ರಸೂಲಣ್ಣನ ಆತ್ಮೀಯತೆ, ಸಾದಿಕಣ್ಣನ ಚಿಲ್ಲರೆ ಅಂಗಡಿ ಮರೆಯುವುದುಂಟೇ!

kaggere jathre

ನಮ್ಮೂರ ಮಧ್ಯಭಾಗದಲ್ಲೇ ನೂರಕ್ಕೂ ಹೆಚ್ಚು ಮನೆಗಳು ಸಾಬರ ಹಟ್ಟಿಯಲ್ಲೇ ಇವೆ. ಊರಿನ ಕಟ್ಟೆಯ ಎದುರು ಬದಿಯ ರಸ್ತೆಗೆ ಹೋದರೆ ಲಿಂಗಾಯತರ, ಬ್ರಾಹ್ಮಣರ ಹಟ್ಟಿಯಿದೆ. ಹಾಗೆಯೇ ರಸ್ತೆಯ ಬದಿಯ ಈಚೆಗೆ ಗೌಡರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಮನೆಗಳೂ ಇವೆ. ಎಲ್ಲರೂ ಪಂಪ ಹೇಳಿದಂತೆ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬಂತೆ ಬದುಕುತ್ತಿದ್ದಾರೆ.

ನಮ್ಮೂರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕಗ್ಗೆರೆ ಗ್ರಾಮ. ಇಲ್ಲಿ ಐನೂರಕ್ಕೂ ಹೆಚ್ಚು ಮನೆಗಳಿವೆ. ಏನಿಲ್ಲ ಅಂದರೂ ಎಂಟು ನೂರು ಮತದಾರರು ಇದ್ದಾರೆ. ನಮ್ಮೂರಿಗೆ ಈಗ ಆಧುನಿಕತೆಯ ಸ್ಪರ್ಶ ಆಗಿದ್ದರೂ ಕೃಷಿ ಪ್ರಧಾನವೇ ಆಗಿದೆ. ಬಯಲು ಪ್ರದೇಶವಾದ ನಮ್ಮೂರು ಮಳೆಯಾಶ್ರಯಿತ ಪ್ರದೇಶ. ಆದರೆ ಈಗೆಲ್ಲ ಕೊಳವೆ ಬಾವಿಗಳು ಬಂದಿರುವುದರಿಂದ ಹೊಲ, ಗದ್ದೆಗಳೆಲ್ಲ ಅಡಿಕೆ, ತೆಂಕು, ಬಾಳೆ, ಮಾವು, ನಿಂಬೆಗಿಡಗಳಂಥ ತೋಟಗಳಾಗಿ ಪರಿವರ್ತನೆಗೊಂಡು ವಾಣಿಜ್ಯಕವಾಗಿ ನಮ್ಮೂರು ಅಭಿವೃದ್ಧಿ ಹೊಂದಿದೆ. ಜೊತೆಗೆ ಹಾಲಿನ ಡೈರಿ ಇರುವುದರಿಂದ ಹೈನುಗಾರಿಕೆಯೂ ಚೆನ್ನಾಗಿದೆ. ಊರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಯೂ ಇದೆ. ಕಾಲೇಜೂ ಆಗುವ ಹಂತದಲ್ಲಿ ಇದೆ.

ನಮ್ಮೂರು ಎಂದರೆ ಬೆಂಗಳೂರು-ಹಾಸನ ಹೈವೇಗೆ ಒಂದು ಕಿಲೋ ಮೀಟರ್ ಹತ್ತಿರಕ್ಕೆ ಹೊಂದಿಕೊಂಡಿದೆ. ಬೆಂಗಳೂರಿಗೆ ಏನಿಲ್ಲ ಅಂದರೂ ಎಂಬತ್ತು ಕಿಲೋ ಮೀಟರ್ ದಾಟಲ್ಲ. ಬಸ್ ನಲ್ಲಿ ಎರಡು ಗಂಟೆ ಪ್ರಯಾಣ ಅಷ್ಟೇ. ಅತ್ತ ಪಶ್ಚಿಮ ದಿಕ್ಕಿನ ಕಡೆಗೆ ಜಗತ್ಪ್ರಸಿದ್ಧ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ, ಇತ್ತ ಜನಪದ ಖ್ಯಾತಿಯ ಮೂಡಲ್ ಕುಣಿಗಲ್ ಕೆರೆ ನಮ್ಮೂರಿಗೆ ಸಮೀಪದಲ್ಲೇ ಇವೆ. ಎಡೆಯೂರು ದೇವಸ್ಥಾನದ ಹಿಂಭಾಗದಲ್ಲೇ ಸಾವಿರಾರು ಎಕರೆ ಕೃಷಿಗೆ ಆಧಾರವಾಗಿರುವ ವಿಶ್ವಖ್ಯಾತಿಯ ಎಂಜಿನಿಯರ್ ವಿಶ್ವೇಶ್ವರಯ್ಯ ಅವರಿಂದ ಕಟ್ಟಲ್ಪಟ್ಟ ಮಾರ್ಕೋನಹಳ್ಳಿ ಜಲಾಶಯವಿದೆ.

ಕಗ್ಗೆರೆ ಎಂದರೆ 15ನೇ ಶತಮಾನದಲ್ಲಿ ಸಿದ್ಧಲಿಂಗೇಶ್ವರ ಯತಿಗಳು 12 ವರ್ಷಗಳ ಕಾಲ ತಪಸ್ಸು ಮಾಡಿದ ಪುಣ್ಯಭೂಮಿ, ತಪೋಕ್ಷೇತ್ರ. ದೇವಸ್ಥಾನದ ಹಿಂಭಾಗದಲ್ಲೇ ನಾಗಿನ ನದಿಯು ಹರಿಯುತ್ತಿತ್ತು. ಈಗ ಅದರ ನಿನಾದ ಸ್ತಬ್ಧಗೊಂಡಿದೆ. ಕಗ್ಗೆರೆ ಊರಿಂದ ಆ ಸಿದ್ಧಲಿಂಗ ಯತಿಗಳು ಸಿದ್ಧಗಂಗೆ, ಶಿವಗಂಗೆ, ಗದಗ ಕಡೆಯೆಲ್ಲ ಹೋಗಿ ಮಠಮಾನ್ಯಗಳನ್ನು ಸ್ಥಾಪಿಸಿ ಎಲ್ಲ ಜನಾಂಗದ ಜನರನ್ನು ಸನ್ಮಾರ್ಗದಲ್ಲಿ ನಡೆಸಿದರು ಎಂಬುದು ನಿಜವಾಗಿದೆ. ಇದಕ್ಕೆ ನಿದರ್ಶನ ತುಮಕೂರಿನ ಸಿದ್ಧಗಂಗೆ ಮಠ. ಇಲ್ಲಿರುವ ಪೂಜ್ಯನೀಯ ಯತಿಗಳೇ ಸಿದ್ಧಲಿಂಗೇಶ್ವರರು. ಇವರನ್ನೇ ಆರಾಧಿಸುತ್ತಾ ಎಲ್ಲ ಹಿಂದೂ-ಮುಸ್ಲಿಂ, ದೀನ-ದಲಿತರಿಗೂ ಅನ್ನ, ವಸತಿ, ವಿದ್ಯೆ-ತ್ರಿವಿಧ ದಾಸೋಹ ಮಾಡುತ್ತಾ ಡಾ. ಶಿವಕುಮಾರ ಸ್ವಾಮೀಜಿ 111 ವರ್ಷಗಳ ಕಾಲ ಬದುಕಿದ್ದರು. ಮಠದಲ್ಲಿ ಮುಸ್ಲಿಂ ಹುಡುಗನಿಗೂ ಓದಲು ಅವಕಾಶ ಕಲ್ಪಿಸಿ ಸಂಸ್ಕೃತ ಕಲಿಸಿದ ಹೆಗ್ಗಳಿಕೆ ಈ ಸ್ವಾಮೀಜಿಗೆ ಸಲ್ಲುತ್ತದೆ.  

Image
siddaganga matt

ಅಂತಹ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬೀಜ ಬಿತ್ತಿದವರೇ ನಮ್ಮೂರಲ್ಲಿ ತಪಸ್ಸು ಮಾಡಿದ ಸಿದ್ಧಲಿಂಗೇಶ್ವರರು. ಇವರು ಇಡೀ ದೇಶ ಸಂಚಾರ ಮಾಡಿ ಮಾನವ ಜನಾಂಗ ಕೂಡಿ ಬಾಳುವ ಸಂದೇಶ ಸಾರಿ ಅಂತಿಮವಾಗಿ ಎಡೆಯೂರಿನಲ್ಲಿ ಬಂದು ಕಾಲನ ವಶವಾಗುತ್ತಾರೆ.

ರಸ್ತೆಯ ಎಡಬಲ ಬದಿಯ ಒಂದು ಕಿಲೋ ಮೀಟರ್ ಉದ್ದಕ್ಕೂ ಬೆಳೆದಿರುವ ನಮ್ಮೂರಿಗೆ ದಂಡಿನಮ್ಮ ಕೂಡ ಇಲ್ಲಿನ ಪ್ರಸಿದ್ಧ ಗ್ರಾಮ ದೇವತೆ. ಈಕೆ ದಂಡಿನಮಾರಿ ಊರಿಂದ ಬಂದು ನಮ್ಮೂರಲ್ಲಿ ನೆಲೆಸಿದವಳಂತೆ. ಈಕೆಗೆ ಹಿಂದೆ ಕೋಣವನ್ನೇ ಬಲಿ ಕೊಡಲಾಗುತ್ತಿತ್ತಂತೆ. ಕ್ರಮೇಣ ಹಂದಿ ಹೋಗಿ ಈಗ ಆಡು-ಕುರಿ, ಕೋಳಿ ಬಲಿ ಕೊಟ್ಟು ಪೂಜೆ ಮಾಡಲಾಗುತ್ತದೆ. ಈ ಕಥೆ ಏನೇ ಇರಲಿ; ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿಯೇ ನಮ್ಮೂರು ಇವತ್ತಿಗೂ ಉಳಿದುಕೊಂಡು ಬಂದಿದೆ. ಸಿದ್ಧಲಿಂಗೇಶ್ವರ, ದಂಡಿನಮ್ಮ ದೇವರ ಜಾತ್ರಾ ಮಹೋತ್ಸವಗಳು ಅದ್ದೂರಿಯಾಗಿಯೇ ನಡೆಯುತ್ತವೆ. ಅಷ್ಟೇ ಅಲ್ಲ; ಊರಿನ ಮಧ್ಯಭಾಗದಲ್ಲೇ ಬೃಹತ್ ಮಸೀದಿ ಇದೆ. ಊರಿನ ಜನರಿಗೆ ಸಮಯದ ಅರಿವಾಗುವುದು ‘ಅಲ್ಲಾಹು ಅಕ್ಬರ್’ ಎಂದು ಅಲ್ಲಿನ ಮುಲ್ಲಾಗಳು ಕೂಗಿದಾಗಲೇ. ಇಲ್ಲಿ ಉರ್ಫ್, ಈದ್ ಮಿಲಾದ್, ಬಕ್ರೀದ್, ರಂಝಾನ್ ಹಬ್ಬಗಳು ಯಾವ ಅಡೆತಡೆಗಳು ಇಲ್ಲದೆ ನಡೆಯುತ್ತವೆ.  

ನಮ್ಮೂರ ಮಧ್ಯಭಾಗದಲ್ಲೇ ನೂರಕ್ಕೂ ಹೆಚ್ಚು ಮನೆಗಳು ಸಾಬರ ಹಟ್ಟಿಯಲ್ಲೇ ಇವೆ. ಊರಿನ ಕಟ್ಟೆಯ ಎದುರು ಬದಿಯ ರಸ್ತೆಗೆ ಹೋದರೆ ಲಿಂಗಾಯತರ, ಬ್ರಾಹ್ಮಣರ ಹಟ್ಟಿಯಿದೆ. ಹಾಗೆಯೇ ರಸ್ತೆಯ ಬದಿಯ ಈಚೆಗೆ ಗೌಡರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಮನೆಗಳೂ ಇವೆ. ಎಲ್ಲರೂ ಇವತ್ತು ಕೂಡಿ ಬಾಳುವ, ಪಂಪ ಹೇಳಿದಂತೆ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬಂತೆ ಬದುಕುತ್ತಿದ್ದಾರೆ. ನಮ್ಮೂರಲ್ಲಿ ಕೋಮು ಗಲಭೆಗಳಾಗಲಿ, ಜಾತಿ-ಜನಾಂಗದ ಗಲಾಟೆಗಳಾಗಲಿ ನಡೆದ ಉದಾಹರಣೆಗಳಿಲ್ಲ. ಕೋಮು ಸೌಹಾರ್ದತೆಗೆ ಹೇಳಿ ಮಾಡಿಸಿದ ನಮ್ಮೂರು.

Image
siddeshwara

ರಸೂಲಣ್ಣನ ಆತ್ಮೀಯತೆ

ರಸೂಲ್ ಎಂಬ ಮುಸ್ಲಿಂ ವ್ಯಕ್ತಿ ಬೇಗಂ ಹೆಂಡತಿಯನ್ನು ಕಳೆದುಕೊಂಡವನು. ಇವನು ಊರಿನಲೆಲ್ಲ ಸೈಕಲ್ ಮೇಲೆ ಓಡಾಡಿಕೊಂಡು ಹಣ್ಣು, ತರಕಾರಿ ಮಾರಿಕೊಂಡು ಇವತ್ತಿಗೂ ಜೀವಿಸುತ್ತಿದ್ದಾನೆ. ಯಾವ ಸೀಸನ್ ನಲ್ಲಿ ಯಾವ ಹಣ್ಣು, ತರಕಾರಿಗಳು ಬರುತ್ತವೋ ಅವೆಲ್ಲವನ್ನು ಮಾರುತ್ತಾನೆ. ಊರಿನ ಎಲ್ಲ ಜಾತಿ-ಜನಾಂಗದವರೂ ಇವನಿಂದ ಖರೀದಿಸುತ್ತಾರೆ. ಹಲಸು, ಪರಂಗಿ, ಮಾವಿನ ಹಣ್ಣು, ಜೊತೆಗೆ ತರಕಾರಿ, ಸೊಪ್ಪುಸೆದೆ... ಹೀಗೆ ಎಲ್ಲವನ್ನೂ ಮಾರುತ್ತಾ ತನ್ನ ಮೂವರು ಫಾತಿಮಾ, ನಸ್ರೀನ್, ನೂರ್ ಜಾನ್ ಎಂಬ ಹೆಣ್ಣು ಮಕ್ಕಳನ್ನು ತಾಯಿಯಾಗಿಯೂ ಸಾಕಿ-ಬೆಳೆಸಿ ಮದುವೆ ಮಾಡಿ ದಡ ಸೇರಿಸಿದ್ದಾನೆ. ಓದು-ಬರಹ ಗೊತ್ತಿಲ್ಲದ ಈತನ ಹೆಣ್ಣು ಮಕ್ಕಳ ಮದುವೆ ಕಾಲದಲ್ಲಿ ಊರಿನ ಎಲ್ಲ ಜನಾಂಗದವರೂ ತಮ್ಮ ಕೈಲಾದ ನೆರವು ನೀಡಿ ನಮ್ಮೂರ ಹೆಣ್ಣು ಮಗಳು ಅಂತ ಗಂಡನ ಮನೆಗೆ ಕಳಿಸಿಕೊಟ್ಟಿದ್ದಾರೆ.

ಅಷ್ಟೇ ಅಲ್ಲ; ಮದುವೆ ಆಗುವವರೆಗೂ ಈತನ ಮೂವರು ಹೆಣ್ಣು ಮಕ್ಕಳು ಬೀಡಿ ಕಟ್ಟುತ್ತಿದ್ದರು. ನಾನು ಸಹ ಬಾಲ್ಯದಲ್ಲಿ ಪ್ರತಿನಿತ್ಯ ಇವರ ಬಳಿ ಹೋಗಿ ಬೀಡಿ ಕಟ್ಟುವುದನ್ನು ಕಲಿತುಕೊಂಡಿದ್ದೆ. ನಮಗೆ ಯಾವುದೇ ಜಾತಿ, ಭೇದ-ಭಾವಗಳೇ ಇರಲಿಲ್ಲ. ಎಲ್ಲರೂ ನಮ್ಮೂರಿನವರು ಎಂಬ ಅಭಿಮಾನ ಇರುತ್ತಿತ್ತು. ಅಷ್ಟಕ್ಕೂ ನಮ್ಮ ಮನೆ, ಹೊಲ ಇವತ್ತಿಗೂ ಮುಸ್ಲಿಮರ ಹಟ್ಟಿಗೆ ಹೊಂದಿಕೊಂಡಂತೆ ಇದೆ. ಈಗಲೂ ನಾನು ಊರಿಗೆ ಹೋದಾಗ, ʼಏನೋ ಪಾಪಣ್ಣ, ಬೆಂಗಳೂರಿನಿಂದ ಯಾವಾಗ ಬಂದೆ. ನಿನ್ನ ನೋಡಿದರೆ ಥೇಟ್ ನಿಮ್ಮ ತಂದೆ ಪಾಪಣ್ಣನ ತರಹವೇ ಇದ್ದೀಯಾ. ಎಲ್ಲರೂ ಚೆನ್ನಾಗಿದ್ದಾರಾʼ ಎಂಬ ರಸೂಲಣ್ಣನ ಆತ್ಮೀಯ ಮಾತು ಊರ ಮೇಲಿನ ಅಭಿಮಾನವನ್ನು ಹೆಚ್ಚು ಮಾಡುತ್ತದೆ. ಈಗಲೂ ನಾನು ಹೊಲ, ಮನೆ ನಿಗಾವಣೆಗೆ ತಿಂಗಳಿಗೆ ಒಂದು ಸಾರಿಯಾದರೂ ಊರಿಗೆ ಹೋಗಿ ಬರುತ್ತೇನೆ. ಏಕೆಂದರೆ; ಊರಿನ ಮನೆ, ಹೊಲದಲ್ಲಿ ತಾಯಿ-ತಂದೆ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಜೊತೆ ಕಳೆದ ಬಾಲ್ಯದ ನೆನಪುಗಳು ನನ್ನಲ್ಲಿ ಇವತ್ತಿಗೂ ಗಾಢವಾಗಿವೆ.

ಸಾದಿಕಣ್ಣನ ಚಿಲ್ಲರೆ ಅಂಗಡಿ

ಊರಿನಲ್ಲಿ ಮೋಟಾರು-ಸೈಕಲ್ ಪಂಚರ್ ಅಂಗಡಿ, ಬಾರ್ಬರ್ ಶಾಪ್, ಚಿಲ್ಲರೆ ಅಂಗಡಿ ಇಟ್ಟಿರುವುದೇ ಮುಸ್ಲಿಮರು. ಇವರ ಬಳಿಯೇ ಎಲ್ಲ ಜಾತಿ-ಜನಾಂಗದವರು ಹೋಗಿ ತಮ್ಮ ಕಾರ್ಯ ಸಾಧನೆ ಮಾಡಿಕೊಂಡು ಬರುತ್ತಾರೆ. ಇವತ್ತಿಗೂ ಊರಲ್ಲಿ ಸಾದಿಕ್ ಚಿಲ್ಲರೆ ಅಂಗಡಿ ಫೇಮಸ್. ಯೂಸೂಫ್ ಎಂಬಾತ ಕೂಡ ಒಂದು ಚಿಲ್ಲರೆ ಅಂಗಡಿ ಇಟ್ಟಿದ್ದ; ಆದರೆ ಅವನಿಗೆ ಅದನ್ನು ನಡೆಸಲಾರದೆ ಮುಚ್ಚಿಬಿಟ್ಟ. ಈಗ ಎಲ್ಲರಿಗೂ ಸಾದಿಕ್ ಚಿಲ್ಲರೆ ಅಂಗಡಿಯೇ ಬೇಕು. ಈ ಅಂಗಡಿಯಲ್ಲಿ ಹಾಲು, ಬ್ರೆಡ್ಡು, ಬಿಸ್ಕತ್, ಮೊಟ್ಟೆ, ತರಕಾರಿ, ದಿನಸಿ, ಜಗಿಯಲು ಎಲೆ ಅಡಿಕೆ, ಕಡ್ಡಿಪುಡಿ, ದೇವರ ಪೂಜೆಗೆ ಹಣ್ಣು-ಕಾಯಿ, ಕಡ್ಡಿ-ಕರ್ಪೂರ ಎಲ್ಲವೂ ಇಲ್ಲಿ ಲಭ್ಯ. ಇಲ್ಲಿಗೆ ಯಾವ ಮಡಿ-ಮೈಲಿಗೆಯೂ ಅಂದುಕೊಳ್ಳದೆ ಬ್ರಾಹ್ಮಣರು, ಲಿಂಗಾಯತರು, ಗೌಡರು, ಎಸ್ಸಿಎಸ್ಟಿಗಳೂ ಇದೇ ಅಂಗಡಿಗೆ ಬರುತ್ತಾರೆ. ಸಾದಿಕ್ ಅಷ್ಟೋ ಇಷ್ಟೋ ಓದಿದ್ದಾನೆ. ಆದರೂ ಈತ ಅಪ್ಪ ಹಾಕಿಕೊಂಡ ಚಿಲ್ಲರೆ ಅಂಗಡಿಯಲ್ಲೇ ತನ್ನ ಜೀವನ ನಿರ್ವಹಣೆ ಮಾಡುತ್ತಿದ್ದಾನೆ. ಜೊತೆಗೆ ಇಡೀ ಊರಿನವರಿಗೆಲ್ಲ  ಗ್ಯಾಸ್ ಸಿಲಿಂಡರ್ ಸಪ್ಲೈ ಮಾಡುತ್ತಾನೆ. ಇವರಪ್ಪ ನಮ್ಮ ತಂದೆಯ ಸ್ನೇಹಿತ. ಗುಜ್ರಿ ಸಾಬ್ ಅಂತಲೇ ಕರೆಯುತ್ತಿದ್ದರು. ಹಾಗಂತ ಇವರು ಗುಜರ್ ಅಂಗಡಿ ಇಟ್ಟವರಲ್ಲ; ಗೌರ್ನಮೆಂಟ್ ಬಸ್ ಡೈವರ್ ಆಗಿದ್ದರು. ಆ ಕಾಲದಲ್ಲೇ ಇವರು ಹೆಂಡತಿ ಜುಕ್ರಿಗಾಗಿ ಚಿಲ್ಲರೆ ಅಂಗಡಿ ಇಟ್ಟುಕೊಟ್ಟರು. ಈಗ ಸಾದಿಕ್ ಗೆ ತಂದೆ-ತಾಯಿ ಇಬ್ಬರೂ ಇಲ್ಲ. ಆದರೆ ಸುಮಾರು 50 ವರ್ಷದ ಹಿಂದೆ ಆರಂಭಿಸಿದ ಚಿಲ್ಲರೆ ಅಂಗಡಿಯನ್ನು ಮಗ ಸಾದಿಕ್ ಊರಿನಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ನಾವು ಊರಿಗೆ ಹೋದಾಗ ಇವನ ಅಂಗಡಿಯೇ ನಮಗೂ ಅಚ್ಚುಮೆಚ್ಚು.  

ಇನ್ನು ಊರಿನ ಆಚೆಗೆ ಬೆಂಗಳೂರು-ಹಾಸನ ಹೈವೇ ಸಮೀಪ ಆಲಪ್ಪನಗುಡ್ಡೆ ಅಂತ ಬರುತ್ತದೆ. ಅಲ್ಲಿಗೆ ಹೋದರೆ ಮಟನ್, ಚಿಕನ್ ಅಂಗಡಿಗಳನ್ನು ಇಟ್ಟಿರುವುದೂ ಮುಸ್ಲಿಮರೇ. ಇಲ್ಲಿಂದಲೇ ಊರಿನವರು ಮಾಂಸ, ಮಡ್ಡಿ ತಂದು ಅಡುಗೆ ಮಾಡಿ ಉಣ್ಣುತ್ತಾರೆ. ಅಂದರೆ ಇನ್ನೂ ಅದೆಷ್ಟೋ ಊರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಎಂಬುದು ಉಳಿದುಕೊಂಡು ಬಂದಿದೆ ಎಂಬುದಕ್ಕೆ ನಮ್ಮೂರು ಒಂದು ನಿದರ್ಶನ. ಹಬ್ಬ-ಹರಿದಿನಗಳಂತೂ ಒಬ್ಬರಿಗೊಬ್ಬರು ಶುಭಾಶಯ ಹೇಳಿಕೊಂಡು, ಆತ್ಮೀಯತೆಯಿಂದ ತಬ್ಬಿಕೊಂಡು ಸಂಭ್ರಮ ಪಡುವುದನ್ನು ನಾನು ಇವತ್ತಿಗೂ ನೋಡುತ್ತಲೇ ಬಂದಿದ್ದೇನೆ. ಜಾತ್ರೆ ಸಮಯದಲ್ಲಂತೂ ಹೊರಗಿನಿಂದ ಬಂದ ಮುಸ್ಲಿಮರೇ ಹೆಚ್ಚು ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಾರೆ.

ಇದನ್ನು ಓದಿದ್ದೀರಾ? ತಿರುಚಿದ ಬಸವಣ್ಣನ ಪಠ್ಯ ಹಿಂಪಡೆಯದಿದ್ದರೆ ಉಗ್ರ ಹೋರಾಟ: ಸಿಎಂಗೆ ಸಾಣೆಹಳ್ಳಿ ಶ್ರೀ ಎಚ್ಚರಿಕೆ

ಒದ್ದ ಕದ ಕುಣಿಗಲ್ ಕೆರೆಯಲ್ಲಿ…

ನಮ್ಮೂರಿಗೆ ಸಮೀಪವೇ ಇರುವ ಅತಿ ಎತ್ತರದ ರಂಗಸ್ವಾಮಿ ದೇವಸ್ಥಾನದ ಬೆಟ್ಟವಿದೆ. ಇದೊಂದು ನೋಡಲು ಅತ್ಯಂತ ರಮಣೀಯ ತಾಣ. ಶ್ರಾವಣ ಶನಿವಾರಗಳಲ್ಲಿ ಭಕ್ತಾದಿಗಳು ಇಲ್ಲಿ ಕಿಕ್ಕಿರಿದು ಸೇರುತ್ತಾರೆ. ಈ ದೇವಸ್ಥಾನಕ್ಕೆ ಬಾಗಿಲೇ ಇಲ್ಲ. ಒಮ್ಮೆ ಭಕ್ತರೆಲ್ಲ ಸೇರಿ ಬಾಗಿಲು ಹಾಕಿದ್ದರಂತೆ. ರಂಗಸ್ವಾಮಿಗೆ ಕೋಪ ಬಂದು ಒದ್ದ ಕದ ಕುಣಿಗಲ್ ಕರೆಯಲ್ಲಿ ಬಿದ್ದು ತೇಲುತ್ತಿತ್ತಂತೆ. ಆಗಲಿಂದ ಇಲ್ಲಿನ ರಂಗಸ್ವಾಮಿಗೆ ಬಾಗಿಲೇ ಇಲ್ಲವಾಗಿದೆ. ಇಲ್ಲಿಗೆ ಯಾವುದೇ ಕಳ್ಳಕಾಕರು ನುಗ್ಗಿ  ಹುಂಡಿ ಒಡೆಯುವ ಧೈರ್ಯ ಮಾಡಿಲ್ಲವಂತೆ. ಇನ್ನೊಂದು ತಮಾಷೆ ವಿಷಯ ಹೇಳಿಯೇ ಬಿಡುತ್ತೇನೆ; ದೇವಸ್ಥಾನದ ಪೂಜಾರಿ ಮಡಿಯಿಂದ ತಾಮ್ರದ ಬಿಂದಿಗೆಯಲ್ಲಿ ನೀರು ಹೊತ್ತು, ಪ್ರಸಾದಕ್ಕೆ ತಳಿಗೆ ಮಾಡಿಕೊಂಡು, ಉಪವಾಸದಲ್ಲಿ ಪೂಜೆ ಮಾಡಲು ಅಸ್ ಹುಸ್ ಅಂತ ಏದುಸಿರು ಬಿಡುತ್ತಾ ಬೆಟ್ಟದ ಮೆಟ್ಟಲು ಹತ್ತುತ್ತಿದ್ದನಂತೆ. ಆಗ ತಕ್ಷಣ ದೇವರು ಅವನ ಮುಂದೆ ಪ್ರತ್ಯಕ್ಷನಾಗಿ ʼನೋಡಯ್ಯ, ನೀನು ಹೀಗೆಲ್ಲ ಉಪವಾಸ ಮಾಡಿಕೊಂಡು ಸುಸ್ತಾಗಿ ಪೂಜೆ ಮಾಡಿದರೆ ನಿನ್ನ ನೋಡಲು ನನಗೆ ಕಷ್ಟವಾಗುತ್ತೆ. ಒಂದು ಕೆಲಸ ಮಾಡು, ನಾಳೆಯಿಂದ ಚೆನ್ನಾಗಿ ಉಂಡು ಸಂತೃಪ್ತಿಯಾಗಿ ಅನಂತರ ಬಂದು ನನಗೆ ಪೂಜೆ ಮಾಡುʼ ಎಂದು ಮಾಯವಾದನಂತೆ. ಆ ದೇವರು ಎಷ್ಟೊಂದು ಕರುಣಾಮಯಿ ಅಲ್ಲವೆ? ಇಂಥ ಕಥೆ ಕೇಳಲು ಎಷ್ಟೊಂದು ಚೆಂದ.

ಇನ್ನು ಯುಗಾದಿ ಹಬ್ಬದ ಮರುದಿನ ಹೊಸತೊಡಕು ಹಬ್ಬಕ್ಕೆ ಮುಸ್ಲಿಮರ ಅಂಗಡಿಯಲ್ಲೇ ಹಿಂದೂಗಳು ಮಾಂಸ ಖರೀಸುತ್ತಾರೆ. ಮುಸ್ಲಿಮರ ವಿರುದ್ಧ ಇಡೀ ಹಿಂದೂ ಸಮಾಜ ತಿರುಗಿಬಿದ್ದಿದೆ ಎಂಬುದು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುಲು ಬಿತ್ತುತ್ತಿರುವ ಕೋಮು ವಿಷಬೀಜವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷಗಳು ಜಾತಿ ಆಧಾರದ ಮೇಲೆ ಒಡೆದು ಮತ ಬ್ಯಾಂಕ್ ಮಾಡಿಕೊಳ್ಳಲು ಹೋದರೂ ಇವತ್ತಿಗೂ ಇಂಥ ಊರಿನ ಹಳ್ಳಿಗರು ಅದಕ್ಕೆ ಜಗ್ಗಿಲ್ಲ. ಹಳ್ಳಿಯ ಜನ ಸಹಬಾಳ್ವೆಯಿಂದಲೇ ಇದ್ದಾರೆ, ಇರುತ್ತಾರೆ. ಅದನ್ನು ಮುರಿಯಲು ಸಾಧ್ಯವಿಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್