ಬಸವಣ್ಣ ಹೇಳಿದಂಗ ಬದುಕೋದಂದ್ರೆ ಏನಂತ ಗೊತ್ತೇನು?

communal harmony art

ಭಾಷಾದ ಮ್ಯಾಗ ಜಗಳ, ನೀರಿನ ಮ್ಯಾಗ ಜಗಳ, ಭೂಮಿ ಮ್ಯಾಗ ಜಗಳ ಅಂತ ಬರೇ ಕಾಲ ಕೆರದ ಜಗಳಾ ಮಾಡೂದೊಂದ ಕಲಿಯೂದಾತೇನ? ಕೂಡಿ ಇರು ಮನಸ ಬರೂದೆಂದ! ಯಾಕ ಹೀಂಗ ? ಬ್ರಿಟಿಷರು ಹ್ವಾದ್ರೂ ಇನ್ನೂ ಒಡದ ಆಳೂ ಅವರ ನೀತಿ ಮಾತ್ರ ನಾವ್ ಬಿಟ್ಟಿಲ್ಲ. ನಮ್ ನಮ್ಮೊಳಗ ಎತ್ತಿ ಕಟ್ಟಿ, ಬಿಟ್ಟ ಹಾಕಿ ಅವ್ರು ತಮ್ ಬ್ಯಾಳಿ ಬೇಯಿಸಿಕೊಂಡ್ರು.

ʻಸಹಬಾಳ್ವೆʼ ಈ ಶಬ್ದಾನೇ ಹೇಳೂವಂಗ ನಾವೆಲ್ಲಾ ಕೂಡಿ ಇರೋದು, ಒಂದಾಗಿರೋದು, ಛಂದಾಗಿರೋದು. ಹೀಂಗ ನಾವೆಲ್ಲಾ ಒಂದ ಅದೀವಿ, ಮತ್ ಇರತೀವಿ. ಮನಷಾ ಸಂಘಜೀವಿ. ಒಂಟಿಯಾಗಿ ಇರಾಕ ಬಯಸೂದಿಲ್ಲ.  ಭಾಳ ದುಃಖ ಆದಾಗ, ನಮ್ ಜಾತೀಯವರ ಬಂದಾಗ ಅವರ ಮುಂದ ಹೇಳತೀನಿ ಅಂತ ಕೂಡತೀವೇನ? ಇಲ್ಲಾ, ಯಾರ ಮನಸು ಹೊಂದ್ಯದ, ಯಾರ ಭಾವನಾ ಒಂದ ಅನಸತಾವ, ಅವರ ಮುಂದ ಎಲ್ಲಾ ಹೇಳಿಕೊಂಡ ಮನಸಿನ ಭಾರಾ ಕಳಕೋತೀವಿ. ಹಿಂಗಿರು ಮುಂದ ಇತ್ತೀಚಿನ ಧಾರವಾಡದಾಗ ಕಲ್ಲಂಗಡಿ ಹಣ್ಣ ಹಾಳ ಮಾಡಿ, ನಾವೆಷ್ಟ ಸಣ್ಣವರ ಅದೀವಂತ ಒಂದಿಷ್ಟ ಜನಾ ತೋರಿಸಿಕೊಂಡ್ರು.

ನೋಡ್ರಿ, ನಮ್ಮಪ್ಪ ಬಸವಣ್ಣ ಜಾತಿಯಲಿ ಮೇಲು ಕೀಳೆಂಬುದಿಲ್ಲ, ಸರ್ವರೂ ಸರಿ ಸಮಾನರು ಅಂತ  ಹೇಳಿದ್ರು. ʻಕುಲ ಕುಲವೆಂದು ಹೊಡದಾಡದಿರಿ, ನಿಮ್ಮ ಕುಲವನೇನಾದರೂ ಬಲ್ಲಿರಾʼ ಅಂತ ಹೇಳಿದ್ರು ನಮ್ ಕನಕದಾಸರು. ಮಾನವ ಕುಲ ತಾನೊಂದೇ ವಲಂ ಅಂತ ಹೇಳಿದ್ರು ಮಹಾ ಕವಿ ಪಂಪ. ಜಾತಿ ಅನ್ನೂದನ್ನ ನಾವ್ ಹಾಳ ಮಾಡಲಿಲ್ಲಂದ್ರ, ಅದೇ ಒಂದಿನಾ ನಮ್ ದೇಶಾ ಹಾಳ ಮಾಡತೈತಿ ಅಂತ ಹೆಚ್ ನರಸಿಂಹಯ್ಯ ಅಪ್ಪಾ ಅವರು ಹೇಳಿದ್ದು ಭಾಳ ಖರೆ ಐತಿ.

ಮಾನವ ಪ್ರೀತಿಯೇ ಬದುಕಿನ ಮೂಲ ಮಂತ್ರ ಆಗಿರಬೇಕೆಂದು ಸಾರಿದ ಬುದ್ಧ, ಮಹಾವೀರ, ಯೇಸು, ಪೈಗಂಬರ್. ಶೋಷಣೆಯನ್ನು ದೂರ ಮಾಡಿ ಸಮಾನತೆಗಾಗಿ ಹೋರಾಡಿದ ಅಂಬೇಡ್ಕರ್, ಸಂತರು, ಶರಣರು, ದಾರ್ಶನಿಕರು, ತತ್ವಜ್ಞಾನಿಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅವರೆಲ್ಲರ ಆಶಯ ಒಂದೇ ಆಗಿತ್ತು. ಶಾಂತಿ, ಸೌಹಾರ್ದತೆ, ಸಹಬಾಳ್ವೆ. ನಾವು ಒಬ್ಬರ ಮ್ಯಾಲ ಒಬ್ಬರು ಅವಲಂಬಿತರಾಗಿ ಬದಕಾವರು. ಗಾಡಿ ಕೆಟ್ಟರ ಎಲ್ಲಿ  ‘ಸಾಬಿ’ ಅಂತ ಅವನ್ನ ಹುಡಕ್ಕೊಂಡ ಹೋಗತೀವಿ. ಯಾಕಂದ್ರ ಈ ಗ್ಯಾರೇಜದ ಮಾಸ್ಟರ್ ಎಲ್ಲಾ ಈ ತುರ್ಕರ!

ನಾ ಮನ್ಯಾಗ ಒಬ್ಬಾಕೀನ ಇದ್ದಾಕಿ. ಹೋದ ವರ್ಷ ನಂಗ ಕೊರೊನಾ ಆದಾಗ, ನಂಗ ದವಾಖಾನಿಗಿ ಹಾಕರಿ ತಮ್ಮಾ ಅಂತ ಕರೆ ಮಾಡಿದ್ರ ಮೂರ್ನಾಕು ಜನಾ ಓಡಿ ಬಂದ್ರು. ಬಸವರಾಜ ತಮ್ಮಾ,, ಕಲ್ಯಾಣರಾವ ಅಣ್ಣಾ, ಸುದೇಶ ಅವರೆಲ್ಲಾ ಬೇರೆ ಬೇರೆ ಜಾತಿಯವರು. ದವಾಖಾನಿಗಿ ಹಾಕಿದ್ರು, ಸಾಯಲಿ ಬಿಡು ತುರ್ಕರಾಕಿ ಅಂತ ಮನ್ಯಾಗ ಕೂಡಲಿಲ್ಲ.  ನನ್ನ ರೋಗದ ತೀವ್ರತೆ ಕಡಿಮ್ಯಾಗೂತನಾ ಸರೀತಂಗ ಉಂಡಿಲ್ಲ , ನಿದ್ದೀ ಮಾಡಿಲ್ಲ . ಇವರು ಬಸವಣ್ಣ ಹೇಳಿದಂಗ ಒಪ್ಪಿಕೊಂಡು, ಅಪ್ಪಿಕೊಂಡು ಬದುಕಿದವರು. ಈ ಕಾರಣಕ್ಕ ನಾನೂ ಒಂದ ವರ್ಷ ಆತು, ಆರಾಮ ಅದೀನಿ.

ʻʻನೀವು ಒಬ್ರ ಯಾಕ ಹೊರಗ ಇರತೀರಿ, ನಮ್ ಬಸವಕೇಂದ್ರದಾಗ ಒಂದ ರೂಂ ಅದ. ಅದರಾಗ ಇರ್ರʼʼ ಅಂತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನಶೆಟ್ಟಿ  ಅವರು ಅಂದದ್ದಕ್ಕ, "ನಾಕ ವರ್ಷದಿಂದ ಅಲ್ಲೇ ಅದೀನಿ. ಹಬ್ಬ, ಹುಣಿವಿ, ಹುಟ್ಟು, ಸಾವು ಎಲ್ಲಾ ಒಂದ ಮನೀಯವರಗತೆ ಇರತೀವಿ, ಇಂಥಾ ಸಹಬಾಳ್ವೆ ಬೇರೆ ಎಲ್ಲಿ ಹೇಳರಿ" ಅಂದಿದ್ದೆ. ಈ ಬಿಳಿಟೋಪಿ ಮಂದೀಗಿ ಮಾಡಾಕ ಬ್ಯಾರೆ ಕೆಲಸಿಲ್ಲಾ, ಹೀಂಗ ಒಡಕ ಹಚ್ಚಿ, ಔರಂಗಜೇಬ, ಟೀಪ್ಪುನ್ನ ತಿರಸ್ಕರಿಸಿ, ಶಿವಾಜಿನ್ನ ಅಪ್ಪಿಕೊಂಡು ಮೆರಸ್ತಾರ. ಅವರೆಲ್ಲರು ರಾಜರಿದ್ದರಿ. ಅವರ ಬ್ಯಾಡ ನಮಗ. ನಮ್ ಶರಣರದಾರ, ಸಂತರದಾರ, ಅವ್ರನ್ನ ತಿಳಕೋರಿ.

ನಮಗ್ಯಾಕ ಇಲ್ಲದ ಕಿರಿಕಿರಿ

ದೇಶ ಸ್ವತಂತ್ರ ಆಗಿ 75 ವರಸ ಆತು. ಆರಿಸಿ ಬಂದ ಬಿಳಿ ಟೋಪಿಯವರು ತಮ್ ಬ್ಯಾಳಿ ಬೇಯಿಸಿಕೊಳ್ಳಾಕ ಏನ ಬೇಕು ಎಲ್ಲಾ ಮಾಡಾಕತ್ತಾರ. ನಮ್ ನಮ್ ಜೋಡಿ ಎಷ್ಟ ಬಿರಕ ಹಾಕತೀವಂದ್ರೂ ಆಗೂದಿಲ್ಲ. ಇವ್ರಗತೆ ಅವಕಾಶವಾದಿ ಜನಾ ನಾವಲ್ಲಾ, ನಾವು ದಿನಾ ಬೆಳಗೆದ್ದು, ಒಬ್ರ ಮುಖಾ ಇನ್ನೊಬ್ರು ನೋಡಕೋತ, ಬ್ಯಾಳಿ, ಪಲ್ಲೆ, ಹಂಚಿ ತಿನಕೊತ ಇರಾವ್ರು. ನಮಗ್ಯಾಕ ಇಲ್ಲದ ಕಿರಿಕಿರಿ. ಯಾವ ಜಾತಿ, ಯಾವ ಧರ್ಮ! ನಿಸರ್ಗಾ ನೋಡಿ ಕಲೀರಿ. ಗಾಳಿ, ಮಳಿ ಈ ಭೂಮಿತಾಯಿ ಎಂದರ ಮ್ಯಾಲ ಕೆಳಗ ಮಾಡ್ಯಾವೇನ? ಬುದ್ಧಿಜೀವಿ ಅಂತ ಕರಿಸಿಕೊಂಡ ಮನಷಾ ಎಲ್ಲಾ ಹಾಳ ಮಾಡಿ ಹತ್ತಿ ಬಿತ್ತಾಕತ್ತಾನ.

ಇದನ್ನು ಓದಿದ್ದೀರಾ?  ಇದು ನಮ್ಮ ಸೌಹಾರ್ದ: ಮಸೀದಿ ನಿರ್ಮಾಣಕ್ಕೆ ಜಾಗ ನೀಡಿದ ರೈತ ಮುಖಂಡ

ಭಾಷಾದ ಮ್ಯಾಗ ಜಗಳ, ನೀರಿನ ಮ್ಯಾಗ ಜಗಳ, ಭೂಮಿ ಮ್ಯಾಗ ಜಗಳ ಅಂತ ಬರೇ ಕಾಲ ಕೆರದ ಜಗಳಾ ಮಾಡೂದೊಂದ ಕಲಿಯೂದಾತೇನ? ಕೂಡಿ ಇರು ಮನಸ ಬರೂದೆಂದ, ಯಾಕ ಹೀಂಗ? ಬ್ರಿಟಿಷರು ಹ್ವಾದ್ರೂ ಇನ್ನೂ ಒಡದ ಆಳೂ ಅವರ ನೀತಿ ಮಾತ್ರ ನಾವ್ ಬಿಟ್ಟಿಲ್ಲ. ನಮ್ ನಮ್ಮೊಳಗ ಎತ್ತಿ ಕಟ್ಟಿ, ಬಿಟ್ಟ ಹಾಕಿ ಅವ್ರು ತಮ್ ಬ್ಯಾಳಿ ಬೇಯಿಸಿಕೊಂಡ್ರು. ಆದ್ರ ನಾವ್ ಇನ್ನೂ ಆ ಪಾಠಾ ಕಲತಿಲ್ಲ. ಮತ್ ಮತ್ ಮನಸ ತುಂಬ ಅದೇ ಹಾಲಾಹಲ ತುಂಬಕೊಂಡ ಕುದಕೊಂತ ಇರತೀವಿ.  

ಬಸವ ಜಯಂತಿ ಮತ್ತು ರಮಜಾನ ಹಬ್ಬದ ದಿನಗಳು ಹತ್ರ ಬಂದಂಗ ಒಂದ ರೀತಿ ಖುಷಿ. ಬಸವ ಜಯಂತಿಯೊಳಗ ಅಂತೂ ಶರಣರಗತೆ ವೇಷಾ ಹಾಕ್ಕೊಂಡು, ಮೆರವಣ್ಯಾಗ ಹೋಗೂದಂದ್ರ ಮೈ ರೋಮಾಂಚನ. ವೇಷಾ ಹಾಕಾವರು, ಬಣ್ಣಾ ಹಚ್ಚಾವರು, ಕೋಲ ಕಲ್ಯಾವರು, ಒಬ್ಬರಕಿಂತ ಒಬ್ಬರದು ಖುಬಿ ನೋಡೂವಂಗ ಇರತೈತಿ. ಢಾಳಾಗಿ ವಿಭೂತಿ ಹಚಕೊಂಡ, ಕೊಳ್ಳಾಗ ಲಿಂಗಪ್ಪನ್ನ ಕಟಗೊಂಡ, ರುದ್ರಾಕ್ಷಿ ಹಾರ, ಇಲಕಲ್ ಸೀರಿ, ಧೋತ್ರಾ ಅದರ ಸಡಗರಾನ ಬ್ಯಾರೆ. ಇಂಥಾ ಸಹಬಾಳ್ವೆ ಸಿಗೂದು ಶರಣರಗೂಡನ.

ನಾನೂ ಬಸವ ಜಯಂತಿಯ ಕಾರಣಕ್ಕ ಶರಣರ ವೇಷಾ ಹಾಕ್ಕೊಂಡವರ ಗೂಡ ಕಸ ಗುಡಿಸುವ ಸತ್ಯಕ್ಕನ ವೇಷಾ ಹಾಕ್ಕೊಂಡ, ಎಷ್ಟ ಛಂದ ಅಂದ್ರ ಎಲ್ಲಾರೂ ಹುಬ್ಬೇರಿಸುವಂಗ ಕಾಣತಿದ್ನಿ. ವೇದಿಕೆ ತುಂಬ ಓಡ್ಯಾಡಿ ರುಚಿ ರುಚಿ ಪಾಯಸಾ, ಅನ್ನ ಸಾರು ತಿಂದು, ತಮ್ಮಗೊಳ ಮನ್ಯಾಂದ ಬಂದ ಹೊಳಗಿ, ಹೊಸಾ ಹೊಸಾ ಸೀರಿ, ನೋಡ್ರಿ ಎಂಥಾ ಕಳ್ಳಾ ಬಳ್ಳಿ, ಇದನ ಅಲ್ಲಾ ನಮ್ ಸಂತರು ಶರಣರು ಹೇಳಿದ್ದು ಮತ್ ಕಲಿಸಿದ್ದು! ಈ ಅಧಿಕಾರಕ್ಕ ಜೋತು ಬಿದ್ದು, ಉಸರವಳ್ಳಿಗತೆ ಬಣ್ಣಾ ಬದಲಸಾವರನ್ನ ಯಾರೂ ನಂಬಬ್ಯಾಡ್ರಿ. ನಾವಿಬ್ಬರೂ ಕೇಸರಿ ಹಸರಾ ಹಂಚಕೊಂಡ ಶಾಂತಾಗಿ ಸೌಹಾರ್ದತೆಯಿಂದ ಬಿಳಿ ಪಾರಿವಾಳ ಹಾರಿಸಿ, ಬಿಳಿ ಸೀರಿ ಉಟಗೊಂಡ ಛಂದಾಗಿರೂಣ ಬರ್ರಿ ಕೈ ಕೂಡಸರಿ.

ನಿಮಗೆ ಏನು ಅನ್ನಿಸ್ತು?
10 ವೋಟ್