ದಾನ ಮಾಡಿದ್ರೆ ವಂಶ ಬೆಳಿತಾವೇಂತ ಸಾಬ್ರೆಲ್ಲ ರಥಯಾತ್ರೆಗೆ ದೇಣಿಗೆ ನೀಡಿದ್ರು!

sahabalwe

ಬಾಬಯ್ಯನ ಹಬ್ಬವೆಂದರೆ ಅದೇನು ಸಂಭ್ರಮವೋ !ಈಗಲೂ ಬಾಲ್ಯ ನೆನಪಾಗುತ್ತದೆ. ಅದು ಮುಸಲ್ಮಾನರ ಹಬ್ಬ ಅನ್ನಿಸಲೇ ಇಲ್ಲ. ಕೊಂಡಕ್ಕೆ ಎಲ್ಲಾ ಜಾತಿಯವರು ಬಂದು ಸೌದೆ ಹಾಕಿ ಹರಕೆ ತೀರಿಸಿ ಸಕ್ಕರೆ ಓದಿಸೋರು. ಕೊನೆದಿನ ಬಣ್ಣ ಬಣ್ಣದ ವೇಷದಲ್ಲಿ ಮನೆಗೆ ಬರುವ ಬಾಬಯ್ಯಾ, ಬಣ್ಣದ ಕೋಲಿನಲ್ಲಿ ತಲೆ ಮೇಲೊಂದು ಮೊಟಕಿ ಭಯ ಬಿಡಿಸಿ ಹೋಗೋರು.

ನನ್ನ ಬಾಲ್ಯ ಪುಟ್ಟ ಊರಿನಲ್ಲಿ ಪ್ರಾರಂಭವಾಯ್ತು. ನಮ್ಮ ಮನೆಯ ಎಡಭಾಗಕ್ಕೆ ಎರಡು ಓಣಿ ದಾಟಿದರೆ ಜೈನ ಬಸದಿ, ಬಲಕ್ಕೆ ಮಸೀದಿ, ಎದುರಿಗೆ ದೇಶಾವರ ಪೇಟೆಗಣೇಶನ ಗುಡಿ, ಎರಡೆಜ್ಜೆ ಮುಂದೆ ನಡೆದರೆ ಮಲ್ಲೇಶ್ವರನ ಗುಡಿ, ಇನ್ನು ಬಸ್ ನಿಲ್ದಾಣದ ಬಿ ಹೆಚ್ ರಸ್ತೆ ಗೆ ಬಂದ್ರೆ ಪುಟ್ಟ ಚರ್ಚ್, ಅಲ್ಲಿಂದ ಹತ್ ಮಾರು ನಡೆದರೆ ಬಿದ್ಜಹನುಮಂತನ ಗುಡಿ, ಕೊಲ್ಲಾಪುರದಮ್ಮನ ಗುಡಿ... ಹೀಗೆ ಎಲ್ಲವೂ ಅನ್ಯೋನ್ಯವಾಗಿ ಕಲೆತು ಬಾಳುವೆ ನಡೆಸಿದ್ದವು. ಇಷ್ಟು ಹೇಳಿದ್ದು ಯಾಕೆಂದರೆ ನಮ್ಮ ಮನೆಯ ಆಜುಬಾಜು ಮತ್ತು ವಠಾರದ ತುಂಬ ಎಲ್ಲಾ ಮಂದಿ ಕೂಡಿಬಾಳಿದ ಬಾಲ್ಯ ನನ್ನದು.

ನನ್ನ ಓದು ಕೂಡ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ. ಊರಿಗೆ ಇದ್ದ ಒಂದೆ ಶಾಲೆಗೆ ಊರಿನ ದೊಡ್ಡ ಅಧಿಕಾರಿ, ಶಾಸಕ, ಸಚಿವ, ಶ್ರಮಿಕ, ಸುತ್ತಳ್ಳಿಯ ಮಕ್ಕಳು ಯಾವುದೇ ಬೇಧವಿಲ್ಲದೆ ಅಸಮಾನತೆ ಇಲ್ಲದೆ ಬೆರೆತು ಓದಿದವರು. ನನಗೆ ದಕ್ಕಿದ ಶಾಲೆಯಲ್ಲೂ ಎಲ್ಲಾ ಧರ್ಮದ ಶಿಕ್ಷಕರಿದ್ದರು. ನಮ್ಮ ಮುಖ್ಯ ಶಿಕ್ಷಕಿ ಮಮ್ತಾಜ್ ಮೇಡಂ, ನನ್ನ ಮೆಚ್ಚಿನ ಟೀಚರ್ ವೆರೋನಿಕಾ ಕ್ರಿಶ್ಚಿಯನ್, ಇನ್ನು ನನ್ನ ಅಮ್ಮನಿಗೆ ಶಿಕ್ಷಕಿಯಾಗಿದ್ದ ಜಯಲಕ್ಷ್ಮಿ ಟೀಚರ್ ಕನ್ನಡ, ಸಮಾಜ ಪಾಠ ಮಾಡುವಾಗ ಬದುಕಿನ ರೀತಿ ನೀತಿ ಹೇಳಿಕೊಟ್ಟದ್ದು ಮರೆಯಲಾಗದು.

ಮೇಷ್ಟ್ರಮ್ಮ  ನಮ್ಮಜ್ಜಿ

ಇಷ್ಟೆಲ್ಲಾ ಹೇಳಿದ ಮೇಲೆ ಅಜ್ಜನ ಮನೆಯ ಕೂಲಿಮಠದ ಪರಿಚಯ ಮಾಡಲೇಬೇಕು. ಅಜ್ಜ ಸರ್ಕಾರಿ ಶಾಲಾ ಶಿಕ್ಷಕರು. ಜಾತಿ ಧರ್ಮಗಳೆಲ್ಲವನ್ನೂ ದಾಟಿ ಹಳ್ಳಿಯ ಬಡಮಕ್ಕಳಿಗೆ ತಮ್ಮ ಮನೆಯಲ್ಲಿ ಆರು ಮಕ್ಕಳೊಟ್ಟಿಗೆ ಆಶ್ರಯ ಕೊಟ್ಟು ಉಚಿತ ಪಾಠ ಹೇಳಿಕೊಟ್ಟಿದ್ರು. ನನ್ನ ಬದುಕಿಗೆ ಆದರ್ಶ ಸಹಬಾಳ್ವೆಯ ಅಡಿಪಾಯ ಹಾಕಿದ ಮೇರು ವ್ಯಕ್ತಿತ್ವ. ಅಜ್ಜನಿಗೆ ಸಾಥ್ ನೀಡಿದ ನನ್ನ ಅಜ್ಜಿ ಅದೆಷ್ಟು ಮಕ್ಕಳಿಗೆ ತಾಯಿಯಾದಳೋ! ಕಡೆಯವರೆಗೂ "ಮೇಷ್ಟ್ರಮ್ಮ" ಅಂತನೇ ಹೆಸರಾದರು.

ಜೈನ ಬಸದಿಯೊಳಗೆ ನನಗೊಬ್ಬ ಸ್ನೇಹಿತೆಯ ಮನೆ ಇತ್ತು. ಆಕೆ ಹೆಸರು ಪರಿಮಳ ಅವಳ ಅಪ್ಪ ಬಸದಿಯ ಜಿನನಾಥನ ಅರ್ಚಕರು ಬಸದಿಯ ತುಂಬೆಲ್ಲಾ ಪಾರಿಜಾತದ ಹೂವಿನ ಘಮಲಲ್ಲಿ ಆಡಿ ನಲಿದು, ಪುಟ್ಟ ಲಂಗದ ತುಂಬಾ ಬಿದ್ದ ಪಾರಿಜಾತದ ಹೂಗಳನ್ನೆಲ್ಲಾ ತುಂಬಿ ನಿರ್ಲಿಪ್ತವಾಗಿ ನಿಂತ ಮಹಾವೀರನ ಪಾದಗಳಿಗೆ ಸುರಿದು ಸಮಾಧಾನ ಪಡುತಿದ್ದೆವು. ಅಲ್ಲಿನ ಗುರುಗಳಾಗಲಿ, ಅರ್ಚಕರಾಗಲಿ ಒಂದು ದಿನವೂ ಗದರಿದ ನೆನಪಿಲ್ಲ.

ಇನ್ನು ನಮ್ಮ ಮನೆಯ ಪಕ್ಕದಲ್ಲೆ ಅಲೈದೇವರ ಕೊಂಡ ಇದ್ದದ್ದು ಬಾಬಯ್ಯನ ಹಬ್ಬವೆಂದರೆ ಅದೇನು ಸಂಭ್ರಮವೋ ಈಗಲೂ ಬಾಲ್ಯ ನೆನಪಾಗುತ್ತದೆ. ಅದು ಮುಸಲ್ಮಾನರ ಹಬ್ಬ ಅನ್ನಿಸಲೇ ಇಲ್ಲ. ಕೊಂಡಕ್ಕೆ ಎಲ್ಲಾ ಜಾತಿಯವರು ಬಂದು ಸೌದೆ ಹಾಕಿ ಹರಕೆ ತೀರಿಸಿ ಸಕ್ಕರೆ ಓದಿಸೋರು. ಕೊನೆದಿನ ಬಣ್ಣ ಬಣ್ಣದ ವೇಷದಲ್ಲಿ ಮನೆಗೆ ಬರುವ ಬಾಬಯ್ಯಾ, ಬಣ್ಣದ ಕೋಲಿನಲ್ಲಿ ತಲೆ ಮೇಲೊಂದು ಮೊಟಕಿ ಭಯ ಬಿಡಿಸಿ ಹೋಗೋರು.

ನಮ್ಮನೆಲಿ ಟೆಲಿವಿಷನ್ ಅಪ್ಪ ತಂದಿರಲಿಲ್ಲಾ. ಮಕ್ಕಳು ಓದಲ್ಲಾಂತ ಪಕ್ಕದ ಮನೆ ಟಿವಿ ಸಾಬ್ರಂತನೆ ಹೆಸರಾಗಿದ್ದ ಸಾಬರ ಮನೆಗೆ ಇಡೀ ಓಣಿನೇ ಶನಿವಾರ, ಗುರುವಾರ ಟಿವಿ ನೋಡೋಕೆ ಹೋಗೋರು. ಅಪ್ಪ ಇಲ್ಲ ಅಂದಾಗ ನಾನು ಅಲ್ಲೇ ಇಣುಕಿ ಬರ್ತಿದ್ದೆ.

ದುಂಡು ಮಲ್ಲಿಗೆ ಕಾಲದಲ್ಲಿ ಎದುರು ಮನೆ ಬೂವಮ್ಮ ಎಲ್ರಿಗೂ ಚಂದದ ದುಂಡು ಮೊಗ್ಗಿನ ಜಡೆ ಹಾಕೋರು. ನನಗೂ ಅಮ್ಮ ಬೂವಮ್ಮನವರ ಬಳಿನೇ ಮೊಗ್ಗಿನ ಜಡೆ ಹಾಕಿಸಿ ಮೊದಲು ಪಟ ತೆಗೆಸಿದ್ರು. ಪಕ್ಕದ ಮನೆ ಸುಶೀಲಾ ಕಾಕಿ ಎದುರು ಮನೆ ನಜ್ಜೂ ಅವರ ತಾಯಿನ ಅದೆಷ್ಟು ಪ್ರೀತಿಯಿಂದ ಬೂಬೂ ಅಂತ ಕರೆಯೋರಂದ್ರೆ ಅವರ ಹೆಸರೆ ಮರ್ತೋಗವೆ.

ಬೂವಮ್ಮನ ಮನೆಯ ಚಂಗೇವ್ ಕರ್ಜಿಕಾಯಿ

ಇನ್ನು ರಂಜಾನ್ ಹಬ್ಬದಲ್ಲಿ ಇಡಿ ಓಣಿನೆ ಬಿರಿಯಾನಿಯ ಘಮಲಿಂದ ತುಂಬೋಗದು. ಎಲ್ರು ಮನೆಗೂ ಡಬ್ಬಿ ಬಿರಿಯಾನಿ, ಸಿಹಿಯಾದ ಶಾವಿಗೆ ಮುಸಫರ್ ಎಲ್ಲಾ ರವಾನೆಯಾಗವು. ಇನ್ನು ಹಿಂದೂಗಳ ಹಬ್ಬ ಜಾತ್ರೆಗಳಲ್ಲಿ ಹೋಳಿಗೆ ಪಾಯಸ, ಸಾಬರ ಮನೆಗಳಲ್ಲಿ ಘಮಗುಡವು. ನನಗೆ ಈಗಲೂ ಬೂವಮ್ಮನ ಮನೆಯ ಚಂಗೇವ್ ಕರ್ಜಿಕಾಯಿ ಬಾಯಲ್ಲಿ ನೀರೂರಿಸ್ತವೆ.

Image
karjikai

ಊರ ಗ್ರಾಮದೇವತೆ ಜಾತ್ರೆ ತುಂಬೆಲ್ಲಾ ಚಮಕ್ ಚಮಕ್ ಬಾಬಣ್ಣನ ಸರಬಳೆ ಅಂಗಡಿ ವ್ಯಾಪಾರ ಮಾಡ್ದೆ ಇರೋ ಮಂದಿನೆ ಇಲ್ಲಾ. ಇನ್ನು ಒಂದು ಮುಖ್ಯ ವಿಷಯ ಹೆಳಲೇ ಬೇಕಾದ್ದು, ದೆಹಲಿಯಲ್ಲಿ ಎಲ್ಲೊ ರಾಮಮಂದಿರ ಕಟ್ಟೋಕೆ ರಥಯಾತ್ರೆ ಬರುತ್ತೆ ಅಂತಾ ಊರಿಗೂರೆ ತಳಿರು ತೋರಣಗಳಿಂದ ರಂಗೋಲಿ ಎಳೆಗಳಿಂದ ಸಿಂಗಾರವಾಗಿತ್ತು. ನಮ್ ಓಣಿ ಸಾಬಾರು ಅದೆಂತಾ ಮುಗ್ದ ಹೃದಯಗಳೂಂತ ಈಗ ನೆನಪಾಗ್ತರೆ.  ಗುಡಿ ಆದ್ರೆನು, ಮಸೀದಿ ಆದ್ರೇನು ದಾನಮಾಡಿದ್ರೆ ವಂಶ ಬೆಳಿತಾವೇಂತ ರಥಯಾತ್ರೆಗೆ ಹಣನೀಡಿದ್ರು ಇದು ನಿಜಕ್ಕೂ ನಿಷ್ಕಲ್ಮಶ ಸಹಬಾಳುವೆ.

ಊರಾಗಿದ್ದ ಒಂದೆ ಚರ್ಚ್‌ಗೆ ಭಾನುವಾರ ಗೆಳತಿ ಮೇರಿಯ್ಮನ ಜೋಡಿ ಫಾದರ್ ಬಳಿ ತಪ್ಪು ಒಪ್ಪಿಸಿ ನಿರಾಳ ಆಗಿ ಬರ್ತಿದ್ವಿ. ಹೊಸವರ್ಷದ ಸಂಭ್ರಮ ಪ್ರತಿ ಬಾಲ್ಯ ಚರ್ಚ್‌ನಲ್ಲಿ ಕಳೆದವು.

ನಾನು ಬಿಎ ಪದವಿ ಓದುವಾಗ ಮುಬೀನಾ ಅಕ್ಕನ ಗಂಡ ತೀರಿಹೊದ್ರು. ಒಬ್ಬ ಪುಟ್ಟ ಮಗು ಇಮ್ರಾನ್ ಜೊತೆ ನಮ್ಮ ಮನೆಯ ವಠಾರದಲ್ಲಿ ವಾಸವಾಗಿದ್ರು. ಪಕ್ಕದ ಪಣಗಾರ ಓಣಿಯ ಮಲ್ಲಿಕಣ್ಣನಿಗೆ ಆಕೆಯ ಮೇಲೆ ಪ್ರೇಮ ಅಂಕುರಿಸಿ ಕೊನೆಗೆ ಆಕೆಯನ್ನು ಒಪ್ಪಿಸಿ, ಒಂದಷ್ಟು ಸ್ನೇಹಿತರು ರಿಜಿಸ್ಟರ್ ಮದುವೆ ಮಾಡಿಸಿ ಬೆಂಗಳೂರು ಕಳಿಸಿದ್ರು. ಸುಮಾರು ವರ್ಷಗಳ ನಂತರ ಈಗ ಊರಿನ ಮನೆಗೆ ಒಡನಾಟ ಹೊಂದಿದ್ದಾರೆ. ಇದಲ್ಲವೆ ಸಹಬಾಳುವೆ ಇಂಥಾ ಅದೆಷ್ಟೋ ಸಹಬಾಳುವೆಯ ಚಿತ್ರಣಗಳು  ಹಾದು ಹೋಗುತ್ತವೆ.

ಇದನ್ನು ಓದಿದ್ದೀರಾ? ಊರಲ್ಲಿ ಕುಂಞಣ್ಣ ಬ್ಯಾರಿನ ಕೇಳಿ ಮದುವೆ ತಯಾರಿ ನಡಿತಿತ್ತು!

ಊರಿನ ಮಾವಿನ ಮರ ವ್ಯಾಪಾರವಂತು ಅಜ್ಜನ ಕಾಲದಿಂದಲೂ ಈಗಿನವರೆಗೂ ಮಾವಿನ ಕಾಯಿ ಸಾಬರೆ ವ್ಯಾಪಾರ ಮಾಡೋದು. ಬೆಳೆ ಬರಲಿ ಬಿಡಲಿ ಮುಂಗಡ ಕೊಟ್ಟ ಹಣ ಇದುವರೆಗೂ ವಾಪಸ್ ಪಡೆದಿಲ್ಲ.ಇನ್ನು ನನ್ನ ಜೀವದ ಗೆಳತಿ ಅಬಿದಾಳ ಬಗ್ಗೆ ಹೇಳದೆ ಈ ಬರಹ ಮುಗಿಸಿದರೆ ಅರ್ಥವೇ ಇಲ್ಲ. ನನ್ನ ಬಾಲ್ಯದ ಬೆನ್ನಿಗೆ ಬಿದ್ದವಳು ಕಷ್ಟ ಸುಖ ಹಂಚಿಕೊಳ್ಳೊಕೆ ಇರೋ ಏಕೈಕ ಜೀವ ನನ್ನ ಮನೆ ಮಾರೋ ಕಷ್ಟದಲ್ಲಿ ಭಾಗಿಯಾದ ಗಂಡ-ಹೆಂಡತಿ ಮತ್ತೆ ಒಂದು ಸೈಟ್ ಹುಡುಕಿ ಕೊಡಿಸಿ ಮನೆ ಕಟ್ಟಿಸಿಕೊಂಡು ಹೋಗುವವರೆಗು ಕೈಬಿಡದೆ ಕೈಹಿಡಿದ ಜೀವಗಳು.     

ಒಟ್ಟಾರೆ ಬಸದಿಯಂಗಳ, ಗುಡಿಯ ಘಂಟೆನಾದ, ಮಸೀದಿಯ ಇಂಪಾದ ಆಜಾನ್, ಚರ್ಚಿನ ಬೆಲ್, ಜಾತ್ರೆಯ ತಮಟೆಯ ಶಬ್ದ ಇವೆಲ್ಲವೂ ಕಿವಿಯನ್ನಷ್ಟೇ ತುಂಬಲಿಲ್ಲಾ, ಬದುಕನ್ನೆ ತುಂಬಿ ತಬ್ಬಿಕೊಂಡವು.

ನಿಮಗೆ ಏನು ಅನ್ನಿಸ್ತು?
1 ವೋಟ್