ಫಾರೂಕ್‌ ರಕ್ತ ಉಳಿಸಿದ್ದು ಜೀವವನ್ನಷ್ಟೇ ಅಲ್ಲ, ಸೌಹಾರ್ದತೆಯ ಪರಂಪರೆಯನ್ನು!

farooq and basavaraja

ತನ್ನ ತಂದೆಗೆ ರಕ್ತದ ಅವಶ್ಯಕತೆ ಇರುವ ವಿಷಯವನ್ನು ಪರಿಚಯಸ್ತರಿಗೆಲ್ಲ ತಿಳಿಸಿ ರಕ್ತದಾನ ಮಾಡುವವರಿಗಾಗಿ ಅಭಿಷೇಕ್ ಕಾದಿದ್ದನು. ಆದರೆ ಯಾರ ಪ್ರತಿಕ್ರಿಯೆಯೂ ಸಿಗಲಿಲ್ಲ. ಅದೇ ಸಮಯಕ್ಕೆ ಆಶ್ಚರ್ಯವೆಂಬಂತೆ ಸಹಾಯಕ್ಕೆ ಮುಂದಾಗಿದ್ದು ಅವನ ಹಳೆಯ ಗೆಳೆಯ ನವಾಜ್‌ನ ತಂದೆ ಫಾರೂಕ್, ಜೀವದ ಜೊತೆಗೆ ಉಳಿದದ್ದು ಸೌಹಾರ್ದ ಪರಂಪರೆ

ಮಲ್ಲಾಪುರ ಎಂಬ ಒಂದು ಸಣ್ಣ ಊರು. ಅಲ್ಲಿ ಹಲವಾರು ಕುಟುಂಬಗಳು ಅದರಲ್ಲಿ ಎರಡು ಕುಟುಂಬಗಳು ಮಾತ್ರ ನನಗೆ ವಿಶೇಷವೆನಿಸಿದ್ದು. ಯಾಕೆಂದರೆ ಆ ಎರಡೂ ಕುಟುಂಬದ ನಡುವೆ ಸೌಹಾರ್ದತೆಯಿತ್ತು ಮತ್ತು ಯಾವುದೇ ಬೇದಭಾವದ ಚಹರೆಗಳಿರಲಿಲ್ಲ. ಸುತ್ತಲೂ ಕೋಮುಗಲಭೆಗಳೇ ನಡೆಯುತ್ತಿರುವಾಗ ಈ ಸಮಾಜದಲ್ಲಿ ಅಂತರ್ಧರ್ಮೀಯರ ನಡುವಿನ ಸಂಬಂಧಗಳನ್ನು ನೋಡಿದಾಗ  ಮತ್ತು ಅನ್ಯೋನ್ಯವಾಗಿ ಬಾಳುತ್ತಿರುವ ಕುಟುಂಬಗಳನ್ನು ಕಂಡಾಗ ನನಗೆ ವಿಶೇಷವೆಂದೆನಿಸದೆ ಮತ್ತೇನು? ಅಂತರ್ಧರ್ಮೀಯ ಸಹೋದರ ಸಹೋದರಿಯರು ಸಿಕ್ಕಾಗ ಅಥವಾ ಗೆಳೆತನವಾದಾಗ ಸಂತಸದಿಂದ ಇನ್ನೊಬ್ಬರ ಬಳಿ ಹೇಳಿಕೊಳ್ಳುವುದಕ್ಕೂ ಧೈರ್ಯ ಇರುವುದಿಲ್ಲ ಯಾಕೆಂದರೆ ನಾವು ಈಗ ಬೇರೆಯವರಿಗೆ ಗೊತ್ತಾದರೆ ಏನಾಗುತ್ತದೋ ಎಂಬ ಭಯ ಹುಟ್ಟಿಸುವಂತಹ ಸಮಾಜದಲ್ಲಿದ್ದೇವೆ.

Eedina App

ಇಂತಹ ವಾತಾವರಣದ ನಡುವೆಯೂ ಹಿಂದೂ ಮುಸ್ಲಿಮರು ಒಂದೇ ಕುಟುಂಬದವರಂತೆ ಕೂಡಿ ಬಾಳುವ ಉದಾಹರಣೆಗಳು ಅಪರೂಪವಾಗಿ ಕೇಳಸಿಗುತ್ತವೆ. ಹೀಗಾಗಿಯೇ ನನಗೆ ಇಡೀ ಊರಿನಲ್ಲಿ ಈ ಎರಡು ಕುಟುಂಬಗಳು ‘ವಿಶೇಷ’. ಒಂದು ಕುಟುಂಬ ಮುಸ್ಲಿಂ ಸಮುದಾಯದ ಫಾರೂಕ್ ಅವರದ್ದು, ಮತ್ತೊಂದು ಕುಟುಂಬ ಹಿಂದೂ  ಸಮುದಾಯದ ಬಸವರಾಜರದ್ದು. ಎರಡು ಕುಟುಂಬದವರು ತುಂಬಾ ಅನೋನ್ಯವಾಗಿ ಒಂದೇ ಕುಟುಂಬದವರು ಎಂಬಂತೆ ಎಲ್ಲವನ್ನು ಹಂಚಿಕೊಂಡು, ಹಬ್ಬ ಹರಿದಿನಗಳಲ್ಲಿ ಭಾಗಿಯಾಗಿ, ಕಷ್ಟಸುಖಗಳಿಗಾಸರೆ ಆಗಿ ಇದ್ದರು. ಆ ಎರಡೂ ಮನೆಯಲ್ಲಿ ಇದ್ದದ್ದು  ಒಬ್ಬೊಬ್ಬ ಗಂಡು ಮಕ್ಕಳು. ಒಬ್ಬನ ಹೆಸರು ಅಭಿಷೇಕ್ ಮತ್ತು ಇನ್ನೊಬ್ಬ ನವಾಜ್. ಆ ಇಬ್ಬರು ಮಕ್ಕಳು ಬಹಳಾ ಒಳ್ಳೆಯ ಸ್ನೇಹಿತರು. ಸ್ನೇಹಕ್ಕಿಂತ ಸ್ವಂತ ಅಣ್ಣ ತಮ್ಮಂದಿರೆಂದೇ ಹೇಳಬಹುದು. ಇಬ್ಬರೂ ಒಂದೇ ಶಾಲೆಗೆ ಹೋಗುತ್ತಿದ್ದರು. ಹೀಗಾಗಿ ಅವರು ಮನೆಯಲ್ಲಿ ಶಾಲೆಯಲ್ಲಿ ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಇಬ್ಬರೂ ಬಿಡುವಿನ ಸಮಯದಲ್ಲಿ ಯಾವಾಗಲೂ ಆಡುತ್ತಿದ್ದದು ಕ್ರಿಕೆಟ್ ಆಟ. ಇಬ್ಬರೂ ಚತುರ ಆಟಗಾರರು. ಅವರಿಬ್ಬರಿದ್ದ ತಂಡಕ್ಕೇ ಯಾವಾಗಲೂ ಜಯ ಖಚಿತವಾಗಿರುತ್ತಿತ್ತು. ಎರಡು ಕುಟುಂಬದವರಿಗೂ ಅವರವರ ಧರ್ಮದ ಬಗ್ಗೆ ನಂಬಿಕೆ ಮತ್ತು ಪರ ಧರ್ಮದ ಬಗ್ಗೆ ಗೌರವ ಭಾವನೆ. ಎಷ್ಟು ಅನ್ಯೋನ್ಯವಾಗಿದ್ದರು ಎಂದರೆ, ರಂಜಾನ್ ಹಬ್ಬ ಬಂದರೆ ಬಿರಿಯಾನಿ ತಿನ್ನಲು ಬಸವರಾಜ್ ಕುಟುಂಬದವರು ಫಾರೂಕ್ ರವರ ಮನೆಗೆ ಹೋಗುತ್ತಿದ್ದರು, ಅದೇ ರೀತಿ ಯುಗಾದಿ ಹಬ್ಬಕ್ಕೆ ಫಾರೂಕ್ ಕುಟುಂಬದವರು ಬಸವರಾಜ್ ಕುಟುಂಬದವರ ಮನೆಗೆ ಒಬ್ಬಟ್ಟು ತಿನ್ನಲು ಬರುತ್ತಿದ್ದರು. ಇನ್ನು ಮಕ್ಕಳಿಗಂತೂ ಧರ್ಮದ ಬಗ್ಗೆ ಯಾವುದೇ ಯೋಚನೆ ಇಲ್ಲ. ತಮ್ಮ ಪಾಡಿಗೆ ತಾವು ಕ್ರಿಕೆಟ್ ಆಡಿಕೊಂಡು ಪಠ್ಯಾಭ್ಯಾಸ ಮಾಡಿಕೊಂಡು ಇರುತ್ತಿದ್ದರು.

ಒಂದು ಸಿನಮಾ ಎಂದರೆ ವಿಲನ್ ಇದ್ದೇ ಇರುವಂತೆ, ದೈವೀ ಶಕ್ತಿಯಿದೆಯೆಂದರೆ ದುಷ್ಟಶಕ್ತಿಗಳೂ ಇರುವಂತೆ, ಇಲ್ಲಿಯೂ ಸಹ ಊರಿನಲ್ಲಿ ಕೆಲವು ರಾಜಕೀಯ ಮತ್ತು ಜಾತಿ ಧರ್ಮದ ವಿಚಾರವಾಗಿ, ದುರಾಸೆಯಿಂದ ಒಳ ಸಂಚು ಮಾಡಿ ಈ ‘ಕೋಮು ದ್ವೇಷ’ ವೆಂಬ ಅನಿಷ್ಟವನ್ನು ಬಿತ್ತುವುದರಲ್ಲಿ ಕಿಡಿಗೇಡಿಗಳು ಯಶಸ್ವಿಯಾದರು. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತು ಎಂದರೆ, ಅಷ್ಟು ಅನ್ಯೋನ್ಯವಾಗಿದ್ದ ಆ ಎರಡು ಕುಟುಂಬಗಳ ನಡುವೆ ದ್ವೇಷವು ಮೊಳಕೆಯೊಡೆದಿತ್ತು. ಒಬ್ಬರಿಗೊಬ್ಬರು ಕಂಡರೆ ಆಗದಂತ ವಾತಾವರಣ ನಿರ್ಮಾಣವಾಯಿತು. ಕೋಮುದ್ವೇಷದ ಬೀಜಗಳು ಅಂತಹ ದೃಢ ಸಂಬಂಧಗಳ ನಡುವೆಯೇ ದ್ವೇಷದ ಮೊಳಕೆಯೊಡೆಯುತ್ತಿರುವಾಗ ಇನ್ನು ಮುಂದೆ ಜೀವನವನ್ನು ನಡೆಸಿಕೊಂಡು ಹೋಗಬೇಕಾದ ಯುವಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು?  ಒಂದೇ ತಂಡದಲ್ಲಿ ಕ್ರಿಕೆಟ್ ಆಡುತ್ತಿದ್ದ ಆ ಹುಡುಗರು ಧರ್ಮದ ಕಾರಣಕ್ಕೆ ಒಂದೊಂದು ತಂಡದಲ್ಲಿ ಆಡುವಂತಹ ಪರಿಸ್ಥಿತಿ ಬಂತು. ಒಟ್ಟಿಗೆ ಆಡುವಾಸೆ, ಅದರೆ ಕೋಮುದ್ವೇಷದ ವಾತಾವರಣದಿಂದ ನಿರಾಸೆ.

AV Eye Hospital ad

ರಕ್ತದಲ್ಲಿ ಹರಿದಿತ್ತು ಸೌಹಾರ್ದ ಸ್ನೇಹ:  ವೃತ್ತಿಯಲ್ಲಿ ಚಾಲಕರಾಗಿದ್ದ ಅಭಿಷೇಕ್‌ನ ತಂದೆ  ಅಪಘಾತಕ್ಕೊಳಗಾಗಿ ಸ್ಥಿತಿ ಗಂಭೀರವಾಯಿತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರು. ತೀವ್ರ ರಕ್ತಸ್ರಾವವಾದ ಕಾರಣ ಅನಿವಾರ್ಯವಾಗಿ ರಕ್ತದ ಅವಶ್ಯಕತೆ ಎದುರಾಯಿತು. ತಂದೆಗೆ ರಕ್ತ ನೀಡುವವರ ಅವಶ್ಯಕತೆ ಇತ್ತು. ಅಭಿಷೇಕ್ ತನ್ನ ಪರಿಚಯಸ್ತರಿಗೆಲ್ಲ ರಕ್ತದ ಅವಶ್ಯಕತೆಯ ವಿಷಯವನ್ನು ತಿಳಿಸಿ ರಕ್ತದಾನ ಮಾಡುವವರಿಗಾಗಿ ಕಾದಿದ್ದನು. ಸಮಯ ಮೀರುತ್ತಿತ್ತು ಆದರೆ ಯಾರ ಪ್ರತಿಕ್ರಿಯೆಯೂ ಸಿಗಲಿಲ್ಲ. ಅದೇ ಸಮಯಕ್ಕೆ ಆಶ್ಚರ್ಯವೆಂಬತೆ ಸಹಾಯಕ್ಕೆ ಮುಂದಾಗಿದ್ದು ಅವನ ಗೆಳೆಯ ನವಾಜ್‌ ತಂದೆ ಫಾರೂಕ್. ಅದೃಷ್ಟಕ್ಕೆ  ಅವರ ರಕ್ತದ ಗುಂಪು ಒಂದೇ ಆಗಿದ್ದರಿಂದ ನವಾಜ್ನ ತಂದೆಯೇ ರಕ್ತದಾನ ಮಾಡಲು ಆಸ್ಪತ್ರೆಗೆ ಧಾವಿಸಿದರು. ರಕ್ತ ನೀಡಿ ತನ್ನ ಹಳೇ ಸ್ನೇಹಿತನಾದ ಬಸವರಾಜರ ಪ್ರಾಣ ಉಳಿಸಿದರು.

ಇದನ್ನು ಓದಿದ್ದೀರಾ? ತೇಜಸ್ವಿ ನೆನಪು | ಸಂಭ್ರಮಿಸುವ ತೇಜಸ್ವಿ ಮತ್ತು ಅದರಾಚೆಯ ವೈಚಾರಿಕ ಪೂರ್ಣಚಂದ್ರ !

ಮತ್ತೆ ಅದೇ ಹಳೆಯ ವಾತವರಣ. ಎರಡೂ ಕುಟುಂಬವು ಚಿಗುರಿ ಬೆಳೆಯುತ್ತಿದ್ದ ದ್ವೇಷದ ಗಿಡವನ್ನು ಬೇರು ಸಮೇತ ಕಿತ್ತು ಹಾಕಿ ಪ್ರೀತಿಯ ಸಸಿ ನೆಟ್ಟರು. ಪುನಃ ನನಗೆ ಈ ಎರಡು ಕುಟುಂಬವು ಮತ್ತಷ್ಟು ವಿಶೇಷವೆಂದೆನಿಸಿತು. ಅಭಿಷೇಕ್‌ನ ತಂದೆಯ ಜೀವ ಮತ್ತು ಎರಡೂ ಕುಟುಂಬದವರ ಸಂಬಂಧ ಉಳಿಸುವ ರಕ್ತಕ್ಕೆ ಯಾವುದೇ ಧರ್ಮದ ಅಡಚಣೆ ಇಲ್ಲದೇ ಇದ್ದಾಗ ನಮ್ಮ ಜೀವನದಲ್ಲಿ ನಾವೇಕೆ ಧರ್ಮ ಧರ್ಮ ಎಂದು ಬಡಿದಾಡಬೇಕು? ಈ ರಾಜಕಾರಣಿಗಳ ಮತ್ತು ಧರ್ಮವಿರೋಧಿಗಳ ಕುತಂತ್ರಕ್ಕೆ ಬಲಿಯಾಗದೆ ಪ್ರತಿಯೊಬ್ಬರೂ ಯಾಕೆ ದೃಢವಾಗಿ ನಿಲ್ಲಬಾರದು?

ಈ ಘಟನೆಯ ನಂತರ ಮತ್ತೆ ಮೊಳಕೆಯೊಡೆದ ಅದೇ ಹಳೆಯ ಸೌಹಾರ್ದತೆ, ಹಲವಾರು ದಿನಗಳ ಅನಂತರ ಮತ್ತೆ ಅದೇ ಸಂತಸ, ನವಾಜ್ ಮತ್ತು ಅಭಿಷೇಕ್‌ ಕ್ರಿಕೆಟ್ ಆಟ, ಎರಡೂ ಕುಟುಂಬಗಳ ರಂಜಾನ್ ಮತ್ತು ವರಮಹಾಲಕ್ಷ್ಮಿ ಹಬ್ಬಗಳ ಆಚರಣೆ. ಮುಖ್ಯವಾಗಿ ಅವರು ದ್ವೇಷದ ಬಲೆಗೆ ಬಿದ್ದಿದ್ದಕ್ಕೆ ಪಶ್ಚಾತ್ತಾಪ ಮತ್ತು ಇನ್ಯಾವತ್ತೂ ಈ ತಪ್ಪಿಗೆ ಸಿಲುಕುವುದಿಲ್ಲ. ಯಾರ ಮೋಡಿಗೂ ಬಲಿಯಾಗುವುದಿಲ್ಲ ಎಂಬ ದೃಢ ನಂಬಿಕೆ ಮತ್ತು ನಿರ್ಧಾರ ಎರಡೂ ಕುಟುಂಬದಲ್ಲಿಯೂ ಬೇರೂರಿತ್ತು. ಅವರ ಸಂತೋಷವೇ ಇದಕ್ಕೆ ಸಾಕ್ಷಿಯಾಗಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app