ಕೈವಾರ ತಾತಯ್ಯನ ನೆಲದಲ್ಲಿ ಕೋಮುವಾದಕ್ಕೆ ನೆಲೆಯಿಲ್ಲ

 Kaivara tatayya

ರಾಜ್ಯದಲ್ಲಿ ನಡೆದ ಕೋಮುದ್ವೇಷದ ಅಭಿಯಾನಗಳಿಗೆ ಕುವೆಂಪು ಅವರ ನೆಲದ ಕನ್ನಡಿಗರು, ಬಸವಣ್ಣನವರ ನೆಲದ ಶರಣರು, ಕೈವಾರ ತಾತಯ್ಯನವರ ನೆಲದ ಆಜೀವಕರು, ಎಚ್.ನರಸಿಂಹಯ್ಯ ಅವರ ವಿಚಾರವಾದಿ ಭೂಮಿಕೆಯ ಪ್ರಗತಿಪರರು ಕಪಾಳ ಮೋಕ್ಷವನ್ನೇ ಮಾಡಿದರು. ಕೋಲಾರದ ಜನ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. 

ಮಹೋನ್ನತವಾದ ಶಿವಪರಂಪರೆಯನ್ನು ತನ್ನ ಒಡಲಾಳದಲ್ಲಿ ಅವುಚಿ ಕೊಂಡಿರುವ ಜಿಲ್ಲೆ ಕೋಲಾರ. ಈ ಜಿಲ್ಲೆ  2900 ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿದೆ.  ಯಾವುದೇ ಜೀವನದಿ ನಾಲೆಗಳು ಇಲ್ಲದ ಈ ಜಿಲ್ಲೆ 4286ಕ್ಕೂ ಹೆಚ್ಚು ಕೆರೆಗಳನ್ನು ಹೊಂದಿದೆ. ನಿರಂತರ ಜಲಕ್ಷಾಮದೊಂದಿಗೆ ಜೂಜಾಡುತ್ತಲೇ ಬಂದಿರುವ ಇಲ್ಲಿನ ಜನತೆಯ ಜೀವನಾಧಾರವಾಗಿರುವುದು, ಹೈನುಗಾರಿಕೆ ರೇಷ್ಮೇ, ಮತ್ತು ತೋಟಗಾರಿಕೆ. 90% ದುಡಿಯುವ ವರ್ಗವನ್ನೇ ಹೊಂದಿರುವ ಇಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮರಸ್ಯ ಎನ್ನುವುದು ಪ್ರಕೃತಿ ಸಹಜವಾಗಿದೆ. ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ, ಸಿ.ಎನ್.ಆರ್.ರಾವ್, ಪದ್ಮಭೂಷಣ ಹೆಚ್. ನರಸಿಂಹಯ್ಯ ಹುಟ್ಟಿದ ಜಿಲ್ಲೆ ಇದು.    

Eedina App

ಕಮ್ಯುನಿಸ್ಟ್ , ದಲಿತ ಚಳವಳಿಗಳ ನೆಲೆವೀಡಾದ ಈ ಮಣ್ಣಿನಲ್ಲಿ  ಸಾಮರಸ್ಯದ ಭಾಷ್ಯ ಬರೆದದ್ದು ಆಧ್ಯಾತ್ಮಿಕ, ಅಜೀವಕ ಪರಂಪರೆ. ಅವಿಭಜಿತ ಕೋಲಾರ ಜಿಲ್ಲೆಯುದ್ದಕ್ಕೂ ಅಂಟಿಕೊಂಡಿರುವ ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಭೂಪ್ರದೇಶಗಳಲ್ಲಿ ಇಂತಹ ದುರ್ಬರ ಸನ್ನಿವೇಶದಲ್ಲೂ ಸಾಮರಸ್ಯ ಎನ್ನುವುದು ಎದೆಯುಬ್ಬಿಸಿ ತಲೆಯೆತ್ತಿ ನಿಂತಿದೆ. ಹಾಗೆಯೇ ಗಡಿಯಂಚಿನ ಈ ಪ್ರದೇಶಗಳಲ್ಲಿ ಎಂದಿಗೂ ಭಾಷಾ ಕಾರಣಕ್ಕಾಗಲಿ, ಧಾರ್ಮಿಕ ಕಾರಣಕ್ಕಾಲಿ, ಗಲಭೆಗಳು ನಡೆದ ಉದಾಹರಣೆಗಳೇ ಇಲ್ಲ. ಇಂತಹ  ಸೌಹಾರ್ದ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿದ್ದು ದಲಿತ ಮತ್ತು ಕಮ್ಯುನಿಸ್ಟ್ ಚಳವಳಿಗಳು. ಅದಕ್ಕೆ ಮುನ್ನ ನಮ್ಮೆಲ್ಲರಿಂದ ಕೈವಾರ ತಾತಯ್ಯನೆಂದೇ ಅತ್ಯಂತ ಪ್ರೀತಿಯಿಂದ ಕರೆಯಿಸಿಕೊಳ್ಳುವ ಯೋಗಿನಾರೇಯಣಪ್ಪ ಅವರು ಮತ್ತು ಆಂಧ್ರದ ಕಡಪ ಜಿಲ್ಲೆಯ ಕಂದಿಮಲ್ಲೇಪಲ್ಲಿಯ ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳು. 

ದಲಿತ ಸಂಘರ್ಷ ಸಮಿತಿ ಬುದ್ದ ಬಸವ ಅಂಬೇಡ್ಕರ್ ಮತ್ತು ಪೆರಿಯಾರರನ್ನು ಪರಿಚಯಿಸಿತು. ಭೂಮಿ, ವಸತಿ ಮತ್ತು ಶಿಕ್ಷಣಕ್ಕಾಗಿ ದಲಿತರನ್ನು ಸಂಘಟಿಸಿತು. ಹೋರಾಟಕ್ಕೆ ಅಣಿ ಮಾಡಿತು. ಭಾಗಶಃ ಯಶಸ್ವಿಯಾಯಿತು. ಮಾರ್ಕ್ಸ್‌ ವಾದಿ ಕಮ್ಯೂನಿಸ್ಟ್ ಪಕ್ಷ ಅಂಬೇಡ್ಕರ್‌ ರೊಂದಿಗೆ ಭಗತ್ ಸಿಂಗ್, ಕಾರ್ಲ್‍ಮಾರ್ಕ್ಸ್‌ ಅವರನ್ನು  ಜನತೆಗೆ ಪರಿಚಯಿಸಿತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಡೀ ರಾಜ್ಯ ಕೋಮು ಗಲಬೆಗಳಲ್ಲಿ, ಕೋಮುದಾಳಿಗಳಲ್ಲಿ, ಭಾವನಾತ್ಮಕ ವಿಷಯಗಳಿಗೆ  ಬಲಿಯಾಗಿತ್ತು.  ಶಾಂತಿಭಂಗಕ್ಕೆ  ಗುರಿಯಾಗಿತ್ತು. ಆದರೆ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿಯವರು  ಅವಿಭಜಿತ ಕೋಲಾರ ಜಿಲ್ಲೆಯ ಜನತೆಯ ಜೀವನ್ಮರಣದ ಪ್ರಶ್ನೆಯಾಗಿದ್ದ, ನೀರಿಗಾಗಿ ಧ್ವನಿಯೆತ್ತಿದರು. ನಮ್ಮಂತಹ ಯುವಕರನ್ನು ಎಸ್.ಎಫ್.ಐ. ನಂತಹ ವಿದ್ಯಾರ್ಥಿ ಸಂಘಟನೆ ಮತ್ತು ಡಿ.ವೈಎಫ್.ಐ. ನಂತಹ ಯುವಜನ ಸಂಘಟನೆಗಳ ಮೂಲಕ ಶಾಶ್ವತ ನೀರಾವರಿಗಾಗಿ ಜನಾಂದೋಲನಕ್ಕೆ  ಮುಂದಾದರು. ಹಳ್ಳಿ ಹಳ್ಳಿ , ಗಲ್ಲಿ ಗಲ್ಲಿಗಳ ಮೂಲಕ ನಮ್ಮ ಜಿಲ್ಲೆಯ ಮೂಲ ಸಮಸ್ಯೆಗಳ ಪರಿಹಾರಕ್ಕೆ  ಹೋರಾಟದ ಹಾದಿ ತೋರಿಸಿದರು.  

AV Eye Hospital ad

ಭಕ್ತಿ ಚಳವಳಿಯ ಕೊಡುಗೆ
ಈ ಎರಡು ಜನ ಪ್ರವಾಹಗಳಿಗೆ ಮುನ್ನ, ಭಕ್ತಿ ಚಳವಳಿ ಮೂಲಕ ತತ್ವ ಪದಗಳ ಗಾಯನದ ಮೂಲಕ ಕೈವಾರ ತಾತಯ್ಯ ಮತ್ತು ವೀರ ಬ್ರಹ್ಮೇಂದ್ರ ಗುರುಗಳು  ಸಮಾಜದಲ್ಲಿನ ಅಪಸವ್ಯಗಳನ್ನು ನಿವಾರಣೆ ಮಾಡಲು ಪ್ರಯತ್ನಪಟ್ಟವು. ವಿಭಿನ್ನ ಮನಸ್ಸುಗಳ ಅಂತರವನ್ನು ಗರಿಷ್ಠ ಮಟ್ಟದಲ್ಲಿ ಕಡಿಮೆ ಮಾಡುವುದರ ಮೂಲಕ, ಸಮಾಜವನ್ನು ಸುಧಾರಣೆಯೆಡೆಗೆ ಕೊಂಡೊಯ್ದರು.

ಕೈವಾರ ತಾತಯ್ಯನವರ ಒಂದೆರಡು ತತ್ವಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವೆನಿಸುತ್ತಿದೆ. ತಾತಯ್ಯನವರು ತೆಲುಗು ಭಾಷೆಯಲ್ಲಿ ಬರೆದ ಈ ತತ್ವಗಳ  ಭಾವಾರ್ಥ ಕನ್ನಡ ಭಾಷೆಯಲ್ಲಿ ಹೇಳುವುದಾದರೆ, ತಂದೆ ತಾಯಿಯರು ಸಾಹಸದಿಂದ ರತಿಕ್ರೀಡೆ ಮಾಡಿದಾಗ ತಾಯಿಯ ಗರ್ಭದಲ್ಲಿ ಶಿಶು ಏರ್ಪಾಡಾಯಿತು. ಆ ಶಿಶುವು ತಲೆಕೆಳಕಾಗಿ ಮಾರ್ಪಟ್ಟು ಮೂತ್ರ ದ್ವಾರದಿಂದ ಹೊರಕ್ಕೆ ಬಂದಿತು. ಇಡೀ ಮಾನವ ಜನಾಂಗವೆಲ್ಲವೂ ಮೂತ್ರ ದ್ವಾರದಿಂದಲೇ  ಬಂದಿರುವಾಗ ಎಲ್ಲರೂ ಒಂದೇ ಜಾತಿಗೆ ಸೇರಿದವರಾಗಿದ್ದಾರೆ. ಇದರಲ್ಲಿ ಉತ್ತಮ ಕುಲವೆಂಬುದೇ ಇಲ್ಲ ನವದ್ವಾರಗಳಲ್ಲಿ ಒಂದಾದ ಮೂತ್ರದ್ವಾರದಿಂದಲೇ ಬಂದವರೆಲ್ಲರೂ ಒಂದೇ. ಉಳಿದಂತೆ ಬಾಯಿಯಲ್ಲಾಗಲೀ ಕಿವಿಲ್ಲಾಗಲೀ ಹುಟ್ಟಿದ್ದರೆ ಬೇರೆ ಜಾತಿ ಎನ್ನಬಹುದಾಗಿತ್ತು. ಇದಕ್ಕಾಗಿ ನಮ್ಮ ಜಾತಿ ಹೆಚ್ಚು ನಿಮ್ಮ ಜಾತಿ ಕಡಿಮೆ ಎನ್ನುವ ತರ್ಕವಾದ ಏತಕ್ಕೇ? ವಿವರಿಸಿ ನೋಡಿದಾಗ ಇದರೆಲ್ಲೇನೂ ಹುರುಳಿಲ್ಲ. ʼಮಾನವರೆಲ್ಲರೂ ಒಂದೇ ಜಾತಿ ಮತ್ತೊಂದು ಜಾತಿಯನ್ನೆ ನಾನು ಕಾಣೆʼ ಎಂದು ತಾತಯ್ಯನವರು ವಿವರಿಸಿದ್ದಾರೆ.

ಇದನ್ನು ಓದಿದ್ದೀರಾ? ಓಣಿಯ ಜಗಳದ ಪಂಚಾಯ್ತಿ ಮಾಡ್ತಿದ್ಲು ನನ್ನಮ್ಮ

ಇಂತಹ ಸೌಹಾರ್ದ ಭೂಮಿಯಲ್ಲಿ ಮೂರು ರಾಜ್ಯಗಳ ಸಾಂಸ್ಕೃತಿಕ, ಆರ್ಥಿಕ, ಆಧ್ಯಾತ್ಮಿಕ, ರಾಜಕೀಯ ಸಂಬಂಧಗಳು ಸಮ್ಮಿಳಿತಗೊಂಡಿವೆ. ಇಂತಹ ಪುಣ್ಯಭೂಮಿಯಲ್ಲಿ ಭಾಷೆಯ ಸಾಮರಸ್ಯ ಚಿರಂತನವಾದುದು. ಕಳೆದ ಎರಡು ದಶಕಗಳಲ್ಲಿ ರಾಜ್ಯದ ವಿವಿಧೆಡೆ ಕೋಮುದಾಳಿಗಳು, ದಳ್ಳುರಿಗಳು, ಗಲಭೆಗಳು ನಡೆದವು. ಆದರೆ ಇವೆಲ್ಲಕ್ಕೂ ಮಿಗಿಲಾಗಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿನ ಭಾವೈಕ್ಯತೆ ಬ್ರಾತೃತ್ವ ಮತ್ತು ಸಹೋದರತೆ ಎದೆಯೆತ್ತಿ, ತಲೆಯೆತ್ತಿ ನಿಂತಿದೆ.

ಇದಕ್ಕೆ ಎಡಚಳವಳಿಯ ಮೂಸೆಯಿಂದಲೇ ಮೂಡಿಬಂದ ರಾಜಕೀಯ ನೇತಾರರ ಅವಿಚ್ಛಿನ್ನವಾದ ಕಾಣಿಕೆ ಇದೆ ಎಂದರೆ ತಪ್ಪಾಗಲಾರದು. ರಾಜಕೀಯಕ್ಕಾಗಿ ವಿಭಿನ್ನ ಪಕ್ಷಗಳಲ್ಲಿದ್ದರೂ ಕೋಮು ಸೌಹಾರ್ದತೆ ಮತ್ತು ಸಾಮರಸ್ಯದ ಪ್ರಶ್ನೆ ಬಂದಾಗಲೆಲ್ಲಾ ಎಲ್ಲಾ ರಾಜಕೀಯ ನಾಯಕರುಗಳ ಅಭಿಪ್ರಾಯ ಒಂದೇ ಆಗಿತ್ತು. ಮಾಜಿ ಶಾಸಕರಾದ ಆರ್.ವೆಂಕಟರಾಮಯ್ಯ, ಟಿ.ಎಸ್.ಮಣಿ, ಜಿ.ವಿ.ಶ್ರೀರಾಮರೆಡ್ಡಿ, ಸಿ.ಬೈರೇಗೌಡ ಮತ್ತು ಈಗಲೂ ನಮ್ಮ ಕಣ್ಣ ಮುಂದೆಯೇ ಉಪಸ್ಥಿತವಿರುವ ವಿ.ಆರ್.ಸುದರ್ಶನ್ ರಂತಹ ಮೌಲ್ಯಾಧಾರಿತ ಪ್ರಗತಿಪರರಾದ ರಾಜಕಾರಣಿಗಳು ಕೋಮು ಸಾಮರಸ್ಯಕ್ಕೆ ಸೌಹಾರ್ದತೆಗೆ ಹಾಲೆರೆದು ಪೋಷಿಸಿದರು.

ಹಾಗೆಯೇ ದಲಿತ ಚಳವಳಿಯ ಗರ್ಭದಿಂದಲೇ ಆವಿರ್ಭವಿಸಿರುವ  ಕೋಟಗಾನಹಳ್ಳಿ ರಾಮಯ್ಯ, ಹಾ.ಮಾ.ರಾಮಚಂದ್ರ, ಕೆ.ಎಂ.ಕೊಮ್ಮಣ್ಣ, ಗಡ್ಡಂವೆಂಕಟೇಶ್, ಎನ್.ಮುನಿಸ್ವಾಮಿ, ಮತ್ತಿತರರು “ಆದಿಮ” ಎನ್ನುವ ಸಾಂಸ್ಕೃತಿಕ ಕೇಂದ್ರ ಕಟ್ಟಿದರು. ಇದು ನೆಲಮೂಲ ಸಂಸ್ಕೃತಿ, ಆಜೀವಕ ಪರಂಪರೆಯ ಔನ್ನತ್ಯಕ್ಕಾಗಿ  ದುಡಿಯುತ್ತಿದೆ.  ದೇಸಿ ಪರಂಪರೆಯ ಉಳಿವಿಗಾಗಿ ಶ್ರಮಿಸುತ್ತಿರುವ ಆದಿಮ ಕೋಮು ಸಾಮರಸ್ಯಕ್ಕಾಗಿ ಭಾವೈಕ್ಯತೆಗಾಗಿ ತನ್ನ ಅನನ್ಯ ಕೊಡುಗೆಯನ್ನು ನೀಡುತ್ತಲೇ ಇದೆ. ಆದ್ದರಿಂದಲೇ ಇಲ್ಲಿ ಮುಸ್ಲಿಮರ ವಿರುದ್ದ ಇತರರನ್ನು ಎತ್ತಿಕಟ್ಟುವ ಸಂಚು ವಿಫಲವಾಗಿದ್ದು. ಅಷ್ಟೇ ಅಲ್ಲದೇ, ಕೋಲಾರದ ಕಾಂಗ್ರೇಸಿನ ಬಲಿಷ್ಠ ನಾಯಕರೆಲ್ಲರೂ ಸೇರಿ ಗೆಲ್ಲಿಸಿದ, ಬಿ.ಜೆ.ಪಿ.ಸಂಸದ ಮುನಿಸ್ವಾಮಿ ಅವರು ತಣ್ಣಗಿನ ಸಮಾಜಕ್ಕೆ  ಕಡ್ಡಿಗೀರಲು ನಿರಂತರವಾಗಿ ಕಷ್ಟಪಡುತ್ತಿದ್ದಾರೆ. ಅದರ ಭಾಗವೇ  ಕ್ಲಾಕ್ ಟವರ್ ವಿವಾದ.

ಕೋಲಾರದ ಕ್ಲಾಕ್‌ ಟವರ್
ಕೋಲಾರದ ಕ್ಲಾಕ್‌ ಟವರ್

ಗಟಾರ ಸೇರಿದ ಕ್ಲಾಕ್‌ ಟವರ್‌ ವಿವಾದ

ವಾಸ್ತವವಾಗಿ ಈ ಕ್ಲಾಕ್ ಟವರ್ ಕಟ್ಟಿಸಿದ್ದು 1936ರಲ್ಲಿ ಮುಸ್ತಾಫ ಸಾಬ್ ಎನ್ನುವರು. ಇಂಥದೇ ಕ್ಲಾಕ್ ಟವರ್ ಕೋಲಾರದ ಟಿ.ಚನ್ನಯ್ಯ ರಂಗಮಂದಿರದ ಪಕ್ಕದಲ್ಲಿರುವ ಹಳೇ ಬಸ್ ನಿಲ್ದಾಣದಲ್ಲಿಯೂ ಇದೆ. ಈ ಎರಡು ಕ್ಲಾಕ್ ಟವರ್‌ ಗಳನ್ನು ಉದ್ಗಾಟಿಸಿದ್ದು ಅಂದಿನ ಮೈಸೂರು ಮಹಾರಾಜರು. ವಿವಾದಗೊಳಿಸಲ್ಪಟ್ಟಿದ್ದ  ಕ್ಲಾಕ್ ಟವರ್‌ ನಲ್ಲಿ ಪ್ರತಿ ಆಗಸ್ಟ್ 15 ರಂದು ತಮ್ಮ ಹೆಮ್ಮೆಯ ತ್ರಿವರ್ಣಧ್ವಜ ಆರೋಹಣ ಮಾಡುವುದು ಈಗಲೂ ಮುಸ್ಲಿಂ  ಸಮುದಾಯದವರೇ. ಅಂದಿನಿಂದ ಇಂದಿನವರೆಗೂ ಈ ಕ್ಲಾಕ್ ಟವರ್ ಬಳಿ ಎಂದಿಗೂ ಸಣ್ಣ ಗಲಾಟೆಯೂ ನಡೆದಿರುವ ಉದಾಹರಣೆಗಳೇ ಇಲ್ಲ. ಇಂತಹ ಕ್ಲಾಕ್ ಟವರ್ ಮೇಲೆ ತಾನು ತ್ರಿವರ್ಣಧ್ವಜ ಹಾರಿಸುತ್ತೇನೆಂದು ಹೊರಟವರು ಅರಿವೀರ ಭಯಂಕರ ಸಂಸದ ಮುನಿಸ್ವಾಮಿ.

ಆದರೆ ಕೋಲಾರದ ಪ್ರಬುದ್ಧ ಜನತೆ, ಸಂಸದರ ಈ ಕಿಡಿಗೇಡಿತನವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಅಷ್ಟೇ ಅಲ್ಲ ಜಿಲ್ಲಾಡಳಿತಕ್ಕೆ ಕೋಲಾರದ ಸೌಹಾರ್ದ ಪರಂಪರೆಯ ಇತಿಹಾಸವನ್ನು ತಿಳಿಸಿದರು. ಜಿಲ್ಲೆಯ ಜನತೆಯ ಮನದ ಮಾತನ್ನು ಅನುಮೋದಿಸಿದ ಜಿಲ್ಲಾಡಳಿತ, ಕೊನೆಗೆ ಸಂಸದ ಮುನಿಸ್ವಾಮಿಯನ್ನು ಸೂಕ್ತ  ಸಂದರ್ಭದಲ್ಲಿ ಅಲ್ಲಿಗೆ ಹೆಜ್ಜೆ ಇಡದಂತೆ ಎಲ್ಲಾ ಕ್ರಮಗಳನ್ನು ಕೈಗೊಂಡರು. ಜೊತೆಗೆ ಸ್ವತಃ ಜಿಲ್ಲಾಧಿಕಾರಿಗಳೇ ಬಂದು ತ್ರಿವರ್ಣಧ್ವಜದ ಆರೋಹಣ ಮಾಡಿದರು. ಅಲ್ಲಿಗೆ ಬಿಜೆಪಿಯ ಬತ್ತಳಿಕೆ ಸೇರಲಿದ್ದ ವಿವಾದಾತ್ಮಕ ವಿಷಯ ಒಂದು ಗಟಾರ ಸೇರಿತು.

ಸಂಘಪರಿವಾರಿ ಈ ಸರ್ಕಾರಕ್ಕೆ, ಕುವೆಂಪು ಅವರ ನೆಲದಲ್ಲಿ ನಿಂತ ಕನ್ನಡಿಗರು, ಬಸವಣ್ಣರ ನೆಲದಲ್ಲಿನ ಶರಣರು, ಕೈವಾರ ತಾತಯ್ಯನವರ ನೆಲದಲ್ಲಿನ ಆಜೀವಕರು, ಎಚ್.ನರಸಿಂಹಯ್ಯರವರ ವಿಚಾರವಾದಿ ಭೂಮಿಕೆಯಲ್ಲಿನ ಪ್ರಗತಿಪರ ಜನರು ಕಪಾಳಮೋಕ್ಷವನ್ನೇ ಮಾಡಿದರು.

ಆದ್ದರಿಂದಲೇ ಇಡೀ ರಾಜ್ಯದಲ್ಲಿ ಸಂಘಪರಿವಾರಿ ಸರ್ಕಾರ ಜನರ ಮುಂದೆ ಬೆತ್ತಲೆಯಾಗಿ ನಿಂತಿದೆ. ಮಾನ ಮರ್ಯಾದೆಗೆ ಬಹುದೊಡ್ಡ ಗೌರವವನ್ನು ಕೊಡುವ, ಹಾಗೇಯೇ ಬದುಕುವ ಜನ ಕನ್ನಡಿಗರು. ಬಿಜೆಪಿಯ ಈ ಬೆತ್ತಲೆ ಸರ್ಕಾರದ ಎಲ್ಲಾ ಷಡ್ಯಂತ್ರಗಳನ್ನು ಸಂಪೂರ್ಣವಾಗಿ ಧಿಕ್ಕರಿಸಿದ್ದಾರೆ. ಹಾಗೂ ಆಜೀವಕರ, ದಾರ್ಶಿನಿಕರ, ವಿಚಾರವಾದಿಗಳ ಭೂಮಿಯಾದ ಅವಿಭಜಿತ ಕೋಲಾರದಲ್ಲಿ, ಸಂಘ ಪರಿವಾರಿ ಕಿಡಿಗೇಡಿಗಳಿಗೆ ನಿಲ್ಲಲು ನೆಲೆ ಇಲ್ಲದಂತೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ಜಾತ್ಯಾತೀತ ಮತ್ತು ಧರ್ಮ ನಿರಪೇಕ್ಷ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ.  
         

ನಿಮಗೆ ಏನು ಅನ್ನಿಸ್ತು?
3 ವೋಟ್
eedina app