ಓಣಿಯ ಜಗಳದ ಪಂಚಾಯ್ತಿ ಮಾಡ್ತಿದ್ಲು ನನ್ನಮ್ಮ

Panchaythi

ಓಣಿಯಲ್ಲಿ ಗಂಡ ಹೆಂಡತಿ ಜಗಳವಾದರೆ ತಮ್ಮ ಮಕ್ಕಳನ್ನು ಕಳಿಸಿ ನನ್ನಮ್ಮನನ್ನು ಕರೆಸಿಕೊಂಡು ಜಗಳದ ನ್ಯಾಯ ಪಂಚಾಯ್ತಿ ಮಾಡಿಸುತ್ತಿದ್ದರು. ಅಮ್ಮ.ನನ್ನು  ಪಂಚಾಯ್ತಿಗೆ ಹಿಂದು ಕುಟುಂಬಗಳೇ ಹೆಚ್ಚಾಗಿ ಕರೆಯುತ್ತಿದ್ದುದನ್ನು ನಾನು ಗಮನಿಸಿದ್ದೆ. ಓಣಿಯ ಹೆಂಗಸರ ಹೆರಿಗೆ ಸಮಯದಲ್ಲಿ ಸಹಕರಿಸುವುದರ ಮೂಲಕ, ಇಡೀ ಓಣಿಗೆ ನನ್ನಮ್ಮ ಅಮ್ಮನಾಗಿದ್ದಳು.

ನಾನು ಚಿಕ್ಕವಳಿದ್ದಾಗ ಮನೆಯಲ್ಲಿ ಬಡತನವಿತ್ತು, ಆದರೆ ಹೃದಯ ಶ್ರೀಮಂತಿಕೆಗೆ ಯಾವುದೇ ಬಡತನವಿರಲಿಲ್ಲ. ನಮ್ಮ ಪಕ್ಕದ ಮನೆಯ ಲಿಂಗಾಯತ ಕೋಮಿನ ಮಹಾದೇವಿ ನನ್ನ ಜೀವದ ಗೆಳತಿ. ನಮ್ಮ ಮನೆಯಲ್ಲಿ ಎಲ್ಲರೂ ಉರ್ದು ಮೀಡಿಯಂನಿಂದ ಕಲಿತರೆ, ಅಣ್ಣ ಮಾತ್ರ ಕನ್ನಡ ಮೀಡಿಯಂನಲ್ಲಿ ಓದುತ್ತಿದ್ದ. ಗೆಳತಿ ಮಹಾದೇವಿಯೂ ಕನ್ನಡ ಮೀಡಿಯಂನಲ್ಲಿ ಓದುತ್ತಿದ್ದುದರಿಂದ ನಾನೂ ಅವಳೊಂದಿಗೆ ಕನ್ನಡದಲ್ಲಿಯೇ ಓದುವೆನೆಂದು ಹಟ ಹಿಡಿದುದಕ್ಕೆ ನನಗೆ ಕನ್ನಡ ಮಾಧ್ಯಮದಲ್ಲಿಯೇ ಸೇರಿಸಿದರು. ಮನೆಯ ಮುಂದಿನ ನಲ್ಲಿಯಿಂದ ನಾನು ಮಹಾದೇವಿ ನೀರು ಹಿಡಿಯುತ್ತಿದ್ದೆವು. ನಾನು ಅವಳ ಕೊಡ ಮುಟ್ಟಿದರೆ ಸಾಕು ಸಿಡುಕುವ ಅವಳು, ‘ನೀವು ಖಂಡ ತಿಂತಿರಿ ಮುಟ್ಟಬ್ಯಾಡ’ ಎಂದು ತುಂಬಿದ ಕೊಡದ ನೀರು ಚರಂಡಿಗೆ ಸುರಿದು ಮತ್ತೇ ಕೊಡ ತುಂಬಿಕೊಳ್ಳುತ್ತಿದ್ದಳು. ಅದು ಮನೆಯವರ ಮುಂದೆ ತೋರಿಕೆಗಾಗಿತ್ತಷ್ಟೇ ಎಂಬುದಕ್ಕೆ ಮುಂದೆ ಆಕೆಯ ನಡವಳಿಕೆ ಸಾಕ್ಷಿ.

Eedina App

ಶಹಾಬಜಾರದ ನಾಕಾ ಸರ್ಕಾರಿ ಶಾಲೆಯಲ್ಲಿ ನಾವಿಬ್ಬರೂ ಓದುತ್ತಿದ್ದೆವು. ಊಟದ ಗಂಟೆ ಹೊಡೆದರೆ ಸಾಕು ಅವಳು ನನ್ನ ಊಟದ ಡಬ್ಬಿ ಖಾಲಿ ಮಾಡಿದರೆ, ನಾನು ಅವಳ ಊಟದ ಡಬ್ಬಿ ಖಾಲಿ ಮಾಡುತ್ತಿದ್ದೆ. ನಮ್ಮ ಗೆಳೆತನ ಹೇಗಿತ್ತೆಂದರೆ, ಅವಳು ಎರಡನೆಯ ತರಗತಿಯಾದರೆ, ನಾನು ಒಂದನೇ ತರಗತಿ. ಅವಳು ನನ್ನನ್ನು ಬಿಟ್ಟಿರಲಾರದೇ. ನನ್ನದೇ ಕ್ಲಾಸಿನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಳು. ಶಿಕ್ಷಕರು ಹೇಳಿ ಹೇಳಿ ಸಾಕಾಗಿ ಕೊನೆಗೆ ಅವಳನ್ನೇ ಎರಡನೇ ತರಗತಿಯಿಂದ ಒಂದನೇ ತರಗತಿಗೆ ಶಿಪ್ಟ್ ಮಾಡಿದರು. ಇದು ನಮ್ಮ ಗೆಳೆತನದ ಮಾದರಿಯಾಗಿತ್ತು.

ನನ್ನಮ್ಮ ಮತ್ತು ನನ್ನ ಗೆಳತಿ ಮಹಾದೇವಿಯ ಅಮ್ಮನೂ ಗೆಳತಿಯರಾಗಿದ್ದರು. ಅವರಿಬ್ಬರೂ ಮನೆಯ ಮುಂದಿನ ಕಟ್ಟೆಗೆ ಕೂತು ಬದುಕಿನ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ಮನೆಯ ಎದುರಿಗಿದ್ದ ಶ್ಯಾಣಮತ್ತಿ (ಶರಣಮ್ಮ) ಯಾವುದೇ ಹಬ್ಬ ಬಂದರೂ ತಾನು ಮಾಡಿದ ಸಿಹಿಯಾದ ಹೋಳಿಗೆ ತಟ್ಟೆ ತುಂಬ ಕಳಿಸುತ್ತಿದ್ದಳು. ರಂಜಾನ ಹಬ್ಬದ ಶ್ಯಾವಿಗೆ ಪಾಯಸ ಅಮ್ಮ ಅವರ ಮನೆಗೆ ಕಳಿಸುತ್ತಿದ್ದಳು. ಮೊಹರಂ ಹಬ್ಬಕ್ಕೆ ಆಶುರಖಾನೆಯಲ್ಲಿ ಅಲೈದೇವ್ರು ಕೂಡಿಸುತ್ತಿದ್ದರೆ, ಅಣ್ಣಪ್ಪ ಮಾಸ್ತರನ ಹೆಂಡತಿ ಬಸ್ಸಮ್ಮ ಅಲೈದೇವ್ರಿಗೆ ಸಕ್ಕರೆ ಓದಿಕೆ ಮಾಡಿಸುತ್ತಿದ್ದಳು. ಊದಿನ ಕಡ್ಡಿ , ಲೋಬಾನ ಉರಿಸಿದ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುತ್ತಿದ್ದಳು.

AV Eye Hospital ad

ಸಂಜೆ  ಹೊಲದಿಂದ ಹಿಂತಿರುಗಿದ ಪುರುಷರೆಲ್ಲ ಸೇರಿ ಅಲೈದೇವರ ಹವಾಲಾದ ಸುತ್ತ ಕುಣಿಯುತ್ತ, ಹಸನ್ ಹುಸೇನರ ಧೂಲಾ ಹಾಡುತ್ತಿದ್ದರು. ಅಲ್ಲಿ ನಮಗೆ ಜಾತಿ ಎಂದಿಗೂ ಅಡ್ಡ ಬರುತ್ತಿರಲಿಲ್ಲ. ಗುಲಬರ್ಗಾದ ಶರಣಬಸವೇಶ್ವರ ಜಾತ್ರೆಗೆ ನಾನು ಚಿಕ್ಕವಳಿದ್ದಾಗ ಅಪ್ಪ ಹೆಗಲ ಮೇಲೆ ಕೂಡಿಸಿಕೊಂಡು ಹೋಗುತ್ತಿದ್ದರು. ಜಾತ್ರೆಯ ಜನಜಂಗುಳಿಯಲ್ಲಿ ನಾನು ಕಳೆದು ಹೋಗಬಾರದೆಂದು ಅಪ್ಪ ಹಾಗೆ ಮಾಡುತ್ತಿದ್ದರು. ಖಾರಿಕ, ಬಾಳಿ ಹಣ್ಣನ್ನು ನಿಧಾನಕ್ಕೆ ಬರುತ್ತಿರುವ ರಥಕ್ಕೆ ಎಸೆದು ಧನ್ಯರಾಗುತ್ತಿದ್ದೆವು. ತೇರಿಗೆ ಎಸೆದ ಹಣ್ಣುಗಳನ್ನು ಕ್ಯಾಚ್ ಹಿಡಿದು ತಿನ್ನುತ್ತಿದ್ದೆವು. ಆಗ ನಮಗದು ಹಿಂದು ದೇವರೆಂದು ಅನಿಸಲೇ ಇಲ್ಲ.

ಓಣಿಯಲ್ಲಿ ಗಂಡ ಹೆಂಡತಿ ಜಗಳವಾದರೆ ತಮ್ಮ ಮಕ್ಕಳನ್ನು ಕಳಿಸಿ ಅಮ್ಮನನ್ನು ಕರೆಸಿಕೊಂಡು ಜಗಳದ ನ್ಯಾಯ ಪಂಚಾಯ್ತಿ ಮಾಡಿಸುತ್ತಿದ್ದರು. ಅಮ್ಮ.ನನ್ನು  ಪಂಚಾಯ್ತಿಗೆ ಹಿಂದು ಕುಟುಂಬಗಳೇ ಹೆಚ್ಚಾಗಿ ಕರೆಯುತ್ತಿದ್ದುದನ್ನು ನಾನು ಗಮನಿಸಿದ್ದೆ. ಓಣಿಯ ಹೆಂಗಸರ ಹೆರಿಗೆ ಸಮಯದಲ್ಲಿ ಸಹಕರಿಸುವುದರ ಮೂಲಕ, ಇಡೀ ಓಣಿಗೆ ನನ್ನಮ್ಮ ಅಮ್ಮನಾಗಿದ್ದಳು. ಮಕ್ಕಳಿಗೆ ಎಲ್ಲಿ ಹೋಗಿದ್ರಿ? ಅಂತ ಕೇಳಿದರೆ ʼಅಮ್ಮಾನ ಮನೆಗೆʼ ಎಂದು ಹೇಳುತ್ತಿದ್ದರು. ನಮ್ಮಮ್ಮ  ನಮಗಷ್ಟೇ ಅಮ್ಮನಾಗಿರದೇ ಇಡೀ ಓಣಿಗೆ ಅಮ್ಮನಾಗಿದ್ದಳು.

ಇದನ್ನು ಓದಿದ್ದೀರಾ? ಬಿಸ್ಮಿಲ್ಲಾಖಾನರು ಕಾಶಿ ವಿಶ್ವನಾಥನನ್ನು ಬಿಟ್ಟು ಹೋಗಲಿಲ್ಲ ...!

ಅಪ್ಪನಿಗೆ ಆರೋಗ್ಯ ಇಲಾಖೆಯಲ್ಲಿ ಸರ್ಕಾರಿ ಕೆಲಸವಿತ್ತು. ಹಾರ್ಮೊನಿಯಂ ನುಡಿಸುವುದು, ಹಾಡುವುದು ಅವರ ಹವ್ಯಾಸವಾಗಿತ್ತು. ಗೊಗ್ಗರು ಧ್ವನಿಯಲ್ಲಿ ಚುಟ್ಟಾ ಎಳೆಯುತ್ತ ಹಾಡುತ್ತಿದ್ದ ಅಪ್ಪನ ಜೀವದ ಗೆಳೆಯ ಬಸ್ಸಯ್ಯ ಸ್ವಾಮಿ. ಇಬ್ಬರೂ ಸೇರಿ ಗಂಟೆಗಟ್ಟಲೇ ಅನುಭಾವದ ಪದಗಳನ್ನು, ವಚನಗಳನ್ನು ಹಾಡುತ್ತಿದ್ದರು. ಇಬ್ಬರೂ ಸೇರಿ ಒಂದೇ ತಟ್ಟೆಯಲ್ಲಿ ಉಣ್ಣುತ್ತಿದ್ದರು. ಅಮ್ಮ ಬಿಸಿರೊಟ್ಟಿ, ಚಟ್ನಿ ಪಲ್ಯಗಳನ್ನು ಮಾಡಿ ಬಡಿಸುತ್ತಿದ್ದಳು. ಸ್ವಾಮಿಗೆ ತಾನು ಜಂಗಮನೆಂಬ ತನ್ನ ಹುಟ್ಟಿನ ಅಹಂಕಾರ ಎಂದೂ ಕಾಡಲಿಲ್ಲ. ನಮ್ಮ ಮನೆಗೆ ಹಿಂದು ಮುಸ್ಲೀಮರೆಲ್ಲ ಬರುತ್ತಿದ್ದರು. ನಮ್ಮ ಮನೆಯೊಂದು ಸೌಹಾರ್ದ ಕೇಂದ್ರವೇ ಆಗಿತ್ತು.

ಜ್ವರ, ಶೀತ, ಭೇದಿಯ ಗುಳಿಗೆಗಳನ್ನು ತಂದಿಡುತ್ತಿದ್ದರು. ಅಮ್ಮ ಮನೆಯಲ್ಲಿ ಮೂರು ಬಗೆಯ ಡಬ್ಬಿಗಳನ್ನಿಟ್ಟಿದ್ದಳು. ಅನಕ್ಷರಸ್ತೆಯಾದ ಅವಳಿಗೆ ಓದು ಬರಹ ಬರುತ್ತಿದ್ದಿಲ್ಲ. ಅಪ್ಪನಾದರೂ ಏಳನೆ ತರಗತಿಯವರೆಗೆ ಓದಿದ್ದರು. ಅದಕ್ಕೆ ಡಬ್ಬಗಳನ್ನು ಗುರುತು ಮಾಡಿ, ಜ್ವರ, ಶೀತ, ಭೇದಿಗೆ ಮೂರು ಬಗೆಯ ಮಾತ್ರೆಗಳನ್ನಿಟ್ಟು ಓಣಿಯಲ್ಲಿ ಯಾರಿಗೆ ಈ ಮೂರು ಕಾಯಿಲೆಯಾದರೂ ಅವರು ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಮೊದಲು ಅಮ್ಮನ ಬಳಿ ಬಂದು ಗುಳಿಗೆ ಪಡೆದು ಆರಾಮಾಗುತ್ತಿದ್ದರು. ಎರಡು ದಿನ ನೋಡಿ ಆಗಲೂ ಆರಾಮಾಗದಿದ್ದರೆ ಮಾತ್ರ ಆಸ್ಪತ್ರೆಗೆ ಹೋಗುತ್ತಿದ್ದರು.

ಆಗ ನಮಗೆ ಜಾತಿ, ಧರ್ಮಗಳು ಅಡ್ಡ ಬರಲೇಯಿಲ್ಲ. ಎಷ್ಟೊಂದು ಸೌಹಾರ್ದ ಮತ್ತು ಶಾಂತಿಯ ದಿನಗಳಾಗಿದ್ದವು. ಅಲ್ಲಿ ಧಾರ್ಮಿಕತೆ ಇತ್ತು, ಆದರೆ ಧಾರ್ಮಿಕ ಮೂಲಭೂತವಾದಿತನ ಇರಲಿಲ್ಲ. ಗುರು ಗೋವಿಂದಭಟ್ಟರು ಮತ್ತು ಶಿಶುವಿನಾಳ ಷರೀಫರ ಸಂಬಂಧವನ್ನು ನಾವಿಲ್ಲಿ ನೆನೆಯಬೇಕಿದೆ. ಬದುಕಿನಲ್ಲಿ, ಅಧ್ಯಾತ್ಮದಲ್ಲಿ ಮತ್ತು ಸತ್ತ ನಂತರವೂ ಅವರ ಸಮಾಧಿಗಳು ಅಕ್ಕ ಪಕ್ಕದಲ್ಲಿವೆ. ಬಿಸ್ಮಿಲ್ಲಾ ಖಾನರ ಶಹನಾಯಿಯಿಲ್ಲದೆ ಕಾಶಿ ವಿಶ್ವನಾಥ ದೇವರ ಪೂಜೆಯೇ ನಡೆಯುತ್ತಿರಲಿಲ್ಲ. ಅಮೆರಿಕದಲ್ಲಿ ನಿಮಗ ಎಲ್ಲ ಸವಲತ್ತುಗಳನ್ನು ನೀಡುತ್ತೇವೆ. ನೀವು ಇಲ್ಲಿಯೇ ಇರಿ. ಎಂದಾಗ “ನೀವು ಎಲ್ಲವನ್ನೂ ಕೊಡುತ್ತೀರಿ. ಆದರೆ ನನ್ನ ಕಾಶಿ ವಿಶ್ವನಾಥನನ್ನು ಇಲ್ಲಿಗೆ ತರಬಲ್ಲಿರಾ?” ಎಂದು ನಿರಾಕರಿಸುತ್ತಾರೆ. ಇಂತಹ ಸೌಹಾರ್ದದ ಸಮಾಜ ನಮ್ಮದು. ಅದನ್ನು ರಾಜಕೀಯ ಕಾರಣಕ್ಕಾಗಿ ಒಡೆಯುವುದು ತರವಲ್ಲ. ಅದು ಸಾಧ್ಯವೂ ಇಲ್ಲ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app