ಸಂಘರ್ಷದ ಅಂತರಾಳದಲ್ಲಿ ಎಲ್ಲರನ್ನೂ ಅಪ್ಪುವ ಪ್ರಕ್ರಿಯೆಯಿದೆ

Bhoota

ಪ್ರಬಲ ಸಂಸ್ಕೃತಿ, ಉಪ ಸಂಸ್ಕೃತಿಗಳ ಮಧ್ಯೆ ನಡೆಯುವ ಈ ಸಂಘರ್ಷದ ಅಂತರಾಳದಲ್ಲಿ ಒಂದನ್ನೊಂದು ಅಪ್ಪುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತದೆ. ಸಂಘರ್ಷವನ್ನು ಪರಿಹರಿಸಲು ಸಾಂಸ್ಕೃತಿಕ ವಿನಿಮಯ ಹಾಗೂ ಸಂವಹನ ನಡೆಯಬೇಕು. ಎರಡೂ ಕಡೆ ಮುಕ್ತತೆ ಇದ್ದರೆ ಇದು ಸಂಭವಿಸುತ್ತದೆ. ಭಾರತೀಯ ಸಂಸ್ಕೃತಿಗೆ ಈ ಗುಣ ಸಹಜವಾಗಿಯೇ ಬಂದಿದೆ.

ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳು ನಮ್ಮೆಲ್ಲರ ನೆಮ್ಮದಿ ಕೆಡಿಸಿವೆ. ಸೌಹಾರ್ದತೆಯನ್ನು ಬಯಸುವ ಬಹುತೇಕರು ಮುಂದೆ ನಮ್ಮ ನಾಡಿಗೆ ಭವಿಷ್ಯವೇ ಇಲ್ಲ ಎಂದು ಭಾವಿಸಿದ್ದಾರೆ. ಆದರೆ ನಾನು ನಂಬಿಕೆ ಕಳೆದುಕೊಂಡಿಲ್ಲ. ಭಾರತೀಯ ಸಂಸ್ಕೃತಿಗಳ ವಿಶಿಷ್ಟ ಲಕ್ಷಣ ಎಂದರೆ "ಸಂಘರ್ಷ ಮತ್ತು ಸಮನ್ವಯ".

ನಮ್ಮ ಸಮಾಜದಲ್ಲಿ ಸಂಘರ್ಷದ ನಂತರ ಸಮನ್ವಯ ಏರ್ಪಟ್ಟಿದೆ ಮತ್ತು ಸಮಾಜ ಈ ಸಮನ್ವಯವನ್ನು ಸಾಂಸ್ಕೃತಿಕ ಸ್ಮರಣೆಯಲ್ಲಿ ಉಳಿಸಿಕೊಳ್ಳುತ್ತದೆ. ಆದರೆ ಈ ಸಮನ್ವಯ ಏರ್ಪಡುವಂತೆ ಮಾಡುವ ಒಂದು ಜೀವಂತ ಸಮುದಾಯ ಇತ್ತು. ಇದು ಸಂಘರ್ಷ ನಡೆಯುವ ಗುಂಪುಗಳ ಮಧ್ಯೆ ಇದ್ದು ಸಮನ್ವಯ ಏರ್ಪಡಿಸಲು ಪ್ರಯತ್ನಿಸುತ್ತದೆ. ಈ ಜೀವಂತ ಸಮುದಾಯವೇ ಇಂದು ಭರವಸೆಯನ್ನು ಕಳೆದುಕೊಳ್ಳದೆ ಸೌಹಾರ್ದತೆಯ ಕಥನಗಳನ್ನು ಕಟ್ಟುತ್ತಿರುವುದು.

ಬಾಲ್ಯದಲ್ಲಿ ಸುಳ್ಯದ ಮಂಡೆಕೋಲಿನಲ್ಲಿ ವರ್ಷಂಪ್ರತಿ ಏಪ್ರಿಲ್ ತಿಂಗಳಲ್ಲಿ ನಡೆಯುವ ಉಲ್ಲಾಕುಳು ದೈವಗಳ ನೇಮ ನೋಡಿದ್ದೇನೆ. ತುಳುನಾಡಿನ ದೈವಾರಾಧನೆಯ ಒಂದು ಪ್ರಬೇಧವಾದ ನೇಮದಲ್ಲಿ ಉಲ್ಲಾಕುಳು ಎಂದು ಕರೆಯುವ ಕಿನ್ನಿಮಾನಿ ಮತ್ತು ಪೂಮನಿ ದೈವಗಳ ಆರಾಧನೆ ನಡೆಯುತ್ತದೆ. ಇಲ್ಲಿ ಅಡ್ಡನ ಪೆಟ್ಟು ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ. ಮಾವಾಜಿ, ಬೊಳುಗಲ್ಲು, ಮುರೂರು ಹಾಗೂ ಕೇನಾಜೆ ಪ್ರದೇಶಗಳ ಪ್ರತಿನಿಧಿಗಳು ಖಾಕಿ ಚಡ್ಡಿ, ಅದಕ್ಕೊಂದು ಕೆಂಪು ಬಟ್ಟೆಯ ಪಟ್ಟಿ ಕಟ್ಟಿ, ತಲೆಗೆ ಮುಂಡಾಸು ಕಟ್ಟಿ ಕೈಯಲ್ಲಿ ಬೆತ್ತದ ದೊಣ್ಣೆ ಮತ್ತು ಬೆತ್ತದ ಅಡ್ಡಣ (ಗುರಾಣಿ) ಹಿಡಿದು ಹೊಡೆದಾಡುತ್ತಾರೆ. ಅಡ್ಡಣದಿಂದ ರಕ್ಷಿಸಿಕೊಳುತ್ತಾರೆ. ಹೊಡೆದಾಟದ ಮಧ್ಯೆ ಉಲ್ಲಾಕುಳು ದೈವ ಬಂದು ಅವರನ್ನು ನಿಲ್ಲಿಸಿ ಸಮಾಧಾನ ಮಾಡಿ ಅವರನ್ನು ಒಂದು ಮಾಡುತ್ತದೆ. ಹಿಂದೊಮ್ಮೆ  ನಡೆದಿರಬಹುದಾದ ಸಂಘರ್ಷವನ್ನು ಆಚರಣೆ ಎಂಬಂತೆ ಪ್ರತೀ ವರ್ಷ ಮರುಸೃಷ್ಟಿಸಿ ಸಮನ್ವಯದೊಂದಿಗೆ ಅಂತ್ಯ ಮಾಡಲಾಗುತ್ತದೆ. ಇಲ್ಲಿ ದೈವವೇ ಮುಂದೆ ಬಂದು ಎಲ್ಲರನ್ನೂ ಒಂದುಗೂಡಿಸುತ್ತದೆ. ಹಾಗಾಗಿ ಇಂದಿನ ದುರಿತ ಕಾಲದಲ್ಲಿ ದೂರ ದೂರವಾಗಿರುವ ಭಾರತೀಯರ ಹೃದಯಗಳನ್ನು ಬೆಸೆಯುವ ಸಣ್ಣ ಸಣ್ಣ ಪ್ರಯತ್ನವನ್ನೂ ದೇವರ ಕೆಲಸ ಎಂದೇ ನಾನು ಭಾವಿಸಿದ್ದೇನೆ.

ಪ್ರತಿಯೊಂದು ಸಮುದಾಯವೂ ತನ್ನದಲ್ಲದ ಸಂಸ್ಕೃತಿಯಿಂದ ತನಗೆ ಅಪಾಯವಿದೆ ಎಂದು ಭಾವಿಸಿಕೊಂಡು ರಕ್ಷಣಾತ್ಮಕ ಪ್ರತಿಕ್ರಿಯೆಗೆ ಶುರು ಮಾಡುತ್ತವೆ. ಇದು ಅತ್ಯಂತ ಸಹಜ ಪ್ರಕ್ರಿಯೆ. ಪ್ರಬಲ ಸಂಸ್ಕೃತಿ ಮತ್ತು ಉಪ ಸಂಸ್ಕೃತಿಗಳ ನಡುವೆ ನಡೆಯುವ ಈ ಸಂಘರ್ಷದ ಅಂತರಾಳದಲ್ಲಿ ಒಂದನ್ನೊಂದು ಅಪ್ಪುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತದೆ. ಸಂಘರ್ಷವನ್ನು ಪರಿಹರಿಸಲು ಸಾಂಸ್ಕೃತಿಕ ವಿನಿಮಯ ಹಾಗೂ ಸಂವಹನ ನಡೆಯಬೇಕು. ಎರಡೂ ಕಡೆ ಮುಕ್ತತೆ ಇದ್ದರೆ ಇದು ಸಂಭವಿಸುತ್ತದೆ. ಭಾರತೀಯ ಸಂಸ್ಕೃತಿಗೆ ಈ ಗುಣ ಸಹಜವಾಗಿಯೇ ಬಂದಿದೆ. ನಿರಂತರ ವಲಸೆ ಸಮುದಾಯಗಳು ಈ ದೇಶದ ಸಂಸ್ಕೃತಿಯನ್ನು ಕಟ್ಟಿದ ಕಾರಣ ಭಿನ್ನ ಸಂಸ್ಕೃತಿಗಳ ನಡುವೆ ಸಂಘರ್ಷ ನಡೆದರೂ ಕೂಡ ಸಂವಹನ ನಡೆಯುವ ಎಲ್ಲಾ ಸಾಧ್ಯತೆಗಳನ್ನು ಭಾರತ ಉಳಿಸಿಕೊಂಡಿದೆ.

ಹೀಗಾಗಿ ಭಾರತದ ಭಿನ್ನ ಸಂಸ್ಕೃತಿಗಳು ಸಾವಿರಾರು ವರ್ಷಗಳಿಂದ ಸ್ಥಿತ್ಯಂತರಗಳಿಗೆ ಒಳಗಾಗುತ್ತಾ ಬೆಳೆದಿದೆ. ಈ ಸಮನ್ವಯವೇ ಇಡೀ ಭಾರತೀಯ ಸಂಸ್ಕೃತಿಗಳನ್ನು ಕಟ್ಟಿದ್ದು. ಪರಸ್ಪರ ಭಿನ್ನ ನಂಬಿಕೆಗಳ ನಡುವೆ ಸಂಬಂಧವನ್ನು ಬೆಳೆಸಿದ್ದು. ಹೇಗೆ ನದಿಯೊಂದು ಹುಟ್ಟಿ ಬೇರೆ ಬೇರೆ ತೊರೆಗಳ ನೀರನ್ನು ತನ್ನೋಡಲಲ್ಲಿ ಹೊತ್ತು ಕಡಲಿಗೆ ಸೇರುತ್ತದೆಯೋ ಹಾಗೆ ಭಾರತವೂ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಮತ, ಪಂಥಗಳನ್ನು, ಧರ್ಮಗಳನ್ನು, ವಲಸೆ ಬಂದ ಸಮುದಾಯಗಳನ್ನು ಒಳಗೊಳ್ಳುತ್ತಾ ಬೆಳೆದಿದೆ. ಇದೇ ನಮ್ಮ ದೇಶಕ್ಕೆ ಇರುವ ವಿಶೇಷ ಲಕ್ಷಣ. ಇದು ಅಖಿಲ ಭಾರತ ಮಟ್ಟದಲ್ಲಿ ಏಕ ಕಾಲಕ್ಕೆ ನಡೆದ ಪ್ರಕ್ರಿಯೆ ಅಲ್ಲ. ದೇಶದ ಅಲ್ಲಲ್ಲಿ ನಡೆದಿದೆ. ಸಂಘರ್ಷಗಳು ನಡೆದಿವೆ. ನಂತರ ಸಮನ್ವಯ ಹೊಂದಿ ಒಂದನ್ನೊಂದು ಅಪ್ಪಿಕೊಂಡಿವೆ. ಉದ್ಯಾವರದ ಅರಸು ಮಂಜಿಷ್ಣಾರು ದೈವಗಳು ಮಸೀದಿಗೆ ಭೇಟಿ ನೀಡುತ್ತವೆ. ಇಂತಹ ಆಚರಣೆಗೆ ಇಸ್ಲಾಮಿನಲ್ಲಿ ಆಸ್ಪದವೇ ಇಲ್ಲದಿದ್ದರೂ ತುಳುನಾಡಿನಲ್ಲಿ ಮಸೀದಿಗೆ ಬರುವ ದೈವಗಳಿಗೆ ಮುಸಲ್ಮಾನರು ಗೌರವ ನೀಡುತ್ತಾರೆ. ಇದು ಸಾಧ್ಯವಾಗುವುದು ಬಹಜನರನ್ನು ಒಳಗೊಳ್ಳುವ ಸಂಸ್ಕೃತಿಯಲ್ಲಿ ಮಾತ್ರ.

ಎಲ್ಲರಿಗೂ ಅಭಯ ನೀಡುವ ತುಳುನಾಡಿನ ದೈವಗಳು

ತುಳುನಾಡಿನ ದೈವಗಳೂ ಎಲ್ಲರನ್ನೂ ಒಂದು ಮಾಡಿ ಅಭಯವನ್ನು ನೀಡುತ್ತವೆ. ʼಹತ್ತು ಜನ ಕೂಡಿದ ಕಳದಲ್ಲಿ ಮುತ್ತಿದೆ ಎಂಬುದು ಹಿರಿಯರು ಮಾಡಿದ ಕಟ್ಟಳೆʼ ಎಂದು ದೈವಗಳ ಎಲ್ಲಾರೂ ಒಂದಾಗಿ ಬಾಳಬೇಕು ಎಂಬುದನ್ನು ನೆನಪಿಸುತ್ತವೆ. ಇದು ತುಳುನಾಡಿನ ಮಾತ್ರವಲ್ಲ, ಭಾರತದ ಬಹುತೇಕ ಸಂಸ್ಕೃತಿಗಳಲ್ಲಿ ಈ ಒಳಗೊಳ್ಳುವಿಕೆಯ, ಒಗ್ಗಟ್ಟನ್ನು ಕಾಪಾಡುವ ಲಕ್ಷಣಗಳಿವೆ. ಕರ್ನಾಟಕದಲ್ಲಿ ಒಂದರ ಮೇಲೊಂದು ಕೋಮು ಸಂಘರ್ಷ ಸೃಷ್ಟಿಸುವ ಹುನ್ನಾರವನ್ನು ಇಟ್ಟುಕೊಂಡು ಕೋಮುವಾದ ಕೆಲಸ ಮಾಡುತ್ತಿದೆ. ಆದರೆ ಇವು ʼದೇಶ ಪ್ರೇಮʼ ಮತ್ತು ʼಧರ್ಮರಕ್ಷಣೆʼ ಹೆಸರಿನಲ್ಲಿ ನಡೆಸುತ್ತಿರುವ ಈ ಯತ್ನಗಳು ದೇಶ ವಿರೋಧಿ ಮತ್ತು ಧರ್ಮ ವಿರೋಧಿಯೇ ಆಗಿವೆ. ಇವರ ಈ ಶಾಸನವೊಂದು ಕರ್ನಾಟಕವನ್ನು ʼಸರ್ವಧರ್ಮಧೇನುನಿವಹಕ್ಕಾಡುಂಬೊಲಂʼ ಎಂದು ಬಣ್ಣಿಸಿದೆ. ಕರುನಾಡು ಬೇರೆ ಬೇರೆ ಧರ್ಮಗಳೆಂಬ ದನಗಳು ಆಡುವ ಬಯಲು. ಇದು ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ ಅನ್ವಯಿಸುತ್ತದೆ. ಈಗ ಸರ್ವಧರ್ಮದ ದನಗಳು ಆಡುವ ಬಯಲನ್ನು ರಣರಂಗ ಮಾಡಲು ಹೊರಟಿದ್ದಾರೆ. ಈ ಎಲ್ಲಾ ಯತ್ನಗಳೂ ಭಾರತದ ಸಾಂಸ್ಕೃತಿಕ ಅಂತಃಸತ್ವವನ್ನು ನಾಶ ಮಾಡುವ ಹುನ್ನಾರ.

Image
ತುಳುನಾಡಿನ ಭೂತಾರಾಧನೆ
ತುಳುನಾಡಿನ ಭೂತಾರಾಧನೆ

ಇದರ ಹಿಂದೆ ಇರುವುದು ಏಕರೂಪಿ ಸಂಸ್ಕೃತಿಯನ್ನು ಹೇರುವ ಅಜೆಂಡಾ. ಏಕ ಸಂಸ್ಕೃತಿಯನ್ನು ಹೇರುವುದು ನಿರಂತರವಾಗಿ ಬಹು ಸಂಸ್ಕೃತಿಯಾಗಿ ಮರು ರಚನೆಗೊಳ್ಳುವ ಸಂಸ್ಕೃತಿಯನ್ನು ನಾಶ ಮಾಡುವ ಮೂಲಕ ನಡೆಯುತ್ತದೆ. ಏಕ ಸಂಸ್ಕೃತಿಯನ್ನು ಹೀರುವಾಗ ಮಾನದಂಡವಾಗಿ ಬಳಸುವ ಮೇಲ್ವರ್ಗದ ಸಂಸ್ಕೃತಿಗಳು ಪ್ರಾಚೀನ ಸ್ವರೂಪವನ್ನು ಉಳಿಸಿಕೊಳ್ಳದೆ ಕೋಮುವಾದ ಪ್ರತಿಪಾದಿಸುವ ಹೊಸ ರಾಷ್ಟ್ರೀಯತೆಗೆ ಪೂರಕವಾಗಿ ಮಾರ್ಪಾಟು ಮಾಡಿಕೊಂಡಿರುತ್ತವೆ. ಇದಕ್ಕೆ ಅಡ್ಡಿ ಪಡಿಸುವ ಬಹುಜನರ ಸಂಸ್ಕೃತಿಯನ್ನು ಈ ಮೇಲ್ವರ್ಗದ ಸಂಸ್ಕೃತಿಯ ಜೊತೆಗೆ ತುಲನೆ ಮಾಡಿ, ಇಲ್ಲವೇ ವಿಲೀನ ಮಾಡಿ ನಾಶ ಮಾಡುತ್ತವೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ತುಳುನಾಡಿನ ದೈವಗಳನ್ನು ಪುರಾಣದ ಪಾತ್ರಗಳ ಜೊತೆಗೆ ಸಮೀಕರಿಸಿ ಹೊಸ ಕಥನವನ್ನು ಕಟ್ಟುವುದು.

ಬೊಬ್ಬರ್ಯ ಎಂಬ ಮುಸಲ್ಮಾನ ದೈವ ಇಸ್ಲಾಂ ಮತ್ತು ತುಳುನಾಡಿನ ಸಂಸ್ಕೃತಿಗಳ ಮಧ್ಯೆ ಸಂಬಂಧವನ್ನು ಬೆಸೆಯುತ್ತದೆ. ಇದು ಮತೀಯವಾದಿ ಶಕ್ತಿಗಳಿಗೆ ಒಂದು ಸವಾಲು. ಹೀಗಾಗಿ ಬೊಬ್ಬರ್ಯ ಎಂಬ ದೈವ ಮಹಾಭಾರತದ 'ಬಬ್ರುವಾಹನ' ಎನ್ನುವ ಮೂಲಕ ಹೊಸ ಕಥವನ್ನು ಬರೆದು ನೆಲಮೂಲದ ಸಂಸ್ಕೃತಿಯನ್ನು ನಾಶ ಮಾಡುತ್ತಾರೆ. ಈ ರೀತಿ ಮಾಡುತ್ತಾ ಹೋದರೆ ಏಕರೂಪಿ ಸಂಸ್ಕೃತಿಯನ್ನು ಹೇರುವ ಕೋಮುವಾದಿ ಅಜೆಂಡಾ ಸಫಲವಾಗುತ್ತದೆ ಎಂಬುದು ಒಂದು ಭ್ರಮೆಯಷ್ಟೇ! ಕೋಮುವಾದಿ ಶಕ್ತಿಗಳ ದೊಡ್ಡ ದೌರ್ಬಲ್ಯ ಎಂದರೆ ದೇಶದ ಸಂಸ್ಕೃತಿಗಳನ್ನು ಅರಿಯಲು ಅವರು ಸೋತಿರುವುದು.

ಇದನ್ನು ಓದಿದ್ದೀರಾ? ಮುಂಬಯಿಯ ಸಹಬಾಳ್ವೆಯನ್ನು ಮುರಿಯಲು ದಾವೂದನಿಂದಲೂ ಸಾಧ್ಯವಾಗಿಲ್ಲ!

ವಜ್ರಾದೇಹಿ ಮಠದ ಸ್ವಾಮಿಗಳು ಇತ್ತೀಚೆಗೆ ಒಂದು ಹೇಳಿಕೆಯನ್ನು ನೀಡಿದರು. 'ಅಯ್ಯಪ್ಪನ್ನು ನೋಡಲು ಹೋಗುವ ಭಕ್ತರು ವಾವರ ಸ್ವಾಮಿಯ ಮಸೀದಿಗೆ ಹೋಗುವುದನ್ನು ನಿಲ್ಲಿಸಬೇಕು. ಇದು ಯಾರೋ ತಲೆಕೆಟ್ಟವರು ಮಾಡಿದ ಆಚರಣೆ!' ಎಂದರು. ಇದರ ಹಿಂದೆ ಮುಸ್ಲಿಂ ಮೂಲದ ದೈವಗಳು, ದೈವಗಳ ಮಸೀದಿ ಬೇಟಿ, ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ಬರುವುದು ಇವೆಲ್ಲವನ್ನು ವಿರೋಧಿಸುವ ದ್ವನಿಯೇ ಅಡಗಿದೆ. ಇದು ಕೋಮುವಾದಿಗಳಲ್ಲಿ ಇರುವ ಜ್ಞಾನದ ಕೊರತೆಯನ್ನು ತೋರಿಸುತ್ತದೆ. ನಿಜವಾದ ಭಾರತವನ್ನು ಅರಿತವರು, ನಿಜವಾದ ದೇಶ ಭಕ್ತರು ಈ ದೇಶದ ಅತ್ಮವಾದ ಸಮನ್ವಯ ಸಂಸ್ಕೃತಿಯ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುತ್ತಾರೆ. ಇವರಿಗೆ. ತುಳುನಾಡಿನ ಇತಿಹಾಸ, ತುಳುನಾಡನ್ನು ಕಟ್ಟಿ ಬೆಳೆಸಿದ ಭಿನ್ನ ಸಮುದಾಯಗಳ ಸಂಸ್ಕೃತಿಗಳ ಬಗ್ಗೆ ಅರಿವಿಲ್ಲ. ಇದರ ತಿಳುವಳಿಕೆ ಇದ್ದರೆ ಭಾರತವನ್ನು ಅರ್ಥ ಮಾಡಿಕೊಳ್ಳಬಹುದು.

ಆದರೆ ಇದ್ಯಾವುದೂ ಇಲ್ಲದೆ ಕೋಮುವಾದ ಕಟ್ಟುವ ಸುಳ್ಳು ಕಥನಗಳು ಮಾಧ್ಯಮಗಳ ಮೂಲಕ ಮನೆ ಮನೆ ತಲುಪುತ್ತಿದೆ. ಆದರೆ ಇದು ದೀರ್ಘಕಾಲದವರೆಗೆ ಉಳಿಯುವುದಿಲ್ಲ. ಕೋಮುವಾದವನ್ನು ಎಷ್ಟೇ ಜೀವಂತವಾಗಿಟ್ಟರೂ ಭಾರತ ಅದಕ್ಕೆ ಪ್ರತಿರೋಧವಾಗಿ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ಮುಂದೆ ಸಹಬಾಳ್ವೆಯ ಬದುಕನ್ನು ಮತ್ತೆ ಕಟ್ಟುತ್ತೇವೆ ಎಂಬ ನಂಬಿಕೆ ನನಗಿದೆ. ನಿರಂತರವಾಗಿ ಕೆಡವುವ ದುಷ್ಟ ಶಕ್ತಿಗಳಿಗೆ ಎದುರಾಗಿ ಕಟ್ಟುವ ಕಥನವನ್ನು ಹೇಳುತ್ತೇವೆ. ಬಹು ಸಂಸ್ಕೃತಿಗಳು ಈ ದೇಶವನ್ನು ರೂಪಿಸಿದ ಚಂದವನ್ನು ಉಳಿಸಿಕೊಳ್ಳಲು ದನಿಯೆತ್ತುತ್ತೇವೆ. ಸಂಖ್ಯೆ ಸಣ್ಣದೇ ಇರಬಹುದು, ಆದರೆ ಸತ್ಯಸಂದವಾದ ದನಿಗಳ ಪರಿಣಾಮ ದೀರ್ಘಕಾಲಿಕ.

ನಿಮಗೆ ಏನು ಅನ್ನಿಸ್ತು?
4 ವೋಟ್