ಊರಲ್ಲಿ ಕುಂಞಣ್ಣ ಬ್ಯಾರಿನ ಕೇಳಿ ಮದುವೆ ತಯಾರಿ ನಡಿತಿತ್ತು!

preethi story

ಊರಿಗೊಬ್ಬ ಇದ್ದ ಮುಸ್ಲಿಂ ವ್ಯಾಪಾರಿ ಕುಂಞಿ ಬ್ಯಾರಿ ಸಾಲ ಕೊಡಲು ಒಪ್ಪಿದ್ರೆ ಬಡ ಹಿಂದೂಗಳ ಮನೆಗಳಲ್ಲಿ ಮದುವೆ ನಡೆಯುತ್ತಿತ್ತು. ಆಗ ಶ್ರೀಮಂತ ಜಮೀನ್ದಾರರ ಮನೆಗಳಲ್ಲಿ ಮಾತ್ರ ಜೀಪು ಇರೋದು. ಹಾಗಾಗಿ ಕೃಷಿ ಉತ್ಪನ್ನಗಳನ್ನು ಮನೆಗೇ ಬಂದು ಖರೀದಿ ಮಾಡುವ ಕುಂಞಿ ಬ್ಯಾರಿಗೆ ಮಾರೋದು ಸಾಮಾನ್ಯವಾಗಿತ್ತು. ಕುಂಞಿಬ್ಯಾರಿ ಊರಿನವರ ಪಾಲಿಗೆ ಕುಂಞಣ್ಣ!

ನಾನು ಬಾಲ್ಯ ಕಳೆದ ಊರು ಸುಳ್ಯದ ಗುತ್ತಿಗಾರು ಗ್ರಾಮದ ವಳಲಂಬೆ. ಸರ್ಕಾರಿ ಉದ್ಯೋಗದಲ್ಲಿದ್ದ ಅಪ್ಪ ವರ್ಗಾವಣೆಯ ಕಾರಣ ಅವಿಭಜಿತ ದಕ್ಷಿಣ ಕನ್ನಡದ ಊರೂರು ಸುತ್ತಿ ಇನ್ನೇನು ಅಣ್ಣಂದಿರಿಗೆ ಮದುವೆಯಾಗುವ ವಯಸ್ಸಾಯಿತು, ಒಂದು ಕಡೆ ನೆಲೆಯೂರಬೇಕು ಎಂದು ನಿರ್ಧರಿಸಿ ನಮ್ಮವರೇ ಹೆಚ್ಚು ಇರುವ ಸುಳ್ಯಕ್ಕೆ ಬಂದು ಜಮೀನು ಕೊಂಡು ಮನೆ ಕಟ್ಟಿದ್ದರು. ಅದು 1984ರ ಇಸವಿ, ಅದಾಗಿ ಮೂರೇ ವರ್ಷದಲ್ಲಿ 1987ರಲ್ಲಿ ಅಪ್ಪ ಮೂಡಬಿದರೆಯಲ್ಲಿ ಡ್ಯೂಟಿಯಲ್ಲಿದ್ದಾಗಲೇ ಹೃದಯಾಘಾತದಿಂದ ನಿಧನರಾದರು.

ಆ ಊರಿನಲ್ಲಿ ಆಗ ಅಡಿಕೆ ತೋಟಗಳಿಗಿಂತ ಹೆಚ್ಚಾಗಿ ಭತ್ತದ ಗದ್ದೆಗಳಿದ್ದವು. ಆಗಿನ್ನೂ ಸ್ಪಿಂಕ್ಲರ್‌ ವ್ಯವಸ್ಥೆ ಬಂದಿರಲಿಲ್ಲ. ಮಳೆಗಾಲದಲ್ಲಿ ಒಂದು ಬೆಳೆ ಭತ್ತ ಅಷ್ಟೇ ಬೆಳೆಯೋದು, ಬೇಸಿಗೆಯಲ್ಲಿ ಮಂಗಳೂರು ಸೌತೆಕಾಯಿ, ಸಿಹಿಗೆಣಸು, ಹಸಿಮೆಣಸು ಬೆಳೆಯೋರು. ಆಗಷ್ಟೇ ಕೇರಳದ ಕ್ರಿಶ್ಚಿಯನ್ನರು (ಊರಲ್ಲಿ ಅವರನ್ನು ಕೊಚ್ಚಿಯವರು ಅಂತ ಕರಿತಿದ್ರು) ಖಾಲಿ ಜಮೀನುಗಳನ್ನು ಲೀಸಿಗೆ ಕೊಂಡು ಶುಂಠಿ, ಮರಗೆಣಸು ಬೆಳೆಯುತ್ತಾ ಕ್ರಮೇಣ ಗುಡ್ಡಗಳನ್ನು ಖರೀದಿಸಿ ರಬ್ಬರ್‌ ಎಸ್ಟೇಟ್‌ ಮಾಡಲು ಶುರು ಮಾಡಿದ್ದರು. ಅದೇ ಸಮಯದಲ್ಲಿ ಅಡಿಕೆ ತೋಟಗಳಿಗೆ ಸ್ಪಿಂಕ್ಲರ್‌ ನೀರಾವರಿ ಪದ್ಧತಿ ಚಾಲ್ತಿಗೆ ಬಂತು. ಗದ್ದೆಗಳೆಲ್ಲ ಅಡಿಕೆ ತೋಟಗಳಾದವು. ಖಾಲಿ ಜಾಗಗಳಲ್ಲಿ ರಬ್ಬರ್‌ ತೋಟಗಳು ತಲೆಯೆತ್ತಿದವು.

ಅಡಿಕೆ ಜೊತೆ ಬಾಳೆ, ತೆಂಗು, ಕಾಳುಮೆಣಸು, ಕೋಕೋ ಅಂತರ ಬೆಳೆಯಾಗಿ ಬೆಳೆಯುತ್ತಿದ್ದರು. ಈಗ ಊರಿಗೆ ಹೋದರೆ ಕಗ್ಗಾಡಿಗೆ ಹೋದ ಅನುಭವವಾಗುತ್ತದೆ. ಎಲ್ಲಿ ನೋಡಿದರೂ ಅಡಿಕೆ ಮತ್ತು ರಬ್ಬರ್‌ ತೋಟ. ಗದ್ದೆ ಬೇಸಾಯ ನಿಂತು ಹೋಗಿ ಎರಡ್ಮೂರು ದಶಕಗಳೇ ಕಳೆದಿವೆ. ಈಗ ಊರು ತುಂಬಾ ಬೈಕು, ಕಾರು ಜೀಪುಗಳದ್ದೇ ಸದ್ದು. ಅಡಿಕೆ, ರಬ್ಬರ್‌, ಕಾಳುಮೆಣಸು ಬೆಳೆದವರಿಗೆ ಹಣಕ್ಕೇನೂ ಕೊರತೆಯಿಲ್ಲ. ಆದರೆ ಮೂರೂವರೆ ದಶಕಗಳ ಹಿಂದೆ ಆ ಊರು ಹೇಗಿತ್ತು ಗೊತ್ತಾ?

ಕುಂಞಣ್ಣ ಸಾಲ ಕೊಡಲು ಒಪ್ಪಿದ್ರೆ ಮದುವೆ

ಊರಿಗೊಬ್ಬ ಇದ್ದ ಮುಸ್ಲಿಂ ವ್ಯಾಪಾರಿ ಕುಂಞಿ ಬ್ಯಾರಿ ಸಾಲ ಕೊಡಲು ಒಪ್ಪಿದ್ರೆ ಬಡ ಹಿಂದೂಗಳ ಮನೆಗಳಲ್ಲಿ ಮದುವೆ ನಡೆಯುತ್ತಿತ್ತು. ಆಗ ಊರಿಗೊಂದು ಜೀಪು ಇದ್ದರೆ ಹೆಚ್ಚು. ಶ್ರೀಮಂತ ಜಮೀನ್ದಾರರ ಮನೆಗಳಲ್ಲಿ ಮಾತ್ರ ಜೀಪು ಇರೋದು. ಹಾಗಾಗಿ ಅಡಿಕೆ ಸೇರಿದಂತೆ ಎಲ್ಲಾ ಕೃಷಿ ಉತ್ಪನ್ನಗಳನ್ನು ಮನೆ ಮನೆಗೆ ಬರುವ ಕುಂಞಿ ಬ್ಯಾರಿಗೆ ಮಾರೋದು  ಸಾಮಾನ್ಯವಾಗಿತ್ತು. ಕುಂಞಿಬ್ಯಾರಿ ಊರಿನವರ ಪಾಲಿಗೆ ಕುಂಞಣ್ಣ! ಅಷ್ಟೇ ಅಲ್ಲ ಆಪದ್ಬಾಂಧವ. ವಳಲಂಬೆಯ ಟಾರು ರಸ್ತೆಯ ಬದಿ ಸರ್ಕಾರಿ ಜಾಗದಲ್ಲಿ ಪುಟ್ಟ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಸುಮಾರು ಐವತ್ತರ ಆಸುಪಾಸಿನ ಈ ವ್ಯಾಪಾರಿ ಬಾಯಿತುಂಬ ಎಲೆಯಡಿಕೆ ತುಂಬಿಕೊಂಡು, ಕಂಕುಳಲ್ಲಿ ಒಂದು ಗೋಣಿಚೀಲ ಸಿಕ್ಕಿಸಿಕೊಂಡು ಬರುತ್ತಿದ್ದರು. ನೋಡಲು ಕಡು ಬಡವನಂತೆ; ಮಾಸಿದ ಶರ್ಟು, ದೊಡ್ಡ ಪಟ್ಟೆಯ ಲುಂಗಿ, ತಲೆಗೊಂದು ಟವಲ್‌ ಸುತ್ತಿಕೊಂಡು ಕುಂಞಿಬ್ಯಾರಿ ಬೆಳಿಗ್ಗೆ ಮನೆ ಬಿಟ್ಟರೆ ಇಡೀ ಊರು, ಗದ್ದೆ, ಬೈಲು ಅಂತ ಎಲ್ಲಾ ಮನೆಗಳಿಗೆ ಹೋಗಿ ಚೂರುಪಾರು ಕೃಷಿ ಉತ್ಪನ್ನ ಖರೀದಿಸಿ ರಾತ್ರಿಯೇ ಮನೆ ಸೇರೋದು. ಆ ಕಾಳದಲ್ಲಿ ಸಂಗ್ರಹಿಸಿದ ಉತ್ಪನ್ನವನ್ನು ಮಂಗಳೂರಿಗೆ ಕಳಿಸಬೇಕಿತ್ತು. ಅದು ಬಿಟ್ಟರೆ ಗುತ್ತಿಗಾರಿನ ದೊಡ್ಡ ಅಂಗಡಿಗೆ ಅಥವಾ ವ್ಯಾನಿನಲ್ಲಿ ಹಾಕೊಂಡು ಸುಳ್ಯಕ್ಕೆ ಕೊಂಡೊಯ್ದು ಮಾರಬೇಕಿತ್ತು.

ನೋಡಲಷ್ಟೇ ಅಲ್ಲ, ನಿಜಕ್ಕೂ ಬ್ಯಾರಿಯ ಬಳಿ ಹಣ, ಜಮೀನು ಏನೂ ಇರಲಿಲ್ಲ. ಆದರೂ ಕುಂಞಣ್ಣ ಬ್ಯಾರಿ ಎಂದರೆ ಇಡೀ ಊರಿಗೆ ಭರವಸೆ. ಆತನ್ನು ಕೇಳಿಯೇ ಊರಿನ ಬಡ, ಮಧ್ಯಮ ವರ್ಷದ ಗೌಡರು ತಮ್ಮ ಮಕ್ಕಳಿಗೆ ಮದುವೆ ಮಾಡುತ್ತಿದ್ದರು!  ಇಡೀ ಊರಿನಲ್ಲಿ ನಾಲ್ಕು ಮನೆ ಬಿಟ್ಟರೆ ಉಳಿದವರೆಲ್ಲ ಕೆಳಮಧ್ಯಮ ಮತ್ತು ಬಡ ವರ್ಗದ ರೈತರು. ಹೆಚ್ಚು ಓದಿದವರು, ಉದ್ಯೋಗದಲ್ಲಿದ್ದವರು ನಮ್ಮಪ್ಪ ಮತ್ತು ಮೂವರು ಅಣ್ಣಂದಿರು. ಅದು ಬಿಟ್ರೆ ಎಲ್ಲರೂ ಕೃಷಿ, ಕೂಲಿಕಾರ್ಮಿಕರು. ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ  ಪ್ರಾಯಕ್ಕೆ ಬಂದ ಮಕ್ಕಳ ಮದುವೆಗೆ ಸಿದ್ಧತೆ ಶುರುವಾಗುತ್ತಿತ್ತು. ಯಾರ ಬಳಿಯೂ ಕೂಡಿಟ್ಟ ದುಡ್ಡಿಲ್ಲ. ಎಲ್ಲರಿಗೂ ಇರುವುದು ಕುಂಞಣ್ಣ ಎಂಬ ಬ್ಯಾಂಕು.
ಹೆಣ್ಣು ನೋಡಲು ಗಂಡಿನ ಮನೆಯವರು, ಗಂಡು ನೋಡಲು ಹೆಣ್ಣಿನ ಮನೆಯವರು ಬಂದು ಹೋಗಿ ಎಲ್ಲ ಓಕೆ ಆಯ್ತು ಎನ್ನುವಾಗ ಜವಳಿ -ಚಿನ್ನ ಖರೀದಿಗೆ ಕುಂಞಣ್ಣ ಹಣ ಒದಗಿಸುವ ಭರವಸೆ ನೀಡಿದರೆ ಮದುವೆ ಸಾಂಗವಾಗಿ ನಡೆದಷ್ಟೇ ನೆಮ್ಮದಿ. ಮುಂದಿನ ವರ್ಷದ ಅಡಿಕೆ ಫಸಲು ಕುಂಞಣ್ಣರಿಗೆ ಕೊಡುವ ಬಾಯಿಮಾತಿನ ಒಪ್ಪಂದ ಅಷ್ಟೇ. ಅಗ್ರಿಮೆಂಟ್‌ ಅಂತೇನೂ ಇಲ್ಲ. ಪರಸ್ಪರ ನಂಬಿಕೆ. ಜನರೂ ನಂಬಿಕೆದ್ರೋಹ ಮಾಡುತ್ತಿರಲಿಲ್ಲ. ಬ್ಯಾರಿಯೂ ಅಷ್ಟೇ ಸ್ವಲ್ಪ ತಡವಾದರೆ ಸಿಟ್ಟು ಮಾಡುತ್ತಿರಲಿಲ್ಲ. ಯಾವಾಗ ಜವಳಿ ಖರೀದಿಗೆ ಹೋಗಬೇಕು, ಯಾವಾಗ ಚಿನ್ನ ಖರೀದಿ ಎಂದು ಕುಂಞಣ್ಣ ಹೇಳಬೇಕು. ಆ ದಿನ ಬಾಡಿಗೆ ಜೀಪಿನಲ್ಲಿ ಮದುವೆ ಮನೆಯವರು ಶಾಪಿಂಗ್‌ಗೆ  ಹೊರಡಬೇಕು ಅಷ್ಟೇ. ಹಣ ಹೊಂದಿಸಿ ಕೊಡೋದು ಕುಂಞಣ್ಣರ ಜವಾಬ್ದಾರಿ.

Image
Nature 1

ಮತ್ತೊಬ್ಬರು ಒಣಮೀನು ಮಾರುವ ಬ್ಯಾರಿ ಬರುತ್ತಿದ್ದರು. ಅವರಿಂದ ತಿಂಗಳಿಗಾಗುವಷ್ಟು ಮೀನು ಖರೀದಿಸಿ ಕೆಲವರು ತಕ್ಷಣ ಹಣ ಕೊಟ್ಟರೆ, ಮತ್ತೆ ಕೆಲವರು ಮುಂದಿನ ಸಲ ಎನ್ನುತ್ತಿದ್ದರು. ಮತ್ತೆ ಕೆಲವರು ಗೇರುಬೀಜವೊ, ಅಡಿಕೆಯೋ ಕೊಟ್ಟು ಕಳುಹಿಸುತ್ತಿದ್ದರು. ಹಗಲು ಗಂಡಸರು ಮನೆಯಲ್ಲಿ ಇರುತ್ತಿರಲಿಲ್ಲ, ಹೆಂಗಸರ ಬಳಿ ಹಣ ಇಲ್ಲ. ಏನಾದರೂ ಮಾಡಿ ಒಣಮೀನು ಖರೀದಿ ಮಾಡದೇ ಬಿಡುತ್ತಿರಲಿಲ್ಲ.
ಸೌದೆ ಸೀಳುವ ಸಾವ್ಕಾರ!
ಬೇಸಿಗೆ ಮುಗಿಯುತ್ತಾ ಬಂತು ಎನ್ನುವಾಗ ಮಳೆಗಾಲಕ್ಕೆ ಸೌದೆ ಕೂಡಿಡುವುದು ಮಳೆ ಪ್ರದೇಶಗಳಲ್ಲಿ ದೊಡ್ಡ ಕೆಲಸ. ಆಗ ಕಟ್ಟಿಗೆ ಒಲೆ ಮಾತ್ರ ಇದ್ದವು. ಹಾಗಾಗಿ ಆರು ತಿಂಗಳ ಮಳೆಗಾಲಕ್ಕೆ ಬೇಕಾಗುವಷ್ಟು ಸೌದೆ ಸಂಗ್ರಹಿಸಿಡುವುದು ರೂಢಿ. ಹೆಂಗಸರು ಮಕ್ಕಳನ್ನು ಕಟ್ಟಿಕೊಂಡು ಬಂಟಮಲೆ ಕಾಡಿಗೆ ಹೋಗಿ ಸೌದೆ ತರುವುದು ದಿನದ ಪ್ರಮುಖ ಕೆಲಸ. ತಮ್ಮೆದೇ ಜಮೀನಿನಲ್ಲಿದ್ದ ಮರ ಕಡಿದು ದಿಮ್ಮಿಗಳನ್ನು ಸೀಳಿ ಸೌದೆ ಮಾಡಿಡುವುದೂ ಇತ್ತು. ಹೀಗೆ ನಮ್ಮ ಮನೆಗೆ ದಿಮ್ಮಿಗಳನ್ನು ಕೊಡಲಿಯಿಂದ ಸೀಳಿ ಸೌದೆ ಮಾಡಲು ಬ್ಯಾರಿಯೊಬ್ಬರು ಬರುತ್ತಿದ್ದರು. ಅವರು ಊರ ಹೊರಗಿನಿಂದ ಬರೋರು. ಹಾಗಾಗಿ ಮಧ್ಯಾಹ್ನದ ಊಟ, ಸಂಜೆ ಟೀ ತಿಂಡಿ ನಮ್ಮ ಮನೆಯಲ್ಲೇ ಮಾಡುತ್ತಿದ್ದರು. ಮನೆಯೊಳಗೆ ಕೂರಿಸಿ ಅಮ್ಮ ಊಟ ಹಾಕುತ್ತಿದ್ದರು. ಬ್ಯಾರಿ ಎಂಬ ತಿರಸ್ಕಾರ ಯಾರ ಮನಸ್ಸಿನಲ್ಲೂ ಇರಲಿಲ್ಲ.  ಅವರ ಧರ್ಮ ಅವರಿಗೆ, ನಮ್ಮದು ನಮಗೆ ಎಂಬುದು ಸಾರ್ವತ್ರಿಕ ಭಾವನೆಯಾಗಿತ್ತು. ನಮ್ಮ ಅಮ್ಮನನ್ನು ಸೌದೆ ಸೀಳುವ ಬ್ಯಾರಿ ಅಕ್ಕಾ ಎಂದೇ ಕರೆಯುತ್ತಿದ್ದರು. ಅವರನ್ನು ಅಮ್ಮ ಸೇರಿದಂತೆ ಊರವರೆಲ್ಲ ಸಾವ್ಕಾರ ಎಂದೇ ಕರೆಯುತ್ತಿದ್ದೆವು. ಅವರ ಹೆಸರನ್ನು ಯಾರೂ ಕೇಳೇ ಇಲ್ಲ. ವ್ಯಾಪಾರಕ್ಕೆ ಬರುವ ಬ್ಯಾರಿಗಳನ್ನು ಸಾವ್ಕಾರ ಎಂದು ಕರೆಯುವುದು ಸಾಮಾನ್ಯವಾಗಿತ್ತು. ಸೌದೆ ಒಡೆಯುವ ಸಾವ್ಕಾರ ಈಗಲೂ ಬದುಕಿದ್ದಾರಂತೆ. ಅವರನ್ನು ನೋಡಿ ಮೂರು ದಶಕವೇ ಕಳೆದಿದೆ. ಈಗಲೂ ನಮ್ಮ ಮನೆಯವರು ಯಾರಾದರೂ ಸಿಕ್ಕರೆ ಎಲ್ಲರನ್ನೂ ವಿಚಾರಿಸೋರಂತೆ.

ಇದೆಲ್ಲ 80-90ರ ದಶಕದ ಕತೆ. ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿಯ ಸಂಘಟನೆ ಶುರು ಆಗಿತ್ತು. ಆಗ ಸಂಘ ಪರಿವಾರದವರಿಗೂ ಮುಸ್ಲಿಮರನ್ನು ದ್ವೇಷ ಮಾಡಬೇಕು ಎಂದಾಗಲಿ, ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂದಾಗಲಿ ಇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಬೇಕು ರಾಮಮಂದಿರ ಕಟ್ಟಬೇಕು ಅಷ್ಟೇ ಇತ್ತು. ಸರ್ಕಾರಿ ಶಾಲೆಯ ಅಂಗಳದಲ್ಲಿ ಆರ್‌ಎಸ್‌ಎಸ್‌ ನವರು ಸೇರಿಕೊಂಡು  ಅದೇನೋ ಹಾಡು ಹೇಳುವುದು ಕೇಳಿಸುತ್ತಿತ್ತು ಎಂಬುದು ಬಿಟ್ಟರೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. 1992ರಲ್ಲಿ ಪೇಜಾವರ ಶ್ರೀಗಳ ಕಾರು ಸುಳ್ಯದ ಮೂಲಕ ಮೈಸೂರಿಗೆ ಹಾದು ಹೋಗುವಾಗ ಪೈಚಾರು ಎಂಬಲ್ಲಿ ಮಕ್ಕಳು ಆಟವಾಡುತ್ತ ಎಸೆದ ಕಲ್ಲೊಂದು ಸ್ವಾಮಿಗಳ ಹಿಂದೆ ಇದ್ದ ಅವರದೇ ವ್ಯಾನಿನ ಮೇಲೆ ಬಿತ್ತು. ಇದನ್ನೇ ಬಿಜೆಪಿಯವರು ಸ್ವಾಮಿಗಳ ಕಾರಿಗೆ ಬ್ಯಾರಿಗಳು ಕಲ್ಲು ಹೊಡೆದರು ಅಂತ ಗುಲ್ಲೆಬ್ಬಿಸಿ ಪಟ್ಟಣದಲ್ಲಿ ಬಿಜೆಪಿಯವರು ಮೆರವಣಿಗೆ ಆಯೋಜಿಸಿದ್ದರು. ಮೆರವಣಿಗೆ ಸಾಗಿದ ಪೇಟೆಯಲ್ಲಿ  ಮುಸ್ಲಿಮರ ಅಂಗಡಿಗಳಲ್ಲಿದ್ದ ವಸ್ತುಗಳನ್ನು ದೋಚಿ ನಂತರ ಬೆಂಕಿ ಹಚ್ಚಿದವರು ಬಿಜೆಪಿಯ ಕಾರ್ಯಕರ್ತರು. ಆಗ ಸುಳ್ಯ ಬಿಜೆಪಿಯ ಅಧ್ಯಕ್ಷರಾಗಿದ್ದರು ಡಿ ವಿ. ಸದಾನಂದ ಗೌಡ. ಅದಾಗಿ ಮೂರು ದಶಕ ಸಂದಿದೆ. ಈಗಲೂ ನನ್ನೂರು ಕೇಸರಿಮಯ, ಆದರೆ ಆ ಊರಿನಲ್ಲಿ ಹಿಂದೂ ಮುಸ್ಲಿಂ ಜಗಳವಾಗಲಿ, ಧರ್ಮದ ಕಾರಣಕ್ಕೆ ಕೊಲೆಯಂಥ ದುರ್ಘಟನೆಗಳಾಗಲಿ ನಡೆದ ಉದಾಹರಣೆ ಇಲ್ಲ.

Image
sullia town

ಅಡಿಕೆ ಮಾರೋದು, ಮೀನು ಕೊಳ್ಳೋದು ಬ್ಯಾರಿಯ ಅಂಗಡಿಯಿಂದಲೇ
ಸುಳ್ಯ ತಾಲ್ಲೂಕು ಕೇಂದ್ರದಲ್ಲಿ ಹಿಂದೂಗಳಿಗೆ ಸರಿಗಟ್ಟುವಷ್ಟು ಮುಸ್ಲೀಮರ ಅಂಗಡಿಗಳಿವೆ. ದ್ವೇಷದ ಅಭಿಯಾನಗಳಿಗೆ ಸುಳ್ಯದ ಜನ ಕಿಮ್ಮತ್ತೇ ಕೊಟ್ಟಿಲ್ಲ. ಸುಳ್ಯದ  ಕಟ್ಟಾ ಆರೆಸ್ಸೆಸ್ ಕಲಿಗಳೂ, ಬಿಜೆಪಿಯ ಪ್ರಮುಖ ನಾಯಕರೂ, ಕಾರ್ಯಕರ್ತರೂ, ಕೋಮುವಾದಿ ಬ್ರಾಹ್ಮಣರೂ ಅಡಿಕೆ ಮಾಡುವುದು ಮಾತ್ರ ಬ್ಯಾರಿಯ ಅಂಗಡಿಗೆ. ಬೇರೆಯವರಿಗಿಂತ 2 ರೂಪಾಯಿ ಜಾಸ್ತಿ ಕೊಟ್ಟು ಅಡಿಕೆ ಖರೀದಿ ಮಾಡ್ತಾರೆ. ಅಡಿಕೆ ಮಾರಿ ಮನೆಗೆ ಹೋಗುವಾಗ ಮೀನು ಕೊಳ್ಳುವುದು ಬ್ಯಾರಿಯ ಅಂಗಡಿಯಿಂದ.

ಬಿಎಫ್‌ ಫ್ಯಾನ್ಸಿ ಶಾಪ್‌ ಮತ್ತು ಚಪ್ಪಲಿ ಅಂಗಡಿ ಕಳೆದ 30 ವರ್ಷಗಳಿಂದ ಇದೆ. ಅಲ್ಲಿ ಸಿಗದ ವಸ್ತುವೇ ಇಲ್ಲ. ಹಿಂದೂಗಳ ಮದುವೆಯಲ್ಲಿ ಮದುಮಗಳಿಗೆ ಬೇಕಿರುವ ಎಲ್ಲಾ ಆಲಂಕಾರಿಕ ವಸ್ತುಗಳೂ ಅಲ್ಲಿಸಿಗುತ್ತದೆ. ಗೌಡರ ಮದುವೆಯಲ್ಲಿ ʼಕಳಸ-ಕನ್ನಡಿʼ ಬಹಳ ಮಹತ್ವದ್ದು. ಮದುಮಕ್ಕಳನ್ನು ಶಾಸ್ತ್ರಗಳಿಗೆ ಕರೆದೊಯ್ಯುವಾಗ ಯುವತಿಯೊಬ್ಬಳು ಕಳಸ ಹಿಡಿದು ಮುಂದೆ ಸಾಗಬೇಕು. ಮದುಮಗಳು ಧಾರೆ ಮಂಟಪಕ್ಕೆ ಹೋಗುವಾಗ ಹಿಡಿಯುವ ಕಳಸ ಕನ್ನಡಿಯಲ್ಲಿ ಒಂದು ಜೊತೆ ಕಪ್ಪು ಬಳೆ, ಚಿಕ್ಕದೊಂದು ಕುಂಕುಮ ಡಬ್ಬಿ, ಮರದ ಬಾಚಣಿಗೆ, ಅಂಗೈ ಅಗಲದ ಕನ್ನಡಿ… ಹೀಗೆ ಕೆಲವು ಸಾಮಗ್ರಿಗಳಲ್ಲಿ ಇಡುವುದು ಸಂಪ್ರದಾಯ. ಯಾವ ಜನರಿಗೆ ಏನು ಬೇಕೋ ಅದನ್ನು ಗಮನಿಸಿ ಪೂರೈಕೆ ಮಾಡುವ ಈ ಮಳಿಗೆ ಸುಳ್ಯದ ನಿವಾಸಿಗಳ ನೆಚ್ಚಿನ ತಾಣ. ಕನ್ನಡ, ಅರೆಭಾಷೆ, ತುಳು, ಬ್ಯಾರಿ, ಮಲಯಾಳಂ ಹೀಗೆ ಬರುವ ಗ್ರಾಹರ ಭಾಷೆಯಲ್ಲಿಯೇ ಅವರು ವ್ಯವಹರಿಸುತ್ತಾರೆ. ಉಡುಗೊರೆ, ಸ್ಟೀಲ್ ಪಾತ್ರೆಗಳು ಸೇರಿದಂತೆ ಇಡೀ ಮನೆಗೆ ಬೇಕಿರುವ ವಸ್ತುಗಳು ಅಲ್ಲಿ ಲಭ್ಯ. ಯಾವುದೇ ಬಹಿಷ್ಕಾರದ ಕರೆಗೆ ಜನ ಕ್ಯಾರೇ ಅಂದಿಲ್ಲ, ಈಗಲೂ ಅಲ್ಲಿ ಜನಜಂಗುಳಿ ಇರುತ್ತದೆ.

ಇದನ್ನು ಓದಿದ್ದೀರಾ? ಪಠ್ಯಪುಸ್ತಕ ವಿವಾದ: ಮಹಿಳಾ ಸುಧಾರಕಿಯರನ್ನೇ ಕಿತ್ತೆಸೆದ ರೋಹಿತ್‌ ಚಕ್ರತೀರ್ಥ ಸಮಿತಿ

ಮೂರ್ನಾಲ್ಕು ದಶಕಗಳಿಂದ ಪಟ್ಟಣದ ಗಾಂಧಿನಗರದಲ್ಲಿರುವ ʼಜನತಾ ಸ್ಟೋರ್‌ʼ ದಿನಸಿ ಅಂಗಡಿಗೆ ಸುಳ್ಯ ಪಟ್ಟಣದವರು ಮಾತ್ರವಲ್ಲ ಹಳ್ಳಿಗಳಿಂದ ಜನ ಬರುತ್ತಾರೆ. ಪ್ರತಿದಿನ ಪೇಟೆಗೆ ಜೀಪು, ಕಾರಿನಲ್ಲಿ ಬರುವ ರೈತರು, ನೌಕರಿ ಮಾಡೋರು ಏನೇ ದಿನಸಿ ಬೇಕಿದ್ದರೆ ಹೋಗೋದು ಜನತಾಕ್ಕೆ. ಈಗಲೂ ಅಲ್ಲಿ ಲೆಕ್ಕ ಬರೆದಿಟ್ಟು ಯಾವಾಗಲೋ ಒಮ್ಮೆ ಹಣ ಪಾವತಿ ಮಾಡುವವರಿದ್ದಾರೆ. ದಿನಸಿ ಚೀಟಿ ಕೊಟ್ಟು ಯಾವಾಗ ಬೇಕು ಎಂದು ತಿಳಿಸಿದರೆ ಸಾಕು ನೇರವಾಗಿ ಕಲ್ಯಾಣಮಂಟಪದ  ಅಡುಗೆ ಮನೆಗೆ ದಿನಸಿ ಬಂದು ಬೀಳುತ್ತದೆ. ಅಷ್ಟು ನಿಯತ್ತು ಮತ್ತು ಸೇವಾ ಮನೋಭಾವ ಜನತಾದ ಮಾಲೀಕರದು. ಅದು ಮುಸ್ಲಿಮರ ಅಂಗಡಿ ಎಂದು ಹೋಗದಿರುವ ಹಿಂದೂ ಅಲ್ಲಿಲ್ಲ. ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ಮನೆ ಮನೆಗೆ ದಿನಸಿ ತಲುಪಿಸಿದವರು ಜನತಾದವರು. ಹಾಗೆಯೇ ಅಲ್ಲಿನ ಹಿಂದೂಗಳ ಪ್ರಮುಖ ಬಟ್ಟೆ ಅಂಗಡಿಗಳಿಗೆ ಮುಸ್ಲಿಮರೇ ಪ್ರಮುಖ ಗ್ರಾಹಕರು.

ಕೊಬ್ಬಿದ ರಾಜಕಾರಣಿಗಳಷ್ಟೇ ದ್ವೇಷದ ಕರೆಗಳನ್ನು ಕೊಡಬಹುದು. ಆದರೆ ಮೂರು ದಶಕಗಳಿಂದ ನಮ್ಮೂರಲ್ಲಿ ಬಿಜೆಪಿಯೇ ಪಾರಮ್ಯ ಮೆರೆಯುತ್ತಿದ್ದರೂ, ಮುಸ್ಲಿಂ ದ್ವೇಷ ವ್ಯಾಪಾರ- ವಹಿವಾಟು ಬಹಿಷ್ಕರಿಸುವ ಮಟ್ಟಕ್ಕೆ ಹೋಗಿಲ್ಲ ಎಂಬುದು ಈ ಕ್ಷಣದ ನೆಮ್ಮದಿ.

ನಿಮಗೆ ಏನು ಅನ್ನಿಸ್ತು?
2 ವೋಟ್