ʼಸಂಕಿ ಅಮಾಂಯ್‌ʼ ಮನೆಯ ದೀಪಾವಳಿಯೂ, ಪಟಾಕಿ ಸ್ಪೆಷಲಿಸ್ಟ್ ದಿನಕರನೂ...

Deepavali

ದಿನೇ ದಿನೇ ಸಾಮರಸ್ಯ ಕದಡಿ, ಕೋಮು ಸಂಘರ್ಷದ, ಜನಾಂಗೀಯ ದ್ವೇಷದ ವಿಷ ವರ್ತುಲ ತನ್ನ ಪರಿಧಿಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಈ ದುರಿತ ಕಾಲದಲ್ಲಿ  ಜನ ಸಾಮಾನ್ಯರು ಸಹಬಾಳ್ವೆಯ ಬದುಕು ನಡೆಸುತ್ತಲೇ ದ್ವೇಷದ ಅಭಿಯಾನಗಳಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಇದನ್ನು ನೋಡಿದರೆ ಮರುಭೂಮಿಯಲ್ಲಿ ಒಯಸಿಸ್ ಕಂಡಂತಾಗುತ್ತದೆ.

ಮನೆಯಿಂದ ಹೊರಗೆ ಹೋದರೆ ಮತ-ಮತಗಳ ನಡುವಿನ ಘರ್ಷಣೆ. ಕಾಣದ ದೇವರನ್ನು ರಕ್ಷಿಸಲು, ಕಣ್ಣೆದುರಿನಲ್ಲಿರುವ ನೆರೆಯಾತನ ರಕ್ತಕ್ಕಾಗಿ ಹಾತೊರೆಯುವ ರಕ್ತಪಿಪಾಸುಗಳು. ವಿಷದ ಗಾಳಿಯನ್ನೇ ಉಸಿರಾಡುತ್ತಿರುವ ಸಮಾಜ, ಧರ್ಮ ಎಂಬ ಅಫೀಮಿನ ನಶೆಯನ್ನು ನೆತ್ತಿಗೇರಿಸಿ ರಕ್ತತರ್ಪಣಕ್ಕಾಗಿ ಬೀದಿ ಸುತ್ತುತ್ತಿರುವ ಯುವಕರು. ಅವರನ್ನು ಪ್ರಚೋದಿಸುತ್ತಿರುವ ಪುರೋಹಿತಶಾಹಿ ವ್ಯವಸ್ಥೆ ಹಾಗೂ ಈ ಪುರೋಹಿತಶಾಹಿಯ ಗುತ್ತಿಗೆದಾರರು... ಹೀಗೆ ನಮ್ಮ ಸುತ್ತಮುತ್ತಲಿನ ಜಗತ್ತಿನ ವಿದ್ಯಮಾನಗಳನ್ನು ನೋಡಿದಾಗ ನಾವು ವಿನಾಶದೆಡೆಗೆ ಸಾಗುತ್ತಿದ್ದೇವೆ ಎಂದು ತಿಳಿದೂ, ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶದಂಥ ಪ್ರಯತ್ನಗಳು ನೀರಿನಲ್ಲಿ ಮುಳುತ್ತಿರುವವರಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತೆ.

ಭಾರತದ ನೆಲಕ್ಕೆ ಸಾಮರಸ್ಯ, ಸಹಬಾಳ್ವೆ ಯಾರೂ ಕಲಿಸಬೇಕಾಗಿಲ್ಲ. ಯಾಕೆಂದರೆ ಇದು ನಮ್ಮ ಮಣ್ಣಿನ ಗುಣ. ಹಾಗಾಗಿಯೇ ಈ ನೆಲದಲ್ಲಿ ಸಾವಿರಾರು ವರುಷಗಳ ಕಾಲ ಜಗತ್ತನ್ನೇ ವಿಸ್ಮಯಗೊಳಿಸುವ ರೀತಿಯಲ್ಲಿ ವಿವಿಧ ಧರ್ಮ, ಸಂಸ್ಕೃತಿ, ಭಾಷೆ, ಸಿದ್ಧಾಂತ, ಆಧ್ಯಾತ್ಮಿಕ ಚಿಂತನೆಗಳು, ಸಾಮಾಜಿಕ ಕ್ರಾಂತಿಗಳು, ಹೋರಾಟಗಳು ಬೆಳೆದು ನಿಂತಿವೆ. ಈ ನೆಲ ತನ್ನನ್ನರಸಿ ಬಂದ ಯಾವುದೇ ಸಿದ್ಧಾಂತ, ಮತ, ಜನ, ಜನಾಂಗ, ಭಾಷೆಗಳನ್ನು ದೂರ ಸರಿಸಿಲ್ಲ. ಬದಲಾಗಿ ತನ್ನೊಡಲಲ್ಲೇ ಕೂರಿಸಿ ಅದನ್ನು ಪೋಷಿಸಿ ಬೆಳೆಸಿದೆ. ಹಾಗಾಗಿಯೇ ಭಾರತ ಸರ್ವ ಜನಾಂಗಗಳ ತೋಟ, ಈ ನೆಲ ಯಾವುದೇ ಒಂದು ಸಿದ್ದಾಂತ, ಮತ, ಸಂಸ್ಕೃತಿಯ ಸೊತ್ತಲ್ಲ. ಬದಲಾಗಿ ಈ ನೆಲ ಇಲ್ಲಿ ನೆಲೆ ಕಂಡಿರುವ, ಈ ನೆಲ-ಜಲವನ್ನು ಒಪ್ಪಿ-ಅಪ್ಪಿಕೊಂಡಿರುವ ಪ್ರತಿಯೋರ್ವ ಭಾರತೀಯನ ಸೊತ್ತು.

ನಾವೆಲ್ಲರೂ ಹುಟ್ಟಿ ಬೆಳೆದಿರುವುದು ಇಂಥ ಸಾಮರಸ್ಯ, ಸಹಬಾಳ್ವೆಯನ್ನು ತನ್ನ ಅಸ್ಮಿತೆಯನ್ನಾಗಿ ಮಾಡಿಕೊಂಡಿರುವ ಭಾರತದಲ್ಲಿ. ನಮ್ಮ ಬಾಲ್ಯದಲ್ಲಿ  ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ವ್ಯಾಖ್ಯಾನಗಳೇ ಗೊತ್ತಿದ್ದಿಲ್ಲ ಅನ್ನಬಹುದು. ಮುಂಬಯಿಯಲ್ಲಿ ಹುಟ್ಟಿದ ನಾನು, ಬೆಳೆದದ್ದು ಕೋಮು ಸಂಘರ್ಷದ ತೊಟ್ಟಿಲಾಗಿರುವ ಇದೇ ಉಡುಪಿಯ ಪಕ್ಕದ ಬ್ರಹ್ಮಾವರದಲ್ಲಿ. ನನ್ನ ಬಾಲ್ಯದಲ್ಲಾಗಲಿ, ಶಾಲೆಯಲ್ಲಾಗಲಿ ಒಂದೊಮ್ಮೆಯೂ ನನಗೆ ನಾನೋರ್ವ ಅಲ್ಪಸಂಖ್ಯಾತ, ನಾನು ಈ ನೆಲದ ವಾರಾಸುದಾರನ್ನಲ್ಲ ಎನ್ನುವ ಭಾವನೆ ಬಂದಿದ್ದಿಲ್ಲ. ಕ್ರೈಸ್ತ ಧರ್ಮ ಭಗಿನಿಯರು ನಡೆಸುವ ಶಾಲೆ ನನ್ನದಾಗಿದ್ದರೂ, ಅಲ್ಲಿ ಕಲಿತ ಪ್ರತೀ ಹತ್ತು ಜನರಲ್ಲಿ ಒಂಬತ್ತು ಮಂದಿ ಕ್ರೈಸ್ತರಾಗಿರಲಿಲ್ಲ. ಆದರೆ ಅವರಿಗಾಗಲಿ, ಅವರ ಹೆತ್ತವರಿಗಾಗಲಿ ಎಂದೂ ನಮ್ಮದು ಕ್ರೈಸ್ತರು ನಡೆಸುವ ಶಾಲೆ ಎನ್ನುವ ಅಭದ್ರತೆ ಕಾಡಲಿಲ್ಲ. ನಮ್ಮ ಹಬ್ಬಗಳು, ಅವರ ಹಬ್ಬಗಳು, ಇನ್ನೊಬ್ಬರ ಹಬ್ಬಗಳೆಂಬ ತಾರತಮ್ಯವೂ ಇರಲಿಲ್ಲ. ದೀಪಾವಳಿ ಬಂದರೆ ನಮಗೂ ಸಡಗರ, ಪಟಾಕಿ ಸಿಡಿಸುವ ಆತುರ, ಗೂಡುದೀಪ ತಯಾರಿಸುವ ಕಾತುರ. ಕ್ರಿಸ್‍ಮಸ್ ಬಂತೆಂದರೆ ನಮ್ಮೊಟ್ಟಿಗೆ ನಮ್ಮ ನೆರೆಮನೆಯವರೂ ಒಟ್ಟಿಗೆ ಬಂದು ಗೋಧಲಿ (ಕ್ರಿಬ್) ತಯಾರಿಸುವುದು, ಅದಕ್ಕಾಗಿ ನಕ್ಷತ್ರ ಮಾಡುವುದು, ಅದಕ್ಕೆ ಲೈಟ್, ಕ್ರಿಸ್‍ಮಸ್ ಕುಸ್ವಾರ್ ಹೀಗೆ ನಮ್ಮದು-ಅವರದ್ದು ಎಂದು ಏನೂ ಇದ್ದಿಲ್ಲ. ಎಲ್ಲವೂ ಎಲ್ಲರದ್ದೂ.

Image
ಕ್ರಿಸ್ಮಸ್‌ ಗೋದಲಿ (ಸಾಂದರ್ಭಿಕ ಚಿತ್ರ)
ಕ್ರಿಸ್ಮಸ್‌ ಗೋದಲಿ (ಸಾಂದರ್ಭಿಕ ಚಿತ್ರ)

ʼಸಂಕಿ ಅಮಾಂಯ್‌ʼ ಮನೆಯ ದೀಪಾವಳಿ
ದೀಪಾವಳಿಯ ಸಡಗರವಂತೂ ನಾನೂ ಎಂದೂ ಮರೆಯಲಾಗದಂತದ್ದು. ಹತ್ತು ಪೈಸೆಗೆ ಸಿಗುತ್ತಿದ್ದ ಬಿಡು ಪಟಾಕಿಯನ್ನು ಕಲ್ಲಿನ ಮೇಲೆ ಜಜ್ಜಿಯಾದರೂ ದೀಪಾವಳಿ ಆಚರಣೆಯಾಗುತ್ತಿತ್ತು. ನಮ್ಮ ನೆರೆಮನೆಯ ಸಂಕಿ ಅಮಾಂಯ್ (ಅಮಾಂಯ್ ಅಂದರೆ ನಮ್ಕಡೆ ಕೊಂಕಣಿಯಲ್ಲಿ ಅಜ್ಜಿ ಎಂದರ್ಥ) ಮನೆಯಲ್ಲಿ ನಾವು ಸುಟ್ಟಷ್ಟೂ ಪಟಾಕಿ ಆ ಸಮಯದಲ್ಲಿ ಬೇರೆಲ್ಲೂ ಸಿಡಿಸಿಲ್ಲವೇನೋ! ದೀಪಾವಳಿಯ ಮೂರು ದಿನದ ರಜೆಯಲ್ಲಿ ದಿನವಿಡೀ ಮೊಯ್ದಿನ್ ಸಾಯ್ಬೆರ್, ಹಂಜಾ ಸಾಯ್ಬೆರ್, ರಘು ಶೆಟ್ರು ಇಲ್ಲ ಭದ್ರಗಿರಿ ಬಸ್‍ಸ್ಟ್ಯಾಂಡ್ ಬಳಿ ಅಂದಿದ್ದ ಇನ್ನೊಂದು ಅಂಗಡಿ (ಮಾಲೀಕರ ಹೆಸರು ನೆನಪಿಗೆ ಬರೋಲ್ಲ), ಆಮೇಲೆ ಒಂದು-ಎರಡು ವರುಷಗಳ ಕಾಲ ಬೈಕಾಡಿ ಗಡಂಗಿನ ಬಳಿ ಶೇಖರಣ್ಣ ಓಪನ್ ಮಾಡಿದ ಸೇವಾ ಜನರಲ್ ಸ್ಟೋರ್ ಮುಂತಾದವರ ಅಂಗಡಿಗೆ ಹೋಗಿ, ನಮ್ ಮನೆಯಿಂದ ಕಾಡಿ ಬೇಡಿ ತಂದ ದುಡ್ಡಿನಿಂದ ಹೆಚ್ಚೆಂದರೆ ಖರೀದಿಸಲು ಆಗುತ್ತಿದ್ದದು ಬಿಡು ಪಟಾಕಿ, ಇಲ್ಲಾಂದ್ರೆ 'ಸುರ್ ಸುರ್ ಕಡ್ಡಿ' ಇಲ್ಲ ದುರ್ಸು. ಆ ಬಿಡು ಪಟಾಕಿ ಬಿಡಲು ಪಿಸ್ತೂಲನ್ನು ಇನ್ಯಾರೋ ಕೊಡಬೇಕಿತ್ತು.

ಅದಕ್ಕಿಂತ ದೊಡ್ಡ ಪಟಾಕಿ, ನೆಲಚಕ್ರ ಮುಂತಾದವು ಬೇಕಾದ್ರೆ ಸಂಜೆಯಾಗೋತನಕ ಕಾದು ಸಂಕಿಯಜ್ಜಿಯ ಮಗಂದಿರಾದ ನಾರಣ (ನಾರಾಯಣ ಎಂದು ಅವರ ಹೆಸರು) ಬಾಬಾ (ಬಾಬಾ ಅಂದ್ರೆ ನಮ್ಮ ಕಡೆ ಕೊಂಕಣಿಯಲ್ಲಿ ಅಣ್ಣ. ನಾವು ಇವರನ್ನೆಲ್ಲಾ ಬಾಬಾ, ಬಾಯ್, ಅಮಾಂಯ್, ಆಬಾ ಅಂತಾನೇ ಇವತ್ತಿಗೂ ಕರೆಯೋದು, ನಮ್ಮನೆಯವರನ್ನು ಕರೆದ ಹಾಗೆ), ಜಗನ ಬಾಬಾ (ಇವತ್ತು ನಮ್ಮೊಂದಿಗಿಲ್ಲ ಅವರು), ಸುರೇಶ ಬಾಬಾ ಬರುವುದನ್ನು ಕಾಯಬೇಕಿತ್ತು. ಅವರು ಮಲ್ಪೆಯಿಂದ ಬರೋವಾಗ, ಮಲ್ಪೆ, ಉಡುಪಿ ಮುಂತಾದೆಡೆಯಿಂದ ಮಾರ್ಕೇಟಿನಲ್ಲಿರುತ್ತಿದ್ದ ಎಲ್ಲಾ ಸಣ್ಣ ದೊಡ್ಡ ಪಟಾಕಿ, 'ದುರ್ಸು', ರಾಕೆಟ್ ಎಲ್ಲವೂ ತರುತ್ತಿದ್ದರು. ಅವರ ಮನೆಯ ಮಂಜು, ದಿನಕರ, ಗಣೇಶ, ಸಂತೋಶ, ವಾಮನ ಮುಂತಾದವರಿಗೆ ಎಷ್ಟು ಸಿಗುತ್ತಿತ್ತೋ, ಅಷ್ಟೇ ನನಗೂ, ನನ್ನ ತಮ್ಮನಿಗೂ. ಎಂಥಾ ಪಟಾಕಿ ಆಟ. ಇತ್ತ ಸಂಕದ ಈ ಕಡೆಯಲ್ಲಿ ನಮ್ಮ ಶೋ ನಡೆಯುವಾಗ, ಸಂಕದ ಆ ಕಡೆ ರಾಜು ಅಬಾ (ಅಬಾ ಅಂದ್ರೆ ಕೊಂಕಣಿಯಲ್ಲಿ ಅಜ್ಜ) ಮನೆಯಲ್ಲಿ ದಯಾನಂದ್ ಬಾಬಾ, ಗಣಪು (ನಾಲ್ಕು ವರುಷಗಳ ಹಿಂದೆ ಅಕಾಲಿಕವಾಗಿ ನಮ್ಮನ್ನೆಲ್ಲಾ ಬಿಟ್ಟೋದರು ಅವರು), ಸಂತು, ಸತೀಶರ ಪಟಾಕಿಯಾಟ. ಅವಾಗ ಅವರ ಮನೆಯ ಗಿರೀಶ, ಬಿಕ್ಕಿ ಮುಂತಾದವರು ಇನ್ನೂ ಸಣ್ಣವರು. ಎಂಥಾ ಕಾಂಪಿಟೇಷನ್, ರಾಕೇಟ್ ಸಂಕದ ಈ ಕಡೆಯಿಂದ ಆ ಕಡೆಗೆ ಹೋಗುತ್ತೋ, ಆ ಕಡೆಯಿಂದ ಈ ಕಡೆಗೆ ಬರುತ್ತೋ ಅಂತಾ. ಕೊನೆಗೆ ಸಂಕಿ ಅಮಾಂಯ್ ಇಲ್ಲಾಂದ್ರೆ ಅವರ ಹಿರಿಮಗ ಶೇಖರ ಬಾಬಾ (ಇವರು ತುಂಬಾ ಸಾಧು ಸ್ವಭಾವದವರು. ಅವರು ಸಿಟ್ಟಾಗಿದ್ದನ್ನು ನಾನು ಎಂದೂ ಕಂಡಿದಿಲ್ಲ) ಬಂದು 'ಉಂತಾಲೆ, ಒಣಸ್ ಮಲ್ಪುಗಾ' ಅಂತಾ ಹದಿನೈದು ಸಾರಿ, ಮತ್ತೆ ನಮ್ಮ 'ಸಂಪಿ ಬಾಯ್' 'ಪುರೊ ರೆ' ಅಂತಾ ನಾಲ್ಕೈದು ಸಾರಿ ಹೇಳಿದ ಮೇಲೆ ನಮ್ಮ ಅಂದಿನ ಪಟಾಕಿ ಶೋ ಮುಗಿಯೋದು. ಆಮೇಲೆ ಅವರೊಟ್ಟಿಗೆ ಕೂತು ಊಟ, ಮನೆಗೋಗುವಾಗ ಕಟ್ಕೊಂಡು ಬೇರೆ ಹೋಗೋದು.

ಮರುದಿನ ಬೆಳ್ಳಂಬೆಳಗ್ಗೆ ಎದ್ದು ಹಿಂದಿನ ರಾತ್ರಿ ಸಿಡಿಸಿದ 'ಮಾಲೆ ಪಟಾಕಿ'ಗಳ ಅವಶೇಷಗಳನ್ನು ಕಂಡುಹಿಡಿದು, ಅವನ್ನು ಆಪರೇಷನ್ ಮಾಡಿ ಅದರಿಂದ ಉಳಿದ 'ಮದ್ದು' ಹೊರತೆಗೆದು ಅದನ್ನೊಂದು ಪೇಪರಿನಲ್ಲಿ ಹಾಕಿ ಅದನ್ನು ಪುನ: ಲೈವ್ ಪಟಾಕಿ ಮಾಡುವ ಕೆಲಸ ಪಟಾಕಿ ತಜ್ಞ ದಿನಕರನಿಗೆ. ಅವನ ಕೈಯಲ್ಲಿ ಯಾವ ಪಟಾಕಿ ಕೊಟ್ಟರೂ ಯಾವುದೇ ಹೆದರಿಕೆಯಿಲ್ಲದೆ ಸಿಡಿಸುವ ಮನುಷ್ಯ ಆತ. ಅಲ್ಲಿನ ಅಪರೇಷನ್ ಮುಗಿದ ನಂತರ ಮುಂದೆ ಅವಶೇಷಗಳನ್ನು ಹುಡುಕಿ ದಿನಕರ ಹಾಗೂ ಮಂಜುಯೊಡನೆ ಈಗಿನ ಕಾವೇರಿ ನಿಲಯ, ಅಂದು ಅದು 'ವೊಡ್ಲ್ಯಾ ಮೊಗ್ರಾಗೇರ್ (ದೊಡ್ಡ ಮೊಗವೀರರ ಮನೆ. ಹಾಗೆ ಯಾಕೆ ಹೇಳುತ್ತಿದ್ದರೆಂದು ನನಗೊತ್ತಿಲ್ಲ. ಆದರೆ ಇವತ್ತಿಗೂ ಅವರೆಲ್ಲರೂ ನಮಗೆ 'ವೊಡ್ಲ್ಯಾ ಮೊಗ್ರಾಗೆಲೆ)'. ಅವರ ಮನೆಯ ಮುಂದೆ ಅಂದಿದ್ದ ದೊಡ್ದ ಹುಣಸೆ ಮರ ದಾಟಿ, ಚಿಕ್ಕಿ ಅಮಾಂಯ್ ಮನೆ ಬಳಿ, ಇಲ್ಲಾಂದ್ರೆ ಆಚೆ ಕಡೆ ಆನಂದ ಬಾಬಾನ ಮನೆ ಕಡೆ ಹಾಜರಿ.

Image
Crakers

ಅಲ್ಲಿ ಸುರೇಶ ಬಾಬಾ, ದಿನ್ನು ಬಾಬಾ, ಕೇಶವ, ಜನ್ನು, ಸಂತು, ಗಿರೀಶ, ಪ್ರವೀಣ, ಅರುಣ್ ಬಾಬಾ (ಇವರೂ ಇಂದು ನಮ್ಮೊಡನೆಯಿಲ್ಲ), ಸುಮನ ಬಾಯ್, ಆನಂದ್ ಬಾಬಾ (ಇವರೂ ಇವತ್ತು ನಮ್ಮೊಡನೆಯಿಲ್ಲ), ಸೋಮ, ಸಂತು, ಆಚೆಮನೆ ರಮೇಶ, ಜಗ್ಗು, ಕೆಮ್ಮಣ್ಣಿನಿಂದ ದೀಪಾವಳಿಗೆ ಮನೆಗೆ ಬರುತ್ತಿದ್ದ ಗಣೇಶ, ಸತೀಶ, ಶ್ಯಾಮಲಕ್ಕ, ರಾಜ ಮುಂತಾದವರು ಹಿಂದಿನ ರಾತ್ರಿ ಸಿಡಿಸಿದ ಪಟಾಕಿಗಳ ಅವಶೇಷಗಳನ್ನು ಕಂಡುಹುಡುಕಿ, ಅವನ್ನು ಅಪರೇಷನ್ ಮಾಡಿ, ಪುನ: ನಮ್ಮದೇ 'ಹೋಮ್ ಮೇಡ್ ಹಾಗೂ ಹ್ಯಾಂಡ್ ಮೇಡ್' ಪಟಾಕಿಗಳನ್ನು ಮಾಡಿ ಸುಡುವ ಆನಂದನೇ ಬೇರೆ. ಅಲ್ಲಿಂದ ಇನ್ನೂ ಮುಂದೆ ಜೋಗಿ ಬಾಬಾ, ಬಾಸು, ವಿಟ್ಟು, ರಾಮು, ರಾಜು, ವಿಜಯ, ಮಹೇಶ, ಪ್ರವೀಣ, ಪಚ್ಚುರವರ ಮನೆ ಕಡೆ ಅವಶೇಷ ಹುಡುಕಲು ಹೋಗಲು ಮನಸಿದ್ದರೂ, ಹೋಗಲು ನಮ್ಮನೇಲಿ ನನಗೆ ಪರ್ಮಿಷನ್ ಇರಲಿಲ್ಲ, ಅದು ದೂರದಲ್ಲಿದೆಯೆಂದು. ಅವತ್ತಿನ ಕಾಲಕ್ಕೆ ಮನೆಯಿಂದ ಐದು ಮನೆ ದೂರದಲ್ಲಿದ್ದರೆ, ಅದು ದೂರದ ಮನೆಯೇ. ನಮ್ಮ ಪಟಾಕಿ ಸ್ಪೆಷಲಿಸ್ಟ್ ದಿನಕರ ಹೋಗುತ್ತಿದ್ದ. ಬರುವಾಗ ಅವಶೇಷ ಹಾಗೂ ಒಂದಿಷ್ಟು ಬಿಡು ಪಟಾಕಿ ತರುತ್ತಿದ್ದ. ಈ  ಪಟಾಕಿ ತಜ್ಞ ದಿನಕರನನ್ನು ಸರಿಯಾಗಿ ತರಬೇತಿ ಕೊಟ್ಟಿದ್ದರೆ ಇವತ್ತು 'ಅಣ್ವಸ್ತ್ರ' ಮಾಡುತ್ತಿದ್ದಾನೇನೋ? ಅಂತಾ ಕೈಚಳಕ ಅವನದ್ದು. ಈಗ ಇದೇ ಉಡುಪಿಯಲ್ಲಿ ಸಾಮರಸ್ಯಕ್ಕಾಗಿ ನಡಿಗೆ, ಸಹಬಾಳ್ವೆಗಾಗಿ ಸಮಾವೇಶ ನಡೆಸಬೇಕಾದ ಪರಿಸ್ಥಿತಿ ಬಂತೆಂದಾಗ, ಅದೇ ಉಡುಪಿಯವನಾದ ನನಗೆ ಇವೆಲ್ಲಾ ನೆನಪುಗಳು ಹಾಗೆಯೇ ಫ್ಲ್ಯಾಶ್‍ ಬ್ಯಾಕ್ ಥರಾ ಕಣ್ಮುಂದೆ ಹಾದು ಹೋದವು.
ನಡೆಯದ ಹಿಂಸಾರಂಜಕರ ಅಭಿಯಾನ
ಇವೆಲ್ಲದರ ನಡುವೆ ಸಮಾಧಾನಕರ ಅಂಶವೆಂದರೆ ಕೋಮುವಾದಿಗಳು, ಹಿಂಸಾ ರಂಜಕರು, ದ್ವೇಷಭಕ್ತರು ಅದೆಷ್ಟು ದ್ವೇಷವನ್ನು ಹರಡಿದರೂ, ಅದೆಷ್ಟು ವಿಷವನ್ನು ಉಣಬಡಿಸಿದರೂ ನಮ್ಮ ಆಸುಪಾಸಿನ ಸಮಾಜ ಇನ್ನೂ ಸಾಮರಸ್ಯ, ಸಹಬಾಳ್ವೆಯಲ್ಲಿ ನಂಬಿಕೆಯನ್ನು ಕಳೆದುಕೊಂಡಿಲ್ಲವೆನ್ನುವುದು. ಕಳೆದ ಒಂದೆರಡು ತಿಂಗಳಿನ ವಿದ್ಯಮಾನಗಳನ್ನೇ ನೋಡಿದರೆ ಇದು ಮನದಟ್ಟಾಗುತ್ತದೆ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಅವರ ಬಟ್ಟೆ, ಆಹಾರ, ಪ್ರಾರ್ಥನೆ, ವ್ಯವಹಾರ, ವ್ಯಾಪಾರ ಎಲ್ಲದರ ಮೇಲೆ ಸತತವಾಗಿ ದಾಳಿ ನಡೆದಿದೆ. ಆದರೆ ದ್ವೇಷ ಭಕ್ತರು ಎಣಿಸಿದ ಮಟ್ಟಕ್ಕೆ ಅವರ ದ್ವೇಷದಭಿಯಾನಗಳಿಗೆ ಸಾಮಾನ್ಯ ಜನರ ಬೆಂಬಲ ಸಿಕ್ಕಿಲ್ಲ.

ಇದನ್ನು ಓದಿದ್ದೀರಾ? ಝಾಕೀರನ ಮಲತಾಯಿ ಉಪ್ಪಾರರ ಮಗಳು ರಾಚಮ್ಮ

ಹಿಜಾಬ್ ವಿವಾದದ ಕೇಂದ್ರ ಬಿಂದುವಾದ ಉಡುಪಿಯಲ್ಲೇ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರ ಕೈಹಿಡಿದು ಅವರನ್ನು ಒಟ್ಟಿಗೆ ಕರೆದೊಯ್ದವರು ಹಿಂದೂ ಹುಡುಗಿಯರು. ಹಲಾಲ್ ಮಾಂಸ ಖರೀದಿಸಬೇಡಿ ಎಂದು ತಾಕೀತಿತ್ತವರ ಎದುರಿನಲ್ಲೇ ನಮಗೆ ಒಳ್ಳೆಯ ಮಾಂಸ ಎಲ್ಲಿ ಸಿಗುತ್ತೋ ಅಲ್ಲೇ ಖರೀದಿಸುತ್ತೇವೆ ಎಂದ ಹಿಂದೂಗಳು, ಜಾತ್ರೆಗಳಲ್ಲಿ ಮುಸ್ಲೀಮರು ಅಂಗಡಿ ಇಡಬಾರದೆನ್ನುವ ಆಭಿಯಾನ ನಡೆಯುತ್ತಿರುವಾಗಲೇ ಕಾಪು ಮಾರಿ ಜಾತ್ರೆಯೊಳಗೆ ಕೋಳಿ ಮಾರುತ್ತಿದ್ದವರಿಂದ ಕೋಳಿ ಖರೀದಿಸದೇ ಜಾತ್ರೆಯ ಹೊರಗಿದ್ದ ಮುಸ್ಲಿಂ ವ್ಯಾಪಾರಿಗಳಿಂದ ಕೋಳಿ ಖರೀದಿಸಿದ ಭಕ್ತರು, ಈ ಸಲದ ರಮ್ಜಾನ್ ಉಪವಾಸದ ಸಮಯದಲ್ಲಿ ಹಿಂದೂಗಳೇ ಇಫ್ತಾರ್ ಕೂಟ ಏರ್ಪಡಿಸಿ ಸೌಹಾರ್ದತೆ ಮೆರೆದರು.

ಕರಗ, ಹನುಮ ಜಯಂತಿ, ರಾಮನವಮಿ ಮೆರವಣಿಗೆ ಸಮಯದಲ್ಲಿ ಹಿಂದೂ ಭಕ್ತಾದಿಗಳಿಗೆ ಪಾನಕ, ನೀರು ವಿತರಿಸಿದ ಮುಸ್ಲೀಮರು ನಮ್ಮೆಲ್ಲರ ಆಶಾಕಿರಣ. ದ್ವೇಷ ಹರಡುವವರು ಎಷ್ಟೇ ದ್ವೇಷ ಹರಡಿದರೂ, ಕೋಮುವಾದಿಗಳು ಅದೆಷ್ಟೋ ಪ್ರಚೋದನೆ ಮಾಡಿದರೂ, ಸಾಮಾನ್ಯ ಜನರು ತಮ್ಮ ಎಂದಿನ ಜೀವನಶೈಲಿಯನ್ನು ಮಾರ್ಪಾಡಿಸದೆ, ಈ ಕೋಮು ಮಾಫಿಯಾಕ್ಕೆ ಸೊಪ್ಪು ಹಾಕದೇ, ನಮ್ಮ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತಾರೆ ಎನ್ನುವ ಭರವಸೆಗಳು ಸುಳ್ಳಲ್ಲ. ಅಂತದೊಂದು ಸಮಾಜ, ಸಹಬಾಳ್ವೆ, ಸಾಮರಸ್ಯದ ವಾತಾವರಣ ನಮ್ಮ ನಡುವೆ ವೃದ್ಧಿಯಾಗಲಿ ಎನ್ನುವ ಆಶಯ ನನ್ನದು.

ನಿಮಗೆ ಏನು ಅನ್ನಿಸ್ತು?
3 ವೋಟ್