ಗಂಟೆಯ ನಾದವನ್ನು ಕರಮುದ್ದೀನ್ ಧ್ಯಾನಿಸಿದರೆ, ಆಜಾನ್ ಪ್ರಾರ್ಥನೆಗೆ ದುರ್ಗಾದೇವಿ ತನ್ಮಯಳಾಗಿದ್ದಾಳೆ

karvar

ಕಾರವಾರದಲ್ಲಿ ಮೀನು ಹಿಡಿಯುವವರು ಒಡಿಶಾ ಮತ್ತು ತಮಿಳುನಾಡಿನ ಕಾರ್ಮಿಕರು. ಹೂವು, ಹಣ್ಣು , ತರಕಾರಿ, ಅಲ್ಯುಮಿನಿಯಮ್ ಪಾತ್ರೆ ಮಾರಾಟ ಮಾಡುವವರು ಮುಸ್ಲಿಮರು. ಕೊಳ್ಳುವವರು ಶೂದ್ರರು, ದಲಿತರು, ಲಿಂಗಾಯತರು. ಬಟ್ಟೆ ಅಂಗಡಿ, ರಿಯಲ್ ಎಸ್ಟೇಟ್, ಅಪಾರ್ಟ್‌ಮೆಂಟ್‌ ಕಟ್ಟುವವರು ಮುಸ್ಲಿಂ ಉದ್ಯಮಿಗಳಾದರೆ, ಅಕೌಂಟೆಂಟ್‌ಗಳು ಬ್ರಾಹ್ಮಣರು!

ಕಾರವಾರ ಸಮುದ್ರ ಗಾಂಭೀರ್ಯದ ನಗರ. ಕಾಳಿ ನದಿ, ಅರಬ್ಬೀ ಸಮುದ್ರದ ಅಂಚಿಗೆ ಇರುವ ಈ ನಗರ ಪ್ರೀತಿಯನ್ನು ಮಡಿಲಲ್ಲಿಟ್ಟುಕೊಂಡೇ ಬದುಕಿದೆ. ಬ್ರಿಟಿಷರು ಕಟ್ಟಿದ ನಗರ ಇದು‌. ಕಾಳಿ ನದಿಯ ಒಂದು ದಂಡೆಗೆ ಕಾರವಾರ, ಮತ್ತೊಂದು ದಂಡೆಗೆ ಸದಾಶಿವಗಡ ಎಂಬ ಊರುಗಳಿವೆ. ಸೌಹಾರ್ದತೆಯ ಬದುಕಿನ ಪಾಠ ಶುರುವಾಗುವುದೇ ಕಾಳಿ ನದಿಯ ಒಂದು ಬದಿಗೆ ಇರುವ ಗುಡ್ಡದಿಂದ.

ಕಾಳಿ ನದಿ ದಂಡೆ, ಸದಾಶಿವಗಡ ಗ್ರಾಮಕ್ಕೆ ಹೊಂದಿಕೊಂಡಿರುವ ಗುಡ್ಡ, ಗುಡ್ಡದ‌ ಮೇಲಿದ್ದ ಕೋಟೆ (ಈಗ ಕೋಟೆ ಗೋಡೆಯ ಅವಶೇಷಗಳಿವೆ), ಕೋಟೆಯ ಆಳಿದ ಆಳರಸರ ಇತಿಹಾಸ, ಕೋಟೆಯ ಮಧ್ಯಭಾಗದಲ್ಲಿ ಇರುವ ದುರ್ಗಾದೇವಿ ದೇವಸ್ಥಾನ, ಗುಡ್ಡದ ಬುಡದಲ್ಲಿ, ದೇವಿಯ ದೇವಸ್ಥಾನ ಮುಖಭಾಗದಲ್ಲಿ ಸದಾ ಮುಖಾಮುಖಿಯಾಗಿ ಸಂಭಾಷಣೆ ನಡೆಸುತ್ತಿರುವಂತೆ ಇರುವ ʼಶಾ ಕರಮುದ್ದೀನ್ ಶಂಶುದ್ದೀನ್ʼ ಎಂಬ ಸಂತನ‌ ದರ್ಗಾ ಎರಡು ಸಮುದಾಯಗಳ ನಡುವಿನ ಸೌಹಾರ್ದತೆಯ ಸಂಕೇತದಂತಿವೆ. ದುರ್ಗಾದೇವಿಯ ಗಂಟೆಯ ಶಬ್ದ , ಶಂಶುದ್ದೀನ ದರ್ಗಾದ ಆಜಾನ್ ಎಂದೂ ಜಗಳವಾಡಿಕೊಂಡಿಲ್ಲ. ಗಂಟೆಯ ನಾದವನ್ನು ಕರಮುದ್ದೀನ್ ಧ್ಯಾನಿಸಿದರೆ, ಆಜಾನ್ ಪ್ರಾರ್ಥನೆಯನ್ನು ದುರ್ಗಾದೇವಿ ಕೇಳಿ ತನ್ಮಯಳಾಗಿದ್ದಾಳೆ. ಸಮುದ್ರ- ನದಿಗಳ ಸಂಗಮದಂತೆ ಜನ ಬೆರೆತು ಬದುಕುತ್ತಿದ್ದಾರೆ. ಈ ಸೌಹಾರ್ದತೆ ಈಗಲೂ ಉಳಿದಿದೆ ಎಂಬುದೇ ಹೆಚ್ಚು ಸಮಾಧಾನ ಸಂಭ್ರಮದ ಸಂಗತಿ.

ಕ್ರಿ.ಶ.1510ರಲ್ಲಿ ಅಲ್ಬುಕರ್ಕ್ ಕಾಳಿ ನದಿದಂಡೆಯ ಗುಡ್ಡದ ಮೇಲಿನ‌ ಕೋಟೆಯನ್ನು ‌ʼಚಿತ್ತಾಕುಲಾ ಕೋಟೆʼ ಎಂದು ಕರೆದಿದ್ದ. ಪೋರ್ಚುಗೀಸರು ಈ ಕೋಟೆಯನ್ನು ಪೀರ್ ಕೋಟೆ ಎಂದು ಕರೆದಿದ್ದರು‌. ಆ ವೇಳೆಗೆ ವಿಜಯನಗರ ಅರಸರ ಹಿಡಿತದಲ್ಲಿದ್ದ ಚಿತ್ತಾಕುಲ ಕೋಟೆ, ಅವರ ಹಿಡಿತದಿಂದ ಆದಿಲ್ ಶಾಹಿಗಳ ಹಿಡಿತಕ್ಕೆ ಜಾರಿತ್ತು. ವಿಜಯನಗರ ಪತನ ನಂತರ ಆದಿಲ್ ಶಾಹಿ ಆಡಳಿತ, ಆ ಕಾಲದ ಬಿಜಾಪುರ ಬರಗಾಲದಿಂದ ಸಂತ ಶಾ ಕರಮುದ್ದೀನ ಶಂಶುದ್ದೀನ ಕಾರವಾರದ ಸದಾಶಿವಗಡಕ್ಕೆ ಬಂದು ನೆಲೆ ನಿಂತ‌, ಮಳೆ ಬರಿಸಿದ ಎಂಬ ಕತೆಗಳಿವೆ. ನಂತರ ಇಲ್ಲೇ ನೆಲೆ ನಿಂತು ಸದಾಶಿವಗಡದಲ್ಲೇ ಕೊನೆಯುಸಿರೆಳೆದ. ಆತನ ನೆನಪೇ ಈ ದರ್ಗಾ.

ಶಂಸುದ್ದೀನ ದರ್ಗಾಕ್ಕೆ ಹಿಂದೂ, ಮುಸ್ಲಿಮರು ನಡೆದುಕೊಳ್ತಾರೆ. ಹಾಗಾಗಿ ಗೋವಾದಲ್ಲಿ ನೆಲೆನಿಂತ ಪೋರ್ಚುಗೀಸರು ದರ್ಗಾ ಸನಿಹದ ಕೋಟೆಯನ್ನು ಪೀರ್ ಕೋಟೆ ಎಂದು ಕರೆದರು. ನಂತರ ಶಿವಾಜಿ 1665 ಹಾಗೂ 1673ರಲ್ಲಿ ಎರಡು ಸಲ ದುರ್ಗಾದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿದ. ಅದಿಲ್ ಶಾಹಿಗಳ ನಂತರ ಸೋಂದಾ ಅರಸ ಸದಾಶಿವನ ಹಿಡಿತಕ್ಕೆ ಸದಾಶಿವಗಡ ಜಾರಿತು‌. ಆತನ ಮಗ ಬಸವಲಿಂಗ ತಂದೆಯ ನೆನಪಿಗೆ ಸದಾಶಿವಗಡ ಕೋಟೆಯನ್ನು ಪುನರ್‌ ನಿರ್ಮಿಸಿದ. ಆಗಿನಿಂದ ಸದಾಶಿವಗಡ ಕೋಟೆ ಎಂದು ಕರೆಯುತ್ತಾ ಬರಲಾಗಿದೆ. ಇಲ್ಲಿನ ಪೀರ್ ದರ್ಗಾ, ದುರ್ಗಾದೇವಿ ದೇವಸ್ಥಾನ ಸೌಹಾರ್ದತೆಯ ಬೀಜ ಬಿತ್ತಿವೆ. ಈ ಸೌಹಾರ್ದತೆ ಸದಾಶಿವಗಡ, ಕಾರವಾರದಲ್ಲಿ ಹರಡಿದೆ. 1784ರ ಆಜೂಬಾಜು ಹೈದರಾಲಿ- ಟಿಪ್ಪು ಹೆಜ್ಜೆಗಳು ಕಡವಾಡ (ಕಾರವಾರ ಸನಿಹದ ಹಳ್ಳಿ) ದಲ್ಲಿವೆ. 1799ರ ನಂತರ ಬ್ರಿಟಿಷರ ಹೆಜ್ಜೆಗಳು ಕಾರವಾರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. 1857 ರಲ್ಲಿ ಬ್ರಿಟಿಷರು ಕಾರವಾರ ನಗರ ನಿರ್ಮಾಣಕ್ಕೆ ಮುಂದಾದರು.

Image
ಕಾರವಾರದ ದುರ್ಗಾದೇವಿ ದೇವಸ್ಥಾನ
ಕಾರವಾರದ ದುರ್ಗಾದೇವಿ ದೇವಸ್ಥಾನ

ಬಂಗಾರದ ಊರಿನ‌ ಬಂಗಾರ
ಈಚೆಗೆ ಓರ್ವ ಉಗ್ರ ಭಾಷಣಕಾರ ಮುಸ್ಲಿಮರ ಅಂಗಡಿಯಲ್ಲಿ ಬಂಗಾರ ಖರೀದಿಸಬೇಡಿ ಅಂದ. ಇವರಿಗೆ ಕಾರವಾರದಲ್ಲಿ ಒಂದು ಪಾಠವಿದೆ. ಇಲ್ಲಿನ ದೈವಜ್ಞ ಬ್ರಾಹ್ಮಣರ ಬಂಗಾರದ ಅಂಗಡಿಯಲ್ಲಿ ಮುಸ್ಲಿಮರು ಬಂಗಾರ ಖರೀದಿಸುತ್ತಾರೆ. ಬಂಗಾರದ ಆಭರಣ ಮಾಡಲು ತರಿಸುವ ಕಚ್ಛಾ ಬಂಗಾರ, ಬಂಗಾರದ ಬಿಸ್ಕೇಟು ಬರುವುದೇ ಮುಸ್ಲಿಂ ರಾಷ್ಟ್ರ ದಿಂದ. ಹಾಗೂ ಅದು ಆಭರಣವಾಗಿ ಮರಳಿ ರಫ್ತಾಗುವುದು ದುಬೈಗೆ. ಆಭರಣ ತಯಾರಿಸುವವರು ಪಶ್ಚಿಮ ಬಂಗಾಳದ ಕಾರ್ಮಿಕರು ಹಾಗೂ ರಾಜ್ಯದ ವಿವಿಧ ಭಾಗದವರು. ಆಭರಣ ತಯಾರಿಕಾ ಕಾರ್ಮಿಕರಲ್ಲಿ ಮುಸ್ಲಿಮರೂ ಇದ್ದಾರೆ‌.

ಕಾರವಾರದಲ್ಲಿ ಮೀನು ಹಿಡಿಯುವವರು ಒಡಿಶಾ ಮತ್ತು ತಮಿಳುನಾಡಿನ ಕಾರ್ಮಿಕರು. ಹಾಗೂ ಉತ್ತರ ಕರ್ನಾಟಕದ ಶ್ರಮಿಕ ಕಾರ್ಮಿಕರು. ಇನ್ನೂ ಹೂವು, ಹಣ್ಣು , ತರಕಾರಿ, ಅಲ್ಯುಮಿನಿಯಮ್ ಪಾತ್ರೆ ಮಾರಾಟ ಮಾಡುವವರು ಮುಸ್ಲಿಮರು. ಕೊಳ್ಳುವವರು ಹಿಂದುಗಳು, ಶೂದ್ರರು. ದಲಿತರು, ಲಿಂಗಾಯತರು. ಬಟ್ಟೆ ಅಂಗಡಿ, ರಿಯಲ್ ಎಸ್ಟೇಟ್, ಅಪಾರ್ಟೆಂಟ್ ಕಟ್ಟುವ ಮುಸ್ಲಿಂ ಉದ್ಯಮಿಗಳು, ಲೆಕ್ಕ ಪತ್ರ ಮಾಡಿಸುವುದು ಸಂಘಪರಿವಾರದ ನಂಟಿನ ಬ್ರಾಹ್ಮಣ ಅಕೌಂಟೆಂಟ್‌ಗಳ ಹತ್ತಿರ. ಇದು ವ್ಯಾಪಾರ ವಹಿವಾಟು ಸಂಬಂಧ ಹಾಗೂ ಸ್ನೇಹ ಸಂಬಂಧ. ಮುಸ್ಲಿಮರು ಕಟ್ಟಿದ ಅಪಾರ್ಟ್‌ಮೆಂಟ್‌ಗಳನ್ನು ಹಿಂದುಗಳು ಖರೀದಿಸಿ, ನೆಮ್ಮದಿ ಜೀವನ ನಡೆಸುತ್ತಿರುವ ಉದಾಹರಣೆಗಳಿವೆ. ಹಿಂದೂ ಮುಸ್ಲಿಮರು ಮದುವೆಯಾದ ಹಲವು ಜೋಡಿಗಳು ಚೆಂದದಿಂದ ಬದುಕು ಸಾಗಿಸುತ್ತಿರುವ ಸಾಕ್ಷಿಗಳು ಕಾರವಾರದಲ್ಲಿವೆ. ಇದಕ್ಕೆಲ್ಲಾ ಪ್ರೀತಿ ಕಾರಣವಾಗಿರುವುದು ಎಂಬುದು ನಿಜ.

ಇದನ್ನು ಓದಿದ್ದೀರಾ? ಹಯವದನರಾಯರ ಹಣೆಬರ ಕೆಟ್ಟಿತ್ತು, ನಡೀಲಿಲ್ಲ ಹಕೀಕತ್ತು

ಭಾರತದ ಎಲ್ಲಾ ರಾಜ್ಯಗಳ ಜನರು ಕಾರವಾರದಲ್ಲಿ ನೆಲೆ ನಿಂತಿದ್ದಾರೆ‌. ರಾಷ್ಟ್ರೀಯ ಯೋಜನೆಗಳಾದ ಅಣುಸ್ಥಾವರ, ಸೀಬರ್ಡ್ ನೌಕಾನೆಲೆ ಕಾರಣದಿಂದ ಮಿನಿಭಾರತ ಇಲ್ಲಿದೆ. ಹಾಗಾಗಿ ಇಲ್ಲಿ ಸೌಹಾರ್ದತೆಗೆ ಕೊಳ್ಳಿ ಇಡುವವರ ಆಟ ನಡೆಯಲ್ಲ. ಇಲ್ಲಿ ಸಂಸ್ಕೃತಿಗಳ, ಭಾಷೆಗಳ ಕೊಡುಕೊಳ್ಳುವಿಕೆ ನಿರಂತರವಾಗಿ ನಡೆದಿದೆ. ನದಿ ಸಮುದ್ರಗಳ ಸಂಗಮಕ್ಕೆ ಇಲ್ಲಿ ಅರ್ಥವಿದೆ. ಕವಿ ರವೀಂದ್ರನಾಥ ಟ್ಯಾಗೋರ್ 1882ರಲ್ಲಿ ಕಾರವಾರಕ್ಕೆ ಬಂದು ಹೋಗಿದ್ದಾರೆ. 1930ರಲ್ಲಿ ಗಾಂಧೀಜಿ ಬಂದು ಅಸ್ಪೃಶ್ಯತೆ ವಿರುದ್ದ ಮಾತಾಡಿ ಹೋಗಿದ್ದಾರೆ.
ಮಗನ ಪ್ರಶ್ನೆಯಿದು
'ಬ್ರಾಹ್ಮಣರು, ಶೂದ್ರರು ಅಂಥ ಯಾವಾಗಲೂ ವಾದ ಮಾಡ್ತಿರಲ್ಲ , ಹಂಗಂದರೆ ಏನು' ಎಂದು ಹತ್ತನೇ ತರಗತಿಯಲ್ಲಿ ಓದುವ ಮಗ ಪ್ರಶ್ನಿಸುತ್ತಾನೆ. ನನ್ನ ಮಗನ ಹದಿನೈದು ಜನ ಅಪ್ತ ಗೆಳೆಯರಲ್ಲಿ ಐವರು ಮುಸ್ಲಿಮರು, ಮೂವರು ಕ್ರಿಶ್ಚಿಯನ್ನರು. ಮಿಕ್ಕವರು ದಲಿತ, ಶೂದ್ರ ವರ್ಗದ ಶ್ರಮಿಕ ಹಿನ್ನೆಲೆಯಿಂದ ಬಂದವರು ಇದ್ದಾರೆ. ಕಾರವಾರ ಎಂಬ ಸಮುದ್ರ ಮಧ್ಯಾಹ್ನ ಉರಿಬಿಸಿಲಲ್ಲಿ ಶಾಂತವಾಗಿ, ಸಂಜೆ ಗಾಳಿಗೆ ಪುಳಕಿತವಾಗಿ ಥಳುಕಿನಿಂದ ಕುಣಿಯುತ್ತಾ, ಮಳೆಗಾಲದಲ್ಲಿ ಅಬ್ಬರಿಸುತ್ತದೆ‌ . ಒಮ್ಮೆಯೂ ಅದು ಮರ್ಯಾದೆಯನ್ನು ಮೀರಿಲ್ಲ. ಚೆಂದದ ಊರು ಪ್ರೀತಿ ಸೌಹಾರ್ದತೆಯನ್ನು ಉಸಿರಾಡುತ್ತಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್