ಬಿಸ್ಮಿಲ್ಲಾಖಾನರು ಕಾಶಿ ವಿಶ್ವನಾಥನನ್ನು ಬಿಟ್ಟು ಹೋಗಲಿಲ್ಲ...!

Bismilla khan

ಸಹಬಾಳ್ವೆ ಮತ್ತು ಸೌಹಾರ್ದ ಪರಂಪರೆ ಮುಖ್ಯವಾಗಿ ಮಾನವೀಯ ನೆಲೆಯಲ್ಲಿ ನಿಂತಿರುವ ಒಂದು ಜೀವನಪದ್ದತಿ. ಗಾಂಧೀಜಿ ಇದನ್ನು ನೈತಿಕ ನೆಲೆಯಲ್ಲಿ ಸಾಧಿಸಲು ಪ್ರಯತ್ನಿಸಿದರೆ, ಅಂಬೇಡ್ಕರ್ ಸಾಮಾಜಿಕ ನೆಲೆಯಲ್ಲಿ, ಲೋಹಿಯಾ ರಾಜಕೀಯ ನೆಲೆಯಲ್ಲಿ ವಿಸ್ತರಿಸಲು ನೋಡಿದರು. ಸಾವರ್ಕರ್ -ಗಾಂಧಿ ಸಂವಾದ ನಡೆದಿದ್ದು ನೈತಿಕತೆಯ ತಳಹದಿಯ ಮೇಲೆ.

ಭಾರತಕ್ಕೆ ಸಹಬಾಳ್ವೆ ಅನ್ನೋದು ಹೊರಗಿನ ತತ್ವವಲ್ಲ. ಅದು ದೇಸಿವಾದ. ಇನ್ನೂ ಇದನ್ನು ಸರಳಗೊಳಿಸಿ ಹೇಳುವುದಾದರೆ ಅದನ್ನು ʼಸಹಜವಾದʼ ಅನ್ನಬಹುದು. ಭಾರತೀಯ ತತ್ವ ಮೀಮಾಂಸೆಯೆ ಮೊದಲಿಗೆ ಉಪನಿಷತ್, ವೇದಗಳನ್ನು ಒಪ್ಪುವುದರ ಜೊತೆಗೆ ಬೌದ್ಧ ಜೈನ, ಚಾರ್ವಕ, ಕಣಾದರಂತಹ ನಾಸ್ತಿಕ ಧಾರೆಗಳನ್ನು ಒಪ್ಪಿಗೊಂಡಿತು. ಆಮೇಲೆ ಇಲ್ಲಿ ಮುಸ್ಲಿಂ, ಕ್ರೈಸ್ತ, ಪಾರಸಿಗಳಾಗಿರುವವರು ಈ ದೇಶದಲ್ಲೆ ಇದ್ದವರು. ಇವರ್ಯಾರು ದೇಶದ ಹೊರಗಿನವರಲ್ಲ.
ಇಲ್ಲಿ ಸಂಕರವು ಕೇವಲ ದೈಹಿಕವಾಗಿ ಮಾತ್ರವಲ್ಲ. ತಾತ್ವಿಕ ಸಂಕರಗಳು ಆಗಿವೆ. ಅದು ಷರೀಫರ ಗುರುಗೋವಿಂದರ ಸಂಬಂಧ ಇರಬಹುದು. ಕಾಶ್ಮೀರದ ಲಲ್ಲೇಶ್ವರಿ ಮುಸ್ಲಿಮರ ಲಲ್ಲಾ ಆಗಿದ್ದಿರಬಹುದು. ಭಾರತದ ಉದ್ದಗಲಕ್ಕೂ ಇದು ಸಹಜವಾಗಿದೆ. ಈಗ ಬಾಬಾಜಿ ಪರಂಪರೆಯನ್ನೆ ತೆಗೆದುಕೊಳ್ಳಿ. ಹಿಂದೂ ಧರ್ಮದ ಬಹುದೊಡ್ಡ ಪರಂಪರೆ ಇದು. ಸೂಪರ್ ಸ್ಟಾರ್ ರಜನಿಕಾಂತ್ ರಿಂದ ಹಿಡಿದು ದೇಶದ ಉದ್ದಗಲಕ್ಕೂ ಇದರ ಭಕ್ತರಿದ್ದಾರೆ. ಇವರ ಕ್ರಿಯಾಯೋಗಕ್ಕೆ ಮುಗಿಬೀಳುವ ವಿದೇಶಿ ಭಕ್ತರಿದ್ದಾರೆ.

ಈ ಪರಂಪರೆಯ ಯೋಗಾನಂದಪರಮಹಂಸರ ಯೋಗಿಯ ಆತ್ಮಕತೆ ಓದಿದರೆ ಅದರಲ್ಲಿ ಯೇಸುಸ್ವಾಮಿ ಭಾರತಕ್ಕೆ ಬಂದು ಕ್ರಿಯಾಯೋಗ ಕಲಿತರು ಎಂಬ ಉಲ್ಲೇಖವಿದೆ. ಶ್ರೀ ಎಂ ಎನ್ನುವ ಮುಸ್ಲಿಂ ಪಂಥದವರು ಈ ಪಂಥದ ಬಹುದೊಡ್ಡ ಗುರುಗಳಾಗಿದ್ದಾರೆ. ಸೂಫಿ ಪರಂಪರೆ ಹಿಂದೂಮುಸ್ಲಿಂ ಐಕ್ಯತೆಯನ್ನು, ಒಲವೇ ದೇವರು ಎಂಬ ತತ್ವವನ್ನು ಉದ್ದಕ್ಕೂ ಸಾರಿಕೊಂಡು ಬಂದಿದೆ.

ನಮಲ್ಲಿ ಒಡಕು ತರಲು ಯತ್ನಿಸಿದ್ದೆ ರಾಜರ ಆಡಳಿತ, ಸಾಮ್ರಾಜ್ಯಶಾಹಿಗಳು ಮತ್ತು ಆಧುನಿಕ ಕಾಲದ ಅಧಿಕಾರ ರಾಜಕಾರಣದ ವ್ಯವಸ್ಥೆ ಗಳು. ಇದು ಜನಸಾಮಾನ್ಯರ ಮೇಲೂ ಪ್ರಭಾವ ಬೀರಿದೆ. ಆಧುನಿಕ ಕಾಲದ ಸ್ವಾತಂತ್ರ್ಯ ಚಳವಳಿಯ ಆಶಯವನ್ನೆ ನಾವು ಉದ್ದಕ್ಕೂ ಪ್ರತಿಪಾದಿಸಿಕೊಂಡು ಹೋಗಬೇಕಿದೆ. ನಮ್ಮ ಸಂವಿಧಾನವನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದೆರೆಡು ಬಲಪಂಥೀಯ ರಾಜಕಾರಣಕ್ಕೆ ಬಹುದೊಡ್ಡ ತೊಡಕಾಗಿದೆ ಹಾಗಾಗಿ ಅದು ಕಾರ್ಯಾಂಗವನ್ನು ಪಳಗಿಸಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ನೋಡುತ್ತಿದೆ.

ಇನ್ನು ಬೌದ್ದ ಧರ್ಮಕ್ಕೆ ಬರುವುದಾದರೆ ಬಿಹಾರದ ನಳಂದ ವಿಶ್ವವಿದ್ಯಾಲಯ ತನ್ನೊಳಗೆ ಹಿಂದೂ ಧರ್ಮದ ತಾಂತ್ರಿಕ ಧಾರೆಗಳನ್ನು, ಅವಲೋಕಿತೇಶ್ವರ ಎನ್ನುವ ಶಿವತತ್ವವನ್ನು ಮೈಗೂಡಿಸಿಕೊಂಡಿತ್ತಲ್ಲದೆ ಇದೆಲ್ಲವನ್ನು ಮೀರಿಹೋಗುವ ಬುದ್ದ ಮಾದರಿಯನ್ನು ಹೇಳುತ್ತಾ ಮಹಾಯಾನದ ಬೃಹತ್ ತಾತ್ವಿಕ ಅಡಿಗಲ್ಲನ್ನೆ ಕಟ್ಟಲು ಹೊರಟಿತ್ತು.

ಕಲ್ಯಾಣದ ಆಶಯವೇ ಸೌಹಾರ್ದ ಪರಂಪರೆ ಕಟ್ಟುವುದು

ಎಲ್ಲಾ ಧಾರ್ಮಿಕ ತತ್ವವನ್ನು ಬುದ್ದ ತತ್ವದೊಡನೆ ಮಿಳಿತಗೊಳಿಸುವ ವಿಶಿಷ್ಟ ಪರಂಪರೆ ಇದಾಗಿತ್ತು. ಇದನ್ನು ಟಿಬೆಟ್ ಗೆ ಹೋಗುವಂತೆ ಮಾಡಿ ಸೌಹಾರ್ದತೆಯ ಮೂಲತತ್ವವನ್ನೆ ಭಾರತದಿಂದ ನಾಶವಾಗುವಂತೆ ಮಾಡಿದರು. ನನಗನಿಸುವ ಹಾಗೆ ಆನಂತರ ಬಂದ ಸಿದ್ದ ಪರಂಪರೆಯ ಶೈವಮೂಲಗಳು, ವಚನಕಾರರು ಇದರ ಮೂಲ ತಾತ್ವಿಕತೆಯನ್ನು ಬೇರೆ ಬೇರೆ ಜ್ಞಾನ ಶಾಖೆಯ ಜೊತೆ ವಿಲೀನಗೊಳಿಸಿಕೊಂಡರು. ಹಿಂದೂ ಪದ್ದತಿಯ ವಿಕೇಂದ್ರಿಕೃತ ದೈವ ಪದ್ಧತಿಗಳನ್ನು ಏಕದೈವಕ್ಕೆ ಕರೆತರುವಲ್ಲಿಯೂ ಸಾಂಸ್ಕೃತಿಕ ಷಡ್ಯಂತ್ರವಿದೆ. ನಮ್ಮಲ್ಲಿ ಅಂತರ್ ಜಾತಿ ಮತ್ತು ಅಂತರ್ ಧರ್ಮಿಯ ವಿವಾಹಗಳೆ ಒಂದು ಮತ್ತೊಂದು ಸಂಸ್ಕೃತಿಗಳ ಅರಿವಿಗೆ ದಾರಿದೀಪವಾಗಿರುವಂತಹದ್ದು. ಬಸವಣ್ಣ ಇದನ್ನು ಕಾರ್ಯರೂಪಕ್ಕೆ ತರಲು ಹೋಗಿಯೆ ಕಲ್ಯಾಣ ಕ್ರಾಂತಿಯಾದದ್ದು. ಕ್ರಮೇಣ ಈ ಧಾರೆ ಅಲ್ಲಮ ಮಂಟೇಸ್ವಾಮಿಗಳ ಮೂಲಕ ಸುವ್ವಿ ಬಾ ಕಲ್ಯಾಣವಾಗಿ ಹರಿಯುತ್ತಲೇ ಇದೆ. ಕಲ್ಯಾಣದ ಆಶಯವೇ ಇಂಥ ಸೌಹಾರ್ದ ಪರಂಪರೆಯನ್ನು ಕಟ್ಟುವುದಾಗಿತ್ತು. ನಾವು ಇಂಥ ಪರಂಪರೆಯನ್ನು ವೈಚಾರಿಕ ನೆಲೆಗಳಿಗಿಂತ ಹೆಚ್ಚಾಗಿ ಧಾರ್ಮಿಕ ನೆಲೆಗಳ ಮೂಲಕವೆ ಎದುರುಗೊಳ್ಳಬೇಕು. ವೈಚಾರಿಕ ನೆಲೆಯೆಂಬುದು ಆಧುನಿಕ ಕಾಲದ ವಿದ್ಯಮಾನ. ನಾವು ಚಾರ್ವಾಕ, ಕಣಾದರನ್ನು ಹೆಸರಿಸಬಹುದಾದರೂ ನಾವ್ಯಾರು ಇದನ್ನು ಉಲ್ಲೇಖವೇ ಮಾಡುವುದಿಲ್ಲ.

ಕುವೆಂಪು ಈ ನೆಲೆಯಲ್ಲಿ ಸಮರ್ಥ ಪ್ರತಿಪಾದಕರು. ಎಲ್ಲಾ ದಾರ್ಶನಿಕತೆಯನ್ನು ತಿಳಿದು ಕೊಳ್ಳಿ ನಿಮಗೆ ಸರಿಎನಿಸಿದ ದರ್ಶನವನ್ನು ವಿಶ್ವಮಾನವ ನೆಲೆಯಲ್ಲಿ ಮೈಗೂಡಿಸಿಕೊಳ್ಳಿ ಎಂದು ಹೇಳುತ್ತಾರೆ. ಪರಮಹಂಸ ವಿವೇಕಾನಂದರ ಸರ್ವಧರ್ಮಸಮನ್ವಯ ತತ್ವವೇ ಈ ತಾತ್ವಿಕತೆ ಹಿಂದಿನ ಜೀವಾಳ. ಕುವೆಂಪು ವೈಚಾರಿಕತೆ ಅನ್ನೋದು ದರ್ಶನ, ಅನುಭಾವ ಲೋಕದಿಂದ ಉತ್ಪತ್ತಿಯಾದದ್ದು. ರಾಜಕಾರಣದ ನೆಲೆಯಲ್ಲಿ ಉತ್ಪತ್ತಿಯಾದ ವೈಚಾರಿಕ ತಾತ್ವಿಕತೆ ಹೆಚ್ಚು ತಾಳಿಕೊಳ್ಳುವ ಗುಣವಿಲ್ಲವೆಂದೆ ನನ್ನ ಭಾವನೆ. ನಮ್ಮಲ್ಲಿ ಕಲಾಜಗತ್ತು ತನ್ನ ಅತ್ಯುನ್ನತ ಕಲಾಪ್ರತಿಭೆಯನ್ನ ಬೆಳಗಿದ್ದು ಇಂಥ ಸೌಹಾರ್ದ ನೆಲೆಗಳಲ್ಲಿಯೇ. ಅದು ರವೀಂದ್ರನಾಥ ಠಾಗೋರ್ ಅವರಿಂದ ಹಿಡಿದು ಕುವೆಂಪುವರೆಗೂ ನೋಡಬಹುದು.

ಇದನ್ನು ಓದಿದ್ದೀರಾ? ಸಂಘರ್ಷದ ಅಂತರಾಳದಲ್ಲಿ ಎಲ್ಲರನ್ನೂ ಅಪ್ಪುವ ಪ್ರಕ್ರಿಯೆಯಿದೆ

ಇನ್ನು ಹಿಂದೂಸ್ತಾನಿ ಸಂಗೀತದಲ್ಲಿ ಮುಸ್ಲಿಂ ಗುರುಗಳಿಂದ ಅಭ್ಯಾಸ ಮಾಡಿದ ಬಹಳಷ್ಟು ಹಿಂದೂ ಶಿಷ್ಯರ ಬಹುದೊಡ್ಡ ಪಡೆಯೇ ಭಾರತದ ಉದ್ದಗಲಕ್ಕೂ ಇದೆ. ಬಿಸ್ಮಿಲ್ಲಖಾನರು ಕಾಶಿಯನ್ನು, ವಿಶ್ವನಾಥನನ್ನು ಬಿಟ್ಟು ಹೋಗಲಿಲ್ಲ ಎಂಬುದು ಬಹುದೊಡ್ಡ ಸಹಬಾಳ್ವೆಯ ಸಂಕೇತ. ರೆಹಮಾನ್ ತರಹದ ಸಿನಿಮಾ ಸಂಗೀತ ಪರಂಪರೆಯವರು ಒಂದಲ್ಲ ಒಂದು ರೀತಿ ಸೂಫಿ ಪರಂಪರೆಯನ್ನೆ ತಮ್ಮ ಸಂಗೀತದ ಮೂಲಕ ಹೇಳಿದ್ದು. ಅವರ ವಂದೇಮಾತರಂನ ಮಾ ತುಜೆ ಸಲಾಂ, ಅಮ್ಮ ತುಜೆ ಸಲಾಂ ಇದನ್ನೆ ಹೇಳಿದ್ದು. ಅವರ ಒಂದು ಮಗಳು ಹಿಜಾಬ್ ಹಾಕಿದರೆ ಮತ್ತೊಂದು ಮಗಳು ಹಿಜಾಬ್ ಯಾವುದೂ ಇಲ್ಲದೆ ಜೀನ್ಸ್ ಟೀಶರ್ಟಿನ ಆಧುನಿಕ ಹುಡುಗಿಯಂತೆ ಇದ್ದಾಳೆ. ಸಿನಿಮಾ ನಟರಲ್ಲಿ ಹಿಂದೂ ಮುಸ್ಲಿಂ ಮದುವೆಗಳಿಗೆ ವಿಶೇಷವಾಗಿ ಬಾಲಿವುಡ್‌ನಲ್ಲಿ ಲೆಕ್ಕಕ್ಕೆ ಸಿಗದಷ್ಟು ವಿಸ್ತರಿಸಿದೆ. ಹೊರದೇಶದಿಂದ ಬಂದ ಮದರ್ ತೆರೇಸಾ ಭಾರತರತ್ನಕ್ಕೆ  ಭಾಜನರಾದದ್ದು ಯಾವುದೇ ಜಾತಿ ಧರ್ಮಭೇದವಿಲ್ಲದೆ ಬಡವರನ್ನು, ಕುಷ್ಟರೋಗಿಗಳನ್ನು ಅಪ್ಪಿ ಸಂತೈಸಿದ್ದರಿಂದ.

ಹಾಗಾಗಿ ಸಹಬಾಳ್ವೆ ಮತ್ತು ಸೌಹಾರ್ದ ಪರಂಪರೆ ಮುಖ್ಯವಾಗಿ ಮಾನವೀಯ ನೆಲೆಯಲ್ಲಿ ನಿಂತಿರುವ ಒಂದು ಜೀವನಪದ್ದತಿ. ಗಾಂಧೀಜಿ ಇದನ್ನು ನೈತಿಕ ನೆಲೆಯಲ್ಲಿ ಸಾಧಿಸಲು ಪ್ರಯತ್ನಿಸಿದರೆ, ಅಂಬೇಡ್ಕರ್ ಸಾಮಾಜಿಕ ನೆಲೆಯಲ್ಲಿ, ಲೋಹಿಯಾ ರಾಜಕೀಯ ನೆಲೆಯಲ್ಲಿ ವಿಸ್ತರಿಸಲು ನೋಡಿದರು. ಲಂಡನ್ ನಲ್ಲಿ ಸಾವರ್ಕರ್ ಜೊತೆಗಿನ ಗಾಂಧಿ ಸಂವಾದ ನೈತಿಕತೆಯ ತಳಹದಿಯ ಮೇಲೆ ರೂಪುಗೊಂಡಿದ್ದು. ಹಿಂದೂ ರಾಷ್ಟ್ರೀಯವಾದಿಗಳ ಹಿಂಸೆಯ ಧೋರಣೆಗಳ ಬಗ್ಗೆ ಗಾಂಧೀಜಿಗೆ ಒಪ್ಪಿಗೆ ಇರಲಿಲ್ಲ. ಗಾಂಧೀಜಿ ಬಲಪಂಥೀಯರನ್ನು ಪಳಗಿಸಲು ಸತತ ಸಂವಾದದಲ್ಲಿದ್ದರು. ಈ ಧೋರಣೆಯೇ ಗಾಂಧಿಯನ್ನು ಕೊಲ್ಲುವ ಮಟ್ಟಕ್ಕೆ ಹೋಗಿದ್ದು ಮತ್ತೊಂದು ವಿಪರ್ಯಾಸ.

ಇನ್ನು ಒಂದಕ್ಕೊಂದರ ಇಂತಹ ಸಂಬಂಧದ ಜಾಲ ಬ್ರಹ್ಮಾಂಡದ ಚರಾಚರಗಳಲ್ಲೂ ಸಹಜವಾಗಿದೆ. ಸೂರ್ಯನ ಸುತ್ತ ಸುತ್ತುವ ಅಷ್ಟು ಗ್ರಹಗಳು ಗುರುತ್ವಾಕರ್ಷಣೆಯ ತತ್ವದೊಡನೆ ಸುತ್ತುತ್ತಿದ್ದರೆ ಭೂಮಿಯ ಗಾಳಿ, ಬೆಳಕು ಯಾವ ಜಾತಿಯವನು, ಯಾವ ಧರ್ಮದವನು ಎಂದು ನೋಡದೆ ಸಮಾನವಾಗಿ ಗಾಳಿ ಬೆಳಕನ್ನು ಹಂಚುತ್ತಿದೆ. ಈಗ ನಾವು ಪ್ರಕೃತಿಯ ಅವಘಡಗಳನ್ನು ತಪ್ಪಿಸಲು, ಭೂಮಿ ತಾಪವನ್ನು ತಪ್ಪಿಸಲು, ಪ್ಲಾಸ್ಟಿಕ್ ಕಲುಷಿತದಿಂದ ದೂರವಾಗಲು ನೈಸರ್ಗಿಕ ತತ್ವಗಳಿಗೆ ಹೆಚ್ಚು ವಾಲಬೇಕಿದೆ. ಒಂದಕ್ಕೊಂದರ ಸಾವಯವ ಸಂಬಂಧದಲ್ಲಿ ಮಾತ್ರ ಅವು ಉಳಿಯುತ್ತದೆ. ಹಾಗೆಯೇ ಮಾನವ ಕುಲ ಒಬ್ಬರಿಗೊಬ್ಬರು ತೋರಬಹುದಾದ ಮೈತ್ರಿ, ಕರುಣೆಗಳೆ ನಮ್ಮನ್ನು ಪ್ರಕೃತಿಯ ವಿಶಿಷ್ಟ ಜೀವಕುಲವಾಗಿ ಉಳಿಸಲು ಪ್ರೇರಿಪಿಸುವಂತಹ ಚಲನೆಯನ್ನು ನೀಡುತ್ತದೆ. ಇಲ್ಲದಿದ್ದರೆ ಪ್ರಕೃತಿಯೆ ನಮ್ಮನ್ನು ಹೊಸಕಿ ಹಾಕುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್