ಮುಂಬಯಿಯ ಸಹಬಾಳ್ವೆ ಮುರಿಯಲು ದಾವೂದನಿಂದಲೂ ಸಾಧ್ಯವಾಗಿಲ್ಲ!

bombay

ಸೌಹಾರ್ದತೆ, ಸಾಮರಸ್ಯ ಎಂದಾಕ್ಷಣ ಮುಂಬಯಿಯಿಂದ ನಾವೆಲ್ಲ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ. ಅದರ ಜೀವಜಾಲದೊಳಗೆ ಅಂತರ್ಗತವಾಗಿ ಹರಿಯುತ್ತಿರುವ ಜೀವಸೆಲೆಯ ತಂತುಗಳನ್ನು ದೇಶದ ತುಂಬ ಹಬ್ಬಿಸುವ ಕೆಲಸ ಮಾಡಬೇಕಾಗಿದೆ. ಅದು ಜಾತಿ, ಮತ, ಧರ್ಮ ಕುಲ ಗೋತ್ರಗಳ ಹಂಗು ತೊರೆದ ಬದುಕಿನ ಅನನ್ಯ ಕ್ರಮವೇ ಆಗಿದೆ..!!

ಸಹಬಾಳುವೆಯ ಕತೆಗಳನ್ನು ಬರೆಯಲು ಹೊರಟಾಗ ಮೊದಲು ಏನು ಬರೆಯಬೇಕೆಂದೇ ಹೊಳೆಯಲಿಲ್ಲ. ಯಾಕಂದರೆ, ಹುಟ್ಟಿ ಬೆಳೆದೂರು, ಕಾಲೇಜು ಕಲಿತ ಊರು, ಉದ್ಯೋಗಕ್ಕೆ ಸೇರಿದೂರು, ಅದಾದ ನಂತರ ಮೈಸೂರು ಸೇರುವ ವರೆಗೂ ಮುಂಬೈ ಸಹಿತ ಕಂಡ ಹತ್ತಾರು ಸಣ್ಣ ದೊಡ್ಡ ಊರುಗಳಲ್ಲೂ  'ಸೌಹಾರ್ದತೆ' ಅನ್ನೋ ಶಬ್ಧವನ್ನು ನಮ್ಮ ದೈನಂದಿನ ಬದುಕಿನಲ್ಲಿ ಪ್ರತ್ಯೇಕವಾಗಿ ಉಚ್ಚರಿಸುವ ಸಂದರ್ಭವೇ ಬರುತ್ತಿರಲಿಲ್ಲ.

ಬಾಲ್ಯ ಕಳೆದ ಊರುಗಳಲ್ಲಿ ಎಲ್ಲರೂ ಜೊತೆಯಾಗಿ ಆಟವಾಡುತ್ತಿದ್ದೆವು, ಜಗಳಾಡುತ್ತಿದ್ದೆವು, ಮತ್ತೆ ಒಂದಾಗುತ್ತಿದ್ದೆವು. ನಾರಾಯಣ, ಸೈಮನ್, ಅಬ್ದುಲ್ಲಾ ಇವೆಲ್ಲ ಶಾಲೆಯಲ್ಲಿ ದಾಖಲೆಗಾಗಿ ಇಟ್ಟ ಹೆಸರುಗಳಾಗಿದ್ದವೇ ವಿನಃ ಯಾವುದೇ ಜಾತಿ ಧರ್ಮದ ಸಂಕೇತಗಳಾಗಿರಲೇ ಇಲ್ಲ. ಕಾಲೇಜಿನಲ್ಲಿದ್ದಾಗ ನಾನು ಆಪ್ತ ಗೆಳೆಯ ಇಮ್ತಿಯಾಜ್‌ಮನೇಲಿ,ಅವನು ನಮ್ಮ ಮನೇಲಿ ಅದೆಷ್ಟೋ ದಿನ ಕಳೆದಿದ್ದುಂಟು.

ಬ್ಯಾಂಕಿಗೆ ಸೇರಿದಾಗಲೂ ರೊಜಾರಿಯೋ, ಇಮ್ತಿಯಾಜ್, ಚನಿಯ, ನಾರಾಯಣ, ಅಮಿತ್ ಸಿಂಗ್ ಇವರೆಲ್ಲ ನಮ್ಮ ಆತ್ಮೀಯ ಸಹೋದ್ಯೋಗಿಗಳೋ, ಗ್ರಾಹಕರೋ ಆಗಿದ್ದರೇ ಹೊರತು ಧರ್ಮ ಜಾತಿಗಳ ಪ್ರತಿನಿಧಿಗಳಾಗಿರಲಿಲ್ಲ. ಹಾಗಾದರೆ, ಈ ಕೋಮು ಗಲಭೆ, ದ್ವೇ಼ಷ, ಸೌಹಾರ್ದ ನನ್ನ ಅನುಭವಕ್ಕೆ ಬಂದಿದ್ದು ಯಾವಾಗ?
1983ರಲ್ಲಿ  ಮೈಸೂರಿಗೆ ಬಂದಾಗ ಮೊದಲು ಹೊಸದಾಗಿ ಪರಿಚಯವಾದ ಶಬ್ಧ-'ಕೋಮು ಘರ್ಷಣೆ'..! ಅದೂ, ಡೆಕ್ಕನ್ ಹೆರಾಲ್ಡ್ ನಲ್ಲಿ ಪ್ರಕಟವಾದ ಒಂದು ಕತೆಯಿಂದಾಗಿ ಮೈಸೂರು ಹೊತ್ತಿ ಉರಿದಾಗ. ಒಂದು ವಾರಗಳ ಕಾಲ ದ್ವೇಷದ ಬೆಂಕಿ, ದೊಂಬಿ, ಕರ್ಫ್ಯೂನಿಂದ ನರಳಿದ ನಂತರ ಕೇಳಿಸಿದ್ದು- 'ಕೋಮು ಸೌಹಾರ್ದ' ಎಂಬ ಇನ್ನೊಂದು  ಶಬ್ಧ..!! ಅಲ್ಲಿಂದ ಶುರುವಾದ ಈ ಕೋಮು ಘರ್ಷಣೆ ಮತ್ತು ಕೋಮು ಸೌಹಾರ್ದ ಶಬ್ದಗಳ ಜೋಡೆತ್ತಿನ ಜಂಟಿ ಪಯಣ ಈಗಲೂ ದೇಶಾದ್ಯಂತ ರಾಜಕೀಯ ಚದುರಂಗದಾಟದ ಭಾಗವಾಗಿ ನಿರಂತರ ಸಾಗುತ್ತಲೇ ಇದೆ.

ಇದು ನಡೆದದ್ದು 1986ರಲ್ಲಿ. ಇದಾದ 7 ವರ್ಷಗಳ ನಂತರ ಅಂದರೆ, 1993 ಮಾರ್ಚ್ 25 ರಂದು ಮೈಸೂರಿನ ಸಮೀಪ ಬದನವಾಳಿನಲ್ಲಿ ಮೇಲ್ಜಾತಿಯ ಕ್ರೌರ್ಯ, ಅಸ್ಪೃಶ್ಯತೆಯ ಬೆಂಕಿಗೆ ಮೂರು ಜೀವಗಳು ಬಲಿಯಾದವು. ನಂತರ ಊರ ಮುಖಂಡರ, ಅಧಿಕಾರಿಗಳ ಶಾಂತಿ ಸಭೆಯ ನಾಟಕವೂ ನಡೆಯಿತು.

ಇಲ್ಲಿ ನಾವೆಲ್ಲ ಗಮನಿಸಬೇಕಾದ ವಿಚಿತ್ರ ಕಟು ಸತ್ಯವೊಂದಿದೆ. ಪ್ರತೀ ಕೋಮುಘರ್ಷಣೆಯ ಬೆನ್ನಲ್ಲಿ ಕೋಮು ಸೌಹಾರ್ದದ ನಾಟಕವಾದರೂ ನಡೆಯುತ್ತದೆ. ಆದರೆ ಸೌಹಾರ್ದತೆ, ಸಹಬಾಳುವೆಯ ಬಗೆಗೆ ಮಾತನಾಡುವಾಗ ಶತ ಶತಮಾನಗಳಿಂದ ಈ ಸಮಾಜ, ದೇಶವನ್ನು ಕೋಮು ದ್ವೇಷಕ್ಕಿಂತಲೂ  ಭೀಕರವಾಗಿ ಕಾಡುತ್ತ ಬಂದಿರುವ  ಜಾತಿ, ಅಸ್ಪೃಶ್ಯತೆಯ ಆಚರಣೆಯ ಕುರಿತು ಪ್ರಜ್ಞಾಪೂರ್ವಕವಾಗಿ ಮರೆಯುತ್ತೇವೆ. ಯಾಕೆಂದರೆ, ತೋರಿಕೆಯ ಶಾಂತಿ ಸಭೆಯಾಚೆಗೆ ಬಹುಶಃ ಅಸ್ಪೃಶ್ಯತೆ, ಜಾತಿ ವೈಷಮ್ಯಗಳನ್ನು 'ಸೌಹಾರ್ದ ಸಹಬಾಳ್ವೆ ' ಎಂಬ ಶಬ್ಧ ಪರಿಧಿಯ ಆಚೆಗೆ ಸಹಜವೆಂಬಂತೇ ಇರಿಸಿಬಿಟ್ಟಿದ್ದೇವೆಯೇ ಅನ್ನಿಸುತ್ತದೆ.

Image
Mumbai

ಸದಾ ಕಾಡುವ ಪ್ರಶ್ನೆ

ನನಗೊಂದು ಪ್ರಶ್ನೆ ಯಾವಾಗಲೂ ಕಾಡುತ್ತಿರುತ್ತದೆ. ಈ ದೇಶದಲ್ಲಿ ಕೋಮುಗಲಭೆ, ವೈಷಮ್ಯಗಳಿಂದ ಸತ್ತವರು, ಪೀಡಿತರಾದವರು ಹೆಚ್ಚೋ, ಜಾತೀಯತೆ, ಅಸ್ಪೃಶ್ಯತೆಯ ದಳ್ಳುರಿಗೆ ಸಿಲುಕಿ ದಾರುಣವಾಗಿ ಸತ್ತವರು, ನೊಂದವರು ಹೆಚ್ಚೋ? ಮತ್ತೆ, ಕೋಮು ವೈಷಮ್ಯದ ನೋವು ಅವಮಾನ ಹೆಚ್ಚಿನದೋ, ಅಸ್ಪೃಶ್ಯತೆಯ ಗಾಯದ ನೋವು ಅವಮಾನ ಹೆಚ್ಚಿನದೋ? ಈ ದೇಶದ ಮುನ್ನಡೆಯಲ್ಲಿ ಕ್ಯಾನ್ಸರ್ ನಂತೆ ಕಾಡುವುದು ಜಾತಿ, ಅಸ್ಪೃಶ್ಯತೆಯ ಹುಣ್ಣುಗಳೋ, ಕೋಮು ದ್ಷೇಷದ ಗಾಯಗಳೋ?

ನನಗ್ಗೊತ್ತು, ಇವೆರಡೂ ಸಮಸ್ಯೆಗಳ ಮೂಲಧಾತು, ಆಯಾಮಗಳು  ಭಿನ್ನವಾದದ್ದೆಂದು. ಕೋಮು ಘರ್ಷಣೆಯ ಹಿಂದೆ ಇರುವುದು ರಾಜಕೀಯ ಅಜೆಂಡಾದ ಆಯಾಮ. ಅಸ್ಪೃಶ್ಯತೆಯ ಹಿಂದಿರುವುದು ಸಾಮಾಜಿಕ ಆಯಾಮ. ಅದೇನೇ ಆದರೂ, ಸಹಬಾಳ್ವೆಯ ಕಥನದಲ್ಲಿ ಇವೆರಡೂ ಸಮಸ್ಯೆಗಳಿಗೂ ಸಮಾನ ಪಾಲು, ಜಾಗವಿರಬೇಕಲ್ಲವೇ? ಕೋಮು ದ್ವೇಷಕ್ಕೆ ಮದ್ದರೆದು ಮುಲಾಮು ಹಚ್ಚಲೆತ್ನಿಸುವಾಗ, ಅಸ್ಪೃಶ್ಯತೆಯ ದಳ್ಳುರಿಯಲ್ಲಿ ಬೆಂದವರ ನೋವಿಗೂ ಸ್ಪಂದಿಸುತ್ತ ಅವರ ಜತೆಗೂ ಸಹಬಾಳ್ವೆಯ ಕಥನವನ್ನು ವಿಸ್ತರಿಸುವುದು ಬೇಡವೇ?

ಮತ್ತೆ, ನಾವೆಲ್ಲ ಸೌಹಾರ್ದತೆಯ ಅನುಭವ ಹೇಳುವಾಗಲೂ ಊರಲ್ಲೇ ಹುಟ್ಟಿಬೆಳೆದ, ಚೆನ್ನಾಗಿ ಗುರುತಿರುವ  ವಿವಿಧ ಧರ್ಮಗಳವರ ಜೊತೆಗಿನ ಒಡನಾಟದ ಬಗೆಗೆ ಮಾತ್ರ ಹೇಳುತ್ತೇವೆ. ಹಾಗೆ ಹೇಳುವಾಗಲೂ ಬೇರೆ ಧರ್ಮಗಳ ಮಂದಿಯ ಜೊತೆಗಿನ ಒಡನಾಟಕ್ಕೂ ಸಾಮಾಜಿಕವಾಗಿ ಭಿನ್ನ ಭಿನ್ನ ಸ್ತರಗಳಲ್ಲಿರುವ ಜಾತಿಗಳವರೊಂದಿಗಿನ ಒಡನಾಟಕ್ಕೂ ಇರುವ ವ್ಯತ್ಯಾಸವನ್ನು ಪ್ರಜ್ಞಾಪೂರ್ವಕವಾಗಿ ಮರೆಯುತ್ತೇವೆ.

ಆದರೆ, ಇದೆಲ್ಲವನ್ನೂ ಮೀರಿದ ನಿಜವಾದ ಸೌಹಾರ್ದ ಬದುಕನ್ನು ವೈಯಕ್ತಿಕವಾಗಿ ನಾನು ಕಂಡದ್ದು ಮುಂಬಯಿಯಲ್ಲಿ ಮಾತ್ರ. ಅನೇಕ ನಗರಗಳನ್ನು ಹತ್ತಿರದಿಂದ ಕಂಡಿದ್ದರೂ ಏಳು ವರ್ಷಗಳ ಕಾಲ ನಾನು ವಾಸವಿದ್ದ ಮುಂಬಯಿ,ಯಾವತ್ತಿಗೂ ನನ್ನ ಬದುಕಿನಲ್ಲಿ, ನೆನಪುಗಳ ಭಾವಕೋಶದಲ್ಲಿ ಇಂದಿಗೂ ಉತ್ತುಂಗ ಸಹಬಾಳುವೆಯ ಸೌಹಾರ್ದ ನಗರವಾಗಿಯೇ ಉಳಿದಿದೆ. ಈ ನಗರವೇ ಒಂದು ಮಿನಿ ಇಂಡಿಯಾ. ಮುಂಬಯಿಯಲ್ಲಿ ಸಾಮರಸ್ಯ ಸೌಹಾರ್ದತೆ ಅನ್ನುವುದು  ಕೇವಲ ಸಂಕೇತವಲ್ಲ, ತೋರಿಕೆಯ ಆಡಂಬರವಲ್ಲ. ಅಲ್ಲಿ ಅದೊಂದು ಜಾತಿ,ಅಸ್ಪೃಶ್ಯತೆ, ಮತ ಧರ್ಮ ಕುಲ ಗೋತ್ರಗಳ ಹಂಗು ತೊರೆದ ಬದುಕಿನ ಅನನ್ಯ ಕ್ರಮವೇ ಆಗಿದೆ..!! ಹಾಗೆಂದು, ಅಲ್ಲಿ ಜಾತಿ ಮತಗಳ ಬೇಧ ಭಾವಗಳು ಇಲ್ಲವೇ ಇಲ್ಲವೆಂದಲ್ಲ. ಆದರೆ ಅದನ್ನೂ ಮೀರಿ ನಿಂತ ಮಾನವೀಯ ಸೆಲೆಯೊಂದು ಮುಂಬಯಿಯುದ್ಧಕ್ಕೂ ಗುಪ್ತಗಾಮಿನಿಯಂತೇ ಹರಿಯುತ್ತಿದೆ ಎಂದು ನನಗನಿಸುತ್ತದೆ.

ಸೌಹಾರ್ದ ಬದುಕಿನ ಮುಂಬಯಿಯ ವಿಶಿಷ್ಟ ಚೆಹರೆಗಳ ನೂರಾರು ಉದಾಹರಣೆಗಳನ್ನು ಪುರಾಣ ಕತೆಗಳಂತೇ ಹೇಳುತ್ತಾ ಹೋಗಬಹುದು. ಅದು ದೈನಂದಿನ ರೈಲು ಪ್ರಯಾಣವಿರಬಹುದು, ದಿನಂಪ್ರತಿ ಸಂಭವಿಸುವ ರೈಲು ಅಪಘಾತಗಳಿರಬಹುದು, ಕೋವಿಡ್‌ನ ದಾಂಧಲೆಯಿರಬಹುದು, ಸರಣಿ ಬಾಂಬ್ ಸ್ಪೋಟಗಳಿರಬಹುದು, ಇದ್ದಕ್ಕಿದ್ದಂತೆ ಕುಂಭದ್ರೋಣ ಮಳೆ, ಮಹಾ ವಿಪತ್ತಿನ ಸಂದರ್ಭವಿರಬಹುದು, ಅದಕ್ಕೆಲ್ಲ ಜಾತಿ ಮತ ಧರ್ಮಗಳ ಹಂಗಿಲ್ಲದೇ, ಸಹೃದಯೀ ಮುಂಬಯಿ ಸ್ಪಂದಿಸುವ ರೀತಿಯೇ ಅನನ್ಯವಾದ್ದು. ಉದಾಹರಣೆ ಕೊಡುವುದಾದರೆ, ಕಿಕ್ಕಿರಿದ ರೈಲಿನಲ್ಲಿ ಪ್ರಯಾಣಿಸುವಾಗ ಬಾಗಿಲಲ್ಲಿ ಜೋತಾಡುತ್ತಿದ್ದ ವ್ಯಕ್ತಿಯೊಬ್ಬ ಆಯ ತಪ್ಪಿ ಬಿದ್ದನೆಂದಿಟ್ಟುಕೊಳ್ಳಿ. ಕೂಡಲೇ ಜೊತೆಗಿದ್ದ ಅಪರಿಚಿತರೊಬ್ಬರು ಉಳಿದವರ ನೆರವಿನಿಂದ ಆತನನ್ನೆತ್ತಿಕೊಂಡು ಆಟೋದಲ್ಲೋ, ಟ್ಯಾಕ್ಸಿಯಲ್ಲೋ ಸಮೀಪದ ಆಸ್ಪತ್ರೆಗೊಯ್ದು ಚಿಕಿತ್ಸೆ ಕೊಡಿಸುತ್ತಾರೆ. ಅವರ ಮನೆಯವರನ್ನು ಸಂಪರ್ಕಿಸಿ, ಅರ್ಧ ದಿನ ರಜೆ ಹಾಕಿ ಗಾಯಾಳುವಿನ ಮನೆಯವರು ಬರುವ ತನಕ ಜೊತೆಯಲ್ಲಿದ್ದು ನಂತರ ತನ್ನ ಪಾಡಿಗೆ ತಾನು ಇನ್ನೊಂದು ರೈಲು ಹಿಡಿದು ಕಚೇರಿಗೆ ತೆರಳುತ್ತಾರೆ. ಗಾಯಾಳು ಯಾರೆಂದು ಇವರಿಗೆ ಗೊತ್ತಿರುವುದಿಲ್ಲ, ಇವರು ಯಾರೆಂದು ಗಾಯಾಳುವಿಗೆ ಗೊತ್ತಿರುವುದಿಲ್ಲ!

Image
Marine_Lines_Mumbai

ನೀವು  ನೂರಾರು ಕುಟುಂಬಗಳು ವಾಸವಿರುವ ಯಾವುದೋ ದೊಡ್ಡ ಅಪಾರ್ಟ್‌ಮೆಂಟಿನಲ್ಲಿ  ಅನೇಕ ವರ್ಷಗಳಿಂದ ವಾಸವಿರುತ್ತೀರಿ. ಯಾರೂ ಒಬ್ಬರಿಗೊಬ್ಬರು ಪರಿಚಯವೂ ಇರುವುದಿಲ್ಲ. ಆದರೂ ಯಾವುದೋ ಒಂದು ಕುಟುಂಬದಲ್ಲಿ ಯಾರೋ ಸತ್ತರೆಂದಿಟ್ಟುಕೊಳ್ಳಿ. ಸಾವಿನ ಸುದ್ದಿ ಅದು ಹೇಗೋ ಇಡೀ ಅಪಾರ್ಟ್‌ಮೆಂಟಿನ ಎಲ್ಲ ಮನೆಗೂ ತಲುಪುತ್ತದೆ. ಪ್ರತೀ ಮನೆಯ ಯಜಮಾನ ಅರ್ಧ ದಿನ ರಜೆ ಹಾಕಿ, ಸಾವಿನ ಮನೆಗೆ ಭೇಟಿ ನೀಡಿ, ಸತ್ತವರ ಶವದರ್ಶನ ಮಾಡಿ, ಆ ಕುಟುಂಬಕ್ಕೆ ಒಂದಿಷ್ಟು ಸಾಂತ್ವನ ಹೇಳಿ, ಒಂದೆರಡು ಗಂಟೆ ಅಲ್ಲೇ ಇದ್ದು ಹಿಂತಿರುಗುತ್ತಾರೆ. ಸತ್ತವರು ಯಾರು ಯಾವ ಜಾತಿ, ಧರ್ಮ ಇವರಿಗೂ ಬೇಕಿಲ್ಲ, ನೋಡಲು ಬಂದು ಸಾಂತ್ವನ ಹೇಳಿದವರಾರೆಂದು ಆ ಮನೆಯವರೂ ವಿಚಾರಿಸುವುದಿಲ್ಲ. ಆದರೆ ಸಾವಿಗಿರುವ ಘನತೆಯನ್ನು ಗೌರವಿಸುವುದಷ್ಟೇ ಆ ಕ್ಷಣದ ಕರ್ತವ್ಯ ಎಂಬ ಭಾವವಷ್ಟೇ ಅಲ್ಲಿರುತ್ತದೆ.

ಸೌಹಾರ್ದ ಬದುಕಿನ ಇಂತಹ ವಿಶಿಷ್ಟ ಚೆಹರೆಗಳೇ  ಮುಂಬಯಿಗೊಂದು ಅನನ್ಯತೆಯನ್ನು ತಂದುಕೊಟ್ಟಿದೆ.ನಾಲ್ಕಾರು ತಿಂಗಳ ಕಾಲ ಮುಂಬಯಿಯ ಆಸ್ಪತ್ರೆ ಓಡಾಟದಲ್ಲಿ,ನನ್ನ ಮನೆಯಲ್ಲೇ ಸಂಭವಿಸಿದ ಸಾವಿನ ಸಂದರ್ಭದಲ್ಲಿ ಸ್ವತ: ನನಗಿದರ ಅನುಭವವಾಗಿದೆ. ಇವೆಲ್ಲ ತೀರ ಸರಳ ಉದಾಹರಣೆಗಳೆಂದು ನನಗೊತ್ತಿದೆ. ಹಾಗೇ, ಇದರಾಚೆಗೂ ಮುಂಬಯಿಗೊಂದು ಅತ್ಯಂತ ಸಂಕೀರ್ಣ, ಜಟಿಲ ಆಯಾಮವೂ ಇದೆಯೆಂಬುದನ್ನೂ ಬಲ್ಲೆ..!!

ಇದನ್ನು ಓದಿದ್ದೀರಾ? ಮಾರಿಹಬ್ಬದಲ್ಲಿ ಸಹಬಾಳ್ವೆಯ ತೇರೆಳೆದವರು ನಾವು

ರಣ ಭೀಕರ ಕೋಮುಗಲಭೆಯಿಂದ ನೂರಾರು ಜೀವಗಳ ಮಾರಣ ಹೋಮಕ್ಕೆ ಸಾಕ್ಷಿಯಾಗಿದೆ ಈ ಮುಂಬಯಿ. ಕುಂಭ ದ್ರೋಣ ಮಳೆಗೆ ತತ್ತರಿಸಿ ಬಸವಳಿದಿದೆ ಈ ಮುಂಬಯಿ. ಆದರೂ ಧೃತಿಗೆಡದೆ ಕೆಲವೇ ದಿನಗಳಲ್ಲಿ ಮುಂಬಯಿಯ ಜೀವ ಚೈತನ್ಯ ಮತ್ತೆ ಮತ್ತೆ ಪುಟಿದೆದ್ದಿದೆ. ಈ ವಿಶಿಷ್ಠ ಮಾನವೀಯ ಚಹರೆಯನ್ನು ಅಳಿಸಿ ಹಾಕಲು ಶಿವಸೇನೆ, ಬಾಳಾ ಠಾಕರೆಯಿಂದಲೂ ಸಾಧ್ಯವಾಗಲಿಲ್ಲ,ದಾವೂದ್ ಇಬ್ರಾಹಿಮ್ ನಿಂದಲೂ ಸಾಧ್ಯವಾಗಲಿಲ್ಲ ಎನ್ನುವುದೇ ಮುಂಬಯಿಯ ನಿಜ ಚೆಹರೆಯ ಗಟ್ಟಿತನಕ್ಕೆ ಸಾಕ್ಷಿ. ನಾನು ಮುಂಬಯಿ ತೊರೆದು 20 ವರ್ಷಗಳೇ ಕಳೆದಿವೆ. 2014ರ ನಂತರದ ರಾಜಕೀಯ ಪಲ್ಲಟ ಅಲ್ಲಿರುವ  ಕೆಲವರ ಹುಸಿ ದೇಶಭಕ್ತಿಯ ಉನ್ಮಾದವನ್ನು ಹೆಚ್ಚಿಸಿರಬಹುದು. ಆದರೆ, ಅದೆಲ್ಲವನ್ನೂ ಮೀರಿ ನಿಲ್ಲುವ ತಾಕತ್ತು ಮುಂಬಯಿಗಿದೆ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ..!!

ಹಾಗೆಂದೇ, ಸೌಹಾರ್ದತೆ, ಸಹಬಾಳ್ವೆ, ಸಾಮರಸ್ಯ ಎಂದಾಕ್ಷಣ ಮುಂಬೈಯಿಂದ ನಾವೆಲ್ಲ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ ಅನ್ನುವುದು ನನ್ನ ಖಚಿತ ಅಭಿಪ್ರಾಯ. ಮುಂಬಯಿಯ ಜೀವಜಾಲದೊಳಗೆ ಅಂತರ್ಗತವಾಗಿ ಹರಿಯುತ್ತಿರುವ ಈ ಸೌಹಾರ್ದ, ಸಾಮರಸ್ಯದ ಜೀವಸೆಲೆಯ ತಂತುಗಳನ್ನು ದೇಶದ ತುಂಬೆಲ್ಲ ಹಬ್ಬಿಸುವ ಕೆಲಸ ನಾವೆಲ್ಲ ಮಾಡಬೇಕಾಗಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್