'ಹಸಿಮನದೊಳಗೊಂದು ಸಹಬಾಳ್ವೆಯ ಬೀಜ ಮೊಳೆಯಲಿದೆ'

Communal love

ಹೈಸ್ಕೂಲ್‍ನಲ್ಲಿ ಓದ್ತಾ ಇದ್ದ ಪಕ್ಕದ ಮನೆಯ ಹುಡುಗ, ಸಂಜೆ ಕತ್ತಲಾಗುವ ಸಮಯ ಬ್ಯಾರಿ ಕಾಕನ ಅಂಗಡಿ ಹೊತ್ತಿ ಉರಿಯುವ ಮುನ್ನ, ಅಂಗಡಿಯಲ್ಲಿದ್ದ ಎರಡು ಡಬ್ಬಿ ಚಾಕಲೇಟ್‍ಗಳನ್ನು ತಂದು ನಮಗೆಲ್ಲಾ ಹಂಚಲು ಮುಂದಾದ. ಅಮ್ಮನ ಸ್ವರ ಶಾಂತವಾಗಿತ್ತು, ಆದರೆ, ದೃಢವಾಗಿತ್ತು. ಆಕೆ ಹೇಳಿದ್ದು ʼಅದು ಪಾಪದ ವಸ್ತು, ತಿನ್ನಬಾರದುʼ.

ಸೆಮಿಸ್ಟರ್ ಮುಗಿದು ರಜೆ ಪ್ರಾರಂಭವಾಗುವುದಿತ್ತು. ಒಂದಷ್ಟು ಕಥೆಗಳನ್ನು ವಿದ್ಯಾರ್ಥಿಗಳು ಓದಲಿ ಅನಿಸಿತು. ಆಂಗ್ಲ ಭಾಷೆಯ ಸಾಹಿತ್ಯದ ಕಥೆಗಳನ್ನು ಒಟ್ಟು ಹಾಕಿ ವಿದ್ಯಾರ್ಥಿಗಳಿಗೆ ಕೊಟ್ಟು ನಿಮಗಿಷ್ಟವಾದ ಕಥೆಯನ್ನು ಆಯ್ಕೆ ಮಾಡಿ ಕನ್ನಡಕ್ಕೆ ಅನುವಾದ ಮಾಡಿ ನೋಡುವಾ ಅಂದೆ. ನಮ್ಮ ವಿದ್ಯಾರ್ಥಿಗಳು ಕಾರ್ಯಕ್ಷಮತೆ, ತನ್ಮಯತೆಯಲ್ಲಿ ಕುಂದಿಲ್ಲ. ಹೇಳಿದ್ದೇ ಸರಿ, ರೇಖಾ ಬಿ ಶೆಟ್ಟಿ, ಶಬ್‌ನಮ್, ಪ್ರಮೀಳಾ ಡಿ'ಸೋಜಾ, ಸುಷ್ಮಾ ದೇವಾಡಿಗ, ಜಯಪ್ರಕಾಶ್, ನಿಮಿಷಾ ಡೊಮಿಲಿ, ಫಬೀನಾ, ಸರಿತಾ, ಮುಹಮ್ಮದ್ ಇರ್ಷಾದ್ ಕಥೆಗಳನ್ನು ಬಾಚಿಕೊಂಡು ರಜಾದಿನಗಳೆಡೆಗೆ ಸರಿದರು.

ರಜೆ ಕಳೆಯಿತು. ಕಾಲೇಜು ಪ್ರಾರಂಭವಾದಾಗ ಈ ವಿದ್ಯಾರ್ಥಿಗಳು ನನಗೆ ಅಚ್ಚರಿ, ಸಂತೋಷ ನೀಡಿದರು. ಕಥೆಗಳನ್ನು ನನ್ನ ಊಹೆಗೂ ನಿಲುಕದ ರೀತಿಯಲ್ಲಿ ಅದ್ಭುತವಾಗಿ ಅನುವಾದಿಸಿದ್ದರು. ಅನುವಾದದ ಗುಣಮಟ್ಟಕ್ಕೆ ನಾನು ಸಂಪೂರ್ಣ ಮಾರುಹೋದೆ. ಇದು ಸಂಗ್ರಹ ಯೋಗ್ಯ ಅನುವಾದವಾಗಿತ್ತು. ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂಬ ಭಾವನೆ ಮೂಡಿದ್ದೇ ತಡ ಕಾರ್ಯತತ್ಪರಳಾದೆ. ಒಂದಷ್ಟು ಕಾಗುಣಿತ, ಅಕ್ಷರ ದೋಷಗಳನ್ನು ಸರಿಪಡಿಸಿದ್ದು ಬಿಟ್ಟರೆ ನನಗೇನೂ ಹೆಚ್ಚಿನ ಕೆಲಸವಿರಲಿಲ್ಲ. ಆದರೆ ಕಥೆಗಳನ್ನು ಬೆರಳಚ್ಚು ಮಾಡಿ, ಪ್ರೂಫ್ ನೋಡಿ, ಮುಖಪುಟ ವಿನ್ಯಾಸ ಮಾಡಿಸಿ ಇತ್ಯಾದಿ ಇತ್ಯಾದಿ ಕೆಲಸಗಳು ಎದುರಿಗಿದ್ದವು. ಇರ್ಷಾದ್ ಪುಸ್ತಕದ ಸಂಪಾದಕತ್ವವನ್ನ ವಹಿಸಿಕೊಂಡ, ಸಂಕಲನವನ್ನು ಮುದ್ರಿಸುವಲ್ಲಿಯ ತನಕದ ಎಲ್ಲಾ ಕೆಲಸಗಳನ್ನು ಮಾಡಿದ. ಬೆನ್ನು ಬಿಡದ ಬೇತಾಳನಾಗಿ ಆತ ನಿರ್ವಹಿಸಿದ ಕೆಲಸ ಉತ್ತಮ ಪ್ರತಿಫಲ ನೀಡಿತು. ವಿದ್ಯಾರ್ಥಿನಿ ದಿವ್ಯಾ ಅನುವಾದಿಸಿಕೊಡದಿದ್ದರೂ ರೇಖಾಚಿತ್ರ ರಚಿಸಿಕೊಟ್ಟಳು. ಪುಸ್ತಕಕ್ಕೆ  ‘ನಮ್ಮನುವಾದ’ ಎಂಬ ಶೀರ್ಷಿಕೆ ಹೊತ್ತು ಪುಸ್ತಕದ ಲೋಕಾರ್ಪಣೆಯೂ ಆಯಿತು. ತದನಂತರದಲ್ಲಿ ನಮ್ಮನುವಾದಕ್ಕೆ ರಾಜ್ಯಮಟ್ಟದ ಪ್ರಶಸ್ತಿಯೂ ಸಂದಿತು. ಈ ಇಡೀ ಪ್ರಕ್ರಿಯೆಯಲ್ಲಿ ಈಕೆ ಕ್ರಿಶ್ಚಿಯನ್, ಆಕೆ ಮುಸ್ಲಿಂ ಎಂಬ ಮಾತು ಒಂದು ದಿನವೂ ಬರಲಿಲ್ಲ. ಒಂದೇ ಮನೆಯ ಮಕ್ಕಳಾಗಿ ಕೆಲಸ ನಿರ್ವಹಿಸಿದರು. ಇದು 2012ರ ಮಾತಾಯಿತು.

Image
‘ನಮ್ಮನುವಾದ’ ಪುಸ್ತಕ ಲೋಕಾರ್ಪಣೆಯ ಸಂದರ್ಭ

ಮಂಗಳೂರಿಗೆ ಕೋಮು ಗಲಭೆ ಹೊಸ ವಿಚಾರವೇನಲ್ಲ. ಬಾಬ್ರಿ ಮಸೀದಿ ಗಲಭೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳೆಲ್ಲ ಪ್ರಾಂಶುಪಾಲರ ಕಚೇರಿಗೂ ನನ್ನ ವಿಭಾಗಕ್ಕೂ ನಡುವಿರುವ ಉದ್ಯಾನದಲ್ಲಿ ಭಯ, ಆತಂಕದಿಂದ ನಿಂತಿದ್ದನ್ನು ನಾನು ಗಮನಿಸಿದ್ದೇನೆ. ಸಣ್ಣ ಪುಟ್ಟ ಹೊಡೆದಾಟಗಳೂ ನಡೆದದ್ದಿದೆ. ಆದರೆ ಅದ್ಯಾವುದೂ ನನ್ನನ್ನು ಅಧೀರಳನ್ನಾಗಿಯೋ, ಪಾಪಪ್ರಜ್ಞೆಯನ್ನು ಅನುಭವಿಸುವಂತೆ ಮಾಡಿಲ್ಲ. ಛೆ ಅನಿಸಿದ್ದಿದೆ. ಹೀಗಾಗಬಾರದಿತ್ತು ಅನಿಸಿದ್ದಿದೆ.

ನನ್ನ ಬಾಲ್ಯದಲ್ಲಿಯೂ ಕೋಮು ಸಂಬಂಧಿ ಅಹಿತಕರ ಘಟನೆಯನ್ನು ಕಂಡಿದ್ದೇನೆ. ಸಕಲೇಶಪುರದಲ್ಲಿ ಸುಮಾರು ಐವತ್ತು-ಐವತ್ತೆರಡು ವರ್ಷಗಳ ಹಿಂದೆ ನಡೆದ ಘಟನೆ ಮರೆವೆನೆಂದರೂ ಮರೆಯಲಾಗದೆ ನನ್ನ ಕಾಡುತ್ತದೆ.

Image
babri

ರಾಷ್ಟ್ರೀಯ ಹೆದ್ದಾರಿ 47ರಲ್ಲಿ ರಸ್ತೆಯ ಬದಿಯಲ್ಲಿ ಒಂದು ಸಾಲು ಕೋಣೆಗಳು. ಮೊದಲನೆಯದು ವೈದ್ಯರ ದವಾಖಾನೆ. ಭಾರತ್ ಕ್ಲಿನಿಕ್ ಅಂತ ಹೆಸರಿದ್ದ ನೆನಪು. ನಂತರದ್ದು ನೆನಪಿನಿಂದ ಮುಸುಕಾಗಿದೆ, ಬಹುಷಃ ಅದು ಸರಕು ತುಂಬಿಸಿಡುವ ಗೋದಾಮಿರಬೇಕು, ಮೂರನೆಯದು ಕಿರಾಣಿ ಅಂಗಡಿ, ಈ ಸಾಲು ಮುಗಿದ ಮೇಲೆ, ಸಾಲಿಗೆ ತಾಗಿದಂತೆ, ರಸ್ತೆಗೆ ಹತ್ತಿರವಾಗುವಂತೆ, ಒಂದಷ್ಟು ಕಲ್ಲನ್ನು ಸಮತಟ್ಟಾಗಿ ಜೋಡಿಸಿ ಅದರ ಮೇಲೆ ಮರದ ಹಲಗೆಗಳಿಂದ ಮಾಡಿದ ಪುಟ್ಟ ಗೂಡಂಗಡಿ. ಅದು ನಮ್ಮ ‘ಕಾಕ ಬ್ಯಾರಿ’ ‘ಬ್ಯಾರಿ ಕಾಕ’ನ ಅಂಗಡಿ. ಬಾಟ್ಲಿಗಳಲ್ಲಿ ತುಂಬಿಟ್ಟ ಪುರಿಉಂಡೆ, ಕಡಲೆ ಮಿಠಾಯಿ, ಮಸಾಲೆ ಕಡಲೆ, ನಾರಾಯಣ ಕಟರ್.... ವಾರಕ್ಕೊಮ್ಮೆಯಾದರೂ ಅವನಂಗಡಿಗೆ ಹೋಗಿ ಏನಾದರೂ ಸಿಹಿ ಮಿಠಾಯಿ ತರುವುದು ನಮ್ಮನೆಯ ವಾಡಿಕೆ. ಆ ದಿನದ ಚಿತ್ರ, ನಿನ್ನೆ ನಡೆದಂತೆ ನೆನಪಿನೊಳಗೆ ಉಳಿದಿದೆ.

ಸಿಹಿಕನಸುಗಳು ಕರಕಲಾದಂತೆ...

ಊರೊಳಗೆ ಗಲಭೆಯಾಗಿ, ಆ ಗಲಭೆಯಲ್ಲಿ ಬ್ಯಾರಿ ಕಾಕನ ಅಂಗಡಿ ಸುಟ್ಟು ಕರಕಲಾದಾಗ ನನ್ನ ಸಿಹಿಕನಸುಗಳೇ ಕರಕಲಾದಂತೆ ನಾನು ದುಃಖಿಸಿದ್ದು ಮನಸ್ಸಲ್ಲಿನ್ನೂ ಹಸಿಯಾಗಿ ಗಂಟಲುಬ್ಬುತ್ತದೆ. ನನ್ನ ಅಮ್ಮ ಆಗ ಹೇಳಿದ ಮಾತು ಚಿತ್ತದೊಳಗೆ ಬಿತ್ತಿ ಹೆಮ್ಮರವಾಗಿ ಬೆಳೆದಿದೆ. ನಮ್ಮದು ಬ್ರಾಹ್ಮಣರ ವಠಾರದೊಳಗಿನ ಮನೆ. ಅಷ್ಟೂ ಮನೆಯ ಮಕ್ಕಳು ಒಟ್ಟಿಗೆ ಆಡಿ ನಲಿವವರು. ಪಕ್ಕದ ಮನೆಯ ಹುಡುಗ ಹೈಸ್ಕೂಲ್‍ನಲ್ಲಿ ಓದ್ತಾ ಇದ್ದವನು, ಸಂಜೆ ಕತ್ತಲಾಗುವ ಸಮಯ, ಬ್ಯಾರಿ ಕಾಕನ ಅಂಗಡಿ ಹೊತ್ತಿ ಉರಿಯುವ ಮುನ್ನ, ಅಂಗಡಿಯಲ್ಲಿದ್ದ ಎರಡು ಡಬ್ಬಿ ಚಾಕಲೇಟ್‍ಗಳನ್ನು ತಂದು ನಮಗೆಲ್ಲಾ ಹಂಚಲು ಮುಂದಾದಾಗ ಅಮ್ಮನ ಸ್ವರ ಶಾಂತವಾಗಿತ್ತು, ಆದರೆ ದೃಢವಾಗಿತ್ತು. ಆಕೆ ಹೇಳಿದ್ದು ʼಅದು ಪಾಪದ ವಸ್ತು, ತಿನ್ನಬಾರದುʼ. ಬ್ಯಾರಿ ಅಂಗಡಿ ಸುಟ್ಟಿದ್ದನ್ನು, ಅವನ ಜೀವನ ನಷ್ಟವಾದದ್ದನ್ನ ಮಾತಲ್ಲಿ ಅಮ್ಮ ನನಗೆ ಕಟ್ಟಿಕೊಟ್ಟದ್ದು ಹೀಗೆ. ಇದು ಪಾಪದ ಕಥೆ ಅಂತ. ಆಕೆ ಕಟ್ಟಾ ಬ್ರಾಹ್ಮಣ ಸಂಪ್ರದಾಯಗಳನ್ನು ರೂಢಿಸಿಕೊಂಡು ಜೀವನ ನಡೆಸುತ್ತಿದ್ದವಳು. ದಿನಾಲೂ ಭಗವದ್ಗೀತೆಯ ಒಂದು ಅಧ್ಯಾಯ ಓದದೇ ಅವರ ದೇವರ ಕಾರ್ಯ ಮುಗಿಯುತ್ತಿರಲಿಲ್ಲ. ಆಕೆಗನಿಸಿದ್ದು ಹಿಂಸೆ, ಮತ್ತೊಬ್ಬರ ಜೀವನ ನಷ್ಟದಲ್ಲಿ ಭಾಗಿಯಾಗುವುದು, ಸಂಭ್ರಮಿಸುವುದು ಪಾಪಕಾರ್ಯ, ಪಾಪಕರ್ಮ ಅಂತ. ಆಕೆ ನನಗೆ ಪ್ರೀತಿಯ ಭಾಷೆ ಉಣಿಸಿದಳು, ಕಲಿಸಿದಳು. ದ್ವೇಷದ ಬೇಗೆ, ಪಾಪವೆಂದರೇನೆಂದು ಅರಿವು ನೀಡಿದಳು. ಇದು 1960ರ ದಶಕದ ನೆನಪು.

2016ನೇ ಇಸವಿಯಿರಬೇಕು. ವಿ.ವಿ.ಕಾಲೇಜಿನ ಪ್ರಾಂಶುಪಾಲರಾಗಿದ್ದ, ನನ್ನ ಸಂಗಾತಿ ಉದಯ ಕುಮಾರ್ ಜೊತೆ ದುಬೈಗೆ ಹೋಗಿದ್ದೆ. ದುಬೈಯಲ್ಲಿ ನೆಲೆಸಿರುವ ನಮ್ಮ ಕಾಲೇಜಿನ ಹಳೆವಿದ್ಯಾರ್ಥಿಗಳನ್ನು ಕಲೆಹಾಕಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿತ್ತು. ಹಳೆ ವಿದ್ಯಾರ್ಥಿಗಳಾದ ರಂಜನಿ, ಪ್ರವೀಣ್, ದಾಸ್, ಶೌಕತ್ ಆಲಿ, ಸಿರಾಜ್, ಯುವರಾಜ್ ಹೀಗೆ ಎಲ್ಲರೂ ಒಟ್ಟಾಗಿ ಒಂದಷ್ಟು ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾಯಿತು. ಪ್ರಾಂಶುಪಾಲರು ಕಾಲೇಜಿನ ಹೊಸ ಯೋಜನೆಗಳನ್ನು ಅವರಿಗೆ ತಿಳಿಸಿದ್ದೂ ಆಯಿತು. ದುಬೈಯಿಂದ ಹಿಂತಿರುಗಿದೆವು. ಮಧ್ಯಾಹ್ನದ ಉಚಿತ ಬಿಸಿಯೂಟದ ಯೋಜನೆ ‘ಒಂದು ಹೊತ್ತು ಕೈ ತುತ್ತು’ ಪ್ರಾರಂಭವಾಗಿ ಕೆಲವು ತಿಂಗಳುಗಳಾಗಿತ್ತು. ದುಬೈಯಲ್ಲಿ ಯೋಜನೆಯ ಬಗ್ಗೆ ತಿಳಿಸಿದಾಗ ಎಲ್ಲರಿಂದ ಮೆಚ್ಚುಗೆಯ ನುಡಿ ಬಂತು. ಆ ನಂತರ ರಜೆಯಲ್ಲಿ ಬಂದ ಶೌಕತ್ ಆಲಿ, ಸಿರಾಜ್ ಮರೆಯದೇ ಈ ಯೋಜನೆಗೆ ಧನ ಸಹಾಯ ನೀಡಿದರು.

ಈ ಯೋಜನೆಯ ಫಲಾನುಭವಿಗಳಲ್ಲಿ ಶೇಕಡಾ 98% ಹಿಂದೂ ವಿದ್ಯಾರ್ಥಿಗಳೇ ಇದ್ದರೂ ಶೌಕತ್ ಆಗಲಿ ಸಿರಾಜ್ ಆಗಲಿ ನಮ್ಮ ಹಣವನ್ನು ಅವರ ಹೊಟ್ಟೆ ತುಂಬಿಸಲು ಏಕೆ ಉಪಯೋಗಿಸಬೇಕು ಎಂದು ಒಂದು ಕ್ಷಣವೂ ಯೋಚಿಸಲಿಲ್ಲ. ಈ ಯೋಜನೆಯ ಕಾರಣೀಕರ್ತರಾದ ಪ್ರಾಂಶುಪಾಲರು ಜೈನಧರ್ಮದವರು. ಮತ ಧರ್ಮಗಳ ಎಲ್ಲ ಎಲ್ಲೆಮೀರಿ ಮನುಷ್ಯ ಧರ್ಮವೊಂದೇ ಸಹಜಧರ್ಮವೆಂದು ನಂಬಿದ ಯೋಜನೆ ಅದಾಗಿತ್ತು. ನಮ್ಮ ಕಾಲೇಜಿನ ಬುನಾದಿ ಕಟ್ಟಿದ್ದೇ ಸರ್ವಧರ್ಮದವರು ದೇಣಿಗೆ ನೀಡಿದ ಹಣದಿಂದ. 152 ವರ್ಷಗಳ ಹಿಂದೆ 65,000/- ರೂಪಾಯಿಯನ್ನು ಬ್ರಿಟಿಷ್ ಆಡಳಿತಕ್ಕೆ ನೀಡಿ ವಿದ್ಯಾಸಂಸ್ಥೆಯನ್ನು ಕಟ್ಟಬೇಕಾದ ಸಂದರ್ಭದಲ್ಲಿ ದೇಣಿಗೆ ನೀಡಿದವರ ಪಟ್ಟಿಯಲ್ಲಿ ಡಿಸೋಜಾ, ರಾವ್, ಭಟ್ಟ, ಖಾನ್, ಹೆಗಡೆ, ಅಬ್ದುಲ್ಲ ಬ್ಯಾರಿ ಎಲ್ಲರೂ ಇದ್ದಾರೆ.

2021 ಆಗಸ್ಟ್ ಅಥವಾ ಜುಲೈ ತಿಂಗಳಿರಬೇಕು. ನನ್ನ ವಿಭಾಗದಿಂದ ನಿವೃತ್ತರಾಗಿದ್ದ ಪ್ರಾಧ್ಯಾಪಕರೊರ್ವರಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಬೇಕಾದ ಸಂದರ್ಭ. ಆಸ್ಪತ್ರೆಗೆ ದಾಖಲು ಮಾಡಲು ಆದಿನ ಅವರಿಗೆ ಯಾರೂ ಜೊತೆಯಲ್ಲಿ ಇರಲಿಲ್ಲ. ಯಾರನ್ನಾದರೂ ದಾಖಲಾತಿ ಪತ್ರಕ್ಕೆ ಸಹಿ ಹಾಕಲು ಕಳಿಸಿ ಎಂದು ಫೋನ್ ಮುಖಾಂತರ ಹೇಳಿದರು. ನನಗೆ ಕೂಡಲೇ ನೆನಪಾದದ್ದು ಲಿನ್ಶಾ ಲೋಬೋ ಹಾಗೂ ಆಕೆಯ ತಮ್ಮ ಲೆವ್‍ಲಿನ್ ಲೋಬೋ. ಇಬ್ಬರೂ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳು. ಲಿನ್ಶಾ ಕೂಡಲೇ ತನ್ನೆಲ್ಲ ಕೆಲಸಗಳನ್ನು ಬದಿಗಿಟ್ಟು ದಾಖಲಾತಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ನಿರ್ವಹಿಸಿದಳು. ಆದರೆ ಆಕೆಗೆ ಅವರೊಂದಿಗೆ ಆಸ್ಪತ್ರೆಯಲ್ಲಿ ನಿಲ್ಲುವುದು ಸಾಧ್ಯವಿರಲಿಲ್ಲ. ಆ ಕ್ಷಣಕ್ಕೆ ಅವರ ಆರೈಕೆ ಮಾಡಲು ಪಾಳಿಯಲ್ಲಿ ನಿಂತವರು ಇರ್ಷಾದ್ ಮತ್ತು ಶರೀಫ್. ಬ್ರಾಹ್ಮಣ ಪ್ರಾಧ್ಯಾಪಕರು, ಕ್ರಿಶ್ಚಿಯನ್, ಮುಸ್ಲಿಂ ಹಳೆ ವಿದ್ಯಾರ್ಥಿಗಳು ಅನ್ನುವ ವಿಷಯ ಅಂದು ನನಗೆ ಹೊಳೆಯಲೇ ಇಲ್ಲ. ಯಾಕೆಂದರೆ ನನ್ನ ಹಾಗೂ ವಿದ್ಯಾರ್ಥಿಗಳ ಸಂಬಂಧ, ನನ್ನ ಅಮ್ಮ ಕಲಿಸಿದ ಪ್ರೀತಿಯ ಪಾಠದಿಂದ ಬಂದದ್ದಾಗಿತ್ತು. ಹಳೆ ವಿದ್ಯಾರ್ಥಿಗಳು ಅಂದು ಅಧ್ಯಾಪಕರ ಅಪತ್ಪಾಂಧವರಾಗಿದ್ದರು.

ಮನುಜ ಮತ, ಪ್ರೀತಿಯ ಭಾಷೆಯ ಸಹಬಾಳ್ವೆ ನನ್ನನ್ನ ನನ್ನ ವೃತ್ತಿಯೊಂದಿಗೆ, ವಿದ್ಯಾರ್ಥಿಗಳೊಂದಿಗೆ ಬಂಧಿಸಿದೆ. ಮಿಯಾಜ್ ತಾಯಿ ಮಾಡಿ ಕಳಿಸಿದ ಸೌತೆಕಾಯಿ ಕಡುಬು, ಕುಸುಮಾ ನೀಡಿದ ಕಡಲೆ ಉಸುಲಿ, ಅಜಿತ್ ಡಿಸೋಜಾ ಒತ್ತಾಸೆಯಿಂದ ನೀಡುವ ತಾನೇ ಬೆಳೆದ ರಾಂಬುಟಾನ್, ಹಲಸು, ಮಾವು, ಜಾಂಬು ನನ್ನ ಜೀವನದ ಸಿಹಿಯನ್ನು ಹದವಾಗಿರುವಂತೆ ನೋಡಿಕೊಂಡಿದೆ. ಎಲ್ಲವೂ ಚೆನ್ನಾಗಿಯೇ ಇದೆ, ಇರುತ್ತದೆ ಎಂದುಕೊಂಡೆ. ನಮ್ಮ ಹಸಿಮಣ್ಣಿನ ಮನಕ್ಕೆ ವಿಷದ ಬೀಜ ಬಿದ್ದದ್ದಾದರೂ ಎಲ್ಲಿಂದ? ಒಂದಷ್ಟು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದು ನಿಂತಿದೆ. ಬರುತ್ತಿರುವವರಿಗೆ ಬಾರದಿರುವವರ ಬಗ್ಗೆ ಏನನಿಸುತ್ತಿದೆಯೋ ಗೊತ್ತಿಲ್ಲ. ಆದರೆ ಅವರ ಜೀವನ ನಿಂತ ನೀರಾಗಿಲ್ಲ. ಒಂದೆಡೆ ಗುಂಪಾಗಿ ತರಗತಿಗಳಿಗೆ ಬರದೇ ದೂರನಿಂತ ಸಣ್ಣ ಗುಂಪಿನ ವಿದ್ಯಾರ್ಥಿನಿಯರು. ಉಳಿದವರ ಮನದ ಕದವ ತಟ್ಟಿದರೂ, ಮನದ ಕದವೇಕೆ ತೆರೆಯುತ್ತಿಲ್ಲ? ನಗುತ್ತಾ, ಕಲೆಯುತ್ತಾ ಏನೂ ನಡೆಯುತ್ತಿಲ್ಲ, ಎಲ್ಲವೂ ಸಹಜವಾಗಿದೆ ಎನ್ನುವಂತಿದ್ದಾರೆ. ಇದು ಅವರ ಸಹಜ ಮುಖವಾ? ಅಥವಾ ನನ್ನ ಭ್ರಮೆಯೋ ತಿಳಿಯುತ್ತಿಲ್ಲ.

ಇದನ್ನು ಓದಿದ್ದೀರಾ? ಪಠ್ಯಪುಸ್ತಕ ಬದಲಾವಣೆಯ ಹಿಂದಿದೆ ʼಬ್ರಾಹ್ಮಣ್ಯವೇ ಶ್ರೇಷ್ಠʼ ಎಂಬ ಅಹಂ: ರಾಜೇಂದ್ರ ಚೆನ್ನಿ

ಹಸಿಮನದ ವಿದ್ಯಾರ್ಥಿಗಳು ಹುಸಿಮನದವರಾಗಿರಲು ಖಂಡಿತಾ ಸಾಧ್ಯವಿಲ್ಲ. ನಾನು ಹೇಳಿದೆ. ಇದು ಯಾರ ತಪ್ಪು? ಇದು ನಿಮ್ಮ ತಪ್ಪಲ್ಲ. ನಮ್ಮ ತಪ್ಪು. ನಾವು ಅಂದರೆ ನನ್ನ ತಲೆಮಾರಿನವರ ತಪ್ಪು. ನಿಮ್ಮೆಲ್ಲರನ್ನ ಸೌಹಾರ್ದದಿಂದಿಡುವಲ್ಲಿ ಸೋತಿದ್ದೇವೆ. ನಿಮ್ಮನ್ನು ಒಡೆದ ನನ್ನ ತಲೆಮಾರಿನವರು ಒಗ್ಗಟ್ಟಿನ, ಸಹಬಾಳ್ವೆಯ ಸವಿ ಉಂಡವರಾದರೂ ನಿಮಗೇಕೆ ಒಡೆದ ಹಾಲಿನ ವಿಷವನ್ನುಣಿಸುತ್ತಿದ್ದಾರೆ? ನಾನು ನಿಮಗಿಷ್ಟೇ ಹೇಳಬಲ್ಲೆ. ಉಣಬೇಡಿ ವಿಷವನ್ನ. ನಿಮ್ಮ ಮುಂದಿನ ತಲೆಮಾರಿಗೆ ಪ್ರಶ್ನೆಯಾಗಬೇಡಿ. ನಿಮ್ಮ ನಾಳೆಗಳಿಗೆ ಪ್ರೀತಿ ಬಡಿಸಿ, ಸ್ನೇಹ ಗಳಿಸಿ. ದ್ವೀಪಗಳಾಗದಿರಿ. ವಿಶ್ವಮಾನವರಾಗಿʼ. ನನ್ನ ಗಂಟಲಿನ ಪಸೆ ಆರುತಿತ್ತು. ಅವರ ಕಣ್ಣುಗಳು ತೇವವಾದವು. ನನ್ನ ಮನದಾಳದಲ್ಲೊಂದು ಬೆಳಕು ಚಿಗುರಿತು. ಇಲ್ಲ, ಎಲ್ಲವೂ ಮುಗಿದಿಲ್ಲ. ಅವರ ಹಸಿಮನದೊಳಗೊಂದು ಸೌಹಾರ್ದದ, ಸಹಬಾಳ್ವೆಯ ಬೀಜ ಮೊಳೆಯಲಿದೆ ಅನಿಸಿತು. ಅಮ್ಮ ಕಲಿಸಿದ ಪ್ರೀತಿಯ ಪಾಠದ ಪರೀಕ್ಷೆಯ ಫಲಿತಾಂಶ ಖಂಡಿತಾ ಶೂನ್ಯವಾಗದಿರಲಿ.

ನಿಮಗೆ ಏನು ಅನ್ನಿಸ್ತು?
8 ವೋಟ್