ಮಾರಿಜಾತ್ರೆಯಲ್ಲಿ ಸಹಬಾಳ್ವೆಯ ತೇರೆಳೆದವರು ನಾವು

Marikambe jatre

ಊರಿನಲ್ಲಿನ ಸಮುದಾಯಗಳ ನಡುವೆ ಜಾತಿ ಮತ್ತು ಆಹಾರದ ಕ್ರಮಗಳ ಆಧಾರದಲ್ಲಿ ಭಿನ್ನತೆಗಳಿವೆ. ಅವರೆಲ್ಲರೂ ಸೇರಿ ತಮ್ಮ ಜಾತಿಯ ಆಚರಣೆ ಮತ್ತು ಆಹಾರಕ್ರಮವನ್ನೂ ಉಳಿಸಿಕೊಂಡು ಊರಜಾತ್ರೆಯನ್ನು ಆಚರಿಸಬೇಕು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಮಾರಿಜಾತ್ರೆಯನ್ನು ಸಮುದಾಯಗಳು ರೂಪಿಸಿಕೊಂಡ ಬಗೆಯೇ ಉತ್ತರವಾಗುತ್ತದೆ

ನಮ್ಮ ಕಾಲ ಸೃಜಿಸಿರುವ ವೈರುದ್ಯ ಹೇಗಿದೆ ಎಂದರೆ  ‘ಸಹಬಾಳ್ವೆ, ಸಾಮರಸ್ಯʼ ಎಂಬ ಪದಗಳನ್ನು ಕೇಳಿದ ತಕ್ಷಣ ಓಹ್ ಇವು ‘ಧಾರ್ಮಿಕತೆಗೆ’ ಸಂಬಂಧಿಸಿದ ಸಂಗತಿ ಎಂಬ ಗ್ರಹಿಕೆಯೇ ಮುಂದಕ್ಕೆ ಬಂದುಬಿಡುತ್ತದೆ. ಆದರೆ ವಾಸ್ತವದಲ್ಲಿ ಸಹಬಾಳ್ವೆ ಎಂಬ ಪರಿಭಾಷೆ ಧಾರ್ಮಿಕ ನೆಲೆಯ ಅರ್ಥವನ್ನು ಮಾತ್ರ ಹೊಂದಿಲ್ಲ ಆದರ ವ್ಯಾಪ್ತಿ ವಿಶಾಲವಾಗಿದೆ ಸಾಮಾಜಿಕ ಸಂಘರ್ಷಗಳನ್ನು ಕೇವಲ ಧಾರ್ಮಿಕ ಕಣ್ಣೋಟದಿಂದ ಮಾತ್ರ ನೋಡುವುದು ಮತ್ತು ವಿಶ್ಲೇಷಿಸುವುದು ಈ ಹೊತ್ತಿನ ಅಧಿಕಾರ ರಾಜಕಾರಣದ ಅಗತ್ಯವೇ ಹೊರತು ಬೌದ್ಧಿಕ ಜರೂರಲ್ಲ.

ಹಾಗೆ ನೋಡುವುದಾದರೆ ಜಗತ್ತಿನ ಯಾವ ಸಮಾಜವೂ ಸಂಘರ್ಷಗಳೇ ಇಲ್ಲದ ಆದರ್ಶ ಸ್ಥಿತಿಯಲ್ಲಿ ಇದ್ದಿರಲು ಸಾಧ್ಯವೇ ಇಲ್ಲ. ಸಮಾಜ ಅಂದಮೇಲೆ ಸಂಘರ್ಷ, ವೈರುಧ್ಯಗಳು ಸಹಜವಾಗಿ ಇರುತ್ತವೆ. ‘ಬಹುಸಂಸಂಸ್ಕೃತಿಯನ್ನು ಆಧರಿಸಿದ ಸಮಾಜವೊಂದರಲ್ಲಿ ಸಾಮರಸ್ಯದಿಂದ ಕೂಡಿದ ಜನ-ಬದುಕು ಮಾತ್ರವೇ ವೈವಿಧ್ಯತೆಯಿಂದ ಕೂಡಿರುವುದಿಲ್ಲ. ಬದಲಾಗಿ ಅವುಗಳ ನಡುವಿನ ಸಂಘರ್ಷಗಳೂ ವೈವಿಧ್ಯಮಯ ಆಯಾಮವನ್ನು ಹೊಂದಿರುತ್ತವೆ. ಈ ಕಾರಣಕ್ಕೆ ಭಾರತದಂತಹ ದೇಶದಲ್ಲಿ ವರ್ಗ, ಭಾಷೆ ಮತ್ತು ಜಾತಿಗಳ ನೆಲೆಯಲ್ಲಿಯೂ ಸಮುದಾಯಗಳ ನಡುವೆ ಸಂಘರ್ಷಗಳು ಘಟಿಸುತ್ತಿರುತ್ತವೆ ಎನ್ನುವುದನ್ನು ನಾವು ಗುರುತಿಸಿಕೊಂಡರೆ ನಮ್ಮದೇ ಸಾಮಾಜಿಕ ಚರಿತ್ರೆ ಮತ್ತು ಪರಂಪರೆ ಹೇಗೆ ಈ ವೈವಿಧ್ಯಮಯ ಸಂಘರ್ಷಗಳನ್ನು ಸಹಬಾಳ್ವೆಯಾಗಿ ಬೆಸೆದಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ...!

ಉದಾಹರಣೆಗೆ ‘ನನಗೆ ಮುಸ್ಲೀಮರನ್ನು ಕಂಡರೆ ಆಗುವುದಿಲ್ಲʼ ಎನ್ನುವ ನನ್ನ ಸ್ನೇಹಿತನೊಬ್ಬನ ಆತ್ಮೀಯ ಮಿತ್ರನ ಹೆಸರು ಅಮ್ಜದ್ ಇದು ಆಶ್ಚರ್ಯ ಅನ್ನಿಸಿದರೂ ಸತ್ಯ...! ಹಾಗೆ ನೋಡುವುದಾದರೆ ಈ ಮಾದರಿಯ ಸಾಮಾಜಿಕ ಸನ್ನಿವೇಶಗಳನ್ನು ನಾವು ದಿನನಿತ್ಯದ ನಮ್ಮ ಸಾಮಾಜಿಕ ಕೊಡುಕೊಳ್ಳುವಿಕೆಯಲ್ಲಿ ನೋಡುತ್ತಿರುತ್ತೇವೆ. ಕೋಮುಸಂಘಟನೆಗಳ ಕಾರ್ಯಕರ್ತರು, ಅವುಗಳ ಸಣ್ಣಮಟ್ಟದ ನಾಯಕರು ಎಂದು ಗುರುತಿಸಿಕೊಳ್ಳುವ, ಧರ್ಮಗಳ ಹೆಸರಿನಲ್ಲಿ ಟಿವಿ ಕ್ಯಾಮೆರಾಗಳ ಮುಂದೆ ಅಬ್ಬರಿಸುವ ಬಹುತೇಕ ಯುವಕರಿಗೆ ವೈಯಕ್ತಿಕವಾಗಿ ಅನ್ಯಧರ್ಮಿಯ ಸ್ನೇಹಿತರ ದೊಡ್ಡ ದಂಡೇ ಇರುತ್ತದೆ. ಇದು ಹೇಗೆ ಸಾಧ್ಯ..ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಅದಕ್ಕೆ ಉತ್ತರ ಈ ನೆಲದಲ್ಲಿನ ಸಹಾಬಾಳ್ವೆಯ ಪರಂಪರೆಯಲ್ಲಿ ಸಿಗುತ್ತದೆ. ಏಕೆಂದರೆ ಇಲ್ಲಿ ಸಹಬಾಳ್ವೆ ಎನ್ನುವುದು ಕೇವಲ ವಿಚಾರವಲ್ಲ, ಬದಲಾಗಿ ನೂರಾರು ವರ್ಷಗಳಿಂದ ಅಸ್ಥಿತ್ವದಲ್ಲಿರುವ ಜೀವನಕ್ರಮವಾಗಿದೆ. ಈ ವಿದ್ಯಮಾನವನ್ನು ಸಾಕ್ಷೀಕರಿಸುವ ಸಾವಿರಾರು ಉದಾಹರಣೆಗಳು ಸಿಗುತ್ತವೆ. ಬೆಂಗಳೂರಿನ ಕರಗ ಅಂತಹದ್ದೊಂದು ಉದಾಹರಣೆ.

ಈ ಸಹಬಾಳ್ವೆಯ ಪರಂಪರೆ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮುದಾಯಗಳ ನಡುವಿನ ಜಾತಿ ಸಂಬಂಧಗಳಲ್ಲೂ ಇದು ಢಾಳಾಗಿ ಕಾಣಸಿಗುತ್ತದೆ ಉದಾಹರಣೆಗೆ ನಮ್ಮ ಕರ್ನಾಟಕದ ಜಾತ್ರೆಗಳಲ್ಲಿ  ‘ಮಾರಿಜಾತ್ರೆ’ ಅತ್ಯಂತ ಪ್ರಸಿದ್ಧವಾದ ಜಾತ್ರಾಮಹೋತ್ಸವ ನೂರಾರು ವರ್ಷಗಳಿಂದ ಈ ಜಾತ್ರೆ ನಡೆದುಕೊಂಡು ಬರುತ್ತಿದೆ. ಬಹುತೇಕ ಎಲ್ಲಾ ಹಳ್ಳಿ ಮತ್ತು ಪಟ್ಟಣಗಳಲ್ಲಿ ಮೂರು ವರ್ಷಗಳಿಗೊಮ್ಮೆ ಮಾರಿಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಮೂಲತಃ ಮಾರಮ್ಮ ಊರದೇವಿ ಆಗಿರುವುದರಿಂದ ಆಕೆಯ ಆರಾಧನೆ ಊರಜಾತ್ರೆಯಾಗಿ ಆಚರಿಸಲ್ಪಡುತ್ತದೆ. ಆದರೆ ಊರಿನಲ್ಲಿನ ಸಮುದಾಯಗಳ ನಡುವೆ ಜಾತಿಯ ಆಧಾರದಲ್ಲಿ, ಆಹಾರದ ಕ್ರಮಗಳ ಆಧಾರದಲ್ಲಿ ಭಿನ್ನತೆಗಳಿವೆ. ಅವರೆಲ್ಲರೂ ಸೇರಿ ತಮ್ಮ ಜಾತಿ ಆಚರಣೆ ಮತ್ತು ಆಹಾರಕ್ರಮವನ್ನೂ ಉಳಿಸಿಕೊಂಡು ಊರಜಾತ್ರೆಯನ್ನು ಆಚರಿಸಬೇಕು, ಅದು ಹೇಗೆ ಸಾಧ್ಯ...? ಎಂಬ ಪ್ರಶ್ನೆಗೆ ಸದರಿ ಜಾತ್ರೆಯನ್ನು ಸಮುದಾಯಗಳು ರೂಪಿಸಿಕೊಂಡ ಬಗೆಯೇ ಉತ್ತರವಾಗುತ್ತದೆ ಮತ್ತು ನಾವು ಮಾತನಾಡುತ್ತಿರುವ ಪರಂಪರಾಗತ ಸಹಬಾಳ್ವೆ/ಸಾಮರಸ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗುತ್ತದೆ.

Image
ಮಾರಿಕಾಂಬೆ ದೇವಸ್ಥಾನ
ಮಾರಿಕಾಂಬೆ ದೇವಸ್ಥಾನ

ಸಸ್ಯಾಹಾರಿಗಳಿಂದ ಪ್ರಾಣಿಬಲಿ

ಸದರಿ ಮಾರಿಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ. ಶಿವಮೊಗ್ಗ, ದಾವಣಗೆರೆ ಕಡೆಯಲ್ಲಿ ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಈ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಇಲ್ಲಿ ಮಂಗಳವಾರ ಸಂಜೆ ದೇವಿಯನ್ನು ಕೆತ್ತನೆ ಮಾಡಿದ ಸ್ಥಳದಲ್ಲಿಯೇ ಪೂಜಿಸಲಾಗುತ್ತದೆ. ಆ ಪೂಜೆಯಲ್ಲಿ ಮಾಂಸಾಹಾರ ನಿಷಿದ್ದ. ಊರಿನ ಬ್ರಾಹ್ಮಣ, ಲಿಂಗಾಯತ ಸೇರಿದಂತೆ ಸಸ್ಯಾಹಾರಿ ಸಮುದಾಯಗಳು ದೇವಿಗೆ ಸಿಹಿ ತಿನಿಸುಗಳ ನೈವೇದ್ಯವನ್ನು ಮಾಡುತ್ತಾರೆ. ಅಂದು ರಾತ್ರಿ ಮೆರವಣಿಗೆ ಹೊರಟು ದೇವಿ ಮಾರಿಗದ್ದುಗೆ ತಲುಪುತ್ತಾಳೆ. ಬುಧವಾರ ಅಲ್ಲಿ ಮಾಂಸಹಾರಿ ಸಮುದಾಯಗಳು ಕುರಿ, ಕೋಳಿಗಳನ್ನು ದೇವಿಗೆ ಅರ್ಪಿಸುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಈ ಜಾತ್ರೆಯ ಒಟ್ಟು ರಚನೆಯಲ್ಲಿ ಕೋಣದ ನೈವೇದ್ಯಕ್ಕೂ ಅವಕಾಶವಿದೆ (ಇತ್ತೀಚೆಗೆ ಕಾನೂನು ನಿರ್ಬಂಧ ವಿಧಿಸಿದೆ) ಗುರುವಾರ ಮತ್ತೆ ಊರಿನ ಎಲ್ಲಾ ಸಮುದಾಯಗಳು ಒಟ್ಟಾಗಿ ದೇವಿಯನ್ನು ಊರಿನಿಂದ ಬಿಳ್ಗೋಡುತ್ತಾರೆ.

ಮಾರಿಜಾತ್ರೆಯ ಈ ರಚನೆ ದೇವರು ಮಾಡಿರುವುದಲ್ಲ. ಬದಲಾಗಿ ಒಂದು ಊರಿನಲ್ಲಿ ನೂರಾರು ವರ್ಷಕಾಲ ಬದುಕಿರುವ ಹಲವು ವೈವಿದ್ಯಮಯ ಆಚಾರ, ವಿಚಾರ, ಆಹಾರ ಕ್ರಮಗಳನ್ನು ಹೊಂದಿರುವ ಸಮುದಾಯಗಳು ಎಲ್ಲರಲ್ಲೂ ಒಳಗೊಳ್ಳುವಂತೆ ಎಲ್ಲಾ ಆಚಾರ, ವಿಚಾರ, ಆಹಾರಕ್ರಮಗಳಿಗೂ ಅವಕಾಶ ಇರುವಂತೆ ಜಾತ್ರೆಯನ್ನು ರೂಪಿಸಿಕೊಂಡಿವೆ. ಆದಕ್ಕೆ ಪೂರಕವಾದ ಮಾರಿಕಥನವನ್ನೂ ಕಟ್ಟಿಕೊಂಡಿವೆ. ಈ ಸಂಗತಿ ನಮ್ಮ ಸಮುದಾಯಗಳ ನಡುವೆ ಅಸ್ಥಿತ್ವದಲ್ಲಿರುವ ಭಿನ್ನವಿದ್ದೂ ಬೆರೆಯಬಹುದಾದ ಲೋಕದೃಷ್ಟಿಯನ್ನು ನಮಗೆ ಪರಿಚಯಿಸುತ್ತದೆ. ಇದನ್ನೇ ನಾವು ಆಧುನಿಕ ಸಂಧರ್ಭದಲ್ಲಿ ಸಹಬಾಳ್ವೆ/ಸಾಮರಸ್ಯ ಎನ್ನುತ್ತಿದ್ದೇವೆ.

ಇದನ್ನು ಓದಿದ್ದೀರಾ? ಗಂಟೆಯ ನಾದವನ್ನು ಕರಮುದ್ದೀನ್‌ ಧ್ಯಾನಿಸಿದರೆ, ಆಜಾನ್‌ ಪ್ರಾರ್ಥನೆಗೆ ದುರ್ಗಾದೇವಿ ತನ್ಮಯಳಾಗಿದ್ದಾಳೆ

ಇನ್ನೂ ಭಾಷೆಯ ವಿಷಯಕ್ಕೆ ಬಂದರೆ ಕನ್ನಡದ ಖ್ಯಾತ ವಿಮರ್ಶಕರೊಬ್ಬರು ತಮ್ಮ ಲೇಖನವೊಂದರಲ್ಲಿ ಅವರ ಅನುಭವಕ್ಕೆ ಬಂದ ಘಟನೆಯನ್ನು ದಾಖಲಿದ್ದಾರೆ. ಅದು ಬೆಂಗಳೂರಿನ ಒಂದು ಏರಿಯಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಭಾಷಣಕಾರರಾಗಿ ಹೋದ ಅವರಿಗೆ ಆಯೋಜಕರು ‘ಸಾರ್ ನೀವು ಕನ್ನಡ ಭಾಷೆ, ಅದರ ಇತಿಹಾಸ, ಪರಂಪರೆ, ವರ್ತಮಾನಕ್ಕೆ ಕನ್ನಡ ಭಾಷೆಯ ಅಗತ್ಯದ ಕುರಿತು ಎಷ್ಟಾದರೂ ಮಾತನಾಡಿ. ಆದರೆ, ನಿಮ್ಮ ಭಾಷಣದಲ್ಲಿ ತೆಲುಗು ಭಾಷೆಯನ್ನು ವಿರೋಧಿಸಬೇಡಿ. ಎಕೆಂದರೆ ನಮ್ಮ ಏರಿಯಾದಲ್ಲಿ ತೆಲುಗು ಮಾತನಾಡುವ ಜನರೂ ಇದ್ದಾರೆ. ನಾವು ಅವರೂ ಸೇರಿಯೇ ಈ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ’ ಎಂಬ ವಿನಂತಿಯನ್ನು ಮುಂದಿಡುತ್ತಾರೆ. ಇದು ವೈವಿದ್ಯಮಯ ಸಮಾಜವೊಂದರ ಭಾಗವಾಗಿ ಕನ್ನಡ ಭಾಷಿಗರು ರೂಪಿಸಿಕೊಂಡ ಸಹಬಾಳ್ವೆಯ ಸ್ವರೂಪ. ಇತ್ತಿಚೇಗೆ ನಟ ಸುದೀಪ್ ಬಾಲಿವುಡ್‍ನ ಅಜಯ್ ದೇವಗನ್‍ಗೆ ನೀಡಿದ ಪ್ರತಿಕ್ರಿಯೆಯ ಸ್ವರೂಪ ಹುಟ್ಟಿರುವುದು. ಈ ಭಾಷಿಕ ಸಹಬಾಳ್ವೆ ರೂಪಿಸಿದ ಅರಿವಿನ ನೆಲೆಯಿಂದಲೆ.

ಇಂತಹ ಸಹಬಾಳ್ವೆಯ ಆಗರವಾದ ಪರಂಪರೆಯೊಂದನ್ನು ಕೇವಲ ‘ಧಾರ್ಮಿಕ ಸಂಘರ್ಷಗಳ ಆಗರದಂತೆ’ ವಿಶ್ಲೇಷಿಸುತ್ತಿರುವುದು ಅತ್ಯಂತ ಸಂಕುಚಿತ ದೃಷ್ಟಿಕೋನ. ನಮ್ಮ ನಡುವಿನ ಮುಖ್ಯ ಚರಿತ್ರಕಾರ್ತಿ ರೋಮಿಲಾ ಥಾಪರ್  ‘ನಮ್ಮ  ಸ್ವಯಂಘೋಷಿತ ರಾಷ್ಟ್ರೀಯವಾದಿಗಳು ಎಂದು ಕರೆದುಕೊಳ್ಳುವ ಜನರು ವಾದಿಸುವಂತೆ ಒಂದು ಸಾವಿರ ವರ್ಷಗಳ ನಮ್ಮ ಚರಿತ್ರೆ ಸಂಪೂರ್ಣ ಧಾರ್ಮಿಕ ಸಂಘರ್ಷಗಳ ಆಗರವಾಗಿತ್ತು ಎನ್ನುವುದೇ ನಿಜವಾಗಿದ್ದರೆ, ನಮ್ಮ ವರ್ತಮಾನ ಅನಿಯಂತ್ರಿತ ಹಿಂಸೆಯಿಂದ ಕೂಡಿರಬೇಕಿತಲ್ಲವೇ’ ಎಂಬ ಪ್ರಶ್ನೆಯನ್ನು ಎತ್ತುತ್ತಾರೆ. ಆದರೆ ನಮ್ಮ ಮುಂದಿರುವ ವಾಸ್ತವ ಹಾಗಿಲ್ಲ. ನಮ್ಮ ಸಮುದಾಯಗಳು ಪರಸ್ಪರ ಸಹಬಾಳ್ವೆಯನ್ನು ಆಧರಿಸಿಯೇ ಬದುಕುತ್ತಿವೆ. ಆಗಾಗ್ಗೆ ಘಟಿಸುವ ಸಂಘರ್ಷಗಳಲ್ಲಿ ಹೆಚ್ಚಿನವು ರಾಜಕೀಯ ಕಾರಣಕ್ಕಾಗಿ ನಡೆಯುವ ಸಂಗತಿಗಳೇ ಹೊರತು ಅವು ಯುರೋಪಿನಲ್ಲಿ ನಡೆದಂತಹ ‘ಧಾರ್ಮಿಕ ಕಲಹಗಳಲ್ಲ’. ನಾವು ಚರಿತ್ರೆಯನ್ನು ತೆರೆದ ಕಣ್ಣುಗಳಿಂದ ನೋಡಿದರೆ ವರ್ತಮಾನದ ಹಿಂದೂ ಪರಂಪರೆಯಲ್ಲಿಯಲ್ಲಿನ ನೂರಾರು ಅಲೋಚನೆಗಳು, ಆಚರಣೆಗಳು, ಸಾಮಾಜಿಕ ನಿಯಮಗಳು ಚರಿತ್ರೆಯಲ್ಲಿನ ಕ್ರಿಯಾಶೀಲ ಸಹಬಾಳ್ವೆಯ ತತ್ವಗಳ ದ್ಯೋತಕವಾಗಿ ನಮಗೆ ಗೋಚರಿಸುತ್ತವೆ ಅವು ಕೋಮುವಾದಿ ಚರಿತ್ರಕಾರರು ನಿರೂಪಿಸುವಂತೆ ನಿರಂತರ ಸಂಘರ್ಷಮಯ ಜನ-ಬದುಕನ್ನು ಅಲ್ಲಗಳೆಯುತ್ತವೆ ಮತ್ತು ಈ ನೆಲದ ಮೂಲಧಾತುವಾದ ಸಹಬಾಳ್ವೆಯ ಮೌಲ್ಯವನ್ನು ಎತ್ತಿಹಿಡಿಯುತ್ತವೆ.

ಅಂತಿಮವಾಗಿ ಸಮಾಜದಲ್ಲಿ ಸಹಬಾಳ್ವೆ/ಸಾಮರಸ್ಯವನ್ನು ಜನರ ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾಷಿಕ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಸಂರಕ್ಷಿಸುವ ಮೂಲಕ ಸಾಧಿಸಬಹುದೇ ಹೊರತು ಅವುಗಳನ್ನು ಹತ್ತಿಕ್ಕುವ, ಪರಸ್ಪರ ವಿರುದ್ಧವಾಗಿ ನಿರೂಪಿಸುವ ಕ್ರಮಗಳಿಂದ ಅಲ್ಲ ಎಂಬ ಸೂಕ್ಷ್ಮತೆಯನ್ನು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹಿರಿಮೆಯನ್ನು ಹೊಂದಿರುವ ನಮ್ಮ ರಾಜಕೀಯ ನಾಯಕತ್ವ ಅರ್ಥಮಾಡಿಕೊಳ್ಳಬೇಕಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್