ಸೂಫಿ ಸಂತ ಹಜ್ರತ್ ಜೂಬಲೇವಲಿ ಕೆತ್ತಿದ ನಮ್ಮೂರು

sufi

ನಮ್ಮೂರಿನದು ಒಂದು ಜಾತಿ ಆದ. ಅದು ಮಾನವ ಕುಲ್ದ ಜಾತಿ. ಊರಿಂದು ಒಂದೇ ಒಂದು ಧರ್ಮ ಆದ, ಅದು ಮನುಷ್ಯರ ಧರ್ಮ ಅನ್ನೋ ತರ ಇದೆ. ಇದೆಲ್ಲಾ ಸುಮ್ ಸುಮ್ನೆ ಆದಂತದಲ್ಲ. ಕಾರಣ, ಕಾರುಣ್ಯದ ಪ್ರೇಮ ಸಂತನ ಪ್ರೇಮದ ಬುಗ್ಗೆಯ ಚಿಲುಮೆಯಿಂದ ಹೊರಹೊಮ್ಮಿದ ನೀರಿನ ಪ್ರಭಾವ.

ನಾನು ಕಂಡ ನಮ್ಮೂರು ಇಂದಿಗೂ ಮತ್ತು ಎಂದೆಂದಿಗೂ ಮಾಸದ ನೆನಪುಗಳು. ಈ ಸೃಷ್ಟಿ ರಹಸ್ಯದ ಬಗ್ಗೆ ಬಲ್ಲವರು ಬಹಳ ಜನ ಹೇಳ್ಯಾರ ಬಿಡು. ಆದ್ರ ಕೇವಲ ಈ ಭೂಮಿಗೆ ಬಂದು ಹೋಗುವುದೇ ಆಗಿದೆ. ಜೀವನದ ಅರ್ಥ ಏನೋ ಬೇರೆನೆ ಇರಬಹುದು ಅಂತ ಊಹಿಸಿ, ಹುಡುಕಿದಂತ ಆ ಅಲ್ಲಮನ ಸಮಾನ ಮನಸ್ಕ ನಮ್ಮೂರಿನ ಸೂಫಿ ಸಂತ ಹಜ್ರತ್ ಜೂಬಲೇವಲಿ. ಇದೇ ಸೂಫಿ ಸಂತನೇ ಕಂಡುಕೊಂಡು ಕೆತ್ತಿದ ಊರು ನಮ್ಮೂರು.

ಅಬ್ಬಾ! ರೋಚಕ ನನಗೂ. ಅವನು ದೂರದ ವಿಜಯಪುರ ಜಿಲ್ಲೆಯ ಹತ್ತಿರ ತನ್ನ ಗುರುಗಳ ಅಪ್ಪಣೆಯಂತೆ ಅವನಿಗೆ ಪ್ರಿಯವಾದ ಈಗಿನ ಈ ಗೂಗಲ್ ಗ್ರಾಮದ ಅಲ್ಲಮನ ಕುರುಹಿನ ತಾಣವನ್ನು ಸ್ಪರ್ಶ ಮಾಡಿ ಬಂದು, ಅದು ನಮ್ಮೂರಲ್ಲೇ ನೆಲೆನಿಂತು ತನ್ನನ್ನು ತಾನೇ ಖಾನಕ ಮಾಡಿಕೊಂಡು ಊರು ಬೆಳಿಸಿದ್ದು. ಈಗಿನ ಸೌಹಾರ್ದತೆ ಸಹಬಾಳ್ವೆ ಕದಡುವ ಹೇತ್ಲಾಡಿಗಳಿಗೆ ಏನು ಗೊತ್ತು!? ಎದೆ ಸೆಟೆದು ಊರಲ್ಲಿ ಸಹಬಾಳ್ವೆ ಸಮಾನತೆಯ ಹಾದಿ ಹಿಡಿದ ಈ ಸಂತನ ಊರಿನ ಜನಗಳ ಬಗ್ಗೆ ತುಂಬಾ ಹೆಮ್ಮೆ ಅನ್ಸುತ್ತೆ.

ಮೊಹರಂ ಹಬ್ಬವಂತೂ, ಸರ್ವ ಜನಾಂಗದ ಶಾಂತಿಯ ತೋಟ ಅನ್ನೋ ತರ ನಡಿಯುತ್ತೆ. ಅಂದು ಆ ತೋಟದಲ್ಲಿ ಎಲ್ಲಾ ಜಾತಿ ಜನಾಂಗದವರು ಸೇರಿ ಸಹಬಾಳ್ವೆ ಅಂದ್ರೆ ಇದೇ ನೋಡೆಂದು ಹೊರಜಗತ್ತಿಗೆ ಸಂದೇಶ ಕಳಸಿದಂಗ ಇರ್ತದ. ಆ ಕರ್ಬಲ್ ಹಿನ್ನೆಲೆ ಗೊತ್ತೂ ಇಲ್ಲ ಅನ್ನೋ ತರ, ಅದನ್ನ ಬದಿಗೆ ಸರಿಸಿ, ಮೊಹರಂ ಹಬ್ಬ ಅಂದ್ರ ನಮ್ಮೂರ ಜೂಬಲೇವಲಿ ಸಂತನ ಹಬ್ಬ, ಅವನ ದರ್ಗಾದ ಸುತ್ತ ಹಬ್ಬಿದ ಜಾನಪದ ಕಥೆಗಳ ಬಳ್ಳಿಯೇ ಈ ಮೊಹರಂದಾಗ ಅನಾವರಣಗೊಂಡು, ನೆಲದ ಮಣ್ಣಿನ ನೆನಪು ಮಳಿ ಬಂದ ವಾಸನೆ ತರ ಪರಿಮಳ ಸೂಸುತ್ತಾ ಇರ್ತದ ಊರಲ್ಲಿ.

ಇನ್ನಾ, ಮತ್ತೊಂದು ಪ್ರಮುಖ ಆಕರ್ಷಣೆ ಊರಬ್ಬ ಅಂದ್ರೆ ದ್ಯಾವಮ್ಮನ ಜಾತ್ರೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಊರಬ್ಬನಾ, ನಾನು ಒಬ್ಬ ನಾಸ್ತಿಕದ ಒಲವುಳ್ಳವ ಇದ್ದರೂ ಕೂಡ, ಸಾಮರಸ್ಯದ ಸಹಬಾಳ್ವೆ, ಸಮನ್ವಯದ ಬೇರುಗಳು ನನಗ ಕಾಣತಾವ ಇದರಲ್ಲಿ. ಊರಲ್ಲಿ ಮೊಹರಂ, ದ್ಯಾವಮ್ಮನ ಜಾತ್ರೆ ಹಬ್ಬ, ಮತ್ತೊಂದು ಮಗದೊಂದು, ಜಾತ್ರಿ-ಜಮತಿ ಆಗಿರಲಿ, ಮದುವಿ-ಗಿದಿವಿ, ಕಾರಣ-ಕರ್ತ ಏನೇ ಇರಲಿ ಅಲ್ಲಿ ಊರಿನ ಹಿರಿಮೇಟಿ, ಚಿಕ್ಕಮೇಟಿ, ಮ್ಯಾಗೇರಿ, ಕೆಳಗ್ಯೇರಿ ಅಂತ ನಾಲ್ಕು ಹಿರಿತನದ ಜವಾಬ್ದಾರಿ ಕುಟುಂಬ ಬಂದು ಮುಂದ ನಿಂತಾಗಲೇ ಅದು ನೆರವೇರ್ತದ.

Image
ಮೊಹರಂ ದೇವರು
ಅಲಾಯಿ ದೇವರು

ಮತ್ತs ಈ ಹಿರಿತನದ ಕುಟುಂಬ ಅಂದ್ನಲ್ಲ, ಮ್ಯಾಗೇರಿ ಕೆಳಗ್ಯೇರಿ ಕಬ್ಬಲಿಗೇರು ಇದ್ದರ, ಚಿಕ್ಕಮೇಟಿ ಉನ್ನತ ಕುಲಕ್ಕೆ ಆದ. ಇಲ್ಲೊಂದು ವಿಶೇಷ ಅಂದ್ರೆ ಹಿರಿಮೇಟಿ ಗೌಡ್ರು ಮುಸ್ಲಿಂ ಸಮುದಾಯದವರು. ಈ ಸೌಹಾರ್ದತೆ ಕಲ್ಪಿಸಿದ್ದು ಗತದ ನಮ್ಮೂರಿನ ಸೂಫಿ ಸಂತ ಎಂಬ ನಂಬಿಕೆ ಊರಲ್ಲುಂಟು. ಊರಿನ ಜನಾನೂ ಕೂಡ, ಜಾನಪದ ಮಹಾಸಾಗರದ ಆಳಕ್ಕೆ ಇಳಿದು, ಅದರ ಗಾಢ ಗಾಂಭೀರ್ಯ ಕಂಡವರು.

ಇತ್ತೀಚಿನ ವರ್ತಮಾನದ ಗಾಳಿ, ಟಿವಿದಾಗ ಹಿಂದೂ ಮುಸ್ಲಿಂ ಅಂತ ಏನೇನೋ ಪುಂಗೀ ಊದುತ್ತಾ ಇದ್ದಾರಲ್ಲಾ ಅಂತ ಊರಿನ ಮಸೀದಿ ಮೌಲ್ವಿ ಗುರುವಿನ ಜೊತೆಗೆ ಒಂದು ದಿನಾ ಜೀವನದ ತುಣುಕುಗಳನ್ನ ಹಂಚಿಕೊಂಡಿದ್ಯಾ. 'ಮಂದಿರ ಮಸೀದಿ ಒಡೆದರೆ ಮತ್ತೆ ಕಟ್ಟಬಹುದು ಆದ್ರೆ ಮಾನವೀಯತೆ ಮಸೀದಿ ಒಡಿಬಾರದು' ಅಂತ ಹೇಳಿದ್ದು ನನಗೆ ಇನ್ನೂ ಅವಾಗಾವಾಗ ಗುಂಯ್ ಗುಡಿಸುತ್ತಿರುವಂತದ್ದು. ಊರಿನ ಸಮುದಾಯದ ನೆಮ್ಮದಿಗೆ ಈ ಪ್ರೇಮ ಕಾರುಣ್ಯದ ಅಗತ್ಯನ ಅತ್ಯಗತ್ಯ ಅಂಬೋದನ್ನ ಅನುಭೂತಿಯಿಂದ ಮನಗಂಡು ಕಟ್ಟಿಕೊಟ್ಟ ಊರು ಬಿಡು ನಮ್ದು. ಹೊರಜಗತ್ತಿನ ಕೆಲವು ಹೊಲಸು ಮನ್ಸುಗಳು, ಲಬ್ಗುಟ್ಟಿ ಹೊಯ್ಕೊತಾ ಇವೆ .

ಆದ್ರೆ ಊರಲ್ಲಿ ನಿಜಕ್ಕೂ ಅನುಭಾವದ ಅಲೆಗಳ ಮೇಲೆ ತೇಲಿದ ಜನರಿವರು ಅನ್ನೋ ತರ, ಆದರೆ ನಿಜದ ನೆಲದ ಮೇಲೆ ನಡೆದಾಡಿದ ಸಿಂಹಾವಲೋಕನದ ಶಕ್ತಿ ಅಂತೂ ಇದೆ. ಮನುಕುಲ ಒಂದೇ ಎಂದು ನಂಬಿ ಬದುಕಿದ, ಬದುಕುತ್ತಿರುವ ಜನಪದದ ಜನರಿವರು. ಈ ಕಬ್ಬಲಿಗೇರು, ಮುಸ್ಲಿಮರು, ಲಿಂಗಾಯತರು, ದಾಸರು-ಡಂಬರು, ಮಾದರು-ಹೊಲೇರು ಸಮುದಾಯಗಳು ಇವರೇನ ಅನ್ಸುತ್ತೆ. ಅಣ್ಣಾ ತಮ್ಮ, ಮಾಮ ಅತ್ತಿ, ಚಿಕ್ಕಪ್ಪ ಚಿಕ್ಕವ್ವ, ದೊಡ್ಡಪ್ಪ ದೊಡ್ಡಮ್ಮ, ಗೆಳೆಯ (ದೋಸ್ತಾ) ಈ ಪದಗಳು ಎಲ್ಲಾ ಜಾತಿ ಜನರಲ್ಲಿ ಪರಸ್ಪರ ತೂರ್ಯಾಡುವ ಅಕ್ಷರಗಳು. ಇವರ ಸಹಬಾಳ್ವೆಯ ಮುಂಜಾನೆ ಮತ್ತು ಸಂಜೆ ನೆನಪಿಸಿಕೊಂಡಾಗ ಕಾಲಮಾನದ ಪ್ರಭಾವದ ಭೂಮಿಕೆಯಲ್ಲಿ ರಚನೆಗೊಂಡ ಈ ಜಾತಿವ್ಯವಸ್ಥೆಗೆ ಮತ್ತು ಧರ್ಮದ ಪದರುಗಳಿಗೆ ವಿಭಿನ್ನ ಪ್ರತಿಕ್ರಿಯೆ ಬರ್ತಾನೇ ಇರುತ್ತೆ.

ನಮ್ಮೂರಿನದು ಮಾನವ ಕುಲ್ದ ಜಾತಿ

ನಮ್ಮೂರಿನದು ಒಂದು ಜಾತಿ ಆದ. ಅದು ಮಾನವ ಕುಲ್ದ ಜಾತಿ. ಊರಿಂದು ಒಂದೇ ಒಂದು ಧರ್ಮ ಆದ, ಅದು ಮನುಷ್ಯರ ಧರ್ಮ ಅನ್ನೋ ತರ ಇದೆ. ಇದೆಲ್ಲಾ ಸುಮ್ ಸುಮ್ನೆ ಆದಂತದ್ದು ಅಲ್ಲಾ. ಕಾರಣ, ಕಾರುಣ್ಯದ ಪ್ರೇಮ ಸಂತನ ಪ್ರೇಮದ ಬುಗ್ಗೆಯ ಚಿಲುಮೆಯಿಂದ ಹೊರಹೊಮ್ಮಿದ ನೀರಿನ ಪ್ರಭಾವ. ಈ ವಾಯ್ದೆನ ಮುರುದು ಬದುಕಿದ್ರ ಆ ಜೂಬಲೇವಲಿ ತನ್ನ ಶಕ ತೋರುಸ್ತಾನ ಅಂತಾವ ಊರಿನ ಮಂದಿ.ಇದು ಫಕೀರನ ಊರಾದ, ಇಲ್ಲಿ ಅವನದೇ ಪಾರಂಪರ್ಯ ಅದಾ ಅಂತಾವ. ನಾನು-ಆತ ನೀವು ತಿಳ್ಕೊಂಡಂತೆ ದೇವರು ಅಲ್ಲೋ, ಆತ ತಾನು ತನ್ನನ್ನ ಸೇರಿಕೊಂಡು ಊರಿನ ಜನಗಳೆಲ್ಲನ ಹೃದಯದೊಳಗ ಪ್ರೇಮದ ದರಗ ಕಟ್ಟಮರಿ ಅಂತ ಹೇಳಿದವನು. ಅವನು ಸೀದಾ ಸಾದಾ ಮನುಷ್ಯ. ಅವನೇ ಅಸಾಮಾನ್ಯ ವ್ಯಕ್ತಿ ಇದ್ದದ್ದು. ಆತನ ಉನ್ನತ ಮಾನವ ಪ್ರೇಮದ ನುಡಿಗಳು ಅಂದ್ನೆನಂದ್ರ ಹೀಹೀಹೀ ಹಲ್ಲು ಕಿಸಿದು, ತುಂಬಾ ಶ್ಯಾಣೆ ಅಂತ ತನ್ನನ್ನ ತಾನೇ ತಿಳ್ಕೊಂಡಾನ ಅಂತ ಹೇಳಿದುವೇನ್, ಅಂತ ಹೇಳಿದಂಗ ಭಾಸ ಆಗ್ತದ ನನಗೆ. ಇರಲಿ, ಅದೇನೆ ಇದ್ರೂ ತಮ್ಮ ಬದುಕಿಗೆ ಬೇಕಾದ ದುಡಿಮೆ, ಮನರಂಜನೆ, ವಿಶ್ರಾಂತಿ ಮಾರ್ಗ ಕಂಡುಕೊಂಡು ಅನುಭಾವದ ಆಧಾರದ ಮೇಲೆ ಬದುಕ್ತಾ ಇರೋರು. ನಮ್ಮ ಜೀವನ ನಿಸರ್ಗದಷ್ಟೇ ಸಹಜ ಅನ್ನೋ ತರ ಇದೆ.

ನಾನು ಅವಾಗಾವಾಗ ಈ ಹಿರಿತಲಿಮಾರೂ ಮುದುಕ್ರುನಾ ಮಾತ್ ಆಡಿಸ್ತಾ ಇರ್ತೀನಿ. ಮೊನ್ನೆ ಒಬ್ಬ ಮುಸ್ಲಿಂ ಸಮುದಾಯದ ಹಿರಿಕನು. ಅವರ ಕುಟುಂಬ ನಮ್ಮ ಕುಟುಂಬ ಬದುಕಿನ ರೊಟ್ಟಿ ಹಂಚಿಕೊಂಡು ತಿಂದಾರ. ಆತಗ ದ್ದೊಡ್ಡಪ್ಪ ಅಂತೀನಿ. ಅವರು ದಿಢೀರ್ ಎದುರಿಗೆ ಆದಾಗ, ಮಗ ಖುಷಿ ಆತದೋ ನಿನ್ನ ನೋಡಿದ್ರ ಅಂದ. ದೊಡ್ಡಪ್ಪ ನಿಮ್ಮ ಆಶೀರ್ವಾದ ಅಂತ ಹೇಳಿದೆ ನಾ. ಅದು ಇದು, ಪುರಾಣ ಗಿರಾಣ ಹತ್ತು ನಿಮಿಷ ಹೇಳಿದ. ಆದರೆ, ಅವರಾಡಿದ ಎಲ್ಲಾ ಮಾತುಗಳ ಸಾರಾಂಶದ ನಂತರ ಅವರ ಉಪಸಂಹಾರದ ಮಾತುಗಳು ಅವರ ಧ್ವನಿ ಮರೆಯಾದ ನಂತರವೂ ಹೊಟ್ಯಾಗ ಸೇರಿಸ್ಕೋಬೇಕಾದಂತ ಸಾಲುಗಳು. ಕಳೆದ ನಿನ್ನೆ ಕತ್ತಲು, ಬರುವ ನಾಳೆ ಬೆತ್ತಲು, ಯಾವ ಗುರಿ ಏನ್ ಗೊತ್ತಾತದ, ಈ ಹೊತ್ತು ಮಾತ್ರ ನಮ್ದು ಮಗ ಅಂದದ್ದು ಎದಿಗಿ ನಾಟುವಂತವು. ಎಲ್ಲೊ ದಕ್ಕಿದ ಅಕ್ಷರ, ನವ ಪುರೋಹಿತ ಖಾದಿ-ಖಾಕಿ ವೇಷದಲ್ಲಿ ಬಹುರೂಪಿಯಾಗಿರುವುದು ನೋಡಾ. ಮಂದಿರ, ಮಸೀದಿ, ಶಿಲ್ಪ, ಸೌಧಗಳನ್ನು ಧರ್ಮಾಂಧತೆಯಲ್ಲಿ ಕೋಮು ಕಂಟಕರು ದ್ವಂಸಗೊಳಿಸುವರಯ್ಯ. ಅದು ಈಗ ಮತ್ತೆ ಧುತ್ತೆಂದು ಮೇಲೆದ್ದು ಆರ್ಭಟ ನಡೆಸುತ್ತಿರುವ ಈಗಿನ ಘಟ್ಟದಲ್ಲಿ, ಅಸಹಿಷ್ಣುತೆ ತುಂಬಾ ನಡಿತಾ ಇದೆ. ಇವತ್ತಿನ ದಿನಮಾನದಲ್ಲಿ ನನಗೆ ರಾಜಕೀಯ ಒಗ್ಗುತ್ತಿಲ್ಲ ಅನ್ನಲಾರೆ. ಮನುಷ್ಯ ರಾಜಕಾರಣನ ಅಲ್ಪ ಸ್ವಲ್ಪ ಗೊತ್ತು ಅನ್ನೋನು ನಾನು. ನನ್ನೊಳಗೆ ಅಷ್ಟೊಂದು ಆಕ್ರೋಶನಾ ಇಟ್ಕೊಂಡವನು.

ದೇಶದ ಸಂಪನ್ಮೂಲ, ನಮ್ಮ ಹಳ್ಳಿ ಹೈಕ್ಳು  ವಂಚಿತ ಆಗ್ತಾ ಇದ್ದೀವಿ ಅಂತಾವ ಕೆಲವು ನನ್ನ ಡೇರೆ ಹುಡುಗರು. ಅವರಿಗೆ ನಾನು ಹೇಳ್ತಾ ಇರ್ತಿರ್ತಿನಿ. ಮಾನವ ಕುಲ್ದ ಇತಿಹಾಸ ಸುಮ್ಮನೆ ಕಣ್ಣು ಹಾಯಿಸಿ. ಅದು ಭದ್ರಾ ಆಗಿದಿನಾ ಅಂತ, ಗಣಿತದ ಲೆಕ್ಕಾಚಾರ ಎಲ್ಲಕ್ಕೂ ಉತ್ತರ ನಿಖರ ಇವೆ ಏನು? ನಮ್ಮೂರಿನಿಂದಲೇ ಈ ನಮ್ಮ ದೇಶ ಕಟ್ಟಮರಿ ಅಂತೀನಿ. ಕಂಡದ್ದು, ಕೇಳಿದ್ದು, ನೋಡಿದ್ದು, ಓದಿದ್ದು, ಅನುಭವಿಸಿದ್ದಲ್ಲದೇ ಕಲ್ಪನಾಕಾರ ನನಗೆ ನಮ್ಮೂರು. ಊರಿನ ಜನರದ್ದು ಕೇವಲ ಅಕ್ಷರ ಶಿಕ್ಷಣವಲ್ಲ, ಲೋಕಾನುಭವದ ಶಿಕ್ಷಣ ಐತೀ.

ಸೂಫಿ ಶರಣರ ಗಾಳಿ

ಊರಲ್ಲಿ ದಟ್ಟವಾಗಿ ತನ್ನ ವಿಚಾರಧಾರೆ ಪಸರಿಸಿಕೊಂಡು ಊರಿನ ಒಂದು ದಿಕ್ಕಿಗೆ ತಾನಿದ್ದಾಗ ಲೋಕಾನುಭವ ಸ್ಥಳದಲ್ಲಿ ಒಂದು ದರಗ ಇದ್ರೆ, ಆತನದೇ ಸಮಾಧಿ ಮತ್ತೊಂದು ಸ್ಥಳವೂ ಕೂಡ ಭವ್ಯ ದರಗ ತಲೆ ಎತ್ತಿ ನಿಂತದ್ದು ಒಂದು ಇತಿಹಾಸ. ಇಡೀ ಊರನ್ನೇ ನಾನು ಒಳಗೆ ಮಾಡಿಕೊಂಡು ಇದ್ದೀನಿ ಅಂತ ಹೇಳ್ಯಾನ ತಾತ, ಅಂತಾವ ಹಿರಿಕರು. ಮರಣವನ್ನು ಗೆದ್ದು, ನಾನು ಅಂತ್ಯಗೊಂಡಿಲ್ಲ. ಅನಂತವಾಗೀನಿ ಅಂತ ಹೇಳಿದಂಗ ಊರಲ್ಲಿ ಆ ಸೂಫಿ ಶರಣನ ಗಾಳಿ ಬೀಸ್ತಾನೇ ಇರುತ್ತೆ.

ಇದನ್ನು ಓದಿದ್ದೀರಾ? ಮಸೀದಿಯಿಂದ ಹೊರಡುವ ಆಝಾನ್‌ ಅವ್ವನ ಗಡಿಯಾರವಾಗಿತ್ತು

ಈ ಗಾಳಿ ಕುಡದೇ ಇರಬಹುದು, ಸಹ ಬಾಳುವೆಯ ಬದುಕು ತುಂಬಾ ದಟ್ಟವಾಗಿ ಹೆಬ್ಬಂಡೆ ಆಗಿದೇ ಅನ್ನಿಸದೆ ಇರಲಾರದು. ಊರ ಸೂಫಿ ಮತ್ತು ಸೂಫಿಸಂ ಅಂದ್ರೆ ಜೀವ ಪ್ರೇಮ, ಜೀವ ಪ್ರೇಮ ಅಂದ್ರೆ ಸೂಫಿಸಂ.ಈ ನುಡಿಗಟ್ಟಿನಲ್ಲಿ ತನ್ನನ್ನು ತಾನೇ ಸಿಗಿಸಿಕೊಂಡ ಸೂಫಿ ಸಂತ ಹಜ್ರತ್ ಜೂಬಲೇ ಸಾಬ್ ನ ತವರೂರು, ತವರ ವಡಗೇರಾ ನಮ್ಮೂರು ಆಗಿದೆ. ಭಕ್ತಿ ಭಾವ ಆದ, ಬದುಕಿನ ವಾಸ್ತವ ಕೂಡ ಮರೆಂಗಿಲ್ಲ. ಪ್ರಕೃತಿಯ ಪ್ರೀತಿ ಅದಾ, ದಾಂಪತ್ಯದ ಸೂತ್ರ ಹೇಳಿಕೊಟ್ಟಾನ, ನಡೆ ನುಡಿ ಸಮನ್ವಯದಾಗ ಕೆಲ್ಸದ ಮಹತ್ವ ಏನು ಅಂತ ಹೇಳ್ಯಾನ. ಇಂತಹ ಅರ್ಥ ಪೂರ್ಣ ಬದುಕು ಅಗತ್ಯದ ಜೀವನ ಸೂತ್ರ ಅನಸರಿಸಕತ್ತಾರ. ಮಾಡದಿಂದ ಉದುರುವ ತುಂತುರು ಮಳೆ ಹನಿಗಳ ತರ ಊರಂದ್ರೆ ನನಗೆ, ಯಾಕೆಂದ್ರೆ ಆ ಹನಿಗಳು ಸಹಬಾಳ್ವೆ, ಸಮನ್ವಯ, ಸೌಹಾರ್ದತೆಯವು. ತುಂಬಾ ಖುಷಿ ಆತದ ಅದರಲ್ಲಿ ತೋಯ್ಸಿಕೋದು. ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯೂ ನಾಳೆಗೇ....ನಮಗೂ ಅದರಲ್ಲಿ ಬುತ್ತಿ ಅಂತೂ ಆದ.

ಹುಟ್ಟಿ ಬೆಳೆದ ಊರಿನ ಬಗ್ಗೆ, ಹಳ್ಳಿಗಳ ಪರಿಚಯ ಇದ್ದವರಿಗೆ ಮಾತ್ರ ಪ್ರಜ್ಞೆ ಮೂಡಲು ಸಾಧ್ಯ ಇವೆಲ್ಲ. ಕೊನೆಯದಾಗಿ, ಹಳ್ಳಿಗಳ ಜೀವನಕ್ಕೆ ಭದ್ರತೆ ಒದಗಿಸಬೇಕು. ನಮ್ಮೂರಿನಂಥ ಸಂಸ್ಕೃತಿಗೆ ತಕ್ಕ ಮನ್ನಣೆ ನೀಡ್ಲಿಲ್ಲ ಅಂದ್ರ ನಮ್ಮ ದೇಶ ಮಣ್ಣು ಮುಕ್ಕಿ ಹೋತಾದ. ಇದು ಗ್ಯಾರಂಟಿ. ತನ್ನ ಗರ್ಭದಲ್ಲಿ ಮುಚ್ಚಿಕೊಂಡ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸೌಹಾರ್ದತೆ, ಸಹಬಾಳ್ವೆ ನಡೆಸಿದ, ನಡೆಸುತ್ತಿರುವ ಕುರುಹುಗಳು ಸಾಕಷ್ಟಿವೆ.

ನಿಮಗೆ ಏನು ಅನ್ನಿಸ್ತು?
2 ವೋಟ್