ಘನಿಸಾಬರನ್ನು ಕಂಡು ಮಾತಾಡಿಸಿದರೆ‌, ಅಪ್ಪನನ್ನು ಕಂಡಷ್ಟೇ ಸಮಾಧಾನ- ಸುನಂದಾ ಕಡಮೆ

ghanisab

ಆಗೆಲ್ಲ ಕದ್ದು ಮುಚ್ಚಿ ನಮಗೆ ಮೀನು ಮಾಂಸಗಳನ್ನು ಪೂರೈಸುತ್ತಿದ್ದದ್ದು ಈ ಘನಿಸಾಬರೇ. 'ಹಿಡೀರಿ ಉಳ್ಳಾಗಡ್ಡಿ ಬಟಾಟಿ ಬೇಕಂದ್ರಲ್ಲ?' ಅನ್ನುತ್ತ ಅಂಗಡಿ ಗಿರಾಕಿಗಳು ಇರುವಾಗಲೇ ಮೀನಿನ ಪೊಟ್ಟಣವನ್ನೋ ಚಿಕನ್ ಮಟನ್ ಪೊಟ್ಟಣವನ್ನೋ ಗಲ್ಲೆಯ ಟೇಬಲ್ಲಿನ ಕೆಳಗೆ ತೂರಿಸಿಟ್ಟು ದುಡ್ಡಿಗೂ ನಿಲ್ಲದೇ ಹೋಗಿಬಿಡುತ್ತಿದ್ದರು ಘನಿಸಾಬರು. ಆನಂತರ ಯಾವಾಗಲೋ ನಮ್ಮ ತಂದೆ ದುಡ್ಡು ಕೊಡುತ್ತಿದ್ದರು.

ನಮ್ಮ ತಂದೆ 1954 ರಿಂದ ಮೂವತ್ತು ವರ್ಷಗಳ ಕಾಲ ಹುಬ್ಬಳ್ಳಿ ತಾಲೂಕಿನ ಕುಮಾರವ್ಯಾಸನ ಕೋಳಿವಾಡ ಎಂಬ ಪುಟ್ಟ ಗ್ರಾಮದಲ್ಲಿ ಚಹದಂಗಡಿ ಇಟ್ಟುಕೊಂಡಿದ್ದರು. ತಂದೆಯವರ ಮೂಲ ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಒಂದು ಪುಟ್ಟ ಹಳ್ಳಿ ಅಲಗೇರಿ, ಅಲ್ಲಿ ಒಂದಿಷ್ಟು ಹೊಲ, ಹುಲ್ಲು ಹೊದಿಕೆಯ ಮನೆಯಿದ್ದರೂ, ಆ ವರ್ಷ ಬರಗಾಲ ಬಿದ್ದು ಹೊಲ ಬಿತ್ತಿದ್ದು ನಷ್ಟವಾಗಿ ಕೈಯಲ್ಲಿ ಒಂದು ಚಿಕ್ಕಾಸೂ ಇಲ್ಲದೇ ಕಂಗಾಲಾಗಿದ್ದ ಸಮಯ, ಇದ್ದಕ್ಕಿದ್ದಂತೆ ಊರು ಬಿಟ್ಟರು. ಕೋಳಿವಾಡದಲ್ಲಿ ಚಿನ್ನದ ಕೆಲಸ ಮಾಡಿ ಹೊಟ್ಟೆಹೊರೆದುಕೊಳ್ಳುತ್ತಿದ್ದ ಸ್ನೇಹಿತನೊಬ್ಬನ ಜೊತೆ ಘಟ್ಟ ಹತ್ತಿ ಬಂದರು. ಆ ವರ್ಷವೇ ಹುಟ್ಟಿದ ನಮ್ಮ ದೊಡ್ಡಣ್ಣನನ್ನು ಹಾಗೂ ಅಮ್ಮನನ್ನೂ ಆ ನಂತರ ಕರೆಸಿಕೊಂಡರು, ಸಂಸಾರ ಸಾಗಿಸಲು ಚುರಮರಿ ವಗ್ಗರಣೆ ಶೇಂಗಾ ಉಂಡಿ ಬೆಲ್ಲದ ಬರ್ಫಿಗಳ ಮಾಡಿಕೊಂಡು ಬೀದಿ ಬೀದಿ ಸುತ್ತಿ ಮನೆಮನೆಗೆ ಹೋಗಿ ಮಾರಿಕೊಂಡು ಜೀವನ ಆರಂಭಿಸಿದರು, ಆಗ ಜೊತೆಯಾದವನೇ ಅಲ್ಲಿಯ ಆಗಿನ್ನೂ ಐದಾರು ವರ್ಷದ ಬಡ ಹುಡುಗ ಘನಿಸಾಬ್.

ಊರೆಲ್ಲ ಓಡಾಡಿ ತಿಂಡಿಗಳ ಮಾರುವಾಗ ನಮ್ಮ ತಂದೆಯವರ ಹಿಂದೆ ತಕ್ಕಡಿ ಹಾಗೂ ತೂಕದ ಕಲ್ಲುಗಳನ್ನು ಹಿಡಿದುಕೊಂಡು ಹೋಗುವವ ಘನಿಸಾಬನೇ. ನಮ್ಮ ತಂದೆ ಆನಂತರ ಅಲ್ಲಿಯ ಮಠದ ಸ್ವಾಮಿಯೊಬ್ಬರ ಜಾಗೆಯಲ್ಲಿ ಮಣ್ಣಿನ ಮೆತ್ತೆಯ ಅಂಗಡಿಯಲ್ಲಿ ಒಂದು ಬದಿ ಚಹದಂಗಡಿ ಇನ್ನೊಂದು ಬದಿ ಕಿರಾಣಿ ಅಂಗಡಿ ಮಾಡಿಕೊಂಡು, ಆನಂತರ ಹುಟ್ಟಿದ ಸಾಲು ಸಾಲು ಮಕ್ಕಳನ್ನು ಅಲ್ಲಿಯೇ ಬೆಳೆಸಿದರು. ಅಷ್ಟರಲ್ಲಿ ಘನಿಸಾಬ್ ನಮ್ಮ  ಹೊಟೇಲಿನ ಎದುರೇ ಇರುವ ಬಸ್ ನಿಲ್ದಾಣದ ಆಚೆ ಒಂದು ಸಣ್ಣ ಮಟನ್ ಶಾಪ್ ತೆಗೆದಿದ್ದರು, ಹುಬ್ಬಳ್ಳಿಗೆ ಹೋಗಿ ಮೀನುಗಳನ್ನೂ ತಂದು ಐಸಿನ ಡಬ್ಬದಲ್ಲಿಟ್ಟು ಮಾರುತ್ತಿದ್ದರು. ಆಗೆಲ್ಲ ನಮಗೆ ಕರಾವಳಿಯಲ್ಲಿದ್ದಾಗ ತಿಂದ ಮೀನು, ಚಿಕನ್, ಮಟನ್ ಗಳ ಬಾಯಿರುಚಿ. ಅಲ್ಲಿಯೋ ಊರ ತುಂಬ ಹೆಚ್ಚು ಜನ ಬ್ರಾಹ್ಮಣ ಲಿಂಗಾಯತರು. ಎಲ್ಲಿ ನಾವು ಮಾಂಸಾಹಾರಿಗಳೆಂದು ಹೇಳಿಕೊಂಡರೆ ನಮ್ಮ ಚಹದಂಗಡಿಗೆ ಬರುವ ಗಿರಾಕಿಗಳು ಕಡಿಮೆಯಾಗುತ್ತಾರೋ ಅಂತ ನಮ್ಮ ತಂದೆ, ನಾವು ಘಟ್ಟದ ಕೆಳಗಿನ ಕರಾವಳಿಯ ಹೆಗ್ಗಡೇರು ಅಂತ ಹೇಳಿಕೊಂಡಿದ್ದರು. ಅಂಗಡಿಯ ಬೋರ್ಡು ಕೂಡ 'ಹೆಗಡೆ ಟೀ ಕಾಫಿ ಕ್ಲಬ್' ಅಂತ ಇದ್ದ ನೆನಪು.

ಆಗೆಲ್ಲ ಕದ್ದು ಮುಚ್ಚಿ ನಮಗೆ ಮೀನು ಮಾಂಸಗಳನ್ನು ಪೂರೈಸುತ್ತಿದ್ದದ್ದು ಈ ಘನೀಸಾಬರೇ. 'ಹಿಡೀರಿ ಉಳ್ಳಾಗಡ್ಡಿ ಬಟಾಟಿ ಬೇಕಂದ್ರಲ್ಲ?' ಅನ್ನುತ್ತ ಅಂಗಡಿ ಗಿರಾಕಿಗಳು ಇರುವಾಗಲೇ ಮೀನಿನ ಪೊಟ್ಟಣವನ್ನೋ ಚಿಕನ್ ಮಟನ್ ಪೊಟ್ಟಣವನ್ನೋ ಗಲ್ಲೆಯ ಟೇಬಲ್ಲಿನ ಕೆಳಗೆ ತೂರಿಸಿಟ್ಟು ದುಡ್ಡಿಗೂ ನಿಲ್ಲದೇ ಹೋಗಿಬಿಡುತ್ತಿದ್ದರು ಘನೀಸಾಬರು. ಆನಂತರ ಯಾವಾಗಲೋ ನಮ್ಮ ತಂದೆ ದುಡ್ಡು ಕೊಡುತ್ತಿದ್ದರು. ಹಾಗೆ ನಮ್ಮ ಅಂದಿನ ಸಂದಿಗ್ಧದ ಬದುಕಿನ ಅಭಿಲಾಷೆಗೆ ಮಾಂಸಾಹಾರ ಒದಗಿಸಿದ ಅವರಿನ್ನೂ ಕೋಳಿವಾಡದಲ್ಲಿದ್ದಾರೆ. ನಂತರ ನನಗೆ ಆರು ತುಂಬಿದಾಗ ನಾವೆಲ್ಲ ಅನಿವಾರ್ಯ ಕಾರಣಕ್ಕಾಗಿ ನಮ್ಮ ಕರಾವಳಿಯ ಹಳ್ಳಿಗೆ ಶಿಫ್ಟ್ ಆದೆವು, ನನ್ನ ಒಂದರಿಂದ ಹತ್ತನೇ ತರಗತಿಯವರೆಗಿನ ಶಾಲೆಗಳು ಅಲ್ಲಿಯೇ ಮುಗಿದವು, ಆ ಹತ್ತು ವರ್ಷಗಳ ಕಾಲ ನನ್ನ ಬದುಕಿನ ತುಂಬ ಮಹತ್ವದ ಘಟ್ಟವಾದುದರಿಂದ ನಾನು ಉತ್ತರಕನ್ನಡದವಳೆಂದೇ ಹೇಳಿಕೊಳ್ಳಬೇಕಾಯಿತು. ಅದು ಬೇರೆ ಕಥೆ.

AV Eye Hospital ad

ಈಗಲೂ ನಮ್ಮ ಅಣ್ಣಂದಿರಾದಿಯಾಗಿ ನಾವೆಲ್ಲರೂ ಕೋಳಿವಾಡಕ್ಕೆ ಭೇಟಿಕೊಟ್ಟರೆ ಆ ಘನಿಸಾಬರನ್ನು ಭೇಟಿಯಾಗದೇ ಹಿಂತಿರುಗುವುದಿಲ್ಲ. ಈಗ ಘನೀಸಾಬರಿಗೆ ಸುಮಾರು 75 ರ ಹತ್ತಿರ ವಯಸ್ಸಿರಬಹುದು. ಮೊನ್ನೆ ಕೋಳಿವಾಡದ ದ್ಯಾಮವ್ವನ ಗುಡಿಯ ಉತ್ಸವಕ್ಕೆ ಹೋದಾಗ ಭೇಟಿಯಾದರು. ಅದೇ ಪ್ರೀತಿ ಅದೇ ವಿಶ್ವಾಸ, ಹಳೆಯ ನೆನಪುಗಳೆಲ್ಲ ಕಣ್ಣಿಗೆ ಕಟ್ಟಿದವು. ಕೋಳಿವಾಡ ಎಂದೊಡನೆ ನಮಗೆ ನೆನಪಾಗುವುದು ಒಂದು ದ್ಯಾಮವ್ವನ ಗುಡಿ ಮತ್ತು ಇನ್ನೊಬ್ಬರು ಘನಿಸಾಬರು. ನಮ್ಮ ತಂದೆಯವರನ್ನು ಕಳೆದುಕೊಂಡು 33 ವರ್ಷಗಳಾದರೂ ನಮಗೆ ಅವರ ಒಡನಾಡಿಯಾಗಿದ್ದ ಘನಿಸಾಬರನ್ನು ಕಂಡು ಮಾತಾಡಿಸಿ ಬಂದರೆ ತಂದೆಯವರನ್ನೇ ಕಂಡಷ್ಟು ಸಮಾಧಾನವಾಗುತ್ತದೆ. ನಮ್ಮ ತಂದೆಯೊಂದಿಗೆ ಕಷ್ಟಪಟ್ಟು ಒಂದು ನೆಲೆ ಅಂತ ಕಂಡುಕೊಂಡವರು ಅವರು. ನಮ್ಮ ಬೇರುಗಳೆಲ್ಲ ಒಂದೇ ನೆಲದಲ್ಲಿವೆ, ಆ ಬೇರಿನ ಮೇಲೆ ಬೆಳೆದ ಕೊಂಬೆಗಳು ನಾವೆಲ್ಲ ಎಂಬ ಭಾವವೇ ನಮ್ಮನ್ನು ಪರಸ್ಪರ ಸೌಹಾರ್ದತೆಯಿಂದ ಕಾಪಿಟ್ಟಿದೆ.

ಸಾಂಧರ್ಬಿಕ ಚಿತ್ರ
ಸಾಂದರ್ಭಿಕ ಚಿತ್ರ

ಆ ನಂತರ 1983 ರಲ್ಲಿ ಕಾಲೇಜಿಗೆಂದು ಹುಬ್ಬಳ್ಳಿಗೆ ಬಂದಾಗ ನನ್ನ ಬಿ.ಕಾಂ ಪದವಿಯ ಐದು ವರ್ಷ ನನ್ನ ಬೆಂಚಿನ ಇನ್ನೊಬ್ಬಳು ಸದಸ್ಯೆಯೆಂದರೆ ರಜಿಯಾ, ಎತ್ತರದ ಕ್ರಮದಲ್ಲಿ ನಮ್ಮನ್ನು ಮೊದಲಿಗೇ ಅನುಕ್ರಮವಾಗಿ ಕೂಡಿಸುತ್ತಿದ್ದುದರಿಂದ ಆಕಸ್ಮಿಕವಾಗಿ ರಜಿಯಾ ನನ್ನ ಡೆಸ್ಕಿನ ಸಂಗಾತಿಯಾದವಳು. ನಾವೆಲ್ಲ ಚೂಡಿ ಮಿಡಿ ತೊಟ್ಟು ಕಾಲೇಜಿಗೆ ಬರುತ್ತಿದ್ದರೆ ಅವಳು ಅನುದಿನವೂ ಸೀರೆಯುಟ್ಟು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಅಪ್ಪಟ ಭಾರತೀಯ ನಾರಿಯಂತೆ ಕಾಲೇಜಿಗೆ ಬರುತ್ತಿದ್ದಳು. ಹಣೆಗೆ ಬೊಟ್ಟು ಇಲ್ಲದಿದ್ದುದರಿಂದಲೇ ಅವಳನ್ನು ರಜಿಯಾ ಅಂತ ಗುರುತಿಸಬಹುದಿತ್ತು, ನಾನು ಅವಳಿಗೆ ಕನ್ನಡ ಬರುತ್ತದೋ ಇಲ್ಲವೋ ಅಂತ ಕಾಲೇಜಿನ ಮೊದಲ ವರ್ಷದ ಆರಂಭದಲ್ಲಿ ತಿಂಗಳುಗಟ್ಟಲೇ ಅವಳೊಂದಿಗೆ ನಸುನಗುತ್ತಿದ್ದೆನೇ ಹೊರತು ಮಾತನಾಡಿಯೇ ಇರಲಿಲ್ಲ. ನಂತರ ಒಂದು ದಿನ ಅವಳೇ ನನ್ನನ್ನು ಅಚ್ಚ ಕನ್ನಡದಲ್ಲಿ ಮಾತಿಗೆ ಎಳೆದು ಅಚ್ಚರಿಗೊಳಿಸಿದಳು. ಅವಳು ಕಲಿತದ್ದು ನನ್ನನ್ನಂತೆಯೇ ಸರಕಾರಿ ಕನ್ನಡ ಶಾಲೆಯಲ್ಲಿ. ಉರ್ದು ಶಾಲೆಯ ವಿದ್ಯಾರ್ಥಿನಿ ಇರಬಹುದು ಅಂದುಕೊಂಡ ನನ್ನ ಮೌಢ್ಯಕ್ಕೆ ನಾನೇ ಬೈದುಕೊಂಡಿದ್ದೆ, ಆ ನಂತರ ಮೂರು ವರ್ಷಗಳು ನಾವಿಬ್ಬರೂ ಯಾವುದೇ ತಾರತಮ್ಯವಿಲ್ಲದೇ ಜೊತೆಯಲ್ಲೆ ಓಡಾಡಿಕೊಂಡಿದ್ದೆವು. ಅವಳ ಮನೆ ಹಳೇ ಹುಬ್ಬಳ್ಳಿಯ ಜಿಗಳೂರ ಬಿಲ್ಡಿಂಗಿನ ಹತ್ತಿರ ಇತ್ತು. ಒಂದು ದಿನ ಕಾಲೇಜಿನಿಂದ ನೇರ ಹೊಸ ಚಪ್ಪಲಿ ತೆಗೆದುಕೊಳ್ಳಲು ಇಬ್ಬರೂ ಮಾರ್ಕೆಟ್ಟಿಗೆ ಹೋದಾಗ, ಅಲ್ಲಿಂದ ಅವರ ಮನೆಗೆ ಹೋಗಿ ಮಧ್ಯಾಹ್ನ ಅವಳ ಅಮ್ಮಿ ಕೊಟ್ಟ ಚಿಕನ್ ಬಿರಿಯಾನಿ ತಿಂದು ಬಂದಿದ್ದೆ, ನಮ್ಮ ಮನೆಗೂ ಒಂದು ಯುಗಾದಿಗೆ ರಜಿಯಾಳನ್ನು ಆಹ್ವಾನಿಸಿದ್ದೆ, ನಮ್ಮ ಅತ್ತಿಗೆ ಅವಳಿಗೆ ಕಡ್ಲೆ ಬೇಳೆಯ ಪಾಯಸ ಕೊಟ್ಟಿದ್ದರು.

ಒಂದು ಬೇಸಿಗೆಯಲ್ಲಿ ಅವಳಿಗೆ ಇದ್ದಕ್ಕಿದ್ದಂತೆ ನಿಖಾ ಆದ ಸುದ್ದಿಯನ್ನು ಅವಳೇ ತಿಳಿಸಿದಳು. ಹುಡುಗ ಬಾಗಲಕೋಟೆಯಲ್ಲಿ ಪೊಲೀಸ್ ನೌಕರಿಯಲ್ಲಿದ್ದ. ಬಿ.ಕಾಂ ಎರಡನೇ ವರ್ಷದ ಆರಂಭದಲ್ಲಿ ಒಂದೆರಡು ತಿಂಗಳು ಕಾಲೇಜಿಗೆ ಬಂದಿದ್ದಳು. ಆ ನಂತರ ಅವಳು ಕಾಲೇಜಿಗೆ ಬರಲಿಲ್ಲ, ಕ್ಲಾಸಿನಲ್ಲಿ ಅಟೆಂಡೆನ್ಸ್ ತೆಗೆದುಕೊಳ್ಳುವಾಗೆಲ್ಲ ರಜಿಯಾ ಅಂತ ಕರೆದು ಮ್ಯಾಡಂ ನನ್ನನ್ನೇ ದಿಟ್ಟಿಸುತ್ತಿದ್ದರು. ದೂರವಾಣಿ ಸಂಪರ್ಕವಿನ್ನೂ ಮನೆಮನೆಗೆ ಬಂದಿರದೇ ಇದ್ದ ಸಮಯವದು. ಮುಂದಿನ ಹದಿನೈದಿಪ್ಪತ್ತು ದಿನಗಳಲ್ಲಿ ಕಾಲೇಜಿನಿಂದ ಟಿಸಿ ಒಯ್ಯಲು ಬಂದ ದಿನ ರಜಿಯಾ ನೋಟಿಸ್ ಬೋರ್ಡಿನ ಕೆಳಗೆ ಕಾದು ನಿಂತು ನನ್ನನ್ನು ಭೇಟಿ ಮಾಡಿ ತನ್ನ ಬಾಗಲಕೋಟೆಯ ವಿಳಾಸ ಕೊಟ್ಟು ಹೊರಟಳು. ನಂತರ ಅನೇಕ ಪತ್ರಗಳನ್ನು ನಾವಿಬ್ಬರೂ ಬರೆದುಕೊಂಡೆವು.

ಇದನ್ನು ಓದಿದ್ದೀರಾ? : ಸೆಕ್ಯುಲರ್‌ ದೈವಗಳ ನಾಡಿನಲ್ಲಿ ದ್ವೇಷದ ಬಹಿಷ್ಕಾರಗಳಿಗೆ ಕಿಮ್ಮತ್ತಿಲ್ಲ

ಮುಂದೆ ನನ್ನ ಮದುವೆಯಾದ ವರ್ಷ 1988 ರಲ್ಲಿ ನನ್ನ ಗಂಡನಿಗೆ ಹಳಿಯಾಳದಲ್ಲಿ ಸರಕಾರಿ ನೌಕರಿ ಸಿಕ್ಕಿತು. ಬಾಡಿಗೆ ಮನೆಗಾಗಿ ಹುಡುಕುತ್ತಿದ್ದಾಗ ಅನುಬಂಧವೆಂಬಂತೆ ನಮಗೆ ಸಿಕ್ಕಿದ್ದೂ ಇಮಾಮಸಾಬ ಎಂಬವರ ಮನೆಯೇ. ಅದಾಗ ನಾನು ಮೂರ್ನಾಲ್ಕು ತಿಂಗಳ ಚೊಚ್ಚಲ ಗರ್ಭಿಣಿ, ಉಂಡದ್ದೆಲ್ಲ ವಾಂತಿಯಾಗುವ ಸಮಯ. ಮನೆಯ ಮಾಲಿಕರ ಪತ್ನಿಯಾದ ಹಸೀನಾ ಆಂಟಿ ತಾವು ಕೈಯಾರೆ ತಟ್ಟಿದ ಬಿಸಿಬಿಸಿ ರೊಟ್ಟಿ ಮತ್ತು ಮನೆಯಲ್ಲೇ ತೆಗೆದ ಬೆಣ್ಣೆ ಹಾಕಿ ನನಗೆ ತಿನ್ನಲು ತಂದುಕೊಡುತ್ತಿದ್ದರು. ನನ್ನನ್ನು ಆ ಬಾಡಿಗೆ ಮನೆಗೆ ಕಳುಹಿಸಲು ಬಂದ ನಮ್ಮ ತಂದೆಯವರು ಒಂದು ವಾರವಿದ್ದು ನನ್ನನ್ನು ಬಿಟ್ಟು ಹೋಗುವಾಗ ಆ ಹಸೀನಾ ಆಂಟಿಯ ಹತ್ತಿರ ಕೈಮುಗಿದು ನಿಂತು 'ನಿಮ್ಮ ಮಗಳೇ ಅಂತ ಭಾವಿಸಿ' ಅನ್ನುತ್ತ ಕಣ್ಣೀರು ಹಾಕಿ ಹೊರಟುಹೋಗಿದ್ದರು. ಮುಂದಿನ ಐದು ವರ್ಷ ಕಾಲ ಅಲ್ಲಿಯೇ ತಂಗಿದ್ದೆವು. ನಂತರ 1993 ರಲ್ಲಿ ನನ್ನ ಎರಡನೆಯ ಮಗಳು ಹುಟ್ಟುವ ಸಮಯ, ಮತ್ತೆ ನನಗೆ ಬಯಕೆ ಶುರುವಾಗಿ ಊಟ ಸೇರದೇ ನಿತ್ರಾಣಳಾಗಿ ಹಾಸಿಗೆ ಹಿಡಿದಿದ್ದ ಸಂದರ್ಭ. ಹೊರಗೆ ರಸ್ತೆಯಲ್ಲಿ ಅಡ್ವಾಣಿಯವರ ರಥಯಾತ್ರೆಯ ಗದ್ದಲವಿತ್ತು. ಮನೆಯೊಳಗೆ ನಾನು ಪುನಃ ಅದೇ ಹಸೀನಾ ಆಂಟಿ ತಟ್ಟಿ ಮಾಡಿದ ಜೋಳದ ರೊಟ್ಟಿಯನ್ನು ಅವರೇ ನೀಡಿದ ಏಡಿಯ ಸಾರಿನಲ್ಲದ್ದಿ ಸವಿಯುತ್ತಿದ್ದೆ. ನಮ್ಮ ಅಂತರಾಳದ ಸಾಮರಸ್ಯ ಇಂಥದ್ದು. ಆಗೆಲ್ಲ ಇಂಥವುಗಳೇನೂ ನನಗೆ ವಿಶೇಷ ಅನಿಸಿರಲೇ ಇಲ್ಲ, ಎಲ್ಲ ಸರ್ವೇ ಸಾಮಾನ್ಯ ಸಂಗತಿಗಳಾಗಿದ್ದವು. ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇವೆಲ್ಲವನ್ನೂ ನೆನಪಿಸಿಕೊಂಡು ಸಾಬೀತುಪಡಿಸಬೇಕಾದ ಸಂದರ್ಭ ಒದಗಿ ಬಂದಿರುವುದರ ಕುರಿತು ನನಗೆ ಖೇದವೆನಿಸುತ್ತಿದೆ.

ಈಗ ನಾವಿರುವುದು ಹುಬ್ಬಳ್ಳಿ. ಸ್ವಂತ ಮನೆ, ಆಹಾರದಲ್ಲಿ ಎಂದಿಗೂ ರಾಜಿಯಿಲ್ಲ, ನಮ್ಮ ಮನೆಯ ಹತ್ತಿರವಿರುವ ಮೂರು ಮಾಂಸಾಹಾರದ ಅಂಗಡಿಗಳಲ್ಲಿ ಒಂದು ರಫೀಕ್ ಅವರದು, ಇನ್ನೊಂದು ಅಹಮ್ಮದ್‍ರದ್ದು, ಮತ್ತೊಂದು ಶಾಹೀದ್‍ರದ್ದು. ನಾವು ಕರಾವಳಿಯ ಕಡಲತಡಿಯ ಮಂದಿ. ನಮಗಂತೂ ಮಾಂಸಾಹಾರವಿಲ್ಲದೇ ದಿನವೇ ಪೂರ್ತಿಯಾಗುವುದಿಲ್ಲ, ಹಾಗಾಗಿ ನಾವು ಮೀನು ತಿನ್ನುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಮ್ಮ ಮೀನೂಟ ನಮ್ಮ ಹಕ್ಕು, ನಮ್ಮ ಆಹಾರ ನಮ್ಮ ಹೆಮ್ಮೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app