ಪೋಸ್ಟ್ ಆಫೀಸಿನಲ್ಲಿ ಗುಮಾಸ್ತ. ಅಲ್ಲಿನ ಪೋಸ್ಟ್ ಮಾಸ್ಟರ್ ಯೂಸುಫ್, ನಮ್ಮ ತಂದೆ ಕೆಲಸ ಮಾಡುತ್ತಿದ್ದುದೂ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್ ಮನ್ ಆಗಿ. ಯಾರೊಬ್ಬರ ನಡುವೆಯೂ ತಾರತಮ್ಯವೆಸಗದೆ ಸಮಾನ ಪರಿಭಾಷೆಯಲ್ಲಿ ಔದ್ಯೋಗಿಕವಾಗಿ ಸತ್ಕರಿಸುತ್ತಿದ್ದ ಯೂಸುಫ್, ನಮ್ಮ ಕುಟುಂಬಕ್ಕೂ ಆತ್ಮೀಯರು. ವಠಾರದ ಮುಂದುವರೆದ ಎರಡನೆ ಸಾಲಿನ ಮನೆಗಳಲ್ಲಿ ನಮ್ಮದೂ ಒಂದು ಬಾಡಿಗೆ ಮನೆಯಿತ್ತು. ಸರೋಜಮ್ಮನವರ ಮನೆಗೆ ಎಡತಾಕಿದ್ದಕ್ಕಿಂತಲೂ ಅವರು ನಮ್ಮ ಮನೆಗೆ ಬಂದದ್ದೇ ಹೆಚ್ಚು. ವಠಾರದಲ್ಲಿ ಮೊದಲಿಗೆ ಟಿ.ವಿ. ಕಾಲಿಟ್ಟ ಮನೆ ನಮ್ಮದೇ ಆಗಿತ್ತು. ಸಂಜೆಯಾಯಿತೆಂದರೆ ಪ್ರಸಾರವಾಗುತ್ತಿದ್ದ ಟಿ.ವಿ. ವಾರ್ತೆಗಳನ್ನು ವೀಕ್ಷಿಸಲು ಯೂಸುಫ್ ಮನೆಗೆ ಬಂದರೆಂದರೆ ಸಾಕಷ್ಟು ವಿಷಯಗಳನ್ನು ಚರ್ಚಿಸುತ್ತಿದ್ದರು. ವಾರ್ತೆ ಜೊತೆಗೆ ಹೊರಜಗತ್ತಿನ ಅನೇಕ ವಿಷಯಗಳನ್ನು ಸಹ ಯೂಸುಫ್ ಪ್ರಸ್ತಾಪಿಸುತ್ತ ಸಂಪರ್ಕವೇರ್ಪಡಿಸುತ್ತಿದ್ದರು. ಇಳಿವಯಸ್ಸಿನ ಅವರ ನಾಲ್ವರು ಮಕ್ಕಳಲ್ಲಿ ಇಬ್ಬರು ಪಟ್ಟಣದಲ್ಲಿ ಕಲಿಯಲು ಹೋಗಿದ್ದರಿಂದ, ಆ ಬದಿಯ ಮಾಹಿತಿಗಳು ಹಳ್ಳಿಯಲ್ಲಿದ್ದ ನಮಗೆ ತಲುಪುತ್ತಿದ್ದವು.

ನಮ್ಮ ತಂದೆಯವರಿಗೆ ಆರೋಗ್ಯ ಸಮಸ್ಯೆಯಾಗಿ ಉದ್ಯೋಗದಲ್ಲಿ ತೊಡಕಾಗುವಾಗ ಇದೇ ಪೋಸ್ಟ್ ಮಾಸ್ಟರ್ ಬಹಳಷ್ಟು ಸುಧಾರಿಸಿಕೊಂಡು ಸಹಕಾರ ನೀಡಿದ್ದರು. ಉದ್ಯೋಗವನ್ನೇ ತೊರೆಯುವ ಮಾತನ್ನ ನಮ್ಮ ತಂದೆ ಪದೇ ಪದೇ ಆಡುವಾಗ ನಮ್ಮ ಕುಟುಂಬದ ಹಿತದೃಷ್ಟಿಯನ್ನೇ ಪ್ರಮುಖವಾಗಿರಿಸಿಕೊಂಡು ಸಾಕಷ್ಟು ಹಿತವಚನ ಹೇಳಿ ಉದ್ಯೋಗವನ್ನು ಸಂರಕ್ಷಿಸಿದ್ದರು.

ಜಾವಗಲ್‌ ಮಸೀದಿ ಹೊರರಾಜ್ಯ ಹೊರದೇಶಕ್ಕೆಲ್ಲ ಪ್ರಸಿದ್ಧಿಯಾಗಿತ್ತು. ಆ ಮಸೀದಿಯನ್ನು ಕಾಣಲು ಎಲ್ಲೆಲ್ಲಿಂದಲೋ ಮಂದಿ ದಂಡಿಟ್ಟು ಬರುತ್ತಿದ್ದರು. ಅಲ್ಲಿನ ಮೌಲ್ವಿಗಳು ನಮ್ಮ ತಂದೆಗೆ ಬಹು ಪರಿಚಯ. ಮಸೀದಿಗೆ ಬರುತ್ತಿದ್ದ ಅಂಚೆಪತ್ರವೊ, ಮನಿಯಾರ್ಡರ್‌ಗಳನ್ನು ತಲುಪಿಸಲು ನಮ್ಮ ತಂದೆ ಅಲ್ಲಿಗೆ ಹೋದರೆ, ಅವರು ಪ್ರತೀ ಬಾರಿಯೂ ಹಾರ್ದಿಕವಾಗಿ ಸ್ವಾಗತಿಸಿ, ಕುಳ್ಳಿರಿಸಿ ತಪ್ಪದೆ ಪುರಿ, ಕಡಲೆ, ಜತೆಗೆ ಕಲ್ಯಾಣ ಸೇವೆಯನ್ನೋ, ದಪ್ಪ ಮಣಿಗಳ ಸರವನ್ನೋ, ಆಕರ್ಷಕ ಹಾರವನ್ನೋ, ಪಫ್ಯೂಮ್ ಅನ್ನೋ, ಅಥವಾ ಏನಿಲ್ಲವೆಂದರೂ ಸೊಗಸಾದ ಪೆನ್ನೊಂದನ್ನೋ ತಪ್ಪದೆ ಕೊಟ್ಟು ಕಳಿಸುತ್ತಿದ್ದರು. ಮನೆಯಲ್ಲಿ ಮಕ್ಕಳಿದ್ದ ವಿಷಯ ತಿಳಿದಿದ್ದ ಅವರು ಕೊಡುಗೆ ಕೊಡದ ದಿನವೇ ಇಲ್ಲವೇನೊ.

ನಮ್ಮಪ್ಪ ಮಸೀದಿಗೆ ಹೋಗಿ ಮನೆಗೆ ಬಂದರೆ ನಾವು ಕುತೂಹಲದಿಂದ ಕಾಯುತ್ತಿದ್ದೆವು. ಆ ಮಸೀದಿಯ ಕಾರಣಕ್ಕಾಗಿ ವರ್ಷಕ್ಕೊಮ್ಮೆ ಉರುಸ್ ಜರುಗುತ್ತಿತ್ತು. ಬಣ್ಣಬಣ್ಣದ ಆಕರ್ಷಕ ಸಾಮಗ್ರಿಗಳು, ವಿದೇಶಿ ವಸ್ತುಗಳ ಅಂಗಡಿಗಳು ಜೊತೆಗೆ ಸಾಲಾಗಿ ವಿದ್ಯುತ್ ದೀಪಗಳ ಅಲಂಕಾರ. ಅದೊಂದು ವಿಭಿನ್ನ ಲೋಕ. ಹಿಂದೂಗಳೆಲ್ಲ ತಪ್ಪದೆ ಉರುಸ್ ನೋಡಲು ಹೋದರೆ, ಅದೇ ಊರಿನಲ್ಲಿ ಭಕ್ತಿ ಪರಾಕಾಷ್ಠೆಯಿಂದ ಜರುಗುತ್ತಿದ್ದ ಅಯ್ಯಪ್ಪಸ್ವಾಮಿ ವ್ರತಾಚರಣೆ, ನಂತರ ಇರುಮುಡಿ ಕಟ್ಟಿ ತೆರಳುತ್ತಿದ್ದ ಶಬರಿಮಲೆ ಯಾತ್ರೆಯ ಸಮಾರಂಭಕ್ಕೆ ಮುಸ್ಲೀಮರು ದೂರದಿಂದಲೆ ಸೇವೆ ಒದಗಿಸುತ್ತಿದ್ದರು. ಕೆಲವರು ಅಯ್ಯಪ್ಪ ಮಾಲೆ ಹಾಕಿ ಯಾತ್ರೆಗೆ ತೆರಳಿದ್ದೂ ಇದೆ.

ನಾನು ಶಾಲೆಯಲ್ಲಿ ಓದುವಾಗ ‘ತಾಜ್ಮಹಲ್ ಎಂಬ ಗೆಳತಿಯಿದ್ದದ್ದು ನೆನಪಾಗುತ್ತದೆ. ಓದಿನಲ್ಲಿ ಕೊಂಚ ಹಿಂದುಳಿದಿದ್ದ ಆಕೆ ಶಾಲೆಯ ಕಿರುಪರೀಕ್ಷೆಯಲ್ಲಿ ನನ್ನ ಪಕ್ಕವೇ ಬಂದು ಕುಳಿತುಬಿಡುತ್ತಿದ್ದಳು. ಪ್ರಶ್ನೆಗಳಿಗೆ ನಾನು ಉತ್ತರ ಹೇಳಿಕೊಡಬೇಕಿತ್ತು. ಹೇಗೋ ಅವಳಿಗೆ ಪಾಸಾಗುವಷ್ಟು ಹೇಳಿಕೊಟ್ಟರೆ ಸಾಕು ಅಷ್ಟಕ್ಕೆ ತೃಪ್ತಳು. ಕೆಲವು ದಿನಗಳ ನಂತರ ಅವಳು ನನಗೆ ಪೆನ್ನೊ, ಪುಸ್ತಕವೊ ತಂದುಕೊಡುತ್ತಿದ್ದಳು. ಇಡಿ ತರಗತಿಗೆ ಅವಳೊಬ್ಬಳೇ ಮುಸ್ಲಿಂ ಹುಡುಗಿಯಾದರೂ ಆ ಅನಿಸಿಕೆ ಎಳ್ಳಷ್ಟಾದರೂ ಯಾವ ವಿದ್ಯಾರ್ಥಿಯ ಮನೋಭೂಮಿಕೆಯಲ್ಲೂ ನುಸುಳುತ್ತಿರಲಿಲ್ಲ. ಯಾರ ಪಕ್ಕದಲ್ಲಾದರೂ ಕುಳಿತುಕೊಳ್ಳುವ, ಯಾರ ಮನೆಗಾದರೂ ಹೋಗಿಬರುವ, ಆಟವಾಡುವ, ಸಂವಹನ ನಡೆಸುವ ವಾತಾವರಣವಿತ್ತು. ಈಗಲೂ ನನಗೆ ಅನೇಕ ಮುಸ್ಲಿಂ ಬಂಧುಗಳು ಗೆಳೆಯರು. ನನ್ನ ಸಂಘಟನಾ ಕಾರ್ಯಕ್ಷೇತ್ರದಲ್ಲಿ ಅನೇಕ ಬಗೆಯ ಸಹಾಯ ಪಡೆದುಕೊಂಡಿದ್ದೇನೆ ಮತ್ತು ಪಡೆದುಕೊಳ್ಳುತ್ತಿದ್ದೇನೆ. ಸಾಮಾಜಿಕವಾಗಿ ಸಾಕಷ್ಟು ಒಡನಾಟವಿದೆ. ಆದರೆ ಭಿನ್ನ ಭೇದವಂತೂ ಖಂಡಿತ ಇಲ್ಲ. ಹಾಗೂ ಸದ್ಯದಲ್ಲಿ ಈ ಊರಿನ ವಾತಾವರಣದಲ್ಲಿ ಬಿಸಿಯಾದ ಪರಿಸ್ಥಿತಿಯಂತು ಇಲ್ಲವಾಗಿದೆ.

ಇದನ್ನು ಓದಿದ್ದೀರಾ? ಸಹಬಾಳ್ವೆಯೇ ಸೂಫಿಪಂಥ, ಭಕ್ತಿಪಂಥ, ವಚನ ಪರಂಪರೆಯ ತಾತ್ವಿಕ ನೆಲೆಗಟ್ಟು

ಇಲ್ಲಿ ಮುಖ್ಯವಾಗುವುದು, ಬದುಕಿನ ಎಲ್ಲಾ ನಡೆಗಳು ಸರಳವಾಗಿ ಸಹಜವಾಗಿ ಜರುಗುತ್ತಿದ್ದ ರೀತಿ. ಯಾರಿಗೂ ಯಾವುದೇ ಕಾರಣಕ್ಕೂ ತಮ್ಮೊಂದಿಗಿರುವ ಮನುಷ್ಯ ತಮಗಿಂತ ತೀರಾ ಭಿನ್ನ, ತಮ್ಮವನಲ್ಲ, ತಮಗೆ ಸೇರಿದವನಲ್ಲ ಅನಿಸುತ್ತಿರಲಿಲ್ಲ. ಜಾತಿ ಅಸಮಾನತೆ, ಅಸಹನೀಯತೆಗಳಿದ್ದವಾದರೂ ಅವೆಲ್ಲ ವ್ಯವಸ್ಥೆಯೊಳಗಿನ ತಣ್ಣನೆ ಮುಖಗಳು. ಕ್ರೌರ್ಯವಿದ್ದರೂ ಆ ಸಂಗತಿಗಳು ದ್ವೇಷದ ಪರಮಾವಧಿ ತಲುಪುತ್ತಿರಲಿಲ್ಲ. ಮತ್ತೊಬ್ಬರ ಬದುಕನ್ನು ಹೈರಾಣಾಗಿಸುವ, ದುರಿತಕ್ಕೀಡುಮಾಡುವ, ಇರಿತವನ್ನುಂಟುಮಾಡುವ ತುರೀಯಾವಸ್ಥೆ ಮುಟ್ಟುತ್ತಿರಲಿಲ್ಲ. ಕಿಂಡಿಗಳಿದ್ದು ಕೈಚಾಚಬಹುದಾದ ಬೇಲಿಗಳಿದ್ದವೇನೊ. ಪರಸ್ಪರರನ್ನು ಇಬ್ಭಾಗ ಮಾಡುವ ಬಲವಾದ ಗೋಡೆಗಳಿರಲಿಲ್ಲ. ಒಂದು ವೇಳೆ ಗೋಡೆ ಏಳುವ ಸೂಚನೆ ಕಂಡು ಬಂದರೂ ಜನಸಾಮಾನ್ಯರು ಆಸ್ಪದ ಕೊಡುತ್ತಿರಲಿಲ್ಲ. ಈಗಿನ ಸಂದರ್ಭಕ್ಕೆ ಹೋಲಿಸಿದರೆ ಸದ್ಯದ ಪರಿಸ್ಥಿತಿ ತಾತ್ಕಾಲಿಕವೇ ಹೊರತು ಅದು ಸಾರ್ವತ್ರಿಕವಲ್ಲ. ಬದುಕಿನ ಪ್ರತೀ ಹಂತದಲ್ಲೂ ಪರಸ್ಪರ ಸಹಾಯ ಸಹಕಾರದ ಬಾಂಧವ್ಯ ಬೆಸೆದುಹೋಗಿದೆ. ಕೊಂಡಿ ಕಳಚಿದರೆ ಅಲ್ಲೋಲ ಕಲ್ಲೋಲವೆ. ಅಷ್ಟೇ ಅಲ್ಲ. ತಮ್ಮೊಂದಿಗೇ ಬೆರೆತುಹೋದವರ ಬಗ್ಗೆ ಮನುಷ್ಯ ಸಹಜ ಜಟಾಪಟಿಗಳಿದ್ದಾವೆಯೆ ಹೊರತು ತೀವ್ರ ಆಕ್ರೋಶವಲ್ಲ. ಸಹಜ ಬದುಕಿನ ಮಾದರಿಗಳು ಅಷ್ಟು ಶಿಥಿಲವಲ್ಲ.

ನಿಮಗೆ ಏನು ಅನ್ನಿಸ್ತು?
2 ವೋಟ್