'ಮತಿಗೆ ಮತದ ಮಿತಿ ಹಾಕದ ನನ್ನೂರು ಅಂಬರಖೇಡ'

Alavi habba

ನನ್ನೂರಲ್ಲಿ ಒಬ್ಬರಿಗೊಬ್ಬರು ಉಪ್ಪು, ಖಾರ ಮೊದಲ್ಗೊಂಡು ಎಲ್ಲವನ್ನೂ ಕೊಡುಕೊಳ್ಳುವ ಮೂಲಕ ಮನುಷ್ಯ ಸಂಬಂಧವನ್ನು ಉಳಿಸಿಕೊಂಡೇ ಬದುಕುತ್ತಿದ್ದಾರೆ. ಮದುವೆ ಕಾರ್ಯಕ್ರಮ, ಯಾರಾದ್ರೂ ಸತ್ತರೆ ಎಲ್ಲರೂ ಒಟ್ಟಾಗಿ ನಿಂತು ಕಾರ್ಯ ಮಾಡುತ್ತಾರೆ. ಒಂದೀಟು ಅನುಕೂಲಸ್ಥ ಮನೆತನ ಇದ್ರ ಕೈ ಡೀಲಾ ಬಿಟ್ಟು ಖರ್ಚು ಮಾಡುತ್ತಾರೆ.

ಕಲಬುರ್ಗಿ ಜಿಲ್ಲೆಯ ದಕ್ಷಿಣ ದಿಕ್ಕಿನ ಕೊನೆಯ ಹಳ್ಳಿಯೇ ನನ್ನೂರು ಅಂಬರಖೇಡ. ಹೊಸಬರ್‍ಯಾರಾದರು ಬಂದ್ರೆ 'ಇಲ್ಲೊಂದು ಊರೈತಿ' ಎನ್ನುವ ಖಬರೂ ಇರುತ್ತಿರಲಿಲ್ಲ. ಯಾಕೆಂದರೆ ಊರಿನ ತೊಲಬಾಗಿಲಿಗೆ ನೂರಾರು ವರ್ಷದ ಬೇವಿನ ಮರ ಇಡೀ ಊರನ್ನೇ ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದ್ದರಿಂದ. ಈ ಹಿಂದೆ ನಮ್ಮೂರಲ್ಲಿ ಸಾಕಷ್ಟು ಮಾವಿನ ತೋಪುಗಳಿದ್ದರಿಂದ ನನ್ನೂರಿಗೆ 'ಅಮ್ರಖೇಡ' ಹೆಸರು ಬಂದೀತೆನ್ನುವುದು ಹಿರಿಕರು ಅಂಬೋಣ. ಮುಸ್ಲಿಮರನ್ನು ಹೊರತು ಪಡಿಸಿ ಬಹುತೇಕ ಸಮುದಾಯದವರು ಇಲ್ಲಿರುವರಾದರೂ 'ಅಲಾವಿ' ಹಬ್ಬ ಭಾಳ್ ಜೋರಿಲೇ ನಡೆಯುತ್ತದೆ. ಅಲಾವಿ ಕುಣಿತದ ಪ್ರತಿ ರಾತ್ರಿ ದೇವಿಂದ್ರಪ್ಪಗೌಡ ಮಾಡಿದ ಅಡುಗೆಯಿಂದ ದಾಸೋಹ ನಡೆಯುತ್ತದೆ. ಅಲಾವಿ ಹಬ್ಬವು ಹಸೇನ್ ಹುಸೇನ್‍ರ ಹತ್ಯೆಯ ಕುರಿತು ದುಃಖದ ಧಾಟಿಯಲ್ಲಿ ಹಾಡುತ್ತಾರೆ.

ಹಣಮಂತ ದೇವರ ಜಾತ್ರೆಗೆ ಪಕ್ಕದೂರುಗಳಾದ ಮಲ್ಲಾಬಾದ, ಬಳಬಟ್ಟಿ, ಶಿವಪುರ, ಉಕ್ಕಿನಾಳದಿಂದ ಎಲ್ಲಾ ಧರ್ಮ ಜಾತಿಯ ಭಕ್ತರು ಬರುತ್ತಾರೆ. ಅಲಾವಿ ಪದಗಳಲ್ಲಿರುವ ದುಃಖದ ಧಾಟಿಯನ್ನು ಎತ್ತಿಕೊಂಡು ಡೊಳ್ಳಿನ ಪದ, ತತ್ವಪದಗಳನ್ನು ಹಾಡುತ್ತಾರೆ. ಈ ತರಹದ ಧಾಟಿಗಳನ್ನೂ ಕೊಡುಕೊಳ್ಳುವಿಕೆ ಮಾಡುತ್ತಿರುವುದು ನನ್ನ ನೆಲದ ವಿಶೇಷ. ನನ್ನೂರಲ್ಲಿ ಒಬ್ಬರಿಗೊಬ್ಬರು ಉಪ್ಪು, ಖಾರ ಮೊದಲ ಮಾಡಿ ಎಲ್ಲವನ್ನು ಕೊಡುಕೊಳ್ಳುವಿಕೆ ಮೂಲಕ ಮನುಷ್ಯ ಸಂಬಂಧವನ್ನು ಉಳಿಸಿಕೊಂಡೇ ಬದುಕುತ್ತಿದ್ದಾರೆ. ಮದುವೆಯಂಥ ಕಾರ್ಯಕ್ರಮವಾಗಲಿ, ಅಥವ ಯಾರಾದ್ರೂ ಸತ್ತರೆ ಎಲ್ಲರೂ ಒಟ್ಟಾಗಿ ನಿಂತು ಕಾರ್ಯ ಮಾಡುತ್ತಾರೆ. ಒಂದೀಟು ಅನುಕೂಲಸ್ಥ ಮನೆತನ ಇದ್ರ ಕೈ ಡೀಲಾ ಬಿಟ್ಟು ಖರ್ಚು ಮಾಡುತ್ತಾರೆ. ಬಡವರದ್ದಾದರೆ ಕೈ ಹತ್ತಿ ಹಿಡಿದು ತಮ್ಮ ಕೈಯಿಂದಲೂ ಒಂದೀಟು ಹಾಕಿ ಖರ್ಚು ಮಾಡುತ್ತಾರೆ. ತೀರಾ ಬಡವರಾಗಿದ್ದರೆ ಪ್ರತಿ ಒಬ್ಬರಿಂದ ಪಟ್ಟಿ ಹಾಕಿ  ಅಂಥವರ ಮನ್ಯಾನ ಒಳ್ಳೇದು ಕೆಟ್ಟದು ಕಾರ್ಯಕ್ರಮ ಮಾಡಿರುವ ಉದಾಹರಣೆಗಳೂ ಇದಾವೆ.

ನಮ್ಮೂರಲ್ಲಿ ಈ ಹೊತ್ತಿಗೂ ಯಾವುದೇ ಸಾಂಸ್ಕೃತಿಕ ನಾಯಕರನ್ನು ಅಜೆಂಡಾವಾಗಿಟ್ಟುಕೊಂಡು ಸಂಘ ಕಟ್ಟಿಲ್ಲ. ಅಂಬೇಡ್ಕರ್ ಕಟ್ಟಿಯನ್ನು ಹೊರತು ಪಡಿಸಿ ಯಾವ ಕಟ್ಟಿಯೂ ನಮ್ಮಲ್ಲಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ, ನಮ್ಮೂರಲ್ಲಿ ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡ ಬಲಿಷ್ಠ ನಾಯಕರಿಲ್ಲದಿರುವುದೂ ಅಂಬೋಣ‌. ಯಾರಾದರೂ ನಮ್ಮೂರಿನ ಮಠಕ್ಕೆ ಬಂದರೆ, ಅಂಥವರ ಕುಲ ಗೋತ್ರ ಯಾವುದೂ ಲೆಕ್ಕ ಹಾಕದೆ ಮನೆ ಮನೆಯಿಂದ ರೊಟ್ಟಿ(ಕಜ್ಜ), ಅನ್ನ ಸಾಂಬಾರು ತಂದು ಕೊಡುತ್ತಾರೆ. ಈ ತನಕ ಎಷ್ಟು ಸಾಧು ಸಂತರು ಬಂದು ಹೋಗಿದ್ದಾರೋ ಲೆಕ್ಕವೇ ಇಲ್ಲ.

Image
Alavi habba

1989ರಲ್ಲಿ, ಅಂದ್ರೆ ನಾನು ಹುಟ್ಟಿದ ವರ್ಷ 'ಮಹಾದೇವ' ಎನ್ನುವ ಸಾಧು ಮುತ್ತ್ಯಾ ಬಂದಿದ್ದ. ನಮಗೆ ತಿಳಿವಳಿಕೆ ಬಂದಾಗಿನಿಂದ ನಮ್ಮೆಲ್ಲ ಓರಗೆಯ ಹುಡುಗರು, ಮೊಸರು, ಮಜ್ಜಿಗೆ, ಉಪ್ಪಿಟ್ಟು ಒಟ್ಟಿನ್ಯಾಗ ಮನೆಯಲ್ಲಿ ಉಳ್ಳಾಕ ಏನೇ ಮಾಡಿರಲಿ ಕದ್ದು ಹೊಟ್ಟ್ಯಾಗಿಟ್ಕೊಂಡು ಮಠಕ್ಕೆ ಒಯ್ಯುತ್ತಿದ್ದೆವು. ಊಟವಾದ ನಂತರ ಸಾಧು ಮುತ್ತ್ಯಾ ನಮಗೆಲ್ಲ ಜನಪದ ಮಹಾಭಾರತ, ರಾಮಾಯಣದಂಥ ಕತೆಗಳು ಹೇಳುತ್ತಿದ್ದ. ನನಗೀಗ ಎ. ಕೆ ರಾಮಾನುಜನ್ ಸಂಪಾದಿಸಿದ 'ಭಾರತೀಯ ಜನಪದ ಕತೆಗಳಲ್ಲಿ' ಒಂದಷ್ಟು ಕತೆಗಳು ಸಣ್ಣಾವ ಇದ್ದಾಗಲೇ ಸಾಧು ಮುತ್ತ್ಯಾನ ಬಾಯಿಂದ ಕೇಳಿರುವೆ. ಆತನೊಬ್ಬನೇ ಸುಮಾರು ಇಪ್ಪತ್ತೈದು ವರ್ಷ ನಮ್ಮೂರ ಮಠದಲ್ಲಿ ಇದ್ದ. ಆತ ತೀರಾ ಹಣ್ಣಾದಾಗ ಮಠದ ಬಾಜು ಮನಿಯಲ್ಲೇ ಇರುತ್ತಿದ್ದ. ಆತನ ಊರಾದ 'ವರವಿ' ಯಿಂದ ಬಂದು ಜೋರ್ ಮಾಡಿ ಕರೆದುಕೊಂಡು ಹೋದರು.

ನಾನೊಂದು ಸಲ ಆತನ ಊರಿಗೆ ಹೋಗಿ, ಕಲ್ಲಂಗಡಿ, ಪುರಿಬಜ್ಜಿ ಕೊಟ್ಟಿದ್ದೆ. ಆತ ಹೌಹಾರಿ ತಿನ್ನುತ್ತಿದ್ದಾಗ, ಟೊಂಕಕ್ಕೆ ಸೆರಗು ಸುತ್ತಿದ್ದ ಒಬ್ಬಾಕೆ ಒಳಗಡೆಯಿಂದ ಓಡಿಬಂದು ಕಸಿದುಕೊಂಡವಳೇ  'ತಂದು ಕೊಡೋರಿಗೇನು ಬ್ಯಾನಿಪಾ! ಈತನ ಹೇಲು ಯಾರ ಬಳೀಬೇಕು?' ಎಂದು ಪುರಿಬಜ್ಜಿ ಕಸಿದುಕೊಂಡಳು. ಗೆಣ್ಣುದ್ದ ಬಿಳಿಗಡ್ಡದಲ್ಲಿ ಬೆರಳಾಕಿ ತುರಿಸಿಕೊಳ್ಳುತ್ತಿದ್ದ ಸಾಧು ಮುತ್ತ್ಯಾ'ನೋಡಪಾ ಸಂಗಣ್ಣ, ಬಲ ಕಮ್ಮಿ ಆದಾಗ ನೆಲ ಎದ್ದು ಬಡಿತೈತಿʼ, ಎಂದು ಮಾತ್ಮರು ಹೇಳಿದ ಮಾತು ಸುಳ್ಳಲ್ಲ' ಅಂದ. ನಾನು ಅಸಹಾಯಕನಾಗಿ ಆತನ ಮುಂದೆ ನಿಂತೆ. 'ಇರಲಿ, ಇವೆಲ್ಲಾ ಅನುಭವಿಸಾಕs ಬೇಕು, ಬಾರದು ಬಪ್ಪದು, ಬಪ್ಪದು ತಪ್ಪದು ಅಂತ ಬಸವಣ್ಣ ಹೇಳ್ಳಿಲ್ಲೇನು, ನನ್ನ ನೊಣಗಳು ನಿನ್ನ ಮುಕ್ಕರ್ತಾವ, ನೀ ಇನ್ನ ನಡಿ' ಎಂದು ಹೇಳಿ ಬಾಜು ಇದ್ದ ನಿಜಗುಣ ಶಿವಯೋಗಿಯ 'ಕೈವಲ್ಯ ಪದ್ಧತಿ' ಪುಸ್ತಕ ಕೊಟ್ಟು ಬೀಳ್ಕೊಟ್ಟ.

ಆತ 2017ರಲ್ಲಿ ತೀರಿಕೊಂಡ. ಆತನನ್ನು ಮಠದಲ್ಲಿ ಮಣ್ಣು ಮಾಡುವ ವಿಚಾರಮಾಡಿ ನಮ್ಮೂರಿನ ಹತ್ತಾರು ಹಿರಿಕರು ಆತನ ಕಳೇಬರವನ್ನು  ಕೇಳಲು ಹೋಗಿದ್ದರು. ನಾನೂ ಕಲ್ಬುರ್ಗಿಯಿಂದ ಹೌಹಾರಿ ಬಂದಿದ್ದೆ. 'ಒಂಟು ಬಂಟಲ್ಲ, ಜೋಡು ಈಡಲ್ಲ' ಎಂಬಂತೆ ಆ ಊರಿನ ಜನ ಗುಂಪಾಗಿ ಕಳೇಬರ ಕೊಡಲೇ ಇಲ್ಲ. ಕೊನೆಗೂ ಆತನನ್ನು ಸುಡುಗಾಡಿನಲ್ಲಿ ಹೂತುಬಿಟ್ಟರು. ನಾನು ಉಗುರು ಕಡೆಯುತ್ತಾ, ತದೇಕ ಚಿತ್ತದಿಂದ ನಿಂತಿದ್ದೆನಾದರೂ ಕಣ್ಣೀರು ಮಾತ್ರ ಒಣಗಿ ರೆಪ್ಪೆಯ ಸುತ್ತಲೂ ಬಿಳಿ ಉಪ್ಪು ಹರಡಿತ್ತು. ಅಂದಿನಿಂದ ಈವರೆಗೂ ಎಷ್ಟೋ ಸಾಧು ಸಂತರು ಬಂದು ನಾಲ್ಕೈದು ದಿನ ಇದ್ದು ಹೋಗಿಬಿಡುತ್ತಾರೆ. ಆದರೆ, ಇದ್ದಷ್ಟು ದಿನ ಅವರಿಗೆ ಊಟದ ವ್ಯವಸ್ಥೆ ಮಾತ್ರ ಒಬ್ಬರಲ್ಲ ಒಬ್ರು ಮಾಡೇ ಮಾಡುತ್ತಾರೆ.

ಇದನ್ನು ಓದಿದ್ದೀರಾ? ಸಹಬಾಳ್ವೆಯನ್ನು ನಿರಾಕರಿಸುವುದೆಂದರೆ ನಮ್ಮ ಅಸ್ತಿತ್ವವನ್ನೇ ನಿರಾಕರಿಸಿದಂತೆ

ನಮ್ಮೂರಿನಲ್ಲಿ ವಿದ್ಯಾವಂತರು ಇಲ್ಲವೆನ್ನುವಷ್ಟರ ಮಟ್ಟಿಗೆ ಕಡಿಮೆ ಇದ್ದರೂ, ಎಲ್ಲರೂ ಜೊತೆಯಾಗಿ ಬೆರೆತು ಬದುಕುತ್ತಿದ್ದಾರೆ. ಈ ಹೊತ್ತು ಜಾತಿಗೊಂದು ವಾಟ್ಸಾಪ್, ಫೇಸ್ಬುಕ್, ಟೆಲಿಗ್ರಾಮ್ ಗ್ರೂಪ್‍ಗಳಿರುವುದರ ಬಗ್ಗೆ ನಾನೇನು ಹೊಸದಾಗಿ ಹೇಳಬೇಕಾಗಿಲ್ಲ. ಆದರೆ ಇವೆಲ್ಲವನ್ನೂ ಈಗೀಗ ಬಳಸುತ್ತಿರುವ ನನ್ನೂರಿನ ಹಿರಿಯ ಕಿರಿಯರು ಜಾತಿ ಧರ್ಮದ ಗ್ರೂಪ್‍ಗಳ ವಾಸನೆಯ ನಶೆ ಏರಿಸಿಕೊಂಡಿಲ್ಲವೆನ್ನುವುದು ಈಗ ನನ್ನೂರಿನ ಬಗ್ಗೆ ಹೇಳಿಕೊಳ್ಳಬಹುದಾದಂಥ ಬಹುದೊಡ್ಡ ಹೆಮ್ಮೆಯ ಸಂಗತಿ.  ಓ ನನ್ನ ಸಹೃದಯರೇ ನಮ್ಮ ಮತಿಗೆ ಮತದ ಮಿತಿ ಹಾಕುವ ದುರುಳರು ಬಂದರೂ ನಮ್ಮ ಅರುವಿಗೆ ಅಂಕುಶ ತೊಡದೆ, ನಮ್ಮೊಳಗೆ ನೀವು ಪ್ರವೇಶ, ನಿಮ್ಮೊಳಗೆ ನಾವು ಪ್ರವೇಶ ಎಂಬಂತೆ ಅನುಗಾಲ ಈ ಬದುಕಿನ ತೇರು ಎಳೆಯೋಣ.

ನಿಮಗೆ ಏನು ಅನ್ನಿಸ್ತು?
7 ವೋಟ್